ನಿಮಗೇನಾಗಿದೆ? ಆಳ್ವರ ಬೆಂಬಲಕ್ಕೆ ನಿಂತ ವೈದೇಹಿಗೆ ನೆಟ್ಟಿಗರ ಪ್ರಶ್ನೆ
ಕಾವ್ಯಾ ಸಾವಿಗೆ ಮತ್ತು ಕಾವ್ಯಾ ತಾಯಿ ಬೇಬಿ ಪೂಜಾರಿಯ ನೋವಿಗೆ, ಕಣ್ಣೀರಿಗೆ ಮಿಡಿಯಬೇಕಾಗಿದ್ದ ವೈದೇಹಿ ಎಂಬ ಮಹಿಳಾ ಸಾಹಿತಿಯ ಹೃದಯ ಮಿಡಿದದ್ದು ಮಾತ್ರ ಡಾ. ಮೋಹನ್ ಆಳ್ವರ ಪರವಾಗಿ

ಕರಾವಳಿ ಕರ್ನಾಟಕ ವರದಿ
ಮೂಡಬಿದಿರೆ:
ಕಾವ್ಯಾ ಸಾವಿನ ಹಿನ್ನೆಲೆಯಲ್ಲಿ ಡಾ. ಮೋಹನ್ ಆಳ್ವ ಅವರ ಬೆಂಬಲಕ್ಕೆ ನಿಂತವರ ಸಭೆಯಲ್ಲಿ ಪಾಲ್ಗೊಂಡು ಕಾವ್ಯಾ ಪರ ಹೋರಾಟಗಾರರಿಗೆ ‘ಅವಕಾಶವಾದಿಗಳು’ ಎಂದು ಜರೆದ ಖ್ಯಾತ ಲೇಖಕಿ ವೈದೇಹಿ ಅವರ ನಿಲುವಿಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಅಸಮಾಧಾನ ವ್ಯಕ್ತವಾಗಿದೆ.

ವೈದೇಹಿ ಅವರ ಸಾಹಿತ್ಯಾಭಿಮಾನಿಗಳು ಕೂಡ ವೈದೇಹಿ ತಳೆದ ನಿಲುವಿಗೆ ತಮ್ಮ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.

ಸ್ತ್ರೀವಾದಿ ಚಿಂತಕಿ ಮತ್ತು ಸಾಹಿತಿ ಎಂದು ಪ್ರಸಿದ್ಧರಾಗಿರುವ ವೈದೇಹಿ ಡಾ. ಮೋಹನ್ ಆಳ್ವ ಅವರ ಬೆಂಬಲಿಗರು ಮೂಡಬಿದಿರೆಯ ಸಭೆಯಲ್ಲಿ ಪಾಲ್ಗೊಂಡು ‘ಆಳ್ವರ ಯಶಸಸ್ಸನ್ನು ಸಹಿಸದ ಜನರು ಇಂತಹ ಪ್ರಕರಣಗಳಿಗಾಗಿ (ಕಾವ್ಯಾಳ ಸಾವಿನ ಪ್ರಕರಣ) ಕಾಯುತ್ತಿರುತ್ತಾರೆ.

ಅವಕಾಶವಾದಿಗಳು ಚಿತೆಯ ಬೆಂಕಿಯಲ್ಲಿ ಅಡುಗೆ ಮಾಡುವ ಮನಸ್ಥಿತಿಯವರು’ ಎಂಬರ್ಥದಲ್ಲಿ ಮಾತನಾಡಿದ್ದರು. ವೈದೇಹಿ ಅವರ ಈ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ರಾಜ್ಯದಾದ್ಯಂತ ಅನೇಕ ಸಾಹಿತಿಗಳು, ಲೇಖಕರು, ಸಾಮಾಜಿಕ ಹೋರಾಟಗಾರು ಮತ್ತು ಸೋಷಿಯಲ್ ಮೀಡಿಯಾದಲ್ಲಿರುವ ಅವರ ಸಾಹಿತ್ಯಾಭಿಮಾನಿಗಳು ಸಹ ವೈದೇಹಿ ಅವರ ಮಾತುಗಳನ್ನು ಕೇಳಿ ಅಚ್ಚರಿಪಟ್ಟಿದ್ದಾರೆ. “ವೈದೇಹಿಗೆ ಏನಾಗಿದೆ”, “ವೈದೇಹಿ ಏನಾದರು” ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮಣಿಪಾಲದಲ್ಲಿ ವಾಸವಾಗಿರುವ ಸಾಹಿತಿ ವೈದೇಹಿ ಕೆಲವೇ ಕೆಲವು ಸಂದರ್ಭಗಳನ್ನು ಹೊರತುಪಡಿಸಿ ಕರಾವಳಿಯ ಯಾವ ತಲ್ಲಣಗಳಿಗೂ ಪ್ರತಿಕ್ರಿಯೆ ನೀಡಿದವರಲ್ಲ ಅಥವಾ ಪ್ರತಿರೋಧ ತೋರಿದವರಲ್ಲ. ಕರಾವಳಿಯ ಕೋಮುವಾದ ಸೇರಿದಂತೆ ಹಲವು ಬಿಕ್ಕಟ್ಟುಗಳಿಗೆ ವೈದೇಹಿ ಮೌನ ವಹಿಸಿದವರು.

ಸುಬ್ರಹ್ಮಣ್ಯದಲ್ಲಿ ನಡೆಯುತ್ತಿರುವ ಮಡೆಸ್ನಾನ ಎಂಬ ಬ್ರಾಹ್ಮಣರು ಉಟ ಮಾಡಿ ಬಿಟ್ಟ ಎಂಜಲು ಎಲೆಗಳ ಮೇಲೆ ಉರುಳಾಡುವ ಅನಿಷ್ಟ ಪದ್ದತಿಯನ್ನೂ ಹರಕೆ ಸೇವೆಯ ನೆಲೆಯಲ್ಲಿ ವೈದೇಹಿ ಈ ಹಿಂದೆ ಸಮರ್ಥಿಸಿ ಬರೆದಿದ್ದು ವಿವಾದಕ್ಕೆ ಎಡೆಮಾಡಿತ್ತು. ಆಳ್ವಾಸ್ ನುಡಿಸಿರಿಯಲ್ಲಿ ವೈದೇಹಿ ಪಲ್ಲಕ್ಕಿ ಏರಿದ್ದನ್ನೂ ಸಹ ಪ್ರಗತಿಪರ ವಲಯ ಟೀಕಿಸಿತ್ತು.

ಸ್ತ್ರೀವಾದಿ ಸಾಹಿತಿಯಾಗಿರುವ ವೈದೇಹಿ ಕಾವ್ಯಾ ಸಾವಿನ ಕುರಿತು ಎಲ್ಲಿಯೂ ಮಾತಾಡಿಲ್ಲ. ಕಾವ್ಯಾ ತಾಯಿ ಬೇಬಿ ಪೂಜಾರಿಯವರ ಕಣ್ಣೀರು ವೈದೇಹಿಗೆ ಕಾಣಿಸಲಿಲ್ಲ. ಕಾವ್ಯಾಳ ಸಾವಿಗೆ ನ್ಯಾಯ ಒದಗಿಸಲು ನಡೆಯುತ್ತಿರುವ ಜನಸಾಮಾನ್ಯರ ಪ್ರತಿಭಟನೆಗಳು ವೈದೇಹಿ ಅವರಿಗೆ ಅವಕಾಶವಾದಿಗಳ ಒಕ್ಕೂಟವಾಗಿ ಕಂಡಿದೆ, ಇದು ತೀರಾ ವಿಷಾದದ ಸಂಗತಿ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾವ್ಯಾ ಸಾವಿಗೆ ಮತ್ತು ಕಾವ್ಯಾ ತಾಯಿ ಬೇಬಿ ಪೂಜಾರಿಯ ನೋವಿಗೆ, ಕಣ್ಣೀರಿಗೆ ಮಿಡಿಯಬೇಕಾಗಿದ್ದ ವೈದೇಹಿ ಎಂಬ ಮಹಿಳಾ ಸಾಹಿತಿಯ ಹೃದಯ ಮಿಡಿದದ್ದು ಮಾತ್ರ ಡಾ. ಮೋಹನ್ ಆಳ್ವರ ಪರವಾಗಿ.

ಆಳ್ವರನ್ನು ಬೆಂಬಲಿಸಿ ಕಾವ್ಯಾಳ ಸಾವಿನ ಹೋರಾಟವನ್ನು ಜರಿದ ವೈದೇಹಿ ಅವರ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬಂದಿರುವ ಕೆಲವು ಅನಿಸಿಕೆಗಳು ಇಲ್ಲಿವೆ

ಸತ್ಯ ಎಸ್.ಸಾಮಾಜಿಕ ಚಳವಳಿಗಾರರು
ಶಿಕ್ಷಣ ವ್ಯಾಪಾರಿಗಳ ಸಂತೆ. ಈ ಸಭೆಯಲ್ಲಿ ಭಾಗವಹಿಸಿದ್ದ ಘಟಾನುಗಟಿಗಳಲ್ಲಿ ತೊಂಬತ್ತು ಭಾಗ ಬೃಹತ್ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವವರು. ಹನ್ನೊಂದು ಮಕ್ಕಳ ಸಾವು ಮತ್ತು ಕೋಟ್ಯಂತರ ರೂಪಾಯಿ ಅಕ್ರಮಗಳ ವಾಸನೆ ಹತ್ತಿರುವವರ ಜೊತೆ ಇವರೆಲ್ಲ ಕೈಜೋಡಿಸಿದ್ದಾರೆ ಎಂದರೆ, ಅವರ ಕಪಾಟುಗಳಲ್ಲಿ ಎಷ್ಟು ದುರ್ನಾತ ಇರಬಹುದು?

ಸತೀಶ್ ಶೆಟ್ಟಿ
ಕಾರಂತರ ಊರಿಂದ ಬಂದವರಲ್ಲಿ ಈ ಎಡೆಬಿಡಂಗಿತನ ಇರಬಾರದಿತ್ತು...

ಪ್ರಕಾಶ ಹಾಲಗೇರಿ
ವೈದೇಹಿಯವರನ್ನು ಅವರ ವೈದಿಕತ್ವ ಮೀರಿ 'ಕ್ರೌಂಚಪಕ್ಷಿಗಳು' ಲಿದಂತೆ ಪ್ರೀತಿಸಿದವರು ನಾವು. ಒಬ್ಬ ಸಂವೇದನಾಶೀಲ ಬರಹಗಾರ್ತಿಯಾಗಿಯೂ ಪ್ರಜ್ಞಾಶೀಲ ಪ್ರಜೆಯಾಗಿಯೂ ಕಾವ್ಯಾಳ ಸಾವಿನ ಬಗೆಗೆ ನಿಮ್ಮಿಂದ ಬೇರೆ ರೀತಿಯ ಪ್ರತಿಕ್ರಿಯೆಯನ್ನು ನಾವು ನಿರೀಕ್ಷಿಸಿದ್ದೇ ತಪ್ಪಾ?!

ನಾಗರಾಜ ಇಬ್ಬನಿ
ವೈದೇಹಿ ತಾವು ಏನಂತ ಜಗತ್ತಿಗೆ ಸಾಬೀತುಪಡಿಸಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಕಸದ ಬುಟ್ಟಿ ಅಂತ ವಿಭಾಗಕ್ಕೆ ಆಧುನಿಕ ವೈದೇಹಿ ಅವರನ್ನು ಸೇರಿಸಲಾಗಿದೆ.

ಗಣೇಶ ಮೆಂಡನ್
ಮುಂದಿನ ವಿರಾಸತ್, ನುಡಿಸಿರಿ, ಗುಡಿಸಿರಿ ಕಾರ್ಯಕ್ರಮದಲ್ಲಿ ಭರ್ಜರಿ ಉಡುಗೊರೆ ನಿರೀಕ್ಷೆಯಲ್ಲಿ ಈ ದೇಹಿ

ವಸಂತ ಬನ್ನಾಡಿ, ಕವಿ
ವೈದೇಹಿ ದೊಡ್ಡ ಅವಕಾಶವಾದಿ. ಅವರ ಲಾಬಿ ಆಳವಾದದ್ದು. ಅವರ ತಿಳುವಳಿಕೆ ತುಂಬಾ ತೆಳು

ಶ್ರೀನಿವಾಸ ಕಾರ್ಕಳ, ಚಿಂತಕರು
"ಅನ್ಯಾಯವೊಂದರ ಪರ ನಿಲ್ಲುವುದು ಎಂದರೆ ಆ ಅನ್ಯಾಯದಲ್ಲಿ ಭಾಗಿಯಾಗುವುದಕ್ಕೆ ಸಮ". ಇದು ನಿಮಗೆ ಗೊತ್ತಿರಬಹುದಲ್ಲ ವೈದೇಹಿಯವರೇ.

ಪ್ರಭಾಕರನ್ ಕೃಷ್ಣನ್, ಸಮುದಾಯ
"ಕನಿಷ್ಟ ಆ ಸಭೆಯಲ್ಲಿ ಭಾಗವಹಿದದೇ ಇರುವ ಸ್ವಾತಂತ್ರ್ಯ ನಿಮಗಿತ್ತು...." ಹೌದು ಹೀಗಾದರೂ ಆಗಿದ್ದರೆ ನಮ್ಮ ನೋವು ಆಕ್ರೋಶಗಳು ಸ್ವಲ್ಪವಾದರೂ ಕಡಿಮೆಯಾಗುತ್ತಿತ್ತು.

ಫಯಾಝ್ ಬೆಂಗಳೂರು
ಬರಹ ಗೊತ್ತಿರುವ ನೀವು ಸೂತಕ ತೊಳೆದುಕೊಂಡಿದ್ದೀರಿ. ಓದು ಮಾತ್ರ ಗೊತ್ತಿರುವವರು ಸೂತಕ ತೊಳೆಯುವ ಬಗೆಯನ್ನು ತಿಳಿಸಿಕೊಡುವಿರಾ?

ತಿಮ್ಮಪ್ಪ ಗುಲ್ವಾಡಿ
ಬದುಕು ಎರಡು ಹೋಳಾಗುವುದು ಹೇಗೆ? ನನಗಂತು ಅರ್ಥವಾಗೊಲ್ಲ. ಸ್ತ್ರೀಪರ ದನಿಯಾಗಿಯು ಉಳ್ಳವರ ಹಿಂದೆ ನಿಲ್ಲುವುದು ಹೇಗೆ? ಉಳ್ಳವರು ಎಲ್ಲವನ್ನು ತಮಗೆ ಬೇಕಾದಂತೆ ರೂಪಿಸಿಕೊಳ್ಳಬಲ್ಲರು ಎಂಬ ಮೊದಲ ಅರಿಮೆಯೆ ಇಲ್ಲವಾಗುವುದು ಹೇಗೆ.? ಅವಕಾಶ ಹುಡುಕಿಕೊಳ್ಳುವುದು ತಪ್ಪಲ್ಲವಾದರು ಎಲ್ಲಿ ಹೇಗೆ ಎಂಬ ತಿಳಿವು ಅಂತಹವರಿಗೆ ಬರಲಿಲ್ಲವೆಂದರೆ ಓದಿನಿಂದ ಗಟ್ಟಿಯಾದ ನಮ್ಮ ಬುಡ ಅಲ್ಲಾಡುತ್ತೆ.

ಕೆ. ನೀಲಾ, ಸಾಮಾಜಿಕ ಹೋರಾಟಗಾರರು
'ಶಾಂತಿ ಸೌಹಾರ್ದತೆಗಾಗಿ ಸಾಹಿತಿ ಕಲಾವಿದರು ನಡೆಸಿದ ಮಂಗಳೂರು ಚಲೊ'ಗೆ ಪ್ರೀತಿಯಿಂದ ವೈದೇಹಿಯವರಿಗೆ ಕರೆದಾಗ ಬರಲಿಲ್ಲ ಎಂಬುದು ಖಂಡಿತ ನೋವೆನಿಸಿರಲಿಲ್ಲ. ಆದರೆ ನಮ್ಮದೇ ಕರುಳಿನ ಕುಡಿ ಕಾವ್ಯ ಸಾವಿನ ಹೊತ್ತಲ್ಲಿ ನಾಡೆಲ್ಲ ನ್ಯಾಯಕ್ಕಾಗಿ ದನಿ ಎತ್ತಿದರೆ ವೈದೇಹಿಯವರು ಮೋಹನ್ ಆಳ್ವ ಪರ ನಿಂತು ವಕಾಲತ್ತು ಮಾಡಿರುವುದು ಮನಸಿಗೆ ನೋವೆನಿಸಿತು.

ತಾಯ್ತನವಿಲ್ಲದೆ ಬರಹ ಅರಳುವುದು ಹೇಗೆ? ಸ್ತ್ರೀವಾದವೆಂದರೆ ಜೀವಪರವಾದ ಎಂಬುದು ನಮ್ಮ ನಂಬಿಕೆ. ವೈದೇಹಿಯವರ ಪಾಲಿಗೆ ಹಾಗಿಲ್ಲ ಎಂಬ ವಾಸ್ತವ ಅನಾವರಣವಾಗಿದೆ. ಸೌಜನ್ಯ ಕೊಲೆ ಪ್ರಕರಣದಲ್ಲೂ ಹಿರಿಯ ಸಾಹಿತಿ ಕಮಲಾ ಹಂಪನಾ ಧರ್ಮಸ್ಥಳದ 'ಖಾವಂದರ್'ಪರ ಬ್ಯಾಟಿಂಗ್ ಮಾಡಿದ್ದರು. ಕಾವ್ಯ, ಸೌಜನ್ಯ ಮುಂತಾದವರ ಸಾವುಗಳು ಇವರುಗಳ ಕರುಳ ಕಣ್ಣು ತೆರೆಸುತ್ತಿಲ್ಲ ಎಂಬ ನೋವು ಗಾಢವಾಗಿ ಕಾಡುತ್ತಿದೆ. ಆದರೇನು ನ್ಯಾಯಕ್ಕಾಗಿನ ಹೋರಾಟವೆಂಬ ನದಿಯ ಹರಿವು ನಿಲ್ಲದು.

ಶ್ರೀನಿವಾಸ ಕಾರ್ಕಳ, ಚಿಂತಕರು
ವೈದೇಹಿಯವರೆ,
ಸಾಹಿತಿಗಳೂ ಇತರೆಲ್ಲರ ಹಾಗೆಯೇ ಮನುಷ್ಯರು. ಹಾಗಾಗಿ ಇತರರಲ್ಲಿರುವ ದೌರ್ಬಲ್ಯಗಳು ಸಾಹಿತಿಗಳಲ್ಲಿಯೂ ಇರುವುದು, ಮಾತು ಮತ್ತು ಕೃತಿಗಳ ನಡುವೆ ವ್ಯತ್ಯಾಸ ಇರುವುದು ಅಸಹಜವೇನಲ್ಲ. ಆದರೆ ಸಾಹಿತಿಗಳಾದವರನ್ನು ಸಮಾಜವು ತುಂಬ ಗೌರವದಿಂದ ಮತ್ತು ಒಂದು ಅನುಸರಣೀಯ ಮಾದರಿ ಎಂಬಂತೆ ನೋಡುವುದರಿಂದ ಅಂತಹ ವ್ಯಕ್ತಿತ್ವಗಳಲ್ಲಿ ಮಾತು ಮತ್ತು ಕೃತಿಗಳ ನಡುವಣ ಅಂತರ ಕಡಿಮೆ ಇರಲಿ ಎಂದು ಆಶಿಸುವುದು ತಪ್ಪಾಗದೇನೋ. ಯಾಕೆಂದರೆ ಬರೆವಣಿಗೆಗೂ ಬದುಕಿಗೂ ಏನೂ ಸಂಬಂಧ ಇಲ್ಲವೆನ್ನುವುದಾದರೆ ಅದನ್ನು ಸ್ವೀಕರಿಸುವುದು ತುಂಬ ಕಷ್ಟವಾಗುತ್ತದೆ.

ನಿಮ್ಮ ಸಾಹಿತ್ಯ ಕೃತಿಗಳ ಮೌಲ್ಯಗಳ ಬಗ್ಗೆ ಎರಡು ಮಾತಿಲ್ಲ. ಆದರೆ ಆ ಕೃತಿಗಳಾಚೆಗೆ ನಿಮ್ಮ ಕೆಲವು ನಿಲುವುಗಳು ಹೇಳಿಕೆಗಳು ಜೀವಪರ ಮನಸುಗಳಿಗೆ ನೋವು ನೀಡುವಂಥವು ಎನ್ನುವುದನ್ನು ಹೇಳಲೇಬೇಕಾಗಿದೆ. ನಿಮಗೆ ನೆನಪಿದೆಯೋ ಗೊತ್ತಿಲ್ಲ. ಒಂದೆರಡು ದಶಕಗಳ ಹಿಂದೆ, ಜಾತಿ ವ್ಯವಸ್ಥೆಯನ್ನು ಸಮರ್ಥಿಸುವ ಧಾಟಿಯಲ್ಲಿ ‘ಜಾತಿ ಚಂದ’ ಎಂಬ ಮಾತೊಂದನ್ನು ನೀವು ಆಡಿದ್ದಿರಿ. ಅದನ್ನು ನಿಕೇತನ ಎಂಬವರು ತೀವ್ರವಾಗಿ ಪ್ರತಿಭಟಿಸಿದ್ದು ನನಗೆ ಸರಿಯಾಗಿ ನೆನಪಿದೆ.

‘ಕೆಳಜಾತಿಯವರ ನೋವಿನ ಅನುಭವ ನಿಮಗಿಲ್ಲ, ನೀವು ಉನ್ನತ ಜಾತಿಯವರು ಆದ್ದರಿಂದ ಅದರೆಲ್ಲ ಸುಖ ಅನುಭವಿಸಿದವರು, ನಿಮಗೆ ಜಾತಿ ಚಂದ ಎಂದು ಅನಿಸುವುದು ಸಹಜ’ ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದರು. ಆದರೂ, ನಿಮ್ಮ ಹೇಳಿಕೆಯಿಂದ ನನಗೆ ಅಚ್ಚರಿಯಾಗಿರಲಿಲ್ಲ. ಯಾಕೆಂದರೆ ಅದು ನೀವು ತಪ್ಪಿ ಆಡಿದ ಮಾತಾಗಿರಬಹುದು ಎಂದು ನನ್ನನ್ನು ನಾನು ಸಮಾಧಾನಿಸಿಕೊಂಡಿದ್ದೆ.

ಮತ್ತೊಂದು ದಿನ ನೀವು ಮಡೆಸ್ನಾನ ಎಂಬ ಅನಾಗರಿಕ ಪದ್ಧತಿಯನ್ನು ಸಮರ್ಥಿಸುವ ದನಿಯಲ್ಲಿ ಮಾತನಾಡಿದಿರಿ (ಹಿರಿಯ ರಂಗಕರ್ಮಿಯೊಬ್ಬರು ಮಡೆಸ್ನಾನ ಸಮರ್ಥಿಸಿ ನಾಡಿನ ಪ್ರಮುಖ ಪತ್ರಿಕೆಯೊಂದರಲ್ಲಿ ಬರೆದಾಗ ಆ ಬಗ್ಗೆ ದೊಡ್ಡ ಚರ್ಚೆ ನಡೆದಿತ್ತು). ಆಗ ನನಗೆ ಮೊದಲ ಬಾರಿಗೆ ‘ಇದು ನಮ್ಮ ಪ್ರಗತಿಪರ ಚಿಂತಕಿ, ಸ್ತ್ರೀವಾದಿ ಲೇಖಕಿ ವೈದೇಹಿಯವರೇ?’ ಎಂದು ಅಚ್ಚರಿಯಾಯಿತು.

ನಾವು ಆರೋಗ್ಯದಿಂದಿರುವಾಗ ನಡೆದಾಡುವ ಶಕ್ತಿ ಹೊಂದಿರುವಾಗ ನಮ್ಮನ್ನು ಹೊರುವುದಕ್ಕೆ ಯಾರಿಗೂ ನಾವು ಅವಕಾಶ ನೀಡಕೂಡದು. ಆದರೆ ನುಡಿಸಿರಿಯಲ್ಲಿ ಧಣಿಗಳ ಮನುಷ್ಯರ ಹೆಗಲ ಮೇಲಿನ ಪಲ್ಲಕ್ಕಿಯಲ್ಲಿ ಯಾವ ಅಳುಕೂ ಇಲ್ಲವೇನೋ ಎಂಬಂತೆ ನೀವು ಹತ್ತಿ ಕೂತಾಗಲಂತೂ ನಿಮ್ಮ ನಡೆವಳಿಕೆಯ ಬಗ್ಗೆ ಅಚ್ಚರಿ ಮಾತ್ರವಲ್ಲ, ವಿಷಾದವೂ ಉಂಟಾಯಿತು. (ದಲಿತ ದಮನಿತರ ಪರವಾಗಿ ನಡೆದ ಉಡುಪಿ ಚಲೋ ಕಾರ್ಯಕ್ರಮಕ್ಕೆ ಬರಲು ನೀವು ನಿರಾಕರಿಸಿದಿರಂತೆ. ಹೋಗಲಿಬಿಡಿ).

ಈಗ ಕಾವ್ಯ ಎಂಬ ಹೆಣ್ಣು ಮಗಳ ಅಸಹಜ ಸಾವಿನ ವಿಷಯದಲ್ಲಿ ಆ ಸಂತ್ರಸ್ತೆಯ ಪರವಾಗಿ ನಿಲ್ಲಬೇಕಾದ ನೀವು ಆಳ್ವರ ಪರವಾದ ಸಭೆಯಲ್ಲಿ ಯಾವ ಅಳುಕೂ ಇಲ್ಲದೆ ಭಾಗವಹಿಸಿದಿರಿ. ‘ಆಳ್ವರು ಈ ಅಗ್ನಿಪರೀಕ್ಷೆಯಲ್ಲಿ ಗೆದ್ದುಬರುತ್ತಾರೆ, ಸಮಾಜದಲ್ಲಿ ಎಲ್ಲರೂ ಸಜ್ಜನರಲ್ಲ, ಅಸೂಯೆ ಪಡುವವರಿದ್ದಾರೆ, ಇಂಥದನ್ನು ಮಾಡಬೇಕೆಂದು ಕಾಯ್ತಿರೋ ಕೆಲವರಿಗೆ ಕಾವ್ಯ ಪ್ರಕರಣ ಒಂದು ನೆಪ ಮಾತ್ರ’ ಎಂದು ನೀವು ಅಲ್ಲಿ ಹೇಳಿದಿರಿ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಆದರೆ ಈ ಬಾರಿ ನನಗೆ ಯಾವ ಅಚ್ಚರಿಯೂ ಆಗಲಿಲ್ಲ ಬೇಸರವೂ ಆಗಲಿಲ್ಲ. ಮುಖ ಮತ್ತು ಮುಖವಾಡದ ನಡುವಿನ ವ್ಯತ್ಯಾಸ ಅರಿಯಲು ಸಾಧ್ಯವಾಗದ ನನ್ನ ಮೂರ್ಖತನದ ಬಗ್ಗೆ ನನಗೇ ನಾಚಿಕೆಯಾಯಿತು ಅಷ್ಟೇ.

ಗಿರಿಧರ ಕಾರ್ಕಳ
ವಿವೇಕ ರೈಗಳಿಗಾದರೆ ಬಂಧು ಮೋಹದ ಧೃತರಾಷ್ಟ್ರ ಪ್ರೇಮವೆನ್ನಬಹುದು. ಆದರೆ     ವೈದೇಹಿಯವರಿಗೇನಾಗಿದೆ?

ಖ್ಯಾತ ಕಥೆಗಾರ ಮತ್ತು ಕವಿ ಬಿ.ಎಂ. ಬಶೀರ್ ಅವರಂತೂ ವೈದೇಹಿಗೆ ಬಹಿರಂಗ ಪತ್ರವನ್ನೇ ಬರೆದಿದ್ದಾರೆ
ಆ ಪತ್ರದ ಪೂರ್ಣ ಪಾಠ ಇಲ್ಲಿದೆ:
ಪ್ರೀತಿಯ ವೈದೇಹಿ ಅವರಿಗೆ ನಮಸ್ಕಾರ.
ನೀವು ನನ್ನ ಇಷ್ಟದ, ನನ್ನನ್ನು ಬೆಳೆಸಿದ ಲೇಖಕಿಯಾಗಿದ್ದೀರಿ. ವೈಯಕ್ತಿಕವಾಗಿ ಆತ್ಮೀಯರೂ ಆಗಿದ್ದೀರಿ. ಅದಕ್ಕಾಗಿ ಈ ಪತ್ರ ಬರೆದಿದ್ದೇನೆ.

ನಿಮ್ಮನ್ನು ಈ ಹಿಂದೆ ಮೂಡಬಿದ್ರೆಯ ನುಡಿಸಿರಿ ವೇದಿಕೆಯಲ್ಲಿ ನೋಡಿ ಸಂತೋಷ ಗೊಂಡಿದ್ದೆ. ನಿಮ್ಮ ಹೃದಯದ ನಾಲ್ಕು ಮಾತುಗಳು ಅಲ್ಲಿ ಸೇರಿರುವ ಅಸಂಖ್ಯಾತ ಜನರಲ್ಲಿ ಒಳಿತನ್ನು ಬಿತ್ತಲಿ ಎಂದು ಆಶಿಸಿದ್ದೆ.

ಇದೆ ಸಂದರ್ಭದಲ್ಲಿ ಕಾವ್ಯ ಎನ್ನುವ ಹುಡುಗಿಯ ಸಾವಿಗೆ ಸಂಬಂಧಿಸಿ ಆಳ್ವರನ್ನು ಬೆಂಬಲಿಸಿದ ಸಭೆಯಲ್ಲಿ ನಿನ್ನೆ ನೀವು ಕಾಣಿಸಿ ಕೊಂಡದ್ದು ನನ್ನನ್ನು ಇನ್ನಿಲ್ಲದಷ್ಟು ಕುಗ್ಗಿಸಿದೆ. ಇದರ ವಿರುದ್ಧ ನನ್ನ ಖಂಡನೆ ವ್ಯಕ್ತ ಪಡಿಸಲೇ ಬೇಕಾಗಿದೆ.

ಕಾವ್ಯ ಅವರ ಸಾವು ಆತ್ಮಹತ್ಯೆಯೇ ಆಗಿರಬಹುದು, ಕೊಲೆಯೇ ಆಗಿರಬಹುದು, ಅಥವಾ ಆತ್ಮಹತ್ಯೆಗೆ ಯಾರದಾದರೂ ಪ್ರೇರಣೆಯೂ ಅದರ ಹಿಂದೆ ಇರಬಹುದು. ಇಲ್ಲಿ ಆಳ್ವರು ಅಪರಾಧಿ ಎಂದು ಯಾರು ಹೇಳುತ್ತಿಲ್ಲ. ಆದರೆ ಒಂದು ವಿದ್ಯಾ ಸಂಸ್ಥೆ ಕೆಲವು ಕಾರಣಗಳಿಗಾಗಿ ಒಬ್ಬ ತರುಣಿಯ ಸಾವಿನಲ್ಲಿ ಸಂಶಯಾಸ್ಪದವಾಗಿ ನಿಂತಿರುವಾಗ, ಮತ್ತು ಆ ತರುಣಿಯ ತಾಯಿ ನಡು ಬೀದಿಯಲ್ಲಿ ನಿಂತು ನ್ಯಾಯಕ್ಕಾಗಿ ಬಾಯಿ ಬಡಿದು ಕೊಳ್ಳುತ್ತಿರುವಾಗ, ಆ ತಾಯಿಯ ಪರವಾದ ಯಾವ ಸಭೆಯಲ್ಲೂ ಕಾಣಿಸಿ ಕೊಳ್ಳದ ನೀವು, ಆಳ್ವರ ಅಳಲಿಗೆ ಕಿವಿಯಾಗಿ ಅವರ ಸಭೆಯಲ್ಲಿ ಕಾಣಿಸಿ ಕೊಂಡದ್ದು ಆಘಾತ ತಂದಿದೆ.

ಒಬ್ಬ ಸ್ತ್ರೀ ಪರ ಬರಹಗಾರ್ತಿಯಾಗಿ, ಒಬ್ಬ ಲೇಖಕಿಯಾಗಿ ನೀವು ಎಸಗಿದ ಕೃತ್ಯ ಅತ್ಯಂತ ಅಶ್ಲೀಲವಾದುದು.ಕನಿಷ್ಟ ಆ ಸಭೆಯಲ್ಲಿ ಭಾಗವಹಿಸದೇ ಇರುವ ಸ್ವಾತಂತ್ರ್ಯ ನಿಮಗಿತ್ತು. (ಹೇಗೆ ಕಾವ್ಯ ಪರವಾಗಿ ಧ್ವನಿಯೆತ್ತದೆ ಇರುವ ಸ್ವಾತಂತ್ರ್ಯ ಇತ್ತೋ ಹಾಗೆ). ಆ ಮೂಲಕ ಎಲ್ಲವನ್ನೂ ಕಾನೂನಿಗೆ ವಹಿಸಿ ಬಿಡಬಹುದಿತ್ತು. ಒಂದು ತರುಣಿಯ ಅಸಹಜ ಸಾವು ಸಂಭವಿಸಿದಾಗ (ಆಕೆಯ ತಾಯಿ ನ್ಯಾಯಕ್ಕಾಗಿ ಮಾಧ್ಯಮಗಳಲ್ಲಿ ಬೊಬ್ಬಿಡುತ್ತಿರುವಾಗ) ಅದನ್ನು ತನಿಖೆಗೆ ಒತ್ತಾಯಿಸೋದು ಸಹಜ ಕ್ರಮ.

ಇಂಥವರನ್ನು ಆರೋಪಿಯನ್ನಾಗಿಸಬೇಡಿ ಎಂದು ಒತ್ತಾಯಿಸಿಸೋದು ಅಸಹಜ ಕ್ರಮ ಮಾತ್ರ ಅಲ್ಲ, ಅನುಮಾನಕ್ಕೆಡೆ ಮಾಡುವ ಕ್ರಮ ಅದು. ತನಿಖೆಯ ದಾರಿ ತಪ್ಪಿಸುವ ಕ್ರಮ ಕೂಡ. ನಿಮ್ಮನ್ನು ಆ ವೇದಿಕೆಯಲ್ಲಿ ಜನ ಗುರುತಿಸಿರೋದು ಒಬ್ಬ ಲೇಖಕಿಯಾಗಿ. ನೀವು ನಿಮ್ಮ ಅಪಾರ ಓದುಗರನ್ನು ಆ ವೇದಿಕೆಯ ಸೂತಕಕ್ಕೆ ತಳ್ಳಿ ಬಿಟ್ಟಿರಿ. ನಾನಂತೂ ಆ ಸೂತಕವನ್ನು ಈ ಬರಹದ ಮೂಲಕ ತೊಳೆದು ಕೊಂಡಿದ್ದೇನೆ. ನೀವು ಅದು ಹೇಗೆ ತೊಳೆದು ಕೊಳ್ಳುತ್ತೀರೋ ನಿಮ್ಮೊಳಗಿನ ಆ ಸೃಜನ ಶೀಲ ಲೇಖಕಿಯೇ ಹೇಳಬೇಕು.

ಇದನ್ನೂ ಓದಿ:
►►ಕಾವ್ಯಾ ನಿಗೂಢ ಸಾವು: ಪಾರದರ್ಶಕ ತನಿಖೆಗೆ ಬಿಲ್ಲವ ಮಹಾಮಂಡಲ ಬೆಂಬಲ:
http://bit.ly/2i3nDtM
►►ಸ್ವರಾಜ್ ಮೈದಾನದಲ್ಲಿ ಆಳ್ವಾ ಬೆಂಬಲಿಗರ ಸಭೆ: ಹರಿದು ಬಂದ ಜನಸಾಗರ. ಭಾರೀ ಬೆಂಬಲ: http://bit.ly/2fCnoFf
►►ಆಳ್ವರಂಥವರು ದೇಶದಲ್ಲೇ ಅಪರೂಪ: ಆ್ಯತ್ಲೆಟ್ ಸಹನಾ ಕುಮಾರಿ: http://bit.ly/2uPx6pJ
►►ಆಳ್ವಾಸ್‌ಗೆ ಶುರವಾಯ್ತು ಮೊದಲ ಕಂಟಕ: ಅಕ್ರಮಗಳ ವಿರುದ್ಧ ತನಿಖೆಗೆ ಸಮಿತಿ ರಚಿಸಿದ ಜಿಲ್ಲಾಧಿಕಾರಿ: http://bit.ly/2uLFrut
►►ಜಸ್ಟೀಸ್ ಫಾರ್ ಕಾವ್ಯಾ: ಮಂಗಳೂರಿನಲ್ಲಿ ನಡೆದಿದೆ ಬೃಹತ್ ಧರಣಿ. ಕಾವ್ಯಾ ತಾಯಿಯೂ ಭಾಗಿ: http://bit.ly/2wGOv5t
►►ಕಳೆದ ಹತ್ತು ವರ್ಷಗಳಲ್ಲಿ ಆಳ್ವಾಸ್ ಕ್ಯಾಂಪಸ್‌ನಲ್ಲಿ ಜೀವ ಕಳೆದುಕೊಂಡವರೆಷ್ಟು?: http://bit.ly/2uCHReT
►►ದೈಹಿಕ ಶಿಕ್ಷಕನನ್ನು ತಕ್ಷಣ ಬಂಧಿಸಿ. ಕೊಲೆಯ ರಹಸ್ಯ ಬಯಲಾಗುತ್ತದೆ: ಕಾವ್ಯಾ ತಾಯಿ ಬೇಬಿ: http://bit.ly/2vHZtdw
►►ಆಗಸ್ಟ್ 10ರಂದು “ಆಳ್ವರೊಂದಿಗೆ ನಾವು”: ಸಂಸ್ಕಾರ ಭಾರತಿಯಿಂದ ಆಳ್ವರಿಗೆ ಫುಲ್ ಸಪೋರ್ಟ್: http://bit.ly/2wmNm3p
►►ಕಾವ್ಯಾ ಸಾವಿನ ಹಿನ್ನೆಲೆ: ಆಗಸ್ಟ್ 12ರಂದು ಡಾ. ಮೋಹನ್ ಆಳ್ವ ಬೆಂಬಲಿಸಿ ಬೃಹತ್ ಸಭೆ: http://bit.ly/2v3M92n
►►ಆಳ್ವಾಸ್ ಮೂಡಬಿದಿರೆ. ಹಾಸ್ಟೆಲೋ ಅಥವಾ ವಿದ್ಯಾರ್ಥಿನಿಯರ ನೇಣು ಬಿಗಿವ ತಾಣವೊ?: http://bit.ly/2vwtw8X
►►ಕಾವ್ಯಾ ಸಾವು: ಮೋಹನ್ ಆಳ್ವರಿಗೆ ಬಹಿರಂಗ ಬೆಂಬಲ ಸಾರಿದ ಬಿಜೆಪಿ: http://bit.ly/2f8OinS
►►ಕಾವ್ಯಾ ಪ್ರಕರಣದ ಗೊಂದಲಗಳಿಗೆ ತೆರೆ ಎಳೆಯಿರಿ: ಎಬಿವಿಪಿ ಕುಂದಾಪುರ: http://bit.ly/2hneo7i
►►ನುಡಿಸಿರಿ ಸಂಘಟಕರಿಗೆ ಕಾವ್ಯಾಳ ಕುರಿತು ನುಡಿಗಳೇ ಇಲ್ಲದಾಯಿತೆ?: http://bit.ly/2ugxOMo
►►ನನ್ನ ಮಗಳ ಸಾವಿಗೆ ದೈಹಿಕ ಶಿಕ್ಷಕ ಕಾರಣ: ಕಾವ್ಯಾ ತಾಯಿ ಬೇಬಿ ಆರೋಪ: http://bit.ly/2f3KqVo
►►ಜಸ್ಟೀಸ್ ಫಾರ್ ಕಾವ್ಯಾ: ಕುಂದಾಪುರದಲ್ಲಿ ಬೀದಿಗಳಿದ ಸಹಸ್ರಾರು ವಿದ್ಯಾರ್ಥಿಗಳು: http://bit.ly/2tZQlkU
►►ಕಾವ್ಯಾ ಸಾವು: ಮೋಹನ್ ಆಳ್ವಾ ಕಥೆ ಹೇಳುತ್ತಿದ್ದಾರೆಯೆ?: http://bit.ly/2wesUki
►►ಕಾವ್ಯಾಳದ್ದು ಆತ್ಮಹತ್ಯೆಯಂತೆ. ಮರಣೋತ್ತರ ವರದಿ ಬಂದಿದೆಯಂತೆ: ಪೊಲೀಸ್ ಮೂಲಗಳು: http://bit.ly/2ub16Mq
►►ಕಾವ್ಯಾ ಸಾವು: ಆಳ್ವಾಸ್ ಹೆಸರಿಗೆ 'ಮಸಿ ಬಳಿಯುವುದನ್ನು' ನಿಲ್ಲಿಸಲು ಎಚ್‌ಡಿಕೆ ಕರೆ: http://bit.ly/2u9pwWR
►►‘ಆಳ್ವಾಸ್’ ಕಾವ್ಯ ನಿಗೂಢ ಸಾವು: ಸಿಬಿಐ ತನಿಖೆಗೆ ಆಗ್ರಹ: http://bit.ly/2v8ZF5x
►►ಪೊಲೀಸರೆ ವಿದ್ಯಾರ್ಥಿನಿ ಕಾವ್ಯ ಪ್ರಕರಣ ಮುಚ್ಚಿಹಾಕದಿರಿ: ಸಿ.ಎಫ್.ಐ http://bit.ly/2vgush
►►ಕಾವ್ಯಾಳದು ಆತ್ಮಹತ್ಯೆ, ಕೊಲೆಯಲ್ಲ: ಮೂಡುಬಿದಿರೆ ಪೊಲೀಸ್: http://bit.ly/2hb2Xj0
►►ಕಾವ್ಯಾ ಸಾವಿಗೆ ಕೊಲೆ ಎನ್ನೋದಕ್ಕೆ ಅರ್ಥವಿದೆಯೆ? http://bit.ly/2uKVbzw
►►ಆಳ್ವಾಸ್ ವಿದ್ಯಾರ್ಥಿನಿ, ಬ್ಯಾಡ್ಮಿಂಟನ್ ಚಾಂಪಿಯನ್ ನಿಗೂಢ ಸಾವು: ಕೊಲೆ ಆರೋಪ http://bit.ly/2uDb0tB
►►ಆರನೇ ಮಹಡಿಯಿಂದ ಜಿಗಿದು ಆಳ್ವಾಸ್ ವಿದ್ಯಾರ್ಥಿನಿ ಆತ್ಮಹತ್ಯೆ http://bit.ly/2ev592K
►►ಆಳ್ವಾಸ್ ವಿದ್ಯಾರ್ಥಿನಿ ಕಾಲೇಜಲ್ಲೇ ಸಾವು! http://bit.ly/1KlK1AS
►►ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ http://bit.ly/2tPy30R
►►ವಿದ್ಯಾರ್ಥಿನಿ ಆತ್ಮಹತ್ಯೆ: 4ನೇ ದಿನಕ್ಕೆ ಪ್ರತಿಭಟನೆ http://bit.ly/2mdZ4XZ
►►ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ http://bit.ly/2nQnUB5
►►ಪರೀಕ್ಷೆ ಫಲಿತಾಂಶದಿಂದ ನೊಂದು ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ http://bit.ly/2qGXXDg
►►ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ: ಡೆತ್ ನೋಟಲ್ಲಿ ಏನಿದೆ? http://bit.ly/2nqiUEl

Related Tags: Vaidehi, Alwa''s Nudisiri, Dr. Mohan Alva, Kavya Death, Alwa Supporters Meet, Moodabidire, Social Media Reaction, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ