ಗಾಂಜಾ ಮಾಫಿಯಾಕ್ಕೆ ಬಲಿಯಾದ ಸಂತೋಷ್ ಹತ್ಯೆ ಪ್ರಕರಣ ಸಿಸಿಬಿಗೆ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಬಿಜೆಪಿ ಕಾರ್ಯಕರ್ತ ಕೆ. ಸಂತೋಷ್ (28) ಕೊಲೆ ಪ್ರಕರಣವನ್ನು ತಕ್ಷಣ ಸಿಸಿಬಿಗೆ ವರ್ಗಾಯಿಸುವುದಾಗಿ ಕಮಿಷನರ್ ಭರವಸೆ ನೀಡಿದ ಬಳಿಕ ಮೃತ ದೇಹ ಪಡೆದ ಬಿಜೆಪಿ ಕಾರ್ಯಕರ್ತರು ಹಾಗೂ ಮೃತರ ಕುಟುಂಬ ಸದಸ್ಯರು ಕಲ್ಪಳ್ಳಿ ಸ್ಮಶಾನದಲ್ಲಿ ಮೃತದೇಹದ ಅಂತ್ಯಕ್ರಿಯೆ ಮಾಡಿದರು.

ವಾಸೀಂ ತಂದೆ ಖಾದರ್ ಕಾಂಗ್ರೆಸ್ ಪಕ್ಷದ ಜೆ.ಸಿ.ನಗರ ಬ್ಲಾಕ್ ಅಧ್ಯಕ್ಷರಾಗಿರುವುದರಿಂದ ಸ್ಥಳೀಯರ ಪೊಲೀಸರ ಜತೆ ಅವರಿಗೆ ಉತ್ತಮ ಬಾಂಧವ್ಯವಿದೆ. ಆದ್ದರಿಂದ ಜೆ.ಸಿ.ನಗರ ಪೊಲೀಸರು ಪ್ರಕರಣದ ತನಿಖೆ ನಡೆಸಬಾರದು ಎಂದು ಬಿಜೆಪಿ ಕಾರ್ಯಕರ್ತರು ಹಾಗೂ ಮೃತರ ಕುಟುಂಬ ಸದಸ್ಯರು ಬೇಡಿಕೆ ಇಟ್ಟಿದ್ದರು.

ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸುತ್ತಿದ್ದೇನೆ. ಮೃತರ ಕುಟುಂಬಕ್ಕೆ ಪರಿಹಾರ ಹಾಗೂ ಪತ್ನಿಗೆ ಸರ್ಕಾರಿ ನೌಕರಿ ನೀಡಬೇಕೆಂಬ ಬೇಡಿಕೆಗಳನ್ನು ಮುಖ್ಯಮಂತ್ರಿ ಗಮನಕ್ಕೆ ತರುತ್ತೇನೆ ಎಂದು ಕಮಿಷನರ್  ಭರವಸೆ ನೀಡಿದರು.

ಚಿನ್ನಪ್ಪ ಗಾರ್ಡನ್‍ನಲ್ಲಿ ಅಘೋಷಿತ ಬಂದ್
ಜೆ.ಸಿ.ನಗರದ ಚಿನ್ನಪ್ಪಗಾರ್ಡನ್ 2ನೇ ಅಡ್ಡರಸ್ತೆ ನಿವಾಸಿ, ರಾಮಸ್ವಾಮಿಪಾಳ್ಯ ವಾರ್ಡ್‌ನಲ್ಲಿ ಬಿಜೆಪಿ ಯುವ ಮೋರ್ಚಾದಲ್ಲಿ ಗುರುತಿಸಿಕೊಂಡಿದ್ದ ಸಂತೋಷ್ ಹತ್ಯೆಯಿಂದಾಗಿ ಚಿನ್ನಪ್ಪ ಗಾರ್ಡನ್‌ನಲ್ಲಿ ಗುರುವಾರ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು. ಅಂಗಡಿಗಳು ಮುಚ್ಚಿದ್ದವು.

ಸಂತೋಷ್ ಮನೆ ಬಳಿ ಜಮಾಯಿಸಿದ್ದ ಬಿಜೆಪಿ ಮತ್ತು ಆರ್.ಎಸ್.ಎಸ್. ಕಾರ್ಯಕರ್ತರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಧರಣಿ ನಡೆಸಿದ್ದರು. ಈ ಸಂದರ್ಭ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ಎಲ್ಲ ಹಂತಕರನ್ನೂ ಬಂಧಿಸುವವರೆಗೂ ದೇಹವನ್ನು ಮುಟ್ಟುವುದಿಲ್ಲ ಎಂದು ಕುಟುಂಬ ಸದಸ್ಯರು ಪಟ್ಟು ಹಿಡಿದಿದ್ದರು. ನಾಲ್ವರು ಆರೋಪಿಗಳು ತಮ್ಮ ವಶದಲ್ಲೇ ಇರುವುದಾಗಿ ಪೊಲೀಸರು ಹೇಳಿದ ಬಳಿಕ ಶವ ಪಡೆದುಕೊಂಡರು.

ಹೆದರಿಸಲಿಕ್ಕಾಗಿ ಸ್ಕ್ರೂಡ್ರೈವರ್‌ನಿಂದ ತೊಡೆಗೆ ಇರಿದಿದ್ದನಂತೆ
ಸ್ಕ್ರೂಡ್ರೈವರ್‌ನಿಂದ ತೊಡೆಗೆ ಇರಿದಿದ್ದ ಆರೋಪಿ ವಾಸೀಂನನ್ನು ಕಂಟೋನ್ಮೆಂಟ್ ರೈಲು ನಿಲ್ದಾಣದ ಬಳಿ, ಸಂತೋಷನ ಬಾಲ್ಯ ಸ್ನೇಹಿತನೂ ಆದ ಇನ್ನೋರ್ವ ಆರೋಪಿ ಫಿಲಿಪ್ಸ್‌ನನ್ನು ಶಿವಾಜಿನಗರದಲ್ಲಿ ರಾತ್ರಿಯೇ ವಶಕ್ಕೆ ಪಡೆದಿದ್ದ ಪೊಲೀಸರು, ತಲೆಮರೆಸಿಕೊಂಡಿದ್ದ ಉಮರ್ ಹಾಗೂ ಇರ್ಫಾನ್ ಅವರನ್ನು ಬೆಳಿಗ್ಗೆ ಸೆರೆ ಹಿಡಿದಿದ್ದಾರೆ. ಆರೋಪಿಗಳನ್ನು ಸಿಸಿಬಿ ವಶಕ್ಕೆ ನೀಡಲಾಗಿದೆ.

ನನ್ನನ್ನು ಕಂಡರೆ ಭಯವಿರಲಿ ಎಂದು ತೊಡೆಗೆ ಸ್ಕ್ರೂಡ್ರೈವರ್‌ನಿಂದ ಚುಚ್ಚಿದ್ದೆ ಅಷ್ಟೇ. ಗಂಭೀರ ಹಲ್ಲೆ ನಡೆಸಿಲ್ಲ. ಸಂತೋಷ್ ಸತ್ತು ಹೋದನಾ ಎಂದು ಪೊಲೀಸ್ ವಿಚಾರಣೆ ಸಂದರ್ಭ ಆರೋಪಿ ವಾಸೀಂ ಆಶ್ಚರ್ಯ ವ್ಯಕ್ತಪಡಿಸಿದ್ದಾನೆ.

ಗಾಂಜಾ ಮಾರಾಟದ ವಿರೋಧಿಯಾಗಿದ್ದ ಸಂತೋಷ್
ಸಂತೋಷ್ ಹಾಗೂ ವಾಸೀಂ ಮಧ್ಯೆ ಹಲವು ತಿಂಗಳುಗಳಿಂದ ವೈಷಮ್ಯವಿತ್ತು. ಸಂತೋಷ ಕಬಡ್ಡಿ ತಂಡದಲ್ಲಿ ಸಕ್ರಿಯನಾಗಿದ್ದ. ಗಾಂಜಾ ಮಾರಾಟದ ಕಡು ವಿರೋಧಿಯಾಗಿದ್ದ. ಜ.29ರ ಸಂಜೆ ಬೇಕರಿ ಹತ್ತಿರ ಗಾಂಜಾ ಸೇದುತ್ತಿದ್ದ ವಾಸೀಂಗೆ ಸಂತೋಷ್ ಬೈದಿದ್ದ.

ಆ ರಾತ್ರಿಯೇ ಸ್ನೇಹಿತರೊಂದಿಗೆ ಸಂತೋಷ್ ಮನೆಗೆ ನುಗ್ಗಿದ್ದ ವಾಸೀಂ, ‘ನಿಮ್ಮ ಮಗನನ್ನು ಜೀವಂತವಾಗಿ ಬಿಡುವುದಿಲ್ಲ’ ಎಂದು ಬೆದರಿಸಿ ಹೋಗಿದ್ದ. ಸಂತೋಷ್ ಮಲಗಿದ್ದ ಕಾರಣ ಅವನಿಗೆ ವಿಷಯ ಗೊತ್ತಿರಲಿಲ್ಲ. ವಾಸೀಂ ಮನೆಗೆ ಬಂದು ಹೇಳಿದ್ದನ್ನು ಮಗನಿಗೆ ಹೇಳಿದರೆ ವೈಷಮ್ಯ ಇನ್ನಷ್ಟು ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ತಾಯಿ ಕಲಾ ಅವರು ಹೇಳಿರಲಿಲ್ಲ.

ಹತ್ತು ತಿಂಗಳ ಹಿಂದಷ್ಟೇ ಹಾಸನದ ಚೈತ್ರಾ ಜತೆ ಸಂತೋಷ್ ಮದುವೆಯಾಗಿತ್ತು. ಈಗ ಆತನ ಪತ್ನಿ ಐದು ತಿಂಗಳ ಗರ್ಭಿಣಿಯಾಗಿದ್ದಾರೆ.

ಸತ್ತ ನಂತರ ಬಿಜೆಪಿ ಕಾರ್ಯಕರ್ತನಾದನಾ?
ಬಿಬಿಎಂಪಿ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಿದ್ದ ಸಂತೋಷ್, ಸತ್ತ ಮೇಲೆ ಹೇಗೆ ಬಿಜೆಪಿ ಕಾರ್ಯಕರ್ತನಾಗುತ್ತಾನೆ? ಈಗ ಪ್ರತಿಭಟನೆ ಮಾಡುತ್ತಿರುವವರಲ್ಲಿ ಸ್ಥಳೀಯರು ಯಾರೂ ಇಲ್ಲ. ಸಂತೋಷನ ಕೊಲೆಯಲ್ಲಿ ಬಿಜೆಪಿಯವರು ಸಾವಿನ ಮನೆಯಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಚಿನ್ನಪ್ಪ ಗಾರ್ಡನ್‌ನಲ್ಲಿ ಧರ್ಮದ ವಿಚಾರವಾಗಿ ಎಂದೂ ಗಲಾಟೆ ನಡೆದಿಲ್ಲವೆಂದು ರಾಮಸ್ವಾಮಿ ವಾರ್ಡ್ ಕಾಂಗ್ರೆಸ್ ಕಾರ್ಪೊರೇಟರ್ ನೇತ್ರಾವತಿ ಅವರ ಪತಿ ಕೃಷ್ಣೇಗೌಡ ಹೇಳಿದ್ದಾರೆ.

ಇದನ್ನೂ ಓದಿ:
►►ಗಾಂಜಾ ಮಾರಾಟಕ್ಕೆ ವಿರೋಧ: ಬಿಜೆಪಿ ಕಾರ್ಯಕರ್ತನ ಕೊಲೆ:
http://bit.ly/2EuQNJZ

ಇಂದು ಓದಿದ ಹೆಚ್ಚು ಸುದ್ದಿಗಳು:
►►ಹಾಲಾಡಿ ಶ್ರೀನಿವಾಸ ಶೆಟ್ಟಿ ವಿರುದ್ದ ಅಮೃತ್ ಶೆಣೈ ವಾಗ್ದಾಳಿ
http://bit.ly/2GzJS2K
►►ಮಂಗಳೂರು ವಿಮಾನ ನಿಲ್ದಾಣ: 39 ಲಕ್ಷ ರೂ. ಚಿನ್ನ ಸಾಗಾಟ ಪತ್ತೆ: http://bit.ly/2FBGy5L
►►ಮಂಗಳೂರು: ತಟರಕ್ಷಣಾ ಪಡೆಗೆ ಗಸ್ತು ನೌಕೆ ಹಸ್ತಾಂತರ: http://bit.ly/2E3YcCa
►►ವಿಶೇಷ ಚೇತನರು ಗುರುತಿಸಲು ಅಸಾಧ್ಯವಾದ 50, 200 ರೂ. ನೋಟು: http://bit.ly/2DTyMnw
►►ಕೊಲೆಗಡುಕ ಮುಸ್ಲಿಮರು ಕಾಂಗ್ರೆಸ್ ಜೊತೆಗಿದ್ದಾರೆ: ಈಶ್ವರಪ್ಪ: http://bit.ly/2BL19CB

Related Tags: Ganja, Youth Killed, Santhosh Murder, Karnataka News, Coastal Karnataka News, Karavali News, Karavali Karnataka, Latest News, ಗಾಂಜಾ ಮಾಫಿಯಾ, ಯುವಕನ ಕೊಲೆ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ