ಮೊದಲ ಪ್ರಯತ್ನದಲ್ಲಿಯೇ ಸಫಲತೆ ಕಂಡ ಗುಡ್ಡೆಹಳ್ಳಿ ಚಾರಣ

ರವಿತೇಜ ಕಾರವಾರ/ಕರಾವಳಿ ಕರ್ನಾಟಕ ವರದಿ

ಕಾರವಾರ:
ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳನ್ನು ವಿಶ್ವದಾದ್ಯಂತ ಜನಪ್ರಿಯಗೊಳಿಸಲು ಶ್ರಮಿಸುತ್ತಿರುವ ಜಿಲ್ಲಾಡಳಿತವು ಕಾರವಾರ ನಗರದಿಂದ ಸುಮಾರು 7 ಕಿ.ಮೀ. ದೂರದ ಗುಡ್ಡೆಹಳ್ಳಿಗೆ ಚಾರಣ ಕಾರ್ಯಕ್ರಮವನ್ನು ಆಯೋಜಿಸಿದ್ದು ಮೊದಲ ಪ್ರಯತ್ನದಲ್ಲಿಯೇ ಸಫಲತೆ ಕಂಡಿದೆ.

ಜಿಲ್ಲೆಯ ಕಲೆ, ಸಂಸ್ಕೃತಿ ಸೇರಿದಂತೆ ಹಳ್ಳಿಗಾಡಿನ ಸೊಗಡನ್ನು ಪ್ರವಾಸಿಗರಿಗೆ ಪರಿಚಯಿಸಲು ಮುಂದಾಗಿರುವ ಜಿಲ್ಲಾಡಳಿತವು ಗುಡ್ಡೆಹಳ್ಳಿ ಪೀಕ್ ಹೆಸರಿನಲ್ಲಿ ಡಾ.ರವೀಂದ್ರನಾಥ ಟಾಗೋರ್ ಕಡಲ ತೀರ ಅಭಿವೃದ್ಧಿ ಸಮಿತಿ, ಪ್ರವಾಸೋದ್ಯಮ ಇಲಾಖೆ ಹಾಗೂ ಮಂಗಳೂರಿನ ಲೀಸರ್ ರೂಟ್ಸ್ ಸಹಕಾರದೊಂದಿಗೆ ಈ ವಿನೂತನ ಯೋಜನೆಯನ್ನು ಪ್ರಾರಂಭಿಸಿದೆ.

ಸೆ.16 ರಂದು ಕಾರವಾರ ಉಪವಿಭಾಗಾಧಿಕಾರಿ ಶಿವಾನಂದ ಕರಾಳೆಯವರಿಂದ ಚಾಲನೆಗೊಂಡ ಮೊದಲನೆ ಚಾರಣವನ್ನು ಬೆಂಗಳೂರಿನ 18 ಸದಸ್ಯರ ಮ್ಯಾರಾಥಾನ್-360 ತಂಡ ಯಶಸ್ವಿಯಾಗಿ ಕೈಗೊಂಡಿತು.

ನೈಸರ್ಗಿಕ ಸೌಂದರ್ಯದ ಸೊಬಗು
ಕಾರವಾರ ತಾಲೂಕಿನ ಹಲವು ಕಡಲತೀರಗಳು, ಕಾಳಿ ನದಿ, ಪಶ್ಚಿಮ ಘಟ್ಟಗಳ ಸಾಲು, ಪ್ರಕೃತಿ ಸೌಂದರ್ಯ ಎಲ್ಲವನ್ನು ವೀಕ್ಷಿಸುತ್ತ ಕೈಗೊಳ್ಳುವ ಚಾರಣವು ಸಾಹಸಿಗರನ್ನು ಆಕರ್ಷಿಸುತ್ತಿವೆ. ಗುಡ್ಡೆಹಳ್ಳಿಯು ಬೆಟ್ಟ-ಗುಡ್ಡಗಳಿಂದ ಕೂಡಿ ಚಾರಣಕ್ಕೆ ಅನುಕೂಲಕರ ವ್ಯವಸ್ಥೆಯನ್ನು ಹೊಂದಿವೆ.

ನಗರದ ದಕ್ಷಿಣ ಭಾಗದ ಸಮುದ್ರ ಮಟ್ಟದಿಂದ 800 ಮೀ. ಎತ್ತರದಲ್ಲಿದ್ದು ನಗರದ ಹೊರವಲಯ ಅರಗಾದಿಂದ 7.5 ಕಿ.ಮೀ. ಕ್ರಮಿಸಿದರೆ ಸಿಗುವ ಈ ಗ್ರಾಮ ಅದ್ಭುತ ಹಾಗೂ ಆಕರ್ಷಿಣೀಯವಾಗಿದೆ. ಅಲ್ಲಿನ ಬಂಡೆಗಲ್ಲಿನ ಬಳಿ ನಿಂತು ನೋಡಿದರೆ ಕಾರವಾರ ನಗರ, ಕಾಳಿ ನದಿ, ಪಶ್ಚಿಮ ಘಟ್ಟದ ಪ್ರಕೃತಿ ಸೌಂದರ್ಯ, ಸೀಬರ್ಡ್ ನೌಕಾನೆಲೆ ಪ್ರದೇಶ, ಬೈತ್‌ಖೋಲ್ ವಾಣಿಜ್ಯ ಬಂದರು, ಬೇಲೆಕೇರಿ ಬಂದರು ಪ್ರದೇಶ, ಕೊಂಕಣ ರೈಲ್ವೇ ಮಾರ್ಗಗಳು ಹಾಗೂ ಸೇತುವೆ ಕಣ್ಣಿಗೆ ಮುದ ನೀಡುತ್ತವೆ.ಹಳ್ಳಿ ಸೊಗಡಿನ ಪರಿಚಯ
ಚಾರಣಕ್ಕೆಂದು ನೊಂದಾಯಿಸಿಕೊಂಡ ಪ್ರವಾಸಿಗರನ್ನು ತಾಲೂಕಿನ ಅರಗಾ ಮೂಲಕ ಕಾಲ್ನಡಿಗೆಯಲ್ಲಿ ಈ ಗುಡ್ಡೆಹಳ್ಳಿಗೆ ಕರೆದುಕೊಂಡು ಹೋಗಲಾಗುತ್ತದೆ. ಅಂದು ಹಳ್ಳಿಯ ಜನರ ಬದುಕಿನಂತೆಯೇ ಚಾರಣಿಗರಿಗೂ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಕೊಚ್ಚಕ್ಕಿ ಅನ್ನ, ರಾಗಿ ಅಂಬ್ಲಿ, ರೊಟ್ಟಿ, ಪಲ್ಯ, ಮಾಂಸಾಹಾರಿಗಳಿಗೆ ಮೀನು ಹಾಗೂ ನಾಟಿಕೋಳಿಯ ಊಟ ಮುಂತಾದ ಹಳ್ಳಿಯ ಅಡುಗೆಗಳನ್ನೇ ಮಾಡಿ ಉಣಬಡಿಸಲಾಗುತ್ತದೆ. ಅಲ್ಲದೆ ಅಲ್ಲಿನ ಹಳ್ಳಿಯಲ್ಲಿ ಬಳಸಲಾಗುವ ರುಬ್ಬೋಕಲ್ಲು, ಒನಕೆ ಸೇರಿದಂತೆ ಹಲವು ವಸ್ತುಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.

ತಮ್ಮ ಬೆಳೆಗಳನ್ನು ಕಾಡು ಪ್ರಾಣಿಗಳಿಂದ ರಕ್ಷಿಸಲು ರಾತ್ರಿ ವಾಸ್ತವ್ಯಕ್ಕೆಂದು ಹೊಲದಲ್ಲಿ ನಿರ್ಮಿಸಿಕೊಳ್ಳುವ ಮಾಳಗಳಲ್ಲಿಯೇ ಚಾರಣಿಗರಿಗೂ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಈ ಮಾಳಗಳಿಗೆ ವಿಶೇಷ ರೂಪವನ್ನು ಕೊಟ್ಟು ಆಕರ್ಷಣೀಯವಾಗಿ ಕಾಣುವಂತೆ ಮಾಡಲಾಗಿದೆ.

ಜಾನಪದ ಕಲೆ ಪ್ರದರ್ಶನ
ಟ್ರೆಕ್ಕಿಂಗ್ ಮುಗಿದು ಸಂಜೆಯ ವೇಳೆ ಹಳ್ಳಿಯ ವಿವಿಧ ಜಾನಪದ ಕಲೆಗಳನ್ನು ಪ್ರದರ್ಶಿಸಲಾಗುತ್ತದೆ. ಗುಮ್ಮಟೆ ವಾದನ, ಕೋಲಾಟ, ಸುಗ್ಗಿ ಕುಣಿತ, ಜನಪದ ಹಾಡುಗಳು ಸೇರಿದಂತೆ ಇನ್ನಿತರ ಗ್ರಾಮೀಣ ಮನರಂಜನಾ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.

ಚಾರಣಿಗರೂ ಕೂಡ ವಿವಿಧ ಗ್ರಾಮೀಣ ನೃತ್ಯ ಪ್ರಕಾರಗಳಲ್ಲಿ ಭಾಗವಹಿಸಿ ಖುಷಿ ಪಟ್ಟರು. ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದು, ಗ್ರಾಮೀಣ ಸೊಬಗನ್ನು ಪರಿಚಯಿಸುವ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ಪ್ರಯತ್ನ ಇದಾಗಿದೆ. ಇದಲ್ಲದೆ ಗ್ರಾಮೀಣ ಕಲಾವಿದರಿಗೆ ಗೌರವ ಧನ ನೀಡಲಾಗುತ್ತಿದ್ದು, ಇದು ಆರ್ಥಿಕವಾಗಿ ಸಹಕಾರಿಯಾಗಲಿದೆ.

ರಸ್ತೆ ಸಂಪರ್ಕವಿಲ್ಲದ ಕುಗ್ರಾಮ ಗುಡ್ಡೆಹಳ್ಳಿ
ಗುಡ್ಡೆಹಳ್ಳಿಯು ರಸ್ತೆ ಸಂಪರ್ಕವಿಲ್ಲದ ಹಾಲಕ್ಕಿ ಜನ ಸಮುದಾಯ ವಾಸಿಸುವ ಒಂದು ಹಳ್ಳಿಯಾಗಿದೆ. ಸುಮಾರು 30 ಮನೆಗಳನ್ನು ಹೊಂದಿರುವ ಈ ಹಳ್ಳಿಯು ಹಚ್ಚ ಹಸಿರಿನಿಂದ ಕೂಡಿದ ಸಾಲು ಸಾಲು ಮರ, ಗಿಡ, ಪೊದೆಗಳಿಂದ ಕೂಡಿದೆ.

ಇಲ್ಲಿನ ನಿಸರ್ಗದ ನೈಜ ಸೌಂದರ್ಯವನ್ನು ಕಂಡು ಆನಂದ ಅನುಭವಿಸುವವರು ಅನೇಕ. ಹಳ್ಳಿಯಿಂದ ಇನ್ನೊಂದು ಗುಡ್ಡದ ತುತ್ತ ತುದಿಯಲ್ಲಿ ಪೊಲೀಸ್ ಇಲಾಖೆಯ ಹಾಗೂ ಜಿಲ್ಲಾಡಳಿತದ ಸಂವಹನ ಕೇಂದ್ರ ಇದೆ. ಬ್ರಿಟಿಷರ ಕಾಲದಲ್ಲಿ ಅರಣ್ಯಾಧಿಕಾರಿಗಳು ಹಾಗೂ ನ್ಯಾಯಾಧೀಶರು ಇಲ್ಲಿಯೇ ವಾಸಿಸುತ್ತಿದ್ದರು. ಆ ಸಂದರ್ಭದಲ್ಲಿನ ಕಟ್ಟಡಗಳ ಕುರುಹುಗಳು ಇನ್ನೂ ಇವೆ.

ಇಷ್ಟು ದಿನ ಕೇವಲ ಹತ್ತಿರದ ಪ್ರವಾಸಿಗರಿಗಷ್ಟೇ ಸೀಮಿತವಾಗಿದ್ದ ಈ ಪ್ರದೇಶವು ಜಿಲ್ಲಾಡಳಿತದ ಯೋಜನೆಯಿಂದ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುವತ್ತ ಗಮನ ಸೆಳೆದಿದೆ.

ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸಲು ಜಿಲ್ಲಾಡಳಿತವು ವಿವಿಧ ಯೋಜನೆಗಳನ್ನು ರೂಪಿಸುತ್ತಿದೆ. ಅವುಗಳ ಅಭಿವೃದ್ಧಿಯೊಂದಿಗೆ ಸ್ಥಳೀಯರಿಗೆ ಉತ್ತಮ ಉದ್ಯೋಗವಕಾಶವನ್ನೂ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ.
-ಶಿವಾನಂದ ಕರಾಳೆ ಉಪವಿಭಾಗಾಧಿಕಾರಿ

ಗುಡ್ಡೆಹಳ್ಳಿಯ ಚಾರಣವು ಅವಿಸ್ಮರಣೀಯವಾದ ಆನಂದವನ್ನು ನೀಡಿದೆ. ಇಲ್ಲಿನ ಹಳ್ಳಿ ಸೊಗಡು, ಪ್ರಕೃತಿ ಸೌಂದರ್ಯ ಮನಸ್ಸಿಗೆ ಮುದ ನೀಡಿದೆ.
-ಪ್ರಸಾದ ಬೆಂಗಳೂರು ಚಾರಣಿಗ

Related Tags: Guddehalli, Karwar, North Canara, Tourism, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ