ಉತ್ತರ ಕನ್ನಡ: ಪ್ರಜ್ಞಾವಂತರ ಜಿಲ್ಲೆ ಪ್ರಜ್ಞೆ ತಪ್ಪುತ್ತಿದೆಯೇ? ಪ್ರಜ್ಞೆ ತಪ್ಪಿಸಲಾಗುತ್ತಿದೆಯೇ

ಕರಾವಳಿ ಕರ್ನಾಟಕ ವರದಿ

ಕಾರವಾರ:
ಪ್ರಜ್ಞಾವಂತರ ಜಿಲ್ಲೆ ಎಂದೇ ಕರೆಸಿಕೊಳ್ಳುತ್ತಿದ್ದ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಜ್ಞೆ ತಪ್ಪುತ್ತಿದೆಯೇ? ಅಥವಾ ಪ್ರಜ್ಞೆ ತಪ್ಪಿಸಲಾಗುತ್ತಿದೆಯೇ ಎಂಬ ಗಂಭೀರವಾದ ವಿಚಾರಗಳು ಇಂದು ಎಲ್ಲರನ್ನೂ ಕಾಡುತ್ತಿವೆ.

ಸದಾ ಶಾಂತಿಯಿಂದಲೇ ಹೆಸರು ಗಳಿಸಿದ್ದ ಯಾವುದೇ ಕೋಮು ಗಲಭೆಗಳು ನಡೆಯದೇ ಸುವ್ಯವಸ್ಥೆಯಿಂದ ಜೀವನ ನಡೆಸುತ್ತಿದ್ದ ಉತ್ತರಕನ್ನಡ ಜಿಲ್ಲೆಯ ಜನರು ಹೊನ್ನಾವರದ ಯುವಕ ಪರೇಶ ಮೆಸ್ತಾ ಸಾವಿನ ಬಳಿಕ ಆತಂಕಕ್ಕೆ ಒಳಗಾಗಿದ್ದಾರೆ.

ಕಳೆದ ಕೆಲ ದಿನಗಳಿಂದ ಕೇವಲ ಹೊನ್ನಾವರದಲ್ಲಿ ಮಾತ್ರ ಇದ್ದ ಪ್ರತಿಭಟನೆಯ ಹೊಗೆ ಈಗ ಜಿಲ್ಲೆಯಾದ್ಯಂತ ವ್ಯಾಪಿಸಿ ಹಿಂಸಾಚಾರಕ್ಕೆ ತಿರುಗಿದ್ದು ಜನಸಾಮಾನ್ಯರಲ್ಲಿ ಭಯ ಮೂಡಿಸಿದೆ.

ಬಾಬ್ರಿ ಮಸೀದಿ ಧ್ವಂಸದ ಸಂದರ್ಭದಲ್ಲಿ ಉಂಟಾದ ಸಂಘರ್ಷಗಳನ್ನು ಹೊರತು ಪಡಿಸಿದರೆ ಜಿಲ್ಲೆಯಲ್ಲಿ ಎಂದಿಗೂ ಇಷ್ಟೊಂದು ದೊಡ್ಡ ಪ್ರಮಾಣದ ಪ್ರತಿಭಟನೆಗಳು ನಡೆದಿರುವ ಉದಾಹರಣೆಗಳಿಲ್ಲ. ಪ್ರತಿಭಟನೆಯ ಕಾವು ಕಳೆದೆರಡು ದಿನಗಳಿಂದ ತೀವ್ರ ಸ್ವರೂಪ ಪಡೆದಿರುವುದು ಜಿಲ್ಲೆಯ ಜನರಲ್ಲಿ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.

ಡಿ.1 ರಂದು ಹೊನ್ನಾವರ ತಾಲೂಕಿನ ಚಂದಾವರದ ಸರ್ಕಲ್ ಬಳಿ ಈದ್ ಮಿಲಾದ ನಿಮಿತ್ತ ಮುಸ್ಲಿಮರು ಪ್ರತಿ ವರ್ಷದಂತೆ ಗುಮ್ಮಟ ಮಾದರಿ ನಿರ್ಮಾಣಕ್ಕೆ ಮುಂದಾದಾಗ ನಡೆದ ಎರಡು ಕೋಮಿನ ಗಲಭೆ ವಿಕೋಪಕ್ಕೆ ತಿರುಗಿತ್ತು.
ಆದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತವು ಶಾಂತಿ ಸಭೆ ನಡೆಸಿತ್ತು. ಆದರೆ ಬಳಿಕ ಡಿ.6 ರಂದು ತಾಲೂಕಿನ ಶರಾವತಿ ಸರ್ಕಲ್ ಬಳಿ ಹಿಂದೂ ಕೋಮಿನ ಆಟೋ ಮತ್ತು ಮುಸ್ಲಿಂ ಕೋಮಿನ ಬೈಕ್ ನಡುವೆ ಅಪಘಾತ ನಡೆದಿತ್ತು.

ಆದರೆ ಘಟನೆ ಸಂಬಂಧ ಅಂದು ಸಂಜೆ ಗುಡ್‌ಲಕ್ ಹೊಟೇಲ್ ಬಳಿ ಸೇರಿದ ಎರಡು ಕೋಮಿನವರಲ್ಲಿ ಗೊಂದಲ ಏರ್ಪಟ್ಟು ಈರ್ವರು ಹಿಂದೂಗಳ ಮೇಲೆ ತಲವಾರಿನಿಂದ ಹಲ್ಲೆ ಮಾಡಲಾಗಿತ್ತು. ಅಲ್ಲದೆ ಅದೇ ದಿನ ಸಂಜೆ ನಾಪತ್ತೆಯಾಗಿದ್ದ ಪರೇಶ ಮೇಸ್ತ ಎರಡು ದಿನಗಳ ಬಳಿಕ ಶನಿ ದೇವಸ್ಥಾನದ ಬಳಿಯ ಶೆಟ್ಟಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ. ಆದರೆ ಶವದ ಮುಖ ಸಂಪೂರ್ಣ ಕಪ್ಪಾಗಿದ್ದು, ದೇಹದ ಮೇಲೆ ಗಾಯಗಳಿವೆ ಎಂದು ಸಂಶಯ ವ್ಯಕ್ತಪಡಿಸಿ ಉನ್ನತ ತನಿಖೆಗೆ ಆಗ್ರಹಿಸಿದ್ದರು.

ಪರಿಸ್ಥಿತಿಯನ್ನು ಬಿಗಡಾಯಿಸಿದ ಜಾಲತಾಣಗಳು
ಹೊನ್ನಾವರ ಗಲಭೆಯ ನಂತರ ದಿನದಿಂದ ದಿನಕ್ಕೆ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸ್‌ಆಪ್‌ಗಳಲ್ಲಿ ಜನರನ್ನು ಕೆರಳಿಸುವ ರೀತಿಯಲ್ಲಿ ಸಂದೇಶಗಳನ್ನು ಹರಿಬಿಡಲಾಗುತ್ತಿತ್ತು. ಇದು ಜನರನ್ನು ಉದ್ರೇಕಗೊಳಿಸುತ್ತಲೇ ಸಾಗಿದ್ದರಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ಸಂಘರ್ಷಗಳಿಗೆ ಮುಖ್ಯ ಕಾರಣವಾಗಿ ಪರಿಣಮಿಸತೊಡಗಿದೆ.

ಕೆಲವರಂತೂ ಎಲ್ಲಿಯೋ, ಯಾವಾಗಲೋ ನಡೆದ ಹಿಂಸಾತ್ಮಕ ಘಟನೆಗಳ ವಿಡಿಯೋಗಳನ್ನು ಈ ವಿಷಯಕ್ಕೆ ಸಂಪರ್ಕಿಸಿ ಹರಿಬಿಟ್ಟ ಪರಿಣಾಮ ಅವು ಒಬ್ಬರಿಂದೊಬ್ಬರಿಗೆ ತಲುಪಿ ಸಾರ್ವಜನಿಕರಲ್ಲಿ ಕೋಮು ಭಾವನೆ ಕೆರಳಲು ಪ್ರಚೋದನೆಯಾದವು. ಈ ನಿಟ್ಟಿನಲ್ಲಿ ಸೋಮವಾರ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಗಲಭೆ ಹಾಗೂ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ಸಂದೇಶಗಳನ್ನು ರವಾನಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರಿಂದ ಸೋಮವಾರದಿಂದಲೇ ಸಾಮಾಜಿಕ ಜಾಲತಾಣಗಳು ಜಿಲ್ಲೆಯಲ್ಲಿ ಸ್ಥಬ್ಧವಾಗಿವೆ.

ರಾಜಕೀಯ ತಿರುವು
ಪರೇಶ ಮೇಸ್ತಾ ಶವ ಪತ್ತೆಯಾಗುತ್ತಿದ್ದಂತೆ ಹಬ್ಬಿದ ವದಂತಿಗಳು ರಾಜಕೀಯ ತಿರುವು ಪಡೆದುಕೊಳ್ಳುತ್ತಿವೆ. ಪರಸ್ಪರ ಆರೋಪ ಮಾಡಿಕೊಳ್ಳುತ್ತಿದ್ದಾರೆ. ಇನ್ನೇನು ವಿಧಾನಸಭಾ ಚುನಾವಣೆ ಹತ್ತಿರ ಇರುವುದರಿಂದ ಈ ವಿಷಯವನ್ನು ಮುಖ್ಯವಾಗಿರಿಸಿ ರಾಜಕೀಯ ಪಕ್ಷಗಳು ಯಾವುದೋ ವಿಷಯಗಳನ್ನು ಎಳೆದು ತಂದು ಘಟನೆಯನ್ನು ಕೆದಕುವ ಕೆಲಸ ಮಾಡುತ್ತಿವೆ. ಇಲ್ಲಸಲ್ಲದ ವಿಷಯಗಳನ್ನು ಜನರ ತಲೆಗೆ ತುಂಬುತ್ತಿವೆ.

ಇದರಿಂದಾಗಿ ಇಡೀ ಜಿಲ್ಲೆಯಲ್ಲಿ ಅರಾಜಕತೆ ಸೃಷ್ಟಿಯಾಗುವಂತೆ ಮಾಡಿದೆ. ಇನ್ನು ಪಕ್ಷವೊಂದರಲ್ಲಿ ಇರುವ ಟಿಕೆಟ್ ಆಕಾಂಕ್ಷಿಗಳು ಸ್ಪರ್ಧೆಗೆ ಬಿದ್ದವರಂತೆ ತಮ್ಮ ಶಕ್ತಿಯನ್ನು ಪ್ರದರ್ಶಿಸುವ ಉದ್ದೇಶದಿಂದ ತಮ್ಮ ಬಣಗಳನ್ನು ಮಾಡಿಕೊಂಡು ಇನ್ನಷ್ಟು ಶಾಂತಿ ಕದಡಲು ಪ್ರಯತ್ನ ನಡೆಸಿದ್ದಾರೆ.

ಒಟ್ಟಿನಲ್ಲಿ ಶಾಂತಿಯುತವಾಗಿದ್ದ ಜಿಲ್ಲೆಯಲ್ಲಿ ಇದೀಗ ಕೋಮು ಸಂಘರ್ಷದ ವಿಷ ಬೀಜ ಬಿತ್ತಲಾಗಿದ್ದು ಅದು ಬೆಳೆಯುವ ಮುನ್ನವೇ ಚಿವುಟಿ ಶಾಂತಿ ಮಂತ್ರವನ್ನು ಸಾರ ಬೇಕಾಗಿದೆ ಎನ್ನುವುದು ಸಾರ್ವಜನಿಕರ ಅಪೇಕ್ಷೆಯಾಗಿದೆ.

ಬೇರೆ ಜಿಲ್ಲೆಗಳ ಜನರು ಭಾಗಿಯಾಗಿರುವ ಶಂಕೆ
ಪರೇಶ ಮೆಸ್ತಾ ಸಾವಿನ ಬಳಿಕ ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ನಡೆಯತ್ತಿರುವ ಪ್ರತಿಭಟನೆ ಹಿಂಸಾರೂಪ ಪಡೆದಿದ್ದು ಇದಕ್ಕೆಲ್ಲ ಹೊರ ಜಿಲ್ಲೆಗಳಿಂದ ಬಂದವರೇ ಕಾರಣ ಎಂದು ಅಲ್ಲಲ್ಲಿ ಆಡಿ ಕೊಳ್ಳುತ್ತಿದ್ದಾರೆ.

ಪ್ರತಿಭಟನೆಗಳಲ್ಲಿ ಜಿಲ್ಲೆಯ ಜನರೊಟ್ಟಿಗೆ ಇತರ ಜಿಲ್ಲೆಯ ಕಿಡಿಗೇಡಿಗಳು ಸೇರಿ ಹಿಂಸಾತ್ಮಕ ಕೃತ್ಯ ಎಸಗುತ್ತಿದ್ದಾರೆ. ಕುಮಟಾದಲ್ಲಿ ಐಜಿಪಿ ನಿಂಬಾಳಕರ್ ಕಾರಿಗೆ ಮೊದಲೇ ಸಂಚು ರೂಪಿಸಿ ಬೆಂಕಿ ಹಚ್ಚಲಾಗಿದೆ. ಅಲ್ಲದೆ ಪ್ರತಿಭಟನಾಕಾರರೊಟ್ಟಿಗೆ ಸೇರಿ ಅರಾಜಕತೆ ಸೃಷ್ಟಿಸುತ್ತಿದ್ದಾರೆ.

ಇದರಿಂದಾಗಿಯೇ ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟೊಂದು ದೊಡ್ಡಮಟ್ಟದಲ್ಲಿ ಹಿಂಸಾಚಾರ ನಡೆಯುತ್ತಿದೆ. ಆದರೆ ಸುಖಾ ಸುಮ್ಮನೆ ಅಮಾಯಕರು ಇವರ ಕಾರಣದಿಂದ ಜೈಲು ಪಾಲಾಗಿದ್ದು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಿಂದ ಆರೋಪಗಳು ಕೇಳಿ ಬರುತ್ತಿವೆ. ಅಲ್ಲದೆ ಈ ಬಗ್ಗೆ ಬಿಜೆಪಿಯವರೇ ಭಯಗೊಂಡಿದ್ದಾರೆ.

ಹಲ್ಲೆ ನಡೆಸುವ, ಕಲ್ಲು ತೂರಾಟ ಮಾಡುವವರ ಬಗ್ಗೆ ಬಿಜೆಪಿಯವರನ್ನು ಕೇಳಿದರೆ ಅವರು ತಮ್ಮವರಲ್ಲ ಎನ್ನುತ್ತಿದ್ದಾರೆ. ಹಾಗಿದ್ದರೆ ಅವರು ಎಲ್ಲಿಂದ ಬಂದಿದ್ದಾರೆ? ಏತಕ್ಕಾಗಿ ಬಂದಿದ್ದಾರೆ? ಅವರ ಉದ್ದೇಶವೇನು? ಎನ್ನುವುದು ಸದ್ಯ ಎಲ್ಲರಿಗೂ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ.   

ಇಂದು ಹೆಚ್ಚು ಓದಿದ ಹೆಚ್ಚು ಸುದ್ದಿಗಳು
►►ಪರೇಶ್ ಮೇಸ್ತ ಸಾವು: ಶಿರಸಿಯಲ್ಲಿ ಪ್ರತಿಭಟನೆ ವೇಳೆ ಹಿಂಸಾಚಾರ:
http://bit.ly/2BEeqkv
►►ಗೃಹಿಣಿ ಮೃತದೇಹ ಬಾವಿಯಲ್ಲಿ ಪತ್ತೆ: ಮನೆಯವರಿಂದ ಕೊಲೆ ಆರೋಪ: http://bit.ly/2jyVmwO
►►ಪರೇಶ್ ಹತ್ಯೆ ಮುಚ್ಚಿ ಹಾಕಲು ಕಾಂಗ್ರೆಸ್ ಸರ್ಕಾರ ಯತ್ನ: ಹೆಗಡೆ: http://bit.ly/2AfXqNn
►►ಫರಂಗಿಪೇಟೆ: ‘ಸಾಮರಸ್ಯ ನಡಿಗೆ’ ಚಾಲನೆ: http://bit.ly/2z3jtc0
►►ವಿಭಾಜಕವೇರಿ ಕಂಟೈನರ್‌ಗೆ ಢಿಕ್ಕಿಯಾದ ಕಾರು: ತಾಯಿ-ಮಗ ದಾರುಣ ಸಾವು: http://bit.ly/2krSL3Y
►►ಪರೇಶ್ ಮೇಸ್ತ ಸಾವು: ಸಂಘಪರಿವಾರದ ಡೆಡ್ ಬಾಡಿ ಪಾಲಿಟಿಕ್ಸ್‌ನ ಮುಂದುವರಿದ ಭಾಗ: http://bit.ly/2nTaUNe

Related Tags: Paresh Mesta Death, Sangh Pariwar Politics, Social Media, IGP Nimbalkar, Honnavar, Kumta, Karavali karnataka, Shashidhar Hemmady, Suraj Naik, Dinakar Shetty, BJP
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ