ಬಿಸಿಯೂಟ ಬೇಡವೆಂದು ಬರೆದುಕೊಟ್ಟಿದ್ದ ಭಟ್ಟರು: ರಮಾನಾಥ ರೈ

ಕರಾವಳಿ ಕರ್ನಾಟಕ ವರದಿ
ಮಂಗಳೂರು:
ಮಕ್ಕಳ ಹೊಟ್ಟೆಗೆ ಕನ್ನ ಹಾಕಿದ ಸಿದ್ದರಾಮಯ್ಯ ಸರ್ಕಾರ ಎಂದು ಆರೋಪಿಸುತ್ತಾ ಶಾಲಾ ಮಕ್ಕಳ ಕೈಯಲ್ಲಿ ತಟ್ಟೆ ಕೊಟ್ಟು ಭಿಕ್ಷೆ ಬೇಡಿಸುವ ಪ್ರಭಾಕರ ಭಟ್ಟರು ಮಕ್ಕಳ ಅಕ್ಷರ ದಾಸೋಹಕ್ಕಾಗಿ ಸರ್ಕಾರಕ್ಕೆ ಅರ್ಜಿ ಕೊಡಿಸುವ ಕೆಲಸ ಮಾಡಿಸಲಿ. ಅದನ್ನು ಕೊಡಿಸುವ ವ್ಯವಸ್ಥೆಯನ್ನು ಸಚಿವನಾಗಿ ನಾನು ಮಾಡುತ್ತೇನೆ ಎಂದು ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಪ್ರಭಾಕರ ಭಟ್ಟರಿಗೆ ಸವಾಲು ಹಾಕಿದ್ದಾರೆ.

ಹಿಂದೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ 20 ಶಾಲೆಗಳಿಗೆ ನೆರವು ನೀಡುವುದನ್ನು ಸ್ಥಗಿತಗೊಳಿಸಲಾಗಿತ್ತು. ಆಗ ಏಕೆ ಯಾರೂ ಪ್ರತಿಭಟನೆ ನಡೆಸಿರಲಿಲ್ಲ ಎಂದು ಅವರು ಪ್ರಶ್ನಿಸಿದರು.

ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರ ಮತ್ತು ಪುಣಚದ ಶ್ರೀದೇವಿ ವಿದ್ಯಾ ಕೇಂದ್ರಗಳಿಗೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ನೆರವು ನೀಡುವುದನ್ನು ಸ್ಥಗಿತಗೊಳಿಸಿದ ನಂತರ ಉಂಟಾಗಿರುವ ವಿವಾದದ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. 

ರಾಜ್ಯ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಕಲ್ಲಡ್ಕದ ಶ್ರೀರಾಮ ಪ್ರೌಢಶಾಲೆ ಮತ್ತು ಪುಣಚದ ಶ್ರೀದೇವಿ ಪ್ರೌಢಶಾಲೆಗಳು ಅರ್ಜಿ ಸಲ್ಲಿಸಿದರೆ ಎರಡೂ ಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಬಿಸಿಯೂಟ ಪೂರೈಕೆ ಮಾಡುತ್ತದೆ ಎಂದರು

ದ್ವೇಷದ ರಾಜಕಾರಣ ಮಾಡುವುದಿಲ್ಲ
ಕಲ್ಲಡ್ಕ ಪ್ರಭಾಕರ ಭಟ್ಟರು ನಡೆಸುತ್ತಿರುವ ಶಾಲೆಗೆ ಕಾನೂನುಬಾಹಿರವಾಗಿ ಕೊಲ್ಲೂರು ದೇವಸ್ಥಾನದಿಂದ ಸಂದಾಯವಾಗುತ್ತಿರುವ ಆರ್ಥಿಕ ನೆರವಿಗೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದ್ದು, ಹಲವಾರು ವಿವಾದಗಳಿಗೆ ಕಾರಣವಾಗಿದೆ.
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ– 1999ರ ಸೆಕ್ಷನ್‌ 19ಕ್ಕೆ ವಿರುದ್ಧವಾಗಿ ಎರಡೂ ಶಾಲೆಗಳಿಗೆ ಕೊಲ್ಲೂರು ದೇವಸ್ಥಾನದ ಹಣ ನೀಡಲಾಗುತ್ತಿತ್ತು.

ದೇವಸ್ಥಾನಗಳ ಆಡಳಿತ ನಿರ್ವಹಣೆಗಾಗಿ ರಚಿಸಿರುವ ರಾಜ್ಯ ಧಾರ್ಮಿಕ ಪರಿಷತ್‌ ನಿರ್ಧಾರದಂತೆ ಶಾಲೆಗಳಿಗೆ ನೆರವು ಸ್ಥಗಿತಗೊಳಿಸಲಾಗಿದೆ. ಈ ನಿರ್ಧಾರಕ್ಕೂ ರಾಜ್ಯ ಸರ್ಕಾರಕ್ಕೂ ಸಂಬಂಧವಿಲ್ಲ. ರಾಜ್ಯ ಸರ್ಕಾರ ಯಾರ ಬಗ್ಗೆಯೂ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಮಕ್ಕಳ ಅನ್ನಕ್ಕೆ ಕನ್ನ ಹಾಕಿದ್ದು ಪ್ರಭಾಕರ ಭಟ್ಟರು
‌ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾನು ಶಾಲಾ ಮಕ್ಕಳ ಅನ್ನ ಕಸಿದಿದ್ದೇವೆ ಎಂಬ ಅಪಪ್ರಚಾರವನ್ನು ಎಲ್ಲಡೆ ಮಾಡಲಾಗುತ್ತಿದೆ. ಶಾಲಾ ಮಕ್ಕಳ ಅನ್ನಕ್ಕೆ ಕನ್ನ ಹಾಕುವ ಕೆಲಸ ನಾವು ಎಂದೂ ಮಾಡಿಲ್ಲ.

ಶಾಲಾ ಮಕ್ಕಳ ಅನ್ನಕ್ಕೆ ಕನ್ನ ಹಾಕಿದ್ದು ಪ್ರಭಾಕರ ಭಟ್ಟರು. ಇಲಾಖೆಯಿಂದ ಮಕ್ಕಳಿಗೆ ನೀಡುವ ಬಿಸಿಯೂಟ ಬೇಡವೆಂದು ಪ್ರಭಾಕರ ಭಟ್‌ ಲಿಖಿತವಾಗಿ ನಿರಾಕರಿಸಿದ್ದರು ಎಂದು ಉಸ್ತುವಾರಿ ಸಚಿವ ರಮಾನಾಥ ರೈ ಆರೋಪಿಸಿದರು.

ಹಣ ದುರ್ಬಳಕೆ: ತನಿಖೆಯಾಗಲಿ
ಶಿಕ್ಷಕರ ಸಂಬಳಕ್ಕೆ ಶಿಕ್ಷಣ ಇಲಾಖೆಯ ಅನುದಾನ ಪಡೆಯುವವರು ಅದೇ ಇಲಾಖೆ ಬಿಸಿಯೂಟ ನಿರಾಕರಿಸಿ, ದೇವಸ್ಥಾನದ ಹಣ ಪಡೆದದ್ದು ಏಕೆ ಎಂದು ಪ್ರಶ್ನಿಸಿದ ಅವರು, ಉಳಿದ ಎಲ್ಲ ಶಾಲೆಗಳಿಗೂ ಮಕ್ಕಳಿಗೆ ಊಟ ನೀಡಲು ಆಹಾರ ಧಾನ್ಯ ಮತ್ತು ಪಡಿತರ ವಸ್ತುಗಳನ್ನು ಮಾತ್ರ ಒದಗಿಸಲಾಗುತ್ತದೆ.

ಶ್ರೀರಾಮ ವಿದ್ಯಾ ಕೇಂದ್ರ ಟ್ರಸ್ಟ್ ದುರ್ಬಳಕೆ ಮಾಡುವ ಉದ್ದೇಶಕ್ಕಾಗಿಯೇ ನೇರವಾಗಿ ಹಣ ಪಡೆದುಕೊಂಡಿದೆ. ಈ ಬಗ್ಗೆಯೂ ತನಿಖೆ ನಡೆಸಬೇಕಿದೆ ಎಂದರು.

ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಿ
ಕಲ್ಲಡ್ಕ ಶಾಲೆಯ 100 ಮೀಟರ್‌ ದೂರದಲ್ಲೇ ಸರ್ಕಾರಿ ಶಾಲೆ ಇದೆ. ಅಲ್ಲಿಗೆ ಮಕ್ಕಳನ್ನು ಕಳುಹಿಸಿದರೆ ಸಮವಸ್ತ್ರ, ಶೂ, ಪುಸ್ತಕ, ಬಿಸಿಯೂಟ, ಸೈಕಲ್‌ ಎಲ್ಲವೂ ಸರ್ಕಾರದಿಂದ ದೊರೆಯುತ್ತದೆ.

ಪೋಷಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಬೇಕು ಎಂದು ಸಚಿವರು ಮನವಿ ಮಾಡಿದರು.

ಕಲ್ಲಡ್ಕ ಶಾಲೆಗೆ ಬಂಡವಾಳಶಾಹಿಗಳಿಂದ ಅಪಾರ ದೇಣಿಗೆ
ಕಲ್ಲಡ್ಕ ಶಾಲೆ ಬಡತನದಲ್ಲೇನೂ ಇಲ್ಲ. ಹಾಲಿವುಡ್, ಬಾಲಿವುಡ್ ಸಿನೆಮಾ ನಟರು, ದೇಶದ ದೊಡ್ಡ ಬಂಡವಾಳಷಾಹಿಗಳಿಂದ ಟ್ರಸ್ಟ್‌ನವರು ಅಪಾರ ದೇಣಿಗೆ ಪಡೆದಿದ್ದಾರೆ.

ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಜೈಲುವಾಸ ಅನುಭವಿಸಿದ ಜನಾರ್ದನ ರೆಡ್ಡಿ ಅವರಿಂದಲೂ ದೇಣಿಗೆ ಪಡೆಯಲಾಗಿದೆ ಎಂದರು.

ಇದನ್ನೂ ಓದಿ:
►►ಕಲ್ಲಡ್ಕ ಶಾಲೆಗೆ ನೆರವು ನಿಲ್ಲಿಸಿದ್ದು ಕ್ರೌರ್ಯ. ಭಟ್ಟರು ದರೋಡೆಕೋರರಲ್ಲ: ಜನಾರ್ದನ ಪೂಜಾರಿ:
http://bit.ly/2vP11Db
►►ಕಲ್ಲಡ್ಕ ಶಾಲೆಗೆ ಕೊಟ್ಟ ಹಣ ದುರುಪಯೋಗವಾಗಿದೆ. ವಸೂಲಿ ಮಾಡಲಾಗುವುದು: ರಮಾನಾಥ ರೈ: http://bit.ly/2fzuV7C
►►ಕೊಲ್ಲೂರು ನೆರವು ಸ್ಥಗಿತ: ಕಲ್ಲಡ್ಕ ಶಾಲಾ ಮಕ್ಕಳಿಂದ ಖಾಲಿ ತಟ್ಟೆ ಬಡಿದು ಪ್ರತಿಭಟನೆ: http://bit.ly/2uunaqv
►►ಕೊಲ್ಲೂರು ದೇವಳದ ನೆರವು ಸ್ಥಗಿತ: ಕಲ್ಲಡ್ಕ ಪ್ರಭಾಕರ ಭಟ್ ಹಾಕಿದ ಸವಾಲು ಏನು ಗೊತ್ತೆ?: http://bit.ly/2vmrZ2l
►►ಕಲ್ಲಡ್ಕ ಭಟ್ಟರ ಶಾಲೆಗೆ ಕೊಲ್ಲೂರಿನ ನೆರವು ಸ್ಥಗಿತ: ಸಂದಾಯವಾದ ಒಟ್ಟು ಮೊತ್ತವೆಷ್ಟು ಗೊತ್ತೆ? ಅಬ್ಬಬ್ಬ!: http://bit.ly/2ukYD71

Related Tags: Mangaluru, Ramanath Rai, Bhat''s Schools, Prabhakar Bhat Refused Mid Day Meal, Ramanath Rai, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ