ಕುವೈಟ್: ಭಾರತೀಯ ಮಹಿಳೆಯರಿಗೆ ಮನೆಗೆಲಸ ನಿಷೇಧ ತೆರವು
ಮೋದಿ ಸರಕಾರದ ಕಠಿಣ ನಿಲುವಿನಿಂದ ವೀಸಾ ನೀಡದ ಕಠಿಣ ನಿಲುವು ತಳೆದಿದ್ದ ಕುವೈಟ್ ಸರಕಾರ. ಭಾರತ ತನ್ನ ಕಟ್ಟಲೆ ಸಡಿಲಿಸಿದ್ದರ ಬೆನ್ನಿಗೆ ಕುವೈಟ್ ಪೂರಕ ಕ್ರಮ.

ಕರಾವಳಿ ಕರ್ನಾಟಕ ವರದಿ

ಕುವೈಟ್:
ಭಾರತೀಯ ಮಹಿಳೆಯರು ಕುವೈಟ್‌ನಲ್ಲಿ ಮನೆಗೆಲಸ ಮಾಡದಂತೆ ಹೇರಿದ್ದ ವೀಸಾ ನಿಷೇಧವನ್ನು ಕುವೈಟ್ ತೆಗೆದುಹಾಕಿದೆ.

ಭಾರತ ಸರಕಾರವು ಭಾರತೀಯ ಮಹಿಳೆಯರು ಕುವೈಟ್ ದೇಶದಲ್ಲಿ ಮನೆಗೆಲಸ ಮಾಡುವುದಕ್ಕೆ ಸಂಬಂಧಿಸಿ ಸೂಕ್ತ ಬ್ಯಾಂಕ್ ಗ್ಯಾರಂಟಿ ನೀಡಬೇಕು ಎಂಬ ಕಟ್ಟಳೆಯನ್ನು ತೆಗೆದುಹಾಕಿದ್ದರ ಬೆನ್ನಿಗೆ ಕುವೈಟ್ ಈ ಉಪಕ್ರಮಕ್ಕೆ ಮುಂದಾಗಿದೆ.

ಭಾರತದ ವಿದೇಶಾಂಗ ಖಾತೆ ರಾಜ್ಯ ಸಚಿವ ಎಂ.ಜೆ.ಅಕ್ಬರ್ ಅವರು ಸೆ.20ರಂದು ಜೆಡಬ್ಲ್ಯುಜಿ ಉನ್ನತ ಮಟ್ಟದ ನಿಯೋಗದೊಂದಿಗೆ ಕುವೈಟ್ ಗೆ ಬರುವ ಹಿನ್ನೆಲೆಯಲ್ಲಿ ಭಾರತ ಅನುಸರಿಸಿದ ನೀತಿಗೆ ಅನುಗುಣವಾಗಿ ತಾನು ಹೇರಿದ್ದ ವೀಸಾ ನಿಷೇಧ ತೆಗೆದುಹಾಕುವುದರ ಮೂಲಕ ಕುವೈಟ್ ದೇಶವೂ ತನ್ನ ದಶಕಗಳ ಮಿತ್ರ ದೇಶ ಭಾರತದ ಮೇಲೆ ಪ್ರೀತಿ ತೋರಿದೆ.

ಭಾರತೀಯ ರಾಯಭಾರಿ ಸುನಿಲ್ ಜೈನ್ ಅವರು ಕುವೈಟ್ ದೇಶಕ್ಕೆ ಭಾರತ ಮಹಿಳಾ ಮನೆಗೆಲಸದವರ ಬಗ್ಗೆ ಹೇರಿದ್ದ ಕಟ್ಟಳೆ ಇಷ್ಟವಾಗದ ಕಾರಣ, ಅದನ್ನು ಭಾರತ ತೆಗೆದುಹಾಕಿದೆ ಎಂದಿದ್ದಾರೆ.



ಮಿತ್ರ ರಾಷ್ಟ್ರಗಳಾದ ಭಾರತ ಕುವೈಟ್ ಸರಕಾರಗಳ ಸ್ವಪ್ರತಿಷ್ಠೆಯ ನಿಷ್ಠೂರ ನಿಲುವುಗಳಿಂದ ಇಲ್ಲಿ ಮನೆಗೆಲಸ ಮಾಡಿ ಭಾರತದಲ್ಲಿನ ತಮ್ಮ ಕುಟುಂಬವನ್ನು ಪೊರೆಯುತ್ತಿದ್ದ ಸಾವಿರಾರು ಮಹಿಳೆಯರು ಮತ್ತು  ಅವರನ್ನೇ ನಂಬಿದ್ದ ಅನೇಕ ಭಾರತೀಯ ಕುಟುಂಬಗಳ ಬದುಕು ಅಕ್ಷರಶ: ಬೀದಿಗೆ ಬಿದ್ದಿತ್ತು. ಈಗ ಪುನ: ಬಡಪಾಯಿ ಭಾರತೀಯ ಮಹಿಳೆಯರು ಮೊದಲಿನಂತೆಯೇ ಮನೆಗೆಲಸಕ್ಕೆ ಕುವೈಟ್ ದೇಶಕ್ಕೆ ತೆರಳುವುದು ಸಾಧ್ಯವಾಗಲಿದೆ.

ಕುವೈಟ್‌ನಲ್ಲಿ ಭಾರತೀಯ ಮಹಿಳೆಯರನ್ನು ಮನೆಗೆಲಸಕ್ಕೆ ಇರಿಸಿಕೊಳ್ಳಬೇಕಾದರೆ  $2500(720)ಕೆಡಿ ಮೊತ್ತವನ್ನು ಬ್ಯಾಂಕ್ ಭದ್ರತೆಯಾಗಿ ಉದ್ಯೋಗದಾತ ನೀಡಬೇಕು ಎಂದು ಭಾರತದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಶರತ್ತು ವಿಧಿಸಿದ್ದಕ್ಕೆ ಕುವೈಟ್ ಆಡಳಿತ ಪ್ರಬಲ ವಿರೋಧ ಒಡ್ಡಿತ್ತು.

ಈ ಮೊತ್ತವನ್ನು ಕಡಿತಗೊಳಿಸಿ ಇಲ್ಲದಿದ್ದರೆ ಭಾರತೀಯ ಮಹಿಳೆಯರಿಗೆ ಕೆಲಸ ಸಿಗುವುದೇ ದುಸ್ತರವಾದೀತು ಎಂದು ಉಭಯ ದೇಶಗಳ ರಾಜತಾಂತ್ರಿಕರ ಮಾತುಕತೆ ಸಂದರ್ಭ ತಾಕೀತು ಮಾಡಲಾಗಿತ್ತು. ಆದರೆ ಕುವೈಟ್ ಆಡಳಿತಕ್ಕೆ ಸೆಡ್ಡು ಹೊಡೆದ ಮೋದಿ ಸರಕಾರ ಭಾರತೀಯ ಮಹಿಳೆಯರು ಕುವೈಟ್‌ನಲ್ಲಿ ಕೆಲಸ ಮಾಡಲು ಬೇಕಾದ ಒಪ್ಪಂದದ ಅಟೆಸ್ಟೇಷನ್ ಪ್ರಕ್ರಿಯೆಯನ್ನು ಅಮಾನತಿನಲ್ಲಿರಿಸಿತ್ತು.

ಕುವೈಟ್ ಹಾಗೂ ಗಲ್ಫ್ ರಾಷ್ಟ್ರಗಳಲ್ಲಿ ದುಡಿದರೆ ಮಾತ್ರ ತಾವು ಬಡತನದ ರೇಖೆಗಿಂತ ಮೇಲೇಳಬಹುದು ಎಂಬ ಕನಸು ಕಂಡ ಭಾರತದ ಬಡಪಾಯಿ ಮಹಿಳೆಯರು ‘ಇತರ’ ಮಾರ್ಗಗಳ ಮೂಲಕ ಕುವೈಟ್ ದೇಶ ತಲುಪಿ ತಮ್ಮ ದುಡಿಮೆ ಮುಂದುವರಿಸಿದ್ದರು.

ಆದರೆ ಭಾರತ ಕುವೈಟ್‌ನಲ್ಲಿ ಭಾರತೀಯ ಮಹಿಳೆಯರಿಗೆ ಮನೆಗೆಲಸಕ್ಕೆ ವೀಸಾ ನೀಡಕೂಡದು ಎಂದು ಕುವೈಟ್‌ಗೆ ಕಟ್ಟುನಿಟ್ಟಾಗಿ ಹೇಳಿಬಿಟ್ಟಿರುವುದರಿಂದ ಮಾನವೀಯತೆ ದೃಷ್ಟಿಯಿಂದ ಭಾರತೀಯ ಮಹಿಳೆಯರಿಗೆ ಮನೆಗೆಲಸಕ್ಕೆ ಅವಕಾಶ ಕೊಟ್ಟಿದ್ದ ತೈಲ ಶ್ರೀಮಂತ ಕುವೈಟ್ ಭಾರತೀಯ ಮಹಿಳೆಯರಿಗೆ ವೀಸಾ ಕೊಡುವುದನ್ನೇ ನಿಲ್ಲಿಸಿಬಿಟ್ಟಿತ್ತು.


ಕುವೈಟ್ ದೇಶದೊಂದಿಗೆ ಭಾರತ ಕಠಿಣ ನಿಲುವು ತಳೆದಿರುವುದರಿಂದ ಹಲವು ದಶಕಗಳಿಂದ ಭಾರತೀಯ ಮಹಿಳೆಯರಿಗೆ ತಮ್ಮ ದೇಶದಲ್ಲಿ ಮನೆಗೆಲಸಕ್ಕೆ ಅವಕಾಶ ನೀಡಿದ್ದ ಕುವೈಟ್ ಸರಕಾರ ಕೂಡ  ಕಠಿಣ ನಿಲುವು ತಳೆದಿತ್ತು.

ಇದರ ಪರಿಣಾಮ ಭಾರತದ ಆರ್ಥಿಕತೆ ಮೇಲೆ ಕಂಡುಬಂದಿತ್ತು. ಭಾರತ ಸರಕಾರ ಕುವೈಟ್ ಮತ್ತಿತರ ಗಲ್ಫ್ ರಾಷ್ಟ್ರಗಳಲ್ಲಿ ಮನೆಗೆಲಸದ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ನೆಪದಲ್ಲಿ ಕುವೈಟ್ ದೇಶಕ್ಕೆ ಶರತ್ತು ಒಡ್ಡಿ ಪಾಠ ಕಲಿಸಲು ಹೊರಟಿತ್ತು. ಆದರೆ ಕುವೈಟ್ ಮಹಿಳೆಯರಿಗೆ ವೀಸಾವನ್ನೇ ರದ್ದು ಮಾಡಿರುವುದರಿಂದ ಬಡವ ತನ್ನ ಕಾಲ ಮೇಲೆ ತಾನೇ ಕೊಡಲಿ ಏಟು ಹಾಕಿದಂತಾಗಿದೆ.

ಕುವೈಟ್‌ಗೆ ಫಿಲಿಫೈನ್ಸ್, ಪಾಕಿಸ್ತಾನ, ಬಾಂಗ್ಲಾ ಮತ್ತು ಆಫ್ರಿಕಾ, ಶ್ರೀಲಂಕಾದ ಬಡ ಜನರೂ ಕೆಲಸಕ್ಕಾಗಿ ಬರುತ್ತಿದ್ದು, ಭಾರತೀಯರಿಗಿಂತ ಕಡಿಮೆ ವೇತನ ಮತ್ತು ಸೌಲಭ್ಯಗಳಿಗೆ ಒಪ್ಪಿ ಕೆಲಸ ಮಾಡುವುದರಿಂದ ಕುವೈಟಿಗಳಿಗೆ ಭಾರತೀಯ ಮನೆಗೆಲಸದ ಮಹಿಳೆಯರ ಕೊರತೆ ಅಷ್ಟೇನೂ ಕಾಡದು, ಇದರಿಂದ ಭಾರತದ ಬಡವರಿಗೇ ಕಷ್ಟವಾಗಿದೆ ಎಂದು ಈ ಬೆಳವಣಿಗೆಯನ್ನು ವಿಶ್ಲೇಷಿಸಲಾಗುತ್ತಿತ್ತು.

ಕುವೈಟ್‌ನಲ್ಲಿ ಉನ್ನತ ಹುದ್ದೆಗಳಲ್ಲಿದ್ದು ಗಂಡ-ಹೆಂಡತಿ ಇಬ್ಬರೂ ಕಛೇರಿಯಲ್ಲಿ ದುಡಿಯುತ್ತಿದ್ದು ಮಕ್ಕಳನ್ನು ನೋಡಿಕೊಳ್ಳಲು ಮತ್ತು ಮನೆಗೆಲಸಕ್ಕೆ ಭಾರತೀಯ ಮಹಿಳೆಯರನ್ನು ತಮಗೆ ಒಗ್ಗುವ ವೇತನಕ್ಕೆ ಇರಿಸಿಕೊಳ್ಳುವ ಪರಿಪಾಠ ಲಾಗಾಯ್ತಿನಿಂದಲೂ ಇತ್ತು. ಅಂಥ ಭಾರತೀಯ ಕುಟುಂಬಗಳ ಹೊಟ್ಟೆ ಮೇಲೆಯೂ ಬರೆ ಬಿದ್ದಿತ್ತು.

ಭಾರತೀಯ ಮನೆಗೆಲಸದ ಮಹಿಳೆಯರ ಮೇಲೆ ಕುವೈ‌ಟ್‌ನಲ್ಲಿ ದೌರ್ಜನ್ಯವಾಗುವುದನ್ನು ನಿಯಂತ್ರಿಸಬೇಕಿದ್ದರೆ ಭಾರತ ಸರಕಾರ ದಶಕಗಳಿಂದ ಒಡನಾಟವಿರುವ ಕುವೈಟ್ ಸರಕಾರದ ಆಡಳಿತಗಾರರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬಹುದಿತ್ತು.

ಈ ಬಗ್ಗೆ ಏನು ಮಾಡಬಹುದೆಂದು ಉಭಯ ದೇಶಗಳ ರಾಜತಾಂತ್ರಿಕ ಅಧಿಕಾರಿಗಳ ಮಟ್ಟದಲ್ಲಿ ಸಭೆ ನಡೆಸಿ ಸಮಾಲೋಚನೆ ನಡೆಸಬಹುದಿತ್ತು. ಆದರೆ ಭಾರತ ಸರಕಾರ ಏಕಾಏಕಿ ಕುವೈಟ್ ದೇಶಕ್ಕೆ 720ಕೆಡಿಗಳನ್ನು ಉದ್ಯೋಗದಾತರು ನೀಡಲೇ ಬೇಕು ಎಂಬ ಶರತ್ತು ವಿಧಿಸಿತ್ತು.

ಇದು ಸಮಸ್ಯೆ ನಿರ್ಮೂಲನೆ ಕ್ರಮವಾಗಿರದೇ ಕುವೈಟ್ ದೇಶಕ್ಕೆ ಪಾಠ ಕಲಿಸುವ ಉಮೇದಿನಂತಿದ್ದು, ತನ್ನ ಆತುರದ ಕ್ರಮಕ್ಕೆ ಭಾರತದ ಬಡಪಾಯಿಗಳ ಹೊಟ್ಟೆಯ ಮೇಲೆ ಬರೆ ಎಳೆದಂತಾಗಿದೆ  ಎಂದು ಕುವೈಟ್ ಉದ್ಯೋಗ ವಂಚಿತರು ಅಸಮಾಧಾನ ವ್ಯಕ್ತಪಡಿಸಿದ್ದರು. ಭಾರತ ಈ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.

ಇದನ್ನೂ ಓದಿ:
►►ಕುವೈಟ್ ಉದ್ಯೋಗ ಬೇಕೆ? ಠೇವಣಿ ಇಡಿ:
http://bit.ly/1Q7QAOs
►►ಮನೆಗೆಲಸ ಮಾಡುವ ಮಹಿಳೆಯರಿಗೆ ಗಲ್ಫ್ ನರಕ: http://bit.ly/1OoLMUn

Related Tags: Kuwait Lifts Ban on Women Domestic Workers, Domestic Visa Banned In Kuwait, M.J .Akbar, Visa Banned To Female Kuwait, Narendra Modi, Acche Din, Karavalikarnataka News, Kannada News, Karavali Karnataka, Latest Kannada News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ