ಬೈಂದೂರಲ್ಲಿ ಕೊಡಲ್ಲ. ಕುಂದಾಪುರದಲ್ಲಿ ಬಿಡಲ್ಲ! ಜಯಪ್ರಕಾಶ ಹೆಗ್ಡೆ ನಡೆ ಯಾವ ಕಡೆ?
ಬಿಜೆಪಿ ಸೇರಿದ ಹೆಗ್ಡೆಗೆ ಸೂಕ್ತ ಸ್ಥಾನಮಾನ ಸಿಕ್ಕಿದೆಯೆ? ಕಾಂಗ್ರೆಸ್ ಬಿಟ್ಟು ಹೆಗ್ಡೆ ತಪ್ಪು ಮಾಡಿದರೆ? ಬೈಂದೂರು-ಕುಂದಾಪುರ ಕ್ಷೇತ್ರಗಳ ನಡುವೆ ಹೆಗ್ಡೆ ಅತಂತ್ರರಾಗಿದ್ದಾರೆಯೆ?

ಕರಾವಳಿ ಕರ್ನಾಟಕ ಇಲೆಕ್ಷನ್ ಸ್ಪೆಷಲ್/ಶಶಿಧರ ಹೆಮ್ಮಾಡಿ

ರ್ನಾಟಕ ರಾಜ್ಯದಲ್ಲಿ ತಮ್ಮ ಮಾತುಗಾರಿಕೆ, ತಿಳುವಳಿಕೆ, ಸೇವೆ ಮತ್ತು ಮತ್ಸದ್ದಿತನದಿಂದ ಗಮನ ಸೆಳೆದ ಅಪರೂಪದ ರಾಜಕಾರಣಿಗಳಲ್ಲಿ ಜಯಪ್ರಕಾಶ ಹೆಗ್ಡೆ ಮಂಚೂಣಿಯಲ್ಲಿ ನಿಲ್ಲುತ್ತಾರೆ. ಕರ್ನಾಟಕ ವಿಧಾನಸಭೆಗೆ ಹಲವು ಬಾರಿ ಶಾಸಕರಾಗಿ, ಸಚಿವರಾಗಿ, ಲೋಕಸಭಾ ಸದಸ್ಯರೂ ಆಗಿ ಆಯ್ಕೆಯಾಗಿದ್ದ ಜಯಪ್ರಕಾಶ ಹೆಗ್ಡೆ ತಮ್ಮ ಅಪಾರ ಅನುಭವ ಮತ್ತು ಸಂಸದೀಯ ಅನುಭವದಿಂದ ಜನಸಾಮಾನ್ಯರಿಗೆ ಒಳ್ಳೆಯದು ಮಾಡಿದವರು.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೂಲಕ ಜನರ ಮತ್ತು ಕ್ಷೇತ್ರದ ಕೆಲಸ ಮಾಡಿಸಿಕೊಂಡು ಬರಬಲ್ಲ ಜಯಪ್ರಕಾಶ ಹೆಗ್ಡೆಯವರ ನೈಪುಣ್ಯತೆ ಮತ್ತು ಬದ್ದತೆಯನ್ನು ಮೆಚ್ಚದವರೆ ಇಲ್ಲ. ಅವರ ತೂಕದ ಮಾತುಗಳಿಗೆ ತಲೆದೂಗದವರಿಲ್ಲ.

ಜನತಾದಳ-ಪಕ್ಷೇತರ-ಕಾಂಗ್ರೆಸಿಗ-ಈಗ ಬಿಜೆಪಿ
ಹೆಗ್ಡೆ ಜನತಾ ದಳದಲ್ಲಿದ್ದರು. ಬ್ರಹ್ಮಾವರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ಸಚಿವರೂ ಅಗಿದ್ದರು. ಜನತಾ ದಳ ಸಂಯುಕ್ತ ಮತ್ತು ಸೆಕ್ಯೂಲರ್ ಎಂದು ಹೋಳಾದಾಗ ಹೆಗ್ಡೆ ಪಕ್ಷೇತರರಾಗಿ ಉಳಿದರು. ಎರಡು ಬಾರಿ ಪಕ್ಷೇತರರಾಗಿ ಶಾಸಕರಾಗಿ ಆಯ್ಕೆಯಾದರು.

ಬಳಿಕ ಬ್ರಹ್ಮಾವರ ಕ್ಷೇತ್ರವೆ ಮಾಯವಾಯಿತು. ಆಗ ಹೆಗ್ಡೆ ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯ ಎಂಬಂತೆ ಸೇರ್ಪಡೆಗೊಂಡರು. ವಿಧಾನಸಭಾ ಚುನಾವಣೆಯಲ್ಲಿ ಸೋತರು. ಆದರೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಗೆದ್ದು ಸಂಸದರಾದರು. www.karavalikarnataka.com
18 ತಿಂಗಳು ಸಂಸದರಾಗಿದ್ದ ಹೆಗ್ಡೆ ಅಲ್ಪಾವಧಿಯಲ್ಲಿಯೆ ತಮ್ಮ ಕೆಲಸದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಕರಾವಳಿ-ಮಲೆನಾಡಿನ ಹಲವು ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಹೆಗ್ಡೆ ಮಾತನಾಡಿದರು. ಸದಾ ಸುದ್ದಿಯಲ್ಲಿರುತ್ತಿದ್ದರು. ಆದರೆ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಎದುರಾಳಿ ಶೋಭಾ ಕರಂದ್ಲಾಜೆ ಎದುರು ಹೆಗ್ಡೆ ಸೋತರು. ಮೋದಿ ಅಲೆಯಲ್ಲಿ ಹೆಗ್ಡೆ ಕೊಚ್ಚಿ ಹೋದರು.

ಲೋಕಸಭಾ ಚುನಾವಣೆಯ ಬಳಿಕ ತನ್ನನ್ನು ಕಾಂಗ್ರೆಸ್ ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ ಎಂದು ಹೆಗ್ಡೆಗೆ ಅನಿಸತೊಡಗಿತ್ತು. ಅದಕ್ಕೆ ಪೂರಕ ಎಂಬಂತೆ ಕರಾವಳಿಯ ಕೆಲ ಕಾಂಗ್ರೆಸ್ ಮುಖಂಡರು ನಡೆದುಕೊಳ್ಳುತ್ತಿದ್ದುದು ಸಹ ಅಲ್ಲಗಳೆಯಲಾಗದು. ತನಗೆ ಕಾಂಗ್ರೆಸ್ ಪಕ್ಷದಲ್ಲಿ ಮಾಡಬೇಕಾದ್ದು ಮಾಡುವ ಸ್ವಾತಂತ್ರ್ಯ ಸಿಗುತ್ತಿಲ್ಲ ಎಂಬುದೂ ಹೆಗ್ಡೆ ಅವರ ವಾದವಾಗಿತ್ತು. ಸ್ಥಳೀಯವಾಗಿ ಎಂಎಲ್‌ಸಿ ಪ್ರತಾಪಚಂದ್ರ ಶೆಟ್ಟಿ ಪಕ್ಷದಲ್ಲಿ ತನ್ನ ಬೆಳವಣಿಗೆಗೆ ದೊಡ್ಡ ಅಡ್ಡಗಾಲು ಎಂಬುದು ಹೆಗ್ಡೆಗೆ ಮನವರಿಕೆಯಾಗಿತ್ತು.

ಈ ನಡುವೆ ಪ್ರತಾಪಚಂದ್ರ ಶೆಟ್ಟಿ ಅವರ ಎಂಎಲ್‌ಸಿ ಸ್ಥಾನದ ಅವಧಿ ಮುಗಿಯುತ್ತಾ ಬಂದಾಗ ಸ್ವತಃ ಪ್ರತಾಪಚಂದ್ರ ಶೆಟ್ಟರೂ ಸಹ ಆ ಸ್ಥಾನದಲ್ಲಿ ಮರು ಆಯ್ಕೆ ಬಯಸುತ್ತಿಲ್ಲ ಎಂಬ ಸುದ್ದಿ ಹರಡಿ ಸಹಜವಾಗಿ ಜಯಪ್ರಕಾಶ ಹೆಗ್ಡೆ ತಾನು ಎಂಎಲ್‌ಸಿ ಆಗಬೇಕೆಂಬ ಕನಸು ಕಂಡರು. ಆದರೆ ಕೊನೆಗೂ ಕಾಂಗ್ರೆಸ್ ಪಕ್ಷ ತನ್ನನ್ನು ವಿಧಾನಪರಿಷತ್ತಿನ ಚುನಾವಣೆಗೆ ಪರಿಗಣಿಸದಿದ್ದಾಗ ಹೆಗ್ಡೆ ಕಾಂಗ್ರೆಸ್‌ನಲ್ಲಿದ್ದೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದರು, ಆದರೆ ಸೋತರು. www.karavalikarnataka.com 

ಈ ಬೆಳವಣಿಗೆ ಕುಂದಾಪುರ ಕಾಂಗ್ರೆಸ್ ಅನ್ನೂ ಇಬ್ಭಾಗ ಮಾಡಿತು. ಸ್ವಲ್ಪ ಕಾಲ ಅತ್ತ ಕಾಂಗ್ರೆಸ್‌ನಲ್ಲೂ ಇಲ್ಲ ಇತ್ತ ಚಾಲ್ತಿಯಲ್ಲೂ ಇಲ್ಲ ಎಂಬಂತಹ ಪರಿಸ್ಥಿತಿ ಬಂದಾಗ ಹೆಗ್ಡೆ ತಮ್ಮ ರಾಜಕೀಯ ಜೀವನದಲ್ಲೆ ಅತ್ಯಂತ ದೊಡ್ಡ ಯೂ ಟರ್ನ್ ಹೊಡೆದು ಬಿಜೆಪಿ ಸೇರಿದರು.

ಜಾತ್ಯತೀತ ಮನೋಭಾವ, ಪ್ರಗತಿಪರ ನಿಲುವುಗಳಿಗಾಗಿ ರಾಜ್ಯದಾದ್ಯಂತ ಅಭಿಮಾನಿಗಗಳನ್ನು ಬೆಂಬಲಿಗರನ್ನು ಹೊಂದಿದ್ದ ಜಯಪ್ರಕಾಶ ಹೆಗ್ಡೆ ತಮ್ಮ ವ್ಯಕ್ತಿತ್ವಕ್ಕೆ ಸರಿ ಹೊಂದದ ಭಾರತೀಯ ಜನತಾ ಪಕ್ಷವನ್ನು ಸೇರಿದಾಗ ಅವರನ್ನು ಮೆಚ್ಚಿದ್ದ, ಒಪ್ಪಿದ್ದ ಜನರಿಗೆ ಭಾರಿ ನಿರಾಸೆಯಾಗಿದ್ದಂತೂ ನಿಜ. ಹೆಗ್ಡೆ ಅವರ ಈ ನಿರ್ಧಾರ ಅವರ ವ್ಯಕ್ತಿತ್ವಕ್ಕೆ ದೊಡ್ಡ ಕಳಂಕ ಎಂಬಂತಹ ಮಾತುಗಳೂ ಆಗ ಕೇಳಿಬಂದಿದ್ದವು. ಆದರೆ ಹೆಗ್ಡೆಯಂತಹ ಮತ್ಸದ್ದಿ, ಮಾತುಗಾರ ರಾಜಕಾರಣಿ ತಮ್ಮ ಪಕ್ಷಕ್ಕೆ ಬಂದದ್ದು ಬಿಜೆಪಿಯಲ್ಲಿ ಹೊಸ ಸಂಚಲನ ಉಂಟುಮಾಡಿತ್ತು.

ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರು ಬಿಜೆಪಿಯಿಂದ ಮುನಿಸಿಕೊಂಡು ಹೊರನಡೆದು ಪಕ್ಷೇತರರಾಗಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದ ಬಳಿಕ ಕಳೆಗುಂದಿದ್ದ ಬಿಜೆಪಿಗೆ ಜಯಪ್ರಕಾಶ ಹೆಗ್ಡೆ ಆಗಮನ ಬಲ ತಂದಿತ್ತು. ಹಾಲಾಡಿ ಜೊತೆ ಹೆಜ್ಜೆ ಹಾಕದೆ ಬಿಜೆಪಿಯಲ್ಲೆ ಉಳಿದು ಬಿಜೆಪಿ ಮೂಲಬಣ ಎಂದು ಹೇಳಿಕೊಳ್ಳುತ್ತಿದ್ದ ಸ್ಥಳೀಯ ನಾಯಕರು ಹೆಗ್ಡೆ ಅವರ ಜೊತೆ ಉತ್ತಮ ಬಾಂಧವ್ಯ ಬೆಳೆಸಿಕೊಂಡರು. ಹೆಗ್ಡೆ ಅವರ ಅನುಭವವನ್ನೂ ಪಕ್ಷದ ಮತ್ತು ಕ್ಷೇತ್ರದ ಜನರ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಂಡರು. www.karavalikarnataka.com

ಪಕ್ಷದಲ್ಲೆನೊ ಹೆಗ್ಡೆಗೆ ಅದ್ದೂರಿ ಸ್ವಾಗತ ಸಿಕ್ಕಿತು. ಆದರೆ ಹೆಗ್ಡೆ ಅವರ ವ್ಯಕ್ತಿತ್ವಕ್ಕೆ ಹಿಡಿಸದ ಮತ್ತು ಅವರು ತನ್ನ ರಾಜಕೀಯ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದ ಸಿದ್ಧಾಂತ, ನೀತಿಗಳಿಗೆ ತದ್ವಿರುದ್ಧವಾಗಿದ್ದ ಆರೆಸ್ಸೆಸ್, ಬಜರಂಗದಳ, ವಿಶ್ವ ಹಿಂದೂ ಪರಿಷತ್ತು ಮುಂತಾದ ಬಿಜೆಪಿಯ ಅಂಗಸಂಸ್ಥೆಗಳನ್ನು ಸಹಿಸಿಕೊಳ್ಳಲು ಆರಂಭದಲ್ಲಿ ಹೆಗ್ಡೆ ಭಾರೀ ಶ್ರಮಪಟ್ಟದ್ದು ಸುಳ್ಳಲ್ಲ. ಆದರೆ ಹೆಗ್ಡೆ ಬರಬರುತ್ತ ಅಲ್ಲಿಯೂ ಸುಧಾರಿಸಿಕೊಂಡರು.

ಪಕ್ಷದ ನಾಯಕರ ಕೋಮುವಾದಿ, ಅನ್ಯಮತ ದ್ವೇಷದ ಹೇಳಿಕೆಗಳನ್ನು ಕೇಳಿಯೂ ಕೇಳದಂತೆ ನಟಿಸಿ ಅವರೊಂದಿಗೆ ವೇದಿಕೆ ಹಂಚಿಕೊಂಡರೂ ಹೆಗ್ಡೆ ಮಾತ್ರ ಈ ತನಕ ಎಲ್ಲಿಯೂ ಹಗೆತನದ ಮಾತುಗಳನ್ನು, ಕೋಮುವಾದವನ್ನು ಸಮರ್ಥಿಸುವ ಹೇಳಿಕೆಗಳನ್ನು ನೀಡದೆ ತಮ್ಮ ಸಹಿಷ್ಣು ವ್ಯಕ್ತಿತ್ವವನ್ನು, ವಿಶಾಲ ಮನೋಭಾವವನ್ನು ಇಂದೂ ಉಳಿಸಿಕೊಂಡಿದ್ದಾರೆ. www.karavalikarnataka.com

ಬಿಜೆಪಿಯ ಯಾವುದೇ ವಿವಾದ, ರಗಳೆಗಳಲ್ಲಿ ಹೆಗ್ಡೆ ಇನ್ನೂ ಸಿಕ್ಕುಹಾಕಿಕೊಂಡಿಲ್ಲ. ಆದರೆ ಬಿಜೆಪಿಯಲ್ಲಿ ಹೆಗ್ಡೆಗೆ ಭವಿಷ್ಯ ಇದೆಯೆ? ಹಿಂದಿನ ಪಕ್ಷಗಳಲ್ಲಿ ಅಥವಾ ಪಕ್ಷೇತರರಾಗಿ ಇದ್ದಾಗ ಸಿಕ್ಕ ಜನಬೆಂಬಲ ಹೆಗ್ಡೆ ಕಾಯ್ದುಕೊಂಡಿದ್ದಾರೆಯೆ? ಬಿಜೆಪಿಯಲ್ಲಿ ಎಲ್ಲರೂ ಹೆಗ್ಡೆಯರನ್ನು ಒಪ್ಪಿಕೊಂಡಿದ್ದಾರೆಯೆ? ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟಾಗ ಹೆಗ್ಡೆ ಬಿಜೆಪಿಯಲ್ಲೂ ಸಮಸ್ಯೆಯ ಸುಳಿಯಲ್ಲೆ ಸಿಲುಕಿರುವುದು ಕಣ್ಣಿಗೆ ರಾಚುತ್ತದೆ.

ಹಾಲಾಡಿ ಮತ್ತೆ ಬಿಜೆಪಿಗೆ. ಟಿಕೆಟ್ ತಪ್ಪಿತು ಜೆಪಿಗೆ?
ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಒಡೆದ ಮನೆ. ಪಕ್ಷೇತರರಾಗಿ ಇದ್ದಾಗಲೂ ಬಿಜೆಪಿಯ ಮೇಲೆ ವ್ಯಾಪಕ ನಿಯಂತ್ರಣ ಹೊಂದಿದ್ದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಈಗ ಪುನಃ ಬಿಜೆಪಿಗೆ ಮರಳಿದ್ದಾರೆ. ಈ ಬಾರಿ ಕುಂದಾಪುರದಿಂದ ಜಯಪ್ರಕಾಶ ಹೆಗ್ಡೆ ಅಭ್ಯರ್ಥಿ ಎಂದು ಸುದ್ದಿ ಗಟ್ಟಿಗೊಳ್ಳುತ್ತಾ ಸ್ವತಃ ಹೆಗ್ಡೆ ಪಕ್ಷ ಸಂಘಟನೆ ಮತ್ತು ಪ್ರಚಾರದಲ್ಲಿ ತೊಡಗಿಕೊಂಡಿದ್ದಾಗಲೆ ಹಾಲಾಡಿ ಶ್ರೀನಿವಾಸ ಶೆಟ್ಟಿ ಪಕ್ಷಕ್ಕೆ ಮರಳಿ ಮೂಲ ಬಿಜೆಪಿ ಎಂದು ಹೇಳಿಕೊಳ್ಳುವ ಬಣಕ್ಕೂ, ಹೆಗ್ಡೆಗೂ ಆಘಾತ ನೀಡಿದೆ.

ಹಾಲಾಡಿ ಪಕ್ಷಕ್ಕೆ ಮರಳಿದ ನಂತರ ಹೆಗ್ಡೆಗೆ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆಯಾಗಿದೆ. ಹಾಲಾಡಿ ಬಿಜೆಪಿಗೆ ಬರುವುದನ್ನು ವಿರೋಧಿಸಿದ ಬಿಜೆಪಿ ಬಣದ ದನಿ ಅಷ್ಟೇನೂ ಗಟ್ಟಿಯಾಗಿಲ್ಲ. ಈ ನಡುವೆ ಪರಿವರ್ತನಾ ಯಾತ್ರೆಯ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕುಂದಾಪುರಕ್ಕೆ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಎಂದು ಘೋಷಣೆಯನ್ನೂ ಮಾಡಿದ್ದಾರೆ.

ಕುಂದಾಪುರ ಬಿಜೆಪಿಯಲ್ಲಿ ಉತ್ಸಾಹವೇ ಇಲ್ಲ
ರಾಜ್ಯದಲ್ಲಿ ಚುನಾವಣಾ ಆಯೋಗ ಚುನಾವಣೆಯ ದಿನಾಂಕವನ್ನು ನಿಗದಿಪಡಿಸಿದ್ದರೂ ಸಹ ಕುಂದಾಪುರ ಬಿಜೆಪಿಯಲ್ಲಿ ಇನ್ನೂ ಏನೂ ಉತ್ಸಾಹ ಕಂಡುಬಂದಿಲ್ಲ. ಹಾಲಾಡಿಯವರಿಗೆ ಟಿಕೆಟ್ ನೀಡುವುದು ಖಚಿತ ಎಂದು ಕೇಳಿಬಂದಿದ್ದರೂ ಹೆಗ್ಡೆ ಬಣ ಟಿಕೆಟ್ ಏನಿದ್ದರೂ ಹೆಗ್ಡೆಯವರಿಗೆ ಸಿಗುತ್ತದೆ ಎಂದು ಭರವಸೆಯಲ್ಲಿದ್ದಾರೆ.

ಈ ನಡುವೆ ಜಯಪ್ರಕಾಶ ಹೆಗ್ಡೆ ಕುಂದಾಪುರ ಕ್ಷೇತ್ರದಲ್ಲಿ ಮನೆಮನೆಗೆ ತೆರಳಿ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದಾರೆ. ಆದರೆ ಟಿಕೆಟ್ ತಮಗೆ ಸಿಗುವುದು ಖಚಿತ ಎಂದು ಭಾವಿಸಿರುವ ಹಾಲಾಡಿ ಬಣ ಹೆಗ್ಡೆ ಹಾಲಾಡಿಯವರ ಗೆಲುವಿಗಾಗಿ ಪಕ್ಷದ ಪ್ರಚಾರ ನಡೆಸುತ್ತಾ ಇದ್ದಾರೆ ಎಂದು ಲೇವಡಿ ಮಾಡುತ್ತಿದೆ. ಕಲ್ಲಡ್ಕ ಭಟ್ಟರಿಗೂ, ಆರೆಸ್ಸೆಸ್‌ಗೂ ಅಷ್ಟೇನೂ ಇಷ್ಟವಾಗದ ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಆ ಕಾರಣಕ್ಕೆ ಟಿಕೆಟ್ ಕೈ ತಪ್ಪಿ ಹೋಗುವ ಸಾಧ್ಯತೆ ಸದ್ಯಕ್ಕಂತೂ ಕಾಣಿಸುತ್ತಿಲ್ಲ. www.karavalikarnataka.com 

ಹಾಲಾಡಿಯವರನ್ನು ಕಡೆಗಣಿಸಿ ಬೇರೆ ಯಾರಿಗೂ ಸಹ ಟಿಕೆಟ್ ಕೊಡುವ ರಿಸ್ಕ್ ಅನ್ನು ಬಿಜೆಪಿ ತೆಗೆದುಕೊಳ್ಳಲು ಸಿದ್ಧವಿಲ್ಲ. ಹಾಲಾಡಿ ಬಿಜೆಪಿ ಅಥವಾ ಪಕ್ಷೇತರರಾಗಿ ನಿಂತರೂ ಗೆಲುವಿಗೆ ಯಾವುದೆ ಅಡ್ಡಿ ಇಲ್ಲ ಎಂಬುದು ಬಿಜೆಪಿಯ ಹೈಕಮಾಂಡ್ ಲೆಕ್ಕಾಚಾರ. ಸದ್ಯಕ್ಕಂತೂ ಕುಂದಾಪುರ ಬಿಜೆಪಿಯ ಪರವಾಗಿ ಪ್ರಚಾರ ಮಾಡುತ್ತಿರುವ ಹೆಗ್ಡೆ ಹಾಲಾಡಿಯವರ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ ಎಂಬ ಹಾಲಾಡಿ ಬಣದ ಲೇವಡಿಯಲ್ಲೂ ಸತ್ಯವಿದೆ.

ಬೈಂದೂರಿನಲ್ಲಿ ಕೆಲಸ ಮಾಡಿದರೂ ಹೆಗ್ಡೆಗೆ ಟಿಕೆಟ್ ಸಿಗದು
ಬಿಜೆಪಿಗೆ ಬಂದ ದಿನದಿಂದ ಜಯಪ್ರಕಾಶ್ ಹೆಗ್ಡೆ ಕಣ್ಣಿಟ್ಟಿದ್ದು ಬೈಂದೂರು ಕ್ಷೇತ್ರದ ಮೇಲೆ. ಹಾಗಾಗಿ ಬೈಂದೂರು ಕ್ಷೇತ್ರದಲ್ಲಿ ಹೆಗ್ಡೆ ವ್ಯಾಪಕ ತಿರುಗಾಟ ಮಾಡಿ ಸ್ಥಳೀಯ ಬಿಜೆಪಿ ನಾಯಕರಲ್ಲಿ ಹಲವರನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಬೈಂದೂರಿನಲ್ಲಿ ಕಳೆದ ಬಾರಿಯ ಬಿಜೆಪಿ ಪರಾಜಿತ ಅಭ್ಯರ್ಥಿ ಮತ್ತು ಬೈಂದೂರು ಬಿಜೆಪಿಯ ಪ್ರಭಾವಿ ನಾಯಕ ಸುಕುಮಾರ ಶೆಟ್ಟರ ಆಪ್ತ ವಲಯಕ್ಕೆ ಕನ್ನ ಹಾಕಿರುವ ಹೆಗ್ಡೆ ಅಲ್ಲಿಯ ಕೆಲವು ನಾಯಕರ ಜೊತೆ ತನ್ನ ಪ್ರಭಾವಲಯ ಹೆಚ್ಚಿಸಿಕೊಂಡಿದ್ದಾರೆ.

ಬೈಂದೂರು ವಿಧಾನಸಭಾ ಕ್ಷೇತ್ರದ ಹಿಂದೂ ಸಂಘಟನೆಗಳ ಮತ್ತು ಪಕ್ಷದ ಯುವಕರಲ್ಲಿ ಹಲವರು ಹೆಗ್ಡೆ ಅನುಯಾಯಿಗಳಾಗಿದ್ದಾರೆ. ಬೈಂದೂರು ಕ್ಷೇತ್ರದಲ್ಲಿ ತನ್ನ ವರ್ಚಸ್ಸನ್ನು ಬಳಸಿ ಬಿಜೆಪಿ ಕಾರ್ಯಕರ್ತರು ಮತ್ತು ಜನಸಾಮಾನ್ಯರ ಕೆಲಸಗಳನ್ನು ಹೆಗ್ಡೆ ಮಾಡಿಸಿಕೊಡುತ್ತಿದ್ದಾರೆ.

ಸುಕುಮಾರ ಶೆಟ್ಟರಿಗೆ ಟಿಕೆಟ್ ತಪ್ಪಿಸಿ ಹೆಗ್ಡೆಗೆ ಟಿಕೆಟ್ ಕೊಡಿಸಬೇಕೆಂದು ಬೈಂದೂರಿನ ಬಿಜೆಪಿಯ ಒಂದು ಬಣ ಶತಾಯಗತಾಯ ಪ್ರಯತ್ನಿಸಿದೆ. ಬೈಂದೂರಿನಲ್ಲಿ ಎಲ್ಲೆ ಹೋದರೂ, ಯಾವುದೇ ಸಭೆ ಸಮಾರಂಭ, ಉತ್ಸವಗಳು ಇದ್ದಲ್ಲಿ ಒಂದು ಬದಿಯಲ್ಲಿ ಸುಕುಮಾರ ಶೆಟ್ಟರ ಬ್ಯಾನರ್, ಕಟೌಟ್, ಫ್ಲೆಕ್ಸ್‌ಗಳಿದ್ದರೆ ಇನ್ನೊಂದು ಕಡೆ ಜಯಪ್ರಕಾಶ ಹೆಗ್ಡೆಯವರ ಫ್ಲೆಕ್ಸ್‌ಗಳು ಕಂಡುಬರುವುದು ಸಾಮಾನ್ಯವಾಗಿದೆ. ಇವರಿಬ್ಬರ ನಡುವಿನ ಪೈಪೋಟಿಗೆ ಇದೇ ಸಾಕ್ಷಿ ಸಾಕು. www.karavalikarnataka.com

ಹೆಗ್ಡೆ ಕುರಿತು ಇರುವ ಒಂದು ಅಪಾವದವೆಂದರೆ ಅವರು ಬೈಂದೂರಿಗೆ ಹೊರಗಿನವರು. ಮತ್ತು ಸುಕುಮಾರ ಶೆಟ್ಟಿ ಕಟ್ಟಿ ಬೆಳೆಸಿದ ಬಿಜೆಪಿಯ ಪಾಳಯಕ್ಕೆ ಲಗ್ಗೆ ಇಟ್ಟು ಸುಕುಮಾರ ಶೆಟ್ಟರ ಪ್ರಭಾವ ಕುಗ್ಗಿಸಲು ಯತ್ನಿಸಿದ್ದಾರೆ ಎಂಬುದು.

ಹೆಗ್ಡೆ ಜೊತೆಗೆ ಬಿಜೆಪಿಯ ಒಂದು ಬಣ ಇದ್ದರೂ ಹೆಚ್ಚಿನ ಪದಾಧಿಕಾರಿಗಳು, ಕಾರ್ಯಕರ್ತರು ಸುಕುಮಾರ ಶೆಟ್ಟರ ಬೆಂಬಲಕ್ಕೆ ನಿಂತಿದ್ದಾರೆ. ಸುಕುಮಾರ ಶೆಟ್ಟಿ ಯಡಿಯೂರಪ್ಪನ ಆಪ್ತವಲಯದಲ್ಲಿ ಗುರುತಿಸಿಕೊಂಡವರೂ ಹೌದು. ಈಗಾಗಲೇ ಸುಕುಮಾರ ಶೆಟ್ಟರಿಗೆ ಬೈಂದೂರು ಬಿಜೆಪಿಯಿಂದ ಟಿಕೆಟ್ ಸಿಗುವುದು ಖಚಿತ ಎಂಬ ಸುದ್ದಿಯೂ ಇದೆ. ಹೀಗಾಗಿ ಇಲ್ಲಿಯೂ ಜಯಪ್ರಕಾಶ ಹೆಗ್ಡೆಗೆ ಬಿಜೆಪಿ ಟಿಕೆಟ್ ಸಿಗುವುದಿಲ್ಲ ಎಂಬುದು ಗ್ಯಾರಂಟಿ.

ಬೆಂಬಲಿಗರು ಬಿಜೆಪಿ ಎಂಬ ಖೆಡ್ಡಾಕ್ಕೆ ನೂಕಿದರೆ?
ಜಯಪ್ರಕಾಶ ಹೆಗ್ಡೆ ಬಿಜೆಪಿಗೆ ಸೇರಿದಾಗ ಅಚ್ಚರಿಪಟ್ಟವರು, ವಿರೋಧಿಸಿದವರು ಹಲವರು. ತನ್ನ ಬೆಂಬಲಿಗರು ಹೇಳಿದ ಕಡೆ ಹೋಗುತ್ತೇನೆ ಎಂದು ಹೇಳುತ್ತಿದ್ದ ಹೆಗ್ಡೆ ಕೊನೆಗೂ ಬಿಜೆಪಿ ಸೇರಿದರು. ಆದರೆ ಬಿಜೆಪಿಗೆ ಸೇರಿದ್ದು ಅವರ ರಾಜಕೀಯ ಬದುಕಿನಲ್ಲಿ ಒಂದು ದೊಡ್ಡ ಕಪ್ಪು ಚುಕ್ಕೆ ಎಂಬುದು ಅವರನ್ನು ಮೆಚ್ಚುತ್ತಿದ್ದ ಹಲವರ ಅಭಿಪ್ರಾಯ.

ಅರವತ್ತರ ಆಸುಪಾಸಿನಲ್ಲಿರುವ ಹೆಗ್ಡೆ ತಮ್ಮ ರಾಜಕೀಯ ಬದುಕಿನ ಒಂದು ಮಹತ್ತರ ಘಟದಲ್ಲಿ ಹೀಗೆ ಬಿಜೆಪಿ ಸೇರಿ ತಮ್ಮ ವ್ಯಕ್ತಿತ್ವದ ವರ್ಚಸ್ಸಿಗೆ ಧಕ್ಕೆ ತಂದುಕೊಂಡರು ಎಂದೂ ಅವರನ್ನು ಬಲ್ಲವರು ಹೇಳುತ್ತಿದ್ದರು. ಹೆಗ್ಡೆ ಜೊತೆಗಿದ್ದ ಕೆಲ ಪ್ರಭಾವಿ ಮುಖಂಡರುಗಳು ತಮ್ಮ ಲಾಭಕ್ಕಾಗಿ ಹೆಗ್ಡೆಯವರನ್ನು ಬಿಜೆಪಿ ಎಂಬ ಖೆಡ್ಡಾಕ್ಕೆ ದೂಡಿದರು ಎಂಬ ಆರೋಪಗಳೂ ಕೇಳಿಬಂದಿದ್ದವು.

ಬಿಜೆಪಿ ಸೇರಿ ಹೆಗ್ಡೆ ರಾಜಕೀಯವಾಗಿ ಕಳೆದು ಹೋಗುತ್ತಾರೆ ಎಂದು ವಿಮರ್ಶೆಗಳು ಅವರ ಅಭಿಮಾನಿಗಳಿಂದಲೇ ಶುರುವಾಗಿತ್ತು. ಇದೀಗ ಬಿಜೆಪಿಯಲ್ಲಿ ಅತಂತ್ರರಾಗಿರುವ ಹೆಗ್ಡೆ ಅತ್ತ ಬೈಂದೂರಿನಲ್ಲೂ ಸಲ್ಲದೆ ಇತ್ತ ಕುಂದಾಪುರದಲ್ಲೂ ಟಿಕೆಟ್ ಇಲ್ಲದೆ ತಾವು ಬಿಜೆಪಿಯಲ್ಲಿ ಮಾಡಿದ ಸಂಘಟನೆ, ಶ್ರಮಗಳಿಗೆ ಪ್ರತಿಫಲವಿಲ್ಲದೆ ಕೂರುವ ಪರಿಸ್ಥಿತಿ ಹೆಗ್ಡೆಯವರಿಗೆ ಸನ್ನಿಹಿತವಾಗುತ್ತಿದೆ. www.karavalikarnataka.com

ಕಾಂಗ್ರೆಸ್‌ನಲ್ಲಿ ಮುಖಂಡರು ಕಡೆಗಣಿಸಿದರೂ ಕಾರ್ಯಕರ್ತರ ಪಡೆ ಹೆಗ್ಡೆ ಬೆಂಬಲಕ್ಕೆ ಇತ್ತು. ಸ್ವಲ್ಪ ತಾಳ್ಮೆ ವಹಿಸಿ ಕಾಂಗ್ರೆಸ್‌ನಲ್ಲೆ ಇದ್ದರೆ ಹೆಗ್ಡೆ ಇನ್ನೂ ಉನ್ನತ ಸ್ಥಾನಗಳಿಗೆ ತಲುಪುತ್ತಿದ್ದರು ಎಂದು ಕಾಂಗ್ರೆಸ್‌ನವರು ಆಗಾಗ ಹೇಳುತ್ತಾರೆ.

ಬಿಜೆಪಿ ಸೇರಿದರೂ ಹೆಗ್ಡೆ ಅಲ್ಲಿ ಹೆಗ್ಡೆಯವರ ಪ್ರಭಾವ, ವರ್ಚಸ್ಸು, ಅನುಭವ ಬಿಜೆಪಿಗೆ ಬೇಕಾಗಿದೆ ಆದರೆ ಅವರಿಗೆ ತಕ್ಕ ಸ್ಥಾನಮಾನ ಸಿಗುತ್ತಿಲ್ಲ ಎಂದೂ ಬಿಜೆಪಿ ಕಾರ್ಯಕರ್ತರೆ ಹೇಳುತ್ತಾರೆ. ಕಾಂಗ್ರೆಸ್‌ನಲ್ಲಿ ಉಸಿರುಗಟ್ಟುವ ವಾತಾವರಣವಿತ್ತು. ಆದರೆ ಬಿಜೆಪಿಯಲ್ಲಿ ಉಸಿರಾಡುವುದೆ ಹೆಗ್ಡೆಗೆ ಕಷ್ಟವಾದಂತಿದೆ.

ಹೆಗ್ಡೆ ಈ ವಿಧಾನಸಭಾ ಚುನಾವಣೆಯ ಬಳಿಕ ಯಾವ ನಿರ್ಣಯ ಕೈಗೊಳ್ಳುತ್ತಾರೆ? ಜನರಿಗೆ ನಿಜವಾಗಿಯೂ ಬೇಕಾದ ಅನುಭವ, ಕೆಲಸ ಮಾಡುವ ಬದ್ದತೆ, ಜನಪರ ಕಾಳಜಿ, ಯಾವ ಅಧಿಕಾರಿಯಿಂದಲೂ ಕೆಲಸ ಮಾಡಿಸಿಕೊಂಡು ಬರುವ ತಾಕತ್ತು, ಶ್ರದ್ಧೆ ಎಲ್ಲವೂ ಇರುವ ಜಾತ್ಯತೀತ ಮನೋಭಾವದ ಪ್ರಗತಿಪರ ಸಂಸದೀಯ ಪಟು ಜಯಪ್ರಕಾಶ ಹೆಗ್ಡೆಯವರ ರಾಜಕೀಯ ಜೀವನದ ಮುಂದಿನ ನಡೆ ಯಾವ ಕಡೆ ಎಂಬ ಕುತೂಹಲ ಕರಾವಳಿ ಅದರಲ್ಲೂ ವಿಶೇಷವಾಗಿ ಉಡುಪಿ ಜಿಲ್ಲೆಯ ಜನರದ್ದು. ಹೆಗ್ಡೆ ಮತ್ತೆ ಪುಟಿದೆದ್ದು ಬರುವರೆ? ಕಾದು ನೋಡೋಣ.

ಇದನ್ನೂ ಓದಿ:
►►ಪಕ್ಷಕ್ಕೆ 'ಹೊಸಬ' ಎಂಬ ಆಸ್ಕರ್ ಹೇಳಿಕೆಯಿಂದ ನೋವು: ಜಯಪ್ರಕಾಶ ಹೆಗ್ಡೆ:
http://bit.ly/1YNc3y2
►►ಕುಂದಾಪುರದಲ್ಲಿ ಪರಿವರ್ತನಾ ಯಾತ್ರೆ: ಬಿಜೆಪಿ ಬಣಗಳ ನಡುವೆ ಮಾರಾಮಾರಿ: http://bit.ly/2AEusqZ
►►ಕೋಟಿ-ಚೆನ್ನಯ? ಮುದಿಯಾನೆ? ಕುಂದಾಪುರ ಬಿಜೆಪಿ ಕಛೇರಿಗೆ ಮೊದಲ ಬಾರಿ ಜೆ.ಪಿ ಹೆಗ್ಡೆ: http://bit.ly/2nKa1p4
►►ಕಛೇರಿ ಉದ್ಘಾಟನೆಯಲ್ಲೂ ಭಿನ್ನಮತ: ಕೇಸರಿ ಶಾಲು ಮುಚ್ಚಿಕೊಂಡ ಜೆಪಿ: http://bit.ly/2ohfBw4
►►ಹಾಲಾಡಿ ಬಿಜೆಪಿ ಸೇರುವುದು ಜನದ್ರೋಹ: http://bit.ly/2h1lSrg
►►ಏಕತಾ ಸಮಾವೇಶದಲ್ಲಿ ಕಾಣಿಸಿಕೊಂಡ ಹಾಲಾಡಿ. ಬಿಜೆಪಿಗೆ ಮರಳಲು ಗೆಟ್ಟಿಂಗ್ ರೆಡಿ: http://bit.ly/2gAysiA
►►ಬಿಜೆಪಿಯಲ್ಲಿ ಸ್ಪೋಟಗೊಂಡ ಅಸಮಾಧಾನ: ಹಾಲಾಡಿಗೆ ಮಂಡಿಯೂರಿದ ಬಿಜೆಪಿ ಹೈಕಮಾಂಡ್: http://bit.ly/1QSpclG
►►ಕುಂದಾಪುರ ಬಿಜೆಪಿ: ಸಂಭ್ರಮಾಚರಣೆಯಲ್ಲೂ ಬಣ ರಾಜಕೀಯ: http://bit.ly/2mm5MMn
►►ಹಾಲಾಡಿ, ಹೆಗ್ಡೆ ಬೇಡ ಎಂಬ ಅಧಿಕಾರ ಯಾರಿಗೂ ಇಲ್ಲ: ಶೋಭಾ: http://bit.ly/2if1x2X
►►ಹಾಲಾಡಿ ಬೆಂಬಲಿಗರು ಕೇಳಿದ್ದಕ್ಕೆ ಟಿಕೆಟ್: ಕೋಟ: http://bit.ly/20yuyVZ

Related Tags: Jayaprakash Hegde, Political Move, BJP, Kundapur, Byndoor, BJP Ticket, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ