ಮಂಗಳೂರಲ್ಲಿ ಜೋಳಿಗೆ. ಉಡುಪಿಗಿಲ್ಲ ಏಳಿಗೆ. ಮೇಡಂ ಏಕೆ ಹೀಗೆ?
ತಾನು ಪ್ರತಿನಿಧಿಸುವ ಕ್ಷೇತ್ರದ ಜನರಿಗೆ ನೀಡಲು ಸಮಯವೇ ಇಲ್ಲದ ಶೋಭಾ ಕರಂದ್ಲಾಜೆ ಈಗ ಕಲ್ಲಡ್ಕ ಭಟ್ಟರ ಶಾಲೆಗಾಗಿ ಜೋಳಿಗೆ ಹಿಡಿದು ತಿರುಗಾಡುತ್ತಿದ್ದಾರೆ. ಶೋಭಾ ಅವರನ್ನು ನಂಬಿದ ಕ್ಷೇತ್ರದ ಮತದಾರನ ಜೊಳಿಗೆ ಮಾತ್ರ ಖಾಲಿ!

ಕರಾವಳಿ ಕರ್ನಾಟಕ ವರದಿ
ಉಡುಪಿ
: ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯರಾದ ಶೋಭಾ ಕರಂದ್ಲಾಜೆ ತಮ್ಮ ಕ್ಷೇತ್ರ ಬಿಟ್ಟು ರಾಜ್ಯದಾದ್ಯಂತ ಸುತ್ತಾಡುತ್ತಿರುವುದು ಒಂದೆಡೆ ಟೀಕೆಗೆ ಗುರಿಯಾಗುತ್ತಿದ್ದರೆ ಇನ್ನೊಂದೆಡೆ ಕಲ್ಲಡ್ಕ ಪ್ರಭಾಕರ ಭಟ್ಟರ ಶಾಲೆಗಾಗಿ ಮಂಗಳೂರಿನಲ್ಲಿ  ಜೋಳಿಗೆ ಹಿಡಿದು ಭಿಕ್ಷೆ ಬೇಡುತ್ತಿರುವುದು ಅಪಹಾಸ್ಯಕ್ಕೆ ಈಡಾಗಿದೆ.

ಕಲ್ಲಡ್ಕ ಪ್ರಭಾಕರ ಭಟ್ಟರ ಶಾಲೆಗಾಗಿ ಮಂಗಳೂರಿನಲ್ಲಿ ಜೋಳಿಗೆ ಹಾಕಿಕೊಂಡು ಅಕ್ಕಿ ಸಂಗ್ರಹ ಮಾಡುತ್ತಿರುವ ಶೋಭಾ ಕರಂದ್ಲಾಜೆಯವರ ಫೋಟೊ ವೈರಲ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಂಸದೆ ಶೋಭಾ ಕರಂದ್ಲಾಜೆಯನ್ನು ಕೆಲವರು ಟೀಕಿಸಿದ್ದರೆ ಇನ್ನು ಕೆಲವರು ತಮಾಷೆಯಾಗಿ ಪೋಸ್ಟ್ ಹಾಕುತ್ತಿದ್ದಾರೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ಸಂಸತ್ ಸದಸ್ಯರ ಪೈಕಿ ಅತ್ಯಂತ ಅಸಮರ್ಥ ಸಂಸದೆ ಎಂದು ಈಗಾಗಲೇ ಶೋಭಾರ ಬಗ್ಗೆ ಮತದಾರರು ಆಡಿಕೊಳ್ಳುತ್ತಿದ್ದಾರೆ. ಉಡುಪಿಯಲ್ಲಿ ಎಲ್ಲೋ ಅಪರೂಪಕ್ಕೆ ಒಮ್ಮೆ ಭಾರತೀಯ ಜನತಾ ಪಕ್ಷದ ಅಥವಾ ಆರೆಸ್ಸೆಸ್ ಸಂಘಟನೆಯ ಕಾರ್ಯಕ್ರಮಗಳಿದ್ದರೆ ಕಾಣಸಿಗುವ ಸಂಸದೆ ಕರಂದ್ಲಾಜೆ ಚಿಕ್ಕಮಗಳೂರು ಕಡೆ ತಲೆಹಾಕಿಯೂ ಮಲಗುತ್ತಿಲ್ಲ.

ತಮ್ಮ ಲೋಕಸಭಾ ಕ್ಷೇತ್ರದ ಯಾವುದೇ ಸಮಸ್ಯೆಗಳು ಅಥವಾ ಬೇಡಿಕೆಗಳ ಬಗ್ಗೆ ಶೋಭಾ ಕರಂದ್ಲಾಜೆ ತಲೆಕೆಡಿಸಿಕೊಂಡೇ ಇಲ್ಲ ಎಂಬಂತಹ ಮಾತುಗಳು ಕೇಳಿಬರುತ್ತಿದ್ದು ಸೂಕ್ಷ್ಮವಾಗಿ ಅವಲೋಕಿಸಿದರೆ ಈ ಮಾತಿನಲ್ಲಿ ಖಂಡಿತ ಸತ್ಯವಿದೆ ಎಂದು ಯಾರೂ ಒಪ್ಪಬಲ್ಲರು.

ರಾಜ್ಯದಾದ್ಯಂತ ಸುತ್ತುವ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಅವರ ಜೊತೆ ಅವರು ಹೋದಲ್ಲೆಲ್ಲ ಜೊತೆಯಾಗಿರುವ ಶೋಭಾ ಕರಂದ್ಲಾಜೆ ಉಡುಪಿಗೂ ಕೆಲವೊಮ್ಮೆ ಬರುವುದು ಯಡಿಯೂರಪ್ಪ ಅವರ ಜೊತೆಗೆ. ರಾಜ್ಯದ ಯಾವುದೇ ಭಾಗದಲ್ಲಿ ಆರೆಸ್ಸೆಸ್ ಕಾರ್ಯಕರ್ತರು ಅಥವಾ ಬಿಜೆಪಿ ಕಾರ್ಯಕರ್ತರಿಗೆ ಅನ್ಯ ಪಕ್ಷದ ಕಾರ್ಯಕರ್ತರಿಂದ ಹಲ್ಲೆ, ಹಿಂಸೆ ಆದಲ್ಲಿ ಭಾರೀ ಮಾನವೀಯ ಕಾಳಜಿ ತೋರಿ ಹೋರಾಟದ ಮಂಚೂಣಿಯಲ್ಲಿ ನಿಲ್ಲುವ ನಾಯಕಿ ಶೋಭಾ ಕರಂದ್ಲಾಜೆ ಉಡುಪಿಯ ಮತದಾರರ ಬಗ್ಗೆ ಮಾತ್ರ ಆ ಮಾನವೀಯ ಕಾಳಜಿ ತೋರುತ್ತಿಲ್ಲ.

ಆರೆಸ್ಸೆಸ್ ಅಥವಾ ಬಿಜೆಪಿ ಕಾರ್ಯಕರ್ತರ ಹಲ್ಲೆ, ಕೊಲೆಗಳಾದಾಗ ಮತ್ತು ಅಂತಹ ಪ್ರಕರಣಗಳಲ್ಲಿ ಮುಸ್ಲಿಮ್ ಸಂಘಟನೆಗಳು ಅಥವಾ ವ್ಯಕ್ತಿಗಳ ಪಾತ್ರವಿದೆ ಎಂದಾಗ ಭಾರಿ ಹುಮ್ಮಸ್ಸಿನಿಂದ ಹೋರಾಟ ನಡೆಸಿ ಭಾಷಣ ಬಿಗಿಯುವ ಸಂಸದೆ ಕರಂದ್ಲಾಜೆ ಕೆಲವೊಮ್ಮೆ ಹಿಂಸೆಗೆ ಪ್ರತಿ ಹಿಂಸೆ, ಬೆಂಕಿ ಹಚ್ಚುವುದು ಹೀಗೆ ಭಾರೀ ಆಕ್ರಮಣಕಾರಿ ಮಾತುಗಳನ್ನಾಡುತ್ತಾ ಸುದ್ದಿ ಮಾಡುವಲ್ಲಿ ಭಾರೀ ಪ್ರಸಿದ್ಧರು.

ಬೆಂಗಳೂರಿನಲ್ಲಿ ನಡೆದ ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಕೊಲೆ, ಮೈಸೂರಿನಲ್ಲಿ ನಡೆದ ಕೋಮು ಗಲಭೆಗಳು, ತೀರ್ಥಹಳ್ಳಿಯ ನಂದಿತಾ ಸಾವು, ಬೈಂದೂರಿನಲ್ಲಿ ನಡೆದ ಎರಡು ಹುಡುಗಿಯರ ಸಾವುಗಳು ಬಳಿಕ ಬಂಟ್ವಾಳದ ಶರತ್ ಮಡಿವಾಳ ಕೊಲೆ ಹೀಗೆ ಹಲವು ಪ್ರಕರಣಗಳಲ್ಲಿ ಶೋಭಾ ಕರಂದ್ಲಾಜೆ ಭಾರೀ ಹೋರಾಟ ಮಾಡಿ ಸುದ್ದಿಯಾದವರು.

 ಆದರೆ ತನ್ನದೇ ಕ್ಷೇತ್ರದ ತನ್ನದೇ ಪಕ್ಷದ ಕಾರ್ಯಕರ್ತ ಪ್ರವೀಣ್ ಪೂಜಾರಿಯನ್ನು ತನ್ನದೇ ಪಕ್ಷದ ಸಂಘಟನೆಯ ಕಾರ್ಯಕರ್ತರು ಗೋಸಾಗಾಟದ ನೆಪ ಹೇಳಿ ನಡುಬೀಡಿಯಲ್ಲಿ ದೊಣ್ಣೆಗಳಿಂದ ಹೊಡೆದು ಸಾಯಿಸಿದಾಗ ಶೋಭಾ ಕರಂದ್ಲಾಜೆ ಬಾಯಿಗೆ ಹೊಲಿಗೆ ಹಾಕಿಕೊಂಡವರಂತೆಕೂತಿದ್ದರು. ಅಕ್ಕಪಕ್ಕದ ಕ್ಷೇತ್ರಗಳು ಮಾತ್ರವಲ್ಲ ರಾಜ್ಯದಾದ್ಯಂತ ಅವರು ಯಡಿಯೂರಪ್ಪ ಅವರ ಜೊತೆ ಬಿಜೆಪಿ ಮತ್ತು ಆರೆಸ್ಸೆಸ್ ಸೇವೆಯಲ್ಲಿ ನಿರತರಾಗಿದ್ದಾರೆ.

ಈಗಂತೂ ಅವರು ಕಲ್ಲಡ್ಕ ಪ್ರಭಾಕರ ಭಟ್ಟರ ಯಜಮಾನಿಕೆಯ ಶಾಲೆಗಳಿಗೆ ಕೊಲ್ಲೂರು ದೇವಾಲಯದಿಂದ ಹರಿದುಹೋಗುತ್ತಿದ್ದ ಕೋಟ್ಯಂತರ ರೂಪಾಯಿಗಳ ನೆರವಿಗೆ ಸರ್ಕಾರ ಬ್ರೇಕ್ ಹಾಕಿದ ಬಳಿಕ ಕಲ್ಲಡ್ಕ ಭಟ್ಟರ ಕುರಿತು ಭಾರೀ ಚಿಂತಿತರಾಗಿದ್ದಾರೆ. ಒಂದೆಡೆ ಭಟ್ಟರ ಶಾಲೆಗೆ ದೇಣಿಗೆ ಸಂಗ್ರಹ ಆಗುತ್ತಿದ್ದರೆ ಇನ್ನೊಂದೆಡೆ ಶೋಭಾ ಕರಂದ್ಲಾಜೆ ಅವರ ನೇತೃತ್ವದಲ್ಲಿ ಮಂಗಳೂರು ಸುತ್ತಮುತ್ತ ‘ಮುಷ್ಟಿ ಅಕ್ಕಿ ಭಿಕ್ಷೆ’ ಎನ್ನುವ ಹೆಸರಿನಲ್ಲಿ ಜೋಳಿಗೆ ಹಾಕಿಕೊಂಡು ಭಿಕ್ಷಾಟನೆಗೆ ಇಳಿದಿದ್ದಾರೆ.

ಮನೆಮನೆಗೆ ಹೋಗಿ ಜೋಳಿಗೆಯಲ್ಲಿ ಅನ್ನ ಹಾಕಿ ಎಂದು ಬೇಡುತ್ತಾ ಆ ಮನೆಯ ಹೆಂಗಸರು ಶೋಭಾ ಕರಂದ್ಲಾಜೆ ಅವರು ಒಡ್ಡಿದ ಜೋಳಿಗೆಯಲ್ಲಿ ದೇವರ ಹುಂಡಿಗೆ ಹಣ ಹಾಕಿದ ರೀತಿಯಲ್ಲಿ ಅಷ್ಟಷ್ಟು ಅಕ್ಕಿಯನ್ನು ಶಾಸ್ತ್ರೋಕ್ತವೆಂಬಂತೆ ಲಯಬದ್ದವಾಗಿ ಹಾಕುವುದು ಮತ್ತು ಮಾಧ್ಯಮಗಳ ಮಂದಿ ಫೋಟೊ ತೆಗೆಯುವುದು ನಡೆಯುತ್ತಿದೆ.

ಹೇಗಿದ್ದರೂ ಶೋಭಾ ಕರಂದ್ಲಾಜೆಯವರನ್ನು ಪತ್ರಿಕೆ ಮತ್ತು ಟಿವಿಗಳಲ್ಲಿ ಮಾತ್ರ ನೋಡುವ ಉಡುಪಿ-ಚಿಕ್ಕಮಗಳೂರ ಕ್ಷೇತ್ರದ ಮತದಾರ ಶೋಭಾ ಕರಂದ್ಲಾಜೆ ಜೋಳಿಗೆ ಹಿಡಿದುಕೊಂಡು ಭಿಕ್ಷೆ ಬೇದುತ್ತಿರುವುದನ್ನು ನೋಡಿ ಅಚ್ಚರಿಗೊಂಡಿದ್ದಾನೆ, ಕಂಗಾಲಾಗಿದ್ದಾನೆ.

ನಾವು ನಮ್ಮ ಪ್ರತಿನಿಧಿಯಾಗಿ ದೆಹಲಿಗೆ ಹೋಗಿ ಕೇಂದ್ರ ಸರ್ಕಾರದ ಎದುರು ನಮ್ಮ ಬೇಡಿಕೆಗಳನ್ನು ಮಂಡಿಸಿ ಸಾಧ್ಯವಾದಷ್ಟನ್ನು ಕ್ಷೇತ್ರದ ಏಳಿಗೆಗಾಗಿ ಶ್ರಮಿಸುವಂತೆ ಆರಿಸಿ ಕಳುಹಿಸಿದ ಸಂಸದೆ ತಮಗೆ ಸಂಬಂಧವಿರದ ತಮ್ಮ ಕ್ಷೇತ್ರದಲ್ಲಿಯೂ ಇಲ್ಲದ ಖಾಸಗಿ ಶಾಲೆಯೊಂದಕ್ಕೆ ಸಹಾಯ ಮಾಡಲು ಈ ಪರಿಯಾಗಿ ಭಿಕ್ಷಾಂದೇಹಿ ಎನ್ನುವಷ್ಟರ ಮಟ್ಟಿಗೆ ಇಳಿದುಬಿಟ್ಟರಲ್ಲ ಎಂಬುದು ಉಡುಪಿ ಮತದಾರನ ಆತಂಕ.

ಚುನಾಯಿತ ಪ್ರತಿನಿಧಿಯೋರ್ವರು ತನ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಿ, ಜನರ ಬೇಡಿಕೆಗಳನ್ನು ಆಲಿಸಿ ಅದನ್ನು ಸರ್ಕಾರದ ಮುಂದಿಟ್ಟು ಯೋಜನೆ ಅನುದಾನಗಳನ್ನು ತರಬೇಕಾದವರು. ಅಂಥವರು ಖಾಸಗಿ ಶಿಕ್ಷಣ ಸಂಸ್ಥೆಯ ಗುಮಾಸ್ತೆಯಂತೆ ಆ ಶಾಲೆಯ ಪರವಾಗಿ ಭಿಕ್ಷೆ ಎತ್ತುತ್ತಿದ್ದಾರೆ ಎನ್ನುವುದು ಉಡುಪಿಯ ಮತದಾರರ ಟೀಕೆಗೆ ಒಳಗಾಗಿದೆ.

ಅಷ್ಟಕ್ಕೂ ಉಡುಪಿ-ಚಿಕ್ಕಮಗಳೂರು ಸಂಸದರು ಉದ್ಧಾರ ಮಾಡುವ ಮನಸ್ಸಿದ್ದರೆ ಅದಕ್ಕೆ ಅರ್ಹವಾದ ಬೇಕಾದಷ್ಟು ಶಾಲೆಗಳು ಉಡುಪಿ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೇಕಾದಷ್ಟು ಇವೆ ಎಂಬುದು ಹಲವರ ಅಭಿಮತ.

ಕಲ್ಲಡ್ಕ ಶಾಲೆಗಳಿಗೆ ನೆರವು ನೀಡಿರುವುದನ್ನು ನಿಲ್ಲಿಸಿರುವುದು ಮಕ್ಕಳ ಹಿತದ ಚಿಂತೆಗಿಂತ  ಹೆಚ್ಚು ರಾಜಕೀಯಕ್ಕೆ ಬಳಕೆಯಾಗುತ್ತಿರುವುದು ಕಣ್ಣಿಗೆ ರಾಚುತ್ತಿರುವಾಗ ಉಡುಪಿ ಸಂಸದರ ಭಿಕ್ಷಾಟನೆ ಇಲ್ಲಿನ ಮತದಾರರಿಗೆ ಒಂದು ಪ್ರಹಸನದಂತೆ ಕಂಡುಬರುತ್ತಿದೆ.

ಜಯಪ್ರಕಾಶ ಹೆಗ್ಡೆ ಉಡುಪಿ-ಚಿಕ್ಕಮಗಳೂರು ಸಂಸದರಾಗಿದ್ದಾಗ ದಿನಕ್ಕೊಂದು ಪತ್ರಿಕಾಗೋಷ್ಟಿ ಕರೆದು ಸಮಯ್ಸೆಗಳ ಸರಮಾಲೆಯನ್ನೇ ಮಾಧ್ಯಮಗಳ ಮುಂದೆ ಇಟ್ಟು ಹೆಗ್ಡೆಯವರನ್ನು ಟೀಕಿಸುತ್ತಿದ್ದ ಶೋಭಾ ಕರಂದ್ಲಾಜೆ ಕೊನೆಗೆ ತನಗೇ ಆ ಕ್ಷೇತ್ರವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಾಗ ಆ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸಿದ ಉದಾಹರಣೆಗಳೇ ಇಲ್ಲ. ಆ ಕುರಿತು ಮತ್ತೆ ಮಾತನಾಡಿದ್ದೂ ಇಲ್ಲ. ಈಗ ಜಯಪ್ರಕಾಶ ಹೆಗ್ಡೆಯವರೇ ಶೋಭಾ ಕರಂದ್ಲಾಜೆ ಅವರ ಪಕ್ಷದಲ್ಲಿರುವುದು ಅವರನ್ನು ಟೀಕಿಸುವವರೂ ಯಾರೂ ಇಲ್ಲ ಎಂಬಂತಾಗಿದೆ.

ಹೈಕಮಾಂಡ್ಗೆ ನಿಕಟವಾಗಿರುವ ಪಕ್ಷಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಅವರ ಜೊತೆ ಸದಾ ಅತ್ಯಂತ ನಿಕಟವಾಗಿದ್ದು ಅವರ ಜೊತೆ ಓಡಾಡುವ ಶೋಭಾ ಕರಂದ್ಲಾಜೆ ತಮ್ಮ ಪ್ರಭಾವ ಬಳಸಿ ತಮ್ಮ ಕ್ಷೇತ್ರಕ್ಕೆ ಹೊಸತೇನೋ ಮಾಡುವುದು ಒತ್ತಟ್ಟಿಗಿರಲಿ, ಇದ್ದದ್ದನ್ನು ಉಳಿಸಿಕೊಂಡು ಹೋಗಲೂ ಸಹ ಯತ್ನಿಸುತ್ತಿಲ್ಲ. ಮಾತ್ರವಲ್ಲ ಕ್ಷೇತ್ರದಲ್ಲಿ ಆಗಬೇಕಾದ ಅತ್ಯಂತ ತುರ್ತಿನ ಸಣ್ಣ ಪುಟ್ಟ ಕೆಲಸಗಳ ಬಗ್ಗೆ ಕೇಳುವ ಸಮಯ-ಸಹನೆ ಎರಡೂ ಶೋಭಾ ಕರಂದ್ಲಾಜೆ ಬಳಿ ಇಲ್ಲ ಎನ್ನುವುದು ಇಲ್ಲಿನ ಜನರ ಅಂಬೋಣ.


ಒಟ್ಟಿನಲ್ಲಿ ಮಂಗಳೂರಿನಲ್ಲಿ ಜೋಳಿಗೆ, ಉಡುಪಿಗಿಲ್ಲ ಏಳಿಗೆ, ರಾಜ್ಯಕ್ಕೆಲ್ಲ ಯಡಿಯೂರಪ್ಪ ಜೊತೆ ಹೋಳಿಗೆ ಎಂಬಂತಾಗಿದೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರ ಸ್ಥಿತಿ. ಆಯ್ಕೆ ಮಾಡಿ ಕಳಿಸಿದ ಮತದಾರನ ಜೋಳಿಗೆಯಲ್ಲಿ ಏನಾದರೂ ಹಾಕುವಿರಾ ಶೋಭಾ ಕರಂದ್ಲಾಜೆಯವರೆ ಎಂದು ಕೇಳುತ್ತಿದ್ದಾರೆ ಮತದಾರರು.

ಸಂಪಾದಕರು ಬರೆದ ಹಿಂದಿನ ಲೇಖನವೊಂದನ್ನು ಮತ್ತೆ ಇಲ್ಲಿ ಪ್ರಕಟಿಸಲಾಗಿದೆ.  

ಚಟುವಟಿಕೆ ಇಲ್ಲದ ಸ್ತಬ್ದ ಸಂಸದೆ ಕರಂದ್ಲಾಜೆ

ಶಶಿಧರ ಹೆಮ್ಮಾಡಿ
ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ವಿನಯ ಕುಮಾರ ಸೊರಕೆ ಲೋಕಸಭಾ ಸದಸ್ಯರಾಗಿದ್ದಾಗ ನಮಗೊಂದು ಸಂಸದರು ಇದ್ದಾರೆ ಎಂದು ಜನರಿಗೆ ಗೊತ್ತಾಗಿತ್ತು. ಭಾರೀ ಸಾಧನೆ ಮಾಡಿದ್ದಾರೆ ಎಂದು ಹೇಳಲಾಗದಿದ್ದರೂ ಇಡೀ ಕ್ಷೇತ್ರದಾದ್ಯಂತ ಪಾದರಸದಂತೆ ಓಡಾಡಿಕೊಂಡಿದ್ದರು. ಜನರಿಗೆ ಬೇಕಾದಾಗ ಸಿಗುವಂತಿದ್ದರು. ಆಗಾಗ ಅವರ ಮುಖ ನೋಡುವ ಅವಕಾಶವಾದರೂ ಇತ್ತು. ತುರ್ತು ಸಂದರ್ಭಗಳಲ್ಲಿ ತಕ್ಷಣ ಸ್ಪಂದಿಸುತ್ತಿದ್ದ ಸೊರಕೆ ಗಲಭೆ, ಗಲಾಟೆಗಳು, ಅಶಾಂತಿಯಂತಹ ಸನ್ನಿವೇಶಗಳಲ್ಲಿ ಎಷ್ಟು ರಾತ್ರಿಯಾದರೂ ಬರುತ್ತಿದ್ದರು. ಅಧಿಕಾರಿಗಳಿಂದ ಕೆಲಸ ಮಾಡಿಸುವುದೂ ಅವರಿಗೆ ಗೊತ್ತಿತ್ತು. ಪುತ್ತೂರಿನಿಂದ ಸೊರಕೆ ಉಡುಪಿಗೆ ಬಂದು ಇಲ್ಲಿಯೇ ಮನೆ ಮಾಡಿ ಹಗಲು ರಾತ್ರಿ ಜನರ ಜೊತೆಗೆ ಇರುತ್ತಿದ್ದರು.

ಚುನಾವಣೆಯ ಬಳಿಕ ಯಾರೂ ನಿರೀಕ್ಷಿಸದಂತೆ ಸೊರಕೆ ಸೋತು ಮನೋರಮಾ ಮಧ್ವರಾಜ್ ಬಿಜೆಪಿಯಿಂದ ಸಂಸದರಾಗಿ ಆಯ್ಕೆಯಾದರು. ಇವರು ಜನರಿಗೆ ಬಿಡಿ, ಆಗ ಪಕ್ಷದ ನಾಯಕರಾಗಿದ್ದ ಹಿರಿಯ ಮತ್ಸದ್ದಿ ಎ.ಜಿ.ಕೊಡ್ಗಿಯಂತಹ ಜನರ ಕೈಗೇ ಸಿಗುತ್ತಿರಲಿಲ್ಲ. ಇನ್ನು ಕಾರ್ಯಕರ್ತರ ಬಳಿಯೂ ಸುಳಿಯುತ್ತಿರಲಿಲ್ಲ.

ಕ್ಷೇತ್ರದಲ್ಲಿ ಓಡಾಡಿದ್ದು, ಕೆಲಸ ಮಾಡಿದ್ದು, ಜನರಿಗೆ ಸ್ಪಂದಿಸಿದ್ದು ಏನೂ ಇಲ್ಲ. 'ಮೇಡಂ ಹತ್ರ ಇಷ್ಟು ಹೊತ್ತಿಗೆ ಹೋಗಬೇಡಿ, ಅವರು ಸೀರಿಯಲ್ ನೋಡುವ ಸಮಯ ಅದು' ಎಂದು ಸ್ವತಃ ಕೊಡ್ಗಿಯವರೇ ಸಲಹೆ ಮಾಡುವುದನ್ನು ನಾನು ಕೇಳಿದ್ದೆ.

ಬಳಿಕ ಬಂದವರು ಸದಾನಂದ ಗೌಡರು. ಮನೋರಮಾಗಿಂತ ಗೌಡರು ಪರವಾಗಿಲ್ಲ ಅನಿಸಿತ್ತು. ಜನಸಾಮಾನ್ಯರ ದರ್ಶನಕ್ಕೆ ಸಿಗುತ್ತಿದ್ದ್ದು ಕಡಿಮೆಯಾದರೂ ಸಭೆ ಸಮಾರಂಭಗಳಲ್ಲಿ ಕಾಣಸಿಗುತ್ತಿದ್ದರು. ಎಂದಿನಂತೆ ನಗುತ್ತಿದ್ದರು. ಕಾರ್ಯಕರ್ತರು, ಬಿಜೆಪಿ ನಾಯಕರ ಜೊತೆ ಇವರ ಸಂಪರ್ಕಕ್ಕೆ ಕೊರತೆ ಇರಲಿಲ್ಲ.

ಬಳಿಕ ಬಂದವರು ಜಯಪ್ರಕಾಶ ಹೆಗ್ಡೆ. ಎರಡು ವರ್ಷಕ್ಕಿಂತ ಕಡಿಮೆ ಅವಧಿಗೆ ಸಂಸದರಾಗಿದ್ದ ಹೆಗ್ಡೆ ಮಾಡಿದ ಕೆಲಸ ಇಪ್ಪತ್ತು ವರ್ಷದಲ್ಲಿ ಯಾರೂ ಮಾಡಿರಲಿಕ್ಕಿಲ್ಲ. ಸದಾ ಜನ ಸಂಪರ್ಕ, ಸಮಸ್ಯೆಗಳಿಗೆ ಸ್ಪಂದನೆ, ರೈಲು, ಹೆದ್ದಾರಿ, ಆಸ್ಪತ್ರೆ, ಸೇತುವೆ, ಹಲವಾರುಯೋಜನೆಗಳನ್ನು ತರುವುದು ಹೀಗೆ ಎಲ್ಲದರಲ್ಲೂ ಸಂಸದ ಹೆಗ್ಡೆ ನಂಬರ್ ಒನ್.

ಸಂಸತ್ತಿನಲ್ಲಿ ಮಾತನಾಡುವ ಸಂಸದ ನಮಗೆ ಸಿಕ್ಕಿದ್ದರು. ಸಾಮಾನ್ಯ ನಾಗರಿಕನ ಫೋನ್ ಕರೆಗೂ ಹೆಗ್ಡೆ ಗೌರವ ನೀಡುತ್ತಿದ್ದರು. ತರಿಕೆರೆಯಿಂದ ಕುಂದಾಪುರ ತನಕ ವ್ಯಾಪಿಸಿರುವ ಕ್ಷೇತ್ರದಲ್ಲಿ ಆ ತುದಿಯಿಂದ ಈ ತುದಿಯ ತನಕ ಹೆಗ್ಡೆ ಜನಪ್ರಿಯರಾಗಿದ್ದರು. ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ಚುನಾವಣೆಯಲ್ಲಿ ಮೋದಿ ಅಲೆಯಲ್ಲಿ ಹೆಗ್ಡೆ ಕೊಚ್ಚಿ ಹೋದರು.

ಈಗ ನೋಡಿ ನಮ್ಮ ಅವಸ್ಥೆ. ಉಡುಪಿಯಲ್ಲಿ ಶೋಭಾ ಕರಂದ್ಲಾಜೆ ನಮ್ಮ ಸಂಸದರು. ಇವರು ಉಡುಪಿಯಲ್ಲಿ ಇರುವುದೇ ಅಪರೂಪ ಎಂದು ನಾನು ಹೇಳುವುದನ್ನು ನೀವು ಸುಳ್ಳು ಎನ್ನುವುದಾದರೆ ಅವರ ಸೆಲ್ ಫೋನ್ ಲೊಕೇಶನ್ ವಿವರ ಸಿಕ್ಕಿದರೆ ನೋಡಿ, ಅವರು ಉಡುಪಿಯಲ್ಲಿ ಎಷ್ಟು ಸಮಯ ಇದ್ದರು ಎಂಬುದು ನಿಮಗೆ ಗೊತ್ತಾಗಬಹುದು. ಜನಸಾಮಾನ್ಯರಿಗೆ ಶೋಭಾ ಕರಂದ್ಲಾಜೆಯವರನ್ನು ಕಾಣುವ ಅವಕಾಶವೂ ಇಲ್ಲ.

ಸಾರ್ವಜನಿಕರ ಅಹವಾಲಿಗೆ, ಕಾರ್ಯಕರ್ತರ ಭೇಟಿಗೆ ಇವರು ಸಿಗುವುದೇ ಇಲ್ಲ. ಹೊಸ ಹೆದ್ದಾರಿಯ ಸಮಸ್ಯೆ, ದಿನವೂ ಪಾದಚಾರಿಗಳು ಸಾಯುತ್ತಿರುವುದು, ಫ್ಲೈ ಓವರ್-ಪಾದಚಾರಿ ಮೇಲ್ಸೆತುವೆ ಸಮಸ್ಯೆಗಳು, ಜಿಲ್ಲಾಸ್ಪತ್ರೆಯ ಖಾಸಗೀಕರಣ, ರೈಲು ದುರವಸ್ಥೆ, ಪಶ್ಚಿಮ ಘಟ್ಟದ ತಪ್ಪಲಿನ ಗ್ರಾಮಗಳ ಸಮಸ್ಯೆಗಳು, ಮೀನುಗಾರರ ಸಮಸ್ಯೆಗಳು ಹೀಗೆ ಕ್ಷೇತ್ರದ ನೂರಾರು ರಗಳೆಗಳಿಗೆ ಶೋಭಾ ಬಳಿ ಸಮಯವೇ ಇಲ್ಲ. ಹೊಸ ಯೋಜನೆ, ಉಡುಪಿಗೆ ಬೇಕಾದ ಸೌಲಭ್ಯ, ಕೇಂದ್ರ ಸರ್ಕಾರದಿಂದ ತರಬಹುದಾದ ಯೋಜನೆ-ಅನುದಾನ ಯಾವುದರ ಬಗ್ಗೂ ಶೋಭಾ ಮೇಡಂಗೆ ತಿಳುವಳಿಕೆಯೂ ಇದ್ದಂತಿಲ್ಲ.

ಶೋಭಾ ಮೇಡಂ ಉಡುಪಿಗೆ ಬರಬೇಕೆಂದರೆ ಅಥವಾ ರಾಜ್ಯದಲ್ಲಿ ಎಲ್ಲಾದರೂ ಕಾಣಸಿಗಬೇಕೆಂದರೆ ಯಾರಾದರೂ ಮುಸ್ಲಿಮರು ಆರೋಪಿಯಾಗಿರುವ ಕೇಸ್ ಅಥವಾ ಮುಸ್ಲಿಮರ ಮೇಲೆ ಆರೋಪ ಹೊರಿಸಲಾಗಿರುವ (ಅದು ಸುಳ್ಳೇ ಆಗಿರಲಿ) ಕೇಸ್ ಒಂದು ಬಿಜೆಪಿ ಕೈಗೆ ಸಿಗಬೇಕು ಅಥವಾ ಕಾಂಗ್ರೆಸ್ ಅನ್ನು ದೂಷಿಸಿ ಯಾರಾದರೂ ಆತ್ಮಹತ್ಯೆ ಮಾಡಿಕೊಳ್ಳಬೇಕು ಅಥವಾ ರಾಜೀನಾಮೆ ಕೊಡಬೇಕು. ಆವಾಗ ಮೇಡಂ ಬಂದು ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯುವ ಕೆಲಸ ಮಾಡುತ್ತಾರೆ.

ಇನ್ನು ಏನಾದರೂ ಶೋಭಾ ತಮ್ಮ ಕ್ಷೇತ್ರಕ್ಕೆ ಬರಬೇಕೆಂದಿದ್ದರೆ ಯಡಿಯೂರಪ್ಪನವರು ಆಗ ಅಲ್ಲಿ ಬಂದಿರಬೆಕು. ಆಗ ಅವರೊಂದಿಗೆ ಶೋಭಾ ಬಂದೇ ಬರುತ್ತಾರೆ. ಕೆಲವೊಮ್ಮೆ ಯಡಿಯೂರಪ್ಪ ತಮ್ಮ ಶಿವಮೊಗ್ಗ ಕ್ಷೇತ್ರಕ್ಕೆ ಹೋಗಲಾಗದಿದ್ದಾಗ ಅವರ ಪರವಾಗಿ ಶೋಭಾ ಅಲ್ಲಿಗೆ ಹೋಗುತ್ತಾರೆ. ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಒಂದು ರೀತಿಯಲ್ಲಿ ಉಡುಪಿ-ಚಿಕ್ಕಮಗಳೂರು ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಜಂಟಿ ಸಂಸದರಂತೆ ಇದ್ದಾರೆ.

ಜನರ ನಡುವೆ ದ್ವೇಷ ಹಬ್ಬಿಸುವ, ಸಮಾಜದ ಶಾಂತಿಗೆ ಭಂಗ ತರುವ ಭಾವನಾತ್ಮಕ ರಾಜಕೀಯಕ್ಕೆ ಮಾತ್ರ ಸಮಯ ಮೀಸಲಿಡುವುದು ಬಿಟ್ಟು ಜನಪರ ಕೆಲಸಗಳಿಗೆ ಸಂಸದರು ಹೆಚ್ಚು ಆದ್ಯತೆ ನೀಡಬೇಕಾಗಿದೆ. ಕಳೆದೆರಡು ವರ್ಷಗಳಲ್ಲಿ ಸಂಸದೆ ಶೋಭಾ ಸಾಧನೆ ಶೂನ್ಯ. ಕ್ಷೇತ್ರಕ್ಕೆ ಅವರಿಂದ ಆದ ಅನುಕೂಲ ನಗಣ್ಯ. ಮನೋರಮಾ ಮಧ್ವರಾಜ್ ಕನಿಷ್ಟ ಪಕ್ಷ ಕ್ಷೇತ್ರದಲ್ಲಾದರೂ ಇರುತ್ತಿದ್ದರು, ಆದರೆ ಶೋಭಾ ಕರಂದ್ಲಾಜೆಯವರು ಉಡುಪಿಯಲ್ಲೂ ಇರುವುದಿಲ್ಲ.

ವಿನಯ ಕುಮಾರ ಸೊರಕೆ, ಜಯಪ್ರಕಾಶ ಹೆಗ್ಡೆಯಂತಹ ಭಾರೀ ಚಟುವಟಿಕೆಯ, ಸದಾ ಉಲ್ಲಾಸದಿಂದ ಕೆಲಸ ಮಾಡುವ ಸಂಸದರನ್ನು ಕಂಡ ಈ ಕ್ಷೇತ್ರದ ಜನತೆ ಶೋಭಾ ಕರಂದ್ಲಾಜೆಯವರಂತಹ ಚಲನೆಯೆ ಇಲ್ಲದ ಸಂಸದರ ಕುರಿತು ರೋಸಿ ಹೋಗುವ ಮುನ್ನ ಬಿಜೆಪಿ ಮತ್ತು ಸಂಸದೆ ಇಬ್ಬರೂ ಎಚ್ಚೆತ್ತುಕೊಳ್ಳಬೇಕು.

ಮೋದಿ ಅಲೆಯಲ್ಲಿ ಗೆದ್ದು ಬಂದರು ನಿಜ, ಆದರೆ ತಮ್ಮ ಕ್ಷೇತ್ರ ನಿರ್ಲಕ್ಷ್ಯದ ಅಲೆಯಲ್ಲಿ ಕೊಚ್ಚಿಹೋಗದಂತೆ ನೋಡಿಕೊಳ್ಳಬೆಕಲ್ಲವೆ ಮೇಡಂ?
ಶಶಿಧರ ಹೆಮ್ಮಾಡಿ

ಇದನ್ನೂ ಓದಿ:
►►ಶೋಭಾ ಮಡಿಕೇರಿ ಆಸ್ತಿಯ ಒಂದಂಶ ಕೊಟ್ಟರೆ ಮಕ್ಕಳಿಗೆ ಜೀವನ ಪರ್ಯಂತ ಊಟ: ಸಚಿವ ರೈ
►►'ಮುಷ್ಠಿ ಅಕ್ಕಿ ಭಿಕ್ಷೆ ಅಭಿಯಾನ’ಕ್ಕೆ ಶೋಭಾ ಚಾಲನೆ
http://bit.ly/2fOf2dF
►►ಕಲ್ಲಡ್ಕ ಶಾಲೆಗೆ ನೆರವು ಸ್ಥಗಿತ: ಆನ್ಲೈನ್ನಲ್ಲಿ ಶುರುವಾಗಿದೆ 'ಭಿಕ್ಷಾಂ ದೇಹಿ ಅಭಿಯಾನ": http://bit.ly/2vCBU5C
►►ಬಿಸಿಯೂಟ ಬೇಡವೆಂದು ಬರೆದುಕೊಟ್ಟಿದ್ದ ಭಟ್ಟರು. ಈಗಲೂ ಅರ್ಜಿ ಹಾಕಲಿ: ರಮಾನಾಥ ರೈ: http://bit.ly/2uGdvcx
►►ಕಲ್ಲಡ್ಕ ಶಾಲೆಗೆ ನೆರವು ನಿಲ್ಲಿಸಿದ್ದು ಕ್ರೌರ್ಯ. ಭಟ್ಟರು ದರೋಡೆಕೋರರಲ್ಲ: ಜನಾರ್ದನ ಪೂಜಾರಿ: http://bit.ly/2vP11Db
►►ಕಲ್ಲಡ್ಕ ಶಾಲೆಗೆ ಕೊಟ್ಟ ಹಣ ದುರುಪಯೋಗವಾಗಿದೆ. ವಸೂಲಿ ಮಾಡಲಾಗುವುದು: ರಮಾನಾಥ ರೈ: http://bit.ly/2fzuV7C
►►ಕೊಲ್ಲೂರು ನೆರವು ಸ್ಥಗಿತ: ಕಲ್ಲಡ್ಕ ಶಾಲಾ ಮಕ್ಕಳಿಂದ ಖಾಲಿ ತಟ್ಟೆ ಬಡಿದು ಪ್ರತಿಭಟನೆ: http://bit.ly/2uunaqv
►►ಕೊಲ್ಲೂರು ದೇವಳದ ನೆರವು ಸ್ಥಗಿತ: ಕಲ್ಲಡ್ಕ ಪ್ರಭಾಕರ ಭಟ್ ಹಾಕಿದ ಸವಾಲು ಏನು ಗೊತ್ತೆ?: http://bit.ly/2vmrZ2l
►►ಕಲ್ಲಡ್ಕ ಭಟ್ಟರ ಶಾಲೆಗೆ ಕೊಲ್ಲೂರಿನ ನೆರವು ಸ್ಥಗಿತ: ಸಂದಾಯವಾದ ಒಟ್ಟು ಮೊತ್ತವೆಷ್ಟು ಗೊತ್ತೆ? ಅಬ್ಬಬ್ಬ!: http://bit.ly/2ukYD71

Related Tags: Shobha Karandlaje, Bhikshandehi, Kalladka School, Prabhakara Bhat, Udupi MP, RSS Leader, Yadiyurappa
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ