ಕರ್ನಾಟಕ ಆರ್ಥಿಕ ಶಿಸ್ತಿನ ರಾಜ್ಯ: ಮುಖ್ಯಮಂತ್ರಿಗೆ ಮನಮೋಹನ್ ಸಿಂಗ್ ಶ್ಲಾಘನೆ
ರೈತರ ಸಾಲ ಮನ್ನಾ ಮಾಡಿಯೂ ಆರ್ಥಿಕ ಶಿಸ್ತು ಕಳೆದುಕೊಂಡಿಲ್ಲ. ಯುಪಿಎ ಸರ್ಕಾರ ಜಾರಿಗೆ ತಂದಿರುವ ಆಹಾರ ಭದ್ರತಾ ಕಾಯ್ದೆ ಅತ್ಯಂತ ಯಶಸ್ವಿಯಾಗಿ ಕರ್ನಾಟಕದಲ್ಲಿ ಮಾತ್ರ ಅನುಷ್ಠಾನ.

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಕರ್ನಾಟಕವು ದೇಶದಲ್ಲೇ ಅತ್ಯಂತ ಉತ್ತಮ ಆರ್ಥಿಕತೆ ನಿರ್ವಹಣೆಯ ರಾಜ್ಯ ಎಂದು ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರ್ಥಿಕ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರು ಡಾ.ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಶೈಕ್ಷಣಿಕ ಚಟುವಟಿಕೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ವಿತ್ತೀಯ ಕೊರತೆಯಿಲ್ಲದಂತೆ ಬಜೆಟ್ ಮಂಡಿಸುತ್ತಿರುವ ಸಿದ್ದರಾಮಯ್ಯ ಅವರು ಆರ್ಥಿಕ ಶಿಸ್ತು ಪಾಲಿಸುತ್ತಿರುವ ಅತ್ಯುತ್ತಮ ರಾಜ್ಯವನ್ನಾಗಿ ಕರ್ನಾಟಕವನ್ನು ರೂಪಿಸಿದ್ದಾರೆ ಎಂದು ಮನಮೋಹನಸಿಂಗ್ ಶ್ಲಾಘಿಸಿದರು.

12 ಯಶಸ್ವಿ ಬಜೆಟ್‌ಗಳನ್ನು ಮಂಡಿಸಿರುವ ಸಿದ್ದರಾಮಯ್ಯ, ಆರ್ಥಿಕ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬದ್ಧತೆ ಹೊಂದಿರುವ ಅಧಿಕಾರಿ ವರ್ಗ ಸಿಕ್ಕಿದೆ. ಯುಪಿಎ ಸರ್ಕಾರ ಜಾರಿಗೆ ತಂದಿರುವ ಆಹಾರ ಭದ್ರತಾ ಕಾಯ್ದೆಯನ್ನು ಅತ್ಯಂತ ಯಶಸ್ವಿಯಾಗಿ ಕರ್ನಾಟಕದಲ್ಲಿ ಮಾತ್ರ ಅನುಷ್ಠಾನ ಮಾಡಲಾಗಿದ್ದು, ಅನ್ನಭಾಗ್ಯ ಯೋಜನೆ ಜಾರಿಗೆ ತಂದಿರುವುದು ಶ್ಲಾಘನೀಯ. ರೈತರ ಸಾಲಮನ್ನಾಕ್ಕೆ 8,160 ಕೋಟಿ ಕೊಟ್ಟಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತೀಯ ವಿಜ್ಞಾನ ಸಂಸ್ಥೆ, ರಾಷ್ಟ್ರೀಯ ಕಾನೂನು ಶಾಲೆ, ಭಾರತೀಯ ನಿರ್ವಹಣಾ ಸಂಸ್ಥೆ ಇತ್ಯಾದಿ ಬೆಂಗಳೂರು ಉನ್ನತ ಶಿಕ್ಷಣದ ಗುಣಮಟ್ಟವನ್ನು ಜಾಗತಿಕ ಮಟ್ಟದಲ್ಲಿ ಬಿಂಬಿಸುತ್ತಿವೆ. ಕರ್ನಾಟಕವು ಇಡೀ ದೇಶದ ಅತ್ಯುತ್ತಮ ಶೈಕ್ಷಣಿಕ ತಾಣವಾಗಿದೆ.

ಭಾರತದಲ್ಲಿ ಜಗತ್ತಿನ  45,000ಕ್ಕೂ ಅಧಿಕ ವಿದೇಶಿ ವಿದ್ಯಾರ್ಥಿಗಳು ಓದುತ್ತಿದ್ದು, ಈ ಪೈಕಿ 13,600 ಮಂದಿ  ಇಲ್ಲೇ ಓದುತ್ತಿರುವುದು ಕರ್ನಾಟಕದ ಹೆಮ್ಮೆಗೆ ಸಾಕ್ಷಿ ಎಂದರು. ಆರ್ಥಿಕತೆ, ಸಾಮಾಜಿಕ ವಿಜ್ಞಾನ ಮತ್ತು ಆರ್ಥಿಕ ಸಮಸ್ಯೆಯ ಸಮಗ್ರ ಅಧ್ಯಯನಕ್ಕಾಗಿ ರಾಜ್ಯ ಹಾಗೂ ದೇಶದ ಅಭಿವೃದ್ಧಿಗೂ ಈ ಬೆಳವಣಿಗೆ ಪೂರಕ ಎಂದು ಹೇಳಿದರು.

ಯುಪಿಎ ಸರ್ಕಾರದ ಆಡಳಿತದಲ್ಲಿ 72 ಸಾವಿರ ಕೋಟಿ ರೂ.ನಷ್ಟು ರೈತರ ಸಾಲ ಮನ್ನಾ ಮಾಡಲಾಗಿತ್ತು. ಇದರಿಂದ ರೈತರಿಗೆ ಸಹಾಯವಾಗಿತ್ತು. ರಾಜ್ಯ ಸರ್ಕಾರ ಇತ್ತೀಚೆಗೆ 8165 ಕೋಟಿ ರೂ.ಗಳ ರೈತರ ಸಾಲ ಮನ್ನಾ ಮಾಡಿಯೂ ಆರ್ಥಿಕ ಶಿಸ್ತು ಕಳೆದುಕೊಂಡಿಲ್ಲ ಎಂದು ಮಾಜಿ ಪ್ರಧಾನಿ ಶ್ಲಾಘಿಸಿದರು.

ಈ ಸಂಸ್ಥೆಯಲ್ಲಿ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ದೇಶ, ವಿದೇಶದಲ್ಲಿ ಆರ್ಥಿಕತೆ ಓದುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಇದೆ. 50-60 ವರ್ಷಗಳ ಹಿಂದೆ ಸೂಕ್ಷ್ಮ ಮತ್ತು ಅತಿಸೂಕ್ಷ್ಮಆರ್ಥಿಕತೆ, ಸಾರ್ವಜನಿಕ ಹಣಕಾಸು, ವಿದೇಶಿ ಹಣಕಾಸು ಮಾತ್ರ ಇತ್ತು.

ಇಂದು ಅರ್ಥಿಕತೆಯಲ್ಲಿ ಅನೇಕ ಶಾಖೆಗಳು ಹುಟ್ಟಿಕೊಂಡಿದೆ. ಜತೆಗೆ ಸಮಸ್ಯೆಯೂ ಸೃಷ್ಟಿಯಾಗುತ್ತಿದೆ. ಆರ್ಥಿಕತೆ ಅಪ್ಲಿಕೇಷನ್ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಸೇವೆ ಸಲ್ಲಿಸಬೇಕು ಎಂದು ಆರ್‌ಬಿಐ ಮಾಜಿ ಗವರ್ನರ್ ಹಾಗೂ ಮದ್ರಾಸ್ ಸ್ಕೂಲ್ ಆಫ್ ಇಕನಾಮಿಕ್ಸ್ ಅಧ್ಯಕ್ಷ ಡಾ.ಸಿ.ರಂಗರಾಜನ್ ನುಡಿದರು.

2007–08ರಲ್ಲಿ ಜಿಡಿಪಿ ಶೇ 9ರಷ್ಟಿದ್ದಾಗ ಬಂಡವಾಳ ಹೂಡಿಕೆ ಪಾಲು ಶೇ 38ರಷ್ಟಿತ್ತು. ಈ ಪ್ರಮಾಣ ಈಗ ಶೇ 27ಕ್ಕೆ ಇಳಿಕೆಯಾಗಿದೆ. ಬಂಡವಾಳ ಹೂಡಿಕೆ ದರ ಹೆಚ್ಚಿದ್ದರೆ ಉತ್ಪಾದಕತೆಯ ಮಟ್ಟವೂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಎಂದು ರಂಗರಾಜನ್ ಅಭಿಪ್ರಾಯಪಟ್ಟರು.

ದೇಶದ ‘ಬಂಡವಾಳ ಏರಿಕೆಯ ಮೌಲ್ಯದ ಅನುಪಾತ ಹೂಡಿಕೆಯ ಮೇಲೆ ಪರಿಣಾಮ ಬೀರುತ್ತದೆ.ಆರ್ಥಿಕ ಹಿಂಜರಿತದಿಂದ ಹೊರಬೇಕಾದರೆ ಸ್ಥಗಿತಗೊಂಡಿರುವ ಯೋಜನೆಗಳನ್ನು ಪುನರಾರಂಭಿಸಲು ಉತ್ತೇಜನ ನೀಡಬೇಕು. ವಾಣಿಜ್ಯ ಬ್ಯಾಂಕ್ಗಳು ಸಾಲ ನೀಡುವುದನ್ನು ಸರಳೀಕರಣಗೊಳಿಸುವ ಜತೆಗೆ, ಸಾಲ ನೀಡಿಕೆ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದರು.

ಸಂಶೋಧನೆಯ ಆಧಾರದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಉನ್ನತೀಕರಿಸಬೇಕು. ಪರೀಕ್ಷಾ ಪದ್ಧತಿ ಹಾಗೂ ಮೌಲ್ಯಮಾಪನ ವಿಧಾನ ಬದಲಾದರೆ, ವಿದ್ಯಾರ್ಥಿಗಳು, ಶಿಕ್ಷಕರು ಬದಲಾಗುತ್ತಾರೆ. ಇದರಿಂದ ಶಿಕ್ಷಣ ವ್ಯವಸ್ಥೆಯೇ ಸುಧಾರಿಸುತ್ತದೆ ಎಂದು ಸಲಹೆ ನೀಡಿದರು.

ಸಂಸದರಾದ ಡಾ.ಎಂ.ವೀರಪ್ಪ ಮೊಯ್ಲಿ, ಕೆ.ಎಚ್. ಮುನಿಯಪ್ಪ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ಸಚಿವರಾದ ಆರ್.ವಿ.ದೇಶಪಾಂಡೆ, ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್, ರೋಷನ್ ಬೇಗ್, ಡಾ.ಎಚ್.ಸಿ.ಮಹದೇವಪ್ಪ, ಎಚ್. ಆಂಜನೇಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಎಸ್.ವಿ.ರಂಗನಾಥ್, ಬೆಂಗಳೂರು ಡಾ.ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ನಿರ್ದೇಶಕ ಡಾ.ಆರ್.ಎಸ್.ದೇಶಪಾಂಡೆ ಮತ್ತಿತರರು ಉಪಸ್ಥಿತರಿದ್ದರು.

ಇಂದು ಹೆಚ್ಚು ಓದಿದ ಸುದ್ದಿಗಳು
►►ನದಿಯಲ್ಲಿ ಯುವಕನ ಶವ ಪತ್ತೆ: ಕುಟುಂಬಿಕರಿಂದ ಕೊಲೆ ಶಂಕೆ:
http://bit.ly/2gdOjVi
►►ಉಳ್ಳಾಲ ಗ್ಯಾಂಗ್‌ವಾರ್: ಯುವಕನ ಬರ್ಬರ ಕೊಲೆ: http://bit.ly/2xWPO25
►►ಮೋದಿ ವಿರುದ್ಧ ಹೇಳಿಕೆ: ನಟ ಪ್ರಕಾಶ್ ರೈ ವಿರುದ್ದ ದೂರು ದಾಖಲು: http://bit.ly/2koGYXu
►►ಮರೆಯಾದ ಯಕ್ಷರಂಗದ ಮಾಣಿಕ್ಯ ಚಿಟ್ಟಾಣಿ ರಾಮಚಂದ್ರ ಹೆಗಡೆ: http://bit.ly/2kkVYpp

Related Tags: Manmohan Singh, Former Prime Minister Manmohan Singh, Economic growth, Fresh Thinking, Bengaluru, Siddaramaiah, Kannada News, Karnataka News, Karavali Karnataka, Latest Kannada News, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಸಿದ್ಧರಾಮಯ್ಯ ಶ್ಲಾಘಿಸಿದ ಮಾಜಿ ಪ್ರಧಾನಿ, ಆರ್ಥಿಕ ಬೆಳವಣಿಗೆ, ಹೊಸ ಚಿಂತನೆ, ಬೆಂಗಳೂರು, ಮುಖ್ಯಮಂತ್ರಿ ಸ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ