ವೀ ಆರ್ ಗುಡ್ ಪೀಪಲ್. ಬಿಜೆಪಿಯದ್ದು ಟೊಳ್ಳು ಪ್ರಚಾರ: ಪ್ರಮೋದ್ ಮಧ್ವರಾಜ್ ಸಂದರ್ಶನ
ಉಡುಪಿ ಶಾಸಕರಾಗಿ, ಸಚಿವರಾಗಿ ಪ್ರಮೋದ್ ಮಧ್ವರಾಜ್ ಅವರ ಸಾಧನೆಗಳೇನು? ಮತ್ತೆ ಆಯ್ಕೆಯಾದರೆ ಅವರ ಮುಂದಿನ ಯೋಜನೆಗಳೇನು? ಪ್ರಮೋದ್ ಮಧ್ವರಾಜ್ ಜೊತೆ ಒಂದು ಮಾತುಕತೆ

ಸಂದರ್ಶನ: ಶಶಿಧರ ಹೆಮ್ಮಾಡಿ
ಡುಪಿ ಶಾಸಕ ಪ್ರಮೋದ್ ಮಧ್ವರಾಜ್ ರಾಜ್ಯದಲ್ಲಿಯೇ ನಂಬರ್ ಒನ್ ಶಾಸಕ ಎಂದು ಇತ್ತೀಚೆಗೆ ಮಾಧ್ಯಮವೊಂದು ನಡೆಸಿದ ಸಮೀಕ್ಷೆಯಲ್ಲಿ ಜನರಿಂದ ಪ್ರಸಂಸೆಗೆ ಒಳಗಾದವರು. ಸದಾ ನಗುಮೊಗ, ಸೌಮ್ಯ ವ್ಯಕ್ತಿತ್ವ, ಎಂದಿಗೂ ಜೋರಾಗಿ ಮಾತಾಡದ ಮೆಲು ಮಾತಿನ ಸಜ್ಜನ ಪ್ರಮೋದ್ ಮಧ್ವರಾಜ್. ಉಡುಪಿ ಶಾಸಕರಾಗಿ ಕಳೆದ ಐದು ವರ್ಷಗಳಲ್ಲಿ ಅಪಾರ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿದ್ದಾರೆ. ನಗರ-ಗ್ರಾಮೀಣ ಪ್ರದೇಶ ಎಂಬ ತಾರತಮ್ಯ ಮಾಡದೆ ಮಹತ್ಚದ ಅಭಿವೃದ್ಧಿ ಕಾರ್ಯಕ್ರಮಗಳನ್ನು, ಅನುದಾನಗಳನ್ನು ತಂದಿದ್ದಾರೆ.

ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ ಪ್ರಮೋದ್ ಮಧ್ವರಾಜ್ ಅವರಿಗೆ ಸಚಿವರಾಗುವ ಯೋಗವೂ ಬಂತು. ಮೀನುಗಾರಿಕೆ ಮತ್ತು ಕ್ರೀಡಾ ಸಚಿವರಾಗಿರುವ ಪ್ರಮೋದ್ ಜಿಲ್ಲಾ ಉಸ್ತುವಾರಿ ಸಚಿವರೂ ಹೌದು. ಜನಪ್ರತಿನಿಧಿಯಾಗಿ ಆಯ್ಕೆಯಾಗುವ ಮೊದಲಿನಿಂದಲೂ ಜನರ ನಡುವೆಯೆ ಇದ್ದವರು ಮತ್ತು ತಮ್ಮ ದುಡಿಮೆಯ ಒಂದಂಶವನ್ನು ಸಮಾಜದ ಬಡ ವರ್ಗಗಳ ಜನರ ಶಿಕ್ಷಣ ಮತ್ತು ಆರೋಗ್ಯಕ್ಕಾಗಿ ಮೀಸಲಿಟ್ಟವರು. ಉಡುಪಿ ಶಾಸಕರಾಗಿ, ಸಚಿವರಾಗಿ ಪ್ರಮೋದ್ ಮಧ್ವರಾಜ್ ಮಾಡಿದ ಜನಪರ ಕಾರ್ಯಕ್ರಮಗಳು ಮತ್ತು ಸಾಧನೆಗಳೇನು? ಶಾಸಕರಾಗಿ ಆಯ್ಕೆಯಾದರೆ ಅವರ ಮುಂದಿನ ಯೋಜನೆಗಳೇನು? ಎದುರಾಳಿ ಅಭ್ಯರ್ಥಿಯ ಕುರಿತು ಪ್ರಮೋದ್ ಏನೆನ್ನುತ್ತಾರೆ? ಬನ್ನಿ ಅವರ ಮಾತಲ್ಲಿಯೇ ಕೇಳೋಣ.

ಹಳ್ಳಿಯ ಮತದಾರನ ಮತಕ್ಕೂ ಪೇಟೆಯಲ್ಲಿರುವ ಮತದಾರನ ಮತಕ್ಕೂ ಒಂದೇ ಬೆಲೆ
ಕರಾವಳಿ ಕರ್ನಾಟಕ:
ಉಡುಪಿಯ ಶಾಸಕರಾಗಿ ಮತ್ತು ಮೀನುಗಾರಿಕ ಸಚಿವರಾಗಿ ನಿಮ್ಮ ಪ್ರಮುಖ ಸಾಧನೆಗಳು ಏನು?
ಪ್ರಮೊದ್ ಮಧ್ವರಾಜ್: ಉಡುಪಿ  ವಿಧಾನಸಭಾ ಕ್ಷೇತ್ರಕ್ಕೆ ಸುಮಾರು 21 ಸಾವಿರ ಹೊಸ ಬಿಪಿಎಲ್ ಕಾರ್ಡ್‌ಗಳು ಬಂದಿವೆ. 24 ತಾಸು ವಿದ್ಯುತ್ ಅನ್ನು ಸರ್ಕಾರಿ ಆದೇಶದ ಪ್ರಕಾರ ನೀಡುವ ಮೊದಲ ಕ್ಷೇತ್ರ ಉಡುಪಿ. ಸುಮಾರು 45 ನರ್ಮ್ ಬಸ್‌ಗಳು ಉಡುಪಿ ಸುತ್ತಮುತ್ತ ಸೇವೆ ನೀಡುತ್ತಿವೆ. 88 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಸೇತುವೆ ಕಾಮಗಾರಿಗಳು ಮುಗಿದಿವೆ ಅಥವಾ ಪ್ರಗತಿಯಲ್ಲಿವೆ. ಕೆಲವು ಟೆಂಡರ್ ಹಂತದಲ್ಲಿವೆ. ಸೇತುವೆಗಳ ಮಟ್ಟಿಗೆ ಹೆಚ್ಚುಕಡಿಮೆ ಬೇಡಿಕೆಗಳು ಬಾಕಿ ಇಲ್ಲ ಎನ್ನುವಷ್ಟರ ಮಟ್ಟಿಗೆ ಕೆಲಸಗಳಾಗಿವೆ. ನೂರು ಕೋಟಿ ರೂಪಾಯಿಗಳಷ್ಟು ಗ್ರಾಮೀಣ ಭಾಗದಲ್ಲಿ ರಸ್ತೆ ಕಾಮಗಾರಿಗಳಾಗಿವೆ. ಬಿಜೆಪಿ ಶಾಸಕರಿದ್ದಾಗ ಕೇವಲ ನಗರ ಭಾಗದ ಒಂದೆರಡು ರಸ್ತೆಗಳು ಮಾತ್ರ ಅಭಿವೃದ್ಧಿ ಮಾಡಿದ್ದು ಬಿಟ್ಟರೆ ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಆಗಿರಲಿಲ್ಲ. ಉಡುಪಿ ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಆದ್ಯತೆ ನೀಡಿದ್ದೇನೆ. ಓರ್ವ ಹಳ್ಳಿಯ ಮತದಾರನ ಮತಕ್ಕೂ ಪೇಟೆಯಲ್ಲಿರುವ ಮತದಾರನ ಮತಕ್ಕೂ ಒಂದೇ ಬೆಲೆ. ಮಾಜಿ ರಾಷ್ಟ್ರಪತಿ ಅದ್ಬುಲ್ ಕಲಾಂ ಹೇಳಿದಂತೆ ನಗರ ಪ್ರದೇಶಕ್ಕೆ ಇರುವ ಸೌಲಭ್ಯಗಳನ್ನು ಹಳ್ಳಿಗಳಿಗೂ ಕೊಡುವ ವ್ಯವಸ್ಥೆ ಮಾಡಿದ್ದೇವೆ.

ಸಮುದ್ರದಲ್ಲಿ ಮೃತರಾದ ಮೀನುಗಾರರ ಕುಟುಂಬಕ್ಕೆ ಪರಿಹಾರ 2 ಲಕ್ಷದಿಂದ 6 ಲಕ್ಷಕ್ಕೆ ಏರಿಕೆ
ಮೀನುಗಾರಿಕೆ ಇಲಾಖೆಗೆ ಸಂಬಂಧಪಟ್ಟ ಹಾಗೆ ಹೇಳುವುದಾದರೆ ಅನೇಕ ಮೀನುಗಾರಿಕಾ ದೋಣಿಗಳಿಗೆ ಫೀಸಿಬಿಲಿಟಿ ಪ್ರಮಾಣಪತ್ರ ಇರಲಿಲ್ಲ. ಅಂತಹ ಸುಮಾರು 163 ಅಕ್ರಮ ದೋಣಿಗಳನ್ನು ಸಕ್ರಮ ಗೊಳಿಸಲಾಗಿದೆ. ಸುಮಾರು ಒಂದು ಸಾವಿರ ಹೊಸ ಫೀಸಿಬಿಲಿಟಿ ಸರ್ಟಿಫಿಕೇಟ್‌ಗಳನ್ನು ನಮ್ಮ ಮೀನುಗಾರ ಯುವಕರಿಗೆ ನೀಡಲಾಗಿದೆ. ಹಿಂದೆ ಈ ಸರ್ಟಿಫಿಕೇಟ್‌ಗಳು ಐದು ಹತ್ತು ಲಕ್ಷ ರೂಪಾಯಿ ಲಂಚಕ್ಕೆ ಬಿಕರಿಯಾಗುತ್ತಿತ್ತು. ಡೀಸಲ್ ಸಬ್ಸಿಡಿ ಕಳೆದ ಮಾರ್ಚ್ ತಿಂಗಳ ತನಕ ಬಿಡುಗಡೆ ಮಾಡಿದ್ದು ಯಾವುದೇ ಬಾಕಿ ಇಲ್ಲ. ಮಿನುಗಾರ ಮಹಿಳೆಯರಿಗೆ ಕೊಡುವ ಸಬ್ಸಿಡಿಯ ಬಡ್ಡಿ ಕೂಡ ನನ್ನ ಅವಧಿಯಲ್ಲಿ 16 ಕೋಟಿಯಷ್ಟು ಬಿಡುಗಡೆ ಆಗಿದ್ದು ಅದರಲ್ಲೂ ಯಾವುದೆ ಬಾಕಿ ಉಳಿಸಿಕೊಂಡಿಲ್ಲ. ಮೀನುಗಾರಿಕೆಯ ವೇಳೆ ಸಮುದ್ರದಲ್ಲಿ ಅವಘಡಗಳಾಗಿ ಮೃತಪಡುವ ಮೀನುಗಾರರ ಕುಟುಂಬಕ್ಕೆ 2 ಲಕ್ಷ ಇದ್ದ ಪರಿಹಾರ ಧನವನ್ನು 6 ಲಕ್ಷಕ್ಕೆ ಏರಿಸಲಾಗಿದೆ. ಮಲ್ಪೆ ಬಂದರಿಗೆ ನನ್ನ ಅವಧಿಯಲ್ಲಿ 20 ಕೋಟಿಯಷ್ಟು ಅನುದಾನ ಬಂದಿದೆ.

ಕಕ: ಮೃತ ಮೀನುಗಾರರ ಪರಿಹಾರ ಹೆಚ್ಚಳವಾಗಿದ್ದು ಈಗಾಗಲೇ ಅನುಷ್ಠಾನಗೊಂಡಿದೆಯಾ?
ಪ್ರಮೋದ್: ಹೌದು. ಮೊದಲು ಇದು ಐದು ಲಕ್ಷಕ್ಕೆ ಹೆಚ್ಚಿಸಲಾಗಿತ್ತು. ಈಗ ಆರು ಲಕ್ಷ ಆಗಿದೆ.

ಸಾವಿರ ಕ್ರೀಡಾಳುಗಳನ್ನು ಗುರುತಿಸಿ ನೆರವು
ಕಕ:
ಕ್ರೀಡಾ ಸಚಿವರಾಗಿ ನಿಮ್ಮ ಸಾಧನೆಗಳ ಬಗ್ಗೆ ಹೇಳಿ
ಪ್ರಮೋದ್: ಇಷ್ಟರ ತನಕ ರಾಜ್ಯಕ್ಕೆ ಕ್ರೀಡಾ ನೀತಿ ಅಂತಲೇ ಇರಲಿಲ್ಲ. ಮೊದಲ ಕ್ರೀಡಾ ನೀತಿಯನ್ನು ನಾನು ಸಚಿವನಾದ ಮೇಲೆ ಜಾರಿಗೆ ತಂದಿದ್ದೇವೆ. ಯುವ ಚೈತ್ಯನ್ಯ ಎನ್ನುವ ಸ್ಪೋರ್ಟ್ಸ್ ಕಿಟ್‌ಗಳನ್ನ ವಿತರಣೆ ಮಾಡಲಾಗಿದೆ. 5 ಸಾವಿರ ಸ್ಪೋರ್ಟ್ಸ್ ಕ್ಲಬ್‌ಗಳಿಗೆ 20 ಕೋಟಿ ವೆಚ್ಚದಲ್ಲಿ ಈ ಕಿಟ್‌ಗಳನ್ನ ನೀಡಲಾಗಿದೆ. ಮೂಲಸೌಕರ್ಯಗಳನ್ನ ಅಭಿವೃದ್ಧಿಪಡಿಸುವ ಕೆಲಸಗಳಾಗಿವೆ. ಇನ್ನೊಂದು ಮಹತ್ವದ ಕೆಲಸ ಎಂದರೆ ಟಾಪ್ ತೌಸಂಡ್ ಸ್ಪೋರ್ಟ್ಸ್ ಪರ್ಸನ್‌ಗಳನ್ನು ಗುರುತಿಸಿ ಅವರಿಗೆ ಕಾರ್ಪೊರೇಟ್ ಸಂಸ್ಥೆಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ನೆರವು ನೀಡುವ ಯೋಜನೆಯನ್ನು ಮಾಡಿದ್ದೇವೆ. ಇದರಲ್ಲಿ ಮುಕ್ಕಾಲು ಪಾಲು ಕ್ರೀಡಾಳುಗಳು 19 ವರ್ಷಕ್ಕೂ ಕಡಿಮೆ ವಯಸ್ಸಿನವರು. ಈ ರೀತಿ ಕ್ರೀಡಾ ಇಲಾಖೆಯಲ್ಲಿ ಬಹಳ ಸುಧಾರಣೆಗಳನ್ನು ಮಾಡಲಾಗಿದೆ.

ಉಡುಪಿಯಂತಹ ಸಣ್ಣ ನಗರಗಳಿಗೆ ಐಟಿ ಕಂಪೆನಿಗಳು ಬರಲು ಮನಸ್ಸು ಮಾಡುತ್ತಿಲ್ಲ.
ಕಕ:
ಶೈಕ್ಷಣಿಕವಾಗಿ ಬಹಳ ಮುಂದಿರುವ ನಮ್ಮ ಜಿಲ್ಲೆಯಲ್ಲಿ ಉದ್ಯೋಗಗಳ ಸೃಷ್ಟಿ ಆಗುತ್ತಿಲ್ಲ. ಶಿಕ್ಷಣ ಪಡೆದ ಯುವಜನರು ಬೆಂಗಳೂರು, ಮುಂಬೈ ಗಲ್ಫ್ ರಾಷ್ಟ್ರಗಳಿಗೆ ಹೋಗಬೇಕಾದ ಪರಿಸ್ಥಿತಿ ಇದೆ. ಕರಾವಳಿಯಲ್ಲಿ ಉದ್ಯೋಗ ಸೃಷ್ಟಿ ಮಾಡುವಲ್ಲಿ ಯಾಕೆ ಎಲ್ಲ ಪಕ್ಷಗಳು, ಸರ್ಕಾರ ವಿಫಲವಾಗುತ್ತಿವೆ?
ಪ್ರಮೋದ್: ಉಡುಪಿ ಜಿಲ್ಲೆಯಲ್ಲಿ ಮಾಲಿನ್ಯ ಉಂಟು ಮಾಡುವ ಕೈಗಾರಿಕಗಳನ್ನು ತರಲಿಕ್ಕಾಗುವುದಿಲ್ಲ. ಅಥವಾ ಸಾವಿರಾರು ಎಕರೆಗಳ ಭೂಮಿಯನ್ನು ಕೇಳುವ ಕೈಗಾರಿಕೆಗಳನ್ನು ಇಲ್ಲಿಗೆ ತರಲಿಕ್ಕೆ ಆಗುವುದಿಲ್ಲ. ಅರ್ಧ ಎಕರೆ ಭೂಮಿ ಕೂಡ ಸಿಗದಂತಹ ಪರಿಸ್ಥಿತಿ ಕರಾವಳಿಯಲ್ಲಿದೆ. ಐಟಿ, ಬಿಟಿ ಕಂಪೆನಿಗಳನ್ನು ಇಲ್ಲಿಗೆ ಬರಬಹುದು. ಆದರೆ ನಾನು ಆ ಕಂಪೆನಿಗಳನ್ನು ಸಂಪರ್ಕ ಮಾಡಿದಾಗ ಅವರು ಬೆಂಗಳೂರಿನಂತಹ ನಗರಗಳಲ್ಲೆ ಕಂಪೆನಿಗಳನ್ನು ತೆರೆಯಲು ಬಯಸುತ್ತಾರೆ ವಿನಃ ಉಡುಪಿಯಂತಹ ಸಣ್ಣ ನಗರಗಳಿಗೆ ಬರಲು ಮನಸ್ಸು ಮಾಡುತ್ತಿಲ್ಲ.

ಕಕ: ಹಿಂದೂತ್ವದ ರಾಜಕೀಯ ಕರಾವಳಿಯಲ್ಲಿ ಮತ್ತು ನಿಮ್ಮ ಕ್ಷೇತ್ರದಲ್ಲೂ ಬಲವಾಗಿ ಬೇರೂರಿದೆ. ಕಾಂಗ್ರೆಸ್‌ನ ವಿದ್ಯಾರ್ಥಿ ಸಂಘಟನೆಗಳು ದುರ್ಬಲವಾಗಿವೆ. ಎಬಿವಿಪಿ ಮತ್ತು ಹಿಂದೂತ್ವವಾದಿ ಸಂಘಟನೆಗಳ ಪ್ರಭಾವ ಯುವಜನರ ಮೇಲೆ ಹೆಚ್ಚಿದೆ. ಇಂತಹ ಯುವಕರು ಮತ್ತು ಮೊದಲ ಬಾರಿ ಮತದಾನ ಮಾಡುತ್ತಿರುವ ಕಾಲೇಜು ಯುವಕರು ನಿಮಗೆ ಮತ ಹಾಕುತ್ತಾರೆಂದು ನಿಮಗೆ ಭರವಸೆ ಇದೆಯೆ?
ಪ್ರಮೋದ್: ಉಡುಪಿ ಜಿಲ್ಲೆಯ ಯುವಕರ ಜೊತೆ ನಾನು ಒಳ್ಳೆಯ ಒಡನಾಟದಲ್ಲಿದ್ದೇನೆ. ಕಾಲೇಜುಗಳಿಗೆ ಹೋಗಿ ವಿದ್ಯಾರ್ಥಿಗಳ ಜೊತೆ ಇಂಟರಾಕ್ಟ್ ಮಾಡುತ್ತಿರುತ್ತೇನೆ. ವೈಯಕ್ತಿಕವಾಗಿ ಅವರಿಗೆಲ್ಲ ನನ್ನ ಬಗ್ಗೆ ಗೊತ್ತಿದೆ.

ಮಿತಿ ದಾಟಿದ ಬಳಿಕ ಯುವಕರು ಬಂಡಾಯವೇಳುತ್ತಾರೆ.
ಕಕ:
 ಕೋಮುವಾದಿ ಸಿದ್ಧಾಂತಕ್ಕೆ ಸೆಳೆಯಲ್ಪಟ್ಟಿರುವ ಯುವಜನರನ್ನ ಸೈದ್ಧಾಂತಿಕವಾಗಿ ಬದಲಾಯಿಸುವ ಕೆಲಸ ಏನಾದರೂ ನಡೆದಿದೆಯೆ?
ಪ್ರಮೋದ್: ಸೈದ್ಧಾಂತಿಕವಾಗಿ ಬದಲಾಯಿಸುವ ಪ್ರಯತ್ನ ನಡೆದಿಲ್ಲವಾದರೂ ಒಂದು ಮಿತಿ ದಾಟಿದ ಬಳಿಕ ಅಂತಹ ಯುವಕರು ಕೂಡ ಬಂಡಾಯವೇಳುತ್ತಾರೆ. ಅಂತಹ ಚಾಕಚಕ್ಯತೆ ಅವರಲ್ಲಿದೆ. ಈಗಿನ ಯುವಕರನ್ನ ಒಂದು ಸುಳ್ಳು ಹೇಳಿ ದಾರಿ ತಪ್ಪಿಸಬಹುದು. ಆದರೆ ಆ ಸುಳ್ಳನ್ನು ಅವರು ಬೇರೆ ರೀತಿ ವಿಮರ್ಶೆ ಮಾಡುತ್ತಾರೆ. ಅದು ಸುಳ್ಳು ಎಂದು ಗೊತ್ತಾದಾಗ ಸಹಜವಾಗಿಯೇ ಅಲ್ಲಿಂದ ದೂರವಾಗುತ್ತಾರೆ.

ನನ್ನ ಜನಬೆಂಬಲ ಹೇಗೆಂದರೆ ಬೂದಿ ಮುಚ್ಚಿದ ಕೆಂಡದಂತೆ
ಕಕ:
ಈ ಸಲ ಬಿಜೆಪಿಯಿಂದ ನಿಮ್ಮ ಎದುರಾಳಿ ರಘುಪತಿ ಭಟ್. ಕಳೆದ ಚುನಾವಣೆಯ ವೇಳೆ ಅವರ ವಿರುದ್ಧ ಹಲವಾರು ಆರೋಪಗಳು ಕೇಳಿ ಬಂದಿತ್ತು. ಅವರ ಸೆಕ್ಸ್ ಸಿ.ಡಿ ಕೂಡ ದೊಡ್ಡ ವಿವಾದವಾಗಿತ್ತು. ಈಗ ಉಡುಪಿಯ ಜನರು ಅದನ್ನ ಮರೆತು ಬಿಟ್ಟಿದ್ದಾರೆ ಅನ್ನುವ ಹಾಗಿದೆ. ರಘುಪತಿ ಭಟ್ ಅವರು ನಿಮಗೆ ಈ ಬಾರಿ ಕಠಿಣ ಪೈಪೋಟಿ ನೀಡುತ್ತಿದ್ದಾರೆ ಎಂದು ಅನಿಸುತ್ತಿದೆಯೆ?

ಪ್ರಮೋದ್: ನಾನು ಒಂದು ಸರ್ವೇ ಮಾಡುತ್ತಿದ್ದೇನೆ. ಅದರ ಪ್ರಕಾರ ರಘುಪತಿ ಭಟ್ಟರಿಗೆ ಅಂತಹ ಬೆಂಬಲವೇನೂ ಇಲ್ಲ. ನನಗೆ 84 ಶೇಕಡಾ ಮತದಾರರು ಈ ಸರ್ವೆಯಲ್ಲಿ ಬೆಂಬಲ ಸೂಚಿಸಿದ್ದಾರೆ. ಅವರು ಅಬ್ಬರದ ಪ್ರಚಾರ ನಡೆಸಬಹುದು. ಆದರೆ ಅವರ ಪ್ರಚಾರ ಟೊಳ್ಳುತನದಿಂದ ಕೂಡಿದೆ. ನನ್ನ ಜನಬೆಂಬಲ ಹೇಗೆಂದರೆ ಬೂದಿ ಮುಚ್ಚಿದ ಕೆಂಡ. ಕಾಣುವುದಿಲ್ಲ. ಅದು ಕೈ ಹಾಕಿದಾಗ ಮಾತ್ರ ಸುಡುವಂಥದ್ದು.

ಕಕ: ಪ್ರಧಾನಿ ಮೋದಿ ಬಂದು ಭಾಷಣ ಮಾಡಿ ಹೋಗಿದ್ದಾರೆ. ಉಡುಪಿ ಕ್ಷೇತ್ರದಲ್ಲಿ ಮೋದಿ ಅವರ ಪ್ರಭಾವ ಎಷ್ಟರ ಮಟ್ಟಿಗಿದೆ ಎಂದು ನಿಮಗೆ ಅನಿಸುತ್ತೆ?
ಪ್ರಮೋದ್: ನನ್ನ ಕ್ಷೇತ್ರದಲ್ಲಿ ನನ್ನ ಮತದಾರರ ಮೇಲೆ ಮೋದಿ ಪ್ರಭಾವ ಶೂನ್ಯ.

ಶ್ರೀಮಂತ ತಾಯಿ-ಮಗುವಿಗೆ ಸಿಗುವ ಚಿಕಿತ್ಸೆ ಉಚಿತವಾಗಿ ಬಡ ತಾಯಿ-ಮಗುವಿಗೆ
ಕಕ:
ಸರ್ಕಾರಿ ಮಕ್ಕಳ ಮತ್ತು ಹೆರಿಗೆ ಆಸ್ಪತ್ರೆಯನ್ನು ನೀವು ಖಾಸಗಿಯವರಿಗೆ ಪರಭಾರೆ ಮಾಡಿದ್ದೀರಿ ಎನ್ನುವ ಆರೋಪ ನಿಮ್ಮ ಮೇಲಿದೆ. ಜನರ ವಿರೋಧದ ನಡುವೆಯೂ ನೀವು ಅದನ್ನು ಖಾಸಗಿಯವರಿಗೆ ನೀಡಿದ್ದೀರಿ.
ಪ್ರಮೋದ್: ಮುಂಚೆ ಇದ್ದದ್ದು ಕೇವಲ 70 ಹಾಸಿಗೆಯ ಆಸ್ಪತ್ರೆ. ನೆಲಮಾಳಿಗೆಯಲ್ಲಿ ಆಸ್ಪತ್ರೆ ಇತ್ತು. ಸೋರುತ್ತಿತ್ತು. ರಶ್ ಆದಾಗ ವೆರಂಡಾದಲ್ಲಿ ರೋಗಿಗಳನ್ನು ಮಲಗಿಸಬೇಕಾಗಿತ್ತು. ಈಗ ಏನಾಗಿದೆ? 200 ಹಾಸಿಗೆಗಳುಳ್ಳ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ನಿರ್ಮಾಣವಾಗಿದೆ. 6 ಮಾಳಿಗೆ. 6 ಆಪರೇಶನ್ ಥಿಯೇಟರ್ ಇದೆ. 200 ಹಾಸಿಗೆಗಳುಳ್ಳ ಉಚಿತ ಹೈಟೆಕ್ ಆಸ್ಪತ್ರೆ ಒಳ್ಳೆಯದೊ ಅಥವಾ 70 ಬೆಡ್‌ಗಳ ನಿರ್ಲಕ್ಷಿತ ಆಸ್ಪತ್ರೆ ಒಳ್ಳೆಯದೊ?

ಕಕ: ಅಂದರೆ ನೀವು ಒಂದು ಒಳ್ಳೆಯ ನಿರ್ಣಯವನ್ನೆ ಆಸ್ಪತ್ರೆಯ ವಿಷಯದಲ್ಲಿ ಕೈಗೊಂಡಿದ್ದೀರಿ ಎಂದು ನಿಮಗೆ ನಂಬಿಕೆ ಇದೆಯೇ?
ಪ್ರಮೋದ್: ಖಂಡಿತವಾಗಿಯೂ. ಯಾಕೆಂದರೆ ಅತೀ ಶ್ರೀಮಂತ ತಾಯಿ-ಮಗುವಿಗೆ ಸಿಗುವ ಚಿಕಿತ್ಸೆ ಯಾವುದೆ ಖರ್ಚಿಲ್ಲದೆ ಉಚಿತವಾಗಿ ಅತೀ ಬಡ ತಾಯಿ-ಮಗುವಿಗೆ ಸಿಗುತ್ತಿದೆ. ಇದನ್ನೂ ವಿರೋಧ ಮಾಡುವವರಿದ್ದರೆ ಅಂತವರ ಮನಸ್ಥಿತಿ ಏನು ಎಂಬುದು ನೀವು ಅರ್ಥಮಾಡಿಕೊಳ್ಳಬೇಕು.

ಕಕ: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ವಾಪಾಸು ಬರುತ್ತದಾ? ಕರಾವಳಿಯಲ್ಲಿ ಫಲಿತಾಂಶ ಹೇಗಿರುತ್ತದೆ?
ಪ್ರಮೋದ್: ಕರ್ಮಾಟಕದಲ್ಲಿ ಕಾಂಗ್ರೆಸ್ ಸರ್ಕಾರ ನೂರು ಶೇಕಡಾ ಬಂದೇ ಬರುತ್ತದೆ. ಕರಾವಳಿಯಲ್ಲಿಯೂ ಈ ಬಾರಿ ಹೆಚ್ಚಿನ ಸ್ಥಾನಗಳನ್ನು ನಾವೇ ಗಳಿಸಲಿದ್ದೇವೆ.

ಚುನಾವಣೆಗೂ ಮೊದಲೇ ಅಂತರ ಊಹಿಸುವುದು ದುರಹಂಕಾರವಾಗುತ್ತದೆ.
ಕಕ:
ರಾಜ್ಯದಲ್ಲೆ ನಂಬರ್ ಒನ್ ಶಾಸಕ ಎಂದು ಒಂದು ಸಮೀಕ್ಷೆಯಲ್ಲಿ ನೀವು ಆಯ್ಕೆಯಾಗಿದ್ದೀರಿ. ಕ್ಷೇತ್ರದಲ್ಲಿ ನಿಮ್ಮ ಕೆಲಸ ನಿಮ್ಮ ಈ ಬಾರಿಯ ಗೆಲುವಿನ ಅಂತರವನ್ನು ಹೆಚ್ಚಿಸುತ್ತದೆ ಎಂದು ನಿಮಗೆ ಅನಿಸುತ್ತದೆಯೆ?
ಪ್ರಮೋದ್: ಅಂತಹ ಭರವಸೆ ಖಂಡಿತವಾಗಿಯೂ ಇದೆ. ಆದರೆ ನಾನು ಆ ಕುರಿತು ಬಡಾಯಿ ಕೊಚ್ಚಿಕೊಳ್ಳಲಾರೆ. ಜನರು ನೀಡುವ ತೀರ್ಪನ್ನು ಗೌರವಿಸಬೇಕು. ಜನರು ಏನು ತೀರ್ಪು ನೀಡುತ್ತಾರೆ ಎಂದು ಚುನಾವಣೆಗೂ ಮೊದಲೇ ಊಹಿಸುವುದು ದುರಹಂಕಾರವಾಗುತ್ತದೆ. ಆದರೆ ಜನರು ನನ್ನನ್ನು ಈ ಬಾರಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುತ್ತಾರೆ ಎಂಬ ಭರವಸೆ ಇದೆ. ವಾತಾವರಣ ಈ ಬಾರಿ ಹೆಚ್ಚು ನನ್ನ ಪರವಾಗಿದೆ.

ಕಕ: ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ಮತ್ತು ಸಂಘಪರಿವಾರ ಹೆಚ್ಚು ಸಕ್ರಿಯವಾಗಿದೆ. ಹಲವಾರು ರೀತಿಯಲ್ಲಿ ಅವರು ಸೋಷಿಯಲ್ ಮೀಡಿಯಾದ ಬಳಕೆ ಮತ್ತು ದುರ್ಬಳಕೆ ಮಾಡುತ್ತಿದ್ದಾರೆ. ಯುವಕರನ್ನು ದಾರಿ ತಪ್ಪಿಸುವ ಕೆಲಸವೂ ಆಗುತ್ತಿದೆ. ಅದನ್ನೆಲ್ಲ ಹೇಗೆ ಎದುರಿಸುವಿರಿ?
ಪ್ರಮೋದ್: ಮೊನ್ನೆಯಷ್ಟೆ ಅವರು ನನ್ನ ಬಗ್ಗೆ ಸುಳ್ಳು ಆರೋಪಗಳನ್ನು ಒಳಗೊಂಡ ವಿಡಿಯೊ ಮಾಡಿದ್ದರು. ನಾವು ಅದಕ್ಕೆ ಕೌಂಟರ್ ಆಗಿ ವಿಡಿಯೊ ಮಾಡಿದ್ದೇವೆ.

ಕಾಂಗ್ರೆಸ್‌ನಲ್ಲಿ ಇರುವ ಜನರು ವಿ ಆರ್ ಸೈಲೆಂಟ್, ಗುಡ್ ಪೀಪಲ್
ಕಕ:
ಆದರೆ ಕಾಂಗ್ರೆಸ್ ಹೆಚ್ಚು ಒಫೆನ್ಸಿವ್ ಆಗದೆ ಡಿಫೆನ್ಸಿವ್ ಆಗಿಯೇ ಇದೆ ಎಂದು ನಿಮಗೆ ಅನಿಸುತ್ತಿಲ್ಲವೆ?
ಪ್ರಮೋದ್: ನೋಡಿ, ಕಾಂಗ್ರೆಸ್‌ನಲ್ಲಿ ಇರುವ ಜನರು ವಿ ಆರ್ ಸೈಲೆಂಟ್, ಗುಡ್ ಪೀಪಲ್. ಕ್ರಿಮಿನಲ್ ಮೈಂಡ್ ಇರುವುದಿಲ್ಲ. ಇದು ನಮ್ಮ ಒಳ್ಳೆಯತನ. ಕಾಂಗ್ರೆಸ್‌ನಲ್ಲಿರುವ ಜನರ ಒಳ್ಳೆಯತನ, ಜಾತ್ಯತೀತ ಮೌಲ್ಯಗಳು, ನಮ್ಮ ಸಾಫ್ಟ್‌ನೆಸ್ ಇದೆಲ್ಲ ನಮ್ಮ ಶಕ್ತಿ. ಸಮಾಜದಲ್ಲಿ 90 ಶೇಕಡಾ ಒಳ್ಳೆಯ ಜನರೇ ಇರುತ್ತಾರೆ. ಒಳ್ಳೆಯವರು ಯಾವಾಗಲೂ ಬಹುಮತದಲ್ಲಿರುತ್ತಾರೆ. ಕೆಟ್ಟ ಜನರು ಒಫೆನ್ಸಿವ್ ಆಗಿಯೇ ಇರುತ್ತಾರೆ. ಆದರೆ ಜನರು ಅದನ್ನು ಲೈಕ್ ಮಾಡುವುದಿಲ್ಲ.

ಕಕ: ಈಗ ಇಷ್ಟೆಲ್ಲ ನೀವು ಕಾಂಗ್ರೆಸ್ ಅನ್ನ ಹೊಗಳುತ್ತಾ ಇದ್ದೀರಿ. ಆದರೆ ನೀವು ಬಿಜೆಪಿಗೆ ಹೋಗುತ್ತೀರಿ ಎಂದು ಭಾರೀ ಸುದ್ದಿ ಹಬ್ಬಿತ್ತಲ್ಲ?
ಪ್ರಮೋದ್: ನೋಡಿ ಅದು ಸಂಪೂರ್ಣ ಸುಳ್ಳು. ಆ ಸುಳ್ಳನ್ನು ಕೆಲವರು ವ್ಯವಸ್ಥಿತವಾಗಿ ಪ್ರಚಾರ ಮಾಡಿದರು. ಕೆಲವರು ನಾನು ಸ್ಪಷ್ಟನೆ ನೀಡಿದರು ಅದನ್ನು ನಂಬದೆ ನಾನು ಬಿಜೆಪಿ ಸೇರುತ್ತೇನೆ ಎಂದು ಪ್ರಚಾರ ಮಾಡುತ್ತಲೇ ಇದ್ದರು. ಇದು ಅತ್ಯಂತ ಕೆಟ್ಟ ಕೆಲಸ. ಕೊನೆಗೆ ನಾನು ಸ್ಪಷ್ಟನೆ ಕೊಡುವುದೇ ಬಿಟ್ಟೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಮೇಲಾದರೂ ಬಿಜೆಪಿ ಸೇರುವ ಸುದ್ದಿ ಸುಳ್ಳೆಂದು ಜನರಿಗೆ ಗೊತ್ತಾಗಿದೆ.

ಶಾಶ್ವತ ಕುಡಿಯುವ ನೀರಿನ ಯೋಜನೆ, ಸರ್ಕಾರಿ ಮೆಡಿಕಲ್ ಕಾಲೇಜು
ಕಕ:
ಶಾಸಕರಾಗಿ ಆಯ್ಕೆಯಾದರೆ ಮುಂದಿನ ಯೊಜನೆಗಳೇನು?
ಪ್ರಮೋದ್: ಉಡುಪಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಆಗಬೇಕಾಗಿದೆ. ಈಗಾಗಲೇ ಕುಡ್ಸೆಂಪ್ ಅಡಿಯಲ್ಲಿ 270 ಕೋಟಿ ರೂಪಾಯಿಗಳ ವಾರಾಹಿ ನೀರು ಉಡುಪಿಗೆ ತರುವ ಯೋಜನೆ ಮಂಜೂರಾಗಿದೆ. ವಾರಾಹಿ ನೀರು ಉಡುಪಿಗೆ ಬಂದಾಗ ನೀರಿನ ಸಮಸ್ಯೆ ಪರಿಹಾರವಾಗುತ್ತದೆ. ಗ್ರಾಮಾಂತರ ಪ್ರದೇಶದ ಬ್ರಹ್ಮಾವರ ಭಾಗದಲ್ಲಿ ಎರಡು ಬಹುಗ್ರಾಮ ಶಾಶ್ವತ ಕುಡಿಯುವ ನೀರಿನ ಯೋಜನಗಳು ಅಂತಿಮ ಹಂತದಲ್ಲಿವೆ.

ಚಾಂತಾರಿಗೆ 78 ಕೋಟಿ ರೂಪಾಯಿ ತೆಂಕನಿಡಿಯೂರಿಗೆ 34 ಕೋಟಿ ರೂಪಾಯಿಗಳ ಯೋಜನೆ ಅಂತಿಮ ಹಂತದಲ್ಲಿದೆ. 450 ಕೋಟಿ ರೂಪಾಯಿಗಳಷ್ಟು ಕುಡಿಯುವ ನೀರಿನ ಯೋಜನೆಗಳಿಗೆ ಭೂಮಿಕೆ ಸಿದ್ಧಪಡಿಸಲಾಗಿದ್ದು ಅವುಗಳು ಅಂತಿಮ ಹಂತದಲ್ಲಿರುವುದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಸಂಪೂರ್ಣ ಪರಿಹಾರ ಮಾಡುವ ದೂರಗಾಮಿ ಪರಿಣಾಮದ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ. ಇನ್ನು 94 ಸಿ, ಗೋಮಾಳ, ಪರಂಬೋಕು ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ತಾಂತ್ರಿಕ ತೊಂದರೆಗಳಿರುವುದು ಮುಂತಾದ ಕಡೆ ಹಕ್ಕುಪತ್ರಗಳನ್ನು ನೀಡುವ ವ್ಯವಸ್ಥೆ ಮಾಡುವುದು ಮತ್ತು ಬಾಡಿಗೆ ಮನೆಯಲ್ಲಿ ವಾಸ ಮಾಡುವವರಿಗೆ ಮತ್ತು ಭೂರಹಿತರಿಗೆ ಸರ್ಕಾರದಿಂದ ನಿವೇಶನ ಮಂಜೂರು ಮಾಡುವಂತಹ ಪ್ರಯತ್ನವನ್ನು ಮಾಡುತ್ತೇನೆ. ಅಂತೆಯೆ ಉಡುಪಿ ಜಿಲ್ಲೆಗೆ ಒಂದು ಸರ್ಕಾರಿ ಮೆಡಿಕಲ್ ಕಾಲೇಜನ್ನು ಮಂಜೂರು ಮಾಡಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ. ಸರ್ಕಾರಿ ಮೆಡಿಕಲ್ ಕಾಲೇಜು ಬಂದರೆ ಜನರಿಗೂ ಒಳ್ಳೆಯ ವೈದ್ಯಕೀಯ ಸೇವೆ ಹೈಟೆಕ್ ಆಸ್ಪತ್ರೆಯಲ್ಲಿ ಉಚಿತವಾಗಿ ಸಿಗಲಿದೆ.

ಇದನ್ನೂ ಓದಿ:
►►ಇನ್ನೂ ಹೆಚ್ಚಿನ ಅಂತರದಿಂದ ಗೆಲ್ಲಲಿದ್ದೇನೆ. ಮಲ್ಲಿಗೆ ಸ್ಥಳೀಯರ ಬೆಂಬಲವಿಲ್ಲ: ಹಾಲಾಡಿ ಶ್ರೀನಿವಾಸ ಶೆಟ್ಟಿ ಸಂದರ್ಶನ:
http://bit.ly/2rbwzi9

Related Tags: Pramod Madhvaraj, Interview, Udupi Constituency, Karnataka Assembly Elections, Raghupati Bhat, Fisheries Minister, Sports Minister
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ