ಸಮಾಜದಲ್ಲಿ ಕ್ರೌರ್ಯಕ್ಕಿಂತ ಭಯ ದೊಡ್ಡ ರೋಗವಾಗಿ ಹುಟ್ಟಿಕೊಳುತ್ತಿದೆ: ಪ್ರಕಾಶ್ ರೈ ಆತಂಕ
ಜನರ ಅನುಭವಗಳನ್ನು ಪಡೆದು ಅವರ ಜೊತೆ ಸ್ಪಂದಿಸುತ್ತಾ ಬೆಳೆದ ನಾವು ಮಾತನಾಡದೆ ಇದ್ದರೆ ಒಂದು ಸಮಾಜ ಹೇಡಿಯಾಗುವುದಕ್ಕೆ ನಾವು ಜವಾಬ್ದಾರರಾಗುತ್ತೇವೆ ಎಂದು ಪ್ರಕಾಶ್ ರೈ ಹೇಳಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಕೋಟ ಶಿವರಾಮ ಕಾರಂತ ಥೀಂ ಪಾರ್ಕ್:
ನಮ್ಮ ಇಂದಿನ ಸಮಾಜದಲ್ಲಿ ಕ್ರೌರ್ಯಕ್ಕಿಂತ ಭಯ ದೊಡ್ಡ ರೋಗವಾಗಿ ಹುಟ್ಟಿಕೊಳ್ಳುತ್ತಿದೆ. ವ್ಯವಸ್ಥಿತವಾಗಿ ಹೆದರಿಸುವ ಕೆಲಸ ನಡೆಯುತ್ತಿದೆ, ಭಯಮುಕ್ತ ಸಮಾಜ ನಿರ್ಮಾಣ ಇಂದಿನ ಅಗತ್ಯ ಎಂದು ಕಾರಂತ ಹುಟ್ಟೂರ ಪ್ರಶಸ್ತಿ ಪುರಸ್ಕೃತ ಖ್ಯಾತ ನಟ ಪ್ರಕಾಶ ರೈ ಹೇಳಿದ್ದಾರೆ.

ಇಂದು ನಾವು ಎಡಪಂಥ, ಬಲಪಂಥ. ಆ ಪಕ್ಷ ಈ ಪಕ್ಷ ಎಂಬ ಹೋರಾಟಕ್ಕಿಂತ ಮುಖ್ಯವಾಗಿ ನಾವು ಇಂದು ಹೋರಾಡಬೇಕಾಗಿರುವುದು ನಾವು ಮತ್ತು ನಮ್ಮ ಮುಂದಿನ ಪೀಳಿಗೆ ನೆಮ್ಮದಿಯಿಂದ ಬದುಕುವ, ಧೈರ್ಯದಿಂದ ಬದುಕುವ ಭಯಮುಕ್ತ ಸಮಾಜಕ್ಕಾಗಿ ಎಂದು ರೈ ಹೇಳಿದ್ದಾರೆ.

ಕೋಟದ ಕಾರಂತ ಥೀಂ ಪಾರ್ಕ್‌ನಲ್ಲಿ ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಕಾಶ್ ರೈ ಇಂದು ನಟರು, ಕಲಾವಿದರು, ಪತ್ರಕರ್ತರು, ಲೇಖಕರು ಮಾತನಾಡಿದ ಕೂಡಲೆ ಯಾಕೆ ಮಾತನಾಡುತ್ತೀಯಾ ಎಂದು ಕೇಳುವುದಾದರೆ ನಾವೆಲ್ಲಿ ಮಾತಾಡಬೇಕು ಎಂದು ಪ್ರಶ್ನಿಸಿದ್ದಾರೆ.

ಜನರ ಸಮುದಾಯದೊಳಗಿದ್ದು ಜನರ ಅನುಭವಗಳನ್ನು ಪಡೆದು ಅವರ ಜೊತೆ ಸ್ಪಂದಿಸುತ್ತಾ ಪಡೆದು ಬೆಳೆದ ನಾವು ಜನರು ನಮಗೆ ಒಂದು ವೇದಿಕೆ ಕೊಟ್ಟ ಮೇಲೆ ನಾವು ಮಾತನಾಡದೆ ಇದ್ದರೆ ಹೇಡಿಯಾಗುತ್ತೇವೆ ಮತ್ತು ಒಂದು ಸಮಾಜ ಹೇಡಿಯಾಗುವುದಕ್ಕೆ ನಾವು ಜವಾಬ್ದಾರರಾಗುತ್ತೇವೆ ಎಂದು ಹೇಳಿದರು.

ಯಾರದೇ ಬಾಯಿ ಮುಚ್ಚಿಸುವುದು ಒಂದು ಕೊಲೆಗೆ ಸಮಾನ ಎಂದ ರೈ ಕಾರಂತರು ನಾನು ನನ್ನ ಆತ್ಮಸಾಕ್ಷಿಗೆ ಮಾತ್ರ ಉತ್ತರಕೊಡಬೇಕು ಎಂದರು. ಕಾರಂತರ ಮೊಮ್ಮಗನಾಗಿರುವ ನಾನು ಅದನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ ಎಂದರು.

ಬಯ್ಯುವುದಿದ್ದರೆ ಕಾರಂತರನ್ನೇ ಬಯ್ಯಿರಿ!
ನಮ್ಮನ್ನೆಲ್ಲ ಬೆಳೆಸಿದ್ದು ಕಾರಂತರ, ಲಂಕೇಶ್, ತೇಜಸ್ವಿ ಮುಂತಾದವರು. ಹೀಗೆ ನೇರವಾಗಿ ಮಾತನಾಡುವುದನ್ನು ಕಲಿಸಿದ್ದು ಅವರೆ. ನಾನು ಹೀಗೆ ಮಾತನಾಡುವುದಕ್ಕೆ ನೀವು ಬಯ್ಯುವುದಾದರೆ ನೀವು ಕಾರಂತರನ್ನೇ ಬಯ್ಯಿರಿ, ಲಂಕೇಶ್ ಅವರನ್ನು ಬಯ್ಯಿರಿ, ತೇಜಸ್ವಿಯನ್ನು ಬಯ್ಯಿರಿ ಎಂದು ಪ್ರಕಾಶ ರೈ ಇದೇ ಸಂದರ್ಭದಲ್ಲಿ ಹೇಳಿದರು.


ನನ್ನ ಬಲ ಇಲ್ಲಿದೆ, ನಾನು ಮೌನ ವಹಿಸಲಾರೆ

ಇಂದು ಭಯ ಎಲ್ಲಿಯ ವರೆಗೆ ತಲುಪಿದೆ ಎಂದರೆ ಟ್ವಿಟರ್‌ನಲ್ಲಿ ನನ್ನ ವಿರುದ್ಧ ಹರಿಹಾಯುತ್ತಿರುವ ವಿಚಾರ ಭಯ ನನ್ನ ಗೆಳೆಯನ ಎಂಟು ವರ್ಷದ ಮಗಳಿಗೆ ತಲುಪಿದೆ. ಆಕೆ ಪ್ರಕಾಶ್ ಅಂಕಲ್‌ಗೆ ಏನಾಗಿದೆ ಎಂದು ಕೇಳುತ್ತಿದ್ದಾಳೆ. ಎಂಟು ವರ್ಷದ ಮಗುವನ್ನು ನಿಮ್ಮ ಭಯ ಆವರಿಸಿದೆ. ನನ್ನ ಅಮ್ಮ ನಾನು ಇಂದು ಇಲ್ಲಿಗೆ ಬರುತ್ತೇನೆ ಎಂದರೆ ದೇವರ ಪೂಜೆ ಮಾಡುತ್ತಾರೆ. ನಿಮ್ಮ ಭಯ ನನ್ನ ಅಮ್ಮನನ್ನು ತಲುಪಿದೆ. ಆದರೆ ನಾನು ಮೌನ ವಹಿಸಲಾರೆ. ಯಾಕೆಂದರೆ ನನ್ನ ಬಲ ಇಲ್ಲಿದೆ ಎಂದು ನೆರೆದ ಸಭಿಕರನ್ನು ಉದ್ದೇಶಿಸಿ ಹೇಳಿದರು. ಸಭಿಕರು ಭಾರೀ ಕರತಾಡನದ ಮೂಲಕ ಪ್ರಕಾಶ್ ರೈ ಮಾತಿಗೆ ಬೆಂಬಲ ಸೂಚಿಸಿದರು. ಮುಂದಿನ ಪೀಳಿಗೆಗೆ ವಾಕ್ ಸ್ವಾತಂತ್ರ್ಯ ಬೇಕಾಗಿದೆ ಎಂದು ರೈ ಹೇಳಿದರು.

ಗೋಮಾಂಸದ ಬಗ್ಗೆ ಕಾರಂತರು ಹೇಳಿದ್ದು
ಗೋಮಾಂಸದ ವಿಷಯ ಬಂದಾಗ ಕಾರಂತರು ಬಾಯಿಗೆ ಬಂದ ಹಾಗೆ ನೀವು ನನ್ನ ಹತ್ತಿರ ಮಾತಾಡಬೇಡಿ. ವರ್ಷಗಳಿಂದ ಅದನ್ನು ತಿನ್ನುವ ಜನರಿದ್ದಾರೆ, ತಿನ್ನಲಿ. ಆದರೆ ನೋವಿಲ್ಲದೆ ಕೊಲ್ಲುವುದು ಹೇಗೆ ಎಂಬ ಬಗ್ಗೆ ಮಾತಾಡಿ ಎಂದು ಕಾರಂತರು ಹೇಳಿದ್ದರು ಎಂದು ಪ್ರಕಾಶ್ ರೈ ಹೇಳಿದರು. ಕಾರಂತರು ಎಂತಹ ನಿಷ್ಟೂರಾವಾದಿ ಎಂಬ ಮಾತಿಗೆ ರೈ ಈ ಉದಾಹರಣೆ ನೀಡಿದರು.

ಇಂದು ಕಾರಂತರ ಹುಟ್ಟೂರಿಗೆ ಬಂದಿರುವುದು ಅಜ್ಜನ ಮನೆಗೆ ಮೊಮ್ಮಗ ಬಂದ ರೋಮಾಂಚನವಾಗಿದೆ ಎಂದು ಪ್ರಕಾಶ್ ರೈ ಸಂತೋಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪ್ರಸಿದ್ಧ ಉದ್ಯಮಿ ಆನಂದ್ ಸಿ. ಕುಂದರ್, ಖ್ಯಾತ ನ್ಯಾಯವಾದಿ ಮತ್ತು ಪ್ರಶಸ್ತಿ ಆಯ್ಕೆ ಸಮಿತಿಯ ಟಿ.ಬಿ. ಶೆಟ್ಟಿ, ಪತ್ರಕರ್ತ ಯು. ಎಸ್. ಶೆಣೈ, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಎಚ್. ಪ್ರಮೋದ್ ಹಂದೆ, ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಜಿ. ಪಂ ಸದಸ್ಯ ರಾಘವೇಂದ್ರ ಕಾಂಚನ್ ಮುಂತಾದವರು ಉಪಸ್ಥಿತರಿದ್ದರು.ಮಕ್ಕಳ ಮೇಳ ಸಾಲಿಗ್ರಾಮದ ಸಂಸ್ಥಾಪಕ ಶ್ರೀಧರ ಹಂದೆಯವರು ಯಕ್ಷಗಾನ ಭಾಗವತಿಕೆಯ ಶೈಲಿಯಲ್ಲಿ ಪ್ರಕಾಶ್ ರೈ ಅವರ ಪರಿಚಯವನ್ನು ಮಾಡಿದ್ದು ವಿಶೇಷವಾಗಿತ್ತು. ಪ್ರಕಾಶ ಬಿಲ್ಲವ ಕಾರ್ಯಕ್ರಮ ನಿರೂಪಿಸಿದರು.

Related Tags: Prakash Rai, Karantha Award, Huttora Prashasti, Kota, Karantha Theme Park, Dr. Shivaram Karanth
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ