ಫೇಸ್‌ಬುಕ್ ವ್ಯವಸ್ಥಾಪಕಿ ಹೆಸರಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ ಆರೋಪಿ ಸೆರೆ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಫೇಸ್ ಬುಕ್ ವ್ಯವಸ್ಥಾಪಕಿಯ ಹೆಸರಲ್ಲಿ ಯುವತಿಯರಿಗೆ ಕರೆ ಮಾಡಿ ಸಂದರ್ಶನ ಸಂದರ್ಭ ಉದ್ಯೋಗ ನೀಡುವ ಭರವಸೆ ನೀಡಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಕಾರವಾರದ ಅನಂತ ಹೆಬ್ಬಾರ ಆಲಿಯಾಸ್ ಮಹೇಶ್ ರಾವ್(32) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ, ಈತನನ್ನು ಯುವತಿಯ ಧ್ವನಿಯಲ್ಲಿ ರೆಸಾರ್ಟ್ಗೆ ಬರಹೇಳಿ ಉಪಾಯದಿಂದ ಬಂಧಿಸಲಾಗಿದೆ.

ವಾರ್ಷಿಕ ಹತ್ತು ಲಕ್ಷ ರೂ. ಉದ್ಯೋಗದ ಆಮಿಷ ನೀಡಿ ಯುವತಿಯರಿಗೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಈತನ ವಿರುದ್ಧ ಯುವತಿಯೋರ್ವರು ಸೈಬರ್ ಪೊಲೀಸರಿಗೆ ದೂರು ನೀಡಿದ್ದನ್ನು ಆಧರಿಸಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ.

ಮೂರು ವರ್ಷದ ಹಿಂದೆ ಬೆಂಗಳೂರಿಗೆ ಬಂದ ಎಂಜಿನಿಯರಿಂಗ್ ಪದವೀಧರ ಅನಂತ ಹೆಬ್ಬಾರ ಜೆ.ಪಿ.ನಗರದ ಸಾಫ್ಟ್ವೇರ್ ಸಂಸ್ಥೆಯೊಂದರಲ್ಲಿ ಡೆವಲಪ್ಮೆಂಟ್ ಮ್ಯಾನೇಜಸ್ರ್ ಆಗಿದ್ದ. ಸಹೋದ್ಯೋಗಿ ಯುವತಿಯರ ಜೊತೆ ಅಸಭ್ಯವಾಗಿ ವರ್ತಿಸಿದ ಈತನನ್ನು ಕೆಲಸದಿಂದ ತೆಗೆಯಲಾಗಿತ್ತು.

ನೌಕರಿ ಡಾಟ್ ಕಾಂ ಜಾಲತಾಣದಲ್ಲಿ ಯುವತಿಯರ ರೆಸ್ಯೂಮ್ ಗಳನ್ನು ಮಾತ್ರ ಕದ್ದು, ಅವರ ವಾಟ್ಸ್ಯಾಪ್ ಪ್ರೊಫೈಲ್ ಪಿಕ್ ನೋಡಿ ಅವರಲ್ಲಿ ಚೆಲುವೆಯರಿಗೆ ಮಾತ್ರ ಈತ ಧ್ವನಿ ಬದಲಾಗುವ app ಮೂಲಕ ಕರೆ ಮಾಡಿ ತನ್ನನ್ನು ಪೇಸ್ ಬುಕ್ ವ್ಯವಸ್ಥಾಪಕಿ ‘ಜಯಂತಿ’ ಎಂಬುದಾಗಿ ಪರಿಚಯಿಸಿಕೊಳ್ಳುತ್ತಿದ್ದ. ದೊಮ್ಮಲೂರಿನಲ್ಲಿ ಫೇಸ್ ಬುಕ್ ಪ್ರಾದೇಶಿಕ ಕಚೇರಿ ಇದೆ. ಮಹೇಶ್ ರಾವ್ ಎಂಬವರು ನಿಮಗೆ ಸಂದರ್ಶನ ಪ್ರಕ್ರಿಯೆ ವಿವರ ನೀಡುತ್ತಾರೆ ಎಂದು ಅವರನ್ನು ನಂಬಿಸುತ್ತಿದ್ದ.

ಈ ಪ್ರಕರಣದಲ್ಲಿ ಸಂತ್ರಸ್ತ ಯುವತಿಗೆ ಕರೆ ಮಾಡಿದ್ದ ಅನಂತ ಹೆಬ್ಬಾರ ಇದೇ ರೀತಿ ಅವರಿಗೆ ನಂಬಿಸಿದ್ದ. ತಾನು ಮಹೇಶ್ ರಾವ್ ಎಂದು ಕರೆ ಮಾಡಿದ್ದು, ನೀವು ಬಾಸ್ ಜೊತೆ ನಾಲ್ಕು ದಿನ ಡೇಟಿಂಗ್ ಮಾಡುವುದು ಅನಿವಾರ್ಯ. ಕೊನೆದಿನ ದೈಹಿಕ ಸಂಪರ್ಕಕ್ಕೂ ಸಹಕರಿಸಬೇಕಾಗುತ್ತದೆ. ಕೆಲಸ ಬೇಕಿದ್ದರೆ ನೀವೆ ಮೈಸೂರು ರಸ್ತೆಯ ಯಾವುದೇ ರೆಸಾರ್ಟ್ ನಲ್ಲಿ ರೂಂ ಬುಕ್ ಮಾಡಿ ನಮಗೆ ಹೇಳಿ ಎಂದಿದ್ದನಲ್ಲದೇ ನಿರಂತರವಾಗಿ ಅಶ್ಲೀಲ ಸಂದೇಶ ರವಾನಿಸಿ ಅವರನ್ನು ಪೀಡಿಸಿದ್ದ.

ಈತನ ಕಿರುಕುಳ ತಾಳಲಾರದೇ ಮಹಿಳೆ ಪೊಲೀಸ್ ದೂರು ನೀಡಿದ್ದು, ಈಗ ಪೊಲೀಸರು ಈತನನ್ನು ಕಂಬಿ ಹಿಂದೆ ನೂಕಿದ್ದಾರೆ. 2017ರಲ್ಲಿಯೂ ಅನಂತ ಹೆಬ್ಬಾರನ ವಿರುದ್ಧ ಮೂವರು ಯುವತಿಯರು ಯಶವಂತಪುರ ಮತ್ತು ರಾಮನಗರ ಠಾಣೆಗಳಿಗೆ ದೂರು ನೀಡಿದ್ದು, ಆರು ತಿಂಗಳು ಜೈಲು ಪಾಲಾಗಿದ್ದ ಅನಂತ, ಜಾಮೀನಿನ ಮೇಲೆ ಹೊರಬಂದವನೇ ಮತ್ತದೇ ಚಾಳಿ ಮುಂದುವರಿಸಿದ್ದಾನೆ. ಈತನಿಂದ ಈ ರೀತಿ ವಂಚನೆಗೊಳಗಾದವರು ದೂರು ನೀಡಿದರೆ, ದೂರು ನೀಡಿದವರ ಮಾಹಿತಿಯನ್ನು ಗೌಪ್ಯವಾಗಿಟ್ಟು ತನಿಖೆ ನಡೆಸುವ ಭರವಸೆಯನ್ನು ಸೈಬರ್ ಕ್ರೈಂ ಪೊಲೀಸರು ನೀಡಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ