ಸಂಸದ ಪ್ರತಾಪ್ ಸಿಂಹ ವರ್ತನೆಗೆ ವ್ಯಾಪಕ ಟೀಕೆ: ಬಿಜೆಪಿ ಬಂದ್ ಕರೆ ವಾಪಸ್

ಕರಾವಳಿ ಕರ್ನಾಟಕ ವರದಿ

ಮೈಸೂರು/ಚಿಕ್ಕಮಗಳೂರು:
ಸಂಸದ ಪ್ರತಾಪ್ ಸಿಂಹ ಬಂಧನ ಮತ್ತು ಹುಣಸೂರಿನಲ್ಲಿ ಹನುಮ ಜಯಂತಿ ವೇಳೆ ನಡೆದ ಲಾಠಿ ಚಾರ್ಜ್ ಖಂಡಿಸಿ ನೀಡಿದ್ದ ಹುಣಸೂರು ಬಂದ್ ಕರೆಯನ್ನು ಬಿಜೆಪಿ ವಾಪಾಸ್ ಪಡೆದಿದೆ. ಸಂಸದ ಪ್ರತಾಪ ಸಿಂಹ ಅವರ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಹುಣಸೂರು ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ.

ಕಾನೂನು ಸುವ್ಯವಸ್ಥೆ ಕಾಪಾಡುವ ದಿಸೆಯಲ್ಲಿ ಬಂದ್ ಕರೆ ವಾಪಾಸ್ ಪಡೆದಿದ್ದೇವೆ. ಪೊಲೀಸರು ವಶಕ್ಕೆ ಪಡೆದಿರುವ ಕಾರ್ಯಕರ್ತರನ್ನು ಇನ್ನೂ ಬಿಡುಗಡೆಗೊಳಿಸಿಲ್ಲ. ಆದ್ದರಿಂದ ಘಟನೆ ಖಂಡಿಸಿ ಶಾಂತಿಯುತ ಪ್ರತಿಭಟನೆ ನಡೆಸುತ್ತೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಿವಣ್ಣ ತಿಳಿಸಿದ್ದಾರೆ.

ಪ್ರತಾಪ ಸಿಂಹ ಬಂಧನ-ಬಿಡುಗಡೆ
ಹನುಮಂತ ಜಯಂತ್ಯುತ್ಸವದ ಮೆರವಣಿಗೆಯಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಅವರೂ ಭಾಗವಹಿಸಬೇಕಿತ್ತು. ಅಲ್ಲಿಗೆ ತೆರಳುತ್ತಿದ್ದ ಪ್ರತಾಪ್ ಸಿಂಹ ಅವರಿಗೆ ಬಿಳಿಕೆರೆ ಬಳಿ ಬ್ಯಾರಿಕೇಡ್ ಹಾಕಲಾಯಿತು.

ಇದಕ್ಕೆ ಸಂಸದ ಪ್ರತಾಪ್ ಸಿಂಹ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಲ್ಲದೇ ತಾವೇ ಕಾರು ಚಲಾಯಿಸಿ ಬ್ಯಾರಿಕೇಡ್ ತಳ್ಳಿಕೊಂಡು ಮುಂದಕ್ಕೆ ಸಾಗಿದ್ದ ಈ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ನಿರ್ಲಕ್ಷ್ಯತನದ ವಾಹನ ಚಾಲನೆ ಆರೋಪದ ಮೇರೆಗೆ ಪ್ರತಾಪಸಿಂಹ ಅವರ ವಿರುದ್ಧ ಹುಣಸೂರು ತಾಲ್ಲೂಕಿನ ಬಿಳಿಕೆರೆ ಠಾಣೆಯಲ್ಲಿ ದೂರು ದಾಖಲಿಸಿ, ರಾತ್ರಿ ಬಿಡುಗಡೆ ಮಾಡಲಾಗಿತ್ತು.
ಪೊಲೀಸರ ವಿರುದ್ಧ ಪ್ರತಾಪ ಸಿಂಹ ಆಕ್ರೋಶ
ಪೊಲೀಸರ ಕ್ರಮ ವಿರೋಧಿಸಿ ಪ್ರತಾಪ ಸಿಂಹ ಟ್ವೀಟ್ ಮಾಡಿದ್ದು, ‘ನನ್ನ ಧರ್ಮದ ಸಂಪ್ರದಾಯ ರಕ್ಷಿಸುವುದು ನನ್ನ ರಾಜಕೀಯ ಭವಿಷ್ಯಕ್ಕಿಂತ ಹೆಚ್ಚು ಮಹತ್ವದ್ದು’ ಎಂದು ತನ್ನ ನಡವಳಿಕೆ ಸಮರ್ಥಿಸಿಕೊಂಡಿದ್ದಾರೆ.

ಪ್ರತಾಪ ಸಿಂಹ ಅವರನ್ನು ಸುಮ್ಮನೆ ಬಿಡಬೇಕಿತ್ತಾ: ಮುಖ್ಯಮಂತ್ರಿ ಗರಂ
ಪೊಲೀಸರು ಹಾಕಿದ ಬ್ಯಾರಿಕೇಡ್ ತಳ್ಳಿಕೊಂಡು ಮುಂದೆ ಸಾಗಿದ ಪ್ರತಾಪ ಸಿಂಹ ಅವರನ್ನು ಸುಮ್ಮನೆ ಬಿಡಬೇಕಾಗಿತ್ತಾ? ಸಂಸದರಾಗಲಿ, ಶಾಸಕರಾಗಲಿ ತಾವೇ ಮಾಡಿದ ಕಾನೂನಿಗೆ ಗೌರವ ಕೊಡದಿದ್ದರೆ ಜನ ಸಾಮಾನ್ಯರು ಹೇಗೆ ಗೌರವಿಸುತ್ತಾರೆ? ಈ ಘಟನೆ ಬಗ್ಗೆ ವರದಿ ತರಿಸಿಕೊಂಡಿದ್ದೇನೆ.

ಜನಪ್ರತಿನಿಧಿಗಳು ಕಾನೂನು ಉಲ್ಲಂಘಿಸಕೂಡದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಾಪ ಸಿಂಹ ವರ್ತನೆ ವಿರುದ್ಧ ಗುಡುಗಿದ್ದಾರೆ. ಸಂಸದ ಪ್ರತಾಪಸಿಂಹ ಸ್ವತಃ ವಾಹನ ಚಾಲನೆ ಮಾಡಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳ ಮೇಲೆ ನುಗ್ಗಿಸಿರುವುದು ಅಪರಾಧ. ಕಾನೂನು ಕೈಗೆ ತೆಗೆದುಕೊಳ್ಳುವುದಕ್ಕೆ ಯಾರಿಗೂ ಅವಕಾಶ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಹುಣಸೂರಿನಲ್ಲಿ ಪೊಲೀಸರಿಗೆ ಕಲ್ಲೆಸೆತ, ಲಾಠಿ ಚಾರ್ಜ್
ಹುಣಸೂರಿನಲ್ಲಿ ಆಯೋಜಿಸಲಾಗಿದ್ದ ಹನುಮಂತ ಜಯಂತ್ಯುತ್ಸವದ ಮೆರವಣಿಗೆಯನ್ನು ಪೊಲೀಸರು ತಡೆದಾಗ ಹನುಮ ಮಾಲಾಧಾರಿಗಳು ಪ್ರತಿಭಟನೆಯಿಂದ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಈದ್ ಮಿಲಾದ್ ಹಾಗೂ ಹನುಮ ಜಯಂತಿ ಒಟ್ಟಿಗೆ ಬಂದಿದ್ದರಿಂದ ಮೆರವಣಿಗೆ ಸಾಗುವ ಮಾರ್ಗಗಳನ್ನು ಹೊರತುಪಡಿಸಿ ಪಟ್ಟಣದಲ್ಲಿ ಡಿ.2ರಿಂದ ಡಿ.4ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.

ಮಂಜುನಾಥ ಬಡಾವಣೆಯ ಹನುಮ ದೇಗುಲದಿಂದ ನಗರಸಭೆಯವರೆಗೆ ರಥಯಾತ್ರೆ ನಡೆಸಲು ತಾಲ್ಲೂಕು ಆಡಳಿತ ಅವಕಾಶ ನೀಡಿತ್ತು. ಆದರೆ, ಸಂಘ ಪರಿವಾರದ ಕಾರ್ಯಕರ್ತರು ರಂಗನಾಥ ಬಡಾವಣೆಯಿಂದ ಮೆರವಣಿಗೆ ನಡೆಸಲು ಮುಂದಾದಾಗ ತಡೆದ ಪೊಲೀಸರೊಂದಿಗೆ ವಾಗ್ವಾದ ನಡೆದಿತ್ತು.

ಖಡಕ್ ಅಧಿಕಾರಿ ಎಸ್‌‍ಪಿ ರವಿ ಚನ್ನಣ್ಣ ಕಾರಿಗೆ ಕಲ್ಲೆಸೆತ
ಮೆರವಣಿಗೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಆಕ್ರೋಶಿತ ಸಂಘ ಪರಿವಾರ ಕಾರ್ಯಕರ್ತರು ದೇಗುಲದ ಎದುರು ಜಮಾಯಿಸಿ ಧರಣಿ ಕುಳಿತರು. ಸಂಸದ ಪ್ರತಾಪ ಸಿಂಹ ಅವರನ್ನು ಬಿಡುಗಡೆ ಮಾಡುವವರೆಗೂ ಮೆರವಣಿಗೆ ನಡೆಸುವುದಿಲ್ಲವೆಂದು ಪಟ್ಟು ಹಿಡಿದರು.

ಪ್ರತಿಭಟನಾಕಾರರ ಮನವೊಲಿಸಲು ಸ್ಥಳಕ್ಕೆ ಧಾವಿಸಿದ ಉಪವಿಭಾಗಾಧಿಕಾರಿ ಕೆ.ನಿತೀಶ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ ಕಾರಿನ ಮೇಲೆಯೂ ಕಲ್ಲು ತೂರಾಟ ನಡೆಸಿದರು. ರೊಚ್ಚಿಗೆದ್ದ ಪೊಲೀಸರು ಕಿಡಿಗೇಡಿಗಳನ್ನು ನಿಯಂತ್ರಿಸುವ ಸಲುವಾಗಿ ಲಾಠಿ ಪ್ರಹಾರ ನಡೆಸಿದರು. ಮುನ್ನೂರಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದರು.

ಗೋರಿಯ ಕಲ್ಲು ಕಿತ್ತ ದತ್ತಮಾಲಾಧಾರಿ
ಚಿಕ್ಕಮಗಳೂರಿನ ಇನಾಂ ದತ್ತಾತ್ರೇಯ ಬಾಬಾಬುಡನ್‌ಗಿರಿಯ ನಿಷೇಧಿತ ಪ್ರದೇಶದಲ್ಲಿದ್ದ ಗೋರಿಯೊಂದರ ಕಲ್ಲನ್ನು ಕಿಡಿಗೇಡಿಗಳು ಕಿತ್ತು ಹಾಕಿದ ಘಟನೆ ಭಾನುವಾರ ನಡೆದಿದೆ.

ಭಾನುವಾರ ಬಂದಿದ್ದ ಸಹಸ್ರಾರು ದತ್ತಮಾಲಾಧಾರಿಗಳ ಪೈಕಿ ಒಬ್ಬ ವ್ಯಕ್ತಿ ಆವರಣದ ಬೇಲಿ ಏರಿ ಜಿಗಿದು ನಿರ್ಬಂಧಿತ ಪ್ರದೇಶದಲ್ಲಿ ಭಗವಾದ್ವಜ ನೆಟ್ಟಿದ್ದ. ಇತರ ಕೆಲವು ಭಕ್ತರು ನಿರ್ಬಂಧಿತ ಪ್ರದೇಶದೊಳಗೆ ತೆರಳಿ ಗೋರಿಗೆ ನೆಟ್ಟಿದ್ದ ನಾಮಫಲಕವನ್ನು ಉರುಳಿಸಿದ್ದರಿಂದ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಪೊಲೀಸರು ಭಗವಾಧ್ವಜ ನೆಟ್ಟ ದತ್ತಭಕ್ತನನ್ನು ನಿಷೇಧಿತ ಪ್ರದೇಶದಿಂದ ಎಳೆದೊಯ್ದುರು. ಈ ಸಂದರ್ಭ ಕೆಲವರು ಕೇಸರಿ ಶಲ್ಯಗಳನ್ನು ಗಂಟುಕಟ್ಟಿ ನಿರ್ಬಂಧಿತ ಪ್ರದೇಶದ ಕಡೆಗೆ ತೂರಿದ್ದರು. ಐಜಿಪಿ ಹೇಮಂತ್ ನಿಂಬಾಳ್ಕರ್, ಎಸ್ಪಿ ಅಣ್ಣಾಮಲೈ, ಎಎಸ್ಪಿ ಕೆ.ಎಚ್.ಜಗದೀಶ್ ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಸಫಲರಾಗಿದ್ದಾರೆ.

ಮನವಿಗೆ ಬೆಲೆ ಸಿಗದಿದ್ದಾಗ ಲಾಟಿ ಬೀಸಿದ ಅಣ್ಣಾಮಲೈ
ಬಾಬಾಬುಡನ್‌ಗಿರಿಯ ಘಟನೆಗಳ ಬಳಿಕ ಚಿಕ್ಕಮಗಳೂರು ನಗರದಲ್ಲಿ ಕಲ್ಲು ತೂರಾಟ ನಡೆಯಿತು. ಉಪ್ಪಳ್ಳಿಯಲ್ಲಿ ಖಾಸಗಿ ಬಸ್ ಒಂದರ ಮೇಲೆ ಕಲ್ಲು ತೂರಲಾಗಿದೆ. ಬೈಕಿನಲ್ಲಿ ತೆರಳುತ್ತಿದ್ದ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಲಾಯಿತು. ರಾಮನಹಳ್ಳಿಯ ಮೌಂಟನ್ ವ್ಯೂ ಕಾಲೇಜಿನ ಬಳಿ ಬಸ್ ಹಾಗೂ ಅಂಗಡಿಯೊಂದರ ಮೇಲೆ ಕಲ್ಲು ತೂರಾಟ ಮಾಡಲಾಗಿತ್ತು.

ವಾಹನವನ್ನು ಪೊಲೀಸರು ತಡೆದರು ಎಂದು ಶೃಂಗಾರ್ ವೃತ್ತದ ಬಳಿ ದತ್ತಮಾಲಾಧಾರಿಗಳು ಪ್ರತಿಭಟನೆಗೆ ಮುಂದಾಗಿದ್ದರು. ಎಸ್.ಪಿ.ಅಣ್ಣಾಮಲೈ ಅವರು ದತ್ತಮಾಲಾಧಾರಿಗಳಿಗೆ ಸ್ಥಳದಿಂದ ತೆರಳುವಂತೆ ಮನವಿ ಮಾಡಿದಾಗ ಅದಕ್ಕೆ ಬೆಲೆ ಸಿಗದಿದ್ದಾಗ ಲಾಠಿ ಪ್ರಹಾರಕ್ಕೆ ಎಸ್‌ಪಿ ಆದೇಶ ನೀಡಿದ್ದರು.

ನಗರದ ಕೋಟೆ ಬಡಾವಣೆಯ ಸಮೀಪ ಕೆಲವರು ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತ ವಾಹನದಲ್ಲಿ ಸಂಚರಿಸುತ್ತಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

ಶಲ್ಯ ತೂರುವುದು ಅವಮಾನಕರ: ಸಿ.ಟಿ.ರವಿ
ಶಲ್ಯ ತೂರುವುದು ಸನ್ಮಾನ ಅಲ್ಲ ಅಪಮಾನ. ಯಾರೂ ಇಂಥ ಕೆಲಸ ಮಾಡಬಾರದು. ಮಾಲಾಧಾರಿಗಳಾಗಿ ಕೆಟ್ಟ ಘೋಷಣೆಗಳನ್ನು ಕೂಗುವುದು ಸಂಸ್ಕಾರ ಅಲ್ಲ ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ.

ಪ್ರಜಾಪ್ರಭುತ್ವದ ಕಗ್ಗೊಲೆ: ಅನಂತಕುಮಾರ್ ಹೆಗಡೆ ಆಕ್ರೋಶ
ಸಂಸದ ಪ್ರತಾಪಸಿಂಹ ಅವರನ್ನು ಬಂಧಿಸುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನಪ್ರತಿನಿಧಿಯನ್ನು ಹೇಗೆ ನಡೆಸಿಕೊಳ್ಳಬೇಕು ಎಂಬ ಸಾಮಾನ್ಯಜ್ಞಾನವೂ ರಾಜ್ಯ ಸರ್ಕಾರಕ್ಕೆ ಇಲ್ಲ. ದಮನಕಾರಿ ನೀತಿಯನ್ನು ಅನುಸರಿಸಿ ಹಿಂದೂ ಧರ್ಮದ ಆಚರಣೆಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಗಲಭೆಯ ಹಿಂದೆ ರಾಜ್ಯ ಸರ್ಕಾರದ ಕೈವಾಡವಿದೆ. ಪೊಲೀಸರು ಲಾಠಿ ಬೀಸುವ ಅನಿವಾರ್ಯತೆ ಇರಲಿಲ್ಲ ಎಂದು ಆರೋಪಿಸಿದ್ದಾರೆ.

ಆಂಜನೇಯ ದೇಗುಲದಲ್ಲಿ ಪೊಲೀಸರ ಪೂಜೆ
ಬಿಜೆಪಿ ಹುಣಸೂರು ಬಂದ್ ಹಿಂಪಡೆದ ಪರಿಣಾಮ ನಗರವು ಸಹಜ ಸ್ಥಿತಿಗೆ ಮರಳುತ್ತಿರುವ ಹಿನ್ನೆಲೆಯಲ್ಲಿ ಆಂಜನೇಯ ಸ್ವಾಮಿ ದೇಗುಲದಲ್ಲಿ ಪೊಲೀಸರು ಪೂಜೆ ಸಲ್ಲಿಸಿ ಶಾಂತಿಗೆ ಪ್ರಾರ್ಥಿಸಿದ್ದಾರೆ.

ಹುಣಸೂರಿನಲ್ಲಿ ಅಂಗಡಿ ಮುಂಗಟ್ಟು ತೆರೆದಿವೆ. ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಪೊಲೀಸರು ಪಥಸಂಚನ ನಡೆಸಿ ಜನರಲ್ಲಿ ಧೈರ್ಯ ತುಂಬಿದ್ದಾರೆ.

ಈ ನಡುವೆ ಮೈಸೂರಿನಲ್ಲಿ ಪ್ರತಿಭಟನೆ ನಡೆಸಲು ಬಿಜೆಪಿ ಮುಖಂಡರು ಮುಂದಾಗಿದ್ದಾರೆ.

ಇಂದು ಹೆಚ್ಚು ಓದಿದ ಹೆಚ್ಚು ಸುದ್ದಿಗಳು
►►ಮುಸ್ಲಿಮ್ ಹುಡುಗಿಯರ ಡ್ಯಾನ್ಸ್: ಜಗತ್ತೇ ಮುಳುಗಿತು ಎನ್ನುತ್ತಿದ್ದಾರೆ ಮೂಲಭೂತವಾದಿಗಳು!:
http://bit.ly/2ATS5iD
►►ಉತ್ತರ ಪ್ರದೇಶದಲ್ಲಿ ಬಿಜೆಪಿ ನಿಜಕ್ಕೂ ಜಯಭೇರಿ ಬಾರಿಸಿದೆಯೆ? ಇಲ್ಲಿದೆ : http://bit.ly/2ApQMVJ
►►ಮಂಗಳೂರು ಮದುವೆಗೆ ಬಂದಳು ಕರಾವಳಿ ಚೆಲುವೆ ಐಶ್ವರ್ಯಾ ರೈ: http://bit.ly/2Ans5v5
►►ಟೆಸ್ಟ್‌ ಕ್ರಿಕೆಟ್‌ನಲ್ಲಿ 6 ದ್ವಿಶತಕ ಸಿಡಿಸಿದ ಮೊದಲ ನಾಯಕ: ಕೊಹ್ಲಿ ಮತ್ತೊಂದು ದಾಖಲೆ: http://bit.ly/2zZ3T3j
►►ಅಣು ವಿದ್ಯುತ್ ಘಟಕಗಳು ಅಪಾಯಕಾರಿ: ಪ್ರಶಾಂತ ಭೂಷಣ: http://bit.ly/2ASz6Vy

Related Tags: Pratap Simha Arrested, Hunsur, Hanuma Jayanthi, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಹುಣಸೂರು ಬಂದ್ ಕರೆ ವಾಪಾಸ್ , ಗೋರಿ ಕಲ್ಲು ಕಿತ್ತ ಕಿಡಿಗೇಡಿ, ಪ್ರತಾಪ ಸಿಂಹ, ಸಿ.ಟಿ.ರವಿ, ಅಣ್ಣಾಮಲೈ, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ