ರಾಜಕಾರಣದಲ್ಲಿ ಧರ್ಮ ಪರಿಪಾಲನೆ ಆಗಬೇಕು. ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಬಾರದು: ಸಿದ್ದರಾಮಯ್ಯ

ರವಿತೇಜ ಕಾರವಾರ/ಕರಾವಳಿ ಕರ್ನಾಟಕ ವರದಿ

ಕಾರವಾರ:
ರಾಜಕಾರಣದಲ್ಲಿ ಧರ್ಮ ಪರಿಪಾಲನೆ ಆಗಬೇಕೆ ಹೊರತು ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಬಾರದು. ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ಅನಂತ ಕುಮಾರ ಹಾಗೂ ಯಡಿಯೂರಪ್ಪನವರಂತಹ 100 ಜನ ಬಂದರೂ ರಾಜ್ಯವನ್ನು ಕಾಂಗ್ರೆಸ್ ಮುಕ್ತ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಿಲಾನ್ಯಾಸ ಹಾಗೂ ಉದ್ಘಾಟನೆಗಳನ್ನು ನೆರವೇರಿಸಿ ಮಾತನಾಡಿದ ಅವರು ಎಲ್ಲ ಧರ್ಮ, ಜಾತಿಯವರಿಗೆ ಸಮಾನ ಅವಕಾಶಗಳನ್ನು ನೀಡಿ ಎಲ್ಲರನ್ನೂ ಒಂದೇ ದೃಷ್ಟಿಕೋನದಿಂದ ನೋಡುವುದನ್ನು ರಾಜಧರ್ಮ ಎನ್ನಲಾಗುತ್ತದೆ. ಆದರೆ ಬಿಜೆಪಿ ಮಾಡಿತ್ತಿರುವುದು ರಾಜಧರ್ಮವಲ್ಲ. ಒಂದು ಜಾತಿಯವರನ್ನು ಅಥವಾ ಒಂದು ಧರ್ಮದವರನ್ನು ಹೊರಗಿಟ್ಟು ಬರಿ ಬಾಯಿಮಾತಿನಲ್ಲಿ ಸಬ್ಕಾ ಸಾಥ್-ಸಬ್ಕಾ ವಿಕಾಸ್ ಎನ್ನುವುದು ಅವರ ಡೋಂಗಿತನವಾಗಿದೆ. ಇಂತಹುದನ್ನು ಜನರು ಅರ್ಥ ಮಾಡಿಕೊಂಡು ಅವರನ್ನು ದೂರವಿಡಬೇಕು ಎಂದರು.

ಭಾರತದಲ್ಲಿ ಅನೇಕ ಜಾತಿ, ಧರ್ಮದ ಜನರಿದ್ದಾರೆ. ದೇಶದ 125 ಕೋಟಿ ಇರುವ ಭಾರತೀಯರಾದ ನಾವು ಪರಸ್ಪರ ಪ್ರೀತಿ ಗೌರವದಿಂದ ಇರಬೇಕು. ಯಾವುದೇ ಕಾರಣಕ್ಕೂ ಅವರನ್ನು ಒಡೆಯ ಕೂಡದು. ಹಾಗಿದ್ದಾಗ ಮಾತ್ರ ಜಾತ್ಯಾತೀತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಿ ಸಹಬಾಳ್ವೆಯ ಜೀವನ ನಡೆಸಲು ಸಾಧ್ಯವಾಗುತ್ತದೆ.

ಬಿಜೆಪಿ ನಾಯಕರು ಕೇವಲ ಭಾಷಣ ಮಾಡುತ್ತಾರೆ ಹೊರತು ಯಾವುದೇ ಅಭಿವೃದ್ಧಿ ಮಾಡುವುದಿಲ್ಲ. ಜನಪರ ಕಾಳಜಿಯೇ ಅವರಿಗಿಲ್ಲ. ಕರ್ನಾಟಕದಲ್ಲಿ 6 ಕೋಟಿ ಜನಸಂಖ್ಯೆ ಇದೆ. ಅವರಲ್ಲಿ ಎಲ್ಲ ಧರ್ಮ, ಜಾತಿ ಭಾಷೆಯ ಜನರಿಗೆ ತಮ್ಮ ಕಾಂಗ್ರೆಸ್ ಸರಕಾರವು ಒಂದಿಲ್ಲೊಂದು ಕಾರ್ಯಕ್ರಮ ನೀಡಿ ಸವಲತ್ತುಗಳನ್ನು ನೀಡಲಾಗಿದೆ.

ಬಡವರು ಯಾವುದೇ ಜಾತಿ ಸೇರಿದ್ದರೂ ಅವರಿಗೆ ಆರ್ಥಿಕ ಹಾಗೂ ಸಾಮಾಜಿಕ ಸಮಾನತೆ ನೀಡುವುದು ಯಾವುದೇ ಸರ್ಕಾರದ ಕರ್ತವ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ತಮ್ಮ ಸರಕಾರವು 1 ಕೋಟಿಗೂ ಹೆಚ್ಚು ಬಿಪಿಎಲ್ ಕಾರ್ಡ್‌ಗಳನ್ನು ವಿತರಿಸಿದೆ. 4 ಕೋಟಿ ಜನರಿಗೆ ತಲಾ 7 ಕೆಜಿ ಅಕ್ಕಿ ನೀಡಲಾಗುತ್ತಿದೆ. ಇದು ಚುನಾವಣೆಗಾಗಿ ನೀಡುತ್ತಿರುವುದಲ್ಲ. ತಾನು ಅಧಿಕಾರಕ್ಕೆ ಬಂದಾಗಲೇ ಪ್ರಾರಂಭ ಮಾಡಿರುವ ಯೋಜನೆ. ಎಲ್ಲ ಧರ್ಮ ಜಾತಿಯ ಮಕ್ಕಳಿಗೆ ಹಾಲು ವಾರದಲ್ಲಿ 5 ದಿನ ಹಾಲು ನಿಡಲಾಗುತ್ತಿದೆ ಎಂದರು.

ಕರ್ನಾಟಕವು ಹಸಿವು ಮುಕ್ತ ರಾಜ್ಯ ಆಗಬೇಕು ಎಂಬುದು ನಮ್ಮ ಗುರಿಯಾಗಿದೆ. ಆದರೆ ಬಿಜೆಪಿಯವರು ರಾಜ್ಯವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎನ್ನುತ್ತಿದ್ದಾರೆ. 135 ವರ್ಷಗಳ ಇತಿಹಾಸವನ್ನು ಹೊಂದಿರುವ ಪಕ್ಷ ನಮ್ಮದು. ದೇಶದ ಹಿತಕ್ಕಾಗಿ ತ್ಯಾಗ ಬಲಿದಾನಗಳನ್ನು ಮಾಡಿದ, ಬ್ರಿಟಿಷರನ್ನು ಓಡಿಸಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷವಾಗಿದೆ. ಬಿಜೆಪಿಯಲ್ಲಿ ಯಾರಾದರೂ ಸ್ವಾತಂತ್ರ್ಯ ಹೋರಾಟ ಮಾಡಿದ್ದಾರೆಯೇ? ತ್ಯಾಗ ಬಲಿದಾನ ಮಾಡಿದ್ದಾರೆಯೆ? ಆದರೆ ತಾವು ಜೈಲಿಗೆ ಹೋಗಿದ್ದೇವೆ ಹೇಳಬಹುದು ಎಂದು ವ್ಯಂಗ್ಯವಾಡಿದರು.

ಬಿಜೆಪಿ ನಾಯಕರಾದ ಯಡಿಯೂರಪ್ಪ, ಜನಾರ್ಧನ ರೆಡ್ಡಿ, ಆನಂದ ಸಿಂಗ್, ಹಾಲಪ್ಪ, ಸುರೇಶ ಬಾಬು ಹೇಗೆ ಹಲವರು ಜೈಲಿಗೆ ಹೋಗಿದ್ದಾರೆ. ಆದರೆ ಇವರ‍್ಯಾರೂ ದೇಶದ ಒಳಿತಿಗಾಗಿ ಜೈಲು ಸೇರಿದವರಲ್ಲ. ಬದಲಿಗೆ ಇವರೆಲ್ಲ ತಪ್ಪು ಮಾಡಿ ಜೈಲಿಗೆ ಹೋಗಿದ್ದು. ಇವರ ಬಳಿ ಪಾಠ ಕಲಿಯುವ ಅವಶ್ಯಕತೆ ತಮಗಾಗಲೀ, ಜನರಿಗಾಗಲೀ ಇಲ್ಲ. ಕರ್ನಾಟಕದ ಇತಿಹಾಸದಲ್ಲಿ ಒಂದೂ ಭ್ರಷ್ಟಾಚಾರ ಮಾಡದೇ ಇರುವ ಸರ್ಕಾರ ಎಂದು ಅದು ತನ್ನ ಸರ್ಕಾರ.

ಪ್ರಧಾನಿ ಮೋದಿಯವರು ಅಚ್ಛೇ ದಿನ ಆಯೇಗಾ ಎಂದರು. ಆದರೆ ಆ ದಿನಗಳು ಇದುವರೆಗೂ ಬಂದಿಲ್ಲ. ದಲಿತರಿಗೂ ಬರಲಿಲ್ಲ. ಅಲ್ಪ ಸಂಖ್ಯಾತರಿಗೂ ಬರಲಿಲ್ಲ. ಬರೀ ಸುಳ್ಳು ಹೇಳಿ ರಾಜಕಾರಣ ಮಾಡುತ್ತಿದ್ದಾರೆ. ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಖಾತೆಯಲ್ಲಿ ಮಾಡುವುದಾಗಿ ಹೇಳಿದರು. ಆದರೆ ಕಳೆದ 3 ವರ್ಷದಲ್ಲಿ 15 ಪೈಸೆಯನ್ನು ಕೂಡಾ ಜಮಾ ಮಾಡಿಲ್ಲ. ಇನ್ನು ಅನಂತ ಕುಮಾರ ಹೆಗಡೆಯವರು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಠಿ ಮಾಡಲಾಗುವುದು ಎಂದು ಹೇಳಿದ್ದರು. ಆದರೆ ಕಳೆದ 3 ವರ್ಷಗಳಲ್ಲಿ 3 ಲಕ್ಷ ಉದ್ಯೋಗವನೂ ಸೃಷ್ಠಿ ಮಾಡಲು ಅವರಿಂದ ಆಗಿಲ್ಲ ಎಂದು ಕುಟುಕಿದರು.

ಭಟ್ಕಳ ಶಾಸಕ ಮಂಕಾಳು ವೈದ್ಯರನ್ನು ಹಾಡಿ ಹೊಗಳಿದ ಸಿದ್ಧರಾಮಯ್ಯ
ಇಂದಿನ ದಿನವು ಭಟ್ಕಳ ಕ್ಷೇತ್ರದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನವಾಗಿದೆ ಎಂದ ಸಿದ್ಧರಾಮಯ್ಯನವರು ಇಷ್ಟಕ್ಕೆಲ್ಲ ಸ್ಥಳೀಯ ಶಾಸಕ ಮಂಕಾಳು ವೈದ್ಯರ ಶ್ರಮವೇ ಕಾರಣ ಎಂದು ಹೊಗಳಿದರು. 1200 ಕ್ಕೂ ಹೆಚ್ಚು ಕೋಟಿ ರೂ. ಗಳನ್ನು ಅಭಿವೃದ್ಧಿ ಕಾರ್ಯಗಳಿಗೆ ಶಂಕು ಸ್ಥಾಪನೆ ಹಾಗೂ ಉದ್ಘಾಟನೆಗಳನ್ನು ಇಂದು ನೆರವೇರಿಸಲಾಗಿದೆ. ಇಷ್ಟೊಂದು ದೊಡ್ಡ ಮೊತ್ತ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ಸಿಕ್ಕಲು ಶಾಸಕ ಮಂಕಾಳು ವೈದ್ಯರ ಶ್ರಮ, ಪ್ರಯತ್ನ ಕಾರಣವಾಗಿದೆ.

ಮಂಕಾಳು ಒಬ್ಬ ಸಭ್ಯ ರಾಜಕಾರಣಿ, ಹೆಚ್ಚು ಮಾತಾಡಲ್ಲ ಆದರೆ ಹೆಚ್ಚು ಕಾರ್ಯ ಮಾಡುತ್ತಾರೆ. ಅವರು ತಮ್ಮ ಬಳಿ ಪ್ರತಿ ಬಾರಿ ಬರುವಾಗಲೂ 10 ರಿಂದ 15 ಪತ್ರ ತಂದಿರುತ್ತಾರೆ. ಕಾರ್ಯಗಳು ಆಗಬೇಕೆಂದು ವಿನಯದಿಂದ ಒತ್ತಾಯ ಮಾಡುತ್ತಾರೆ. ಅವರ ವಿನಯತೆ ಸಜ್ಜನಿಕೆ ನೋಡಿ ಯಾರಿಗೂ ಕೆಲಸ ಮಾಡಿಕೊಡಲು ಸಾಧ್ಯವಿಲ್ಲ ಎನ್ನಲು ಸಾಧ್ಯವೇ ಇಲ್ಲ. ಕ್ರಿಯಾಶೀಲ, ಜನಪರ ಅಭಿವೃದ್ದಿಪರ ಕಾಳಜಿ ಇರುವ ಶಾಸಕ ಎಂದು ಹೊಗಳಿದರು. ಪಕ್ಷೇತರರಾಗಿ ಗೆದ್ದರೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಹ ಸದಸ್ಯರಾದರು. ಮುಂದೆ ಕಾಂಗ್ರೆಸ್‌ನವರಾಗಿಯೇ ಮುಂದುವರೆಯುತ್ತಾರೆ. ನಮಗೂ ಜನಪರ ಕಾಳಜಿ ಇರುವ ಕ್ರೀಯಾಶೀಲ ವ್ಯಕ್ತಿ ಬೇಕು ಎಂದರು.

ಕ್ಷೇತ್ರದ ಅಬಿವೃದ್ಧಿಯಲ್ಲಿ ಶಾಸಕರ ಪ್ರಯತ್ನ ಅತೀ ಅವಶ್ಯ. ಸರಕಾರದ ಅನೇಕ ಕಾರ್ಯಕ್ರಮಗಳು ಜನರಿಗೆ ತಲುಪಲು ಶಾಸಕರ ಪಾತ್ರ ಅತೀ ಮುಖ್ಯ. ಬಹಳಷ್ಟು ಶಾಸಕರು ಬೆಂಗಳೂರಿಗೆ ಬಂದು ಅಲ್ಲಿಯೇ ನೆಲೆಸಿ ತಮ್ಮ ಕ್ಷೇತ್ರದ ಕರ್ತವ್ಯವನ್ನೇ ಮರೆಯುತ್ತಾರೆ. ಆದರೆ ಮಂಕಾಳು ವೈದ್ಯ ಹಾಗಲ್ಲ ಎಂದರು.

ಕರ್ನಾಟಕವು ತಮ್ಮ ಸರಕಾರ ಅಸ್ಥಿತ್ವಕ್ಕೆ ಬಂದಾಗ ಬಂಡವಾಳ ಹೂಡಿಕೆಯಲ್ಲಿ 11ನೇ ಸ್ಥಾನದಲ್ಲಿತ್ತು. ಆದರೆ ಕಳೆದ ವರ್ಷ ಹಾಗೂ ಈ ವರ್ಷ ಮೊದಲ ಸ್ಥಾನದಲ್ಲಿದೆ. ಇದಕ್ಕೆ ಸಚಿವ ಆರ್.ವಿ. ದೇಶಪಾಂಡೆಯವರ ಅನುಭವ ಹಾಗೂ ಶ್ರಮ ಸಾಕಷ್ಟಿದೆ. ಕೈಗಾರಿಕಾ ಸ್ನೇಹಿ ವಾತಾವರಣ ಇದ್ದಾಗ ಮಾತ್ರ ಬಂಡವಾಳ ಹೂಡಲು ಸಾಧದ್ದಿ ಮೊದಲು ಮೊದಲ ಸ್ಥಾನದಲ್ಲಿದ್ದ ಗುಜರಾತಗೆ ಈಗ ನಮ್ಮ ಅರ್ಧದಷು ಕೂಡ ಬರುತ್ತಿಲ್ಲ ಎಂದರು. ಕೊಟ್ಟ ಮಾತನ್ನು ಉಳಿಸಿ ಕೊಂಡಿದ್ದು ನುಡಿದಂತೆ ನಡೆದ ಸರ್ಕಾರವಾಗಿದೆ ಎಂದರು.

ರೈತರ ಸಾಲ ಮನ್ನಾ ಮಾಡಿ ಎಂದು ಯಡಿಯೂರಪ್ಪ ಹೇಳಿದರು. ಸೊಸೈಟಿಗಳಿಂದ ನೀಡಲಾಗಿರುವ 860೫ ಕೋಟಿ ರೂ. ಮನ್ನಾ ಮಾಡಲಾಗಿದೆ. ಇನ್ನು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ಸಾಲವನ್ನು ಮನ್ನಾ ಮಾಡಲು ಪ್ರಧಾನಿ ಮೋದಿಯವರಿಗೆ ನಿಯೋಗದೊಂದಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಪ್ರಧಾನಿಗಳು ಇದಕ್ಕೆ ಒಪ್ಪಲಿಲ್ಲ. ಪ್ರಧಾನಿಯವರ ಮನವೊಲಿಸುವಂತೆ ನಿಯೋಗದೊಂದಿಗೆ ತೆರಳಿದ್ದ ಯಡಿಯೂರಪ್ಪ, ಈಶ್ವರಪ್ಪ ಮುಂತಾದವರಿಗೆ ಹೇಳಿದರೆ ಒಬ್ಬರೂ ತುಟಿ ಪಿಟಕ್ ಅನ್ನಲಿಲ್ಲ. ಬಿಜೆಪಿ ನಾಯಕರು ಇಲ್ಲಿ ಮಾತ್ರ ಬೊಬ್ಬೆ ಹೊಡೆಯುತ್ತಾರೆ. ಮೋದಿ ರೈತರ ಕಷ್ಟಗಳಿಗೆ ಸ್ಪಂದಿಸಲಿಲ್ಲ. ಅವರ ಮುಂದೆ ಇವರೂ ಉತ್ತರ ಕುಮಾರನಂತೆ ಮೂಕರಾದರು ಎಂದು ವ್ಯಂಗ್ಯವಾಡಿದರು.

ಬಿಜೆಪಿ ನಾಯಕರಿಗೆ ರೈತರ ಬಗ್ಗೆ ಮಾತಾಡಲು ಯಾವುದೇ ನೈತಿಕತೆ ಇಲ್ಲ. ತಾಕತ್ತು ಕೂಡ ಇಲ್ಲ. ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ 27 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ದರು. ಈಗ ಮೋದಿಯವರ ಬಳಿ ಮಾತ್ರ ಯಾಕೆ ಆಗುತ್ತಿಲ್ಲ? ಎಂದು ಪ್ರಶ್ನಿಸಿದರು.

ಅನಂತ ಕುಮಾರ ಬರೀ ಬೊಗಳೆ ಬಿಡುತ್ತಾರೆ: ಶಾಸಕ ಮಂಕಾಳು ವೈದ್ಯ
ಶಾಸಕ ಮಂಕಾಳು ವೈದ್ಯ ಮಾತನಾಡಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಭಾಷಣ ಮಾಡಿದ್ದು ಬಿಟ್ಟರೆ ಅವರು ಏನು ಮಾಡಿಲ್ಲ. ಅವರು ಏನಾದರೂ ಸಾಧನೆ ಮಾಡಿದಿದ್ದರೆ ಅದರ ವಿವರ ಕೊಡಲಿ. ನನ್ನ ಕ್ಷೇತ್ರಕ್ಕೆ 1000 ಕೋಟಿ ತಂದಿದ್ದೇನೆ ಅಂದಾಗ ಸಾವಿರ ಮಾತಾಡಿದರು. ಆದರೆ 1000 ಅಲ್ಲ 1500 ಕೋಟಿ ತಂದಿದ್ದೇನೆ. ತಾನು 24 ಗಂಟೆ ಕೆಲಸ ಮಾಡಿದ್ದೇನೆ. ಮುಖ್ಯಮಂತ್ರಿಗಳ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡುವ ಯಾವ ಅಧಿಕಾರವೂ ಅವರಿಗೆ ಇಲ್ಲ ಎಂದರು.

ತಾವು ನಮ್ಮ ಕ್ಷೇತ್ರದಲ್ಲಿ ವಿದ್ಯುತ್ ಇಲ್ಲದ ಮನೆಗಳಿಗೆ ವಿದ್ಯುತ್ ಪೂರೈಸಲು ಕೇಂದ್ರ ಸರಕಾರದ ದೀನ್‌ದಯಾಳ್ ಯೋಜನೆಗೆ ಬರುವ ವರೆಗೆ ಕಾದಿಲ್ಲ. ರಾಜ್ಯ ಸರಕಾರದಿಂದಲೇ ಅನುದಾನ ಪಡೆದು ಸುಮಾರು 7 ಸಾವಿರ ಮನೆಗಳಿಗೆ ವಿದ್ಯುತ್ ನೀಡಿದ್ದೇನೆ. ಬಿಜೆಪಿಯವರು ಸುಳ್ಳು ಭರವಸೆ ನೀಡುತ್ತಾರೆ. ಬೇಡದ್ದು ಮಾತಾಡಬಾರದು. ಏನಾದರೂ ಮಾತಾಡುವಾಗ ಅದರಲ್ಲಿ ಸಂಸ್ಕಾರ ಇರಬೇಕು. ಭಟ್ಕಳ ಕ್ಷೇತ್ರವನ್ನು ಬಿಜೆಪಿ ಮಾಡುತ್ತಾರಂತೆ. ಆದರೆ ಒಬ್ಬ ಅನಂತಕುಮಾರ ಅಲ್ಲ 100 ಅನಂತ ಕುಮಾರಗಳು ಬಂದರೂ ಕ್ಷೇತ್ರವನ್ನು ತಾವು ಬಿಟ್ಟು ಕೊಡುವುದಿಲ್ಲ ಎಂದರು.


ಇಂದು ಹೆಚ್ಚು ಓದಿದ ಹೆಚ್ಚು ಸುದ್ದಿಗಳು
►►ನೌಕಾಪಡೆ ಅಧಿಕಾರಿಗಳಿಗೆ ಅಗೌರವ ತೋರಿದರೆ ರಕ್ಷಣಾ ಮಂತ್ರಿ?:
http://bit.ly/2jj8inh
►►ಬಿಜೆಪಿ ಚುನಾವಣಾ ಪ್ರಚಾರ ರಾಜ್ಯದಲ್ಲಿ ಕೋಮುಸಾಮರಸ್ಯ ಕದಡದಿರಲಿ: ಸಿದ್ಧರಾಮಯ್ಯ: http://bit.ly/2BCCiB4
►►ಸಿ.ಎಸ್. ದ್ವಾರಕನಾಥ್ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ದೂರು ದಾಖಲು: http://bit.ly/2AzTJTy
►►ಕೆಂಪಯ್ಯ ಸಲಹೆ ನೀಡಿದರೆ ತಪ್ಪೇನು? ಪ್ರತಾಪ ಸಿಂಹಗೆ ಸಿದ್ದರಾಮಯ್ಯ ಪ್ರಶ್ನೆ: http://bit.ly/2jkBCJR
►►ಮುಸ್ಲಿಮ್ ಯುವತಿಯರ ಡ್ಯಾನ್ಸ್‌ಗೆ ಬೆಂಬಲ ನೀಡಿದ ರೇಡಿಯೊ ಜಾಕಿಗೆ ಕೊಲೆ ಬೆದರಿಕೆ: http://bit.ly/2BCuOyc
►►ನಿತ್ಯಾನಂದ ಭಕ್ತರಿಂದ ವಿಚಾರವಾದಿ ನರೇಂದ್ರ ನಾಯಕ್‌ಗೆ ಬೆದರಿಕೆ: http://bit.ly/2iqYMxg
►►ರಾಮ ಹುಟ್ಟಿದ್ದಕ್ಕೆ ಪುರಾವೆ ಇಲ್ಲ: ಸಿ. ಎಸ್. ದ್ವಾರಕನಾಥ್: http://bit.ly/2jijuQY
►►ರೈಲಿನಲ್ಲಿ ದರೋಡೆ: ಚಿನ್ನಾಭರಣ ಸಹಿತ ಆರೋಪಿಗಳ ಸೆರೆ: http://bit.ly/2B26jhH
►►ಭರ್ಜರಿಯಾಗಿ ಸಾಗಿದೆ ಜಿಗ್ನೇಶ್ ಪ್ರಚಾರ: ಸಾಥ್ ನೀಡಿದ್ದಾರೆ ದೇಶಾದ್ಯಂತದ 'ಸಂಗಾತಿಗಳು': http://bit.ly/2knfYYV
►►ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದ ರಜೆ ರದ್ದು ಮಾಡಿದ ಯೋಗಿ ಸರ್ಕಾರ: http://bit.ly/2jV3Ees

Related Tags: Siddaramiah, Uttara Kannada, Karwar News, Bhatkal News, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ