ಯೇಸು ಕ್ರಿಸ್ತರ- "ಬೀ ಎ ಗುಡ್ ಶೆಫರ್ಡ್" ಆಶೀರ್ವಚನ ಮತ್ತು ಸಿದ್ದರಾಮಯ್ಯರ ಜನಪರ ಆಡಳಿತ

ಪ್ರವೀಣ್ ಎಸ್ ಶೆಟ್ಟಿ, ಮಂಗಳೂರು
21 ನೇ ಶತಮಾನದಲ್ಲಿಯೂ ವಿದ್ಯಾವಂತ ಭಾರತೀಯರು ಒಬ್ಬ ಮನುಷ್ಯನ ಯೋಗ್ಯತೆ, ಬುದ್ದಿಮತ್ತೆ ಹಾಗೂ ಕಾರ್ಯಶಕ್ತಿಯನ್ನು ಅಳೆಯಲು ಅವನ ಜಾತಿಯನ್ನು ಮಾನದಂಡವಾಗಿ ಮಾಡುತ್ತಾರೆಯೇ ಹೊರತು ಅವನ ನಿಜವಾದ ಕಾರ್ಯಗಳನ್ನು ನೋಡಿ ಅವನ ಯೋಗ್ಯತೆ ಹಾಗೂ ಬುದ್ದಿಮತ್ತೆಯನ್ನು ಅಳೆಯುವುದಿಲ್ಲ ಎಂಬುದಕ್ಕೆ ನಮ್ಮ ಮುಖ್ಯಮಂತ್ರಿ ಸಿದ್ರಾಮಯ್ಯರ ಕುರಿತು ಮೇಲ್ಜಾತಿಯವರು ಕೊಡುತ್ತಿರುವ ಪೂರ್ವಾಗ್ರಹಪೀಡಿತ ಅಭಿಪ್ರಾಯಗಳೇ ಸಾಕ್ಷಿ. 

ಈಗ ಚುನಾವಣೆ ಹತ್ತಿರ ಬರುತ್ತಿರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರೋಧಿಗಳು ಅಡಿಗಡಿಗೆ ಅವರ ಜಾತಿಯನ್ನು ಕೆದುಕಿ ಕುರುಬ ಜಾತಿ ಬಗ್ಗೆ ಲೇವಡಿ ಮಾಡಿ ಸಿದ್ರಾಮಯ್ಯನವರ ಪರೋಕ್ಷ ಜಾತಿ ನಿಂದನೆ ಮಾಡಿ ಮೇಲ್ಜಾತಿಯವರನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಜಗತ್ತಿನ ಧಾರ್ಮಿಕ ಹಾಗೂ ರಾಜಕೀಯ ಇತಿಹಾಸ ಓದಿದಾಗ ಕುರುಬ ಮತ್ತು ದನಗಾಹಿ ಜಾತಿಗಳ ಇತಿಹಾಸದಷ್ಟು ಭವ್ಯ ಇತಿಹಾಸ ಬೇರೆ ಯಾರದೂ ಇಲ್ಲ ಎಂದು ಎಲ್ಲರಿಗೂ ಮನದಟ್ಟಾಗುತ್ತದೆ. ಮೂಲತಃ ಜಗತ್ತಿನಲ್ಲಿ ನಾಗರಿಕತೆ ಶುರುವಾಗಿದ್ದೇ ಮಾನವರು ಜಾನುವಾರು ಸಾಕಾಣಿಕೆ ಹಾಗೂ ಮೀನುಗಾರಿಕೆ ವ್ಯವಸ್ಥಿತ ರೂಪದಲ್ಲಿ ಶುರುಮಾಡಿದ ನಂತರವೇ. ಹಾಗಾಗಿ ಜಗತ್ತಿನ ಎಲ್ಲಾ ಸಮುದಾಯದವರ ಪೂರ್ವಜರು ಮೂಲತಃ ಮೀನುಗಾರ ಅಥವಾ ಕುರುಬ-ದನಗಾಹಿ ಆಗಿಯೇ ಇದ್ದರು ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.

ಭಾರತದ ಮೊಟ್ಟ ಮೊದಲ ಸಾಮ್ರಾಟನಾದ ಚಂದ್ರಗುಪ್ತ ಮೌರ್ಯ ಕುರುಬನಾಗಿದ್ದ. ಅವನು ಕೇವಲ ಭಾರತ ಮಾತ್ರವಲ್ಲಾ ಈಗಿನ ಪಾಕಿಸ್ತಾನ, ಬಲೂಚಿಸ್ಥಾನ, ಅಫಘನಿಸ್ತಾನಗಳ ಭೂಭಾಗವನ್ನೂ ಗೆದ್ದುಕೊಂಡು ಭಾರತದಲ್ಲಿ ಸೇರಿಸಿದನು. ನಿಜವಾಗಿ ಚಂದ್ರಗುಪ್ತನ ಸಂಘಟನಾ ಚಾತುರ್ಯ, ಶೌರ್ಯ ಧೈರ್ಯ, ಬುದ್ದಿಮತ್ತೆ, ಹಾಗೂ ಯುದ್ಧ ತಂತ್ರದ ಕೌಶಲ್ಯ ನೋಡಿ ಚಾಣಕ್ಯನೇ ಚಂದ್ರಗುಪ್ತನ ಶರಣಿಗೆ ಬಂದಿದ್ದು. ಆದರೆ ಮೇಲ್ಜಾತಿ ಇತಿಹಾಸಕಾರರು ಚಾಣಕ್ಯನಿಂದಾಗಿ ಚಂದ್ರಗುಪ್ತ ರಾಜನಾಗಿದ್ದು ಎಂದು ತಿರುಚಿ ಬರೆದು ಜನರನ್ನು ಮೋಸ ಮಾಡಿದ್ದಾರೆ.

ದಕ್ಷಿಣ ಭಾರತದಲ್ಲಿ, ಮುಖ್ಯತಃ ಕರ್ನಾಟಕದಲ್ಲಿ ಜೈನ ಧರ್ಮ ಹರಡಲು ಮೂಲ ಕಾರಣ ಚಂದ್ರಗುಪ್ತ. ಅವನು ತನ್ನ ಮೌರ್ಯ ಸಾಮ್ರಾಜ್ಯವನ್ನು ತನ್ನ ಮಗ ಬಿಂದೂಸಾರನಿಗೆ ಬಿಟ್ಟುಕೊಟ್ಟು ನಮ್ಮ ಶ್ರವಣ ಬೆಳಗೊಳದ ಚಂದ್ರಗಿರಿಯಲ್ಲಿ ನೆಲೆ ನಿಂತು ದಕ್ಷಿಣ ಭಾರತದಲ್ಲಿ ಜೈನ ಧರ್ಮ ಪಸರಿಸಿದನು. ಹಾಗಾಗಿ ಜೈನ ಧರ್ಮವೂ ಒಬ್ಬ ಕುರುಬನಿಗೆ ಕೃತಜ್ನವಾಗಿದೆ. ಬೌದ್ಧ ಧರ್ಮವಂತೂ ಈ ಕುರುಬನ ಮೊಮ್ಮಗ ಸಾಮ್ರಾಟ ಅಶೋಕನಿಂದಾಗಿ ಜಗತ್ತಿನಲ್ಲಿ ಎಲ್ಲೆಡೆ ಹರಡಿತು (ಈಗ ದಿಲ್ಲಿಯಲ್ಲಿರುವ ಚಂದ್ರಗುಪ್ತ ಮೌರ್ಯನ ಪ್ರತಿಮೆಯ ಕೆಳಗೆ “ಸನ್ ಆಫ್ ಶೆಫರ್ಡ್” ಎಂದು ಬರೆಯಲಾಗಿದೆ).

ಇಂದು ಜಗತ್ತಿನ ಅತಿ ದೊಡ್ಡ ಧರ್ಮವಾದ ಕ್ರೈಸ್ತ ಧರ್ಮವನ್ನು ಸ್ಥಾಪಿಸಿದ ಯೇಸು ಕ್ರಿಸ್ತ ಒಬ್ಬ ಕುರುಬ. ಜಗತ್ತಿನ ಎರಡನೇ ಅತಿ ದೊಡ್ಡ ಧರ್ಮವಾದ ಇಸ್ಲಾಂ ಧರ್ಮವನ್ನು ಸ್ಥಾಪಿಸಿದ ಪ್ರವಾದಿವರ್ಯರೂ ಚಿಕ್ಕಂದಿನಲ್ಲಿ ಕುರಿಗಾಹಿಯಾಗಿದ್ದು ನಂತರ ವ್ಯಾಪಾರಿಯಾದರು. ಯಹೂದೀ ಧರ್ಮದ ಮೂಲ ಪುರುಷ ಪ್ರವಾದಿ ಅಬ್ರಹಾಂ ಮತ್ತು ಪ್ರವಾದಿ ಮೂಸಾ (ಮೂಸೆಸ್) ಇವರೂ ಕುರುಬರಾಗಿದ್ದರು. ವೈದಿಕ ದೇವರಾದ ಕೃಷ್ಣ ಒಬ್ಬ ದನಗಾಹಿ.  ಭಗವದ್ಗೀತೆ ಮತ್ತು ಮಹಾಭಾರತ ಬರೆದ ವೇದವ್ಯಾಸ ಒಬ್ಬ ಮೀನುಗಾರ. ರಾಮಾಯಣ ಬರೆದ ವಾಲ್ಮೀಕಿ ಒಬ್ಬ ಬೇಡರವನು, ಧೃತರಾಷ್ಟ್ರ ಮತ್ತು ಪಾಂಡುರಾಜ ಇವರಿಬ್ಬರೂ ಮೀನುಗಾರ ವೇದವ್ಯಾಸನಿಗೆ ಹುಟ್ಟಿದ ಮಕ್ಕಳು. ವಿಜಯನಗರದ ಅರಸ ಕೃಷ್ಣ ದೇವರಾಯ ಒಬ್ಬ ಕೆಳಜಾತಿಯ ದಾಸಿಯ ಮಗ. ಬ್ರಿಟಿಷರ ವಿರುದ್ಧ ಮೊಟ್ಟ ಮೊದಲ ಸ್ವಾತಂತ್ರ್ಯದ ರಣ ಕಹಳೆ ಊದಿದ ನಮ್ಮ ಸಂಗೊಳ್ಳಿ ರಾಯಣ್ಣ ಕುರುಬ ಸಮುದಾಯದವನು. 

ಛತ್ರಪತಿ ಶಿವಾಜಿಯ ಜಾತಿಯ ಹೆಸರು ಮರಾಠಾ ಎಂದು ಹೇಳಿದರೂ ಅವನೂ ಮೂಲತಃ ಕುರುಬ ಜಾತಿಯವನು ಎಂದು ಗೋವಿಂದ ಪಾನ್ಸರೆ ಎಂಬ ಸಂಶೋಧಕರು ಹೇಳಿದ್ದಾರೆ. ಅದಕ್ಕಾಗಿಯೇ ಮಹಾರಾಷ್ಟ್ರದ ಬ್ರಾಹ್ಮಣರು ಶಿವಾಜಿಗೆ ಫಟ್ಟಾಭಿಷೇಕ ಮಾಡಲು ನಿರಾಕರಿಸಿ ಬಹಿರಂಗವಾಗಿ ಅವಮಾನಿಸಿದರು. ನಂತರ ಕಾಶಿಯಿಂದ ಬಂದ ಬ್ರಾಹ್ಮಣನೂ ತನ್ನ ಎಡಗಾಲಿನ ಹೆಬ್ಬೆರಳಿನಿಂದ ಶಿವಾಜಿಗೆ ರಾಜತಿಲಕ ಇಟ್ಟಿದ್ದು. ಅದಕ್ಕೆ ಕಾರಣ ಶೂದ್ರ ಶಿವಾಜಿಯನ್ನು ತನ್ನ ಕೈಯಿಂದ ಮುಟ್ಟುವುದು ಆ ಕಾಶಿ ಬ್ರಾಹ್ಮಣನಿಗೆ ನಿಷಿದ್ಧವಾಗಿತ್ತು, ಅದಕ್ಕೆ ಕಾಲಿನಿಂದ ಮುಟ್ಟಿದ್ದು.

ಸಂಸ್ಕೃತದ ಆದಿಕವಿ ಕಾಳಿದಾಸ ಸಹಾ ಕುರುಬ (ಡಾ.ರಾಜಕುಮಾರರ ಕವಿರತ್ನ ಕಾಳಿದಾಸ ಚಿತ್ರ ನೋಡಿದವರು ಅವರ ಕುರುಬನ ಅಭಿನಯ ಎಂದೂ ಮರೆಯುವ ಹಾಗಿಲ್ಲ). ಉಡುಪಿ ಶ್ರೀಕೃಷ್ಣನ ದೇವಸ್ಥಾನವನ್ನು ಜಗತ್ಪ್ರಸಿದ್ಧಗೊಳಿಸಿದ ಕನಕದಾಸರೂ ಕುರುಬರು. ಹಾಗಾಗಿ ಕವಿವರ್ಯರೊಬ್ಬರು ಹೀಗೆ ಹೇಳಿದ್ದಾರೆ -, ಕುರುಬ ಕುರುಬ ಎಂದು ಯಾರಿಗೂ ಹೀಯಾಳಿಸದಿರು ಮೂಢಾ. ಇಡೀ ಜಗತ್ತೇ ಇಂದು ನಿಂತಿರುವುದು ಕುರುಬರು-ದನಗಾಹಿಗಳು ಸ್ಥಾಪಿಸಿದ ಧರ್ಮಗಳ ಮೇಲೆ ನೋಡಾ. ಸಿದ್ರಾಮಯ್ಯನವರ ಈಗಿನ ಐದು ವರ್ಷದ ಜನಪರ ಆಡಳಿತ ನೋಡಿದ ಮೇಲೆ ಪ್ರಭು ಯೇಸು ಕ್ರಿಸ್ತರ- “ಬೀ ಎ ಗುಡ್ ಶೆಫರ್ಡ್” (ಉತ್ತಮ ಕುರುಬನಾಗು) ಎಂಬ ಆಶೀರ್ವಚನ ಸತ್ಯವಾಗಿದೆ ಅನಿಸುತ್ತಿದೆ.

Related Tags: Siddaramiah, Kuruba, Karnataka Elections, Defamations, Caste, Be a good shepherd
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ