ಬಸ್ರೂರು ಚರ್ಚ್ ಪ್ರಗತಿ ಹರಿಕಾರ ಫಾ. ವಿಶಾಲ್ ಲೋಬೊ ವರ್ಗಾವಣೆ
ಫಾ. ವಿಶಾಲ್ ಲೋಬೊ ಹೊಸದಾಗಿ ಆರಂಭಗೊಂಡ ಪಿಲಾರ್ ಚರ್ಚ್ ಧರ್ಮಗುರುಗಳಾಗಿ ಸೇವೆ ಮುಂದುವರಿಸಲಿದ್ದಾರೆ.

ಕರಾವಳಿ ಕರ್ನಾಟಕ ವರದಿ/ ನವೀನ್ ಕೋತ್ ಆನಗಳ್ಳಿ

ಕುಂದಾಪುರ:
ಬಸ್ರೂರು ಸಂತ ಫಿಲಿಫ್ ನೇರಿ ಚರ್ಚ್ ಧರ್ಮಗುರುಗಳಾಗಿ ಏಳು ವರ್ಷಗಳ ಸೇವೆ ಸಲ್ಲಿಸಿದ ಫಾ. ವಿಶಾಲ್ ಲೋಬೊ ಅವರು ಪಿಲಾರ್ ‘ಬಾಳೊಕ್ ಜೆಜು’ ಚರ್ಚ್ಗೆ ವರ್ಗವಾಗಿದ್ದು ಅವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು.

‘ಸಂತ ಫಿಲಿಫ್ ನೇರಿಯವರ ಹಬ್ಬ’ದ ಪೂಜೆಯನ್ನು ಫಾ. ವಿಶಾಲ್ ಲೋಬೊ ಅವರು ಸಲ್ಲಿಸಿದ ಬಳಿಕ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಆಲ್ಫ್ರೆಡ್ ಕೋತ್ ಅವರು ಗುರುಗಳ ‘ಮಾನ್ ಪತ್ರ್’ ವಾಚಿಸಿ ಅವರ ಕೊಡುಗೆಗಳನ್ನು ಸ್ಮರಿಸಿದ ಬಳಿಕ ಚರ್ಚ್ ಆರ್ಥಿಕ ಸಮಿತಿಯಿಂದ ಅಭಿನಂದನೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಪಾಲನಾ ಮಂಡಳಿ ಕಾರ್ಯದರ್ಶಿ ಫ್ಲೈವನ್ ಡಿ’ಸೋಜಾ, ಎಲ್ಲ ಗುರ್ಕಾರ್ ಗಳು, ಭಗಿನಿಯರಾದ ಹೆಜೆಲ್, ವೀಣಾ, ಉದ್ಯಮಿ ಫಿಲಿಫ್ ಕೋತ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಬ್ರ. ಸ್ಟೀವನ್ ಕಾರ್ಯಕ್ರಮ ನಿರೂಪಿಸಿದರು.

ಫಲಿಮಾರ್ ಚರ್ಚ್ ಧರ್ಮಗುರು ಫಾ. ಚಾರ್ಲ್ಸ್ ನೊರೊನ್ನಾ ಅವರು ಬಸ್ರೂರು ಚರ್ಚ್ ನೂತನ ಧರ್ಮಗುರುಗಳಾಗಿ ಮೇ31 ರಂದು ಅಧಿಕಾರ ಸ್ವೀಕರಿಸಲಿದ್ದಾರೆ.

ಬಸ್ರೂರು ಚರ್ಚ್‌ನಲ್ಲಿ ವಿಶಾಲ್ ಲೋಬೊ ಹೆಜ್ಜೆ ಗುರುತುಗಳು
ಎಪ್ರಿಲ್ 23, 2002ರಂದು ಧರ್ಮಗುರುಗಳಾಗಿ ದೀಕ್ಷೆಯನ್ನು ಸ್ವೀಕರಿಸಿದ ಫಾ. ವಿಶಾಲ್ ಲೋಬೊ ಅವರು ಹಲವು ಚರ್ಚ್ ಗಳಲ್ಲಿ ಧರ್ಮಗುರುವಾಗಿ ಸೇವೆ ನೀಡಿ ಜನಪ್ರಿಯರಾಗಿದ್ದರು.. ಪಾಂಗ್ಳಾ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು.

ಬಸ್ರೂರು ಚರ್ಚ್ ಧರ್ಮಗುರುಗಳಾಗಿ ಸಮುದಾಯದ ಧಾರ್ಮಿಕ ಮತ್ತು ಶೈಕ್ಷಣಿಕ ಅಗತ್ಯಗಳಿಗೆ ಅವರು ವಿಶೇಷ ಕೊಡುಗೆ ನೀಡಿದ್ದಾರೆ. ಚರ್ಚ್ 18ನೇ ಆಯೋಗ ಕ್ರಿಯಾಶೀಲವಾಗಿರುವಲ್ಲಿ ಅವರು ಬಹಳ ಮುತುವರ್ಜಿ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಕಾರ್ಯಾಗಾರಗಳನ್ನು ಏರ್ಪಡಿಸಿ ಜನರ ಜೀವನ ಮಟ್ಟವನ್ನು ಸುಧಾರಿಸಲು ಅವರು ಶ್ರಮಿಸಿದರು.ಚರ್ಚ್ ಸಂಗೀತ ತಂಡವನ್ನು ಅವರು ಹುರಿದುಂಬಿಸಿದರು. ಸಂಗೀತ ಉಪಕರಣಗಳನ್ನು ನುಡಿಸಲು ಅವರು ಯುವಜನರಿಗೆ ಅವರು ತರಬೇತಿ ನೀಡಿದರು.

ಚರ್ಚ್ ಎದುರು ಆಕರ್ಷಕ ‘ಗ್ರೊಟ್ಟೊ’ ನಿರ್ಮಿಸಿ ಮಾತೆ ಮೇರಿಯವರ ಪ್ರಾರ್ಥನೆಗೆ ಅವಕಾಶ ಕಲ್ಪಿಸಿದರು. ಮೊಂತಿ ಫೆಸ್ತ್ ಸಂದರ್ಭದಲ್ಲಿ ‘ಮರಿಯಾಳ್ ಗಾಯನ್ ಸ್ಪರ್ಧೊ’ವನ್ನು ಅವರು ಆಯೋಜಿಸಿದರು. ಚರ್ಚ್ ನಲ್ಲಿ ಎಲ್ಲ ವಾರ್ಡ್ ಗಳಲ್ಲಿಯೂ ‘ಲಾನ್ ಕ್ರಿಸ್ತಾಂವ್ ಸಮುದಾಯೆಚೊ ಜಮಾತಿ’ಗಳು ಸಕ್ರಿಯವಾಗುವಂತೆ ಮಾಡಿದ್ದ ಫಾ. ವಿಶಾಲ್ ಲೋಬೊ ಅವರು ಸ್ವತ: ಜಮಾತಿನಲ್ಲಿ ಉಪಸ್ಥಿತರಿದ್ದು ವಿವಿಧ ‘ವಾಡೊ’ಗಳ ಸದಸ್ಯರ ನಡುವೆ ಏಕತೆ, ಪ್ರೀತಿ-ವಿಶ್ವಾಸ ಬೆಳೆಸುವ ದಿಸೆಯಲ್ಲಿ ರಚನಾತ್ಮಕ ಕ್ರಮಗಳನ್ನು ಕೈಗೊಂಡಿದ್ದರು.

ಕ್ರಿಸ್ಮಸ್ ಸಂದರ್ಭ ಆರ್.ಸಿ.ಶಾಲೆಯ ತೆರೆದ ಮೈದಾನದಲ್ಲಿ ರಾತ್ರಿ ಕ್ರಿಸ್ಮಸ್ ಹಬ್ಬದ ಆಚರಣೆ, ಈಸ್ಟರ್ ಸಂದರ್ಭ ಗುಡ್ ಫ್ರೈಡೆಯಂದು ಶಾಲೆಯ ಮೈದಾನದಲ್ಲಿ ‘ಶಿಲುಬೆಯ ದಾರಿ(ಖುರ್ಸಾವಾಟ್) ಭಕ್ತಿಯು ಇವರ ನೇತೃತ್ವದಲ್ಲಿ ಆರಂಭಗೊಂಡು ಜನಾದರಕ್ಕೆ ಪಾತ್ರರಾದರು.

ಧಾರ್ಮಿಕ ಸಂಗತಿಗಳ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಿದ್ದರೋ ಅಷ್ಟೇ ಪ್ರಾಮುಖ್ಯತೆಯನ್ನು ಚರ್ಚ್ ಸಂಬಂಧಿ ಆರ್ಥಿಕ ಮತ್ತು ಸಾಮಾಜಿಕ ಸಂಗತಿಗಳ ಉನ್ನತಿಗೆ, ಶೈಕ್ಷಣಿಕ ಕ್ಷೇತ್ರದ ಅಭ್ಯುದ್ಯಯಕ್ಕೆ ನೀಡಿದ್ದು ಫಾ. ವಿಶಾಲ್ ಲೋಬೊ ಅವರ ಹೆಚ್ಚುಗಾರಿಕೆ ಎಂದರೆ ಅತಿಶಯೋಕ್ತಿ ಎನಿಸದು.

ಬಸ್ರೂರು ಇಗರ್ಜಿಗೆ ಬಂದ ಮೂರೇ ತಿಂಗಳಲ್ಲಿ ಬಾವಿಯ ಕೆಲಸ ಬಗ್ಗೆ ಬಾಕಿ ಇದ್ದ ಮೂರು ಲಕ್ಷ ರೂ. ಸಾಲ ತೀರಿಸುವ ಬಗ್ಗೆ ಫಾ/ ಲೋಬೊ ಮೊದಲ ಹೆಜ್ಜೆ ಇಟ್ಟರು. ಇಗರ್ಜಿಯ ವಠಾರಕ್ಕೆ ಹೊಸ ಸುಂದರ ರೂಪ ನೀಡಿದರು. ವಿದ್ಯುತ್ ಕೈಕೊಟ್ಟ ಸಂದರ್ಭಗಳಲ್ಲಿ ಚರ್ಚ್ ಪೂಜೆಗೆ ಅಡ್ಡಿಯಾಗದಂತೆ ಧಾರ್ಮಿಕ ಕಾರ್ಯಗಳು ಸುಲಲಿತವಾಗಿ ಸಾಗಲು ಹೊಸ ಜನರೇಟರ್ ವ್ಯವಸ್ಥೆಯನ್ನು ಮಾಡಿದರು. ಫ್ಯಾನ್ ಮತ್ತು ದೀಪಗಳನ್ನು ಹೊಸದಾಗಿ ಅಳವಡಿಸಿದರು. ಇಗರ್ಜಿಯ ಸುತ್ತಲೂ ಪಾಗಾರ  ನಿರ್ಮಿಸಿ ಇಗರ್ಜಿ ಪರಿಸರಕ್ಕೆ ಪ್ರಾಣಿಗಳು, ವಿಷದ ಹಾವುಗಳು ನುಗ್ಗದಂತೆ ಸುರಕ್ಷತಾ ಕ್ರಮ ಕೈಗೊಂಡರು.

ಒಂದೇ ವರ್ಷದಲ್ಲಿ ಚರ್ಚ್ ನಲ್ಲಿ ಹದಿನೈದು ಲಕ್ಷ ರೂ. ಮೊತ್ತದ ಬೆಂಚ್ ಗಳನ್ನು ಹಾಕಿಸಿದ್ದು ಅವರ ಕತೃತ್ವ ಶಕ್ತಿಯನ್ನು ತೋರಿಸುತ್ತದೆ. ಎಲ್ಸಿಡಿ ಪ್ರೊಜೆಕ್ಟರ್ ಚರ್ಚ್ ನಲ್ಲಿ ಅಳವಡಿಕೆ, ಇಗರ್ಜಿಯ ಸಿಮೆಸ್ಟ್ರಿ(ಸ್ಮಶಾನ)ದ ಸುತ್ತು ಆವರಣ ಕಟ್ಟಿ ಅದಕ್ಕೊಂದು ಹೊಸ ರೂಪ ನೀಡಿ ಅಂದಗೊಳಿಸುವಿಕೆಯ ಜೊತೆಗೆ ಇಗರ್ಜಿಗೆ ಸಂಬಂಧ ಪಟ್ಟ ಜಾಗಗಳ ದಾಖಲೆಗಳನ್ನು ಸಮಯದ ಪರಿವೆ ಇಲ್ಲದೆ ಸಂಬಂಧಪಟ್ಟ ಕೋರ್ಟ್ ಹಾಗೂ ಇತರೆಡೆ ದಣಿವರಿಯದೆ ತಿರುಗಿ ಅವುಗಳನ್ನು ನೇರ್ಪುಗೊಳಿಸಿದರು.
ಕಂಡ್ಲೂರು ಪರಿಸರದ ಕ್ರೈಸ್ತ ಧರ್ಮೀಯರ ಧಾರ್ಮಿಕ ಅಗತ್ಯಗಳನ್ನು ಮನಗಂಡು ಸ್ವತಂತ್ರ ಚರ್ಚ್ ರೂಪುಗೊಳ್ಳುವ ಸಂದರ್ಭ ಫಾ. ಲೋಬೊ ಅವರು ನೀಡಿದ ಸಹಕಾರ ಮಹತ್ವದ್ದಾಗಿದ್ದು, ಅವರ ವಿಶಾಲ ಮನೋಭಾವದ ಪ್ರತೀಕವಾಗಿ ಜನ ಮೆಚ್ಚುಗೆಗೆ ಪಾತ್ರವಾಗಿತ್ತು.

ಬಸ್ರೂರು ಪರಿಸರ ಮತ್ತು ಸಾರ್ವಜನಿಕ ಸ್ಥಳಗಳ ಕಸ-ತ್ಯಾಜ್ಯವನ್ನು ಚರ್ಚ್ ಬಳಿ ಡಂಪಿಂಗ್ ಯಾರ್ಡ್ ಸ್ಥಾಪಿಸಿ ವಿಲೇವಾರಿ ಮಾಡಲು ಸರಕಾರ ಯೋಜಿಸಿದಾಗ ತಕ್ಷಣ ಈ ಡಂಪಿಂಗ್ ಯಾರ್ಡ್ ಇಲ್ಲಿ ಸ್ಥಾಪನೆಯಾದರೆ ಜನರಿಗಾಗಬಹುದಾದ ತೊಂದರೆ ಮನಗಂಡು ಹೈಕೋರ್ಟ್ ಮೆಟ್ಟಿಲೇರಿ ಇದರ ವಿರುದ್ದ ಹೋರಾಟ ಸಂಘಟಿಸಿದ ಫಾ. ಲೋಬೊ ಕೊನೆಗೂ ಡಂಪಿಂಗ್ ಯಾರ್ಡ್ ಚರ್ಚ್ ಸಮೀಪ ಬಾರದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದರು.

ಆರ್.ಸಿ ಶಾಲೆಯಲ್ಲಿನ ನೀರಿನ ಸಮಸ್ಯೆ ಮನಗಂಡು ಸಮರ್ಪಕ ನೀರಿನ ವ್ಯವಸ್ಥೆ ಕಲ್ಪಿಸಿದರು.
CBSE ಶಿಕ್ಷಣದ ಅನುಕೂಲ ವಂಚಿತ ಬಸ್ರೂರು ಇಗರ್ಜಿ ಅಧೀನದ ಕ್ರೈಸ್ತರ ಮಕ್ಕಳು CBSE ಶಿಕ್ಷಣಕ್ಕಾಗಿ ದೂರದ ಊರುಗಳಿಗೆ ತೆರಳುವ ಸಂದರ್ಭದಲ್ಲಿ ಧಾರ್ಮಿಕ ಶಿಕ್ಷಣದಿಂದ ವಂಚಿತರಾಗುವುದನ್ನು ಫಾ.ವಿಶಾಲ್ ಲೋಬೊ ಮನಗಂಡರು.  ಬಸ್ರೂರು ಚರ್ಚ್ ವ್ಯಾಪ್ತಿಯ ಮಕ್ಕಳು ಕೂಡ CBSE ಶಿಕ್ಷಣದಿಂದ ವಂಚಿತರಾಗಿ ಹಿಂದುಳಿದೆವೆಂದು ಚಿಂತಿಸಬಾರದು ಎಂಬ ಕಾರಣಕ್ಕೆ ವಿಶೇಷ ಮುತುವರ್ಜಿಯಿಂದ ಶಾಲೆಯ ಸ್ಥಾಪನೆಗೆ ಮುಂದಾದರು. ಸಂತ ಫಿಲಿಫ್ ನೇರಿಯವರ ಐನೂರನೇ ಹುಟ್ಟುಹಬ್ಬದ ಆಚರಣೆಯ ಸವಿ ನೆನಪಿಗಾಗಿ ಸೈಂಟ್ ಫಿಲಿಫ್ ಸಿಬಿಎಸ್ಇ ಸೆಂಟ್ರಲ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಆರಂಭಿಸಿದರು. |

‘ಕುಂದಾಪ್ರ ಕನ್ನಡ’ವನ್ನು ಮಾತಾಡುವ ಮೂಲಕ ಬಸ್ರೂರು ಪರಿಸರದ ಜನರಲ್ಲಿ ಸುಲಭವಾಗಿ ಬೆರೆಯುತ್ತಿದ್ದ ಫಾ. ವಿಶಾಲ್ ಲೋಬೊ ಅವರು ಸೌಹಾರ್ದತೆಗೆ ಯಾವತ್ತೂ ಆದ್ಯತೆ ನೀಡಿದವರು. ಅವರ ನಿರ್ಗಮನ ಈ ಪರಿಸರದ ಎಲ್ಲ ಜನರಿಗೂ ಬೇಸರದ ಸಂಗತಿಯಾಗಿದೆ.

ಈ ಬೇಸರದ ನಡುವೆಯೂ ಫಾ. ವಿಶಾಲ್ ಲೋಬೊ ಅವರು ಪಿಲಾರ್ ನಲ್ಲಿ ನೂತನವಾಗಿ ಆರಂಭಗೊಂಡ ಚರ್ಚ್ ನಲ್ಲಿ ಜೂನ್ 1ರಿಂದ ಧರ್ಮಗುರುಗಳಾಗಿ ಸೇವೆ ನೀಡಲಿದ್ದು ಅಲ್ಲಿ ಕೂಡ ತಮ್ಮ ಛಾಪು ಮೂಡಿಸಲಿದ್ದಾರೆ ಎಂಬ ವಿಶ್ವಾಸ ಬಸ್ರೂರು ಚರ್ಚ್ ವ್ಯಾಪ್ತಿಯ ಕ್ರೈಸ್ತರದ್ದಾಗಿದೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಸ್ಟಾರ್ ಪ್ರಚಾರಕ! ಡುಪ್ಲಿಕೇಟ್ ಕೊಹ್ಲಿ ಕರೆ ತಂದು ಮತದಾರರನ್ನು ಕುರಿ ಮಾಡಿದ ಅಭ್ಯರ್ಥಿ
http://bit.ly/2INwcpC
►►ಸಾವಿನ ವದಂತಿಯಿಂದ ನೋವಾಗಿದೆ. ದೂರು ದಾಖಲಿಸಿದ ಸಾಲುಮರದ ತಿಮ್ಮಕ್ಕ
 
http://bit.ly/2shKVxS
►►ಕರ್ನಾಟಕ ಬಂದ್‌ಗೆ ನಾವು ಕರೆ ನೀಡಿಲ್ಲ: ಬಿಎಸ್‌ವೈ http://bit.ly/2krJ85Z
►►ಯೋಗಿ  ಮುಖಕ್ಕೆ ಚಪ್ಪಲಿಯಲ್ಲಿ ಹೊಡೆಯಬೇಕೆನಿಸಿತು: ಉದ್ಧವ್ ಠಾಕ್ರೆ ಕಿಡಿ
http://bit.ly/2INKNkK
►►ಮೋದಿ ಸರ್ಕಾರಕ್ಕೆ 4 ವರ್ಷ: ಕಾಂಗ್ರೆಸ್ನಿಂದ 'ವಿಶ್ವಾಸಘಾತುಕ ದಿನ' http://bit.ly/2GQqLAy
►►ಜೆಡಿಎಸ್ ಜೊತೆ ಕಾಂಗ್ರೆಸ್ ಅಪವಿತ್ರ ಮೈತ್ರಿ: ರಘುಪತಿ ಭಟ್ ವ್ಯಂಗ್ಯ  http://bit.ly/2s9xOQg
►►ಇಂಧನ, ವಿಮೆ ದರ ಹೆಚ್ಚಳ ವಿರೋಧಿಸಿ ಜೂ.18ರಿಂದ ಲಾರಿ ಮುಷ್ಕರ
http://bit.ly/2J7A9Vu
►►ರೈತರ ಸಾಲಮನ್ನಾ ಮಾಡದಿದ್ದರೆ ಸೋಮವಾರ ಕರ್ನಾಟಕ ಬಂದ್ http://bit.ly/2x8SgFW
►►ದಕ್ಷಿಣ ಕನ್ನಡ: ನಿಫಾ ವೈರಸ್ ಭೀತಿ–ಆತಂಕ ಬೇಡ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿಕೆ
http://bit.ly/2IZSV19

Related Tags: Saint Philip Neri Church Basrur, Fr. Vishal Lobo, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಬಸ್ರೂರು ಚರ್ಚ್, ಫಾ. ವಿಶಾಲ್ ಲೋಬೊ, ಕರಾವಳಿಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ