ಮಹಾಮೈತ್ರಿ ಕೂಟದ ಅಭ್ಯರ್ಥಿಯಾಗಿ ಕನ್ಹಯ್ಯಾ ಕುಮಾರ್ ಸ್ಪರ್ಧೆ?

ಕರಾವಳಿ ಕರ್ನಾಟಕ ವರದಿ

ಪಟ್ನಾ:
ಜೆಎನ್‌ಯು ವಿದ್ಯಾರ್ಥಿ ನಾಯಕ ಕನ್ಹಯ್ಯಾ ಕುಮಾರ್‌ 2019ರ ಲೋಕಸಭಾ ಚುನಾವಣೆಯಲ್ಲಿ ಮಹಾಮೈತ್ರಿ ಕೂಟದ ಅಭ್ಯರ್ಥಿಯಾಗಿ ಬಿಹಾರದ ಬೇಗುಸರಾಯ್‌ನಿಂದ ಸ್ಪರ್ಧಿಸುವ ಸಾಧ್ಯತೆ ಇದೆ.

ಕಾಂಗ್ರೆಸ್‌, ಆರ್‌ಜೆಡಿ, ಎನ್‌ಸಿಪಿ, ಜಿತನ್‌ ರಾಮ್‌ ಮಾಂಝಿ ಅವರ ಎಚ್‌ಎಎಮ್‌ ಇರುವ ಮಹಾಮೈತ್ರಿ ಕೂಟ ಸೇರಿಕೊಳ್ಳಲು ಸಿದ್ಧ ಎಂದು ಎಡಪಕ್ಷಗಳು ಹೇಳಿವೆ. ಸಿಪಿಐ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿಯಲು ಕನ್ಹಯ್ಯಾ ಕುಮಾರ್‌ಗೆ ಪಕ್ಷ ಒಪ್ಪಿಗೆಯನ್ನೂ ಕೊಟ್ಟಿದೆ.

ಬಿಹಾರದಲ್ಲಿ ಕ್ಷೇತ್ರಗಳು ಮತ್ತು ಅಭ್ಯರ್ಥಿಗಳನ್ನು ಗುರುತಿಸುವ ಪ್ರಕ್ರಿಯೆ ಆರಂಭವಾಗಿದೆ. ಇದರ ಭಾಗವಾಗಿ, ಬೇಗುಸರಾಯ್‌ ಕ್ಷೇತ್ರವನ್ನು ಸಿಪಿಐಗೆ ಬಿಟ್ಟುಕೊಡುವ ಸಾಧ್ಯತೆ ಹೆಚ್ಚು. ಅಲ್ಲಿ ಕನ್ಹಯ್ಯಾ ಕುಮಾರ್ ಸ್ಪರ್ಧಿಸಲಿದ್ದಾರೆ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

ಕನ್ಹಯ್ಯಾ ಅವರ ಹುಟ್ಟೂರು ಬೇಗುಸರಾಯ್‌. ಅವರ ತಾಯಿ ಮೀನಾ ದೇವಿ ಅಲ್ಲಿನ ಅಂಗನವಾಡಿಯೊಂದರಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ.

ಸಿಪಿಐನ ರಾಷ್ಟ್ರೀಯ ಮಂಡಳಿಯ ಕಾರ್ಯದರ್ಶಿ ಕೆ.ಆರ್‌. ನಾರಾಯಣ್‌ ಅವರು ಪಟ್ನಾಕ್ಕೆ ಇತ್ತೀಚೆಗೆ ಭೇಟಿ ಕೊಟ್ಟಾಗ ಕನ್ಹಯ್ಯಾ ಸ್ಪರ್ಧೆಯ ಬಗ್ಗೆ ಸುಳಿವು ಕೊಟ್ಟಿದ್ದರು.

ಬಿಹಾರದ ಎಲ್ಲ 40 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಹಿರಿಯ ಮುಖಂಡ ತಾರೀಖ್‌ ಅನ್ವರ್‌ ಅವರು ಕತಿಹಾರ್‌ನಿಂದ ಎನ್‌ಸಿಪಿ ಅಭ್ಯರ್ಥಿಯಾಗಿ ಸ್ಪರ್ಧಿಸಬಹುದು. ಶರದ್‌ ಯಾದವ್‌ ಅವರನ್ನು ಕಣಕ್ಕಿಳಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿಯ ಸಂಸದರಾಗಿರುವ ಶತ್ರುಘ್ನ ಸಿನ್ಹಾ ಮತ್ತು ಕೀರ್ತಿ ಆಜಾದ್‌ ಅವರನ್ನು ಮಹಾಮೈತ್ರಿ ಕೂಟದ ಅಭ್ಯರ್ಥಿಗಳಾಗಿ ಬಿಹಾರದಿಂದ ಕಣಕ್ಕೆ ಇಳಿಸಲು ಈಗಾಗಲೇ ನಿರ್ಧರಿಸಲಾಗಿದೆ. ಪಟ್ನಾ ಸಾಹಿಬ್‌ನಿಂದ ಸಿನ್ಹಾ ಮತ್ತು ದರ್ಭಾಂಗದಿಂದ ಆಜಾದ್‌ ಸ್ಪರ್ಧಿಸಲಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ