ಮೊದಲ ಏಕದಿನ ಪಂದ್ಯ: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 8 ವಿಕೆಟ್ ಗಳ ಭರ್ಜರಿ ಜಯ
ಶತಕ ವೀರ ರೋಹಿತ್ ಶರ್ಮಾ, 75 ರನ್ ಸಿಡಿಸಿ ನಾಯಕ ಕೊಹ್ಲಿ ಔಟ್, 6 ವಿಕೆಟ್ ಪಡೆದು ದಾಖಲೆ ಬರೆದ ಕುಲದೀಪ್

ಕರಾವಳಿ ಕರ್ನಾಟಕ ವರದಿ

ನಾಟಿಂಗ್‌ಹ್ಯಾಮ್:
ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಭಾರತ ತಂಡ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಇಂಗ್ಲೆಂಡ್ ನೀಡಿದ್ದ 269 ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಭಾರತಕ್ಕೆ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಜೋಡಿ ಉತ್ತಮ ಆರಂಭ ಒದಗಿಸಿತು. ಮೊದಲ ವಿಕೆಟ್ ಅರ್ಧಶತಕ ಜೊತೆಯಾಟ ನೀಡಿದ ಈ ಜೋಡಿಯನ್ನು ಮೊಯಿನ್ ಅಲಿ ಬೇರ್ಪಡಿಸಿದರು. 40 ರನ್ ಗಳಿಸಿ ಅರ್ಧಶತಕದತ್ತ ಧಾವಿಸುತ್ತಿದ್ದ ಶಿಖರ್ ಧವನ್ ಅವರನ್ನು ಮೊಯಿನ್ ಅಲಿ ಔಟ್ ಮಾಡಿದರು. ಬಳಿಕ ಕ್ರೀಸ್ ಗೆ ಬಂದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಜೋಡಿ ತಂಡಕ್ಕೆ ಯಾವುದೇ ಅಪಾಯ ಬಾರದತೆ ನೋಡಿಕೊಂಡರು.

ಬರೊಬ್ಬರಿ 160 ರನ್ ಗಳ ಜೊತೆಯಾಟವಾಡಿದ ಈ ಜೋಡಿ ತಂಡದ ಗೆಲುವನ್ನು ಸುಲಭ ಮಾಡಿತು. ಏತನ್ಮಧ್ಯೆ ಮತ್ತೊಂದು ತುದಿಯಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದ ರೋಹಿತ್ ಶರ್ಮಾ ಶತಕ ಸಿಡಿಸಿ ಸಂಭ್ರಮಿಸಿದರೆ, ಮತ್ತೊಂದು ತುದಿಯಲ್ಲಿದ್ದ ನಾಯಕ ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಇನ್ನು ಕೊಹ್ಲಿ 75 ರನ್ ಗಳಿಸಿದ್ದಾಗ ಅದಿಲ್ ರಷೀದ್ ಬೌಲಿಂಗ್ ನಲ್ಲಿ ಸ್ಚಂಪೌಟ್ ಆದರು. ಅಷ್ಟು ಹೊತ್ತಿಗಾಗಲೇ ಭಾರತ ತಂಡದ ಗೆಲುವ ಖಚಿತವಾಗಿತ್ತು.

ಕೊಹ್ಲಿ ಔಟಾದ ಬಳಿಕ ಮಧ್ಯಮ ಕ್ರಮಾಂಕದ ಆಟಗಾರ ಕೆಎಲ್ ರಾಹುಲ್ 4ನೇ ಸ್ಥಾನಕ್ಕೆ ಭಡ್ತಿ ಪಡೆದು ಕ್ರೀಸ್ ಗೆ ಇಳಿದರು. ಬಳಿಕ ಇಬ್ಬರೂ ಆಟಗಾರರು ಭಾರತ ತಂಡದ ಗೆಲುವಿನ ಔಪಚಾರಿಕತೆಯನ್ನು ಮುಗಿಸಿದರು. ಕೇವಲ 114 ಎಸೆತಗಳಲ್ಲಿ 137 ರನ್ ಗಳಿಸಿದ ರೋಹಿತ್ ಶರ್ಮಾ ಮತ್ತು 18 ಎಸೆತಗಳಲ್ಲಿ 9 ರನ್ ಗಳಿಸಿದ ರಾಹುಲ್ ಅಜೇರಾಗಿ ಉಳಿದರು.

ಇಂಗ್ಲೆಂಡ್ ಪರ ಮೊಯಿನ್ ಅಲಿ ಮತ್ತು ಅದಿಲ್ ರಷೀದ್ ತಲಾ ಒಂದು ವಿಕೆಟ್ ಪಡೆದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ