ಕುಂದಾಪುರ: ಬಿಜೆಪಿ ಪರಿವರ್ತನಾ ಯಾತ್ರೆಯಲ್ಲ, ಹಾಲಾಡಿ ಬಣದ ಶಕ್ತಿ ಪ್ರದರ್ಶನ ಜಾತ್ರೆ

ಶಶಿಧರ ಹೆಮ್ಮಾಡಿ
ಕುಂದಾಪುರ:
ರಾಜ್ಯ ಬಿಜೆಪಿ ಕೈಗೊಂಡಿರುವ ಪರಿವರ್ತನಾ ಯಾತ್ರೆ ಸೋಮವಾರ ಕುಂದಾಪುರ ತಲುಪಲಿದ್ದು ಸ್ಥಳೀಯ ಬಿಜೆಪಿ ಮೂಲೆಗುಂಪಾಗಿ ಎಲ್ಲೆಲ್ಲೂ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರದ್ದೆ ಕಾರುಬಾರು ಕಾಣುತ್ತಿದೆ.ಬಿಜೆಪಿಯಿಂದ ಸಚಿವ ಸ್ಥಾನ ಕೊಡುತ್ತೇನೆಂದು ಆಶ್ವಾಸನೆ ನೀಡಿ ಪ್ರಮಾಣವಚನಕ್ಕೂ ಕರೆದು ಹಠಾತ್ ಆಗಿ ನಿರ್ಧಾರ ಬದಲಾಯಿಸಿದ್ದ ಬಿಜೆಪಿ ಹಾಲಾಡಿ ಶ್ರೀನಿವಾಸ ಶೆಟ್ಟರ ಬದಲಿಗೆ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಚಿವ ಸ್ಥಾನ ನೀಡಿತ್ತು. ಇದರಿಂದ ಅವಮಾನಿತರಾಗಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿ ತೊರೆದಿದ್ದರು. ಬಳಿಕ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ 40 ಸಾವಿರಕ್ಕೂ ಮಿಕ್ಕಿ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಎದುರು ಜಯಗಳಿಸಿದ್ದರು. ಬಿಜೆಪಿಯಂತೂ ಆಗ ಮೂರನೆ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು.

ಹಲವಾರು ಕಾಲ ಬಿಜೆಪಿಯಿಂದ ಬಹುದೂರವೇ ಉಳಿದಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿಯ ಒಂದು ದೊಡ್ಡ ತಂಡವನ್ನು ಮಾತ್ರ ತಮ್ಮ ವಿಶ್ವಾಸದಲ್ಲೆ ಇಟ್ಟುಕೊಂಡಿದ್ದರು. ಬಳಿಕ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆ ಮುಂತಾದವುಗಳು ಬಂದಾಗ 'ಬಿಜೆಪಿ ಹಾಲಾಡಿ ಬಣ' ಎನ್ನುವ ಹೆಸರಿನಲ್ಲಿ ಬಿಜೆಪಿಯೊಳಗೆ ಒಂದು ತಂಡ ತಯಾರಾಗಿತ್ತು. ಬಿಜೆಪಿಯಿಂದ ಅಧಿಕೃತ ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ ಹಾಲಾಡಿ ಶ್ರೀನಿನಾಸ ಶೆಟ್ಟರು ಸಂಪೂರ್ಣ ಬೆಂಬಲ ನೀಡಿ ಪ್ರಚಾರಕ್ಕೂ ಇಳಿದು ತಮ್ಮ ಬಣದ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಟ್ಟಿದ್ದರು. ಇಂದಿಗೂ ಅವರೆಲ್ಲ ತಮ್ಮನ್ನು ಬಿಜೆಪಿ ಹಾಲಾಡಿ ಬಣ ಎಂದೇ ಗುರುತಿಸಿಕೊಂಡಿದ್ದಾರೆ.

ಈ ನಡುವೆ ಕುಂದಾಪುರದಲ್ಲಿ ಮೂಲ ಬಿಜೆಪಿ ಎಂದು ತನ್ನನ್ನು ತಾನು ಪರಿಗಣಿಸಿದ್ದ ಬಿಜೆಪಿ ನಾಯಕರು, ಕಾರ್ಯಕರ್ತರ ತಂಡ ಹಾಲಾಡಿ ಬಣಕ್ಕೆ ಸೆಡ್ಡು ಹೊಡೆದು ಬಿಜೆಪಿಯನ್ನು ಸಂಘಟಿಸಲು ತೊಡಗಿತ್ತು. ಮೂಲ ಬಿಜೆಪಿಯ ಅನೇಕ ನಾಯಕರು ಹಾಲಾಡಿ ಅವರಿಗೆ ಸ್ವತಃ ಸವಾಲೆಸೆಯುವಂತೆ, ಹಾಲಾಡಿ ಅವರ ಮಾತು ಬಿಜೆಪಿಯಲ್ಲಿ ಎಲ್ಲಿಯೂ ನಡೆಯಲು ಬಿಡದಂತೆ ಕೆಲಸ ಮಾಡುತ್ತಿದ್ದರು. ಆದರೆ ಇಲ್ಲಿಯೂ ಹಲವಾರು ಬಾರಿ ಹಾಲಾಡಿ ಅವರ ರಾಜಕೀಯದ ದಾಳಗಳ ಮುಂದೆ ಮೂಲ ಬಿಜೆಪಿ ಬಣಕ್ಕೆ ಅಸಮಾಧಾನ, ಅವಮಾನಗಳೂ ಆಗತೊಡಗಿತ್ತು.

ಹಾಲಾಡಿ ಶ್ರೀನಿವಾಸ ಶೆಟ್ಟರು ಮುಂದಿನ ಚುನಾವಣೆಗೆ ಮೊದಲು ಬಿಜೆಪಿ ಸೇರುತ್ತಾರೆ ಎಂಬ ಪುಕಾರು ಹಬ್ಬಿದಾಗಲೂ ಹಾಲಾಡಿ ಅವರು ಮತ್ತೆ ಬಿಜೆಪಿಗೆ ಬಾರದಂತೆ ತಡೆಯಲು ಕಸರತ್ತೂ ಆರಂಭಗೊಂಡಿತ್ತು. ಹಾಲಾಡಿ ಅವರಿಂದ ಬಿಜೆಪಿ ಪಕ್ಷದ ಸಂಘಟನೆಯಲ್ಲಿ ಯಾವ ಪ್ರಯೋಜನವೂ ಇಲ್ಲ ಎಂದು ಮೂಲ ಬಿಜೆಪಿಗರ ತಂಡ ಸ್ವಲ ಮಟ್ಟಿಗೆ ಹೈಕಮಾಂಡ್, ಅದರಲ್ಲೂ ಸಂಘಪರಿವಾರಕ್ಕೆ ಮನವರಿಕೆ ಮಾಡುವಲ್ಲಿಯೂ ಸಫಲವಾಗಿತ್ತು.

ಜಯಪ್ರಕಾಶ ಹೆಗ್ಡೆ ಬಿಜೆಪಿ ಸೇರಿದ ಮೇಲೆ ಬಿಜೆಪಿಯ ಬಣ ರಾಜಕೀಯ ಇನ್ನಷ್ಟು ಬಿರುಸಾಗತೊಡಗಿತ್ತು. ಕುಂದಾಪುರದಿಂದ ಈ ಹಿಂದೆ ಬಿಜೆಪಿಯಲ್ಲಿ ಸ್ಪರ್ಧಿಸಿದ್ದ ಕಿಶೋರ್ ಕುಮಾರ್ ಅಥವಾ ಜಯಪ್ರಕಾಶ ಹೆಗ್ಡೆ ಕುಂದಾಪುರದ ಬಿಜೆಪಿ ಅಭ್ಯರ್ಥಿ ಎಂತಲೂ ಗುಸುಗುಸು ಶುರು ಆಗಿತ್ತು. ಆದರೆ ಈ ನಡುವೆ ಕುಂದಾಪುರಕ್ಕೆ ಒಮ್ಮೆ ಬಂದಿದ್ದ ಸಂಸದೆ ಶೋಭಾ ಕರಂದ್ಲಾಜೆ ಹಾಲಾಡಿ ಶ್ರೀನಿವಾಸ ಶೆಟ್ಟರೇ ಬಿಜೆಪಿ ಅಭ್ಯರ್ಥಿ ಎಂದು ಘೋಷಿಸುವ ಮೂಲಕ ಮತ್ತೆ ಮೂಲ ಬಿಜೆಪಿಗರಿಗೆ ಹಿನ್ನಡೆಯಾಗಿತ್ತು.ಹಾಲಾಡಿ ಶ್ರೀನಿವಾಸ ಶೆಟ್ಟರು ಪಕ್ಷೇತರ ಶಾಸಕರಾಗಿದ್ದರೂ ಕೂಡ ಅವರ ಸುತ್ತಮುತ್ತ ಇರುವುದು, ಅವರ ಬಹುತೇಕ ಬೆಂಬಲಿಗರು ಹಿಂದೆ ಅವರು ಬಿಜೆಪಿಯಲ್ಲಿ ಇದ್ದಾಗ ಅವರ ಜೊತೆಗಿದ್ದವರೇ ಎಂಬುದು ಸತ್ಯ. ಅವರ ರಾಜಕೀಯ ತಂತ್ರ-ಪ್ರತಿತಂತ್ರಗಳ ಕೋರ್ ಕಮಿಟಿಯಲ್ಲೂ ಇರುವುದು ಬಿಜೆಪಿ ಪಕ್ಷದವರೆ. ಜಯಪ್ರಕಾಶ ಹೆಗ್ಡೆ ಅವರು ತಮ್ಮ ಪ್ರಭಾವ, ರಾಜಕೀಯದ ಚಾಣಾಕ್ಷ ನಡೆಗಳ ಮೂಲಕ ತಮ್ಮ ಬಣದ ನಾಯಕರನ್ನು ತಮ್ಮತ್ತ ಒಲಿಸಿಕೊಳ್ಳುವ ಯತ್ನ ನಡೆಸುತ್ತಿರುವುದು ಸ್ವಲ್ಪ ಮಟ್ಟಿಗೆ ಹಾಲಾಡಿಯವರಿಗೆ ತಲೆನೋವಾದರೂ ಹಾಲಾಡಿ ಬಣವನ್ನು ಶಿಥಿಲಗೊಳಿಸಲು ಇನ್ನೂ ಅವರಿಂದಲೂ ಸಾಧ್ಯವಾಗಿಲ್ಲ. ಈ ನಡುವೆ ಹಾಲಾಡಿ ಶ್ರೀನಿವಾಸ ಶೆಟ್ಟರ ಕುರಿತು ಬಿಜೆಪಿಯ ಹೈಕಮಾಂಡ್‌ನಲ್ಲೂ ಭಿನ್ನಾಭಿಪ್ರಾಯಗಳಿದೆ ಎನ್ನುವುದೂ ನಿಜ.

ಇದೀಗ ಪರಿವರ್ತನಾ ಯಾತ್ರೆಯ ಹಿನ್ನೆಲೆಯಲ್ಲಿ ಮತ್ತೆ ಬಿಜೆಪಿಯ ಬಣ ರಾಜಕೀಯ ಗರಿಗೆದರಿದೆ. ತಾಂತ್ರಿಕ ಕಾರಣಕ್ಕಾಗಿ ನಾನು ಬಿಜೆಪಿ ಸೇರಲು ವಿಳಂಬವಾಗುತ್ತಿದೆ, ತಾಂತ್ರಿಕ ತೊಂದರೆಗಳು ಪರಿಹಾರಗೊಂಡ ಬಳಿಕ ಮತ್ತೆ ಬಿಜೆಪಿ ಸೇರಿ ಸಾಮಾನ್ಯ ಕಾರ್ಯಕರ್ತನಂತೆ ದುಡಿಯುತ್ತೇನೆ ಎಂದು ಶ್ರೀನಿವಾಸ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ. ಇದು ಮೂಲ ಬಿಜೆಪಿಗರಿಗೆ ಮತ್ತೊಂದು ಆಘಾತ ನೀಡಿದೆ.

ಪತ್ರಕರ್ತರು ಶ್ರೀನಿವಾಸ ಶೆಟ್ಟಿ ಅವರ ಪ್ರಸ್ತುತ ಮತ್ತು ಭವಿಷ್ಯದ ರಾಜಕೀಯ ನಡೆ, ನಿಲುವುಗಳ ಕುರಿತು ಯಾವುದೇ ಪ್ರಶ್ನೆ ಕೇಳಿದರೂ ಹಾರಿಕೆಯ ಅಥವಾ ಸುತ್ತಿ ಬಳಸಿ ಉತ್ತರ ಕೊಡುತ್ತಿರುವ ಶ್ರೀನಿವಾಸ ಶೆಟ್ಟಿ ಎಲ್ಲೂ ತಮ್ಮ ಸಂಪೂರ್ಣ ಗುಟ್ಟು ಬಿಟ್ಟುಕೊಡುತ್ತಿಲ್ಲ. ಆದರೆ ಪರಿವರ್ತನಾ ಯಾತ್ರೆಯಲ್ಲಿ ಎಲ್ಲಿ ನೋಡಿದರೂ ಶ್ರೀನಿವಾಸ ಶೆಟ್ಟರ ಛಾಪು ಎದ್ದು ಕಾಣಿಸುತ್ತಿದೆ.

ಬ್ರಹ್ಮಾವರದಿಂದ ಕುಂದಾಪುರದ ತನಕ ಹೆದ್ದಾರಿಯಲ್ಲಿ ಎಲ್ಲಿ ನೋಡಿದರೂ ಬಿಜೆಪಿಯ ಪರಿವರ್ತನಾ ಯಾತ್ರೆಯನ್ನು ಸ್ವಾಗತಿಸಲು ಹಾಕಿರುವ ಎಲ್ಲ ಬ್ಯಾನರ್, ಫ್ಲೆಕ್ಸ್‌ಗಳಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟರ ಚಿತ್ರವಿದೆ. ಸಂಪೂರ್ಣ ಯಾತ್ರೆಯ ಉಸ್ತುವಾರಿಯನ್ನೇ ಹಾಲಾಡಿ ಬಣ ಹೊತ್ತಿದೆ ಎಂಬಂತೆ ಕುಂದಾಪುರದಲ್ಲಿ ಚಿತ್ರಣ ಮೂಡಿಸಲಾಗುತ್ತಿದೆ.

 ಅಚ್ಚರಿ ಎಂದರೆ ಶಾಸಕರಾಗಿ ಪಕ್ಷೇತ್ರರರಾಗಿದ್ದುಕೊಂಡು ಹಾಲಾಡಿ ಎಲ್ಲ ಬಿಜೆಪಿಯ ಫ್ಲೆಕ್ಸ್, ಬ್ಯಾನರ್‌ಗಳಲಿ ರಾರಾಜಿಸುತ್ತಿದ್ದರೆ ಮೂಲ ಬಿಜೆಪಿಯ ಯಾರೂ ಸಹ ಈ ಫ್ಲೆಕ್ಸ್‌ಗಳಲ್ಲಿ ಕಾಣಿಸುತ್ತಿಲ್ಲ. ಎಲ್ಲೋ ಅಪರೂಪಕ್ಕೆ ಅಲ್ಲೊಂದು ಇಲ್ಲೊಂದು ಬ್ಯಾನರ್‌ನಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರು ಕಾಣಿಸಿಕೊಂಡಿದ್ದಾರೆ. ಬಿಜೆಪಿ ಸೇರಿದ ಮಾಜಿ ಶಾಸಕ, ಮಾಜಿ ಸಚಿವ ಜಯಪ್ರಕಾಶ ಹೆಗ್ಡೆ ಅವರಂತೂ ಹೆಚ್ಚುಕಡಿಮೆ ಯಾವುದೇ ಬ್ಯಾನರ್‌ನಲಿ ಕಾಣಿಸುತ್ತಿಲ್ಲ. ಇತರ ಬಿಜೆಪಿ ಸ್ಥಳೀಯ ನಾಯಕರದ್ದೂ ಇದೇ ಅವಸ್ಥೆ.

ಒಂದು ಮೂಲದ ಪ್ರಕಾರ ಹಾಲಾಡಿ ಬಣ ಬೇರೆ ಯಾರದೇ ಬ್ಯಾನರ್, ಫ್ಲೆಕ್ಸ್ ಹಾಕದಂತೆ ಎಲ್ಲ ಕಡೆ ತಡೆ ಒಡ್ಡಿ ಕೇವಲ ಹಾಲಾಡಿ ಇರುವ ಫ್ಲೆಕ್ಸ್‌ಗಳು ಮಾತ್ರ ಇರುವಂತೆ ನೋಡಿಕೊಂಡಿದೆ ಎನ್ನಲಾಗುತ್ತಿದೆ. ಆದರೆ ಇದೆಲ್ಲ ನನಗೆ ಗೊತ್ತೇ ಇಲ್ಲ ಎಂದು ಶ್ರೀನಿವಾಸ ಶೆಟ್ಟಿ ಹಾರಿಕೆಯ ಉತ್ತರ ಕೊಡುತ್ತಿದ್ದಾರೆ. ಪರಿವರ್ತನಾ ಯಾತ್ರೆಯ ಸಭೆಯಲ್ಲಿ ತಾನು ಓರ್ವ ಸಾಮಾನ್ಯ ನಾಗರಿಕನಂತೆ ಉಪಸ್ಥಿತನಿರುತ್ತೇನೆ ಎಂದು ಅವರು ಈಗಾಗಲೇ ಹೇಳಿಕೊಂಡಿದ್ದಾರೆ.

ಒಟ್ಟಿನಲ್ಲಿ ಪರಿವರ್ತನಾ ಯಾತ್ರೆ ಕುಂದಾಪುರದ ಮಟ್ಟಿಗೆ ಬಿಜೆಪಿಯ ಬಲ ಪ್ರದರ್ಶನವಾಗದೆ ಹಾಲಾಡಿ ಶ್ರೀನಿವಾಸ ಶೆಟ್ಟರ ವೈಯಕ್ತಿಕ ಪ್ರಭಾವ, ವರ್ಚಸ್ಸು, ಜನಬೆಂಬಲದ ಪ್ರದರ್ಶನವಾಗಿ ಪರಿವರ್ತನೆಯಾಗಿದೆ. ಈ ಮೂಲಕ ಯಾವುದೇ ಕಾರಣಕ್ಕೆ ತನಗೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ತಪ್ಪಿ ಹೋಗದ ಹಾಗೆ ಹೈಕಮಾಡ್ ಮೇಲೆ ಒತ್ತಡ ಹೇರಲು, ಪ್ರಭಾವ ಬೀರಲು ಶ್ರೀನಿವಾಸ ಶೆಟ್ಟಿ ಅವರು ಪರಿವರ್ತನಾ ಯಾತ್ರೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎನ್ನುವುದು ಸದ್ಯಕ್ಕೆ ಕಂಡು ಬರುತ್ತಿರುವ ಸಂಗತಿ. ಒಟ್ಟಿನಲ್ಲಿ ಹಾಲಾಡಿ ಬಣದ ಅಬ್ಬರದ ಮುಂದೆ ಮೂಲ ಬಿಜೆಪಿಗರು ಹೈರಾಣಗೊಂಡಂತೆ ಕಂಡುಬರುತ್ತಿದ್ದಾರೆ ಎನ್ನುವುದು ಅಷ್ಟೇ ನಿಜ.ಇದನ್ನೂ ಓದಿ:
►►ಹಾಲಾಡಿ ಬಿಜೆಪಿ ಸೇರುವುದು ಜನದ್ರೋಹ:
http://bit.ly/2h1lSrg
►►ಶಾಸಕ ಹಾಲಾಡಿ ಕಾಂಗ್ರೆಸ್ ಪಕ್ಷಕ್ಕೆ? ಸಿಎಂ ಸಿದ್ದರಾಮಯ್ಯ ಆಹ್ವಾನ: http://bit.ly/2jxVwnr
►►ಹಾಲಾಡಿ ಬಿಜೆಪಿ ಸೇರುವುದು ಜನದ್ರೋಹ: http://bit.ly/2h1lSrg
►►ಏಕತಾ ಸಮಾವೇಶದಲ್ಲಿ ಕಾಣಿಸಿಕೊಂಡ ಹಾಲಾಡಿ. ಬಿಜೆಪಿಗೆ ಮರಳಲು ಗೆಟ್ಟಿಂಗ್ ರೆಡಿ: http://bit.ly/2gAysiA
►►ಬಿಜೆಪಿಯಲ್ಲಿ ಸ್ಪೋಟಗೊಂಡ ಅಸಮಾಧಾನ: ಹಾಲಾಡಿಗೆ ಮಂಡಿಯೂರಿದ ಬಿಜೆಪಿ ಹೈಕಮಾಂಡ್: http://bit.ly/1QSpclG

►►ಕುಂದಾಪುರ ಬಿಜೆಪಿ: ಸಂಭ್ರಮಾಚರಣೆಯಲ್ಲೂ ಬಣ ರಾಜಕೀಯ: http://bit.ly/2mm5MMn
►►ಕೋಟಿ-ಚೆನ್ನಯ? ಮುದಿಯಾನೆ? ಕುಂದಾಪುರ ಬಿಜೆಪಿ ಕಛೇರಿಗೆ ಮೊದಲ ಬಾರಿ ಜೆ.ಪಿ ಬಂದಾಗ!: http://bit.ly/2nKa1p4
►►ಹಾಲಾಡಿ, ಹೆಗ್ಡೆ ಬೇಡ ಎಂಬ ಅಧಿಕಾರ ಯಾರಿಗೂ ಇಲ್ಲ: ಶೋಭಾ: http://bit.ly/2if1x2X
►►ತೆಕ್ಕಟ್ಟೆ ಬಿಜೆಪಿ ಕಛೇರಿ ಉದ್ಘಾಟನೆಯಲ್ಲೂ ಭಿನ್ನಮತ: ಕೇಸರಿ ಶಾಲು ಮುಚ್ಚಿಕೊಂಡ ಜೆಪಿ: http://bit.ly/2ohfBw4
►►ಹಾಲಾಡಿ ಬೆಂಬಲಿಗರು ಕೇಳಿದ್ದಕ್ಕೆ ಟಿಕೆಟ್: ಕೋಟ: http://bit.ly/20yuyVZ

Related Tags: Parivartana Rally, Kundapur, BJP, Haladi Shrinivas Shetty, Jayaprakash Hegde, Kishor Kumar, Kota Shrinivas Poojary
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ