ಕಾರವಾರದಲ್ಲಿ ಮತ್ಸ್ಯ ಬೇಟೆ: ಹಿನ್ನೀರಿಗಿಳಿದು ಕ್ವಿಂಟಾಲ್‌ಗಟ್ಟಲೆ ಮೀನು ಹಿಡಿದ ಸ್ಥಳೀಯರು

ರವಿತೇಜ ಕಾರವಾರ/ ಕರಾವಳಿ ಕರ್ನಾಟಕ ವರದಿ

ಕಾರವಾರ: ನೂರಾರು ಸಂಖ್ಯೆಯಲ್ಲಿ ಒಮ್ಮೆಗೇ ನೀರಿಗಿಳಿದಿರುವ ಜನರು. ಎಲ್ಲರ ಕೈಯಲ್ಲಿಯೂ ಚೀಲ ಹಾಗೂ ಬಲೆಗಳು. ಹಿಡಿ ಅದನ್ನು! ಬಿಡಬೇಡ! ಅದೋ ಅಲ್ನೋಡು ದೊಡ್ಡ ಮೀನು! ಇಂತಹ ಮಾತುಗಳೇ ಪ್ರತಿಯೊಬ್ಬರ ಬಾಯಿಂದ. ಏನು ನಡೆಯುತ್ತಿದೆ ಎಂದು ಆಶ್ಚರ್ಯದಿಂದ ರಸ್ತೆಯಲ್ಲಿ ಸಾಗುತ್ತಿದ್ದವರೆಲ್ಲ ನಿಂತು ನೋಡುವ ಸನ್ನಿವೇಶ.

ಹೌದು! ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಿನ್ನರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಳಿ ನದಿ ಹಿನ್ನೀರಿನಲ್ಲಿ ರವಿವಾರ ಸುತ್ತಮುತ್ತಲಿನ ಗ್ರಾಮಸ್ಥರಿಂದ ನಡೆದ ಸಾಮೂಹಿಕ ಮತ್ಸ್ಯ ಬೇಟೆಯ ವೇಳೆ ನಡೆದ ಸನ್ನಿವೇಶಗಳಿವು. ವರ್ಷಕ್ಕೊಮ್ಮೆ ನಡೆಯುವ ಈ ಮತ್ಸ್ಯ ಬೇಟೆಯಲ್ಲಿ ಎಲ್ಲರೂ ಒಟ್ಟಾಗಿ ಮೀನುಗಳನ್ನು ಹಿಡಿಯುವ ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸುತ್ತಲೂ ನೂರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದು ವಿಶೇಷ ಗಮನ ಸೆಳೆಯಿತು.

ಇಲ್ಲಿನ ಗಿಂಡಿ ಮಹಾದೇವಿ ದೇವಸ್ಥಾನದ ವ್ಯಾಪ್ತಿಯಲ್ಲಿರುವ ಕಾಳಿನದಿ ಹಿನ್ನಿರಿನಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಮತ್ಸ್ಯಬೇಟೆಗೆ ಅವಕಾಶ ಕಲ್ಪಿಸಲಾಗಿತ್ತು. ದೇವಸ್ಥಾನದ ಆವರಣದಲ್ಲಿ ತುಂಬಿಕೊಂಡಿದ್ದ ಹಿನ್ನೀರನ್ನು ಖಾಲಿ ಮಾಡುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಜನರು ಬಲೆ ಹಾಗೂ ಚೀಲಗಳ ಮೂಲಕ ನೀರಿಗಿಳಿದು ಮತ್ಸ್ಯ ಬೇಟೆ ಆರಂಭಿಸಿದರು. ಸುಮಾರು 3 ತಾಸುಗಳ ವರೆಗೆ ನಡೆದ ಈ ಬೇಟೆಯಲ್ಲಿ ಜನರು ವಿವಿಧ ಜಾತಿಯ ಸಹಸ್ರಾರು ಮೀನುಗಳನ್ನು ಹಿಡಿದು ಖುಷಿ ಪಟ್ಟರು. ಜೊತೆಗೆ ಈ ಎಲ್ಲ ಸನ್ನಿವೇಶಗಳನ್ನು ನೋಡಲೆಂದೇ ಸೇರಿದ್ದ ಜನ ಸಮೂಹ ತಮ್ಮ ಮೊಬೈಲ್‌ಗಳಲ್ಲಿ ವಿಡಿಯೋ ಹಾಗೂ ಫೊಟೋ ಕ್ಲಿಕ್ಕಿಸುತ್ತ ಆನಂದ ಪಟ್ಟರು.

ವಿವಿಧ ಸಮುದಾಯದವರು ಭಾಗಿ:
ಕಿನ್ನರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡ್ತಿ, ಗುನಗಿ, ಹಾಲಕ್ಕಿಗಳು, ಭಂಡಾರಿ, ಕೋಮಾರಪಂಥ, ದೇವಳ್ಳಿ, ಕೊಂಕಣ ಮರಾಠ ಜೊತೆಗೆ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯದವರೂ ಕೂಡ ಈ ಮತ್ಸ್ಯ ಬೇಟೆಯಲ್ಲಿ ಪಾಲ್ಗೊಳ್ಳುತ್ತಾರೆ. ಮಹಿಳೆಯರು, ಮಕ್ಕಳು, ಹಿರಿಯರು ಕಿರಿಯರೆನ್ನದೆ ಪ್ರತಿಯೊಬ್ಬರೂ ಮೀನು ಹಿಡಿದು ಸಂಭ್ರಮಿಸಿದರು. ಸುಮಾರು 5 ಎಕರೆ ಪ್ರದೇಶದ ಹಿನ್ನಿರಿನಲ್ಲಿ 3 ಗಂಟೆಗಳ ನಡೆದ ಮತ್ಸ್ಯಬೇಟೆಯಲ್ಲಿ ಜನಜಾತ್ರೆಯೇ ನೆರೆದಿತ್ತು. ಎಂಡಿ, ದಾಂಡಿ, ಕಟಿಯಾಳ ಮೊದಲಾದ ಬಲೆಗಳ ಮೂಲಕ ನೊಗಲಿ, ಮಡ್ಲೆ, ಕುರುಡೆ, ತಾಂಬುಸ್, ಸಿಗಡಿ, ಭುರಾಟೆ, ಕಾಗಳಸಿ, ಗೊಳಸು ಮುಂತಾದ ಜಾತಿಯ ಮೀನುಗಳನ್ನು ಹಿಡಿದು ಅವುಗಳನ್ನು ಚೀಲದಲ್ಲಿ ತುಂಬಿ ಮತ್ತೆ ಮತ್ತೆ ಮೀನು ಹೀಡಿಯಲು ಮುಂದಾಗುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.


ವರ್ಷಕ್ಕೊಮ್ಮೆ ಮಾತ್ರ ಮೀನು ಬೇಟೆ
ಗ್ರಾಮದಲ್ಲಿ ಅನಾದಿಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಈ ಮತ್ಸ್ಯಬೇಟೆಯಲ್ಲಿ ಸುಮಾರು 8 ರಿಂದ 10 ಕ್ವಿಂಟಲ್ ಮೀನು ಹಿಡಿಯಲಾಗುತ್ತದೆ. ಗಿಂಡಿ ಮಹಾದೇವಿ ದೇವಸ್ಥಾನದ ವತಿಯಿಂದ ನಡೆಯುವ ಈ ಚಟುವಟಿಕೆಯಲ್ಲಿ ಊರಿನವರು ಮಾತ್ರವಲ್ಲದೆ ಪರ ಊರಿನ ಜನರು ಕೂಡ ಬಂದು ಸಂಭ್ರಮಿಸುತ್ತಾರೆ. ಹಿನ್ನೀರಿನಲ್ಲಿ ದಸರಾ ಆರಂಭದಿಂದ ಇಲ್ಲಿಯವರಗೆ ಮೀನು ಹಿಡಿಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ. ಇದರಿಂದ ಇಲ್ಲಿ ಮೀನುಗಳು ಸೊಂಪಾಗಿ ಬೆಳೆದಿರುತ್ತವೆ. ನಂತರ ಶಿವರಾತ್ರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಾಮನ್ಯವಾಗಿ ಮೇ ತಿಂಗಳಿನಲ್ಲಿ ಮೀನು ಬೇಟೆಗೆ ದಿನ ಗುರುತಿಸಲಾಗುತ್ತದೆ. ಈ ದಿನ ಎಲ್ಲರೂ ಸಂಭ್ರಮದಿಂದ ಭಾಗವಹಿಸಿ ಮೀನು ಹಿಡಿಯುತ್ತಾರೆ ಎಂದು ಸ್ಥಳೀಯರಾದ ದಿಲೀಪ ಮಾಹಿತಿ ನೀಡಿದರು.

ಮೀನು ಸಮಪಾಲು
ಮತ್ಸ್ಯಬೇಟೆಯಲ್ಲಿ ತಮಗೆ ದೊರಕಿದ ಎಲ್ಲ ಮೀನುಗಳನ್ನು ಮನೆಗೆ ತೆಗೆದುಕೊಂಡು ಹೋಗಲು ಅವಕಾಶವಿಲ್ಲ. ದೇವಸ್ಥಾನ ಕಮಿಟಿಯವರು ನೇಮಿಸಿದ ಸದಸ್ಯರಲ್ಲಿಗೆ ಅವುಗಳನ್ನು ತಂದು ಅಲ್ಲಿ ತಾವು ಹಿಡಿದಿದ್ದರಲ್ಲಿ ಅರ್ಧಪಾಲನ್ನು ನೀಡಿ ಉಳಿದ ಮೀನುಗಳನ್ನು ತೆಗೆದುಕೊಂಡು ಹೋಗಬೇಕು. ಹೀಗೆ ದೇವಸ್ಥಾನಕ್ಕೆ ಸಲ್ಲಿಕೆಯಾದ ಎಲ್ಲಾ ಮೀನುಗಳನ್ನು ಬಳಿಕ ಹರಾಜು ಕೂಗಲಾಗುತ್ತದೆ. ಇದರಿಂದ ಬರುವ ಹಣವನ್ನು ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಹಾಗೂ ಅಭಿವೃದ್ಧಿ ಕಾರ್ಯಕ್ಕಾಗಿ ಬಳಸಲಾಗುತ್ತದೆ.
 

ಪ್ರತಿ ವರ್ಷದಂತೆ ಈ ವರ್ಷವೂ ಇಲ್ಲಿನ ಕಾಳಿನದಿ ಹಿನ್ನೀರಿನಲ್ಲಿ ಸಾಮೂಹಿಕ ಮತ್ಸ್ಯ ಬೇಟೆ ನಡೆಸಲಾಯಿತು. ಇಲ್ಲಿ ಮೀನು ಹಿಡಿಯುವುದೇ ಒಂದು ಖುಷಿ. ಈ ಒಂದು ದಿನ ನಾವೆಲ್ಲ ಮೀನು ಹಬ್ಬದಂತೆ ಸಂಭ್ರಮಿಸುತ್ತೇವೆ.
-ಕಿರಣ ಕೊಠಾರಕರ ಸ್ಥಳೀಯರು

ಇದನ್ನೂ ಓದಿ
►►ಮುಖ್ಯಮಂತ್ರಿಯಾಗಿ ಎಚ್ ಡಿ ಕುಮಾರಸ್ವಾಮಿ. ಬುಧವಾರ ಪ್ರಮಾಣ ವಚನ:
http://bit.ly/2Lf4jnS
►►ಬರಲಿದೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪ್ರತಾಪಚಂದ್ರ ಶೆಟ್ಟಿಗೆ ಒಲಿಯುವುದೆ ಸಚಿವ ಸ್ಥಾನ?
ವರದಿಯ ವೆಬ್ ಲಿಂಕ್ ಇಲ್ಲಿದೆ:
http://bit.ly/2Iw1BwB
►►ಕರ್ನಾಟಕ ವರ್ಣರಂಜಿತವಾಗಿ ಮುಂದುವರಿಯಲಿದೆ: ಪ್ರಕಾಶ್ ರೈ : http://bit.ly/2GxSIwV

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ