ಹುತಾತ್ಮ ಯೋಧರ ಕುಟುಂಬ ಸದಸ್ಯರಿಗೆ ನೌಕರಿ: ಸಿದ್ದರಾಮಯ್ಯ ಘೋಷಣೆ

ಕರಾವಳಿ ಕರ್ನಾಟಕ ವರದಿ
ಬೆಂಗಳೂರು:
71ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದರು.

ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ   ಗುಲಾಮಗಿರಿಯಿಂದ ದೇಶವನ್ನು ಮುಕ್ತಗೊಳಿಸಿದ ಹೋರಾಟಗಾರರಿಗೆ ಮತ್ತು ಹುತಾತ್ಮ ದೇಶಭಕ್ತರಿಗೆ ಮೊದಲಿಗೆ ಶ್ರದ್ಧಾಂಜಲಿ ಸಲ್ಲಿಸೋಣ ಎಂದು ಹೇಳಿದರು.

ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮ  ಯೋಧರ ಕುಟುಂಬದವರಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದು ಸಿಎಂ ಭರವಸೆ ನೀಡಿದರು.

ಬಸವಣ್ಣ, ಮಹಾತ್ಮಾ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್​ ಭಾವಚಿತ್ರಗಳನ್ನು ಸರ್ಕಾರಿ ಕಚೇರಿಗಳಲ್ಲಿ ಭಾವಚಿತ್ರ ಹಾಕಲಾಗಿದೆ. ಅಭಿವೃದ್ಧಿ ಮಾದರಿಗೆ ಸಾಮಾಜಿಕ ನ್ಯಾಯದ ಕನಸುಗಾರ ಬಸವಣ್ಣನವರ ಬಹುಭಾಷೆ,  ಬಹುಸಂಸ್ಕೃತಿ, ಬಹುಮಾದರಿಯ ಬಹುತ್ವ ವ್ಯವಸ್ಥೆ ಸ್ಥಾಪಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

ಕೌಶಲ್ಯ ಕರ್ನಾಟಕ ಕಾರ್ಯಕ್ರಮ ಯೋಜನೆಯಡಿ ಪ್ರತಿ ವರ್ಷ 5 ಲಕ್ಷ ಯುವಜನತೆಗೆ ತರಬೇತಿ ನೀಡಲಾಗುವುದು. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ ನೀಡಲಾಗಿದೆ ಎಂದರು.

 2016ನೇ ಸಾಲಿನಲ್ಲಿ 1.6  ಲಕ್ಷ ಉದ್ಯೋಗ ಸೃಷ್ಟಿಯಾಗಿತ್ತು. ಅಡುಗೆ ಅನಿಲ ಇಲ್ಲದ ಕುಟುಂಬಗಳಿಗೆ ಉಚಿತ ಗ್ಯಾಸ್​ ಸಿಲಿಂಡರ್, ಸೀಮೆಎಣ್ಣೆ ಮುಕ್ತ ರಾಜ್ಯ ನಿರ್ಮಾಣಕ್ಕೆ ಯೋಜನೆ ಶುರುವಾಗಿದೆ ಎಂದು ಸಿಎಂ ಹೇಳಿದರು.

ಕೃಷಿಗೆ ರಾಜ್ಯ ಸರ್ಕಾರ 40 ಸಾವಿರ ಕೋಟಿ ಅನುದಾನ ಮೀಸಲಿಟ್ಟಿದೆ.  ರಾಜ್ಯದಲ್ಲಿ 1.67 ಲಕ್ಷಕ್ಕೂ ಹೆಚ್ಚು ಕೃಷಿ ಹೊಂಡ ನಿರ್ಮಾಣ ಮಾಡಲಾಗಿದೆ. 2,500 ಪಾಲಿ ಹೌಸ್​ ನಿರ್ಮಾಣ ಮಾಡಲಾಗಿದೆ ಎಂದರು.

ಹಾಲು ಉತ್ಪಾದಕರಿಗೆ 5 ರು.  ಪ್ರೋತ್ಸಾಹಧನ, ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ರುಗಳ ವರೆಗೆ ಸಾಲ ಹಾಗೂ ಗುಡಿಸಲು ಮುಕ್ತ ರಾಜ್ಯ ನಿರ್ಮಾಣಕ್ಕೆ 11.75 ಲಕ್ಷ ಮನೆ ನಿರ್ಮಾಣದ ಗುರಿ ಹೊಂದಲಾಗಿದೆ. ಈ ಪೈಕಿ ಈ ವರ್ಷವೇ 7 ಲಕ್ಷ ಮನೆಗಳ ನಿರ್ಮಾಣ  ಮಾಡಲಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯದಲ್ಲಿ 9,300 ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ ಕಾರ್ಯಕ್ರಮ ರೂಪಿಸಲಾಗಿದ್ದು, ಈಗಾಗಲೇ ಅವುಗಳ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ. ಶೌಚಾಲಯಕ್ಕಾಗಿ ಸಮರ ಕಾರ್ಯಕ್ರಮದಡಿ 28 ಲಕ್ಷ ಶೌಚಾಲಯ  ನಿರ್ಮಾಣ, 2,500 ಗ್ರಾಮಪಂಚಾಯತ್​ ಗಳಿಗೆ ವೈಫೈ ಸೌಲಭ್ಯ, ಉದ್ಯೋಗ ಖಾತ್ರಿ ಯೋಜನೆಯಡಿ 52.7 ಲಕ್ಷ ಕುಟುಂಬಕ್ಕೆ ಉದ್ಯೋಗ, 2016ನೇ ಸಾಲಿನಲ್ಲಿ 1,54,173 ಕೋಟಿ ಬಂಡವಾಳ ಹೂಡಿಕೆ ಮಾಡಲಾಗುತ್ತಿದೆ ಎಂದರು.

ಯಶಸ್ವಿನಿ ಯೋಜನೆಯಡಿ 93 ಲಕ್ಷ ಸದಸ್ಯರ ನೋಂದಣಿ. ಯಶಸ್ವಿನಿ  ಯೋಜನೆಗೆ 555 ಕೋಟಿ ವೆಚ್ಚ ಭರಿಸಲಾಗಿದೆ. ಅಂತೆಯೇ 25 ಕೋಟಿ ರು. ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಸ್ಥಾಪನೆಯ ಗುರಿ ಹೊಂದಲಾಗಿದೆ ಎಂದು ಸಿಎಂ ಹೇಳಿದರು.

ಮೊದಲನೆ ಹಂತದ ಮೆಟ್ರೋವನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಲಾಗಿದ್ದು,  ಮೊದಲ ಹಂತದಲ್ಲಿ 42.3 ಕಿ.ಮೀ ಉದ್ದದ ಮೆಟ್ರೋ ಯೋಜನೆ ಸಿದ್ಧವಾಗಿದೆ. 2ನೇ ಹಂತದಲ್ಲಿ 72 ಕಿ.ಮೀ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, 2020ರ ವೇಳೆಗೆ 2ನೇ ಹಂತದ ಮೆಟ್ರೋ ಪೂರ್ಣಗೊಳ್ಳಲಿದೆ. ಇದೀಗ 3ನೇ ಹಂತದ  ಮೆಟ್ರೋಗೆ ಚಿಂತಿಸುತ್ತಿದ್ದು, 3ನೇ ಹಂತದಲ್ಲಿ 92 ಕಿ.ಮೀ ಮೆಟ್ರೋ ಯೋಜನೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಹೇಳಿದರು.

ಸರ್ಕಾರದ ಬಹು ಉದ್ದೇಶಿತ ಇಂದಿರಾ ಕ್ಯಾಂಟೀನ್ ನಾಳೆಯಿಂದಲೇ ಆರಂಭವಾಗಲಿದ್ದು, ನಾಳೆಯೇ 101 ಇಂದಿರಾ ಕ್ಯಾಂಟೀನ್ ಗಳು​ ಆರಂಭವಾಗಲಿದೆ. ಬೆಂಗಳೂರಿನ ಎಲ್ಲ 198 ವಾರ್ಡ್​ಗಳಲ್ಲಿ ಇಂದಿರಾ ಕ್ಯಾಂಟೀನ್​  ಪ್ರಾರಂಭವಾಗಲಿದೆ ಎಂದು ಹೇಳಿದರು.

ಸಮಾನ ಶಿಕ್ಷಣದ ಕನಸು ಸಾಕಾರಗೊಳಿಸಲು ಸರ್ಕಾರ ಕ್ರಮಕೈಗೊಳ್ಳಲಾಗಿದ್ದು, 62.59 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, 47.45 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, 1.5 ಲಕ್ಷ  ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್​ಟಾಪ್ ನೀಡಲಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.​

ಸರ್ವೋದಯ ಅಭಿವೃದ್ಧಿ ಮಾದರಿ, ಹಸಿವು ಮುಕ್ತ ಕರ್ನಾಟಕ ನಮ್ಮ ಧ್ಯೇಯವಾಗಿದ್ದು ಮೂರು ವರ್ಷಗಳ ಬರಗಾಲ ಇದ್ದರೂ ಅನ್ನಕ್ಕಾಗಿ ಪರದಾಡುವ ಪರಿಸ್ಥಿತಿ ಬರಲಿಲ್ಲ. ಕೋಮುವಾದ ಹೆಸರಲ್ಲಿ ಧರ್ಮ ರಕ್ಷಣೆಗೆ ನಮ್ಮ ವಿರೋಧವಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಬಹುಮುಖ್ಯವಾಗಿ ಕ್ರಾಂತಿಕಾರಿಯಾದ ‘ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ವಿಧೇಯಕ’ದ ಮೂಲಕ ರಾಜ್ಯದ ಒಟ್ಟು 58,000 ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ ಅಲ್ಲಿನ ನಿವಾಸಿಗಳು ಆಸ್ತಿ ಮಾಲೀಕತ್ವಕ್ಕೆ ಹಕ್ಕುದಾರರಾಗಲು ಅವಕಾಶ ಕಲ್ಪಿಸಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಇದು ಲಂಬಾಣಿ ತಾಂಡಾ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ಕುರುಬರಹಟ್ಟಿ, ನಾಯಕನಹಟ್ಟಿ, ಮಜಾರೆ ಗ್ರಾಮ, ಹಾಡಿ, ದೊಡ್ಡಿ, ಪಾಳ್ಯ, ಕ್ಯಾಂಪ್, ಕಾಲೋನಿಗಳ ನಿವಾಸಿಗಳಿಗೆ ನಿಜ ಅರ್ಥದಲ್ಲಿ ಆಸ್ತಿ ಹಕ್ಕಿನ ಸ್ವಾತಂತ್ರ್ಯವನ್ನು ನೀಡಿದೆ ಎಂದು ಸಿದ್ದರಾಮಯ್ಯ ಹೇಳಿದರು

ರಾಜ್ಯದ ಅತ್ಯಂತ ಪ್ರತಿಭಾವಂತ ಒಂದು ಸಾವಿರ ಯುವ ಕ್ರೀಡಾಪಟುಗಳನ್ನು ಗುರುತಿಸಿ, ಅವರಿಗೆ ಅಗತ್ಯ ಆರ್ಥಿಕ ಮತ್ತಿತರ ಬೆಂಬಲವನ್ನು ನೀಡಲು ‘ಕರ್ನಾಟಕ ಸಹಸ್ರ ಕ್ರೀಡಾ ಪ್ರತಿಭಾ ಯೋಜನೆ’ಯನ್ನು ಪ್ರಸ್ತುತ ಸಾಲಿನಲ್ಲಿ ಜಾರಿಗೆ ತರಲಾಗುತ್ತಿದೆ. ಇದಕ್ಕಾಗಿ ಹತ್ತು ಕೋಟಿ ರೂ ಮೀಸಲಿರಿಸಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಕೋಮುವಾದ ಹಾಗೂ ಜಾತಿವಾದವೂ ಸೇರಿದಂತೆ ಬಹುರೂಪಿ ಫ್ಯಾಸಿಸಂ ನಾಲ್ಕು ದಿಕ್ಕುಗಳಿಂದಲೂ ಆವರಿಸುತ್ತಿರುವ ದಿನಗಳಲ್ಲಿ ನಾವಿದ್ದೇವೆ. ಇದು ಜಾತಿ ಹಾಗೂ ಧರ್ಮಗಳ ಭೇದವಿಲ್ಲದೆ ಬೆಳೆಯುತ್ತಿರುವುದೂ ಕೂಡಾ ಆತಂಕಕಾರಿ ಸಂಗತಿಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಧರ್ಮ ವೈಯಕ್ತಿಕವಾದುದು. ಅದನ್ನು ವ್ಯಕ್ತಿ, ಸಮುದಾಯ ಮತ್ತು ಕೋಮುಗಳ ನಡುವೆ ದ್ವೇಷ ಸೃಷ್ಟಿಸಿ ಆ ಮೂಲಕ ರಾಜಕೀಯ ಲಾಭ ಪಡೆಯುವ ಸಾಧನಗಳಾಗಿ ಬಳಸಿಕೊಳ್ಳುವುದು ಧರ್ಮದ್ರೋಹದ ಕೆಲಸ. ಇಂತಹ ಕೃತ್ಯಗಳಲ್ಲಿ ತೊಡಗಿರುವ ದೇಶ ವಿರೋಧಿಗಳ ಹುನ್ನಾರಗಳನ್ನು ವಿಫಲಗೊಳಿಸುತ್ತೇವೆ ಎಂದು ಪ್ರತಿಯೊಬ್ಬ ಪ್ರಜೆಯೂ ಈ ದಿನ ಪಣತೊಡಬೇಕಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ನಮ್ಮದು ಸರ್ವರನ್ನೂ ಒಳಗೊಂಡಿರುವ, ಸರ್ವರನ್ನೂ ಬೆಸೆಯುವ ಮತ್ತು ಸರ್ವರಿಗೂ ಸಮಪಾಲು-ಸಮಬಾಳು ನೀಡುವ, ನಾಡಿನ ಪ್ರತಿಯೊಬ್ಬ ಪ್ರಜೆಯ ಜೀವನಮಟ್ಟ ಸುಧಾರಣೆಯನ್ನು ಗುರಿಯಾಗಿಟ್ಟು ಕೊಂಡ ಸರ್ವೋದಯ ತತ್ವದ ಅಭಿವೃದ್ದಿ ಮಾದರಿ. ಇದನ್ನು ನಾನು `ಕರ್ನಾಟಕ ಅಭಿವೃದ್ದಿ ಮಾದರಿ’ ಎಂದು ಹೆಮ್ಮೆಯಿಂದ ಕರೆಯುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ:
►►'ಚಲ್ತಾ ಹೈ' ಬಿಡಿ. 'ಬದಲ್ ಸಕ್ತಾ ಹೈ' ರೂಢಿಸಿಕೊಳ್ಳಿ: ಮೋದಿ ಕರೆ
http://bit.ly/2i1UzD9

Related Tags: Siddaramiah, Karnata Chief Minister, Independence Speech 2017
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ