ರೆಡ್ಡಿಯ ಲೂಟಿಯ ದುಡ್ದೂ ಮತ್ತು ಕಲ್ಲಡ್ಕ ಮಕ್ಕಳ ಬಿಸಿಯೂಟವೂ
ಕಾಗೆ ಕೂತಿದೆ ಎಂದು ಸಿದ್ದರಾಮಯ್ಯ ಕಾರು ಬದಲಾಯಿಸುತ್ತಾರೆ ಎಂದು ಭಾಷಣ ಮಾಡುವ ಜಾಣ್ಮೆ ಇರುವ ಕಲ್ಲಡ್ಕ ಶಾಲೆಯ ವಿದ್ಯಾರ್ಥಿಗಳು ರೆಡ್ಡಿಯ ಕುರಿತು ಪ್ರಶ್ನೆಗಳನ್ನು ಕೇಳಿದರೆ ಭಟ್ಟರ ಉತ್ತರವೇನು?

     ಶಶಿಧರ ಹೆಮ್ಮಾಡಿ


ಕಾಗೆ ಕೂತಿದೆ ಎಂದು ಸಿದ್ದರಾಮಯ್ಯ ಕಾರು ಬದಲಾಯಿಸುತ್ತಾರೆ ಎಂದು ಭಾಷಣ ಮಾಡುವ ಜಾಣ್ಮೆ ಇರುವ ಕಲ್ಲಡ್ಕ ಶಾಲಾ ವಿದ್ಯಾರ್ಥಿಗಳು ರೆಡ್ಡಿಯ ಕುರಿತು ಪ್ರಶ್ನೆ ಕೇಳಿದರೆ ಭಟ್ಟರ ಉತ್ತರವೇನು?

ಕೊಲ್ಲೂರು ದೇವಳದ ನೆರವು ನಿಂತಂದಿನಿಂದ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರ ಮತ್ತು ಪುಣಚದ ಶ್ರೀದೇವಿ ವಿದ್ಯಾಕೇಂದ್ರ ಎರಡೂ ಶಾಲೆಗಳು ಭಾರೀ ಸುದ್ದಿಯಲ್ಲಿವೆ. ಜೊತೆಗೆ ಈ ಶಾಲೆಗಳ ಯಜಮಾನರಾದ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟರೂ ಸುದ್ದಿಯಾಗಿದ್ದಾರೆ.

ಕೊಲ್ಲೂರು ಮೂಕಾಂಬಿಕಾ ದೇವಳದಿಂದ ಕಳೆದ ಹತ್ತು ವರ್ಷಗಳಲ್ಲಿ ಸುಮಾರು ಮೂರು ಕೋಟಿ ಹಣ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರ ಮತ್ತು ಪುಣಚದ ಶ್ರೀದೇವಿ ವಿದ್ಯಾಕೇಂದ್ರಗಳಿಗೆ ಸಂದಾಯವಾಗಿದೆ. ಈ ಊಟವನ್ನು ಮಧ್ಯಾಹ್ನದ ಬಿಸಿಯೂಟಕ್ಕಾಗಿಯೂ ಬಳಸಿಕೊಳ್ಳಲಾಗುತ್ತಿತ್ತು ಎನ್ನಲಾಗಿದೆ.

ಕೊಲ್ಲೂರು ದೇವಳದಿಂದ ಖಾಸಗಿ ಶಾಲೆಗೆ ನೆರವು ನೀಡುವುದು ಧಾರ್ಮಿಕ ದತ್ತಿ ಇಲಾಖೆಯ ನಿಮಯಗಳಿಗೆ ವಿರುದ್ಧ ಎಂದು ಕಾರಣ ನೀಡಿ ರಾಜ್ಯ ಸರ್ಕಾರ ಈ ನೆರವನ್ನು ನಿಲ್ಲಿಸಿದೆ. ಸಾರ್ವಜನಿಕ ವಲಯದಲ್ಲಿ ಈ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಖಾಸಗಿ ಶಾಲೆಗೆ ದೇವಸ್ಥಾನದಿಂದ ನೆರವು ನೀಡುತ್ತಿರುವುದನ್ನು ನಿಲ್ಲಿಸಿದ್ದು ಸೂಕ್ತ ಕ್ರಮವಾಗಿದೆ, ನೆರವು ನೀಡುವುದೇ ಆದಲ್ಲಿ ಅದಕ್ಕೆ ಅರ್ಹವಾದ ಅನೇಕ ಸರ್ಕಾರಿ ಶಾಲೆಗಳು ಇವೆ ಎಂಬುದು ಒಂದು ವರ್ಗದ ಅಭಿಪ್ರಾಯವಾದರೆ ಇನ್ನೊಂದು ವರ್ಗ ಸರ್ಕಾರ ಮಕ್ಕಳ ಬಿಸಿಯೂಟಕ್ಕೆ ಕಲ್ಲು ಹಾಕಿದೆ ಎಂದು ಅಭಿಪ್ರಾಯಪಟ್ಟಿದೆ.

ಹಿಂದೂ ದೇವಾಲಯದ ದುಡ್ಡು ಮಕ್ಕಳ ಊಟಕ್ಕೆ ಹೋದರೆ ಸರ್ಕಾರಕ್ಕೇನು ತೊಂದರೆ ಎಂದು ಕೆಲವರು ಹೇಳುತ್ತಿದ್ದರೆ ಇನ್ನೂ ಕೆಲವರು ಕಲ್ಲಡ್ಕ ಪ್ರಭಾಕರ ಭಟ್ಟರ ಶಾಲೆಗೆ ಮಾತ್ರ ಆ ನೆರವನ್ನು ಏಕೆ ನೀಡಲಾಗುತ್ತಿದೆ ಎಂಬುದನ್ನೂ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಪಕ್ಷ ತನ್ನ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದೆ. ಆದರೆ ಭಾರತೀಯ ಜನತಾ ಪಕ್ಷ ಈ ವಿಷಯವನ್ನು ರಾಜಕೀಯಗೊಳಿಸಿ ಸಾಧ್ಯವಾದಷ್ಟು ಮೈಲೇಜ್ ಪಡೆಯಲು ಯತ್ನಿಸುತ್ತಿದೆ. ಕಲ್ಲಡ್ಕ ಪ್ರಭಾಕರ ಭಟ್ಟರು ಬಿಜೆಪಿಯ ಮಾತೃ ಸಂಸ್ಥೆ ಆರೆಸ್ಸೆಸ್ನ ಪ್ರಮುಖರೂ ಆಗಿರುವ ಕಾರಣ ಈ ವಿಷವನ್ನು ಇನ್ನೂ ದೊಡ್ಡ ಮಟ್ಟದಲ್ಲಿ ರಾಜಕೀಯಕ್ಕೆ ಬಳಸಿಕೊಳ್ಳುವುದು ಅವರಿಗೆ ಅನುಕೂಲಕರವೂ ಹೌದು.

ಕೊಲ್ಲೂರಿನ ನೆರವನ್ನು ಸ್ಥಗಿತಗೊಳಿಸಿರುವುದನ್ನು ಮಕ್ಕಳ ಊಟಕ್ಕೆ ಕಲ್ಲು ಎಂಬ ನೆಲೆಯಲ್ಲಿ ಈ ವಿಷಯವನ್ನು ಈಗಾಗಲೇ ಭಾವನಾತ್ಮಕಗೊಳಿಸಿರುವ ಬಿಜೆಪಿ ಸಿದ್ದರಾಮಯ್ಯ ಸರ್ಕಾರವನ್ನು ಹೇಗೆಲ್ಲ ಹಣಿಯಲು ಸಾಧ್ಯವೊ ಅಷ್ಟೆಲ್ಲ ಪ್ರಯತ್ನಪಡುತ್ತಿದೆ ಎಂಬುದು ಸಾರ್ವಜನಿಕರ ಗಮನಕ್ಕೆ ಬಂದಿದೆ.

“ ಭಿಕ್ಷೆ ಬೇಡಿಯಾದರೂ ಮಕ್ಕಳಿಗೆ ಊಟ ಹಾಕಿಸುತ್ತೇನೆ ವಿನಃ ಸರ್ಕಾರದ ಬಳಿ ನಿರ್ಧಾರ ಮರುಪರಿಶೀಲಿಸಲು ಕೇಳುವುದಿಲ್ಲ” ಎಂದು ಕಲ್ಲಡ್ಕ ಪ್ರಭಾಕರ ಭಟ್ಟರು ಘೋಷಿಸಿಯೂ ಆಗಿದೆ. ಆದರೆ ಬಳಿಕ ಕಲ್ಲಡ್ಕ ಶಾಲೆಯ ಮಕ್ಕಳನ್ನು ಎದುರಿಗಿಟ್ಟುಕೊಂಡು ಬಂಟ್ವಾಳ ತಾಲೂಕು ಕಛೇರಿಯ ಎದುರು ಮಕ್ಕಳಿಂದ ಖಾಲಿ ತಟ್ಟೆ ಬಾರಿಸಿ ಪ್ರತಿಭಟನೆಯನ್ನೂ ನಡೆಸುವಲ್ಲಿ ಭಟ್ಟರು ಯಶಸ್ವಿಯಾಗಿದ್ದಾರೆ.

ಒಂದೆಡೆ ಕಲ್ಲಡ್ಕ ಭಟ್ಟರು ನಡೆಸುವ ಶಾಲೆಗಳಿಗೆ ಹೇಗಾದರೂ ಮಾಡಿ ನೆರವು ನೀಡಬೇಕೆಂದು ಪಣತೊಟ್ಟಂತೆ ಅಭಿಯಾನ ನಡೆಯುತ್ತಿದೆ. ಈಗಾಗಲೇ ಲಕ್ಷಾಂತರ ರೂಪಾಯಿಯನ್ನು ಆನ್ಲೈನ್ ಅಭಿಯಾನದ ಮೂಲಕ ಸಂಗ್ರಹಿಸಲಾಗಿದೆ ಎಂದು ಈ ಅಭಿಯಾನ ಆರಂಭಿಸಿರುವ ಕರಾವಳಿ ಮೂಲದ ಮುಂಬೈ ಯುವಕರ ತಂಡ ಹೇಳಿಕೊಂಡಿದೆ.

ಇನ್ನೊಂದೆಡೆ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲೂ ಮಂಗಳೂರಿನಲ್ಲಿ ಜೋಳಿಗೆ ಅಭಿಯಾನ ಶುರುವಾಗಿದೆ. ಮನೆಮನೆಗೆ ತೆರಳಿ ಜೋಳಿಗೆ ಒಡ್ಡುತ್ತಿರುವ ಶೋಭಾ ಕರಂದ್ಲಾಜೆ ಮತ್ತು ಬಿಜೆಪಿ ಕಾರ್ಯಕರ್ತರು ಮಕ್ಕಳ ಊಟಕ್ಕಾಗಿ ಅಕ್ಕಿ ಮುಂತಾದ ಸಾಮಗ್ರಿಗಳನ್ನು ಸಂಗ್ರಹಿಸುತ್ತಿದ್ದಾರೆ. ಈ ಅಭಿಯಾನಕ್ಕೂ ಮಾಧ್ಯಮದಲ್ಲಿ ಸಾಕಷ್ಟು ಪ್ರಚಾರ ಸಿಕ್ಕಿದೆ.

ಸರ್ಕಾರದ ನಿಲುವು ಕಾನೂನುಬದ್ದವಾಗಿದೆಯೊ ಅಥವಾ ಪ್ರಭಾಕರ ಭಟ್ಟರ ವಿರುದ್ಧ ಅದು ರಾಜಕೀಯ ಪ್ರೇರಿತವಾಗಿ ಶಾಲೆಗಳಿಗೆ ನೆರವು ನೀಡುವುದನ್ನು ಸ್ಥಗಿತಗೊಳಿಸಿದೆಯೊ ಎಂಬುದು ಸದ್ಯಕ್ಕೆ ಚರ್ಚೆಯಲ್ಲಿರುವ ಸಂಗತಿ.

ಪ್ರಭಾಕರ ಭಟ್ಟರೆ ನಮಗೆ ಸರ್ಕಾರದ ಬಿಸಿಯೂಟ ಬೇಡ ಎಂದು ಬರೆದುಕೊಟ್ಟಿದ್ದಾರೆ, ಬಿಸಿಯೂಟದ  ಅಗತ್ಯವಿದ್ದರೆ ಈಗಲೂ ಸರ್ಕಾರಕ್ಕೆ ಅರ್ಜಿ ಹಾಕಿದರೆ ಸರ್ಕಾರ ಒದಗಿಸಲಿದೆ ಎಂದು ರಮಾನಾಥ ರೈ ಹೇಳಿದ್ದಾರೆ.

ಇಷ್ಟು ದಿನ ರಾಜಕೀಯ, ಸೋಷಿಯಲ್ ಮೀಡಿಯಾ ಚರ್ಚೆ, ಮಕ್ಕಳ ಹಸಿವು, ದ್ವೇಷ ರಾಜಕಾರಣ ಎಂದೆಲ್ಲ ಆ ಮಿತಿಯಲ್ಲೇ ಚರ್ಚೆಯಾಗುತ್ತಿದ್ದ ಈ ಪ್ರಕರಣಕ್ಕೆ ಈಗ ಹೊಸದೊಂದು ತಿರುವು ಬಂದಿದೆ. ಅದು ಭ್ರಷ್ಟಾಚಾರದ ಹಣದ್ದು! ರಾಜ್ಯವನ್ನೇ ಲೂಟಿಗೈದ ಜನಾರ್ದನ ರೆಡ್ಡಿಯ ಹಣದ್ದು! 
 
ಕಲ್ಲಡ್ಕ ಶಾಲೆಗೆ ಭೇಟಿ ನೀಡಿರುವ ಮಾಜಿ ಸಚಿವ, ಗಣಿ ಧಣಿ, ನಾಡಿನ ನೆಲವನ್ನು ಅಗೆದು ಅಗೆದು ಪ್ರಕೃತಿ ಸಂಪತ್ತನ್ನು ಕೊಳ್ಳೆ ಹೊಡೆದು ಮನೆಯು ತಿಜೋರಿ ತುಂಬಿಸಿಕೊಂಡು ಕರ್ನಾಟಕದಲ್ಲಿ ಭ್ರಷ್ಟಾಚಾರದ ಪಟ್ಟಿಯಲ್ಲಿ ಮೊತ್ತಮೊದಲು ಕಾಣಿಸಿಕೊಳ್ಳುವ ಹೆಸರಾದ ಜನಾರ್ದನ ರೆಡ್ಡಿ ಕಲ್ಲಡ್ಕ ಭಟ್ಟರ ಶಾಲೆಗಳಿಗೆ 26 ಲಕ್ಷ ರೂಪಾಯಿ ಕೊಟ್ಟಿದ್ದಾರೆ. ಮಕ್ಕಳ ಬಿಸಿಯೂಟಕ್ಕಾಗಿ ಈ ದುಡ್ಡನ್ನು ಜನಾರ್ದನ ರೆಡ್ಡಿ ನೀಡಿದ್ದಾರೆ.

ಜನಾರ್ದನ ರೆಡ್ಡಿ ಜೈಲಿಗೆ ಹೋಗಿ ಬಂದವರು. ಇಂದಿಗೂ ಆತನ ಮೇಲೆ ಇರುವ ಎಲ್ಲ ಕೇಸುಗಳು ನ್ಯಾಯಾಲಯದಲ್ಲಿ ನಡೆಯುತ್ತಿವೆ. ಹೇಗೆ ಜನಾರ್ದನ ರೆಡ್ಡಿ ಬ್ರದರ್ಸ್ ಕರ್ನಾಟಕದ ಪ್ರಕೃತಿ ಸಂಪತ್ತನ್ನು ನಾಶ ಮಾಡಿದ್ದಾರೆ, ಪ್ರಾಕೃತಿಕ ಸಮತೋಲನವನ್ನೇ ಬುಡಮೇಲು ಮಾಡುವಷ್ಟರ ಮಟ್ಟಿಗೆ ರೆಡ್ದಿ ಸಹೋದರರು ಮಾಡಿದ ಪ್ರಕೃತಿ ನಾಶ ಇಂದು ಕರ್ನಾಟಕದಲ್ಲಿ ಎಲ್ಲರಿಗೂ ಗೊತ್ತಿರುವ ವಿಚಾರವೆ.

ರೆಡ್ಡಿ ಬ್ರದರ್ಸ್ ಎಂದರೆ ಇಂದು ಇಡೀ ಭಾರತದ ಜನರ ಕಣ್ಣೆದುರಿಗೆ ಬಂದು ನಿಲ್ಲುವ ಚಿತ್ರಣವೇ ನೆಲ ಅಗೆದು ಆ ದುಡ್ಡಿನಲ್ಲಿ ಚಿನ್ನದ ಸಿಂಹಾಸನ ಮಾಡಿ ಕೂತವರು, ನೋಟುಗಳ ರಾಶಿಯಲ್ಲಿ ಬಿದ್ದು ಹೊರಳಾಡುತ್ತಿರುವವರು.

ಇಂತಹ ಜನಾರ್ದನ ರೆಡ್ಡಿಯೊಂದಿಗೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟರು ಯಾವುದೇ ಅಳುಕಿಲ್ಲದೆ ಮೊನ್ನೆ ಮತ್ತೆ ಕಾಣಿಸಿಕೊಂಡಿದ್ದಾರೆ (ರೆಡ್ದಿಯ ಮಗಳ ಮದುವೆಗೂ ಭಟ್ಟರು ಹೋಗಿದ್ದರು). ಜನಾರ್ದನ ರೆಡ್ಡಿ ಕೊಟ್ಟ 26 ಲಕ್ಷ ರೂಪಾಯಿಗಳ ದೇಣಿಗೆಯನ್ನು ಸ್ವೀಕರಿಸಿದ್ದಾರೆ. ಮಾತ್ರವಲ್ಲ ರೆಡ್ಡಿಯ ಜೊತೆ ಶಾಲಾ ಮಕ್ಕಳನ್ನು ಕೂರಿಸಿ ಶಾಲೆಯಲ್ಲಿ ಪ್ರಾರ್ಥನೆಯನ್ನೂ ಮಾಡಿಸಿದ್ದಾರೆ.

ಕಲ್ಲಡ್ಕ ಪ್ರಭಾಕರ ಭಟ್ಟರು ರಾಜ್ಯವನ್ನೇ ಲೂಟಿಗೈದ ಜನಾರ್ದನ ರೆಡ್ಡಿಯನ್ನು ಪಕ್ಕದಲ್ಲಿ ಕೂರಿಸಿಕೊಂಡು ಶಾಲಾ ಮಕ್ಕಳಿಗೆ ಕೊಡುತ್ತಿರುವ ಸಂದೇಶವಾದರೂ ಏನು?

ಇತ್ತೀಚೆಗೆ ಕಲ್ಲಡ್ಕ ಭಟ್ಟರ ಯಜಮಾನಿಕೆಯ ಶಾಲಾ ಮಕ್ಕಳು ಬಿ.ಸಿ.ರೋಡ್ನಲ್ಲಿ ಪ್ರತಿಭಟನೆ ಮಾಡಿದ್ದರು. ರಾಜ್ಯ ಸರ್ಕಾರ ಕೊಲ್ಲೂರಿನಿಂದ ನೆರವು ನಿಲ್ಲಿಸಿದ್ದಕ್ಕಾಗಿ ನೂರಾರು ವಿದ್ಯಾರ್ಥಿಗಳನ್ನು ಮುಂದಿಟ್ಟುಕೊಂಡು ಈ ಪ್ರತಿಭಟನೆ ನಡೆಸಲಾಗಿತ್ತು. ಈ ಪ್ರತಿಭಟನೆಯಲ್ಲಿ ಅನೇಕ ಮಕ್ಕಳು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಭಾರೀ ಪ್ರಖರವಾಗಿ ಮಾತಾಡಿರುವುದು  ವಿಡಿಯೊಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಕೆಲ ಮಕ್ಕಳು ಸಿದ್ದರಾಮಯ್ಯ ಸರ್ಕಾರವನ್ನೇ ಉರುಳಿಸುತ್ತೇನೆ ಎಂದು ಸವಾಲು ಹಾಕಿದ್ದೂ ಆ ವಿಡಿಯೊಗಳಲ್ಲಿ ಇದೆ. ಒಬ್ಬ ಹುಡೂಗನಂತೂ “ಕಾಗೆ ಕೂತಿದೆ ಎಂದು ಮುಖ್ಯಮಂತ್ರಿಗಳು ಕಾರನ್ನೆ ಬದಲಾಯಿಸುತ್ತಾರೆ, ಅಂಥದ್ದರಲ್ಲಿ ಮಕ್ಕಳ ಊಟಕ್ಕೆ ಏಕೆ ಕಲ್ಲು ಹಾಕುತ್ತೀರಿ” ಎಂದು ಹೇಳಿದ್ದಾನೆ. ಇದು ಭಟ್ಟರ ಶಾಲೆಯ ಮೇಷ್ಟ್ರುಗಳು ಕಲಿಸಿದ್ದನ್ನು ಗಿಣಿಪಾಠದಂತೆ ಮಕ್ಕಳು ಹೇಳಿದ್ದಾರೊ ಅಥವಾ ಮಕ್ಕಳೇ ಸ್ವತಃ ರೋಷದಿಂದ ಹೇಳಿದ್ದಾರೊ ಎನ್ನುವ ಅನುಮಾನ ಇನ್ನೂ ಇದೆ.

ಅದೇನೆ ಇರಲಿ, ಇಷ್ಟೆಲ್ಲ ರಾಜಕೀಯ, ಸಾಮಾಜಿಕ ಜ್ಞಾನವಿರುವ ಕಲ್ಲಡ್ಕ ಭಟ್ಟರ ಶಾಲೆಯ ಮಕ್ಕಳು ಜನಾರ್ದನ ರೆಡ್ಡಿಯ ಬಗ್ಗೆ ಭಟ್ಟರ ಬಳಿ ಪ್ರಶ್ನೆಗಳನ್ನು ಕೇಳಿದರೆ ಭಟ್ಟರು ಏನು ಉತ್ತರ ನೀಡಬಲ್ಲರು? ರಾಜ್ಯ ಲೂಟಿ ಮಾಡಿದವರ ದುಡ್ಡಿನಲ್ಲಿ ನಾವು ಊಟ ಮಾಡುವುದೆ?” ಎಂದು ಮಕ್ಕಳು ಎಲ್ಲಾದರೂ ಕೇಳಿದರೆ ಉತ್ತರಿಸುವ ನೈತಿಕತೆ ಭಟ್ಟರಿಗೆ ಇರುತ್ತದೆಯೆ?

ಸೆಪ್ಟೆಂಬರ್ 3, 2006 ರಂದು ಕರ್ನಾಟಕ ಮತ್ತು ಆಂಧ್ರಪ್ರದೇಶದ ನಡುವಿನ ಗಡಿಯಲ್ಲಿ ಶತಮಾನಗಳಿಂದಲೂ ಘಟಾನುಘಟಿ ಎನಿಸಿಕೊಂಡಿದ್ದ ಸುಗ್ಗಲಮ್ಮ ದೇವಿಯ ದೇವಸ್ಥಾನವನ್ನು ಜನಾರ್ದನ ರೆಡ್ಡಿ ಸಹೋದರರು ನೆಲಸಮ ಮಾಡುತ್ತಾರೆ. ಎರಡು ರಾಜ್ಯಗಳ ಗಡಿಯೂ ಅಳಿಸಿ ಹೋಗುವ ಹಾಗೆ ಆ ಭೂಮಿಯನ್ನು ಅಗೆದು ಅಗೆದು ಅದಿರು ತೆಗೆದು ತೆಗೆದು ತಮ್ಮ ಮನೆಯ ಬೊಕ್ಕಸವನ್ನು ಬಂಗಾರದಿಂದ ತುಂಬುತ್ತಾರೆ. ಮತ್ತು ಆ ದುಡ್ಡಿನಲ್ಲಿ 26 ಲಕ್ಷ ರೂಪಾಯಿಗಳನ್ನು ಕಲ್ಲಡ್ಕ ಪ್ರಭಾಕರ ಭಟ್ಟರ ಶಾಲೆಗೆ  ಕೊಡುತ್ತಾರೆ ಎಂಬ ಈ ಸತ್ಯ ಶಾಲೆಯ ಮಕ್ಕಳಿಗೆ ಇಂದು ಗೊತ್ತಾಗದಿದ್ದರೂ ನಾಳೆ ಗೊತ್ತಾದಾಗ ಮಕ್ಕಳ ಪ್ರತಿಕ್ರಿಯೆ ಹೇಗಿರಬಹುದು? ಅವರ ಪೋಷಕರ ಪ್ರತಿಕ್ರಿಯೆ ಹೇಗಿರಬಹುದು? ಇದನ್ನು ಭಟ್ಟರು ಊಹಿಸಿದ್ದಾರೆಯೆ?

ಒಂದೆಡೆ ಆರೆಸ್ಸೆಸ್ ನಾಯಕರು ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ದೊಡ್ಡ ಆಂದೋಲನ ನಡೆಸುತ್ತಿದ್ದಾರೆ. ಇನ್ನೊಂದೆಡೆ ಭ್ರಷ್ಟಾಚಾರವನ್ನೆ ಹೊದ್ದು ಮಲಗಿರುವ ರೆಡ್ಡುಯಂತಹವರನ್ನು ಆಲಂಗಿಸಿ ಓಲೈಸುತ್ತಾರೆ. ಇದು ಯಾವ ನ್ಯಾಯ? ಯಾವ ಹೋರಾಟ?

ಎಲ್ಲ ದೇಣಿಗೆಗಳು ಅಥವಾ ಕೊಲ್ಲೂರಿನ ದೇವಿಯ ಹುಂಡಿಯಲ್ಲಿ ಪ್ರಾಮಾಣಿಕರ ದುಡ್ಡು ಮಾತ್ರ ಇರುವುದಿಲ್ಲ, ಸಮಾಜದ ಎಲ್ಲ ಬಗೆಯ ಜನರ ದುಡ್ಡೂ ಇರುತ್ತದೆ. ಕಳ್ಳರು, ದರೋಡೆಕೋರರು, ಕೊಲೆಗಾರರು ಜೊತೆಗೆ ಸಜ್ಜನರು ಹೀಗೆ ಎಲ್ಲರ ದುಡ್ಡು ಕಾಣಿಕೆ, ದೇಣಿಗಗಳ ರೂಪದಲ್ಲಿ ಬರುತ್ತದೆ. ಆದರೆ ಅದೆಲ್ಲವೂ ಪರೋಕ್ಷವಾಗಿ ಇರುವ ಮೂಲಗಳು. ಆದರೆ ಜನಾರ್ದನ ರೆಡ್ಡಿಯಂತಹ ಲೂಟಿಕೋರ ಮಂದಿಯ ದುಡನ್ನು ಲಕ್ಷಗಳ ಲೆಕ್ಕದಲ್ಲಿ ಸ್ವೀಕರಿಸುವುದು, ಶಾಲಾ ಮಕ್ಕಳ ಎದುರು ಆತನ ಜೊತೆ ಭಜನೆ ಮಾಡುವುದು ಯಾವ ಪಾಠವನ್ನು ಮಕ್ಕಳಿಗೆ ಕಲಿಸಿಕೊಟ್ಟಂತಾಗುತ್ತದೆ?

ಕೊಲ್ಲೂರು ದೇವಿಯ ದುಡ್ಡು ನಿಂತಿರಬಹುದು. ಆದರೆ ಶಾಲೆ ನಡೆಸಲು, ಮಕ್ಕಳಿಗೆ ಊಟ ಕೊಡಲು ಸರ್ಕಾರ ನೆರವು ನೀಡಲು ಸಿದ್ಧವಿದೆ. ದಾನಿಗಳು ಸಿದ್ಧರಿದ್ದಾರೆ. ಖಾಸಗಿ ಶಾಲೆ ನಡೆಸುವವರಿಗೆ ಮಕ್ಕಳ ಊಟದ ಜವಾಬ್ದಾರಿ ಹೊರುವ ಹೊಣೆಗಾರಿಕೆಯಂತೂ ಇದ್ದೇ ಇರುತ್ತದೆ. ಅಂತಹುದರಲ್ಲಿ ಭಟ್ಟರು ಪರಮ ಭ್ರಷ್ಟರ ದುಡ್ಡಿಗೆ ಸಾರ್ವಜನಿಕವಾಗಿ ಕೈ ಚಾಚಿರುವುದು ಈಗಾಗಲೇ ರಾಜಕೀಯಗೊಂಡಿರುವ ಈ ಪ್ರಕರಣಕ್ಕೆ ಭ್ರಷ್ಟಾಚಾರದ ಕಳಂಕವೂ ಅಂಟಿಕೊಂಡಂತಾಗಿದೆ.


ರೆಡ್ಡಿ ಸಹೋದರರು ತನ್ನ ದೇವಾಲಯವನ್ನೆ ಕೆಡವಿದರೂ ಸುಗ್ಗಲಮ್ಮ ದೇವಿ ಸುಮ್ಮನಿರಬಹುದು. ಆದರೆ ಕಲ್ಲಡ್ಕ ಶಾಲೆಯ ಮಕ್ಕಳು ಜನಾರ್ದನ ರೆಡ್ಡಿಯ ಕುರಿತು ಪ್ರಶ್ನೆ ಕೇಳದೆ ಸುಮ್ಮನಿರುತ್ತಾರೆಯೆ? ಪ್ರಶ್ನೆ ಕೇಳಿದರೆ ಮಾತ್ರವೇ ಆ ಮಕ್ಕಳು ನಾಳೆಯ ಸತ್ಪ್ರಜೆಗಳಾಗಲು ಸಾಧ್ಯ. ಕಲ್ಲಡ್ಕ ಶಾಲಾ ಮಕ್ಕಳು ಕಲ್ಲಡ್ಕ ಭಟ್ಟರ ಹಾಗೆಯೆ ಆಗುವುದಿಲ್ಲ ಎಂಬ ಸದಾಶಯದೊಂದಿಗೆ.

-ಶಶಿಧರ ಹೆಮ್ಮಾಡಿ

ಇದನ್ನೂ ಓದಿ:
►►ಮಂಗಳೂರಲ್ಲಿ ಜೋಳಿಗೆ. ಉಡುಪಿಗಿಲ್ಲ ಏಳಿಗೆ. ಸಂಸದೆ ಶೋಭಾ ನೀವೇಕೆ ಹೀಗೆ?: http://bit.ly/2uOfC25
►►ಕಲ್ಲಡ್ಕ ಭಟ್ಟರ ಶಾಲೆಗೆ 26ಲಕ್ಷ ನೀಡಿದ ಗಣಿ ರೆಡ್ಡಿ: http://bit.ly/2wjgADm
►►ಶೋಭಾ ಮಡಿಕೇರಿ ಆಸ್ತಿಯ ಒಂದಂಶ ಕೊಟ್ಟರೆ ಮಕ್ಕಳಿಗೆ ಜೀವನ ಪರ್ಯಂತ ಊಟ: http://bit.ly/2i7LkkK
►►'ಮುಷ್ಠಿ ಅಕ್ಕಿ ಭಿಕ್ಷೆ ಅಭಿಯಾನ’ಕ್ಕೆ ಶೋಭಾ ಚಾಲನೆ http://bit.ly/2fOf2dF
►►ಕಲ್ಲಡ್ಕ ಶಾಲೆಗೆ ನೆರವು ಸ್ಥಗಿತ: ಆನ್ಲೈನ್ನಲ್ಲಿ ಶುರುವಾಗಿದೆ 'ಭಿಕ್ಷಾಂ ದೇಹಿ ಅಭಿಯಾನ": http://bit.ly/2vCBU5C
►►ಬಿಸಿಯೂಟ ಬೇಡವೆಂದು ಬರೆದುಕೊಟ್ಟಿದ್ದ ಭಟ್ಟರು. ಈಗಲೂ ಅರ್ಜಿ ಹಾಕಲಿ: ರಮಾನಾಥ ರೈ: http://bit.ly/2uGdvcx
►►ಕಲ್ಲಡ್ಕ ಶಾಲೆಗೆ ನೆರವು ನಿಲ್ಲಿಸಿದ್ದು ಕ್ರೌರ್ಯ. ಭಟ್ಟರು ದರೋಡೆಕೋರರಲ್ಲ: ಜನಾರ್ದನ ಪೂಜಾರಿ: http://bit.ly/2vP11Db
►►ಕಲ್ಲಡ್ಕ ಶಾಲೆಗೆ ಕೊಟ್ಟ ಹಣ ದುರುಪಯೋಗವಾಗಿದೆ. ವಸೂಲಿ ಮಾಡಲಾಗುವುದು: ರಮಾನಾಥ ರೈ: http://bit.ly/2fzuV7C
►►ಕೊಲ್ಲೂರು ನೆರವು ಸ್ಥಗಿತ: ಕಲ್ಲಡ್ಕ ಶಾಲಾ ಮಕ್ಕಳಿಂದ ಖಾಲಿ ತಟ್ಟೆ ಬಡಿದು ಪ್ರತಿಭಟನೆ: http://bit.ly/2uunaqv
►►ಕೊಲ್ಲೂರು ದೇವಳದ ನೆರವು ಸ್ಥಗಿತ: ಕಲ್ಲಡ್ಕ ಪ್ರಭಾಕರ ಭಟ್ ಹಾಕಿದ ಸವಾಲು ಏನು ಗೊತ್ತೆ?: http://bit.ly/2vmrZ2l
►►ಕಲ್ಲಡ್ಕ ಭಟ್ಟರ ಶಾಲೆಗೆ ಕೊಲ್ಲೂರಿನ ನೆರವು ಸ್ಥಗಿತ: ಸಂದಾಯವಾದ ಒಟ್ಟು ಮೊತ್ತವೆಷ್ಟು ಗೊತ್ತೆ? ಅಬ್ಬಬ್ಬ!: http://bit.ly/2ukYD71

Related Tags: Kalladka Prabhakar Bhat, Shri Rama Vidya Kendra, Kollur Temple Grant, Janardan Reddy, Bhikshandehi, Shobha Karandlaje
 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ