ಪತ್ನಿಯ ಮೃತದೇಹದೊಂದಿಗೆ 5 ದಿನ ಕಳೆದ ಅಸ್ವಸ್ಥ ಪತಿ: ಕರಾವಳಿಯಲ್ಲೊಂದು ಹೃದಯ ವಿದ್ರಾವಕ ಘಟನೆ

ರವಿತೇಜ ಕಾರವಾರ/ಕರಾವಳಿ ಕರ್ನಾಟಕ ವರದಿ

ಕಾರವಾರ:
ಪಾರ್ಶ್ವವಾಯು ಪೀಡಿತ ರೋಗಿಯೊಬ್ಬ ಮೃತ ಪತ್ನಿಯ ದೇಹದೊಂದಿಗೆ ಅಸಹಾಯಕರಾಗಿ ಐದು ದಿನ ಕಾಲ ಕಳೆದ ಘಟನೆ ರವಿವಾರ ಬೆಳಕಿಗೆ ಬಂದಿದೆ.

ಕಾರವಾರ ನಗರದ ಕೆ.ಎಚ್.ಬಿ ಕಾಲೋನಿ ಬಳಿಯ ಪುಟ್ಟ ಮನೆಯೊಂದರಲ್ಲಿ ಆನಂದು ಮಡಿವಾಳ(60) ಹಾಗೂ ಗಿರಿಜಾ ಮಡಿವಾಳ (45) ದಂಪತಿಗಳು ವಾಸವಿದ್ದರು. ಆನಂದು ಮಡಿವಾಳ ಪಾರ್ಶ್ವವಾಯು ಪೀಡಿತರಾದ ಕಾರಣ ದೇಹದಲ್ಲಿ ಚಲನೆ ಇರಲಿಲ್ಲ. ಮಾತು ಬರುತ್ತಿರಲಿಲ್ಲ. ಹೀಗಾಗಿ ಪತ್ನಿ ಗಿರಿಜಾ ಮಡಿವಾಳ ಪತಿಯ ಆರೈಕೆ ಮಾಡುತ್ತಿದ್ದರು.

ಕಳೆದ ಐದು ದಿನಗಳ ಹಿಂದೆ ಗಂಡ ಮಲಗಿದ್ದ ಮಂಚದ ಬದಿಯ ಖುರ್ಚಿಯಲ್ಲಿ ಕುಳಿತಿದ್ದ ಗಿರಿಜಾ ಹೃದಯಘಾತದಿಂದ ಅಸುನೀಗಿದ್ದಾರೆ. ಅಂದಿನಿಂದ ಇಂದಿನವರೆಗೂ ಆನಂದು ಮಡಿವಾಳ ಆಹಾರವನ್ನು ಸೇವಿಸದೇ ಪತ್ನಿಯ ಮೃತ ದೇಹದ ಪಕ್ಕದಲ್ಲಿನ ಹಾಸಿಗೆಯಲ್ಲಿ ಅಸಾಹಾಯಕರಾಗಿ ಮಲಗಿದ್ದಾರೆ.

ಭಾನುವಾರ ಘಟನೆ ಬೆಳಕಿಗೆ ಬಂದಾಗ ಪತ್ನಿಯ ಶವ ಪಕ್ಕದಲ್ಲೇ ಇದ್ದರೂ ಅದನ್ನು ಯಾರಿಗೂ ಹೇಳಿಕೊಳ್ಳಲಾಗದ ಪರಿಸ್ಥಿತಿಯಲ್ಲಿ ಆನಂದು ಮಡಿವಾಳ ಇದ್ದರು.

ಹೊನ್ನಾವರದ ಗಿರಿಜಾಳ ಸಹೋದರ ಸುಬ್ರಹ್ಮಣ್ಯ ಕಳೆದ ಕೆಲವು ದಿನಗಳಿಂದ ತನ್ನ ಅಕ್ಕ ಕರೆ ಸ್ವೀಕರಿಸುತ್ತಿಲ್ಲ ಎಂಬ ಕಾರಣಕ್ಕೆ ಕಾರವಾರದ ಮನೆಗೆ ಬಂದಿದ್ದರು. ಮನೆ ಬಾಗಿಲು ಹಾಕಿದ್ದರಿಂದ ಸುಬ್ರಮಣ್ಯ ಮಡಿವಾಳ ಅಕ್ಕ ಪಕ್ಕದವರಲ್ಲಿ ವಿಚಾರಿಸಿದರು. ಆದರೆ, ಅವರಿಗೂ ಯಾವದೇ ಮಾಹಿತಿ ಇರಲಿಲ್ಲ.

ನಂತರ ಪೊಲೀಸ್ ಸಹಾಯದೊಂದಿಗೆ ಮನೆಯ ಹಂಚು ತೆಗೆದು ಒಳ ಪ್ರವೇಶಿಸಿದಾಗ ಮೃತ ಪತ್ನಿ ದೇಹದ ಪಕ್ಕದಲ್ಲಿ ಅಸಹಾಯಕರಾಗಿ ಆನಂದು ಮಡಿವಾಳ ಮಲಗಿರುವದು ಕಾಣಿಸಿದೆ. ಸಂಪೂರ್ಣವಾಗಿ ಕೊಳೆತಿದ್ದ ಗಿರಿಜಾ ಮೃತ ದೇಹವನ್ನು ನಗರಸಭೆ ವಾಹನದ ಮೂಲಕ ಶವಾಗಾರಕ್ಕೆ ಸಾಗಿಸಲಾಯಿತು. ಆನಂದು ಮಡಿವಾಳ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ