ಪ್ರೇಯಸಿಯ ಜೊತೆಗಿದ್ದ ಫೋಟೊ ಫೇಸ್‌ಬುಕ್ಕಿಗೆ: ಆರೋಪಿ ಜೈಲಿಗೆ

ಕರಾವಳಿ ಕರ್ನಾಟಕ ವರದಿ
ಮಂಗಳೂರು:
ಪ್ರೇಯಸಿ ವಂಚಿಸಿದಳೆಂದು ಆರೋಪಿಸಿ ಆಕೆಯೊಂದಿಗಿನ ಖಾಸಗಿ ಫೋಟೊಗಳನ್ನು ಅಕ್ರಮವಾಗಿ ಫೇಸ್‌ಬುಕ್‌ನಲ್ಲಿ ಅಪ್ಲೋಡ್ ಮಾಡಿದ ಆರೋಪಿಗೆ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 1 ವರ್ಷ ಕಠಿಣ ಸಜೆ ಮತ್ತು 12 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಸುಳ್ಯ ಆಲೆಟ್ಟಿ ಮೊರಂಗಲ್ಲು ನಿವಾಸಿ ಕುಸುಮಾಧರ (30) ಶಿಕ್ಷೆಗೊಳಗಾದ ಆರೋಪಿಯಾಗಿದ್ದಾನೆ.

ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಡಿ.ಟಿ. ಪುಟ್ಟರಂಗಸ್ವಾಮಿ ಅವರು ಆರೋಪಿಗೆ ಐಪಿಸಿ ಸೆಕ್ಷನ್ 292(2ಎ) ಅನ್ವಯ 6 ತಿಂಗಳು ಕಠಿನ ಸಜೆ ಮತ್ತು 2,000 ರೂ. ದಂಡ ಹಾಗೂ ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 67(ಎ) ಅನ್ವಯ 1ವರ್ಷ ಕಠಿಣ ಸಜೆ ಮತ್ತು 10,000 ರೂ. ದಂಡ ವಿಧಿಸಿ ಆ. 11ರಂದು ತೀರ್ಪು ನೀಡಿದ್ದಾರೆ.

ಎರಡೂ ಶಿಕ್ಷೆಗಳನ್ನು ಏಕಕಾಲದಲ್ಲಿ ಹಾಗೂ ದಂಡ ತೆರಲು ತಪ್ಪಿದಲ್ಲಿ ಹೆಚ್ಚುವರಿಯಾಗಿ ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ತಿಳಿಸಿದ್ದಾರೆ.

ಸಂತ್ರಸ್ತ ಯುವತಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ ಪರಿಹಾರ ಪಡೆಯಲು ಅವಕಾಶವಿದೆ ಎಂದು ನ್ಯಾಯಾಲಯ ಹೇಳಿದೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಟೀ ಸ್ಟಾಲ್ ವ್ಯವಹಾರ ನಡೆಸುತ್ತಿರುವುದಾಗಿ ನಂಬಿಸಿದ್ದ ಕುಸುಮಾಧರ, ಸುಳ್ಯದ ಯುವತಿಯೋರ್ವಳೊಂದಿಗೆ ಸಮಾರಂಭವೊಂದರಲ್ಲಿ ಸ್ನೇಹ ಬೆಳೆಸಿದ್ದ. ಮೊಬೈಲ್ ಮಾತುಕತೆಯಿಂದ ಪರಿಚಯ ಪ್ರೇಮಕ್ಕೆ ತಿರುಗಿತ್ತು. 

ಉದ್ಯೋಗಿಯಾಗಿದ್ದ ಯುವತಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಎ.14, 2013 ರಂದು ಕುಸುಮಾಧರ ಆಕೆಯ ಬಾಡಿಗೆ ಮನೆಗೆ ಬಂದಿದ್ದ. ಸಂಜೆ ಬಸ್ ಸಿಗಲಿಲ್ಲ ಎಂಬ ನೆಪದಲ್ಲಿ ಉಳಿದುಕೊಂಡಿದ್ದ.  ಮದುವೆಯಾಗುವುದಾಗಿ ನಂಬಿಸಿ ರಾತ್ರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಅತ್ಯಾಚಾರವನ್ನು ತನ್ನ ಮೊಬೈಲ್‌ನಲ್ಲಿ ಯುವತಿಗೆ ಗೊತ್ತಾಗದಂತೆ ರೆಕಾರ್ಡ್ ಮಾಡಿದ್ದ.

ಘಟನೆ ನಡೆದು ಕೆಲವು ದಿನಗಳ ಬಳಿಕ ಯುವತಿಗೆ ಕುಸುಮಾಧರನ ನಡತೆ ಮೇಲೆ ಸಂಶಯ ಬಂದಿತ್ತು. ಆತ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಸ್ವಂತ ಟೀ ಸ್ಟಾಲ್ ನಡೆಸುತ್ತಿಲ್ಲ, ಅಲ್ಲಿ ಹೊಟೇಲೊಂದರಲ್ಲಿ ಕೆಲಸಕ್ಕಿದ್ದಾನೆಂಬುದು ತಿಳಿಯಿತು. ಈತನ ಮೋಸದಿಂದ ಮನನೊಂದ ಆಕೆ ಆತನಿಂದ ದೂರವಾಗಲು ಯತ್ನಿಸಿದ್ದಳು. 

ಕುಸುಮಾಧರ, ತನ್ನ ಬಳಿ ಆಕೆಯ ಅಶ್ಲೀಲ ವಿಡಿಯೋಗಳಿವೆ. 5 ಲಕ್ಷ ರೂ. ಹಣ ನೀಡದಿದ್ದರೆ ಅದನ್ನು ಫೇಸ್‌ಬುಕ್‌ಗೆ ಅಪ್ಲೋಡ್ ಮಾಡುವೆ ಎಂದು ಬೆದರಿಕೆ ಹಾಕಿದ್ದ. ಆದರೆ ಯುವತಿ ಆತನ ಬೆದರಿಕೆಗೆ ಮಣಿಯದೇ ಆತನಿಂದ ದೂರವಾಗಲು ದೃಢ ನಿರ್ಧಾರ ಮಾಡಿದ್ದಳು.

ಕುಸುಮಾಧರ ಜೂ.17, 2013 ರಂದು "ಮೊರಂಗಲ್ಸನ್ ಪಾಟಾಳಿ' ಎಂಬ ಹೆಸರಿನಲ್ಲಿ ಫೇಸ್‌ಬು ಅಕೌಂಟ್ ತೆರೆದು ಅದರಲ್ಲಿ ಯುವತಿಯ ಅಶ್ಲೀಲ ವೀಡಿಯೋ ಕ್ಲಿಪ್ಪಿಂಗ್ ಅಪ್ಲೋಡ್ ಮಾಡಿದ್ದ. ಇದು ಯುವತಿಯ ಸಂಬಂಧಿಕರಿಗೆ ಗೊತ್ತಾದ ಬಳಿಕ ಜೂ.19ರಂದು ಯುವತಿ ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

ಸುಳ್ಯ ಪೊಲೀಸ್ ಇನ್ಸ್‌ಪೆಕ್ಟರ್ ಸತೀಶ್ ತನಿಖೆ ನಡೆಸಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದಲ್ಲಿ ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಓಲ್ಗಾ ಮಾರ್ಗರೆಟ್ ಕ್ರಾಸ್ತಾ ಅವರು ವಾದಿಸಿದ್ದರು.

19 ಸಾಕ್ಷಿಗಳ ವಿಚಾರಣೆ
ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಅಧಿಕಾರಿ ಸೇರಿದಂತೆ 19 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಫೇಸ್‌ಬುಕ್ ಸಂಸ್ಥೆಯಿಂದ ಆರೋಪಿಯ ಬಗ್ಗೆ ಐಪಿ ದಾಖಲೆ ಮಾಹಿತಿ ಪಡೆಯಲಾಗಿದೆ. ಆರೋಪಿಯ ಮೊಬೈಲ್ ಫೋನ್ ಸಂಬಂಧಿಸಿ ಏರ್ಟೆಲ್ ಸಂಸ್ಥೆಯ ನೋಡಲ್ ಆಫೀಸರ್ ಕೂಡ ಸಾಕ್ಷಿ ನುಡಿದಿದ್ದಾರೆ.

ಮೊಬೈಲ್ ಫೋನ್ ಸೆಟ್ ದಾಖಲೆ, ಎಫ್ಎಸ್ಎಲ್ ವರದಿ ಸೇರಿದಂತೆ 26 ದಾಖಲೆಗಳನ್ನು ನ್ಯಾಯಾಲಯ ಪರಿಶೀಲಿಸಿದೆ.

Related Tags: Mangaluru, Man Jailed, Uploading Obscene Pictures, lover, Facebook, Crime, Sixth Additional District and Sessions Court, Mangaluru Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ