ಗೋಪಾಲ ಪೂಜಾರಿ ಮಾಡಿದ್ದು ಗಿಮಿಕ್ ಮಾತ್ರ. ಈ ಬಾರಿ ಗೆಲುವು ನನ್ನದೆ: ಸುಕುಮಾರ ಶೆಟ್ಟಿ ಸಂದರ್ಶನ

ಸಂದರ್ಶನ: ಶಶಿಧರ ಹೆಮ್ಮಾಡಿ

ಬಿಎಂಎಸ್ ಎಂದೇ ಜನಪ್ರಿಯರಾಗಿರುವ ಬಿ. ಎಂ. ಸುಕುಮಾರ ಶೆಟ್ಟಿ ಈ ಬಾರಿ ಮತ್ತೊಮ್ಮೆ ಬೈಂದೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿ ಸ್ಪರ್ಧಿಸಿದ್ದ ಬಿಎಂಎಸ್ ಗೋಪಾಲ ಪೂಜಾರಿ ಅವರ ಎದುರು ಪರಾಜಿತರಾಗಿದ್ದರು. ಸೋಲಿನ ಬಳಿಕ ನಿರಾಶರಾಗದೆ ಮತ್ತೆ ಪುಟಿದೆದ್ದು ನಿರಂತರ ಜನಸಂಪರ್ಕದಲ್ಲಿದ್ದ ಸುಕುಮಾರ ಶೆಟ್ಟಿ ಬೈಂದೂರಿನಲ್ಲಿ ಭಾರತೀಯ ಜನತಾ ಪಕ್ಷವನ್ನು ಹಿಂದೆಂದಿಗಿಂತಲೂ ಬಲಿಷ್ಟವಾಗಿ ಕಟ್ಟಿದ್ದಾರೆ. ಒಂದು ಕಾಲದಲ್ಲಿ ಬಿಎಂಎಸ್ ಕಟ್ಟಾ ಕಾಂಗ್ರೆಸಿಗರಾಗಿದ್ದರು ಎಂದರೆ ನಂಬಿಕೆಯೆ ಬಾರದಿರುವಷ್ಟರ ಮಟ್ಟಿಗೆ ಅವರು ಈಗ ಬಿಜೆಪಿಯಲ್ಲಿ ಮಂಚೂಣಿಯ ನಾಯಕರಾಗಿ ಬೆಳೆಯುತ್ತಿದ್ದಾರೆ.

ಕೊಲ್ಲೂರಿನಲ್ಲಿ ಮೂಕಾಂಬಿಕಾ ದೇಗುಲದ ಆಡಳಿತ ಧರ್ಮದರ್ಶಿಯಾಗಿದ್ದಾಗ ಸುಕುಮಾರ ಶೆಟ್ಟಿ ಭಾರೀ ಸುದ್ದಿಯಲ್ಲಿದ್ದರು. ಉದ್ಯಮಿಯಾಗಿ ಸಾವಿರಾರು ಜನರಿಗೆ ಉದ್ಯೋಗದಾತರಾಗಿರುವ ಬಿಎಂಎಸ್ ಶೈಕ್ಷಣಿಕ ಕ್ಷೇತ್ರದಲ್ಲಿ ಇತ್ತೀಚೆಗೆ ಭಾರೀ ಸಾಧನೆ ಮಾಡುತ್ತಿದ್ದಾರೆ.

ಸುಕುಮಾರ ಶೆಟ್ಟಿ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು ಸಾವಿರಾರು ವಿದ್ಯಾರ್ಥಿಗಳಿಗೆ ಉನ್ನತ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಬೈಂದೂರಿನಲ್ಲಿ ಮತ್ತೆ ಸ್ಪರ್ಧೆಗೆ ಇಳಿದಿರುವ ಸುಕುಮಾರ ಶೆಟ್ಟಿ ಅವರಿಗೆ ಗೆಲುವಿನ ವಿಶ್ವಾಸವಿದೆಯೆ? ಹಾಲಿ ಶಾಸಕ ಗೋಪಾಲ ಪೂಜಾರಿ ಅವರ ಬಗ್ಗೆ ಸುಕುಮಾರ ಶೆಟ್ಟಿ ಏನೆನ್ನುತ್ತಾರೆ? ಶಾಸಕರಾಗಿ ಆಯ್ಕೆಯಾದರೆ ಸುಕುಮಾರ ಶೆಟ್ಟಿ ಸಾಕಾರಗೊಳಿಸಲಿರುವ ಕನಸುಗಳೇನು? ಕ್ಷೇತ್ರದ ಅಭಿವೃದ್ಧಿಗೆ ಬಿಎಂಎಸ್ ಏನು ಮಾಡುತ್ತಾರೆ? ಬನ್ನಿ, ಅವರನ್ನೇ ಮಾತಾಡಿಸೋಣ.

ಕರಾವಳಿ ಕರ್ನಾಟಕ: ಕಳೆದ ಬಾರಿಯ ಚುನಾವಣೆಯಲ್ಲಿ ನಿಂತು ಸೋತಿದ್ದೀರಿ. ಈ ಬಾರಿ ಮತ್ತೆ ಸ್ಪರ್ಧೆ ಮಾಡುತ್ತಿದ್ದೀರಿ. ಕಳೆದ ಬಾರಿಗೂ ಈ ಬಾರಿಗೂ ನಿಮಗೆ ಏನು ವ್ಯತ್ಯಾಸ ಕಾಣುತ್ತಿದೆ? ಎಷ್ಟರ ಮಟ್ಟಿಗೆ ಗೆಲ್ಲುವ ವಿಶ್ವಾಸವಿದೆ?

ಸುಕುಮಾರ ಶೆಟ್ಟಿ: ಕಳೆದ ಬಾರಿ ಸೋತಿದ್ದೇನೆ ನಿಜ. ಆದರೆ ಕಳೆದ ಬಾರಿ ನಿಲ್ಲುವಾಗ ನಾನು ಹೆಚ್ಚಿನ ಸಿದ್ಧತೆ ಮಾಡಿಕೊಂಡಿರಲಿಲ್ಲ. ನಾನು ಅಭ್ಯರ್ಥಿಯಾಗುತ್ತೇನೆ ಎಂದು ಗೊತ್ತಾಗುವಾಗಲೆ ಸಮಯ ಮೀರಿತ್ತು. ಆದರೆ ಕಳೆದ ಬಾರಿ ಸ್ಪರ್ಧೆ ಮಾಡಿದ್ದು ನನ್ನಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಿತ್ತು. ನನ್ನ ಸಾಮರ್ಥ್ಯ ಎಷ್ಟು ಎನ್ನುವುದು ನನಗೆ ಗೊತ್ತಾಯಿತು. ಜನರ ಅಭೂತಪೂರ್ವ ಬೆಂಬಲ ಸಿಕ್ಕಿತು. ರಾಜಕೀಯದಲ್ಲಿ ಏನಾದರೂ ಸಾಧನೆ ಮಾಡಬಲ್ಲೆ ಎಂಬ ಆತ್ಮವಿಶ್ವಾಸ ಗಟ್ಟಿಯಾಯಿತು. ಈ ಬಾರಿ ನಿಲ್ಲಲು ಕಳೆದ ಬಾರಿಯ ನನ್ನ ಅನುಭವವೇ ಆಧಾರ. ಈ ಬಾರಿ ಖಂಡಿತವಾಗಿಯೂ ಜನ ಬದಲಾವಣೆ ಬಯಸಿದ್ದಾರೆ. ಗೆಲ್ಲುತ್ತೇನೆ ಎಂಬ ಭರವಸೆ ಇದೆ.

ಬೈಂದೂರು ಪ್ರದೇಶಕ್ಕೊಂದು ಸರ್ಕಾರಿ ಮೆಡಿಕಲ್ ಕಾಲೇಜು ಬೇಕು
ಕಕ:
ನಿಮ್ಮ ಪ್ರಕಾರ ಬೈಂದೂರು ಯಾವ ಕ್ಷೇತ್ರದಲ್ಲಿ ಹಿಂದುಳಿದಿದೆ? ಇಲ್ಲಿ ಏನೆಲ್ಲ ಆಗಬೇಕಿದೆ?

ಸು.ಶೆಟ್ಟಿ: ಬೈಂದೂರು ಹಲವು ಕ್ಷೇತ್ರಗಳಲ್ಲಿ ಹಿಂದುಳಿದಿದೆ. ಉದಾಹರಣೆಗೆ ಆರೋಗ್ಯ ಸೌಕರ್ಯದಲ್ಲಿ ತೀರಾ ಹಿಂದಿದೆ. ಬೈಂದೂರು ಪ್ರದೇಶಕ್ಕೊಂದು ಸರ್ಕಾರಿ ಮೆಡಿಕಲ್ ಕಾಲೇಜು ಬೇಕು. ಮೆಡಿಕಲ್ ಕಾಲೇಜು ಬಂದರೆ ಇಲ್ಲಿನ ಜನ ಉತ್ತಮ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಹೋಗುವುದು ತಪ್ಪುತ್ತದೆ ಮಾತ್ರವಲ್ಲ ಸುತ್ತಮುತ್ತಲಿನ ಪ್ರದೇಶವೂ ಅಭಿವೃದ್ಧಿ ಹೊಂದುತ್ತದೆ. ಶಿಕ್ಷಣದ ವಿಷಯದಲ್ಲಿ ಗೊತ್ತಲ್ಲ? ಈಗಿನ ಶಾಸಕ ಗೋಪಾಲ ಪೂಜಾರಿ ಏನು ಮಾಡಿದ್ದಾರೆ? ಅವರೇ ನಡೆಸುತ್ತಿರುವ ಹೆಮ್ಮಾಡಿಯ ಜನತಾ ಪ್ರೌಢ ಶಾಲೆಯ ದುರವಸ್ಥೆ ನೋಡಿ. ಇಡೀ ಕ್ಷೇತ್ರದಲ್ಲಿ ಒಂದು ಸರಿಯಾದ ಕಾಲೇಜಿಲ್ಲ, ಉತ್ತಮ ಹೈಸ್ಕೂಲ್‌ಗಳಿಲ್ಲ. ಪಿ.ಯು ಕಾಲೇಜ್‌ಗಳಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಸಮಗ್ರ ಸುಧಾರಣೆ ಆಗಬೇಕಿದೆ. ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರೆ. ನಾನು ಮತ್ತು ಯಡಿಯೂರಪ್ಪ ತುಂಬಾ ಕ್ಲೋಸ್ ಇದ್ದೇವೆ. ಹಾಗಾಗಿ ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜು, ಒಳ್ಳೆಯ ಡಿಗ್ರಿ ಕಾಲೇಜುಗಳನ್ನ ತರುವ ಪ್ರಯತ್ನ ಮಾಡಲಿದ್ದೇನೆ.

ವರಾಹಿ ನೀರನ್ನು ಬೈಂದೂರಿಗೆ ತರಿಸಿಯೇ ಸಿದ್ಧ
ಕಕ:
ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ವರಾಹಿ ನೀರನ್ನು ಬಳಸಿಕೊಳ್ಳುವ ಬಗ್ಗೆ ನೀವು ಹೇಳುತ್ತಾ ಇದ್ದೀರಿ. ಆದರೆ ಅದನ್ನ ಬೈಂದೂರಿನತ್ತ ಡೈವರ್ಟ್ ಮಾಡಲು ಸಾಧ್ಯವೆ?

ಸು.ಶೆಟ್ಟಿ: ಖಂಡಿತವಾಗಿಯೂ ವರಾಹಿ ನೀರನ್ನು ಬೈಂದೂರಿಗೆ ತರಿಸಿಯೇ ಸಿದ್ಧ. ಕುಡಿಯುವ ನೀರಿಗೆ ನನ್ನ ಮೊದಲ ಆದ್ಯತೆ. ಕಾವೇರಿ ನೀರು ಬೆಂಗಳೂರಿಗೆ ಹೋಗಲ್ವಾ? ವರಾಹಿ ನೀರನ್ನು ಉಡುಪಿಯವರೂ ಬಳಸಿಕೊಳ್ಳಲಿದ್ದಾರೆ. ವರಾಹಿ ನೀರನ್ನು ನಾವು ಬಳಸಿಕೊಳ್ಳುವ ಎಲ್ಲ ಸಾಧ್ಯತೆ ಇದೆ.

ನಾನು ಸುಕುಮಾರ ಶೆಟ್ಟಿ. ನನ್ನ ವ್ಯವಸ್ಥೆ ಬೇರೆ
ಕಕ:
ನೀವು ಯಾವಾಗಲೂ ಪ್ರವಾಸೋದ್ಯಮ ಅಭಿವೃದ್ಧಿ ಎಂದು ಹೇಳುತ್ತಲೇ ಇರುತ್ತೀರಿ. ಕಳೆದ 40 ವರ್ಷಗಳಲ್ಲಿ ಬಂದ ಪ್ರತಿಯೊಂದು ಸರ್ಕಾರ ಪ್ರತಿಯೊಬ್ಬ ಶಾಸಕ, ಸಂಸದರು ಪ್ರವಾಸೋದ್ಯಮ ಅಭಿವೃದ್ದಿ ಎಂದು ಭಾಷಣ ಮಾಡಿದ್ದಾರೆ. ಆದರೆ ಇಂದಿನ ತನಕ ಪ್ರವಾಸೋದ್ಯಮದಲ್ಲಿ ಚಿಕ್ಕಾಸಿನಭಿವೃದ್ಧಿ ಆಗಿಲ್ಲ. ಈಗ ನಿಮ್ಮ ಮಾತನ್ನು ನಂಬಬೇಕು ಅಂದರೆ ಹೇಗೆ?

ಸು.ಶೆಟ್ಟಿ: ನಾನು ಸುಕುಮಾರ ಶೆಟ್ಟಿ. ನನ್ನ ವ್ಯವಸ್ಥೆ ಬೇರೆ. ನಾನು ಕೊಟ್ಟ ಮಾತು ಉಳಿಸಿಕೊಳ್ಳುವ ಮನುಷ್ಯ. ಮಾತು ಕೊಟ್ಟೆ ಅಂದರೆ ಮುಗೀತು. ನಾನು ಹೋದಲ್ಲೆಲ್ಲ ಬದಲಾವಣೆ ಮಾಡುವವನು, ಬಯಸುವವನು. ಕೇವಲ ಒಂದೇ ಉದಾಹರಣೆ ಕೊಡುತ್ತೇನೆ. ನಾನು ಅಧ್ಯಕ್ಷನಾಗಿರುವ ಶಿಕ್ಷಣ ಸಂಸ್ಥೆಗಳನ್ನೇ ತೆಗೆದುಕೊಳ್ಳಿ. ನಾನು ಅಲ್ಲಿ ಚುಕ್ಕಾಣಿ ಹಿಡಿದ ಮೇಲೆ ಆದ ಬದಲಾವಣೆಗಳನ್ನು ನೋಡಿ. ನನ್ನಲ್ಲಿ ಆ ಶಕ್ತಿ ಇದೆ. ಸುಮ್ಮನೆ ಮಾತಾಡುವ ಮನುಷ್ಯ ಅಲ್ಲ ನಾನು.

ನಾನೊಬ್ಬ ಬಿಳಿ ಪಂಚೆ ಬಿಳಿ ಅಂಗಿ ತೊಡುವ ಸ್ವಾಮಿ. ಯಾವುದೇ ಸ್ವಾರ್ಥವಿಲ್ಲ
ಇನ್ನೊಂದು ಮಾತು ಹೇಳುತ್ತೇನೆ ಕೇಳಿ. ನಾನೊಬ್ಬ ಬಿಳಿ ಪಂಚೆ ಬಿಳಿ ಅಂಗಿ ತೊಡುವ ಸ್ವಾಮಿ. ಯಾವುದೇ ಸ್ವಾರ್ಥವಿಲ್ಲ. ಯಾವ ಆಸೆ ಇಲ್ಲ. ನೇರ ದಿಟ್ಟ ವ್ಯಕ್ತಿ ನಾನು. ಇದ್ದದ್ದನ್ನು ಇದ್ದ ಹಾಗೆ ಹೇಳುತ್ತೇನೆ. ನೋಡಿ ಕೊಲ್ಲೂರಿನಲ್ಲಿ ನಾನು ಆಡಳಿತ ಧರ್ಮದರ್ಶಿ ಆದಾಗ ಅನೇಕ ಸುಧಾರಣೆಗಳನ್ನ ಮಾಡಿದೆ. ಆಗ ನನ್ನ ಹಲವಾರು ಜನ ವಿರೋಧಿಸಿದ್ದರು.

ಬ್ರಾಹ್ಮಣರು ಕೂಡ ವಿರೋಧ ಮಾಡಿದ್ದರು. ಆದರೆ ಈಗ? ಬ್ರಾಹ್ಮಣರು ಕೂಡ ನನ್ನನ್ನ ತುಂಬಾ ಪ್ರೀತಿ ಮಾಡುತ್ತಾರೆ. ಲಾಂಗ್ ರನ್ ಅಲ್ಲಿ ಇದೆಲ್ಲ ವರ್ಕೌಟ್ ಆಗತ್ತೆ. ಸತ್ಯಕ್ಕೆ ಯಾವಾಗಲೂ ಜಯ. ವ್ಯವಸ್ಥೆ ಜೊತೆ ಹೊಂದಾಣಿಕೆ ಮಾಡಿಕೊಂಡರೆ ಕ್ಷಣಿಕವಾಗಿ ಲಾಭ ಆಗಬಹುದು. ಆದರೆ ಒಳ್ಳೆಯದು ಮಾಡಬೇಕಾದರೆ, ಬದಲಾವಣೆ ಮಾಡಬೇಕಾದರೆ ಸಮಯ ತಗಲತ್ತೆ ಮತ್ತು ಸ್ವಲ್ಪ ವಿರೋಧವನ್ನೂ ಕಟ್ಟಿಕೊಳ್ಳಬೇಕಾಗತ್ತೆ.

ಬೈಂದೂರು ಕ್ಷೇತ್ರದಲ್ಲಿ ಯಾವ ಭಿನ್ನಮತೀಯ ಬಣವೂ ಇಲ್ಲ
ಕಕ:
ನಿಮಗೆ ಟಿಕೆಟ್ ಪಕ್ಕಾ ಆಗುವ ತನಕವೂ ಜಯಪ್ರಕಾಶ ಹೆಗ್ಡೆ ಇಲ್ಲಿ ತಮ್ಮದೆ ಒಂದು ತಂಡ ಕಟ್ಟಿಕೊಂಡು ಸಂಘಟನೆ ಮಾಡುತ್ತಾ ಇದ್ದರು. ಪ್ರಚಾರದಲ್ಲೂ ನಿರತರಾಗಿದ್ದರು. ಆದರೆ ನಿಮಗೆ ಟಿಕೆಟ್ ಸಿಕ್ಕ ಮೇಲೆ ಹೆಗ್ಡೆ ಬೈಂದೂರು ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿಲ್ಲ. ಬಿಜೆಪಿಯಲ್ಲಿ ಒಂದು ಭಿನ್ನಮತೀಯರ ಬಣವೂ ಇದೆ. ಇದೆಲ್ಲ ಹೇಗೆ ನಿಭಾಯಿಸುತ್ತಿದ್ದೀರಿ?

ಸು.ಶೆಟ್ಟಿ: ಬೈಂದೂರು ಕ್ಷೇತ್ರದಲ್ಲಿ ಯಾವ ಭಿನ್ನಮತೀಯ ಬಣವೂ ಇಲ್ಲ. ಎಲ್ಲರೂ ನನ್ನ ಜೊತೆ ಇದ್ದಾರೆ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸದಸ್ಯರೆಲ್ಲ ನನ್ನ ಜೊತೆ ಇದ್ದಾರೆ. ನೋಡಿ ಪಕ್ಷ ಅಂದ ಮೇಲೆ ಟಿಕೆಟ್ ಆಕಾಂಕ್ಷಿಗಳು ಹಲವರು ಇರುತ್ತಾರೆ. ಎಲ್ಲರಿಗೂ ಟಿಕೆಟ್ ಆಸೆ ಇರುತ್ತದೆ. ಆವಾಗ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬರುತ್ತದೆ. ಒಮ್ಮೆ ಟಿಕೆಟ್ ಇಂಥವರಿಗೆ ಅಂತ ಖಚಿತವಾದ ಮೇಲೆ ಮತ್ತೆ ಎಲ್ಲ ಬಣಗಳು ಒಟ್ಟಾಗಿಯೇ ಕೆಲಸ ಮಾಡುತ್ತವೆ.

ಕಕ: ಜಯಪ್ರಕಾಶ ಹೆಗ್ಡೆ ನಿಮಗೆ ಗೆಲ್ಲಲು ಸಹಾಯ ಮಾಡುತ್ತಿದ್ದಾರಾ?

ಸು.ಶೆಟ್ಟಿ: ಜಯಪ್ರಕಾಶ ಹೆಗ್ಡೆ ನನ್ನ ನಿಕಟ ಸಂಬಂಧಿ. ಟಿಕೆಟ್ ಸಿಕ್ಕಿಲ್ಲ ಅಂತ ನೋವು ಇರಬಹುದು. ಆದರೆ ಪ್ರಚಾರಕ್ಕೆ ಇನ್ನು ಮುಂದಾದರೂ ಬರಬಹುದು ಎಂಬ ಭರವಸೆ ಇದೆ.

ಇಲೆಕ್ಷನ್‌ಗೆ ಆರು ತಿಂಗಳು ಇರುವಾಗ ಗೋಪಾಲ ಪೂಜಾರಿ ಗಿಮಿಕ್ ಮಾಡಿದರು
ಕಕ:
ಗೋಪಾಲ ಪೂಜಾರಿಯನ್ನು ಈ ಬಾರಿ ಜನ ಯಾಕೆ ಗೆಲ್ಲಿಸುವುದಿಲ್ಲ ಎಂದು ನಿಮಗೆ ಅನಿಸುತ್ತದೆ?

ಸು.ಶೆಟ್ಟಿ: ಈ ಕ್ಷೇತ್ರಕ್ಕೆ ಅವರು ಏನೂ ಮಾಡಿಲ್ಲ. ಇಲೆಕ್ಷನ್‌ಗೆ ಆರು ತಿಂಗಳು ಇರುವಾಗ ಗಿಮಿಕ್ ಮಾಡಿದ್ರು. ಅಲ್ಲಲ್ಲಿ ಗದ್ದಲಿ ಪೂಜೆ ಅಷ್ಟೆ. ಕೆಲವೊಂದು ರಸ್ತೆ ಮಾಡಿದ್ದಾರೆ. ಅದು ಎರಡು ಮಳೆ ಬಂದರೆ ಕೊಚ್ಚಿ ಹೋಗುವ ರೀತಿ ಮಾಡಿದ್ದಾರೆ. ಒಂದೆರಡು ಸೇತುವೆ ಮಾಡಿದ್ದಾರೆ. ಬೇಕಾದಲ್ಲಿ ರಸ್ತೆಗಳನ್ನು ಮಾಡಿಲ್ಲ. ಗುದ್ದಲಿ ಪೂಜೆ ಮಾಡಿದ್ರೆ ಸಾಕಾಗಲ್ಲ. ಅದರ ಉದ್ಘಾಟನೆಯೂ ಆಗಬೇಕು.

ನಾಲ್ಕುವರೆ ವರ್ಷದ ಹಿಂದೆ ಗುದ್ದಲಿ ಕಾಮಗಾರಿಗಳನ್ನ ಆರಂಭಿಸಿದ್ದರೆ ಈಗ ಉದ್ಘಾಟನೆ ಮಾಡಬಹುದಿತ್ತು. ಆದರೆ ಇವರು ಕಳೆದ ಆರು ತಿಂಗಳಲ್ಲಿ ಗುದ್ದಲಿ ಪೂಜೆ ಮಾತ್ರ ಆರಂಭಿಸಿದ್ದಾರೆ. ಗುದ್ದಲಿ ಪೂಜೆ ಯಾರೂ ಮಾಡಬಹುದು. ಅದು ಉದ್ಘಾಟನೆ ಆದಾಗ ಮಾತ್ರ ಅದು ಕಾರ್ಯಗತವಾದ ಹಾಗೆ. ಅದನ್ನ ಗೋಪಾಲ ಪೂಜಾರಿ ಮಾಡಿದ್ದಾರಾ? ಕೆಎಸ್‌ಆರ್‌ಟಿಸಿ ಡಿಪೊ ಮಾಡಿದ್ದೇನೆ ಎಂದು ಹೇಳ್ತಾ ಇದ್ದಾರೆ. ಎಲ್ಲಿದೆ ಡಿಪೊ. ಇನ್ನೂ ಟೆಂಡರ್ ಕೂಡ ಆಗಿಲ್ಲ.

ಹೆಮ್ಮಾಡಿ ಜನತಾ ಹೈಸ್ಕೂಲ್ ಅವಸ್ಥೆ ನೋಡಿ
ಕಕ:
ಟೆಂಡರ್ ಆಗಿದೆ, ಕಾಮಗಾರಿ ಆರಂಭವಾಗೋದು ಮಾತ್ರ ಬಾಕಿ ಎಂದು ಗೋಪಾಲ ಪೂಜಾರಿ ಹೇಳುತ್ತಾ ಇದ್ದಾರೆ?

ಸು.ಶೆಟ್ಟಿ: ಎಲ್ಲಿ ಟೆಂಡರ್ ಆಗಿದೆ? ಇನ್ನೂ ಟೆಂಡರ್ ಆಗಿಲ್ಲ. ಅವರು ಎಲ್ಲ ಸುಳ್ಳೂ ಹೇಳ್ತಾರೆ. ಅವರು ಆಲೂರಿನಲ್ಲಿ ಶಾಲೆ ಮಾಡಿದ್ದೇನೆ, ಶಿಕ್ಷಣಕ್ಕಾಗಿ ಒತ್ತು ನೀಡಿದ್ದೇನೆ ಎಂದೆಲ್ಲ ಹೇಳುತ್ತಾರೆ? ಯಾವ ಹೊಸ ಶಾಲೆ ತಂದಿದ್ದಾರೆ ಅವರು? ಅವರು ನಡೆಸುತ್ತಾ ಇರುವ ಹೆಮ್ಮಾಡಿ ಜನತಾ ಹೈಸ್ಕೂಲ್ ಅವಸ್ಥೆ ನೋಡಿ.

ಮತದಾರರು ಈಡಿಯಟ್ಸ್ ಅಲ್ಲ. ಯುವಕರೆಲ್ಲ ತುಂಬಾ ಜಾಣರಿದ್ದಾರೆ
ಕಕ:
ಅಂದ್ರೆ ಗೋಪಾಲ ಪೂಜಾರಿಯವರು ಈಗ ಕೋಟ್ಯಂತರ ರೂಪಾಯಿಗಳ ಯೋಜನೆಗಳಿಗೆ ಏನು ಗುದ್ದಲಿ ಪೂಜೆ ಮಾಡಿದ್ದಾರೆ ಅದೆಲ್ಲ ಕಾರ್ಯಗತ ಆಗಲ್ಲ ಎಂದು ನೀವು ಹೇಳ್ತಾ ಇದ್ದೀರಿ?

ಸು.ಶೆಟ್ಟಿ: ಖಂಡಿತವಾಗಿಯೂ ಕಾರ್ಯಗತ ಆಗಲ್ಲ. ಜನರನ್ನು ಗೋಪಾಲ ಪೂಜಾರಿ ಫೂಲ್ ಮಾಡುತ್ತಿದ್ದಾರೆ. ಇಷ್ಟು ವರ್ಷ ಫೂಲ್ ಮಾಡಿ ಆಯ್ತು. ಈಗ ಇಲೆಕ್ಷನ್ ಟೈಮಲ್ಲೂ ಫೂಲ್ ಮಾಡಲು ಸಾಧ್ಯವಿಲ್ಲ. ಜನರು ಬುದ್ದಿವಂತರಿದ್ದಾರೆ. ಮತದಾರರು ಈಡಿಯಟ್ಸ್ ಅಲ್ಲ. ಯುವಕರೆಲ್ಲ ತುಂಬಾ ಜಾಣರಿದ್ದಾರೆ. ಹಿಂದಿನಂತೆ ಹೇಳಿದ್ದೆಲ್ಲ ನಂಬುವ ಜನರಿಲ್ಲ. ಜನ ಪ್ರಮಾಣೀಕರಿಸಿ ನೋಡುತ್ತಾರೆ.

ವಿದ್ಯಾರ್ಥಿಗಳಿಗೆ ಸುಕುಮಾರ ಶೆಟ್ಟರ ಮೇಲೆ ಅಪಾರ ಅಭಿಮಾನವಿದೆ
ಕಕ:
ಶಿಕ್ಷಣ ಕ್ಷೇತ್ರದಲ್ಲಿ ನಿಮ್ಮ ತೊಡಗಿಸಿಕೊಳ್ಳುವಿಕೆ ಚುನಾವಣೆಯಲ್ಲಿ ನಿಮ್ಮ ಗೆಲುವಿಗೆ ನೆರವಾಗತ್ತಾ?

ಸು.ಶೆಟ್ಟಿ: ಖಂಡಿತ. ನನ್ನ ಶಿಕ್ಷಣ ಸಂಸ್ಥೆಗಳಲ್ಲಿ ನಾಲ್ಕೂವರೆ ಸಾವಿರ ವಿದ್ಯಾರ್ಥಿಗಳಿದ್ದಾರೆ. ಮೂರು ಸಾವಿರ ವಿದ್ಯಾರ್ಥಿಗಳು ನನ್ನ ಕ್ಷೇತ್ರಕ್ಕೆ ಸೇರಿದ್ದಾರೆ. ವಿದ್ಯಾರ್ಥಿಗಳಿಗೆ ಸುಕುಮಾರ ಶೆಟ್ಟರ ಮೇಲೆ ಅಪಾರ ಅಭಿಮಾನವಿದೆ. ವರ್ಷಕ್ಕೆ 55 ಲಕ್ಷ ರೂಪಾಯಿಗಳಷ್ಟು ಕಾಲೇಜು ಶುಲ್ಕವನ್ನ ವಿದ್ಯಾರ್ಥಿಗಳಿಗೆ ಮನ್ನಾ ಮಾಡಿದ್ದೇನೆ. ಕಾಲೇಜಿನಲ್ಲಿರುವ ಶಿಕ್ಷಕ ವೃಂದ ನನ್ನ ಬೆಂಬಲಕ್ಕಿದೆ. ಸಂಸ್ಥೆಯ ಅಧ್ಯಕ್ಷರ ಗೌರವ ಉಳಿಯಬೇಕು, ಗೆಲ್ಲಬೇಕು ಎಂದು ಪಣತೊಟ್ಟಿದ್ದಾರೆ. ಅಧ್ಯಕ್ಷರಿಗೆ ಒಳ್ಳೆಯದಾದರೆ ದೇಶಕ್ಕೆ ಒಳ್ಳೆಯದಾಗುತ್ತದೆ ಎಂಬ ಅಭಿಮಾನ ಅವರಿಗೆ ಇದೆ.

ಸಮಾಜದ ಕಟ್ಟೆಕಡೆಯ ವ್ಯಕ್ತಿಗೂ ನೆರವಾಗಬೇಕು ಎಂಬುದು ನನ್ನ ನಿಲುವು
ಕಕ:
ನೀವು ಬಿಜೆಪಿ ಸೇರುವ ಮೊದಲು ಇಪ್ಪತ್ತು ವರ್ಷಗಳ ಹಿಂದೊಮ್ಮೆ ನಾನು ನಿಮ್ಮ ಸಂದರ್ಶನ ಮಾಡಿದ್ದೆ. ಆಗ ನೀವು ತುಂಬಾ ಸೆಕ್ಯೂಲರ್ ನಿಲುವಿನ ವ್ಯಕ್ತಿ ಆಗಿದ್ದಿರಿ. ಈ ಇಪ್ಪತ್ತು ವರ್ಷಗಳಲ್ಲಿ ಸೌಪರ್ಣಿಕಾ ನದಿಯಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ಬಿಜೆಪಿಯಲ್ಲಿರುವ ಸುಕುಮಾರ ಶೆಟ್ಟರು ಎಷ್ಟರ ಮಟ್ಟಿಗೆ ಸೆಕ್ಯೂಲರ್ ಆಗಿ ಉಳಿದಿದ್ದಾರೆ?

ಸು.ಶೆಟ್ಟಿ: ನೋಡಿ ನಾನು ಕೊಲ್ಲೂರಿನಲ್ಲಿ ಧರ್ಮದರ್ಶಿ ಆಗಿದ್ದಾಗ 23 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಊಟ ನೀಡಿದ್ದೇನೆ. ಆಗಲೂ ನಾನು ಜಾತಿಮತ ನೋಡಿಲ್ಲ. ಕ್ರಿಶ್ಚಿಯನ್ ಶಾಲೆಗಳಿಗೂ ನಾನು ಬಿಸಿಯೂಟ ಒದಗಿಸಿದ್ದೇನೆ. ಕ್ರಿಶ್ಚಿಯನ್ ಶಾಲೆಗಳಲ್ಲಿ ಓದುವವರು 90 ಶೇಕಡಾ ಹಿಂದೂ ಸಮುದಾಯದ ಮಕ್ಕಳು. ಸಮಾಜದ ಕಟ್ಟೆಕಡೆಯ ವ್ಯಕ್ತಿಗೂ ನೆರವಾಗಬೇಕು ಎಂಬುದು ನನ್ನ ನಿಲುವು. ಎಲ್ಲ ವರ್ಗದ ಮಕ್ಕಳು ಮುಂದೆ ಬರಬೇಕು. ಅಂದಿನಿಂದ ಇಂದಿನ ವರೆಗೂ ನನ್ನ ಸೆಕ್ಯೂಲರ್ ನಿಲುವಿನಲ್ಲಿ ಬದಲಾವಣೆ ಇಲ್ಲ. ಆದರೆ ಹಿಂದೂತ್ವ ಮುಖ್ಯ.

ಬಿಲ್ಲವರು ಕೂಡ ನನ್ನನ್ನು ಈ ಬಾರಿ ದೊಡ್ಡ ಸಂಖ್ಯೆಯಲ್ಲಿ ಬೆಂಬಲಿಸುತ್ತಾರೆ
ಕಕ:
ನಿಮ್ಮ ಕ್ಷೇತ್ರದಲ್ಲಿ ಮುಸ್ಲಿಮ್ ಮತ್ತು ಕ್ರೈಸ್ತರು ಸ್ವಲ್ಪಮಟ್ಟಿಗೆ ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ ಎಂದು ಅನಿಸುತ್ತದೆಯೆ?

ಸು.ಶೆಟ್ಟಿ: ರಾಜಕೀಯ ವ್ಯವಸ್ಥೆ ಈಗ ಬಹಳ ಬದಲಾಗಿದೆ. ಆದರೆ ಸಮಾಜದ ಎಲ್ಲ ವರ್ಗದ ಜನ ನನ್ನ ಮೇಲೆ ಪ್ರೀತಿ ವಿಶ್ವಾಸ ಇಟ್ಟಿದ್ದಾರೆ. ಖಂಡಿತವಾಗಿಯೂ ಅವರೆಲ್ಲರ ಪ್ರೀತಿ ಮತವಾಗಿ ಪರಿವರ್ತನೆ ಆಗುತ್ತದೆ ಎಂಬ ಭರವಸೆಯಲ್ಲಿ ನಾನಿದ್ದೇನೆ. ಯುವಜನರೆ ನನ್ನ ಧೈರ್ಯ. ಬಿಲ್ಲವರು ಕೂಡ ನನ್ನನ್ನು ಈ ಬಾರಿ ಭಾರೀ ಸಂಖ್ಯೆಯಲ್ಲಿ ಬೆಂಬಲಿಸುತ್ತಾರೆ.

ನೇರ ಮನುಷ್ಯ ಯಾವಾಗಲೂ ಒರಟ ಆಗಿರುತ್ತಾನೆ
ಕಕ: ಸುಕುಮಾರ ಶೆಟ್ರು ಒಳ್ಳೆಯ ಜನ ಹೌದು, ಆದರೆ ಸ್ವಲ್ಪ ಒರಟು ಸ್ವಭಾವ, ಮಾತು ಸಹ ಒರಟು ಎಂಬುದು ನಿಮ್ಮ ಮೇಲೆ ಕೆಲವರಿಗೆ ಇರುವ ಒಂದು ಅಸಮಾಧಾನ.

ಸು.ಶೆಟ್ಟಿ: ಒರಟಾಗಿ ಹಿಂದೆ ಇದ್ದಿದ್ದೆ. ಆದರೆ ಜನರಿಗೆ ನನ್ನ ಒರಟುತನದ ಒಳಗಿರುವ ಪ್ರೀತಿ, ಸ್ನೇಹ, ಸೌಮ್ಯ ಸ್ವಭಾವ ಎಲ್ಲ ಅರ್ಥ ಆಗಿದೆ. ಒರಟು ಶಬ್ದವೇ ಹೋಗಿದೆ. ನನ್ನನ್ನು ಒರಟ ಎಂದು ಕರೆದವರೆ ಈಗ ನನ್ನನ್ನು ಬಂದು ಕೈ ಕುಲುಕಿ, ಆಲಂಗಿಸಿ ಮಾತನಾಡಿಸುತ್ತಾರೆ. ಮತ್ತೆ ನೋಡಿ, ನೇರ ಮನುಷ್ಯ ಯಾವಾಗಲೂ ಒರಟ ಆಗಿರುತ್ತಾನೆ. ಉದಾಹರಣೆಗೆ ಹೆಮ್ಮಾಡಿವರೆ ನೀವೇ ನೋಡಿ, ನಿಮ್ಮನ್ನ ತುಂಬಾ ಜನ ಒರಟ ಅಂತ ಕರೀತಾರೆ. ಆ ಪ್ರೆಸ್ ಕ್ಲಬ್ ಅಧ್ಯಕ್ಷ ಭಾರೀ ಒರಟು ಮನುಷ್ಯ ಅಂತ. ನಿಮ್ಮ ಬಗ್ಗೆ ಜನ ಯಾಕೆ ಹಾಗೆ ಹೇಳ್ತಾರೆ ಹೇಳಿ? ಯಾಕೆಂದರೆ ನೀವು ನೇರ ದಿಟ್ಟ. ನನ್ನದೂ ಅದೇ ಸ್ವಭಾವ. ನೇರ ನಡೆ ನುಡಿಯ ವ್ಯಕ್ತಿ ನಾನು.

ಸಾವಿರಾರು ಜನರ ನಡುವೆ ಇರುತ್ತೇನೆ. ಬೇರೆಬೇರೆ ಸಹಾಯ ಕೇಳಿ ಬರುತ್ತಾರೆ. ಅನೇಕರು ದುಡ್ಡು ಕೇಳಿ ಬರುತ್ತಾರೆ. ನನ್ನ ಹತ್ತಿರ ಲ್ಯಾಂಡ್ ಮಾಫಿಯಾದ ಹಣ ಇಲ್ಲ. ನಾನೇನು ಪಿಡಬ್ಲ್ಯೂಡಿ ಗುತ್ತಿಗೆದಾರ ಅಲ್ಲ. ಯಾವುದೆ ಅಡ್ಡ ದಾರಿಗಳಿಂದ ನನಗೆ ಹಣ ಬರುವುದಿಲ್ಲ. ಎಲ್ಲವೂ ಸ್ವಂತ ಪರಿಶ್ರಮದಿಂದ ದುಡಿದ ಹಣ. ಯಾರಿಗೂ ನೋವು ಮಾಡುವ ಅಭ್ಯಾಸ ನನ್ನದಲ್ಲ. ಆದರೆ ಇದ್ದದ್ದನ್ನು ಇದ್ದ ಹಾಗೆ ಹೇಳುತ್ತೇನೆ.

ದಿನಾ ಕಾಲಿಗೆ ಬೀಳುವವರನ್ನು ಜನರು ಇಷ್ಟಪಡುವುದಿಲ್ಲ
ಯಂಗರ್ ಜನರೇಶನ್ ಇದೆಯಲ್ಲ, ಇದು ತುಂಬಾ ಇಂಟಲೆಕ್ಚುವಲ್ ಜನರೇಶನ್. ಯಾರು ಹೇಗೆ ಎಂದು ಜಜ್ ಮಾಡುತ್ತಾರೆ. ಮನುಷ್ಯ ಈಗ ರಫ್ ಎಂಡ್ ಟಫ್ ಆಗಿರಬೇಕು. ಆದರೆ ಪ್ರಾಮಾಣಿಕವಾಗಿರಬೇಕು. ದಿನಾ ಕಾಲಿಗೆ ಬೀಳುವವರನ್ನು ಜನರು ಇಷ್ಟಪಡುವುದಿಲ್ಲ. ಎಲ್ಲಿ ಹೇಗೆ ಮಾತನಾಡಬೇಕೊ ಹಾಗೆಯೆ ಮಾತಾಡಬೇಕು. ನಾನು ಕೊಂಯ್ ಕೊಂಯ್ ಕೊಂಯ್ ಎಂದು ಮಾತನಾಡುತ್ತಾ ಹಿಂದಿನಿಂದ ಚೂರಿ ಹಾಕುವ ಜನ ಅಲ್ಲ. ಸ್ವಲ್ಪ ಮಾತಿನಲ್ಲಿ ಗಡಸುತನ ಇಲ್ಲದೆ ಇದ್ದರೆ ಶಾಸಕನಾಗಿ ಕೆಲಸ ಮಾಡಲಿಕ್ಕೆ ಆಗುವುದಿಲ್ಲ. ಅಧಿಕಾರಿಗಳ ಜೊತೆ ಮೆತ್ತಗೆ ಮಾತಾಡಿದರೆ ಕೆಲಸ ಮಾಡಿಕೊಡುತ್ತಾರಾ?
 
ಕಕ: ಯಡಿಯೂರಪ್ಪನ ಜೊತೆಗಿನ ನಿಮ್ಮ ನಿಕಟ ಬಾಂಧವ್ಯ ಶಾಸಕರಾಗಿ ಆಯ್ಕೆಯಾಗಲು ಮತ್ತು ಶಾಸಕರಾಗಿ ಆಯ್ಕೆಯಾದರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಹಾಯವಾಗುತ್ತದೆ ಎಂದು ನೀವು ಭಾವಿಸುವಿರಾ?

ಸು.ಶೆಟ್ಟಿ: ಖಂಡಿತವಾಗಿಯೂ ನೆರವಾಗತ್ತೆ. ಯಡಿಯೂರಪ್ಪ ಮಾತ್ರವಲ್ಲ ಬಿಜೆಪಿಯ ಹಲವು ಉನ್ನತ ನಾಯಕರ ಜೊತೆ ನನಗೆ ಒಳ್ಳೆಯ ಸಂಬಂಧವಿದೆ. ಇದೆಲ್ಲ ನನಗೆ ಎಲ್ಲ ರೀತಿಯಿಂದಲೂ ಒಳ್ಳೆಯದು ಮಾಡುತ್ತದೆ.

ಸುಕುಮಾರ ಶೆಟ್ಟರು ಶಾಸಕರಾದರೆ ಕ್ಷೇತ್ರದ ಚಿತ್ರಣವೇ ಬದಲಾಗುತ್ತೆ ಎಂಬ ಭರವೆಸೆ ಎಲ್ಲರಲ್ಲೂ ಮೂಡಿದೆ
ಕಕ:
ಕೊನೆಯದಾಗಿ ಸುಕುಮಾರ ಶೆಟ್ಟರನ್ನ ಜನ ಯಾಕೆ ಗೆಲ್ಲಿಸಬೇಕು ಎಂದು ಹೇಳುತ್ತೀರಿ?

ಸು.ಶೆಟ್ಟಿ: ಕಳೆದ ಚುನಾವಣೆಯಲ್ಲಿ ಸೋತರೂ ಕ್ಷೇತ್ರದ ಜನತೆಯ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಶಾಸಕರು ಜನರಿಗೆ ಸ್ಪಂದಿಸದಿದ್ದರೂ ನಾನು ಎಲ್ಲ ವರ್ಗದ ಜನರ ಕಷ್ಟ ಕಾರ್ಪಣ್ಯಗಳಲ್ಲಿ ಸ್ಪಂದಿಸಿದ್ದೇನೆ. ನಿರಂತರವಾಗಿ ಕ್ಷೇತ್ರದಾದ್ಯಂತ ಸಂಚರಿಸಿ ಕ್ಷೇತ್ರದ ಸಮಸ್ಯೆಗಳೇನು ಎಂದು ಅಧ್ಯಯನ ಮಾಡಿದ್ದೇನೆ. ಜನರಿಗೆ ಹಾಗಾಗಿ ನನ್ನ ಮೇಲೆ ಹೆಚ್ಚು ವಿಶ್ವಾಸ ಮೂಡಿದೆ. ಸುಕುಮಾರ ಶೆಟ್ಟರು ಶಾಸಕರಾದರೆ ಕ್ಷೇತ್ರದ ಚಿತ್ರಣವೇ ಬದಲಾಗುತ್ತದೆ ಎಂಬ ಭರವಸೆ ಈಗ ಎಲ್ಲರಲ್ಲೂ ಮೂಡಿದೆ. ಜನ ಈ ಬಾರಿ ಬದಲಾವಣೆ ಬಯಸಿದ್ದರೆ. ನಾನು ಗೆಲ್ಲುತ್ತೇನೆ ಮತ್ತು ಸರ್ಕಾರವೂ ನಮ್ಮದೆ ಬರಲಿದೆ.

ಇದನ್ನೂ ಓದಿ:
►►ವೀ ಆರ್ ಗುಡ್ ಪೀಪಲ್. ಬಿಜೆಪಿಯದ್ದು ಟೊಳ್ಳು ಪ್ರಚಾರ: ಪ್ರಮೋದ್ ಮಧ್ವರಾಜ್ ಸಂದರ್ಶನ:
http://bit.ly/2jr8UXu
►►ಇನ್ನೂ ಹೆಚ್ಚಿನ ಅಂತರದಿಂದ ಗೆಲ್ಲಲಿದ್ದೇನೆ. ಮಲ್ಲಿಗೆ ಸ್ಥಳೀಯರ ಬೆಂಬಲವಿಲ್ಲ: ಹಾಲಾಡಿ ಶ್ರೀನಿವಾಸ ಶೆಟ್ಟಿ ಸಂದರ್ಶನ: http://bit.ly/2rbwzi9

Related Tags: BM Sukumar Shetty, Interview, Byndoor Constituency, Karnataka Assembly Elections, Gopal Poojary, BJP Byndoor, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ