ಸ್ತ್ರೀ ವೇಷಕ್ಕೆ ಯಾರಂತ ಕೇಳಿದ್ದೀರಿ? ಮಂಜುನಾಥ ಗುಜ್ಜಾಡಿಯೇ ಸರಿ!
ಗಂಡಾಗಿ ಹುಟ್ಟಿ ಹೆಣ್ಣನ್ನೂ ನಾಚಿಸುವಂತೆ ಒನಪು ವೈಯ್ಯಾರ, ಬಿನ್ನಾಣಗಳೊಂದಿಗೆ ರಂಗ ಸ್ಥಳದಲ್ಲಿ ಸ್ತ್ರೀಪಾತ್ರದಲ್ಲಿ ನಟಿಸುವ ಮಂಜುನಾಥ ಗುಜ್ಜಾಡಿ ಅವರ ಸ್ತ್ರೀ ಪಾತ್ರ ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ

ಕರಾವಳಿ ಕರ್ನಾಟಕ
ರಾವಳಿಯ ಯಕ್ಷಗಾನದ ನಾದ, ಲಯ, ಹಾಡುಗಾರಿಕೆ, ಕುಣಿತ, ಮಾತುಗಾರಿಕೆಯನ್ನು ಬಲ್ಲವನೇ ಬಲ್ಲ. ಒಮ್ಮೆ ಯಕ್ಷಗಾನಕ್ಕೆ ಆಕರ್ಷಿತರಾದಿರಿ ಎಂದರೆ ಯಕ್ಷಗಾನದ ರಸದೌತಣ ನಿಮ್ಮನ್ನು ಮತ್ತೆ ಮತ್ತೆ ಸೆಳೆಯುವುದು ತೀರಾ ಸಹಜ. ಯಕ್ಷಗಾನದ ಆಕರ್ಷಣೆಯೆ ಅಂತಹದ್ದು.

ಕರಾವಳಿಯ ಜನಪದಕ್ಕೆ ಯಕ್ಷಗಾನದ ಜೊತೆ ಅವಿನಾಭಾವ ನಂಟು. ಯಕ್ಷಗಾನಕ್ಕೆ ಜೀವಮಾನವನ್ನೆ ಮುಡಿಪಾಗಿಡುವ ಕಲಾವಿದರ ಸಂಖ್ಯೆ ಅಪಾರ. ಕೆಲವರು ವೃತ್ತಿಪರರಾದರೆ ಕರಾವಳಿಯ ಹಳ್ಳಿಹಳ್ಳಿಯಲ್ಲಿ ಯಕ್ಷಗಾನವನ್ನೇ ಉಸಿರಾಗಿಸಿಕೊಂಡ ಹವ್ಯಾಸಿ ಕಲಾವಿದರು ಸಾಕಷ್ಟು ಇದ್ದಾರೆ.

ಇಂದು ನಾವು ಪರಿಚಯಿತ್ತಿರುವ ಈ ಕಲಾವಿದ ವೃತ್ತಿಪರ ಕಲಾವಿದರಿಗೂ ಸೆಡ್ಡು ಹೊಡೆಯಬಲ್ಲ ಹವ್ಯಾಸಿ ಕಲಾವಿದ.

ಯಕ್ಷಗಾನ ಎಷ್ಟು ಸುಂದರವೊ ಅಷ್ಟೇ ಸುಂದರ ಯಕ್ಷಗಾನದ ಕುರಿತು ಮಾಡುವ ಮೈಕ್ ಪ್ರಚಾರ. “ಈ ಆಟ, ಚೆಲು ನೋಟ, ರಸಿಕರಿಗೆ ರಸದೂಟ” ಎಂದು ಆರಂಭವಾಗುವ ಪ್ರಚಾರ ಕೇಳಲು ಬಲು ಸೊಗಸು.

ಅದರಲ್ಲಿ ಒಂದು ಸಾಲು ಹೀಗೆ ಬರುತ್ತದೆ. “ಗಂಡಾಗಿ ಹುಟ್ಟಿ ಹೆಣ್ಣನ್ನೂ ನಾಚಿಸುವಂತೆ ಒನಪು ವೈಯ್ಯಾರ, ಬಿನ್ನಾಣಗಳೊಂದಿಗೆ ರಂಗ ಸ್ಥಳದಲ್ಲಿ ಸ್ತ್ರೀಪಾತ್ರದಲ್ಲಿ ನಟಿಸುವ ಕಲಾವಿದನ ಪಾತ್ರ ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ” ಎಂಬುದು ಆ ಸಾಲು. ಈ ಸಾಲುಗಳಿಗೆ ಹೇಳಿ ಮಾಡಿಸಿದಂತೆ ಇರುವ ಯಕ್ಷಗಾನ ಕಲಾವಿದ ಮಂಜುನಾಥ ಗುಜ್ಜಾಡಿ.
 
ಬಾಲ್ಯದಿಂದಲೆ ಯಕ್ಷಗಾನ ನೋಡುತ್ತಾ ಮತ್ತೆ ಅದರತ್ತಲೆ ಆಕರ್ಷಿತನಾಗಿ ಇಂದು ಓರ್ವ ಪರಿಪೂರ್ಣ ಯಕ್ಷಗಾನ ಕಲಾವಿದರಾಗಿ ಕರಾವಳಿ, ಬೆಂಗಳೂರು ಸೇರಿದಂತೆ ಹಲವೆಡೆ ಜನರು ಗುರುತಿಸುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ ಮಂಜುನಾಥ ಗುಜ್ಜಾಡಿ. ‘ಸ್ತ್ರೀ ವೇಷಕ್ಕೆ ಯಾರೆಂದು ಕೇಳಿದ್ದೀರಿ’ ಎಂದರೆ ಮಂಜುನಾಥ ಗುಜ್ಜಾಡಿ ಎಂಬಷ್ಟು ಖ್ಯಾತಿಗೆ ಪಾತ್ರರಾಗುತ್ತಿದ್ದಾರೆ ಇವರು.

ಕುಂದಾಪುರ ತಾಲೂಕಿನ ಗುಜ್ಜಾಡಿ ಎಂಬ ಪುಟ್ಟ ಊರು ಬಂದರು ನಗರ ಗಂಗೊಳ್ಳಿಗೆ ಸಮೀಪದಲ್ಲಿದೆ. ಈ ಊರಿನ ಚಂದ್ರಶೇಖರ ಪೂಜಾರಿ ಮತ್ತು ಗಂಗಾ ದಂಪತಿಯ ಮಗನಾದ ಮಂಜುನಾಥ್ ಗುಜ್ಜಾಡಿಯ ಶಾಲೆಯಲ್ಲಿ ಕಲಿಯುತ್ತಿರುವಾಗ ಏಳನೆ ತರಗತಿಯಲ್ಲಿ ಮೊತ್ತಮೊದಲ ಯಕ್ಷಗಾನದ ಪ್ರವೇಶಿಕೆ ನಡೆದಿತ್ತು.

ಅಂದು ಭೀಷ್ಮ ವಿಜಯ ಪ್ರಸಂಗದಲ್ಲಿ ಅಂಬೆಯ ಪಾತ್ರವನ್ನು ನಿರ್ವಹಿಸಿದ ಮಂಜುನಾಥ್ ಇಂದು ಸ್ತ್ರೀವೇಷದಲ್ಲಿ ಲೀಲಾಜಾಲವಾಗಿ ಅಭಿನಯ ಮಾಡುವಷ್ಟರ ಮಟ್ಟಿಗೆ ಯಕ್ಷಗಾನ ಕಲೆಯನ್ನು ದಕ್ಕಿಸಿಕೊಂಡಿದ್ದಾರೆ.

ಅಂದು ಹಾಕಿದ ಸ್ತ್ರೀವೇಷ ಮತ್ತೆ ಮಂಜುನಾಥ್ರನ್ನು ಬಿಡಲೇ ಇಲ್ಲ. ಅಂದು ಸ್ತ್ರೀ ವೇಷದಲ್ಲಿ ನಟಿಸಲು ಕಾರಣರಾದ ಶಿಕ್ಷಕ ಚಂದ್ರಹಾಸ ಹೆಬ್ಬಾರ ಕೆಳಾಕಳಿ ಅವರನ್ನು ಮಂಜುನಾಥ್ ಯಾವತ್ತು ನೆನೆಯುತ್ತಾರೆ.

ಗಂಗೊಳ್ಳಿಯ ಎಸ್.ವಿ ಕಾಲೇಜಿನಲ್ಲಿ ಪಿಯು ಬಳಿಕ ಇಂಜಿನಿಯರಿಂಗ್ ಶಿಕ್ಷಣ ಪಡೆದು ಇಂದು ಸಾಫ್ಟ್ವೇರ್ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಮಂಜುನಾಥ್ ಥಳಕು ಬಳುಕಿನ ಅಪ್ಪಟ ಪಾಶ್ಚಾತ್ಯ ಬದುಕಿನ ಆಕರ್ಷಣೆಯ ನಡುವೆಯೂ ಯಕ್ಷಗಾನದ ಕುರಿತ ತನ್ನ ಒಲವನ್ನು, ಗೀಳನ್ನು ಹಾಗೆಯೆ ಜತನದಿಂದ ಕಾಪಾಡಿಕೊಂಡು ಬಂದಿರುವುದು ಅವರ ವ್ಯಕ್ತಿತ್ವದ ವಿಶೇಷ.


ಐದು ದಿನಗಳ ಕಾಲ ಕೆಲಸ. ಹೆಚ್ಚು ಕಡಿಮೆ ಪ್ರತೀ ವಾರಾಂತ್ಯದ ಎರಡೂ ದಿನಗಳು ಯಕ್ಷಗಾನಕ್ಕೆ ಮೀಸಲು. ಮಂಜುನಾಥ್ ಅವರಿಗೆ ಯಾವಾಗ ಬಿಡುವುದು ಇದೆ, ಸ್ತ್ರೀ ವೇಷಕ್ಕೆ ಅವರೇ ಬೇಕು ಎಂದು ಕಾದು ಯಕ್ಷಗಾನದ ದಿನಾಂಕಗಳನ್ನು ನಿಗದಿಪಡಿಸುವ ಹವ್ಯಾಸಿ ಮೇಳಗಳೂ ಇವೆ.

ರಂಗಸ್ಥಳಕ್ಕೆ ಒಮ್ಮೆ ಪ್ರವೇಶಿಸಿದರೆಂದರೆ ಮಂಜುನಾಥ್ ಗುಜ್ಜಾಡಿ ಅವರ ಹೆಣ್ಣಿನ ವಯ್ಯಾರ, ನಟನೆ ಪ್ರೇಕ್ಷಕರ ಕಣ್ಮನ ಸೆಳೆಯುತ್ತವೆ. ಅಷ್ಟು ಮನಮೋಹಕವಾಗಿ, ನಯನ ಮನೋಹರಿಯಾಗಿ ನಟಿಸುವ ಮಂಜುನಾಥ್‌ಗೆ ಕೋಟದ ಸಂಸ್ಥೆಯೊಂದು ‘ನಾಟ್ಯ ಮಯೂರಿ’ ಎಂದು ಗೌರವಿಸಿರುವುದು ಅವರ ನಟನೆಯ ಸೌಂದರ್ಯಕ್ಕೆ ಸಾಕ್ಷಿ.

ಮಂಜುನಾಥ ಈ ತನಕ ನಟಿಸಿದ ಪಾತ್ರಗಳು ಸಹ ವೈವಿಧ್ಯಮಯವಾಗಿವೆ. ಒಂದಕ್ಕಿಂತ ಇನ್ನೊಂದು ಭಿನ್ನ. ಒಂದು ಪಾತ್ರ ಕೇಳುವ ನಟನೆಯ ಅಂಶಗಳು, ಹಾವ ಭಾವ ಇನ್ನೊಂದು ಪಾತ್ರ ಕೇಳುವ ಶೈಲಿಗಿಂತ ಭಿನ್ನ, ವಿಶಿಷ್ಟ. ‘ಚಿತ್ರಾಕ್ಷಿ ಕಲ್ಯಾಣ’ದಲ್ಲಿ ಚಿತ್ರಾಕ್ಷಿ, ಕವಿರತ್ನ ಕಾಳಿದಾಸ ಪ್ರಸಂಗದಲ್ಲಿ ವಿದ್ಯಾಧರೆ, ಶನೀಶ್ವರ ಮಹಾತ್ಮೆಯ ಅಲೋಲಿಕ, ಶ್ವೇತ ಕುಮಾರ ಚರಿತ್ರೆಯಲ್ಲಿ  ತ್ರಿಲೋಕ ಸುಂದರಿ, ದೇವಿ ಮಹಾತ್ಮೆಯಲ್ಲಿ ಮಾಲಿನಿ ಹೀಗೆ ಮಂಜುನಾಥ್ ಗುಜ್ಜಾಡಿ ನಿರ್ವಹಿಸಿದ ಸ್ತ್ರೀಪಾತ್ರಗಳು ಹಲವಾರು.

ಪ್ರತಿ ಪಾತ್ರದಲ್ಲೂ ಅವರ ನೃತ್ಯ, ನಟನೆಯ ಪ್ರಬುದ್ಧತೆಗೆ ಮಾರು ಹೋಗದವರಿಲ್ಲ. ಸ್ತ್ರೀ ಸಹಜವಾದ ಲಯ, ಆಕರ್ಷಕವಾದ ಮಾತಿನ ಶೈಲಿ, ರೂಪ ಎಲ್ಲವೂ ಒಂದಾಗಿ ರಂಗಸ್ಥಳದಲ್ಲಿ ಮೇಳೈಸುವ ‘ತ್ರಿಲೋಕ ಸುಂದರಿ’ ಮಂಜುನಾಥ್ ಎಂದರೆ ಅತಿಶಯೋಕ್ತಿ ಅಲ್ಲ.
 
ಬೆಂಗಳೂರಿನ ಶ್ರೀ ಕಾಳಿಂಗ ಯಕ್ಷಕಲಾ ವೈಭವ, ಮುರುಡೇಶ್ವರದಡಾ. ಐ. ಆರ್. ಭಟ್ ಅವರ ನೇತೃತ್ವದ ಯಕ್ಷರಕ್ಷೆ ಮುಂತಾದ ಹವ್ಯಾಸಿ ಯಕ್ಷಗಾನ ತಂಡಗಳಲ್ಲಿ, ಸಂಸ್ಥೆಗಳಲ್ಲಿ ಅಭಿನಯ ಮಾಡುತ್ತಾ ಯಕ್ಷ ರಸಿಕರ ನಡುವೆ ಚಿರಪರಿಚಿತರಾದ ಮಂಜುನಾಥ್ ಪ್ರಸ್ತುತ  ಬೆಂಗಳೂರಿನ ಅನೇಕ ಹವ್ಯಾಸಿ ಯಕ್ಷಗಾನ ಕಲಾತಂಡಗಳಲ್ಲಿ ಅತಿಥಿ ನಟರಾಗಿ ಬಹಳ ಬೇಡಿಕೆಯಲ್ಲಿರುವ ವೇಷಧಾರಿ. ಸಿಗಂದೂರು, ಕಮಲಶಿಲೆ ಮೇಳಗಳಲ್ಲೂ ಮಂಜುನಾಥ್ ಸ್ತ್ರೀ ವೇಷಗಳಲ್ಲಿ ಮಿಂಚಿದ್ದಾರೆ.

ಬಡಗುತಿಟ್ಟಿನ ದಿಗ್ಗಜ ಕಲಾವಿದರಾದ ಅನಂತ ಹೆಗಡೆ ನಿಟ್ಟೂರು, ರಾಜೀವ ಶೆಟ್ಟಿ ಹೊಸಂಗಡಿ, ಕೊಳಲಿ ಕೃಷ್ಣ ಶೆಟ್ಟಿ, ಜಗದೀಶ ಹೆಗಡೆ ಮಾಳ್ಕೋಡು, ಕಾರ್ತಿಕ್ ಚಿಟ್ಟಾಣಿ ಮುಂತಾದವರ ಜೊತೆ ಸ್ತ್ರೀ ವೇಷಗಳಲ್ಲಿ ನಟಿಸಿದ ಖ್ಯಾತಿಯೂ ಮಂಜುನಾಥ್ ಅವರದ್ದು.

ಯಕ್ಷಗಾನದ ನಟನೆಯಷ್ಟೆ ಮುಖ್ಯವಾದದ್ದು ಧರಿಸುವ ಮೇಕಪ್. ಅದರಲ್ಲೂ ನಿಸ್ಸೀಮ ಮಂಜುನಾಥ್ ಗುಜ್ಜಾಡಿ ಸ್ವತಃ ತಮ್ಮ ಮೇಕಪ್ ಅನ್ನು ತಾವೇ ಮಾಡಿಕೊಳ್ಳುತ್ತಾರೆ. ಇದಕ್ಕೆ ಎಸ್. ವಿ. ಉದಯ ಕುಮಾರ ಶೆಟ್ಟಿ ಮತ್ತು ಬ್ರಹ್ಮಾವರದ ಬಾಲಕೃಷ್ಣ ನಾಯಕರ ಪ್ರೇರಣೆಯೆ ಕಾರಣ ಎನ್ನುತ್ತಾರೆ ಮಂಜುನಾಥ್.

ಸ್ತ್ರೀವೇಷ ಮಾತ್ರವಲ್ಲ ಅನೇಕ ಪುರುಷ ವೇಷಗಳನ್ನೂ ಮಂಜುನಾಥ್ ನಿರ್ವಹಿಸಿದ್ದಾರೆ. ಈ ಮೂಲಕ ಯಕ್ಷಗಾನ ರಂಗದಲ್ಲಿ ತಾನೊಬ್ಬ ನಹುಮುಖ ಪ್ರತಿಭೆಯ ಕಲಾವಿದ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ.

ಆಧುನಿಕ ಯಕ್ಷಗಾನಗಳ ಭರಾಟೆಯ ಈ ದಿನಗಳಲ್ಲಿ ಪೌರಾಣಿಕ, ಸಾಂಪ್ರದಾಯಿಕ ಶೈಲಿಯ ಯಕ್ಷಗಾನಕ್ಕೆ ಹೆಚ್ಚು ಒತ್ತು ನೀಡುವ ಮಂಜುನಾಥ್ ಯಕ್ಷಗಾನಕ್ಕೆ ತಮ್ಮ ಬಿಡುವಿನ ಸಮಯವನ್ನು ಸಂಪೂರ್ಣ ಸಮಯ ಮೀಸಲಿಟ್ಟಿದ್ದಾರೆ. ತನ್ಮೂಲಕ ಯಕ್ಷಗಾನಕ್ಕೆ ವಿಶಿಷ್ಟ ಕೊಡುಗೆಯನ್ನು ನೀಡುತ್ತಿದ್ದಾರೆ.

ಬೆಂಗಳೂರಿನಂತಹ ನಗರದಲ್ಲೂ ಯಕ್ಷಗಾನದಂತಹ ಅದ್ಭುತ ಕಲೆಯನ್ನು ಉಳಿಸಿ ಬೆಳೆಸಿ ಕರಾವಳಿಯ ಹಿರಿಮೆಯನ್ನು ಎತ್ತಿ ಹಿಡಿಯುವ ಕೈಂಕರ್ಯದಲ್ಲಿ ಮಂಜುನಾಥ್ ನಿರತರಾಗಿದ್ದಾರೆ. ಅನೇಕ ಪ್ರಶಸ್ತಿ, ಸನ್ಮಾನಗಳಿಗೂ ಅವರು ಪಾತ್ರರಾಗಿದ್ದಾರೆ.

ಯಾರೇ ಆಗಲಿ ತನಗಿಷ್ಟದ ಕಲೆ, ಹವ್ಯಾಸಗಳ ಬಗ್ಗೆ ಬದ್ದತೆ ಹೊಂದಿದ್ದರೆ ವೃತ್ತಿಯ ನಡುವೆಯೂ ಅದಕ್ಕೆ ಸಮಯ ನೀಡಲು, ಸಮರ್ಪಿಸಿಕೊಳ್ಳಲು ಸಾಧ್ಯವಿದೆ ಎನ್ನುತ್ತಾರೆ ಸಾಫ್ಟ್ವೇರ್ ಕ್ಷೇತ್ರದ ಉದ್ಯೋಗಿ ಮಂಜುನಾಥ್. 

ಇಂದು (ಆಗಸ್ಟ್ 28) ಮಂಜುನಾಥ್ ಗುಜ್ಜಾಡಿ ಅವರ ಹುಟ್ಟುಹಬ್ಬವೂ ಹೌದು. ರಂಗಸ್ಥಳದಲ್ಲಿ ಪ್ರೇಕ್ಷಕರಲ್ಲಿ ರೋಮಾಂಚನ ಉಂಟುಮಾಡುವಂತೆ ಸ್ತ್ರೀ ವೇಷದಲ್ಲಿ ನಟಿಸಿ ಮಿಂಚುಹರಿಸುವ, ಯಕ್ಷ ಕಲಾ ಚೆಲುವೆ ಎಂದು ಪ್ರಶಸಿಂಸಲ್ಪಟ್ಟಿರುವ ಮಂಜುನಾಥ್ ಗುಜ್ಜಾಡಿ ಯಕ್ಷಗಾನ ರಂಗದಲ್ಲಿ ಮತ್ತಷ್ಟು ಉತ್ತುಂಗಕ್ಕೇರಲಿ, ಸಾಧನೆ ಮಾಡಲಿ ಮತ್ತು ಕಲಾವಿದರಾಗಿ ಪ್ರೇಕ್ಷಕರ ನಡುವೆ ಸಂಚಲನ ಉಂಟುಮಾಡುತ್ತಿರಲಿ ಎಂದು ಹಾರೈಸೋಣ.

ಪ್ರಖ್ಯಾತ ಸ್ತ್ರೀ ವೇಷಧಾರಿಗಳ ಪಟ್ಟಿಯಲ್ಲಿ ಮಂಜುನಾಥ್ ಅವರ ಹೆಸರು ಮಂಚೂಣಿಯಲ್ಲಿರಲಿ.

Related Tags: Manjunath Gujjadi, Yakshagana Artist, Kundapura, Stree Vesha, Karavalikarnataka
 
comments powered by Disqus
Facebook Twitter Google Plus Youtube
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ