ದುಬೈ ನಗರಿಯನ್ನು ಮಂತ್ರಮುಗ್ದಗೊಳಿಸಿದ ಎಚ್‌ಎಮ್‌ಸಿ ಯುನೈಟೆಡ್ ಪೀಸ್ ಅವಾರ್ಡ್ಸ್

ಕರಾವಳಿ ಕರ್ನಾಟಕ ವಿಶೇಷ ವರದಿ

ದುಬೈ:
ನೆರೆದ ಗಣ್ಯರಿಂದ ಜಾಗತಿಕ ಸಹಬಾಳ್ವೆ, ಶಾಂತಿಯ ಸಂದೇಶಗಳು, ಸಭಿಕರ ಅದ್ಭುತ ಸ್ಪಂದನ, ವಿದೇಶದ ನೆಲದಲ್ಲಿ 'ಯಹಾಂ ಪೆ ಸಬ್ ಶಾಂತಿ ಶಾಂತಿ ಹೈ' ಮುಂತಾದ ಬಾಲಿವುಡ್, ಅರೇಬಿಕ್ ಹಾಡುಗಳಿಗೆ ಹೆಜ್ಜೆ ಹಾಕಿದ ಡ್ಯಾನ್ಸ್ ತಂಡಗಳು, ಫ್ಯಾಶನ್ ಶೋ ಹೀಗೆ ಹತ್ತು ಹಲವು ವೈವಿಧ್ಯಗಳೊಂದಿಗೆ ಮೊತ್ತ ಮೊದಲ ಎಚ್‌ಎಮ್‌ಸಿ ಯುನೈಟೆಡ್ ಇಂಟರ್‌ನ್ಯಾಶನಲ್ ಪೀಸ್ ಅವಾರ್ಡ್ಸ್ ಸಮಾರಂಭ ಅದ್ದೂರಿಯಾಗಿ ನಡೆದು ದುಬೈ ನಗರಿಯನ್ನು ಮಂತ್ರಮುಗ್ದಗೊಳಿಸಿತು.

ದುಬೈಯ ಉದಯೋನ್ಮುಖ ಉದ್ಯಮಿ ಶಕೀಲ್ ಹಸನ್ ಹೊನ್ನಾಳ ಅವರ ನೇತೃತ್ವದಲ್ಲಿ ಬ್ರಹ್ಮಾವರದಲ್ಲಿ ಹುಟ್ಟಿ ಇದೀಗ ದುಬೈಯ ನೆಲದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಶಾಂತಿಯ ಬಾವುಟ ಹಾರಿಸುತ್ತಿರುವ ಎಚ್‌ಎಮ್‌ಸಿ ಯುನೈಟೆಡ್ ಸಂಸ್ಥೆ ಪ್ರಪ್ರಥಮ ಶಾಂತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಯಶಸ್ವಿಯಾಗಿ ನೆರವೇರಿಸಿತು.

ಭಾರತ, ಪಾಕಿಸ್ತಾನ, ಯುಎಇ ಮುಂತಾದ ದೇಶಗಳ ಹಲವು ಗಣ್ಯರು, ಸಭಿಕರು ಈ ಶಾಂತಿ ಸಂದೇಶ ಸಾರಿದ ಸಮಾರಂಭಕ್ಕೆ ಸಾಕ್ಷಿಯಾಗಿ ಜಾಗತಿಕ ಸೌಹಾರ್ದದ ಆಶಯಗಳನ್ನು ಸಾಕಾರಗೊಳಿಸಲು ಪಣತೊಟ್ಟರು

ಸಭಿಕರನ್ನು ಭಾವುಕಗೊಳಿಸಿದ ಶಕೀಲ್ ಹಸನ್ ಹೊನ್ನಾಳ
ಎಚ್‌ಎಮ್‍ಸಿ ಯುನೈಟೆಡ್ ಸಂಸ್ಥೆಯ ಮೂಲಕ ಜಾಗತಿಕವಾಗಿ ಶಾಂತಿ ಸಹಬಾಳ್ವೆಯನ್ನು ಸಾರುವ ಕನಸು ಕಂಡ ಮಹತ್ವಾಕಾಂಕ್ಷಿ ಶಕೀಲ್ ಹಸನ್ ಹೊನ್ನಾಳ ಸಮಾರಂಭದಲ್ಲಿ ಆಡಿದ ಮಾತುಗಳು ಉಪಸ್ಥಿತರಿದ್ದ ಯುಎಇಯ ರಾಜಮನೆತನದ ಸದಸ್ಯರನ್ನೂ ಒಳಗೊಂಡಂತೆ ಎಲ್ಲರನ್ನೂ ಭಾವುಕಗೊಳಿಸಿದವು.

ಹಿಂದೂ-ಮುಸ್ಲಿಂ-ಕ್ರೈಸ್ತರು ಯಾರೇ ತಪ್ಪು ಮಾಡಲಿ ಆ ಆರೋಪವನ್ನು ಆಯಾ ಧರ್ಮದ ಎಲ್ಲರ ಮೇಲೂ ಹೊರಿಸುವುದು ಅತ್ಯಂತ ಹೇಯ ಕೃತ್ಯ ಎಂದ ಶಕೀಲ್ ಹಸನ್ ಜಗತ್ತಿನ ಎಲ್ಲ ಮತದ ಹೆಚ್ಚಿನ ಜನರು ಶಾಂತಿಪ್ರಿಯರಾಗಿದ್ದರೂ ಕೆಲವೇ ಕೆಲವರ ಕುಕೃತ್ಯಗಳಿಂದಾಗಿ ವಿವಿಧ ಮತಧರ್ಮಗಳ ನಡುವೆ ಭಾರತ ಸೇರಿದಂತೆ ಜಗತ್ತಿನಾದ್ಯಂತ ಅವಿಶಾಸ್ವದ ಕಂಡಕಗಳು ನಿರ್ಮಾಣವಾಗುತ್ತಿರುವ ಕುರಿತು ಶಕೀಲ್ ಕಳವಳ ವ್ಯಕ್ತಪಡಿಸಿದರು.

ತಾನು ಭಾರತದಲ್ಲಿ ಇದ್ದಾಗ ಎರಡೆರಡು ಬಾರಿ ತನಗೆ ಅಪಘಾತವಾದಾಗ ತನ್ನ ಜೀವ ರಕ್ಷಿಸಲು ರಕ್ತದಾನ ಮಾಡಿದ ವ್ಯಕ್ತಿಗಳನ್ನು ನೆನಪಿಸಿ ಭಾವುಕರಾದ ಶಕೀಲ್ ಮಾನವೀಯತೆ ಎಲ್ಲ ಧರ್ಮಗಳಿಂದ ಮಿಗಿಲಾದ ಧರ್ಮ ಎಂದು ನುಡಿದರು. ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಶಾಂತಿ, ಸಹಬಾಳ್ವೆ ಮತ್ತು ಸೌಹಾರ್ದಕ್ಕಾಗಿ ಎಚ್‌ಎಮ್‌ಸಿ ಯುನೈಟೆಡ್ ಈ ಶಾಂತಿ ಪ್ರಶಸ್ತಿಗಳನ್ನು ಪ್ರದಾನ ಮಾಡುವುದರ ಮೂಲಕ ತನ್ನ ಅಳಿಲು ಸೇವೆ ಸಲ್ಲಿಸುತ್ತಿದೆ ಎಂದು ಶಕೀಲ್ ಇದೇ ಸಂದರ್ಭದಲ್ಲಿ ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಎಚ್‌ಎಮ್‌ಸಿ ಯುನೈಟೆಡ್‌ನ ಉಪಾಧ್ಯಕ್ಷ ಖಲೀಲ್ ಕೆರಾಡಿ ಜಗತ್ತಿನಲ್ಲಿ ಶಾಂತಿ, ಸಮಾನತೆಯ ವಾತಾವರಣ ದಿನೇದಿನೆ ಹದಗೆಡುತ್ತಿದ್ದು ಇಂತಹ ಸಂದರ್ಭದಲ್ಲಿ ಎಚ್‌ಎಮ್‍ಸಿ ಯುನೈಟೆಡ್ ಮೂಲಕ ಸೌಹಾರದ ಸಂದೇಶವನ್ನು ಈ ಕಾರ್ಯಕ್ರಮದ ಮೂಲಕ ನೀಡುತ್ತಿದ್ದೇವೆ ಎಂದು ಹೇಳಿದರು.

ಧರ್ಮ ನೋಡದೆ ಸ್ನೇಹ ಬೆಳೆಸಿ: ಅಲ್ ಝರೂನಿ
ದುಬೈಯ ಪ್ರಖ್ಯಾತ ಉದ್ಯಮಪತಿ, ಗಿನ್ನೆಸ್ ದಾಖಲೆ ಬರೆದಿರುವ ಮತ್ತು ಸಮಾಜ ಸೇವೆಯ ಮೂಲಕ ಯುಎಇ ಆದ್ಯಂತ ಹೆಸರುವಾಸಿಯಾಗಿರುವ ಸುಹೈಲ್ ಮೊಹಮ್ಮದ್ ಅಲ್ ಝರೂನಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಶಾಂತಿ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಧರ್ಮ ಮುಖ್ಯವಲ್ಲ, ಮನುಷ್ಯತ್ವವೇ ಮುಖ್ಯ ಎಂದು ಸಂದೇಶ ನೀಡಿದರು. ವಿಶೇಷವಾಗಿ ಮಕ್ಕಳಿಗೆ ಧರ್ಮ ನೋಡದೆ ಸದಾ ಸ್ನೇಹ ಬೆಳೆಸಿ ಎಂದು ತಾನು ಸದಾ ಹೇಳುತ್ತಿರುತ್ತೇನೆ ಎಂದು ಅಲ್ ಝರೂನಿ ಹೇಳಿದರು.

ಮನಸೂರೆಗೊಂಡ ಡಾ. ರಾಶೀದ್ ಅಲ್ಲಿಮ್ ಮಾತುಗಳು
ಸಮಾರಂಭದಲ್ಲಿ ಉಪಸ್ಥಿತರಿದ್ದ ಶಾರ್ಜಾದ ವಿದ್ಯುತ್ ಮತ್ತು ಜಲ ಪ್ರಾಧಿಕಾರದ ಮುಖ್ಯಸ್ಥರೂ, ಯುಎಇಯ ಜ್ಞಾನ ರಾಯಭಾರಿ ಎಂದೇ ಪ್ರಸಿದ್ಧರಾಗಿರುವ ಡಾ. ರಾಶೀದ್ ಅಲ್ಲಿಮ್ ತಮ್ಮ ವಿಶಿಷ್ಟ ಶೈಲಿಯ ಭಾಷಣದ ಮೂಲಕ ಜ್ಞಾನಭಂಡಾರವನ್ನೇ ಸಭಿಕರೆದುರು ತೆರೆದಿಟ್ಟರು. ಸ್ವತಃ ಹಲವು ಕೃತಿಗಳ ಲೇಖಕರೂ ಆಗಿರುವ ಡಾ. ರಾಶೀದ್ ಜಾಗತಿಕ ಶಾಂತಿ, ಸಹಬಾಳ್ವೆ, ಸಂಗೀತ, ವಿಜ್ಞಾನ ಮುಂತಾದ ಸಮಗ್ರ ವಿಷಯಗಳ ಕುರಿತು ಮಾತನಾಡುತ್ತಾ ತಮ್ಮ ತಮ್ಮ ಕ್ಷೇತ್ರದಲ್ಲಿ ವ್ಯಕ್ತಿಗಳು ಹೇಗೆ ಯಶಸ್ವಿಯಾಗಬಹುದು, ಯಾವ ಸೂತ್ರಗಳನ್ನು ಅನುಸರಿಸಬೇಕು ಎಂದು ಮಾತನಾಡಿ ಸಭಿಕರ ಜೊತೆ ಸಂವಾದ ನಡೆಸುತ್ತಾ ಮಾತನಾಡಿದರು. ನೆರೆದ ಸಭಿಕರೆಲ್ಲ ಡಾ. ರಾಶೀದ್ ಅಲ್ಲಿಮ್ ಅವರ ಮಾತುಗಳಿಗೆ ಭಾರಿ ಕರತಾಡನದ ಮೂಲಕ ಪ್ರಶಂಸೆ ವ್ಯಕ್ತಪಡಿಸಿದರು.

ಗಣ್ಯಾತಿಗಣ್ಯರಿಗೆ, ಸಾಧಕರಿಗೆ ಶಾಂತಿ ಪ್ರಶಸ್ತಿಗಳು
ಮಂಗಳೂರಿನ ಶಾಂತಿ ಪ್ರಕಾಶನದ ಮೊಹಮ್ಮದ್ ಕುಂಞಿ, ದುಬೈಯ ಫಾರ್ಚುನ್ ಗ್ರೂಪ್ ಆಫ್ ಹೊಟೇಲ್‌ನ ಮುಖ್ಯಸ್ಥರಾದ ವಕ್ವಾಡಿ ಪ್ರವೀಣ್ ಶೆಟ್ಟಿ, ಉದ್ಯಮಿ ಹರೀಶ್ ಶೇರೆಗಾರ್, ಶಿಕ್ಷಣ ತಜ್ಞ ತುಂಬೆ ಮೊಹಿದ್ದೀನ್ ಸೇರಿದಂತೆ ಭಾರತ, ಪಾಕಿಸ್ತಾನ ಮತ್ತು ಯುಎಇಯ ಹಲವು ಸಾಧಕರಿಗೆ ಎಚ್‌ಎಮ್‌ಸಿ ಶಾಂತಿ ಪ್ರಶಸ್ತಿಗಳನ್ನು ಮತ್ತು ವಿಶೇಷ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ  ರಷ್ಯಾದ ಖ್ಯಾತ ನಟಿ ಗುಲ್‍ಬಹಾರ್, ಪಿಟ್‌ನೆಸ್ ಮೊಡೆಲ್ ಎಲೆನಾ ಮತ್ತು ಭಾರತದ ಖ್ಯಾತ ನಟ ವರುಣ್ ಪ್ರಥಿ ಉಪಸ್ಥಿತರಿದ್ದು ಸಮಾರಂಭಕ್ಕೆ ಮೆರುಗು ನೀಡಿದರು. ವರೂಣ್ ಪ್ರಥಿ ತಾನು ಸಾಗಿ ಬಂದ ಬದುಕಿನ ಹಾದಿಯನ್ನು ಸಭಿಕರ ಎದುರು ಬಿಚ್ಚಿಟ್ಟರು. ಉದ್ಯಮಿ ಹರೀಶ್ ಶೆರೇಗಾರ್ ಈ ಸಂದರ್ಭದಲ್ಲಿ ಹಾಡಿನ ಮೂಲಕ ಜನರನ್ನು ರಂಜಿಸಿದರು.

ವಾಯ್ಸ್ ಆಫ್ ಯುಎಇಯಲ್ಲಿ ವಿಜೇತರಾದ ಹಲವು ಗಾಯಕರು, ದುಬೈಯ ಹಲವು ನೃತ್ಯ ತಂಡಗಳು ಅಮೋಘ ಪ್ರದರ್ಶನ ನೀಡಿದವು. ಭಾರತದ ಬಹುಮುಖಿ ಕಲಾವಿದ ನಾಗೇಶ್ ಕುಮಾರ್ ಬಾಲಿವುಡ್‌ನ ಹಲವು ಖ್ಯಾತ ನಟರ ಅಭಿನಯ ಮಾಡಿ ಪ್ರೇಕ್ಷಕರನ್ನು ಭಾವುಕಗೊಳಿಸಿದರು.

ಕಾರ್ಯಕ್ರಮ ನಿರೂಪಣೆ ಮಾಡಿದ ಮಂಗಳೂರಿನ ಸಾಹಿಲ್ ಝಹೀರ್ ತಮ್ಮ ಅದ್ಭುತ ವಾಕ್ಚಾತುರ್ಯ, ನುಡಿಮುತ್ತುಗಳು, ಶಾಯರಿ ಮತ್ತು ಕಲೆಗಾರಿಕೆಯ ಮೂಲಕ ಇಡೀ ಕಾರ್ಯಕ್ರಮ ಅಚ್ಚುಕಟ್ಟಾಗಿ, ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಮೂಡಿಬರುವಲ್ಲಿ ಅಮೋಘ ಪಾತ್ರ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾರದು.

ಒಟ್ಟಿನಲ್ಲಿ ಹಿಂದೂ-ಮುಸ್ಲಿಮ್-ಕ್ರಿಶ್ಚಿಯನ್ ಯುನೈಟೆಡೆ ಅಥವಾ ಎಚ್‌ಎಮ್‌ಸಿ ಯುನೈಟೆಡ್ ತನ್ನ ಚೊಚ್ಚಲ ಶಾಂತಿ ಪ್ರಶಸ್ತಿ ಸಮಾರಂಭವನ್ನು ದುಬೈ ನೆಲದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಿ ಮನೆಮಾತಾಯಿತು. ನೆರೆದ ಸಭಿಕರು ಇತ್ತೀಚೆಗೆ ಇಂತಹ ಇನ್ನೊಂದು ಕಾರ್ಯಕ್ರಮ ನೋಡಿಲ್ಲ ಎಂದು ಮುಕ್ತಕಠದಿಂದ ಕಾರ್ಯಕ್ರಮ ಸಂಘಟಕರನ್ನು ಪ್ರಶಂಸಿಸುವ ಮೂಲಕ ಎಚ್‌ಎಮ್‌ಸಿ ಯುನೈಟೆಡ್ ತಂಡದ ಸದಸ್ಯರ ಶ್ರಮಕ್ಕೆ ಬೆನ್ನು ತಟ್ಟಿದರು.
ಇಂದು ಓದಿದ ಹೆಚ್ಚು ಸುದ್ದಿಗಳು
►►ಆತ್ಮಚರಿತ್ರೆಯಲ್ಲ. ಅದು ಪೂಜಾರಿಯ ಪಾಪದ ಕೊಡ: ಶಾಸಕ ಮಧು ಬಂಗಾರಪ್ಪ:
http://bit.ly/2EwB8wc
►►ಟಾರ್ಗೆಟ್ ಇಲ್ಯಾಸ್ ಹತ್ಯೆ: ಇಬ್ಬರು ಶಂಕಿತ ಆರೋಪಿಗಳ ಬಂಧನ: http://bit.ly/2BNVmjT
►►ಪತ್ನಿಯ ಕೊಲೆ: ಆರೋಪಿಗೆ ಜೀವಾವಧಿ ಶಿಕ್ಷೆ. 1.25 ಲಕ್ಷ ರೂ. ದಂಡ: http://bit.ly/2EfLhtW
►►ಮಠ, ಮಂದಿರ ಸ್ವಾಧೀನಪಡಿಸಿಕೊಳ್ಳುವ ಉದ್ದೇಶವಿಲ್ಲ: ಸಿದ್ದರಾಮಯ್ಯ: http://bit.ly/2sk4Gs0
►►ದೊಡ್ಡಪ್ಪನಿಂದಲೇ ಅತ್ಯಾಚಾರ: ಶಾಲಾ ಬಾಲಕಿಯಿಂದ ಪೊಲೀಸರಿಗೆ ದೂರು: http://bit.ly/2siwg91
►►ಕುಂದಾಪುರ: ಅರೆಬೆಂದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ. ಹತ್ಯೆ ಶಂಕೆ: http://bit.ly/2Ed0dwZ

Related Tags: HMC United, International Peace Awards, Dubai, Shakeel Hasan Honnala, Khaleeel Keradi, HMC Brahmavara, Sheck Mohammed Al Zarooni, Dr. Rashid Alleem, Sahil Zahir
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ