ಕೊರಿಯಾ ಸೂಪರ್ ಸೀರೀಸ್: ಪಿ.ವಿ.ಸಿಂಧು ಚಾಂಪಿಯನ್

ಕರಾವಳಿ ಕರ್ನಾಟಕ ವರದಿ

ಸಿಯೋಲ್:
ಗ್ಲಾಸ್ಗೋ ಓಪನ್ ಟೂರ್ನಿಯಲ್ಲಿ ಜಪಾನ್‌ನ ನೋಜೊಮಿ ಒಕುಹರಾ ವಿರುದ್ಧ ಸೋತಿದ್ದ ಪಿವಿ ಸಿಂಧು ಕೊರಿಯಾ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ನಲ್ಲಿ ಅವರನ್ನು ಸೋಲಿಸುವ ಮೂಲಕ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.

22-20, 11-21, 21-18 ಅಂತರದಿಂದ  ಫೈನಲ್ ಗೆಲ್ಲುವ ಮೂಲಕ ಪ್ರಶಸ್ತಿಯನ್ನು ಸಿಂಧು ತಮ್ಮದಾಗಿಸಿದ್ದಾರೆ.

ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್‍ನಲ್ಲಿ, ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಸಿಂಧು 21- 10, 17-21, 21-16 ರಲ್ಲಿ ಚೀನಾದ ಆರನೇ ಶ್ರೇಯಾಂಕಿತ ಆಟಗಾರ್ತಿ ಹಿ ಬಿಂಗ್‍ಜಿಯಾವೊ ಅವರನ್ನು ಸೋಲಿಸಿದ್ದರು.

ಆಗಸ್ಟ್ 27 ರಂದು ಸ್ಲಾಟ್ಲೆಂಡಿನ ಗ್ಲಾಸ್ಗೋ ಓಪನ್ ಫೈನಲ್ ನಲ್ಲಿ 21- 19, 22-20 ಅಂತರದಿಂದ ಒಕುಹರಾ ಸಿಂಧು ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದಿದ್ದರು.

ಕಳೆದ ತಿಂಗಳು ಪಿ.ವಿ.ಸಿಂಧು ವಿಶ್ವ ಚಾಂಪಿಯನ್'ಶಿಪ್ ಜಯಿಸುವ ಸುವರ್ಣಾವಕಾಶವನ್ನು ತಪ್ಪಿಸಿದ್ದು ಇದೇ ಜಪಾನ್ ಆಟಗಾರ್ತಿ. ಈ ಹಿನ್ನೆಲೆಯಲ್ಲಿ ಇವರಿಬ್ಬರ ಇವತ್ತಿನ ಫೈನಲ್ ಎಲ್ಲರ ಕುತೂಹಲ ಮೂಡಿಸಿತ್ತು. ಹೆಚ್ಚೂಕಡಿಮೆ ಒಂದೂವರೆ ಗಂಟೆ ಕಾಲ ನಡೆದ ಹಣಾಹಣಿಯಲ್ಲಿ ಸಿಂಧು ಈ ಬಾರಿ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು.

ಎರಡನೇ ಗೇಮ್'ನಲ್ಲಿ ಜಪಾನ್ ಆಟಗಾರ್ತಿ ಸುಲಭವಾಗಿ ಗೆದ್ದಾಗ ಸಿಂಧು ಆಟ ಮುಗಿಯಿತೆಂದೇ ಬಹುತೇಕರು ಭಾವಿಸಿದ್ದರು. ಆದರೆ, ನಿರ್ಣಾಯಕ ಮೂರನೇ ಗೇಮ್'ನಲ್ಲಿ ಸಿಂಧು ಛಲಬಿಡದೇ ಹೋರಾಟ ಮಾಡಿದರು.

6 ಲಕ್ಷ ಅಮೆರಿಕನ್ ಡಾಲರ್ ಮೊತ್ತದ ಕೊರಿಯಾ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಟೂರ್ನಿಯನ್ನು ಗೆದ್ದ ಮೊದಲ ಭಾರತೀಯೆ ಎಂಬ ಕೀರ್ತಿ ಸಿಂಧುವಿಗೆ ಪ್ರಾಪ್ತವಾಗಿದೆ. ವಿಶ್ವ ರ್ಯಾಂಕಿಂಗ್'ನಲ್ಲಿ 4ನೇ ಸ್ಥಾನದಲ್ಲಿರುವ ಪಿ.ವಿ.ಸಿಂಧು ಈಗ ನಂಬರ್ ಒನ್ ಪಟ್ಟವನ್ನು ಮರಳಿ ಪಡೆಯುವ ಹಾದಿಯಲ್ಲಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ