ಪ್ರೀತಿಗಾಗಿ ಗುಂಡಿಟ್ಟುಕೊಂಡ ಬಿಜೆಪಿ ಯುವ ನಾಯಕನ ಹೃದಯ, ಅಂಗಾಂಗ ದಾನ!

ಕರಾವಳಿ ಕರ್ನಾಟಕ ವರದಿ

ಭೋಪಾಲ್‌
: ಪ್ರೀತಿ ಸಾಬೀತುಪಡಿಸಲು ಪ್ರೇಯಸಿಯ ಅಪ್ಪನ ಸವಾಲು ಸ್ವೀಕರಿಸಿ ತನಗೆ ತಾನೆ ಶೂಟ್ ಮಾಡಿಕೊಂಡ ಬಿಜೆಪಿ ಯುವ ಮೋರ್ಚಾ ನಾಯಕ ಸಾವನ್ನಪ್ಪಿದ್ದು ಅವರ ಹೃದಯ ಸೇರಿದಂತೆ ಅಹಲವು ಅಂಗಾಂಗಗಳನ್ನು ದಾನ ಮಾಡಲಾಗಿದೆ.  ಪ್ರೀತಿಸಿದ ಹೃದಯ ಕೊನೆಗೂ ಸಿಗದೆ ಮರಣಾನಂತರ ಅತುಲ್ ಲೋಖಂಡೆಯ ಹೃದಯ ಬೇರೊಂದು ಜೀವ ಉಳಿಸುವ ಕೆಲಸ ಮಾಡಿದೆ.

30ರ ಹರೆಯದ ಯುವಕ ಅತುಲ್‌ ಲೋಖಂಡೆಯ ಮಿದುಳು ನಿಷ್ಕ್ರಿಯ ಆಗಿರುವುದನ್ನು ವೈದ್ಯರು ಖಚಿತಪಡಿಸಿದ ಬಳಿಕ ಆತನ ಮನೆಯವರು ಆತನ ಅನೇಕ ಪ್ರಮುಖ ಅಂಗಾಂಗಳನ್ನು ದಾನವಾಗಿ ನೀಡುವ ನಿರ್ಧಾರ ಮಾಡಿದರು.

ಅತುಲ್ ಲೋಖಂಡೆಯ ಮೃತ ದೇಹವನ್ನು ಏರ್‌ ಅಂಬುಲೆನ್ಸ್‌ ಮೂಲಕ ದಿಲ್ಲಿಯ ಏಮ್ಸ್‌ ಆಸ್ಪತ್ರೆಗೆ ರವಾನಿಸಲಾಯಿತು. ಆತನ ಹೃದಯವನ್ನು ಸಾಗಿಸುವ ವಾಹನಕ್ಕೆ  ಇಂದು ಬೆಳಗ್ಗೆ ಆಸ್ಪತ್ರೆ ಮತ್ತು ವಿಮಾನ ನಿಲ್ದಾಣದ ನಡುವೆ ಕೂಡಲೇ ಗ್ರೀನ್‌ ಕಾರಿಡಾರ್‌ ನಿರ್ಮಿಸಲಾಯಿತು.

"ನನ್ನ ಮಗಳನ್ನು ನೀನು ಪ್ರೀತಿಸುವುದು ನಿಜವಾದರೆ ನಿನಗೆ ನೀನೆ ಶೂಟ್ ಮಾಡಿಕೊಂಡು ನಿನ್ನ ಪ್ರೀತಿಯನ್ನು ಸಾಬೀತು ಮಾಡು" ಎಂದು ಪ್ರೇಯಸಿಯ ತಂದೆ ಎಸೆದ ಸವಾಲನ್ನು ಸ್ವೀಕರಿಸಿ ತನಗೆ ತಾನೆ ಗುಂಡಿಟ್ಟುಕೊಂಡ ಬಿಜೆಪಿ ಯುವ ಮೋರ್ಚಾ ನಾಯಕ ಅತುಲ್ ಲೋಖಂಡೆಯನ್ನು ತಕ್ಷಣವೆ ಆಸ್ಪತ್ರೆಗೆ ದಾಖಲಿಸಿದರೂ ಆತ ಮರಳಿ ಬಾರದ ಲೋಕಕ್ಕೆ ಪಯಣಿಸಿದ್ದ.

ಲೋಖಂಡೆಯ ಕಿಡ್ನಿ ಮತ್ತು ಲಿವರ್‌ ಅನ್ನು ಭೋಪಾಲ್‌ ನ ಮೂರು ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು.ಕಣ್ಣುಗಳನ್ನು ಸರಕಾರದ ಹಮೀದಿಯಾ ಆಸ್ಪತ್ರೆಗೆ ರವಾನಿಸಲಾಯಿತು ಎಂದು ರಾಕೇಶ್‌ ತಿಳಿಸಿದರು.

"ನಾನು ಈಗ ಆವಳ ಮನೆಯಲ್ಲಿದ್ದೇನೆ. ಸತ್ತರೆ ನನ್ನನ್ನು ಇಲ್ಲಿಂದ ಆಚೆ ತೆಗೆದುಕೊಂಡು ಹೋಗಿ. ಬದುಕಿ ಉಳಿದರೆ ನಾನೆ ಸ್ವತಃ ಇಲ್ಲಿಗೆ ಮತ್ತೆ ಬರುವೆ" ಎಂದು ಫೇಸ್‌ಬುಕ್‍ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದ ಅತುಲ್ ಲೋಖಂಡೆ ಮತ್ತೆ ಪ್ರೇಯಸಿಯ ಬಳಿ ಬರದೆ ಪ್ರಾಣ ತೆತ್ತಿದ್ದಾರೆ.

ಹಿಂದಿನ ವರದಿ
ಪ್ರೇಯಸಿಯ ತಂದೆಯ ಚಾಲೆಂಜ್! ಪ್ರೀತಿಗಾಗಿ ತನಗೆ ತಾನೇ ಗುಂಡಿಟ್ಟುಕೊಂಡ ಬಿಜೆಪಿ ಯುವ ನಾಯಕ

ಭೋಪಾಲ್: ಪ್ರೀತಿಸಿದ ಹುಡುಗಿಯನ್ನು ಪಡೆಯಲು, ಆಕೆಯನ್ನು ಮೆಚ್ಚಿಸಲು ಏನೆಲ್ಲ ಮಾಡುವ ಪ್ರೇಮಿಯನ್ನು ನೀವು ಕಂಡಿದ್ದೀರಿ, ಕೇಳಿದ್ದೀರಿ. ಆದರೆ ಇಲ್ಲೊಬ್ಬ ಪ್ರೇಮಿ ತನ್ನ ಪ್ರೇಯಸಿಯನ್ನು ಪಡೆಯಲಿಕ್ಕಾಗಿ ಸಾಯುವುದಕ್ಕೂ ಸೈ ಎಂದು ತೋರಿಸಿಕೊಟ್ಟಿದ್ದಾನೆ.

"ನನ್ನ ಮಗಳನ್ನು ನೀನು ಪ್ರೀತಿಸುವುದು ನಿಜವಾದರೆ ನಿನಗೆ ನೀನೆ ಶೂಟ್ ಮಾಡಿಕೊಂಡು ನಿನ್ನ ಪ್ರೀತಿಯನ್ನು ಸಾಬೀತು ಮಾಡು" ಎಂದು ಪ್ರೇಯಸಿಯ ತಂದೆ ಎಸೆದ ಸವಾಲನ್ನು ಸ್ವೀಕರಿಸಿ ತನಗೆ ತಾನೆ ಗುಂಡಿಟ್ಟುಕೊಂಡ ಬಿಜೆಪಿ ಯುವ ಮೋರ್ಚಾ ನಾಯಕ ಈಗ ಗಂಭೀರ ಸ್ಥಿತಿಯಲ್ಲಿದ್ದಾನೆ. ಈ ಘಟನೆ ಮಧ್ಯಪ್ರದೇಶದ ಭೋಪಾಲದಿಂದ ವರದಿಯಾಗಿದೆ.

ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾ ನಾಯಕ ಅತುಲ್ ಲೋಖಂಡೆ (30) ತನ್ನ ಪ್ರೀತಿಯನ್ನು ಪುರಾವೆ ಸಹಿತ ತೋರಿಸಲು ಹೋಗಿ ತನಗೆ ತಾನೆ ಶೂಟ್ ಮಾಡಿಕೊಂಡು ಈಗ ಗಮ್ಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.

ಅತುಲ್ ಲೋಖಂಡೆ 27 ವರ್ಷದ ಯುವತಿಯೋರ್ವಳನ್ನು ಪ್ರೀತಿಸಿದ್ದ. ಯುವತಿಯ ತಂದೆಗೆ ಈ ವಿಚಾರ ತಿಳಿದಿತ್ತು. ಯುವತಿಯ ತಂದೆ ಮಾತುಕತೆಗಾಗಿ ಮನೆಗೆ ಬರುವಂತೆ ಅತುಲ್‌ಗೆ ಕರೆ ಮಾಡಿದ್ದರು. ಅತುಲ್ ತನ್ನ ಪ್ರೇಯಸಿಯ ಮನೆಗೆ ಬಂದಾಗ ಆಕೆಯ ತಂದೆ "ನಿನ್ನ ಪ್ರೀತಿ ನಿಜವಾದರೆ ನೀವು ಈಗ ಸಾಯಬೇಕು, ನೀನು ಬದುಕಿ ಉಳಿದರೆ ನಿನಗೆ ನನ್ನ ಮಗಳನ್ನು ಕೊಟ್ಟು ಮದುವೆ ಮಾಡುತ್ತೇನೆ" ಎಂದು ಸವಾಲು ಎಸೆದಿದ್ದಾರೆ. ಇದರಿಂದ ವಿಚಲಿತನಾಗದ ಅತುಲ್ ಲೋಖಂಡೆ ಆಕೆಯ ಮನೆಯಲ್ಲೆ ತನ್ನನ್ನು ತಾನೇ ಶೂಟ್ ಮಾಡಿಕೊಂಡಿದ್ದಾನೆ. ಗುಂಡೇಟಿನಿಂದ ತೀವ್ರ ಗಾಯಗೊಂಡ ಅತುಲ್‌ನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ತನಗೆ ತಾನೆ ಗುಂಡಿಟ್ಟುಕೊಳ್ಳುವ ಮೊದಲು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿರುವ ಅತುಲ್ ಲೋಖಂಡೆ "ಆಕೆಯ ತಂದೆ ನನ್ನನ್ನು ಮಾತುಕತೆಗೆ ಕರೆದಿದ್ದರು. ನಾನು ಅಲ್ಲಿಗೆ ಹೋಗಿದ್ದೆ. ನನ್ನ ಪ್ರೀತಿ ನಿಜವೇ ಆದರೆ ನನ್ನನ್ನು ನಾನು ಶೂಟ್ ಮಾಡಿಕೊಂಡು ಸಾಯಬೇಕು, ಬದುಕಿ ಉಳಿದರೆ ನನ್ನ ಮಗಳನ್ನು ನಿನಗೆ ಮದುವೆ ಮಾಡಿಕೊಡುತ್ತೇನೆ ಎಂದರು. ನಾನು ಈಗ ನನಗೆ ಶೂಟ್ ಮಾಡಿಕೊಂಡು ಸಾಯಲಿದ್ದೇನೆ. ನಾನು ಈಗ ಆವಳ ಮನೆಯಲ್ಲಿದ್ದೇನೆ. ಸತ್ತರೆ ನನ್ನನ್ನು ಇಲ್ಲಿಂದ ಆಚೆ ತೆಗೆದುಕೊಂಡು ಹೋಗಿ. ಬದುಕಿ ಉಳಿದರೆ ನಾನೆ ಸ್ವತಃ ಇಲ್ಲಿಗೆ ಮತ್ತೆ ಬರುವೆ" ಎಂದು ಫೇಸ್‌ಬುಕ್‍ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾನೆ.

"ನೀನಿಲ್ಲದೆ ನಾನು ಬದುಕಿರಲಾರೆ. ನಿನ್ನನ್ನು ನಾನು ಪ್ರೀತಿಸುವಷ್ಟು ಮತ್ತೆ ಯಾರೂ ಸಹ ಪ್ರೀತಿಸಲಾರರು. ನಿನ್ನನ್ನು ಎಂದಿಗೂ ಮರೆಯಲು ನಾನು ಬಯಸಲಾರೆ. ನೀನು ನನ್ನವಳು, ನಿನ್ನನ್ನು ಎಂದಿಗೂ ಬಿಡಲಾರೆ. ನಿನ್ನನ್ನು ಎಂದಿಗೂ, ಸತ್ತ ಮೇಲೆ ಸಹ ಪ್ರೀತಿಸುವೆ. ಎಲ್ಲರೂ ಪ್ರೀತಿಗಾಗಿ ಹೃದಯ ಕೊಡುತ್ತಾರೆ, ನಾನು ಪ್ರಾಣವನ್ನೆ ಕೊಡುವೆ" ಎಂದು ಸಹ ಫೇಸ್‌ಬುಕ್ ಪೋಸ್ತ್‌ನಲ್ಲಿ ಅತುಲ್ ಲೋಖಂಡೆ ಮನಮರುಗುವ ಹಾಗೆ ಬರೆದುಕೊಂಡಿದ್ದಾರೆ.

ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ಪ್ರೇಯಸಿಯ ಜೊತೆ ಇರುವ 40ಕ್ಕೂ ಹೆಚ್ಚು ಫೋಟೊಗಳನ್ನು ಸಹ ಅತುಲ್ ಪೋಸ್ಟ್ ಮಾಡಿದ್ದು ನಮ್ಮಿಬ್ಬರ ಸಂಬಂಧ 13 ವರ್ಷಗಳಷ್ಟು ಹಳೆಯದು ಎಂದು ಹೇಳಿಕೊಂಡಿದ್ದಾರೆ.

"ಭಾರತದಲ್ಲಿ ಅಂತರ್ಜಾತಿ ಮತ್ತು ಅಂತರ್ಧರ್ಮೀಯ ಮದುವೆಗಳು ಹೆಚ್ಚಾದಷ್ಟು ಭಾರತ ಬಲಿಷ್ಟ ದೇಶವಾಗುತ್ತದೆ" ಎಂದೂ ಸಹ ಅತುಲ್ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಪ್ರೀತಿಗಾಗಿ ಜೀವ ಕೊಡಲು ಮುಂದಾದ ಅತುಲ್ ಜೀವ ಉಳಿಯುವುದೆ? ಆತನ ಪ್ರೀತಿ ಆತನಿಗೆ ಸಿಗುವುದೆ? ಅತುಲ್ ಜೀವ ಉಳಿಯಲಿ, ಹೃದಯ ಮನಸ್ಸುಗಳಿಂದ ಪ್ರೀತಿಸಿದ ಹುಡುಗಿ ಅವರಿಗೆ ಸಿಗಲಿ ಎಂದು ಈ ಸಂದರ್ಭದಲ್ಲಿ ಎಲ್ಲರ ಹಾರೈಕೆಯಾಗಲಿ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ