ಜಾತ್ಯತೀತ ಮನೋಭಾವದ ವಿಶಾಲ ಮನಸ್ಸಿನ ಸ್ವಾಮಿ: ಶಿರೂರು ಶ್ರೀ ವ್ಯಕ್ತಿತ್ವಕ್ಕೆ ವ್ಯಾಪಕ ಶ್ಲಾಘನೆ

ಕರಾವಳಿ ಕರ್ನಾಟಕ ವರದಿ

ಉಡುಪಿ:
ಶ್ರೀ ಲಕ್ಷ್ಮೀವರತೀರ್ಥರ ಸಾವಿನ ಬಳಿಕ ಅವರ ಹವ್ಯಾಸಗಳು, ಸರ್ವಧರ್ಮೀಯರ ಬಗ್ಗೆ ಅವರಿಗಿದ್ದ ಆದರ, ಜನಸಾಮಾನ್ಯರ ಜೊತೆಗೆ ತಾನೊಬ್ಬ ಮಠಾಧಿಪತಿ ಎಂಬುದಕ್ಕಿಂತ ಓರ್ವ ಸಾಮಾನ್ಯ ವ್ಯಕ್ತಿ ಎಂಬಂತೆ ಎಲ್ಲರೊಳಗೊಂದಾಗುತ್ತಿದ್ದ ಅವರ ಸರಳತೆ ಇತ್ಯಾದಿ ಅಪರೂಪದ ಗುಣಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಅವರ ಜಾತ್ಯತೀತ ನಿಲುವು ಉಡುಪಿ ಅಷ್ಠಮಠಗಳ ಇತರ ಸ್ವಾಮೀಜಿಗಳಿಗಿಂತ ಅವರು ಭಿನ್ನ ಎಂಬುದನ್ನು ತೋರಿಸಿತ್ತು.

ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಸಂದರ್ಭ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಪರ್ಯಾಯ ಮಠಾಧೀಶರ ಆಪ್ತರಲ್ಲಿ ಬ್ರಾಹ್ಮಣ, ಗೌಡ ಸಾರಸ್ವತ ಸಮಾಜದವರನ್ನು ನೇಮಿಸುವ ಪದ್ದತಿಯನ್ನು ಶಿರೂರು ಶ್ರೀಗಳ ಪರ್ಯಾಯ ಸಂದರ್ಭ ಅವರು ಅನುಸರಿಸಲಿಲ್ಲ. “ಕೆಳಜಾತಿಯ ನನ್ನನ್ನು ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಮಾಡಿ ಶ್ರೀಗಳು ತಮ್ಮ ಜಾತ್ಯತೀತ ಮನೋಭಾವ ವ್ಯಕ್ತಪಡಿಸಿದ್ದರು” ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

“ಆರೇಳು ವರ್ಷಗಳ ಹಿಂದೆ ಯಾವುದೋ ಬೇರೆ ಜಾತಿಗೆ ಸಂಬಂಧಪಟ್ಟ ಒಂದು ಸಂಸ್ಥೆಗೆ ನಾನು ಉಚಿತ ಸೇವೆ ಕೊಡುತ್ತಿದ್ದಾಗ ಸ್ವಾಮಿ ಅವರು ನನಗೆ ಫೋನ್ ಮಾಡಿ ಆ ಸಂಸ್ಥೆಯಲ್ಲಿ ಮತಾಂತರ ನಡೆಯುತ್ತಿದೆ ನೀವು ಹೋಗಬಾರದು ಎಂಬ ವಿಷಯವನ್ನು ತಿಳಿಸಿದರು. ಆ ಕೂಡಲೇ ನಾನು ಅವರಿಗೆ ಆ ಸಂಸ್ಥೆ ಮಾಡುತ್ತಿರುವ ಕೆಲಸದ ಬಗ್ಗೆ ಹೇಳಿದರೆ ಇಂತಹ ಕೆಲಸವನ್ನು ಯಾವುದೇ ಜಾತಿಯವರು ಮಾಡುವಾಗ ನಾವು ವೈದ್ಯರಾಗಿ ಹೋಗುವುದು ಒಳ್ಳೆಯದಲ್ಲವೇ ಕೇಳಿದೆ.. ಹೋ ಈ ವಿಷಯ ನನಗೆ ಯಾರೂ ಹೇಳಿರಲಿಲ್ಲ ನಿಮ್ಮ ಕೆಲಸ ನೀವು ಮಾಡಿ ಎಂದು ಹೇಳಿ ಫೋನ್ ಇಟ್ಟರು” ಎಂದು ಮನೋವೈದ್ಯ ಡಾ. ಪಿ.ವಿ.ಭಂಡಾರಿಯವರು ಶ್ರೀಗಳ ಮನೋವೈಶಾಲ್ಯದ ಬಗ್ಗೆ, ವಿಷಯ ತಿಳಿದಾಗ ಅವರು ಮುಕ್ತ ಮನಸ್ಸಿಂದ ಸ್ಪಂದಿಸುವ ಬಗೆಯನ್ನು ಹೇಳಿಕೊಂಡಿದ್ದಾರೆ.

ಶ್ರೀಗಳ ಜಾತ್ಯತೀತ, ಮನುಷ್ಯ ಪರ ನಡವಳಿಕೆಗಳ ಬಗ್ಗೆ ಅವರ ನಿಧನದ ಬಳಿಕ ಅನೇಕ ಮಂದಿ ಸ್ಮರಿಸಿಕೊಳ್ಳುತ್ತಿದ್ದಾರೆ.

ಶ್ರೀಗಳ ಜನನ ಕುಂದಾಪುರ ತಾಲೂಕಿನ ಮಡಾಮಕ್ಕಿಯಲ್ಲಿ ನಡೆದ ಸಂದರ್ಭ ಅವರ ತಾಯಿ ಕುಸುಮಾ ಆಚಾರ್ಯರಿಗೆ ಹೆರಿಗೆ ಮಾಡಿಸಿದ್ದು ಆರ್ಡಿಯ ಮುಸ್ಲಿಂ ಮಹಿಳೆ ಆಯಿಷಾ ಎಂಬ ಕುತೂಹಲಕಾರಿ ಸಂಗತಿ ಇದೀಗ ಬೆಳಕಿಗೆ ಬಂದಿದ್ದು, ಶ್ರೀಗಳ ಸರ್ವಧರ್ಮ ಸಮನ್ವಯ ನಡೆಯಲ್ಲಿ ಈ ಘಟನೆಯೂ ಮಹತ್ತರ ಪಾತ್ರ ವಹಿಸಿರುವ ಸಾಧ್ಯತೆ ಇದೆ.

ಪುನರೂರು ವಿಠಲ ಆಚಾರ್ಯ ಮತ್ತು ಕುಸುಮಾ ಆಚಾರ್ಯರ ಇಬ್ಬರು ಪುತ್ರರಲ್ಲಿ ಹಿರಿಯವರಾಗಿ ಮಡಾಮಕ್ಕಿಯಲ್ಲಿ ಜೂ. 8, 1964ರಂದು ಲಕ್ಷ್ಮೀವರ ಅವರು  ಜನಿಸಿದರು. ಅವರ ಮೂಲ ಹೆಸರು ಹರೀಶ ಆಚಾರ್ಯ ಎಂಬುದಾಗಿತ್ತು. ಅಂದು ಹುಲ್ಲು ಛಾವಣಿಯ ಸಣ್ಣ ಮನೆಯಲ್ಲಿ ಶ್ರೀಗಳ ಜನನವಾಗಿತ್ತು. ಮಡಾಮಕ್ಕಿಯ ಮೂಲ ಮನೆಯಲ್ಲಿ ಜನಿಸಿದ 6 ತಿಂಗಳಷ್ಟೇ ಇದ್ದ ಶ್ರೀಗಳು ಬಳಿಕ ಶೀರೂರು ಮಠದಲ್ಲಿ ಬೆಳೆದರು. ಮಡಾಮಕ್ಕಿಯ ಮೂಲ ಮನೆಯಲ್ಲಿ ಶ್ರೀಗಳ ತಾಯಿಯ ಸಹೋದರ ಅನಂತ ತಂತ್ರಿ - ಜಯಲಕ್ಷ್ಮೀ ದಂಪತಿ ಮತ್ತು ಮಗ, ಸೊಸೆ, ಮೊಮ್ಮಕ್ಕಳು  ವಾಸವಾಗಿದ್ದಾರೆ.

ಶ್ರೀಗಳಿಗೆ ಗೌರವ ಸೂಚಕವಾಗಿ ಅವರ ನಿಧನದ ಸುದ್ದಿ ತಿಳಿದೊಡನೆ ಮಡಾಮಕ್ಕಿ ಸ.ಹಿ.ಪ್ರಾ. ಶಾಲೆಗೆ ರಜೆ ನೀಡಲಾಗಿತ್ತು.

ಮಡಾಮಕ್ಕಿಯ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನಕ್ಕೆ ಆಗಾಗ ಭೇಟಿ ನೀಡುತ್ತಿದ್ದ ಶ್ರೀಗಳು ದೇಗುಲದ ಅಭಿವೃದ್ಧಿಗೂ ಕೊಡುಗೆ ನೀಡಿದ್ದರು. ಪುನರ್ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವಕ್ಕೆ ಆಗಮಿಸಿ ಆಶೀರ್ವದಿಸಿದ್ದರು. ಇಲ್ಲಿನ ಹಲವು ಶಾಲೆಗಳ ಮಕ್ಕಳ ಶಿಕ್ಷಣಕ್ಕೆ ಕೊಡುಗೆಗಳನ್ನು ನೀಡಿದ್ದರು. ಅವರಿಗೆ ಹುಟ್ಟೂರ ಸಮ್ಮಾನವೂ ಸಂದಿತ್ತು.  ಫೆ. 3, 2017ರ ಅವರ ಭೇಟಿಯೇ ಇಲ್ಲಿನ  ಕೊನೆಯ ಭೇಟಿಯಾಗಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ