ತಂದೆ-ತಾಯಿಗೆ ಗುಂಡಿಕ್ಕಲು ಪಿಸ್ತೂಲ್ ಖರೀದಿಸಿದ ಯುವಕ ಬಂಧನ

ಕರಾವಳಿ ಕರ್ನಾಟಕ ವರದಿ
ಬೆಂಗಳೂರು:
ಮನೆಯಿಂದ ಹೊರಹಾಕಿದರು ಎಂಬ ಕಾರಣಕ್ಕೆ ಹೆತ್ತವರಿಗೇ ಗುಂಡಿಕ್ಕಿ ಹತ್ಯೆಗೈಯುವ ಸಂಚು ರೂಪಿಸಿದ್ದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರ ಪಿಸ್ತೂಲ್ ಸಮೇತ ಬಸವೇಶ್ವರ ಪೊಲೀಸರ ಸೆರೆಯಾಗಿದ್ದಾನೆ.

ಪಾಪರೆಡ್ಡಿ ಪಾಳ್ಯದ ಹನ್ನೊಂದನೇ ಕ್ರಾಸ್ ಪಿಜಿಯಲ್ಲಿ ನೆಲೆಸಿದ್ದ ಶರತ್(25) ಪೊಲೀಸರು ಕುರುಬರಹಳ್ಳಿ ವೃತ್ತದಲ್ಲಿ ವಾಹನ ತಪಾಸಣೆಗೈಯುವ ಸಂದರ್ಭ ಸಿಕ್ಕಿಬಿದ್ದಿದ್ದು, ಈತನ ಬಳಿ ಇದ್ದ ಪಿಸ್ತೂಲ್ ಮತ್ತು ಎಂಟು ಸಜೀವ ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೆಕ್ಯಾನಿಕಲ್ ಎಂಜಿನಿಯರಿಂಗ್ ವೃತ್ತಿಯಿಂದ ತಾನು ನಿರೀಕ್ಷಿಸಿದಷ್ಟು ವೇತನ ಸಿಗಲಿಲ್ಲ ಎಂಬ ಕಾರಣಕ್ಕೆ ವಾಹನ ಕಳವನ್ನೂ ಮಾಡುತ್ತಿದ್ದ ಆರೋಪಿಯಿಂದ ಪೊಲೀಸರು ಹತ್ತು ಬೈಕ್ ಗಳನ್ನೂ ವಶಪಡಿಸಿಕೊಂಡಿದ್ದಾರೆ.

ನಕಲಿ ಬೈಕ್ ದಾಖಲೆ ಸೃಷ್ಟಿಸಿ ಕದ್ದ ಬೈಕ್ ಮಾರುತ್ತಿದ್ದ ಶರತ್ ಐಶಾರಾಮಿ ಜೀವನ ನಡೆಸುತ್ತಿದ್ದ. ತನ್ನ ಗೆಳತಿಯರೊಂದಿಗೆ ಗೋವಾದಲ್ಲಿ ಮೋಜು ಮಾಡುತ್ತಿದ್ದ. ಈತನ ವರ್ತನೆಯಿಂದ ಚಿಂತಿತರಾದ ಪೋಷಕರು ಮಗನಿಗೆ ಮದುವೆ ಮಾಡಿದರೆ ಆತನ ಬದುಕು ಸರಿದಾರಿಗೆ ಬರಬಹುದೆಂದು ಮದುವೆಯಾಗುವಂತೆ ಒತ್ತಾಯಿಸಿದ್ದರು. ಆದರೆ ಈತ ತಾನು ಪ್ರೀತಿಸುತ್ತಿರುವ ಯುವತಿಯನ್ನೇ ಮದುವೆಯಾಗುವುದಾಗಿ ಹಠ ಹಿಡಿದ ಕಾರಣ ಮನೆಯವರು ಆರು ತಿಂಗಳ ಹಿಂದೆ ಈತನನ್ನು ಮನೆಯಿಂದಲೇ ಹೊರಹಾಕಿದ್ದರು.

ಇದರಿಂದ ಹತಾಶನಾದ ಶರತ್ ನಾಲ್ಕು ಸಲ ಆತ್ಮಹತ್ಯೆಗೆ ಯತ್ನಿಸಿದ್ದ. ಎರಡು ಬಾರಿ ನಿದ್ರೆ ಗುಳಿಗೆ ನುಂಗಿದರೂ ಸಾಯಲಿಲ್ಲ. ಒಮ್ಮೆ ಮಾಗಡಿ ರಸ್ತೆಯಲ್ಲಿ ಅತಿ ವೇಗದಿಂದ ಕಾರು ಓಡಿಸಿ ಡಿವೈಡರ್ ಒಂದಕ್ಕೆ ಗುದ್ದಿದರೂ ಸತ್ತಿರಲಿಲ್ಲ. ಈ ಸಂದರ್ಭ ಆತನ ಬೆನ್ನಿನ ಮತ್ತು ಎದೆಯ ಮೂಳೆಗಳು ಮುರಿದಿದ್ದವು. ಇನ್ನೊಮ್ಮೆ ದಾಳಿಂಬೆ ಗಿಡಗಳಿಗೆ ಸಿಂಪಡಿಸುವ ಕ್ರಿಮಿನಾಶಕ ಸೇವಿಸಿದ್ದರೂ ಸಾಯಲಿಲ್ಲ.

ಈ ಎಲ್ಲ ಆತ್ಮಹತ್ಯೆ ಯತ್ನಗಳು ವಿಫಲಗೊಂಡ ಬಳಿಕ ಆರೋಪಿಗೆ ತನ್ನ ದಾರಿಗೆ ಅಡ್ಡಬರುವ, ತಾನು ಮಾಡುವ ಪ್ರತಿಯೊಂದನ್ನೂ ವಿರೋಧಿಸುವ ತಂದೆ-ತಾಯಿಯರನ್ನೂ ಕೊಂದು ತಾನು ಆತ್ಮಹತ್ಯೆಗೈಯಬೇಕು ಎಂಬ ಹಠ ಮೂಡಿತು.

ತಂದೆ-ತಾಯಿಗಳನ್ನು ಸಾಯಿಸುವ ನಿರ್ಧಾರಕ್ಕೆ ಬಂದ ಶರತ್, ಅಡುಗೆಗೆ ಮನೆಯವರು ಬಳಸುವ ನೀರಿನ ತೊಟ್ಟಿಗೆ ನಾಲ್ಕು ಡಬ್ಬ ಕ್ರಿಮಿನಾಶಕ ಸೇರಿಸಿದ್ದ. ಆದರೆ ಅಸಹನೀಯ ವಾಸನೆಯಿಂದ ಆ ನೀರನ್ನು ಬಳಸದ ಪೋಷಕರು, ಮರುದಿನವೇ ಟ್ಯಾಂಕ್ ಸ್ವಚ್ಛಗೊಳಿಸಿದ್ದರಿಂದ ಈತನ ಯೋಜನೆ ವಿಫಲವಾಗಿತ್ತು.

ಕೊನೆಗೆ ‘ಯು ಟ್ಯೂಬ್’ನಲ್ಲಿ ಈತ ತಂದೆ-ತಾಯಿಗಳ ಕೊಲೆಗೆ ಮಾರ್ಗ ಹುಡುಕಿದಾಗ ಪಿಸ್ತೂಲ್ ನಿಂದ ಗುಂಡಿಕ್ಕಿ ಕೊಲ್ಲಬಹುದೆಂಬ ವಿಚಾರ ಈತನ ತಲೆಗೆ ಹೊಳೆಯಿತು. ಬಿಹಾರದ ವ್ಯಕ್ತಿಯೋರ್ವನಿಂದ ಪಿಸ್ತೂಲ್ ಖರೀದಿಸಿದ್ದು. ತಂದೆ-ತಾಯಿಯನ್ನು ಕೊಲೆಗೈಯಲು ಒಂದು ವಾರದಿಂದ ಮನೆ ಬಳಿ ಈತ ಸುಳಿದಾಡಿದರೂ ಅವಕಾಶ ಸಿಗಲಿಲ್ಲ.

ಈಗ ಪೊಲೀಸರು ಈತನ ಬಾಯಿಯಿಂದ ಈ ಎಲ್ಲ ಮಾಹಿತಿ ಹೊರಬರುವಂತೆ ಮಾಡಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ