ಕಳ್ಳನೆಂದು ಅನುಮಾನಿಸಿ ಕಾರ್ಮಿಕನನ್ನು ಹೊಡೆದು ಕೊಂದ ಗ್ರಾಮಸ್ಥರು

ಕರಾವಳಿ ಕರ್ನಾಟಕ ವರದಿ

ನಂಜನಗೂಡು:
ಗಾರೆ ಕಾರ್ಮಿಕನಾಗಿ ದುಡಿಯುತ್ತಿದ್ದ ಕಾರ್ಮಿಕನೋರ್ವನನ್ನು ಕಳ್ಳನೆಂದು ಅನುಮಾನಿಸಿ ಮರಕ್ಕೆ ಕಟ್ಟಿ ಹೊಡೆದು ಸಾಯಿಸಿದ ಪೈಶಾಚಿಕ ಘಟನೆ ವರದಿಯಾಗಿದೆ.

ನಂಜನಗೂಡು  ತಾಲೂಕಿನ ಕೋರೆಹುಂಡಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ರಮೇಶ್ ಅಲಿಯಾಸ್ ಕೊತ್ತಿ (43) ಎಂಬುವರನ್ನು ಭಾನುವಾರ ನಸುಕಿನಲ್ಲಿ ಕಂಬಕ್ಕೆ ಕಟ್ಟಿ ಹೊಡೆದು ಕೊಂದಿದ್ದಾರೆ.

ನಂಜನಗೂಡಿನ ಬದನವಾಳು ಗ್ರಾಮದ ರಾಮಯ್ಯ ಎಂಬುವವರ ಪುತ್ರ ರಮೇಶ್ ಗಾರೆ ಕೆಲಸ ಮಾಡಿಕೊಂಡಿದ್ದರು. ಐದು ವರ್ಷಗಳಿಂದ ಚಾಮಲಾ ಪುರ ಹುಂಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಭಾನುವಾರ ನಸುಕಿನ ಜಾವ ಕೋರೆಹುಂಡಿಯ ಚಂದ್ರಶೇಖರ್ ಎಂಬುವವರ ಕೊಟ್ಟಿಗೆಯಲ್ಲಿ ರಮೇಶ್ ಅವಿತುಕೊಂಡಿದ್ದನ್ನು ಗಮನಿಸಿದ ಗ್ರಾಮಸ್ಥರು, ಅವರನ್ನು ಹಿಡಿದು ಪ್ರಶ್ನಿಸಿದ್ದರು.

ಈ ವೇಳೆ ಗ್ರಾಮಸ್ಥರು ವಿಚಾರಿಸಿದಾಗ ಯಾರೋ ನನ್ನ ಮೇಲೆ ಹಲ್ಲೆ ನಡೆಸಲು ಅಟ್ಟಾಡಿಸಿಕೊಂಡು ಬಂದರು. ತಪ್ಪಿಸಿಕೊಳ್ಳಲು ಕೊಟ್ಟಿಗೆಗೆ ಬಂದು ಅವಿತುಕೊಂಡೆ ಎಂದು ರಮೇಶ್‌ ಹೇಳಿದ್ದಾರೆ ಎನ್ನಲಾಗಿದೆ.

ಆದರೂ ರಮೇಶ್ ಅವರ ಮೇಲೆ ಅನುಮಾನ ವ್ಯಕ್ತಪಡಿಸಿದ ಗ್ರಾಮಸ್ಥರು ಕುರಿ, ಮೇಕೆ ಕಳವು ಮಾಡಲು ಬಂದಿರುವ ಕಳ್ಳನೆಂದು ಕಂಬಕ್ಕೆ ಕಟ್ಟಿ ದೊಣ್ಣೆಗಳಿಂದ ಹೊಡೆದಿದ್ದಾರೆ. ಇದರಿಂದ ರಮೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಈ ಬರ್ಬರ ಹತ್ಯೆಗೆ ಸಂಬಂಧಿಸಿ ಚಂದ್ರಶೇಖರ್‌ ಹಾಗೂ ಕೆಂಪರಾಜು ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಆರಂಭಿಸಿದ್ದಾರೆ.

Related Tags: Worker Killed, Nanjanagud, Thief, Ramesh
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ