ಅಪಘಾತದಲ್ಲಿ ಮಿದುಳು ನಿಷ್ಕ್ರಿಯ: ಅಂಗಾಂಗ ದಾನದ ಮೂಲಕ ಐದು ಜೀವಗಳಿಗೆ ಜೀವಕೊಟ್ಟ 'ಕಸ್ತೂರಿ'

ಕರಾವಳಿ ಕರ್ನಾಟಕ ವರದಿ

ಉಡುಪಿ:
ಕೋಟ ಹೈಸ್ಕೂಲ್‌ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿಸೆಂಬರ್ 12ರಂದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯ ಮಿದುಳು ನಿಷ್ಕ್ರಿಯಗೊಂಡಿದ್ದು, ಕುಟುಂಬಿಕರ ಆಶಯದಂತೆ ಅವರ ಅಂಗಾಂಗಗಳನ್ನು ದಾನ ಮಾಡಲಾಗಿದೆ.

ಬಾರ್ಕೂರು ಬೆಣ್ಣೆಕುದ್ರುವಿನ ಕಸ್ತೂರಿ ಪೂಜಾರಿ (36) ಮಿದುಳು ನಿಷ್ಕ್ರಿಯಗೊಂಡಿರುವ ಮಹಿಳೆ.

ಡಿ. 12 ರ ಮಧ್ಯಾಹ್ನ ಅಪಘಾತ ನಡೆದಿದ್ದು, ಡಿ. 13ರ ಸಂಜೆ 6 ಗಂಟೆಗೆ ವೈದ್ಯರ ಅಧಿಕೃತ ಸಮಿತಿಯು ಕಸ್ತೂರಿ ಅವರ ಮಿದುಳು ಸ್ತಬ್ಧಗೊಂಡಿರುವುದನ್ನು ಘೋಷಿಸಿತ್ತು. ಮಧ್ಯರಾತ್ರಿ 12ಕ್ಕೆ 2ನೇ ಘೋಷಣೆಯನ್ನು ವೈದ್ಯರು ಮಾಡಿದ ಬಳಿಕ ಕಸ್ತೂರಿ ಪೂಜಾರಿಯ ಕುಟುಂಬದ ಸದಸ್ಯರು ಕಾರ್ಯಸಾಧ್ಯವಾದ ಅಂಗಾಗಗಳನ್ನು ದಾನ ಮಾಡುವುದಾಗಿ ಇಚ್ಛೆ ವ್ಯಕ್ತಪಡಿಸಿದರು.

ಅಂತೆಯೇ ಎರಡು ಕಾರ್ನಿಯಾ, ಎರಡು ಮೂತ್ರಪಿಂಡಗಳು, ಯಕೃತ್ತು (ಲಿವರ್‌) ಮತ್ತು ಹೃದಯ ಕವಾಟಗಳನ್ನು ತೆಗೆಯಲು ವೈದ್ಯರು ನಿರ್ಧರಿಸಿದರು.

ಅಂಗಾಂಗಗಳನ್ನು ಹಸಿರು ಕಾರಿಡಾರ್‌ ಮೂಲಕ ಮಣಿಪಾಲದಿಂದ ಮಂಗಳೂರಿಗೆ ಉಡುಪಿ ಪೊಲೀಸ್‌ ಇಲಾಖೆಯ ಸಹಯೋಗದಲ್ಲಿ ಗುರುವಾರ ಮಧ್ಯಾಹ್ನ 1.30ಕ್ಕೆ ಆ್ಯಂಬುಲೆನ್ಸ್‌ಗಳಲ್ಲಿ ಸಾಗಿಸಲಾಯಿತು.

ಒಂದು ಕಿಡ್ನಿಯನ್ನು ಕೆಎಂಸಿ ಗುರುತಿಸಿದ ರೋಗಿಗೆ, 2ನೇ ಕಿಡ್ನಿಯನ್ನು ಮಂಗಳೂರಿನ ಫಾದರ್‌ ಮುಲ್ಲರ್‌ ಆಸ್ಪತ್ರೆ ಗುರುತಿಸಿದ ರೋಗಿಗೆ, ಯಕೃತ್ತು (ಲಿವರ್‌) ಅನ್ನು ಮಂಗಳೂರಿನ ಎ.ಜೆ. ಆಸ್ಪತ್ರೆ ಗುರುತಿಸಿದ ರೋಗಿಗೆ ಹಾಗೂ ಹೃದಯ ಕವಾಟವನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ರವಾನೆ ಮಾಡಲಾಯಿತು. ಎರಡು ಕಾರ್ನಿಯಾಗಳನ್ನು ಮಣಿಪಾಲ ಕೆಎಂಸಿ ಗುರುತಿಸಿದ ರೋಗಿಗಳಿಗೆ ಕಸಿ ಮಾಡಲಾಗುವುದು ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಮತ್ತು ಮುಖ್ಯ ನಿರ್ವಹಣಾಧಿಕಾರಿ ಡಾ| ಎಂ. ದಯಾನಂದ ಅವರು ತಿಳಿಸಿದ್ದಾರೆ.

ಕಸ್ತೂರಿ ಅವರ ಅಂಗಾಗಳನ್ನು ಒಟ್ಟು ಐದು ಮಂದಿಗೆ ದಾನ ಮಾಡಿದ್ದು, ಕುಟುಂಬದವರು ನೋವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವೇಗವಾಗಿ ಧಾವಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಾಜಕವೇರಿ ಎದುರಿನಿಂದ ಬರುತ್ತಿದ್ದ ಕಂಟೈನರ್‌ಗೆ ಢಿಕ್ಕಿಯಾಗಿತ್ತು. ಈ ಭೀಕರ ಅಪಘಾತದಲ್ಲಿ ಸಮಾರಂಭಕ್ಕೆ ತೆರಳುತ್ತಿದ್ದ ಬಾರ್ಕೂರು ಬೆಣ್ಣೆಕುದ್ರು ನಿವಾಸಿಗಳಾದ ಗಿರಿಜಾ(52) ಮಗ ಅವಿನಾಶ್(27) ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಕಸ್ತೂರಿ ಅವರ ಸಾವಿನೊಂದಿಗೆ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದ್ದು, ಕಾರು ಚಾಲಕ ಭಾಸ್ಕರ್‌ ಪೂಜಾರಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇತ್ತೀಚೆಗಷ್ಟೆ ಅವಿನಾಶ್ ನಿಕಟ ಸಂಬಂಧಿಯೋರ್ವರ ಮದುವೆ ನಡೆದಿದ್ದು, ಕೋಟಾ ಸಮೀಪದ ಕಾಸನಗುಂದುವಿನಲ್ಲಿ ನಡೆಯಲಿರುವ ಆರತಕ್ಷತೆ ಸಮಾರಂಭಕ್ಕೆ ತೆರಳುತ್ತಿರುವಾಗ ಈ ಭೀಕರ ದುರಂತ ಸಂಭವಿಸಿತ್ತು.

ಆಲ್ಟೊ ಕಾರು ಬಾರ್ಕೂರಿನಿಂದ ಕೋಟಾ ಕಡೆಗೆ ಸಾಗುತ್ತಿದ್ದಾಗ, ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ಕಾರು ರಸ್ತೆ ವಿಭಾಜಕವನ್ನೇರಿತ್ತು. ಅದೇ ವೇಗದಲ್ಲಿ ಕಾರು ಇನ್ನೊಂದು ರಸ್ತೆಗೆ ನುಗ್ಗಿದ ಪರಿಣಾಮ ಕುಂದಾಪುರದಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಕಂಟೈನರ್‌ಗೆ ಢಿಕ್ಕಿಯಾಗಿತ್ತು.

ಢಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಗಿರಿಜಾ ಹಾಗೂ ಅವಿನಾಶ್ ಕಾರಿನೊಳಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಅಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಲಾಗಿತ್ತಾದರೂ ಅಷ್ಟರಲ್ಲಾಗಲೇ ಈರ್ವರು ಕೊನೆಯುಸಿರೆಳೆದಿದ್ದರು.

ಅವಿನಾಶ್ ವಿದೇಶದಲ್ಲಿ ಕಾರು ಶೋರೂಂ ಒಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಕುಟುಂಬಿಕರ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಇತ್ತೀಚೆಗಷ್ಟೆ ತಮ್ಮ ಮನೆಗೆ ಮರಳಿದ್ದರು.

ಇದನ್ನೂ ಓದಿ:
►►ವಿಭಾಜಕವೇರಿ ಕಂಟೈನರ್‌ಗೆ ಢಿಕ್ಕಿಯಾದ ಕಾರು: ತಾಯಿ-ಮಗ ದಾರುಣ ಸಾವು:
http://bit.ly/2krSL3Y

ಇಂದು ಹೆಚ್ಚು ಓದಿದ ಹೆಚ್ಚು ಸುದ್ದಿಗಳು
►►ಲಾರಿ-ರಿಕ್ಷಾ ನಡುವೆ ಮುಖಾಮುಖಿ ಢಿಕ್ಕಿ: ಪ್ರಯಾಣಿಕ ಸಾವು, ಚಾಲಕ ಗಂಭೀರ:
http://bit.ly/2j43Vvz
►►ಉತ್ತರ ಕನ್ನಡ ಗಲಭೆ: ಸೋಷಿಯಲ್ ಮೀಡಿಯಾ ಮೇಲೆ ನಿಗಾ. 106 ಪ್ರಕರಣ ದಾಖಲು: http://bit.ly/2AH3CSY
►►ಶರತ್ ಮಡಿವಾಳ ಮತ್ತು ಅಶ್ರಫ್ ಕುಟುಂಬಕ್ಕೆ ರಾಜ್ಯ ಸರ್ಕಾರದ 5 ಲಕ್ಷ ಪರಿಹಾರ: http://bit.ly/2j0CYZJ
►►ಹೊನ್ನಾವರ ಗ್ರಾಮಾಂತರದಲ್ಲಿ ಶಾಲಾ ಬಾಲಕಿಗೆ ಚೂರಿ ಇರಿತ: http://bit.ly/2jTTyeV
►►ನೀವು ಫಡ್ನವೀಸಾ ಅಥವಾ ಫೆರ್ನಾಂಡಿಸಾ? ಕ್ರಿಸ್‌ಮಸ್ ಕೂಟದಲ್ಲಿ ಪಾಲ್ಗೊಂಡ ಸಿಎಂ ಪತ್ನಿಗೆ ಪ್ರಶ್ನೆ: http://bit.ly/2j1HffB
►►ಮಂಗಳೂರು: ಹಿಂದೂ ಯುವತಿಯೊಂದಿಗಿದ್ದ ಯುವಕನಿಗೆ ಹಲ್ಲೆ: http://bit.ly/2C4CMQC
►►ಕತ್ತು ಕೊಯ್ದು ನಿವೃತ್ತ ಶಿಕ್ಷಕಿಯ ಕೊಲೆ: http://bit.ly/2iZXeKW
►►ಪರೇಶ್ ಸಾವಿನ ತನಿಖೆ ಸಿಬಿಐಗೆ. ರಾಜ್ಯ ಸರ್ಕಾರದಿಂದ ಸಿಬಿಐಗೆ ಪತ್ರ: http://bit.ly/2ksAeEP

Related Tags: Brain Dead Patient, Manipal Hospital, Accident Patient, Kasturi Poojary, Kota, Container Accident, Devider, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ