ಎಚ್‌ಎಮ್‌ಸಿ ಯುನೈಟೆಡ್ ಶಾಂತಿ ಪ್ರಶಸ್ತಿ 2018. ಸಜ್ಜುಗೊಳ್ಳುತ್ತಿದೆ ದುಬೈ
ಕನ್ನಡ ಕರಾವಳಿಯ ಬ್ರಹ್ಮಾವರ ಸಮೀಪದ ಹೊನ್ನಾಳದ ಶಕೀಲ್ ಹಸನ್ ಅವರ ಸತತ ಪರಿಶ್ರಮ ಮತ್ತು ಕನಸಿನ ಫಲ

ಕರಾವಳಿ ಕರ್ನಾಟಕ ವರದಿ

ದುಬೈ:
ಸೌಹಾರ್ದ ಸಾಮರಸ್ಯ ಬಯಸುವ ಕರಾವಳಿಯ ಯುವಕನ ಮಹೋನ್ನತ ಕನಸೊಂದು ಅಂತರಾಷ್ಟ್ರೀಯ ಮಟ್ಟದಲ್ಲಿ ನನಸಾಗುತ್ತಿದ್ದು ದುಬೈ ನಗರಿ ಅಂತರಾಷ್ಟ್ರೀಯ ಶಾಂತಿ ಪ್ರಶಸ್ತಿ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿದೆ.

ಕರ್ನಾಟಕದ ಕರಾವಳಿಯ ಬ್ರಹ್ಮಾವರದಲ್ಲಿ ಶಾಂತಿ-ಸಹಬಾಳ್ವೆಯ ಆಶಯಗಳನ್ನು ಇಟ್ಟುಕೊಂಡು ಸ್ಥಾಪನೆಯಾದ ಹಿಂದೂ-ಮುಸ್ಲಿಮ್-ಕ್ರಿಶ್ಚಿಯನ್ (ಎಚ್‌ಎಮ್‌ಸಿ) ಯುನೈಟೆಡ್ ಎಂಬ ಸಣ್ಣ ಸಂಘಟನೆಯೊಂದು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ನಿಂತು ಶಾಂತಿ ಪ್ರಶಸ್ತಿಗಳನ್ನು ಜಗತ್ತಿನ ಹಲವು ದೇಶಗಳ ಸಾಧಕರಿಗೆ ನೀಡಿ ಗೌರವಿಸುವ ಬೃಹತ್ ಯೋಜನೆ ಹಮ್ಮಿಕೊಂಡಿದೆ.

ಫೆಬ್ರವರಿ 1ರಂದು ಈ ಯೋಜನೆ ಸಾಕಾರಗೊಳ್ಳಲಿದ್ದು ಶಾಂತಿ, ಸಹಬಾಳ್ವೆ, ಸೌಹಾರ್ದಕ್ಕಾಗಿ ಶ್ರಮಿಸಿದ ಹಲವಾರು ಸಾಧಕರನ್ನು, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾ ಸಾಮಾಜಿಕ ಬದಲಾವಣೆ ಮತ್ತು ಬೆಳವಣಿಗೆಗೆ ಕಾರಣರಾದ ವ್ಯಕ್ತಿಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಇಂತಹ ಮಹೋನ್ನತ ಕಾರ್ಯದ ಹಿಂದಿರುವುದು ಕರಾವಳಿಯ ಓರ್ವ ಯುವ ಉದ್ಯಮಿ ಎಂದರೆ ನೀವು ನಂಬಲೇಬೇಕು. ಹೌದು, ಅವರು ಬ್ರಹ್ಮಾವರ ಸಮೀಪದ ಹೊನ್ನಾಳದ ಶಕೀಲ್ ಹಸನ್.

2011ರಲ್ಲಿ ಬ್ರಹ್ಮಾವರದಲ್ಲಿ ಸ್ಥಾಪನೆಯಾದ ಎಚ್‌ಎಮ್‌ಸಿ ಯುನೈಟೆಡ್ ಆಗ ಒಂದು ಕ್ರಿಕೆಟ್ ಪಂದ್ಯವನ್ನು ಆಯೋಜಿಸಿತ್ತು. ಕರಾವಳಿಯಲ್ಲಿ ದೊಡ್ಡ ಸುದ್ದಿ ಮಾಡಿದ್ದ ಈ ಪಂದ್ಯಾಟವೂ ಶಾಂತಿ-ಸೌಹಾರ್ದದ ಆಶಯಗಳನ್ನು ಕ್ರೀಡೆಯ ಮೂಲಕ ಬಿತ್ತರಿಸುವ ಒಂದು ಪ್ರಯತ್ನವಾಗಿತ್ತು. ಅದು ಸಾಕಷ್ಟು ಮಟ್ಟಿಗೆ ಯಶಸ್ವಿಯೂ ಆಯ್ತು. ಹೆಸರೇ ಹೇಳುವಂತೆ ಈ ಸಂಸ್ಥೆಯಲ್ಲಿ ಹಿಂದೂ, ಮುಸ್ಲಿಮ್ ಮತ್ತು ಕ್ರೈಸ್ತರೆಲ್ಲರೂ ಒಂದಾಗಿ ಕೆಲಸ ಮಾಡಿದ್ದರು. ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಈ ಪಂದ್ಯಾಟಕೆ ಸಾಕ್ಷಿಯಾಗಿದ್ದರು.

ಎಚ್‌ಎಮ್‍ಸಿ ಯುನೈಡೆಟ್ ಸ್ಥಾಪಕ ಮತ್ತು ಸೌಹಾರ್ದದ ಕನಸುಗಾರ ಶಕೀಲ್ ಹಸನ್ ಹೊನ್ನಾಳಕಾರ್ಯಕ್ರಮಕ್ಕೆ ಸಾಥ್ ನೀಡುತ್ತಿರುವ ದುಬೈ ಉದ್ಯಮಿ ಸುಹೈಲ್ ಮೊಹಮ್ಮದ್ ಅಲ್ ಝರೂನಿ

ಈ ಕ್ರಿಕೆಟ್ ಪಂದ್ಯಾಟದ ಯಶಸ್ಸಿನ ಗುರುತು ಸಂಸ್ಥೆಯ ಸಂಸ್ಥಾಪಕರಾದ ಶಕೀಲ್ ಹೊನ್ನಾಳ ಅವರಿಗೆ ಸೌಹಾರ್ದ ಸ್ಥಾಪಿಸುವ ಹೊಸ ಸಾಧ್ಯೆತಗಳತ್ತ ಒಳನೋಟವೊಂದು ಸಿಕ್ಕಿಬಿಟ್ಟಿತು. ಅದರ ಮುಂದಿನ ಭಾಗವೇ ಈಗ ದುಬೈಯಲ್ಲಿ ಆಯೋಜಿಸಲಾಗಿರುವ ಎಚ್‌ಎಮ್‌ಸಿ ಯುನೈಟೆಡ್ ಶಾಂತಿ ಪ್ರಶಸ್ತಿ ಪ್ರದಾನ ಸಮಾರಂಭ.

ಶಕೀಲ್ ಹಸನ್ ಅವರಿಗೆ ಕರಾವಳಿಯಲ್ಲಿ ಹಿಂದಿನಂತಹ ಸೌಹಾರ್ದ ವಾತಾವರಣವಿಲ್ಲ ಎಂಬ ಬಗ್ಗೆ ತುಂಬಾ ಖೇದವಿದೆ. ತಮ್ಮ ಬಾಲ್ಯದಲ್ಲಿ ಇದ್ದ ಶಾಂತಿ-ಸಹಬಾಳ್ವೆ, ಹಿಂದೂ-ಮುಸ್ಲಿ-ಕ್ರೈಸ್ತರ ನಡುವೆ ಇದ್ದ ಕೊಡುಕೊಳ್ಳುವಿಕೆ ಮತ್ತು ಸೌಹಾರ್ದದ ವಾತಾವರಣ ತನ್ನ ಹುಟ್ಟೂರು ಹೊನ್ನಾಳದಲ್ಲಿ ಇಂದಿಗೂ ಹಾಗೆಯೆ ಇದ್ದರೂ ಒಟ್ಟು ಕರಾವಳಿಯಲ್ಲಿ ಆ ವಾತಾವರಣವೀಗ ಕಾಣಿಸುತ್ತಿಲ್ಲ ಎಂಬುದು ಶಕೀಲ್ ಅವರಿಗೂ ಕಂಡಿದೆ.

ಹೀಗಾಗಿ ಕರಾವಳಿಯ ಜೊತೆಗೆ ಜಾಗತಿಕವಾಗಿಯೂ ಹಿಂದೂ-ಮುಸ್ಲಿಮ್-ಕ್ರೈಸ್ತರ ನಡುವೆ ಕೆಲವೇ ಕೆಲವರು ಅಸಮಾಧಾನ, ಅಶಾಂತಿಯ ಕಿಚ್ಚು ಹಚ್ಚಲು ಯತ್ನಿಸುತ್ತಿದ್ದು ಒಟ್ಟಾರೆಯಾಗಿ ಜಗತ್ತಿನ ಎಲ್ಲ ಧರ್ಮ, ಜಾತಿ, ಮತಗಳ ಜನರ ನಡುವೆ ಸಂಬಂಧಗಳು ಗಾಢವಾಗಬೇಕು ಎಂಬುದೂ ಶಕೀಲ್ ಅವರ ಆಶಯವಾಗಿದೆ.

ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಸುತ್ತಿರುವ ಶಕೀಲ್ ಹಸನ್ ಈಗ ದುಬೈಯಲ್ಲಿಯೇ ಉದ್ಯಮ ನಡೆಸುತ್ತಿದು ಅಲ್ಲಿಂದಲೇ ಈ ವರ್ಷ ಅಂತರಾಷ್ಟ್ರೀಯ ಶಾಂತಿ ಪ್ರಶಸ್ತಿಗೆ ಚಾಲನೆ ನೀಡಲಿದ್ದಾರೆ. ಶಕೀಲ್ ಅವರ ಜೊತೆ ಈ ಸಂಸ್ಥೆಯಲ್ಲಿ ಭಾರತ ಮತ್ತು ವಿಶ್ವದ ವಿವಿಧ ದೇಶಗಳ ಜನರು ಸಕ್ರಿಯರಾಗಿ ಈ ಕಾರ್ಯಕ್ರಮಕ್ಕಾಗಿ ಶ್ರಮಿಸುತ್ತಿದ್ದಾರೆ.

ಮತ ಧರ್ಮ ಮೀರಿದ ರಕ್ತದಾನದ ಪ್ರೇರಣೆ
ಶಕೀಲ್ ಅವರ ಜೀವನದ ಕೆಲ ಅನುಭವಗಳೆ ಎಚ್‌ಎಮ್‌ಸಿ ಯುನೈಟೆಡ್ ಸ್ಥಾಪಿಸಲು ಮತ್ತು ತನ್ಮೂಲಕ ಸಾಧಕರಿಗೆ ಅಂತರಾಷ್ಟ್ರೀಯ ಶಾಂತಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲು ಪ್ರೇರಣೆಯಾಗಿದೆ ಎನ್ನುವುದು ಅವರೇ ಹೇಳುವ ಮಾತು. ಕೆಲ ವರ್ಷಗಳ ಹಿಂದೆ ಶಕೀಲ್ ಹಸನ್ ಅವರಿಗೆ ವಾಹನ ಅಪಘಾತವೊಂದರಲ್ಲಿ ಗಂಭೀರ ಗಾಯವಾಗಿ ಪ್ರಾಣಾಂತಿಕ ಪರಿಸ್ಥಿತಿ ಎದುರಾಗಿತ್ತು. ಅಂದು ಶಕೀಲ್ ಹಸನ್ ಅವರಿಗೆ ತುರ್ತಾಗಿ ಬೇಕಿದ್ದ ರಕ್ತವನ್ನು ನೀಡಿದ್ದು ಅಂದಿನ ಕುಂದಾಪುರದ ಪ್ರಸಿದ್ಧ ಕ್ರಿಕೆಟ್ ಆಟಗಾರ ಹರಿ ಪ್ರಸನ್ನ. ಅಂದು ಹರಿಪ್ರಸನ್ನ ರಕ್ತದಾನ ಮಾಡಿರದಿದ್ದರೆ ತನ್ನ ಪರಿಸ್ಥಿತಿ ಹೇಗಾಗುತ್ತಿತ್ತೊ ಅದನ್ನು ಊಹಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಶಕೀಲ್. ಇನ್ನೊಂದು ಸಲ ಬೆಂಗಳೂರಿನಲ್ಲಿಯೂ ಇಂತಹುದೆ ಸಂದರ್ಭ ಇನ್ನೊಮ್ಮೆ ಎದುರಾದಾಗ ಅಲ್ಲಿ ರಕ್ತದಾನ ಮಾಡಿ ಶಕೀಲ್ ಅವರ ಜೀವಕ್ಕೆ ನೆರವಾಗಿದ್ದು ಓರ್ವ ದಲಿತರು. ಜಾತಿ, ಮತಗಳನ್ನು ಮೀರಿ ತನ್ನ ನೆರವಿಗೆ ಜನರು ಬಂದ ಈ ಘಟನೆಗಳು ತನ್ನ ಮೇಲೆ ಗಾಢ ಪ್ರಭಾವ ಬೀರಿದವು ಎಂದು ಶಕೀಲ್ ಹಸನ್ ಹೇಳುತ್ತಾರೆ. ನಶಿಸುತ್ತಿರುವ ಸೌಹಾರ್ದ ಪರಂಪರೆಯನ್ನು ರಕ್ಷಿಸಿ ಉಳಿಸಲು ತಾನೂ ಏನಾದರೂ ಮಾಡಬೇಕು ಎಂದು ಅಂದೇ ದೃಢ ನಿಶ್ಚಯ ಮಾಡಿದ್ದ ಶಕೀಲ್ ಅವರು ಈಗ ಎಚ್‌ಎಮ್‌ಸಿ ಯುನೈಟೆಡ್ ಅನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುತ್ತಿದ್ದಾರೆ.

ಖ್ಯಾತ ಉದ್ಯಮಿ ಡಾ. ಬಿ. ಆರ್. ಶೆಟ್ಟಿ ಅವರ ಜೊತೆ ಶಕೀಲ್ ಹಸನ್ ಹೊನ್ನಾಳ
ದುಬೈಯಲ್ಲಿ ನಡೆಯುವ ಎಚ್‌ಎಮ್‌ಸಿ ಯುನೈಟೆಡ್ ಇಂಟರ್‌ನ್ಯಾಶನಲ್ ಪೀಸ್ ಅವಾರ್ಡ್ 2018 ಸಮಾರಂಭವನ್ನು ಶಕೀಲ್ ಹಸನ್ ಮತ್ತು ಎಚ್‌ಎಮ್‌ಸಿ ಯುನೈಟೆಡ್‍ನ ಇತರ ಪದಾಧಿಕಾರಿಗಳು ಮತ್ತು ಸದಸ್ಯರು ಅದ್ದೂರಿಯಾಗಿ ನಡೆಸಲು ಸಕಲ ಸಿದ್ಧತೆ ನಡೆಸಿಕೊಂಡಿದ್ದಾರೆ.

ದುಬೈಯ ಹೆಸರಾಂತ ಉದ್ಯಮಿ ಸುಹೈಲ್ ಮೊಹಮ್ಮದ್ ಅಲ್ ಝರೂನಿ ಶಕೀಲ್ ಹಸನ್ ಅವರ ಎಚ್‌ಎಮ್‌ಸಿ ಯುನೈಟೆಡ್ ತಂಡಕ್ಕೆ ಸಂಪೂರ್ಣ ಸಾಥ್ ನೀಡಿದ್ದಾರೆ. ಜಗತ್ತಿನ ಹಲವು ದೇಶಗಳಲ್ಲಿ ಸೌಹಾರ್ದ, ಶಾಂತಿಗಾಗಿ ದುಡಿಯುತ್ತಿರುವ ವ್ಯಕ್ತಿಗಳಿಗೆ ಮತ್ತು ಸಮಾಜಮುಖಿ ಕೆಲಸ ಮಾಡುತ್ತಿರುವ ಹಲವು ಗಣ್ಯರಿಗೆ ಶಾಂತಿ ಪ್ರಶಸ್ತಿ ಮತ್ತು ಇತರ ವಿಶೇಷ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ.

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಉದ್ಯಮ, ವೈದ್ಯಕೀಯ ರಂಗ ಇತ್ಯಾದಿಗಳಲ್ಲಿ ಮಂಚೂನಿಯಲ್ಲಿರುವ ಡಾ. ಬಿ. ಆರ್. ಶೆಟ್ಟಿ, ಸರ್ವೋತ್ತಮ ಶೆಟ್ಟಿ, ಡಾ. ತುಂಬೆ ಮೊಯ್ದೀನ್, ರೊನಾಲ್ಡ್ ಖುಲಾಸೊ ಮುಮ್ಟಾದವರು ಈ ಕಾರ್ಯಕ್ರಮಕ್ಕೆ ಶುಭಾಶಯ ಕೋರಿದ್ದಾರೆ.

ಫೆಬ್ರವರಿ 1, 2018ರಂದು ಸಂಜೆ ದುಬೈಯ ಇಂಡಿಯನ್ ಹೈ ಸ್ಕೂಲ್‌ನ ಶೇಖ್ ರಶೀದ್ ಆಡಿಟೋರಿಯಂನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಂಗೀತ, ನೃತ್ಯ, ಮಿಮಿಕ್ರಿ, ಹಾಸ್ಯ ಹೀಗೆ ಹತ್ತಾರು ಕಲಾ ಪ್ರಕಾರದ ಪ್ರದರ್ಶನಗಳೂ ಜರಗಲಿವೆ, ಇದಕ್ಕಾಗಿ ಭಾರತ ಮತ್ತು ದುಬೈಯಲ್ಲಿರುವ ಪ್ರಖ್ಯಾತ ಕಲಾವಿದರು ಮತ್ತು ಕಲಾತಂಡಗಳು ಸಿದ್ಧಗೊಂಡಿವೆ.

ಮೊದಲ ವರ್ಷದ ಈ ಅಂತರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಯಶಸ್ವಿಯಾಗಿ ನಡೆಸಲು ಶಕೀಲ್ ಸಹನ್ ಮತ್ತು ತಂಡ ಹಗಲಿರುಳು ಶ್ರಮಿಸುತ್ತಿದೆ. ಈಗಾಗಲೇ ಹಲವು ಸುತ್ತಿನ ಸಭೆಗಳು ನಡೆದಿದ್ದು ಫೆಬ್ರವರಿ 1ರಂದು ಈ ಶ್ರಮ ಕಾರ್ಯಕ್ರಮದ ಮೂಲಕ ಸಾರ್ಥಕಗೊಳ್ಳಲಿದೆ. ಶಕೀಲ್ ಹಸನ್ ಮತ್ತು ಅವರ ಎಚ್‌ಎಮ್‌ಸಿ ಯುನೈಟೆಡ್‌ನ ಚಟುವಟಿಕೆಗಳನ್ನು www.hmcunited.org ಇಲ್ಲಿ ನೋಡಬಹುದಾಗಿದೆ.

ಒಟ್ಟಾರೆಯಾಗಿ ಶಕೀಲ್ ಹಸನ್ ಎಂಬ ಕರಾವಳಿ ಮೂಲದ ದುಬೈಯ ಯುವ ಉದ್ಯಮಿ ಜಾಗತಿಕ ಸಹಕಾರ, ಸೌಹಾರ್ದ ಮತ್ತು ಶಾಂತಿ ಸ್ಥಾಪನೆಯ ಮಹೋನ್ನತ ಆಶಯಗಳೊಂದಿಗೆ ವಿಶ್ವವೇ ಗಮನ ಸೆಳೆಯುವಂತಹ ಕಾರ್ಯಕ್ಕೆ ಮುನ್ನುಡಿ ಬರೆಯುತ್ತಿರುವುದು ಕರಾವಳಿಗೆ ಬಹಳ ಹೆಮ್ಮೆಯ ವಿಷಯವೇ ಆಗಿದೆ. ಶಕೀಲ್ ಹಸನ್ ಅವರ ಕನಸುಗಳಿಗೆ 'ಕರಾವಳಿ ಕರ್ನಾಟಕ' ಶುಭ ಹಾರೈಕೆಗಳನ್ನು ಸಲ್ಲಿಸುತ್ತಿದೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಸುತ್ತೋಲೆ ತಿದ್ದುಪಡಿ: 'ಮುಗ್ಧ ಜನರ' ಮೇಲಿನ ಪ್ರಕರಣ ವಾಪಸ್:
http://bit.ly/2DKDdoR
►►ಸಂಸದೆ ಶೋಭಾ ಕರಾಂದ್ಲಾಜೆಯಿಂದ ಜೀವ ಬೆದರಿಕೆ: ಕೆಜೆಪಿ ಸಂಸ್ಥಾಪಕನ ಕಣ್ಣೀರು: http://bit.ly/2rNhSFw
►►ಆರೋಗ್ಯದಲ್ಲಿ ಚೇತರಿಕೆ: ಆಸ್ಪತ್ರೆಯಿಂದ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ಬಿಡುಗಡೆ: http://bit.ly/2EeDRYF
►►ಬಹಿರಂಗವಾಗಿ ದಾಖಲೆಗಳನ್ನು ಬಿಡುಗಡೆ ಮಾಡಿ: ಶಾಸಕ ಸೈಲ್ ಸವಾಲು: http://bit.ly/2EdL1MF
►►ಕಾಂಗ್ರೆಸ್ ಸರ್ಕಾರ ಕೊಲೆಗಡುಕ ಸಂಘಟನೆಗಳಿಗೆ ಕುಮ್ಮಕ್ಕು ನೀಡುತ್ತಿದೆ: ಶೋಭಾ ಆರೋಪ: http://bit.ly/2FnQXlz
►►ನೇರ ಮಾತುಗಳನ್ನು ಒಪ್ಪಿಕೊಳ್ಳದೆ ವಿವಾದ ಸೃಷ್ಟಿಸುತ್ತಾರೆ: ಸಚಿವ ಹೆಗಡೆ ಕಿಡಿ: http://bit.ly/2rJhyaQ
►►ನನ್ನ ಬದುಕಿನ ಎಲ್ಲವನ್ನೂ ಈ ಆತ್ಮಕಥೆಯೇ ಹೇಳುತ್ತದೆ: ಜನಾರ್ದನ ಪೂಜಾರಿ: http://bit.ly/2DGjruu

Related Tags: HMC United Brahmavara, International Peace Awards, Dubai, Shakil Hasan Honnala
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ