ವಿನಾಯಕನನ್ನು ಬಲ್ಲಿರಿ. ವಿನಾಯಕಿಯನ್ನು ಬಲ್ಲಿರೇನು?
ವಿನಾಯಕನ ಹೆಣ್ಣು ರೂಪ ಅಥವಾ ವಿನಾಯಕನ ಸಂಗಾತಿ ಹೆಣ್ಣು ದೇವತೆ ಎಂದು ಕರೆಯಲ್ಪಡುವ ವಿನಾಯಕಿಯ ಬಗ್ಗೆ ತಿಳಿದವರು ಕಡಿಮೆ. ಎಲ್ಲಿದ್ದಾಳೆ ವಿನಾಯಕಿ? ಈ ವರದಿ ಓದಿ

ಕರಾವಳಿ ಕರ್ನಾಟಕ ವರದಿ

ಕನ್ಯಾಕುಮಾರಿ:
ವಿಘ್ನ ನಿವಾರಕ ವಿನಾಯಕ ಭಾರತದ ಅತ್ಯಂತ ಪ್ರಸಿದ್ಧ ಮತ್ತು ಹೆಚ್ಚು ಆರಾಧಿಸಲ್ಪಡುವ ದೇವರು. ಮನೆಮನೆಗಳಲ್ಲಿ ನಿತ್ಯವೂ ಆರಾಧಿಸಲ್ಪಡುವ ಗಣೇಶನ ಮಂದಿರಗಳೂ ಭಾರತದಲ್ಲಿ ಸಾವಿರಾರು ಇವೆ. ಸ್ತ್ರೀಯರಂತೂ ವಿಘ್ನೇಶನ ಆರಾಧನೆಯಲ್ಲಿ ಮೊದಲ ಸ್ಥಾನದಲ್ಲಿರುತ್ತಾರೆ. ಪ್ರತಿ ಮಾಸದ ಸಂಕಷ್ಟಿಯ ವೃತವಿಟ್ಟು ಗಣೇಶನ ಆರಾಧನೆ ಮಾಡುವವರು ಲೆಕ್ಕವಿಲ್ಲ.

ಪ್ರತಿ ವರ್ಷದ ಗಣೇಶ ಚೌತಿಯ ಹಬ್ಬವನ್ನಂತೂ ಅದ್ದೂರಿಯಾಗಿ ಆಚರಿಸಲಾಗುತ್ತದೆ. ನೂರಾರು ವರ್ಷಗಳಿಂದ ಗಣೇಶನ ಮೂರ್ತಿಯನ್ನು ಮನೆಯಲ್ಲಿಟ್ಟು ಪೂಜೆ ಮಾಡುವ ಸಂಪ್ರದಾಯವೇ ಇದೆ. ಪೂಜೆ ಮುಗಿದ ಬಳಿಕ ಆ ಮೂರ್ತಿಯನ್ನು ಜಲಾಶಯಗಳಲ್ಲಿ ವಿಸರ್ಜನೆ ನಡೆಸುವ ಸಂಪ್ರದಾಯವೂ ಇದೆ.

ಬಾಲ ಗಂಗಾಧರ ತಿಲಕರು ಸ್ವಾತಂತ್ರ್ಯ ಹೋರಾಟದ ವೇಳೆ ಆರಂಭಿಸಿದ ಸಾರ್ವಜನಿಕ ಗಣೇಶೋತ್ಸವ ಇಂದು ಭಾರತದ ಗಲ್ಲಿಗಲ್ಲಿಯಲ್ಲಿ ಒಂದರಂತೆ ಗಣೇಶೋತ್ಸವ ಆಚರಿಸುವ ಹಂತಕ್ಕೆ ತಲುಪಿದೆ. ವಿನಾಯಕನಿಗೆ ಕೊಡುವ ಪ್ರಾಶಸ್ತ್ಯ ಇತರ ಅನೇಕ ದೇವರಿಗೆ ಸಿಗುವುದೇ ಇಲ್ಲ.

ವಿನಾಯಕನ ಬಗ್ಗೆ ಇಷ್ಟೆಲ್ಲ ಕೇಳಿದ್ದೀರಿ. ಆದರೆ ವಿನಾಯಕಿಯ ಬಗ್ಗೆ ನಿಮಗೆ ಗೊತ್ತೆ? ಹೌದು, ವಿನಾಯಕನ ಹೆಣ್ಣು ರೂಪ ಅಥವಾ ವಿನಾಯಕನ ಸಂಗಾತಿ ಹೆಣ್ಣು ದೇವತೆ ಎಂದು ಕರೆಯಲ್ಪಡುವ ವಿನಾಯಕಿಯ ಬಗ್ಗೆ ತಿಳಿದವರು ಸಹ ಕಡಿಮೆಯೆ.

ಕನ್ಯಾ ಕುಮಾರಿಯಲ್ಲಿರುವ 1300 ವರ್ಷಗಳಷ್ಟು ಪುರಾತನವಾದ ತನುಮಾಲಯಂ ದೇವಾಲಯದಲ್ಲಿ ವಿನಾಯಕಿಯ ವಿಗ್ರಹವಿದೆ. ವಿನಾಯಕನಂತೆಯೆ ಕಾಣಿಸುವ ಈ ವಿಗ್ರಹ ವಿನಾಯಕನ ಹೆಣ್ಣು ರೂಪ. ವಿನಾಯಕಿಯ ಹೆಸರುಗಳು ಹಲವು. ಆದರೆ ಎಲ್ಲವೂ ಗಣೇಶನ ಹೆಸರುಗಳ ಸ್ತ್ರೀ ಆವೃತ್ತಿಗಳು. ಉದಾಹರಣೆಗೆ ಗಜಾನನಿ, ವಿಘ್ನೇಶಿ, ಗಜರೂಪ ಇತ್ಯಾದಿ.

ಈಕೆಯನ್ನು ವೈನಾಯಕಿ ಎಂದೂ ಕರೆಯಲಾಗುತ್ತದೆ. ಶಿವನ ಶಕ್ತಿಯ ಒಂದು ರೂಪಗಳಲ್ಲಿ ವಿನಾಯಕಿಯೂ ಸೇರಿದ್ದಾಳೆ. ಹಿಂದೂ ಪುರಾಣದಲ್ಲಿ ಅಷ್ಟೇನು ಮಹತ್ವ ನೀಡಲ್ಪಡದ ವಿನಾಯಕಿಯ ಮೊದಲ ಉಲ್ಲೇಖ ಮತ್ಸ್ಯ ಪುರಾಣದಲ್ಲಿ ಕಂಡು ಬರುತ್ತದೆ. ವಿನಾಯಕಿಯ ಹೆಸರು ಹೆಚ್ಚಿನವರಿಗೆ ಗೊತ್ತಿರದಿದ್ದರೂ ವಿನಾಯಕಿಯ ಮೇಲೆ ಹಲವಾರು ಸಂಶೋಧನಾ ಗ್ರಂಥಗಳು ಪ್ರಕಟವಾಗಿವೆ.

ವಿನಾಯಕಿಯ ಮೊದಲ ವಿಗ್ರಹ ಟೆರಕೋಟದಲ್ಲಿ ಕೆತ್ತಿದ್ದು ಇದು ಮೊತ್ತ ಮೊದಲು ರಾಜಸ್ಥಾನದಲ್ಲಿ ಕಂಡುಬಂದಿತ್ತು. ಒರಿಸ್ಸಾದ ಹಿರಾಪುರದ ತಾಂತ್ರಿಕ ದೇವಾಲಯ ಚೌಸಾತ್ ಯೋಗಿನಿ ಎಂಬಲ್ಲಿ ಈ ದೇವಿಯ ಪ್ರತಿರೂಪ ಕಂಡುಬಂದಿದೆ. ಇಲ್ಲಿ ನರ್ತಿಸುವ ಭಂಗಿಯಲ್ಲಿರುವ ವಿಶೇಷವಾದ ಹೆಣ್ಣು ವಿನಾಯಕನ ವಿಗ್ರಹವು ಶಿಥಿಲಗೊಂಡರೂ ಆಕರ್ಷಕವಾಗಿದೆ.

ಇಂತಹ ವಿನಾಯಕಿ, ವಿಘ್ನೇಶಿ, ಗಜಾನನಿಯ ಶಿಲಾ ವಿಗ್ರಹಗಳು ರಾಜಸ್ಥಾನ, ಮಧ್ಯಪ್ರದೇಶದಲ್ಲೂ ಪತ್ತೆಯಾಗಿವೆ. 64 ಯೋಗಿನಿಯರಲ್ಲಿ ವಿನಾಯಕಿಯೂ ಒಬ್ಬಳು ಎಂದು ಪುರಾಣ ತಜ್ಞರು ಹೇಳುತ್ತಾರೆ. ದೇಶದ ವಿವಿಧೆಡೆಗಳಲ್ಲಿ ಇರುವ ವಿನಾಯಕಿಯ ಚಿತ್ರಗಳು ಇಲ್ಲಿವೆ.ಚಿತ್ರಗಳು: Keerthik Sasidharan ಅವರ ಟ್ವಿಟರ್ ಖಾತೆಯಿಂದ

Related Tags: Vinayaki, Female Ganesha, Vainayaki, Jaganani, Thanumalayam Temple, Kanya Kumari
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ