ಅಪಹರಣಕಾರನ ಕಾಲಿಗೆ ಗುಂಡಿಕ್ಕಿ ಬಾಲಕನ ರಕ್ಷಣೆ
ಬಾಲಕನ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದ ಕೃತ್ಯದ ಸೂತ್ರಧಾರ ಮನೆ ಮಾಲಕ. ಪೊಲೀಸರ ಮೇಲೆ ಮಚ್ಚು ಬೀಸಿದ್ದ ಅಪಹರಣಕಾರ.

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಐದು ವರ್ಷದ ಬಾಲಕನನ್ನು ಅಪಹರಿಸಿ 35ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ದಿವ್ಯತೇಜ್ ಅಲಿಯಾಸ್ ಡಿಜೆ (28) ಕಾಲಿಗೆ ಕೆಂಪಾಪುರ ಅಗ್ರಹಾರ ಠಾಣೆ ಇನ್ಸ್‌ಪೆಕ್ಟರ್ ಗುಂಡಿಕ್ಕಿ ಬಾಲಕನನ್ನು ರಕ್ಷಿಸಿದ ಘಟನೆ ವರದಿಯಾಗಿದೆ. ಬಾಲಕ ಚಂದನ್‌ನನ್ನು ರಕ್ಷಿಸಿ ತಂದೆ ರಾಜೇಶ್ ಸುಪರ್ದಿಗೆ ನೀಡಲಾಗಿದೆ.

ಮಾಗಡಿ ರಸ್ತೆಯ ಮಂಜುನಾಥ ನಗರಕ್ಕೆ ಭಾನುವಾರ ಮಧ್ಯಾಹ್ನ ಕೆಂಪು ಬಣ್ಣದ ಸ್ಯಾಂಟ್ರೊ ಕಾರಿನಲ್ಲಿ ಬಂದಿದ್ದ ಮೂವರು ಅಪಹರಣಕಾರರು ಆಟವಾಡುತ್ತಿದ್ದ ಬಾಲಕ ಚಂದನ್‌ನನ್ನು ಅಪಹರಿಸಿದ್ದರು.

ಆರೋಪಿಗಳು ಕೊಮ್ಮಘಟ್ಟ ರಸ್ತೆಯ ವಿಶ್ವೇಶ್ವರಯ್ಯ ಲೇಔಟ್ ಬಳಿ ಇರುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಮಂಗಳವಾರ ನಸುಕಿನಲ್ಲಿ ಕಾರ್ಯಾಚರಣೆಗೆ ತೆರಳಿದ್ದ ಸಿಬ್ಬಂದಿ ಮೇಲೆ ಅಪಹರಣಕಾರ ದಿವ್ಯತೇಜ್ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಯತ್ನಿಸಿದಾಗ ಇನ್ಸ್‌ಪೆಕ್ಟರ್ ಮಂಜು ಆತನ ಕಾಲಿಗೆ ಗುಂಡು ಹೊಡೆದಿದ್ದಾರೆ. ಗುಂಡೇಟಿನಿಂದ ಗಾಯಗೊಂಡಿರುವ ದಿವ್ಯತೇಜ್, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ರಾಜೇಶ್ ಅವರ ಮನೆ ಮಾಲೀಕ ಅಭಿಷೇಕ್ ಕೃತ್ಯದ ಸೂತ್ರಧಾರನಾಗಿದ್ದು, ಆತನ ಸಹಚರರಾದ ದಿವ್ಯತೇಜ್, ಶ್ರೀಕಾಂತ್ ಅಲಿಯಾಸ್ ಶ್ರೀ ಹಾಗೂ ಹರ್ಷಿತ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ತಾಯಿಯ ಹುಟ್ಟುಹಬ್ಬ ಸಂಭ್ರಮದಲ್ಲಿದ್ದ ಬಾಲಕ
ಆಂಧ್ರಪ್ರದೇಶದ ರಾಜೇಶ್ ಅವರು ಕಳೆದ ಹದಿನೈದು ವರ್ಷಗಳಿಂದ ಇಲ್ಲಿ ನೆಲೆಸಿದ್ದಾರೆ. ಅವರು, ತಮ್ಮ ಮನೆ ಮಾಲೀಕರ ಟ್ರಾವೆಲ್ ಏಜೆನ್ಸಿಯಲ್ಲೇ ಕೆಲಸಕ್ಕೆ ಸೇರಿದ್ದರು. ಭಾನುವಾರ ರಾಜೇಶ್ ಪತ್ನಿ ಮಾಲಾ ಅವರ ಹುಟ್ಟುಹಬ್ಬವಿತ್ತು.

ರಾಜೇಶ್ ಮಧ್ಯಾಹ್ನವೇ ಮನೆಗೆ ಬಂದಿದ್ದು, ಪತ್ನಿ ಮತ್ತು ಮಗನನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಲು ಸಿದ್ದತೆ ನಡೆಸಿದ್ದರು. ಹೊಸ ಬಟ್ಟೆ ತೊಟ್ಟು ಪಕ್ಕದ ಮನೆ ಮಕ್ಕಳೊಡನೆ ಆಟವಾಡುತ್ತಿದ್ದ ಬಾಲಕ ಚಂದನ್‌ನನ್ನು ಅಪಹರಿಸಲಾಗಿತ್ತು.

35 ಲಕ್ಷಕ್ಕೆ ಡಿಮಾಂಡ್
ರಾತ್ರಿ 10 ಗಂಟೆಗೆ ರಾಜೇಶ್ ಅವರ ಮೊಬೈಲ್‌ಗೆ ಕರೆ ಮಾಡಿದ್ದ ದಿವ್ಯತೇ‍ಜ್, ನಿನ್ನ ಮಗ ಚಂದನ್ ಜೀವಂತವಾಗಿ ಬೇಕೆಂದರೆ 35 ಲಕ್ಷ ಕೊವು ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದ.

ಅರ್ಧಗಂಟೆ ಬಳಿಕ ಪುನ: ಕರೆ ಮಾಡಿದಾಗ, ಪತ್ನಿಯ ಒಡವೆ ಮಾರಿ ಇಪ್ಪತ್ತು ಲಕ್ಷ ಹೊಂದಿಸುವುದಾಗಿ ರಾಜೇಶ್ ತಿಳಿಸಿದ್ದರು. ಪೊಲೀಸರಿಗೆ ವಿಷಯ ತಿಳಿಸಿದರೆ ಮಗನ ಕುತ್ತಿಗೆ ಸೀಳಿ ಬಿಡುವೆ ಎಂದು ಬೆದರಿಕೆ ಒಡ್ಡಿದ್ದ ದಿವ್ಯತೇಜ್.

ಆರಾಮವಾಗಿ ಮಲಗಿದ್ದೀರಲ್ಲ? ಮೊಮ್ಮಗನ ಕಾಳಜಿ ಇಲ್ವಾ?
‘ಏನ್ ವಿಜಯಮ್ಮ, ಮೊಮ್ಮಗನ ಬಗ್ಗೆ ನಿಮಗೆ ಕಾಳಜಿಯೇ ಇಲ್ವ. ಕೋಣೆಯ ಲೈಟ್ ಆಫ್ ಮಾಡಿ ಆರಾಮಾಗಿ ಮಲಗಿದ್ದೀರಲ್ಲ? ಬೇಗ ಹಣ ಹೊಂದಿಸಿ, ಬಿಡಿಸಿಕೊಂಡು ಹೋಗೋದಲ್ವ. ಹಣ ಕೈಸೇರದಿದ್ದರೆ ಮೊಮ್ಮಗನ ಶವ ಪಾರ್ಸಲ್‌ನಲ್ಲಿ ಬರುತ್ತದೆ’ ಎಂದು ರಾತ್ರಿ 1 ಗಂಟೆಗೆ ಅಭಿಷೇಕ್ ಕರೆ ಮಾಡಿ ಹೇಳಿದ್ದ. ಕೋಣೆಯ ಲೈಟ್ ಆಫ್ ಆದ ಬಗ್ಗೆ ಫೋನ್‌ನಲ್ಲಿ ಹೇಳಿದ್ದರಿಂದ ಇದು ಸ್ಥಳೀಯರ ಕೃತ್ಯವೇ ಎಂಬುದು ಖಚಿತವಾಗಿತ್ತು.

ಕೃತ್ಯದ ಸೂತ್ರಧಾರ ಪೊಲೀಸ್ ಬಲೆಯಲ್ಲಿ
ಸೋಮವಾರ ಬೆಳಿಗ್ಗೆ ಪೊಲೀಸರು ಮೊಬೈಲ್ ಕರೆ ಆಧಾರದಲ್ಲಿ ಮನೆ ಮಾಲಕ ಅಭಿಷೇಕ್ ವಿಚಾರಣೆ ನಡೆಸಿದಾಗ ಆತ ಬಾಯ್ಬಿಟ್ಟ ಮಾಹಿತಿ ಆಧಾರದಲ್ಲಿ ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.

ಅಭಿಷೇಕ್ ಪೊಲೀಸ್ ವಶದಲ್ಲಿದ್ದ ಸಂಗತಿ ತಿಳಿಯದ ಅಪಹರಣಕಾರರಾದ ದಿವ್ಯತೇಜ್ ಮತ್ತು ಸಹಚರರು ಆತನಿಗೆ ನಿರಂತರ ಕರೆ ಮಾಡುತ್ತಿದ್ದದ್ದು ಪೊಲೀಸ್ ತನಿಖೆ ಸುಗಮವಾಗಿ ಸಾಗಲು ಸಹಕಾರಿಯಾಗಿತ್ತು.

ಸೋಮವಾರ ರಾತ್ರಿ 11 ಗಂಟೆಗೆ ರಾಜೇಶ್‌ಗೆ ಕರೆ ಮಾಡಿದ್ದ ದಿವ್ಯತೇಜ್, 20 ಲಕ್ಷ ತೆಗೆದುಕೊಂಡು ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಬರುವಂತೆ ಹೇಳಿದ್ದ.

ಮೂತ್ರ ವಿಸರ್ಜಿಸಲು ಇಳಿದಿದ್ದ ಅಪಹರಣಕಾರರು 
ಕೊಮ್ಮಘಟ್ಟ ರಸ್ತೆಯ ವಿಶ್ವೇಶ್ವರಲೇಔಟ್‌ನಲ್ಲಿ ಕೆಂಪು ಬಣ್ಣದ ಸ್ಯಾಂಟ್ರೊ ಕಾರು ನಿಂತಿರುವುದನ್ನು ಮಫ್ತಿಯಲ್ಲಿ ಕಾರ್ಯಾಚರಣೆಗಿಳಿದ 22 ಪೊಲೀಸರ ತಂಡ ನೋಡಿದೆ. ಬಾಲಕ ಚಂದನ್ ಕಾರಿನಲ್ಲೇ ಇದ್ದ. ಅಪಹರಣಕಾರರು ಮೂತ್ರ ವಿಸರ್ಜಿಸಲು ಕಾರಿನಿಂದ ಕೆಳಗಿಳಿದ ಸಂದರ್ಭ ಪೊಲೀಸರು ಕೂಡಲೇ ಅವರನ್ನು ಸುತ್ತುವರಿದಿದ್ದರು.

ಈ ಸಂದರ್ಭ ಆರೋಪಿ ದಿವ್ಯತೇಜ್, ಮಚ್ಚಿನಿಂದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲು ಯತ್ನಿಸಿದಾಗ ಇನ್ಸ್‌ಪೆಕ್ಟರ್ ಆತನ ಕಾಲಿಗೆ ಗುಂಡು ಹೊಡೆದಿದ್ದಾರೆ.

26 ಎಕರೆ ಜಮೀನು 80 ಲಕ್ಷಕ್ಕೆ ಮಾರಿದ್ದರು
ರಾಜೇಶ್ ಅನಂತಪುರದಲ್ಲಿದ್ದ ತಮ್ಮ 26 ಎಕರೆ ಜಮೀನನ್ನು ಇತ್ತೀಚೆಗೆ 80 ಲಕ್ಷಕ್ಕೆ ಮಾರಿದ್ದರು. ಜ.16ರಂದು ಮನೆ ಮಾಲಕ ಅಭಿಷೇಕ್ ಜೊತೆ ಅನಂತಪುರಕ್ಕೆ ಹೋಗಿದ್ದ ಅವರು, ಆಸ್ತಿ ಖರೀದಿಸಿದ ವ್ಯಕ್ತಿಯಿಂದ ಮೊದಲ ಕಂತಿನಲ್ಲಿ 20 ಲಕ್ಷ ಪಡೆದಿರುವುದನ್ನು ನೋಡಿ ಅವರ ಮಗನ ಅಪಹರಣಕ್ಕೆ ಸಂಚು ರೂಪಿಸಲಾಗಿತ್ತು ಎಂಬ ಸಂಗತಿ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.

ತಾಯಿ, ತಂಗಿಯ 40 ಲಕ್ಷ ನುಂಗಿದ ಮೇಲೆ…
ತಾಯಿ ಹಾಗೂ ತಂಗಿಯ ಬ್ಯಾಂಕ್ ಖಾತೆಯಲ್ಲಿದ್ದ ನಲವತ್ತು ಲಕ್ಷ ರೂ.ಯನ್ನು ಅವರಿಗೆ ತಿಳಿಯದಂತೆ ಬಳಸಿ ಸಿನೆಮಾ ನಿರ್ಮಾಣಕ್ಕೆ ಇಳಿದು, ಸಿನೆಮಾ ನಿರ್ಮಾಣ ಅರ್ಧಕ್ಕೆ ನಿಂತು ಆರ್ಥಿಕ ತೊಂದರೆಯಲ್ಲಿದ್ದೆ. ಕುಟುಂಬವೇ ಬೀದಿಗೆ ಬೀಳುವ ಹಂತದಲ್ಲಿ ರಾಜೇಶ್ ಅವರ ಮಗನನ್ನು ಅಪಹರಿಸಿ ಅವರ ಹಣ ದೋಚಲು ಯತ್ನಿಸಿದೆ ಎಂದು ಆರೋಪಿ ಕೃತ್ಯಕ್ಕೆ ಕಾರಣ ಏನೆಂದು ತಿಳಿಸಿದ್ದಾನೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಕಿತ್ತಳೆ ಪಾಸ್‌ಪೋರ್ಟ್: ಹಿಂಜರಿದ ಕೇಂದ್ರ ಸರಕಾರ:
http://bit.ly/2DOvQbH
►►ರಾಜೀನಾಮೆ ನೀಡಲು ತೆರಳಿದ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ: http://bit.ly/2DQ2IF1
►►ಪ್ರಕಾಶ್ ಪಡುಕೋಣೆಗೆ 'ಜೀವಮಾನ ಶ್ರೇಷ್ಠ ಸಾಧನೆ' ಪ್ರಶಸ್ತಿ: http://bit.ly/2Fv9soq
►►ಕೊರಗಜ್ಜನ ಪ್ರಸಾದ ಸ್ವೀಕಾರ: ಸಚಿವ ಖಾದರ್ ವಿರುದ್ಧ ಮೂಲಭೂತವಾದಿಗಳ ಸಿಟ್ಟು: http://bit.ly/2BD6FXT
►►ಅಂಡರ್ 19 ವಿಶ್ವಕಪ್. ಪಾಕಿಸ್ತಾನದ ವಿರುದ್ಧ ಭರ್ಜರಿ ಜಯ: ಫೈನಲ್‌ಗೆ ಭಾರತ: http://bit.ly/2Gv5FJ4
►►ಗೌರಿಯನ್ನು ನಾವು ಸಮಾಧಿ ಮಾಡಿಲ್ಲ, ಬಿತ್ತಿದ್ದೇವೆ: 'ಗೌರಿ ದಿನ'ದಲ್ಲಿ ಪ್ರಕಾಶ್ ರೈ: http://bit.ly/2EhavIV

Related Tags: Kidnap Case, Kempapur Police, Magadi Road, Kannada News, Karnataka News, Karavali Karnataka, Latest Kannada News, ಮನೆ ಮಾಲಕ, ಬಾಲಕ ಅಪಹರಣ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ