ಲೋಕಾಯುಕ್ತರಿಗೆ ಚೂರಿ ಹಾಕಿದವ ದೇವರಿಗೂ ಪತ್ರ ಬರೆದಿದ್ದ!

ಕರಾವಳಿ ಕರ್ನಾಟಕ ವರದಿ

ತುಮಕೂರು:
ಲೋಕಾಯುಕ್ತ ನ್ಯಾಯಮೂರ್ತಿ ವಿಶ್ಬನಾಥ ಶೆಟ್ಟಿ ಅವರಿಗೆ ಚಾಕುವಿನಿಂದ ಇರಿದಿರುವ ಜಿಲ್ಲೆಯ ತಿಪಟೂರಿನ ತೇಜ್‌ರಾಜ್ ಶರ್ಮಾ ದೇವರಿಗೂ ಪತ್ರ ಬರೆದಿದ್ದ ಸಂಗತಿ ಬೆಳಕಿಗೆ ಬಂದಿದೆ.

‘1 ಲಕ್ಷ ರೂ. ಮೊತ್ತದ ಪೀಠೋಪಕರಣಗಳ ಸರಬರಾಜು ಮಾಡಲು ಅವಕಾಶ ಮಾಡಿಕೊಡದ ಈ ಅಧಿಕಾರಿಯನ್ನು ಸುಮ್ಮನೆ ಬಿಡಬೇಡ ಚೌಡೇಶ್ವರಿ. ಶಿಕ್ಷೆ ಕೊಡು, ಶಾಪ ಕೊಡು’ ಎಂದು ತುಮಕೂರಿನ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ಅವರಿಗೆ ಬರೆದಿದ್ದ ಪತ್ರವೊಂದರಲ್ಲಿ ಅಲವತ್ತುಕೊಂಡಿದ್ದ. ಇಂಥ ಪತ್ರವನ್ನು ದೇವರಿಗೂ ಬರೆದಿದ್ದೇನೆ ಎಂದಿದ್ದ.

ಸರ್ಕಾರಿ ಕಚೇರಿಗಳಿಗೆ ಪೀಠೋಪಕರಣ ಸರಬರಾಜು ಮಾಡುತ್ತಿದ್ದ ಶರ್ಮಾ ಜಿಲ್ಲೆಯ 16 ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದ.

ಜಿಲ್ಲಾ ಪಂಚಾಯತ್ ಹಣದಲ್ಲಿ ಆಯಾ ಶಾಲೆಗಳ ಎಸ್‌ಡಿಎಂಸಿ ಮೂಲಕ ಕೊಂಡುಕೊಳ್ಳುವ ಪೀಠೋಪಕರಣಗಳ ಖರೀದಿಯಲ್ಲಿ ಅವ್ಯವಹಾರ ಆಗಿದೆ ಎಂದು ಡಿಡಿಪಿಐ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದ. ಡಿಡಿಪಿಐ ಕಚೇರಿಗೆ ಈತ ಪೂರೈಸಿದ್ದ 'ರಿವಾಲ್ವಿಂಗ್ ಚೇರ್'ಗಳಲ್ಲಿ ಒಂದು ಕುರ್ಚಿ ಕೆಲವೇ ದಿನಗಳಲ್ಲಿ ಮುರಿದಿತ್ತು.

ಮುರಿದ ಕುರ್ಚಿ ಬದಲಿಸುವಂತೆ ತೇಜ್ ಶರ್ಮನಿಗೆ ಮೊಬೈಲ್ ಕರೆ ಮಾಡಿದಾಗ ಕೆಲವೊಮ್ಮೆ ಶಾಂತವಾಗಿ ಮಾತನಾಡಿದರೆ, ಕೆಲವೊಮ್ಮೆ ಏರು ಧ್ವನಿಯಲ್ಲಿ ಕಿರಚುತ್ತಿದ್ದ ಆತ, ಒಂದು ಲಕ್ಷ ಮೌಲ್ಯದ ಪೀಠೋಪಕರಣಗಳ ಸರಬರಾಜಿಗೆ ಟೆಂಡರ್ ನೀಡಿದರೆ ಮುರಿದ ಕುರ್ಚಿ ಬದಲಾಯಿಸಿ ಕೊಡುವುದಾಗಿ ಪತ್ರ ಬರೆದಿದ್ದ. ಇದಕ್ಕೆ ಒಪ್ಪದಿರುವುದರಿಂದ ಡಿಡಿಪಿಐ ಮಂಜುನಾಥ ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದ.  ತೇಜ್ ಶರ್ಮಾ ಬರೆದಿದ್ದ ಪತ್ರ ನೋಡಿದ ಬಳಿಕ ಲೋಕಾಯುಕ್ತರು ಈ ಪ್ರಕರಣ ಕೈ ಬಿಟ್ಟಿದ್ದರು.


ಬಾಲಕಿಯರ ಬಾಲ ಮಂದಿರದಲ್ಲಿ ಮಂಚ ಖರೀದಿಗೆ ಸಂಬಂಧಿಸಿದಂತೆ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ವಿರುದ್ಧವೂ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದ. ಉಪ ಲೋಕಾಯುಕ್ತರು ತುಮಕೂರಿಗೆ ಬಂದು ದಾಖಲೆಗಳನ್ನು ಪರಿಶೀಲಿಸಿ ದೂರಿನಲ್ಲಿ ಸತ್ಯಾಂಶ ಇಲ್ಲ ಎಂದು ಪ್ರಕರಣ ಕೈಬಿಟ್ಟಿದ್ದರು. 

ಆರೋಪಿ ಶರ್ಮಾ ಕೊಠಡಿಯಲ್ಲಿ ಅನೇಕ ದೇವರ ಪಟಗಳು, ದೇವರ ಪುಸ್ತಕಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಲೋಕಾಯುಕ್ತ, ಮಾಹಿತಿ ಹಕ್ಕು ಕಾಯ್ದೆಗೆ ಸಂಬಂಧಿಸಿದ  ಪುಸ್ತಕಗಳು, ದಾಖಲೆಗಳು ಇದ್ದವು.

ಪಿಯುಸಿ ಓದಿರುವ ಶರ್ಮಾ ಗುಬ್ಬಿ–ತಿಪಟೂರು ರಸ್ತೆಯಲ್ಲಿನ ಹಳ್ಳಿಯೊಂದರಲ್ಲಿ ಕೆಲ ವರ್ಷ ಇಟ್ಟಿಗೆ ಫ್ಯಾಕ್ಟರಿ ನಡೆಸುತ್ತಿದ್ದ. ನಷ್ಟದಿಂದ ಅದನ್ನು ಮುಚ್ಚಿ ತುಮಕೂರಿನಲ್ಲಿ ಪೀಠೋಪಕರಣಗಳ ಸರಬರಾಜು ಮಾಡುತ್ತಿದ್ದ. ಯಾರೊಂದಿಗೂ ಹೆಚ್ಚು ಬೆರೆಯದ ಆತ ಇದ್ದಕ್ಕಿದ್ದಂತೆ ಉದ್ರೇಕಕಾರಿಯಾಗಿ ವರ್ತಿಸುತ್ತಿದ್ದ ಎಂದು ತಿಳಿದುಬಂದಿದೆ.

ವಿವಿಧ ಇಲಾಖೆಯ 16 ಅಧಿಕಾರಿಗಳ ವಿರುದ್ಧ ತೇಜರಾಜ್ ನೀಡಿದ್ದ ದೂರುಗಳ ಪೈಕಿ ಸಾಕ್ಷ್ಯಾಧಾರದ ಕೊರತೆ ಕಾರಣದಿಂದ ಒಂಬತ್ತು ಅಧಿಕಾರಿಗಳ ಮೇಲಿನ ಆರೋಪವನ್ನು ಲೋಕಾಯುಕ್ತರು ಮುಕ್ತಾಯಗೊಳಿಸಿದ್ದರು. ಉಳಿದ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.

ಇದನ್ನೂ ಓದಿ:
►►ಲೋಕಾಯುಕ್ತ ವಿಶ್ವನಾಥ ಶೆಟ್ಟಿಗೆ ಚೂರಿ ಇರಿತ:
http://bit.ly/2Fjc39h

Related Tags: Karnataka Lokayukta, Stabbed, Tejraj Sharma, Kannada News, Karnataka News, Karavali Karnataka, Latest Kannada News, ಕರಾವಳಿ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ