ಇಂದು ವಿಶ್ವಾಸಮತದಲ್ಲಿ ಯಡಿಯೂರಪ್ಪ ಸರ್ಕಾರ ಪಾಸ್ ಆಗಲಿದೆ. ಹೇಗೆ ಅಂತೀರಾ?

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಸುಪ್ರಿಂ ಕೋರ್ಟ್ ಆದೇಶದಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತರಾತುರಿಯಲ್ಲಿ ಮತ್ತೊಮ್ಮೆ ವಿಶ್ವಾಸಮತ ಯಾಚನೆಗೆ ಸಜ್ಜಾಗುತ್ತಿದ್ದು ಇಂದು ಸಂಜೆ 4 ಗಂಟೆ ವೇಳೆಗೆ ವಿಶ್ವಾಸಮತ ಯಾಚನೆ ಮಾಡಲಿದ್ದಾರೆ.

ವಿಶ್ವಾಸ ಮತದಲ್ಲಿ ಗೆಲ್ಲಲು ಎಲ್ಲ ಸಾಧ್ಯವಾದ ಸರ್ಕಸ್‌ಗಳನ್ನು ಮಾಡುತ್ತಿರುವ ಬಿಜೆಪಿ ತಂತ್ರಗಳ ಜೊತೆ ಕುತಂತ್ರಗಳಿಗೆ ಮೊರೆ ಹೋದರೂ ಅಚ್ಚರಿ ಇಲ್ಲ.

ಈ ಹಿಂದೆ ಸುಪ್ರೀಂ ಕೋರ್ಟ್‌ನಿಂದ ಛೀಮಾರಿಗೊಳಗಾಗಿದ್ದ ಮಾಜಿ ಸ್ಪೀಕರ್ ಮಡಿಕೇರಿಯ ಶಾಸಕ ಕೆ. ಜಿ. ಬೋಪಯ್ಯ ಅವರನ್ನು ಮತ್ತೊಮ್ಮೆ ಹಂಗಾಮಿ ಸ್ಪೀಕರ್ ಆಗಿ ಆಯ್ಕೆ ಮಾಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಯಾವ ಮಟ್ಟಕ್ಕೂ ಇಳಿಯಬಹುದು ಎಂಬ ಭೀತಿ ಕಾಂಗ್ರೆಸ್ ವಲಯದಲ್ಲಿ ಆವರಿಸಿದೆ.

ಬಿಜೆಪಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಅದರಲ್ಲೂ ವಿಶೇಷವಾಗಿ ಲಿಂಗಾಯತ ಸಮುದಾಯದ ಶಾಸಕರಿಗೆ ಆಮಿಷ ಒಡ್ಡಿ ತನ್ನ ಪಳಯಕ್ಕೆ ಸೆಳೆಯುತ್ತಿದೆ ಎನ್ನುವ ಪುಕಾರುಗಳಿಗೆ ಸಾಕ್ಷಿ ಎಂಬಂತೆ ನಿನ್ನೆ ಗಾಲಿ ಜನಾರ್ದನ ರೆಡ್ಡಿ ಕಾಂಗ್ರೆಸ್ ಶಾಸಕರೊಬ್ಬರಿಗೆ ಸಚಿವ ಸ್ಥಾನ ಮತ್ತು ಅಪಾರ ಹಣದ ಆಮಿಷ ಒಡ್ಡಿದ ದೂರವಾಣಿ ಕರೆಯ ಆಡಿಯೊವನ್ನು ಕಾಂಗ್ರೆಸ್ ವಕ್ತಾರ ವಿ. ಎಸ್. ಉಗ್ರಪ್ಪ ಬಿಡುಗಡೆ ಮಾಡಿದ್ದರು.

ಇದು ಸದನದ ಸದ್ಯದ ಸ್ಥಿತಿ
ವಿಧಾನಸಭೆಯಲ್ಲಿ ಶಾಸಕರ ಸದ್ಯದ ಸಂಖ್ಯಾಬಲ 221
ಬಹುಮತಕ್ಕೆ ಬೇಕಾದ ಮ್ಯಾಜಿಕ್ ಸಂಖ್ಯೆ 111
ಬಿಜೆಪಿಯ ಬಳಿ ಇರುವ ಶಾಸಕರು 104
ಪ್ರತಿಪಕ್ಷದ ಸಂಖ್ಯಾಬಲ ಒಟ್ಟು 117
ಕಾಂಗ್ರೆಸ್ 78 ಜೆಡಿಎಸ್ 37 ಇತರೆ 2 .


ಬಿಜೆಪಿ ಸರ್ಕಾರ ಉಳಿಸಲು ಬಿಜೆಪಿ ಮಾಡುವ ತಂತ್ರಗಾರಿಕೆಗಳೇನು?
ಬಿಜೆಪಿಯ ಎಲ್ಲ ಶಾಸಕರು ನಾಳೆ ಸದನಕ್ಕೆ ಹಾಜರಾಗಿಚುನಾಯಿತ ಪ್ರತಿನಿಧಿಗಳು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಬೇಕು. ನಂತರ ಮುಖ್ಯ ಸಚೇತಕ ಅವರು ಬಿಜೆಪಿ ಶಾಸಕರಿಗೆ ವಿಪ್ ಜಾರಿಗೊಳಿಸಿ ಸಂಜೆ 4 ಗಂಟೆಗೆ ವಿಶ್ವಾಸಮತ ಯಾಚನೆ ಅಧಿವೇಶನಕ್ಕೆ ಹಾಜರಾಗುವಂತೆ ಸೂಚಿಸಲಿದ್ದಾರೆ.

11 ಮ್ಯಾಜಿಕ್ ನಂಬರ್ ದಾಟಲು ಬಿಜೆಪಿಗೆ ಇರುವ ಏಕೈಕ ಮಾರ್ಗವೆಂದರೆ ಕೆಲ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಮತದಾನ ಮಾಡದಂತೆ ತಡೆಯುವುದು ಅಥವಾ ಆ ಶಾಸಕರು ಪ್ರಮಾಣವಚನ ಸ್ವೀಕರಿಸದಂತೆ ನೋಡಿಕೊಳ್ಳುವುದು. ಆಗ ಸದನದಲ್ಲಿ ಪ್ರತಿಪಕ್ಷ ಸದಸ್ಯರ ಹಾಜರಾತಿ ಸಂಖ್ಯೆ ಇಳಿಮುಖ ಮಾಡುವುದು ಬಿಜೆಪಿಯ ಟಾರ್ಗೆಟ್.

ಆದರೆ ಒಮ್ಮೆ ಶಾಸಕರು ಪ್ರಮಾಣ ವಚನ ಸ್ವೀಕರಿಸಿದರೆ ಕಾಂಗ್ರೆಸ್-ಜೆಡಿಎಸ್ ಕೂಡಾ ವಿಪ್ ಜಾರಿಗೊಳಿಸಲಿದೆ. ವಿಪ್ ಉಲ್ಲಂಘಿಸಿ ಅಡ್ಡಿ ಮತದಾನ ಮಾಡಿದರೆ ಅಂತಹ ಶಾಸಕರು ಅನರ್ಹಗೊಳ್ಳಲಿದ್ದು, 6 ವರ್ಷ ಯಾವುದೇ ಚುನಾವಣೆ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ.

ನಾಳೆ ಕಾಂಗ್ರೆಸ್ ಶಾಸಕರನ್ನು ಗೈರು ಹಾಜಾರಾಗುವಂತೆ ಮಾಡಲು ವೀರಶೈವ ಮಠ ಮಾನ್ಯಗಳ ಸಹಾಯವನ್ನು ಬಿಜೆಪಿ ಪಡೆದುಕೊಂಡಿದೆ. ಈ ಪ್ಲ್ಯಾನ್ ವರ್ಕೌಟ್ ಆದಲ್ಲಿ ಸದನದಲ್ಲಿ ಶಾಸಕರ ಸಂಖ್ಯೆ ಕಡಿಮೆಯಾಗಿ ಬಿಜೆಪಿಯ ಬಳಿ ಇರುವ 104 ಸಂಖ್ಯಾಬಲದಲ್ಲೆ ಬಿಜೆಪಿ ಅಧಿಕಾರ ಉಳಿಸಿಕೊಳ್ಳಬಹುದು. ಆದರೆ ಈ ಯಾವುದೇ ಪ್ಲ್ಯಾನ್ ಕಾರ್ಯಗತಗೊಳ್ಳದ ಸಂದರ್ಭದಲ್ಲಿ ಬಿಜೆಪಿ ಏನು ಮಾಡಬಹುದು?

ಈಗ ನಡೆಯುವುದು ಸ್ಪೀಕರ್ ಚಾಲಾಕಿ
ವಿಶ್ವಾಸ ಮತ ಯಾಚನೆಯ ವೇಳೆ ಸಂಖ್ಯಾ ಬಲ ಇಲ್ಲ ಎಂಬುದು ಗಟ್ಟಿಯಾದರೆ ಬಿಜೆಪಿ ಸದನದಲ್ಲಿ ಗದ್ದಲ ಉಂಟಾಗುವಂತೆ ನೋಡಿಕೊಳ್ಳಬಹುದು. ಸದನದಲ್ಲಿ ಬಿಜೆಪಿ ಮತ್ತು ಪ್ರತಿ ಪಕ್ಷಗಳ ನಡುವೆ ಹಒಯ್ ಕೈ ಉಂಟಾಗುವ ಸನ್ನಿವೇಶ ನಿರ್ಮಾಣವಾದ ಸಂದರ್ಭದಲ್ಲಿ ಸ್ಪೀಕರ್ ಅಶಿಸ್ತಿನ ನೆಪ ಒಡ್ಡಿ ಪ್ರತಿಪಕ್ಷದ ಕೆಲ ಸದಸ್ಯರನ್ನು ಅಮಾನತು ಮಾಡಬಹುದು. ಆಗ ಬಿಜೆಪಿ ಬಹುಮತದ ಸಂಖ್ಯೆಗೆ ತಲುಪಬಹುದು.

ಇನ್ನೊಂದು ಸಾಧ್ಯತೆ ಸ್ಪೀಕರ್ ಧ್ವನಿಮತದ ಪ್ರಸ್ತಾಪ ಮಾಡಬಹುದೆ ಎಂಬುದು. ಗುಪ್ತ ಮಾತದಾನಕ್ಕೆ ಅವಕಾಶ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿರುವ ಹಿನ್ನೆಲೆಯಲ್ಲಿ ಸದನದಲ್ಲಿ ಹೇಗೆ ವಿಶ್ವಾಸ ಮತವನ್ನು ಮತಕ್ಕೆ ಹಾಕಲಿದ್ದಾರೆ ಎಂಬುದು ಕುತೂಹಲದ ಸಂಗತಿ. ವಿಧಾನಸೌಧದ ಮುಖ್ಯ ಕಾರ್ಯದರ್ಶಿಗಳು ಪತ್ರಿಕಾಗೋಷ್ಟಿಯಲ್ಲಿ ಹೇಳಿದ ಪ್ರಕಾರ ಮೊದಲು ಪ್ರಸ್ತಾಪದ ಪರ ಇರುವವರು ಎದ್ದು ನಿಲ್ಲುತ್ತಾರೆ. ಆಗ ಎಲ್ಲರ ತಲೆ ಲೆಕ್ಕ ಹಾಕಿ ಅವರ ಹೆಸರನ್ನು ಬರೆದುಕೊಳ್ಳಲಾಗುತ್ತದೆ. ಬಳಿಕ ವಿರೋಧಿಸುವವರ ತಲೆ ಲೆಕ್ಕ ಹಾಕಲಾಗುತ್ತದೆ. ಹೀಗೆ ಆದಲ್ಲಿ ಬಿಜೆಪಿಗೆ ಬಹುಮತ ಸಾಬೀತುಪಡಿಸುವುದ್ ಈಗಿನ ಸಂದರ್ಭದಲ್ಲಿ ಕಷ್ಟಸಾಧ್ಯ. ಆದರೆ ಸ್ಪೀಕರ್ ಧ್ವನಿಮತಕ್ಕೆ ಹಾಕಿದರೆ ಆಗ ತರಾತುರಿಯಲ್ಲಿ ಧ್ವನಿಮತದಲ್ಲಿ ಬಿಜೆಪಿ ಬಹುಮತ ಸಾಬೀತುಪಡಿಸಿದೆ ಎಂದು ಸ್ಪೀಕರ್ ಬೋಪಯ್ಯ ಘೋಷಿಸಿ ಸದನವನ್ನು ಮುಂದೂಡಬಹುದು.

ಅಧಿಕಾರವನ್ನು ಉಳಿಸಿಕೊಳ್ಳುವ ಕುರಿತು ಪಕ್ಕಾ ವಿಶ್ವಾಸದಲ್ಲಿರುವ ಬಿಜೆಪಿಯ ಬತ್ತಳಿಕೆಯಲ್ಲಿ ಯಾವೆಲ್ಲ ಬಾಣಗಳಿವೆಯೊ ಬಲ್ಲವರಿಲ್ಲ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ