'ಜನ ಗಣ ಮನ' ಮಾಡದ ಮದ್ರಸಾಗಳ ವಿರುದ್ಧ ಕ್ರಮಕ್ಕೆ ಆದೇಶ

ಕರಾವಳಿ ಕರ್ನಾಟಕ ವರದಿ
ಲಕ್ನೋ:
ರಾಜ್ಯದ ಎಲ್ಲಾ ಮದರಸಾಗಳಲ್ಲಿ ಆಗಸ್ಟ್‌ 15ರಂದು ಸ್ವಾತಂತ್ರ್ಯದಿನ ಆಚರಿಸಬೇಕು. ಜೊತೆಗೆ ಆಚರಣೆಯ ವಿಡಿಯೋ ಚಿತ್ರೀಕರಣವನ್ನೂ ಕಡ್ಡಾಯವಾಗಿ ಮಾಡಬೇಕು ಎಂದು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ನೇತೃತ್ವದ ಬಿಜೆಪಿ ಸರ್ಕಾರ ಹೊರಡಿಸಿದ ಕಟ್ಟುನಿಟ್ಟಿನ ಆದೇಶವನ್ನು ಮದರಸಾಗಳು ಧಿಕ್ಕರಿಸಿದ ಬೆನ್ನಲ್ಲೇ ಮದ್ರಸಾಗಳ ವಿರುದ್ಧ ಕಠಿನ ಕ್ರಮಕ್ಕೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರಕಾರ ಮುಂದಾಗಿದೆ.

ಹಲವು ಮದ್ರಸಾಗಳಲ್ಲಿ ಸರ್ಕಾರದ ಆದೇಶ ಪಾಲನೆಯಾಗಿದ್ದರೂ ಕೆಲವು ಮದ್ರಸಾಗಳಲ್ಲಿ ಆದೇಶದಲ್ಲಿ ಉಲ್ಲಂಘನೆಯಾಗಿದೆ. ಕೆಲವು ಮದ್ರಸಾಗಳಲ್ಲಿ ಸ್ವಾತಂತ್ರ್ಯೋತ್ಸವ ಅಚರಿಸಿದ್ದರೂ ಧ್ವಜಾರೋಹಣದ ಬಳಿಕ ರಾಷ್ಟ್ರ ಗೀತೆ 'ಜನ ಗಣ ಮನ' ಹಾಡಲಾಗಿಲ್ಲ.

ರಾಷ್ಟ್ರ ಗೀತೆಯಲ್ಲಿ 'ಇಸ್ಲಾಂ' ಧರ್ಮಕ್ಕೆ ಸಮ್ಮತಿಸದ ಪದಗಳಿದ್ದು ಅದನ್ನು ನಾವು ಹಾಡುವುದಿಲ್ಲ ಎಂದು ಅನೇಕ ಮದ್ರಸಾಗಳ ಮುಖ್ಯ ಶಿಕ್ಷಕರು ಹೇಳಿದ್ದಾರೆ.

ಹೀಗಾಗಿ ಕವಿ ಇಕ್ಬಾಲ್ ಬರೆದ 'ಸಾರೇ ಜಹಾಂ ಸೆ ಅಚ್ಛಾ' ಹಾಡಿದ್ದೇವೆ ಎಂದು ಹೇಳಿದ್ದಾರೆ. ರಾಷ್ಟ್ರಗೀತೆಯನ್ನು ಕಡ್ಡಾಯವಾಗಿ ಹಾಡಬೇಕೆಂದು ಆದೇಶವಿದ್ದರೂ ಆದೇಶವನ್ನು ಮದ್ರಸಾಗಳು ಉಲ್ಲಂಘಿಸಿವೆ ಎನ್ನಲಾಗಿದೆ.

ಪ್ರತಿ ವರ್ಷವೂ ನಾವು ಸಾರೇ ಜಹಾಂ ಸೆ ಅಚ್ಛಾ ಗೀತೆಯನ್ನೇ ಹಾಡುತ್ತೇವೆ ವಿನಃ ಜನ ಗಣ ಮನ ಹಾಡುವುದಿಲ್ಲ. ಅದೇ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದೇವೆ ಎಂದು ಅನೇಕ ಮೌಲ್ವಿಗಳು ಸಹ ಹೇಳಿದ್ದಾರೆ ಎಂದು ವರದಿಯಾಗಿದೆ.

ಆದೇಶ ಉಲ್ಲಂಘಿಸಿದ ಮದ್ರಸಾಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಮತ್ತು ರಾಷ್ಟ್ರೀಯ ಗೌರವ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗುವುದು ಎಂದು ಬರೇಲಿ ವಿಭಾಗೀಯ ಕಮಿಷನರ್‌ ಡಾ| ಪಿ.ವಿ. ಜಗಮೋಹನ್‌ ಹೇಳಿದ್ದಾರೆ.

ಇತ್ತೀಚೆಗೆ ಸ್ವಾತಂತ್ರ್ಯ ದಿನ ಸೇರಿದಂತೆ ಯಾವುದೇ ರಾಷ್ಟ್ರೀಯ ಹಬ್ಬವನ್ನು ದೇಶಭಕ್ತಿ ಹಾಗೂ ಗೌರವದೊಂದಿಗೆ ಆಚರಿಸುವುದು ಮದರಸಾಗಳ ಕರ್ತವ್ಯ ಎಂದು ಸಹಾಯಕ ಸಚಿವ ಔಲಖ್‌ ತಾಕೀತು ಮಾಡಿದ್ದರು.

ಮಕ್ಕಳಿಗೆ ದೇಶದ ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸ, ಹುತಾತ್ಮರ ಬಲಿದಾನಗಳನ್ನು ಪರಿಚಯಿಸುವುದು ಸರ್ಕಾರದ ಉದ್ದೇಶ. ಮದರಸಾಗಳ ಸ್ವಾತಂತ್ರ್ಯೋತ್ಸವ ಆಚರಣೆಯ ವಿಡಿಯೋಗಳನ್ನು ತಂತ್ರಜ್ಞಾನದ ನೆರವಿನಿಂದ ಎಲ್ಲರಿಗೂ ತಲುಪಿಸಿದರೆ ದೇಶದ ಲಕ್ಷಾಂತರ ಮಕ್ಕಳಿಗೆ ಪ್ರೇರಣೆ ನೀಡಿದಂತಾಗುತ್ತದೆ ಎನ್ನುವ ಮೂಲಕ ಸರ್ಕಾರದ ನಿಲುವನ್ನು ಸಚಿವರು ಸಮರ್ಥಿಸಿಕೊಂಡಿದ್ದರು.

ಇದೀಗ ಸರಕಾರದ ಮೂಲಗಳ ಪ್ರಕಾರ 150 ಮದ್ರಸಾಗಳಲ್ಲಿ ಆದೇಶ ಪಾಲಿಸಲಾಗಿಲ್ಲ. ಈ ಬಗ್ಗೆ ವಿವಿಧೆಡೆಗಳಿಂದ ದೂರುಗಳು ಬಂದಿದ್ದಾಗಿ ಸರಕಾರದ ಮೂಲಗಳು ಹೇಳಿವೆ. ಆದೇಶ ಧಿಕ್ಕರಿಸಿದ್ದರ ವಿರುದ್ಧ ದೂರುಗಳಿವೆ.

ದೂರು ನೀಡಿದವರು ಖಚಿತ ಸಾಕ್ಷ್ಯಗಳನ್ನು ನೀಡುವಂತೆ ಹೇಳಲಾಗಿದೆ. ಆದೇಶ ಧಿಕ್ಕರಿಸಿದ್ದು ಖಚಿತಪಟ್ಟರೆ ಅಂತಹ ಮದ್ರಸಾಗಳ ವಿರುದ್ಧ ಕೇಸು ದಾಖಲಿಸಲಾಗುವುದು ಎಂದು ಜಗಮೋಹನ್‌ ತಿಳಿಸಿದ್ದಾರೆ.

Related Tags: UP Madrasa, Independence Day, Videograph Event, Submit Video Footage, Uttar Pradesh Government, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ