ಮದ್ರಸಾದಲ್ಲಿ ಸ್ವಾತಂತ್ರ್ಯದಿನ ಕಡ್ಡಾಯ: ಯೋಗಿ ಖಡಕ್ ಆದೇಶ

ಕರಾವಳಿ ಕರ್ನಾಟಕ ವರದಿ
ಲಕ್ನೋ:
ರಾಜ್ಯದ ಎಲ್ಲಾ ಮದರಸಾಗಳಲ್ಲಿ ಆಗಸ್ಟ್‌ 15ರಂದು ಸ್ವಾತಂತ್ರ್ಯದಿನ ಆಚರಿಸಬೇಕು. ಜೊತೆಗೆ ಆಚರಣೆಯ ವಿಡಿಯೋ ಚಿತ್ರೀಕರಣವನ್ನೂ ಕಡ್ಡಾಯವಾಗಿ ಮಾಡಬೇಕು ಎಂದು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ನೇತೃತ್ವದ ಬಿಜೆಪಿ ಸರ್ಕಾರ ಕಟ್ಟುನಿಟ್ಟಿನ ಆದೇಶವೊಂದನ್ನು ಹೊರಡಿಸಿದೆ.

ಉತ್ತರ ಪ್ರದೇಶದ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಲಕ್ಷ್ಮೀನಾರಾಯಣ್‌ ಚೌಧರಿ ಮದರಸಾಗಳಿಗೆ ಈ ಆದೇಶ ಹೊರಡಿಸಿದ್ದಾರೆ.

ಸ್ವಾತಂತ್ರ್ಯ ದಿನೋತ್ಸವ ಆಚರಿಸದ ಮದರಸಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಸಚಿವ ಔಲಖ್‌ ಎಚ್ಚರಿಕೆ ನೀಡಿದ್ದಾರೆ.

ಉತ್ತರ ಪ್ರದೇಶದಲ್ಲಿ 8000 ಮದರಸಾಗಳಿದ್ದು, ಈ ಪೈಕಿ 560 ಸರ್ಕಾರಿ ಅನುದಾನಿತ ಮದರಸಾಗಳಾಗಿವೆ ಅಲ್ಲದೆ ಎಲ್ಲ ಮದರಸಾಗಳೂ ಸರ್ಕಾರದಿಂದ ಆರ್ಥಿಕ ನೆರವು ಪಡೆಯುತ್ತಿವೆ. ಹೀಗಾಗಿ ಸ್ವಾತಂತ್ರ್ಯ ದಿನ ಸೇರಿದಂತೆ ಯಾವುದೇ ರಾಷ್ಟ್ರೀಯ ಹಬ್ಬವನ್ನು ದೇಶಭಕ್ತಿ ಹಾಗೂ ಗೌರವದೊಂದಿಗೆ ಆಚರಿಸುವುದು ಮದರಸಾಗಳ ಕರ್ತವ್ಯ ಎಂದೂ ಸಹಾಯಕ ಸಚಿವ ಔಲಖ್‌ ತಾಕೀತು ಮಾಡಿದ್ದಾರೆ.


ಮಕ್ಕಳಿಗೆ ದೇಶದ ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸ, ಹುತಾತ್ಮರ ಬಲಿದಾನಗಳನ್ನು ಪರಿಚಯಿಸುವುದು ಸರ್ಕಾರದ ಉದ್ದೇಶ.

ಮದರಸಾಗಳ ಸ್ವಾತಂತ್ರ್ಯೋತ್ಸವ ಆಚರಣೆಯ ವಿಡಿಯೋಗಳನ್ನು ತಂತ್ರಜ್ಞಾನದ ನೆರವಿನಿಂದ ಎಲ್ಲರಿಗೂ ತಲುಪಿಸಿದರೆ ದೇಶದ ಲಕ್ಷಾಂತರ ಮಕ್ಕಳಿಗೆ ಪ್ರೇರಣೆ ನೀಡಿದಂತಾಗುತ್ತದೆ ಎನ್ನುವ ಮೂಲಕ ಸರ್ಕಾರದ ನಿಲುವನ್ನು ಸಚಿವರು ಸಮರ್ಥಿಸಿಕೊಂಡಿದ್ದಾರೆ.

ಮುಸ್ಲಿಮರ ದೇಶಭಕ್ತಿ ಬಗ್ಗೆ ಅನುಮಾನವೇ?
ಇದೇ ವೇಳೆ ಯೋಗಿ ಸರ್ಕಾರದ ಈ ಆದೇಶಕ್ಕೆ ಸ್ಥಳೀಯ ಮದರಸಾಗಳು ಆಕ್ಷೇಪ ವ್ಯಕ್ತಪಡಿಸಿವೆ. ಆದೇಶದ ಉದ್ದೇಶವಾದರೂ ಏನು ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸದಸ್ಯ ಮೌಲಾನಾ ಖಾಲಿದ್‌ ರಶೀದ್‌ ಫ‌ರಂಗಿ ಮಹ್ಲಿ ಕೇಳಿದ್ದಾರೆ. 

ಈ ಆದೇಶ ರಾಜ್ಯದ ಎಲ್ಲ ಶಾಲೆಗಳಿಗೂ ಅನ್ವಯವೋ ಅಥವಾ ಮದರಸಾಗಳಿಗೆ ಮಾತ್ರ ಸೀಮಿತವೋ? ಒಂದು ವೇಳೆ ಮದರಸಾಗಳಿಗೆ ಸೀಮಿತವಾಗಿದ್ದರೆ, ಮುಸ್ಲಿಮರ ದೇಶಭಕ್ತಿಯನ್ನು ಸರ್ಕಾರ ಅನುಮಾನಿಸುತ್ತಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

Related Tags: UP Madrasa, Celebrate Independence Day, Videograph Event, Submit Video Footage, Uttar Pradesh Government, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ