ಇದ್ದಕ್ಕಿದ್ದಂತೆ ಹಸಿರಾಗಿದೆ ಕಡಲ ನೀರು. ಜನರು ಕಂಗಾಲು

ರವಿತೇಜ ಕಾರವಾರ/ಕರಾವಳಿ ಕರ್ನಾಟಕ ವರದಿ
ಕಾರವಾರ:
ಇಲ್ಲಿನ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾದ ರವೀಂದ್ರನಾಥ ಟಾಗೋರ ಕಡಲತೀರದಲ್ಲಿ ಅರಬ್ಬೀ ಸಮುದ್ರದ ನೀರು ಗುರುವಾರ ಇದ್ದಕ್ಕಿದ್ದಂತೆ ಹಸಿರು ಬಣ್ಣಕ್ಕೆ ತಿರುಗಿದ್ದರಿಂದ ಸ್ಥಳೀಯರಲ್ಲಿ ಕೆಲಕಾಲ ಆಶ್ಚರ್ಯದ ಜೊತೆಗೆ ಆತಂಕ ಸೃಷ್ಠಿಯಾಗಿತ್ತು.

ಸಾಮಾನ್ಯವಾಗಿ ನೀಲಿ ಬಣ್ಣದಲ್ಲಿ ಕಂಡುಬರುತ್ತಿದ್ದ ಕಡಲತೀರವು ದಿನ ಬೆಳಗಾಗುವುದರೊಳಗೆ ಹಸಿರು ಬಣ್ಣಕ್ಕೆ ತಿರುಗಿತ್ತು.

ಬೆಳಗ್ಗೆ ಮೀನುಗಾರಿಕೆಗೆ ತೆರಳಿದ್ದ ಸ್ಥಳೀಯ ಮೀನುಗಾರರು ಹಾಗೂ ಕಡಲತೀರದಲ್ಲಿ ವಾಯುವಿಹಾರಕ್ಕೆ ತೆರಳಿದವರು ಕಡಲಿನ ಅಲೆಗಳು ಹಸಿರಾಗಿ ಬರುತಿರುವುದನ್ನು ಗಮನಿಸಿದ್ದರು. ತಕ್ಷಣ ಜಿಲ್ಲಾಡಳಿತ ಹಾಗೂ ಕಡಲ ಜೀವಶಾಸ್ತ್ರದ ವಿಜ್ಞಾನಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದರು.

ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಕವಿವಿ ಸ್ನಾತಕೋತ್ತರ ಕೇಂದ್ರದ ಕಡಲ ಜೀವಶಾಸ್ತ್ರ ವಿಭಾಗದ ವಿಜ್ಞಾನಿಗಳು ಹಾಗೂ ವಿದ್ಯಾರ್ಥಿಗಳು ನೀರಿನ ಮಾದರಿ ಸಂಗ್ರಹಿಸಿದರು. ಅಲ್ಲದೆ ಸಮುದ್ರದಲ್ಲಿ ಸಾಂಪ್ರದಾಯಿಕ ದೋಣಿಗಳ ಮೂಲಕ ಕೆಲ ದೂರದವರೆಗೆ ತೆರಳಿ ಪರಿಶೀಲನೆ ನಡೆಸಿದರು.

ಕಾರಣವೇನು?
ಮಳೆಗಾಲದಲ್ಲಿ ನದಿಗಳ ಮೂಲಕ ಸಮುದ್ರ ಸೇರುವ ಲವಣಾಂಶವು ಸಮುದ್ರಲ್ಲಿ ಶೇಖರಣೆಗೊಂಡು ಅಲ್ಲಿ ಪಾಚಿ ಬೆಳೆಯುತ್ತದೆ. ಇದು ಸಮುದ್ರ ಜೀವಿಗಳಿಗೆ ಆಹಾರ ಕೂಡ ಹೌದು. ಈ ಸಂದರ್ಭದಲ್ಲಿ ಸೂರ್ಯನ ಕಿರಣಗಳು ಮೇಲ್ಬಾಗದಲ್ಲಿರುವ ಪಾಚಿಗಳ ಮೇಲೆ ಬಿದ್ದಾಗ ಹೆರಳವಾಗಿ ಬೆಳೆಯುತ್ತದೆ.

ಇದು ಕಡಲನಲ್ಲಿ ಅಲೆಗಳ ಅಬ್ಬರಕ್ಕೆ ಪಾಚಿಗಳು ಮಿಶ್ರಗೊಂಡು ಹಸಿರಾಗುತ್ತದೆ. ಇದರಿಂದ ಸ್ವಲ್ಪ ವಾಸನೆಯು ಬರುತ್ತದೆ. ಆದರೆ ಇದರಿಂದ ಮೀನುಗಾರರಿಗಾಲಿ, ಕಡಲ ಜೀವಿಗಳಿಗಾಗಲಿ ಯಾವುದೇ ತೊಂದರೆಯಿಲ್ಲ. ಒಂದೆರಡು ದಿನದವರೆಗೆ ಹೀಗೆ ನೀರು ಹಸಿರಾಗಿರುತ್ತದೆ. ಬಳಿಕ ಯತಾಸ್ಥಿತಿಗೆ ಬರುತ್ತದೆ ಎಂದು ಕವಿವಿ ಸ್ನಾತಕೋತ್ತರ ಕೇಂದ್ರದ ಕಡಲ ಜೀವಶಾಸ್ತ್ರ ವಿಭಾಗದ ಅಧ್ಯಕ್ಷ ಡಾ.ಜಗನ್ನಾಥ್ ಎನ್. ರಾಥೋಡ್ ಮಾಹಿತಿ ನೀಡಿದರು.
ಶುಕ್ರವಾರದಂದು ಸಮುದ್ರದ ನೀರು ತಿಳಿಗೆಂಪು ಬಣ್ಣಕ್ಕೆ ಪರಿವರ್ತನೆ ಹೊಂದಿದೆ. ನಗರದ ಸೇಂಟ್ ಮೈಕಲ್ ಕಾನ್ವೆಂಟ್, ಬಾಲ ಮಂದಿರ ಪ್ರೌಢಶಾಲೆ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು ನೀರಿನ ಮಾದರಿಯನ್ನು ಸಂಗ್ರಹಿಸಿ ಪ್ರಾಯೋಗಿಕ ಪರೀಕ್ಷೆ ನಡೆಸಿದರು.

ಶಿಕ್ಷಕರು ಹಾಗೂ ಉಪನ್ಯಾಸಕರು ವಿದ್ಯಾರ್ಥಿಗಳಿಗಾಗಿ ಕಡಲತೀರದಲ್ಲಿ ಪ್ರಾತ್ಯಕ್ಷಿಕೆ ನಡೆಸಿ, ಇದು ನೈಸರ್ಗಿಕ ಕ್ರಿಯೆ ಆಗಿದ್ದು ಯಾವುದೇ ಅಪಾಯ ಇಲ್ಲ ಎಂಬುದನ್ನು ವಿವರಿಸಿದರು.

ಕಡಲ ಜೀವವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಶಿವಕುಮಾರ್ ಹರಗಿ ಈ ಬಗ್ಗೆ ಮಾಹಿತಿ ನೀಡಿ ಮಳೆ ಹಾಗೂ ಕೊಳಚೆ ನೀರಿನ ಮೂಲಕ ಖನಿಜಾಂಶ ಹೇರಳವಾಗಿ ಕಡಲಿಗೆ ಸೇರುತ್ತದೆ. ಸೂರ್ಯನ ಕಿರಣದಿಂದ ದ್ಯುತಿ ಸಂಶ್ಲೇಷಣೆ ಕ್ರಿಯೆ ನಡೆದ ಕಾರಣ ಅಧಿಕವಾಗಿ ಪಾಚಿ ಬೆಳೆದಿದೆ. ಈ ಕಾರಣದಿಂದಾಗಿ ಗುರುವಾರ ನೀರು ಹಸಿರು ಬಣ್ಣದಲ್ಲಿ ಕಾಣುತ್ತಿತ್ತು.

ರಾತ್ರಿಯ ವೇಳೆ ಗಮನಿಸಿದಾಗ ಅದು ಮಿಂಚು ಹುಳುವಿನಂತೆ ಬೆಳಕು ಸೂಸುತ್ತಿತ್ತು. ಶುಕ್ರವಾರ ಮೋಡಗಳು ಹೆಚ್ಚಾಗಿ ಇರುವುದರಿಂದ ಸೂರ್ಯನ ಕಿರಣಗಳನ್ನು ಪಡೆಯಲು ಪಾಚಿಗಳಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವುಗಳಿಗೆ ದ್ಯುತಿ ಸಂಶ್ಲೇಷಣಾ ಕ್ರಿಯೆ ನಡೆಸಲು ಸಾಧ್ಯವಾಗದೇ, ಅವು ಮುಕ್ಕಾಲು ಭಾಗ ನಾಶವಾಗಿದೆ. ಹೀಗಾಗಿ ನೀರು ತಿಳುಗೆಂಪು ಬಣ್ಣವಾಗಿ ಕಾಣುತ್ತಿದೆ.

ಇನ್ನು ಕೆಲವೇ ದಿನಗಳಲ್ಲಿ ಅದು ಪೂರ್ತಿ ನಾಶವಾಗಿ, ಸಮುದ್ರ ಮೂಲ ಸ್ಥಿತಿಗೆ ಮರಳಲಿದೆ ಎಂದು ತಿಳಿಸಿದರು.

Related Tags: Karwar Beach, Tagore Beach, Sea Water Turns Green, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ