ಆಕ್ಸಿಜನ್‌ಗೆ ಪಾವತಿ ಮಾಡದ ಯೋಗಿ ಸರ್ಕಾರ: 60 ಮಕ್ಕಳು ಸಾವು

ಕರಾವಳಿ ಕರ್ನಾಟಕ ವರದಿ
ಲಖನೌ:
ಗೋರಖ್‌ಪುರ ಬಿ.ಆರ್‌.ಡಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರೆತೆಯಿಂದಾಗಿ 5 ದಿನಗಳ ಅವಧಿಯಲ್ಲಿ 60 ಮಕ್ಕಳು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ವರದಿಯಾಗಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪ್ರತಿನಿಧಿಸುವ ಗೋರಖ್‌ಪುರ ಲೋಕಸಭಾ ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರ ಸ್ವಕ್ಷೇತ್ರ ಗೋರಖ್‌ಪುರದಲ್ಲಿರುವ ಹಾಗೂ ರಾಜ್ಯ ಸರ್ಕಾರಿ ಸ್ವಾಮ್ಯದ ಬಾಬಾ ರಾಘವ್‌ ದಾಸ್‌ ವೈದ್ಯಕೀಯ ಕಾಲೇಜಿನಲ್ಲಿ ಕಳೆದ ಐದು ದಿನಗಳ ಅವಧಿಯಲ್ಲಿ 60 ಮಕ್ಕಳು ಸಾವಿಗೀಡಾಗಿದ್ದಾರೆ.

ಬುಧವಾರವಷ್ಟೇ ಯೋಗಿ ಆದಿತ್ಯನಾಥ ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದರು. ಮುಖ್ಯಮಂತ್ರಿ ಆಸ್ಪತ್ರೆ ಭೇಟಿ ನೀಡಿದ ಬಳಿಕವೂ 9 ಮಕ್ಕಳು ಸಾವನ್ನಪ್ಪಿರುವುದು ಸರ್ಕಾರದ ವಿರುದ್ದ ಆಕ್ರೋಶ ಕಾರಣವಾಗಿದೆ.

ಆಮ್ಲಜನಕ ಪೂರೈಸುವ ಕಂಪೆನಿಗೆ ಹಣ ಪಾವತಿಸಿಲ್ಲ!
ಆಸ್ಪತ್ರೆಗೆ ಆಮ್ಲಜನಕ ಸಿಲಿಂಡರ್ ಪೂರೈಸುತ್ತಿದ್ದ ಕಂಪೆನಿಗೆ ಅಂದಾಜು ರೂ. 70 ಲಕ್ಷ ಪಾವತಿಸಬೇಕಿದೆ. ಬಾಕಿ ಹಣ ಪಾವತಿಯಾಗದ ಹೊರತು ಆಮ್ಲಜನಕ ಸಿಲಿಂಡರ್ ಪೂರೈಸುವುದಿಲ್ಲ ಎಂದು ಕಂಪೆನಿ ಕೆಲವು ದಿನಗಳಿಂದ ಸಿಲಿಂಡರ್‌ ಪೂರೈಕೆ ಸ್ಥಗಿತಗೊಳಿಸಿದೆ.ಶುಕ್ರವಾರ ಬೆಳಿಗ್ಗೆ ಆಸ್ಪತ್ರೆ ಆಡಳಿತ ಮಂಡಳಿ ಬಾಕಿ ಹಣವನ್ನು ಪಾವತಿಸಿತ್ತು. ಅದಾದ ನಂತರ ಆಮ್ಲಜನಕ ಸಿಲಿಂಡರ್ ಪೂರೈಸುವುದಾಗಿ ಕಂಪೆನಿ ಹೇಳಿತ್ತು. ಅಷ್ಟರಲ್ಲಾಗಲೇ 60 ಅಮಾಯಕ ಮಕ್ಕಳ ಪ್ರಾಣಪಕ್ಷಿ ಹಾರಿ ಹೋಗಿದೆ.

ಈ ಭಾಗದಲ್ಲಿ ಮಕ್ಕಳ ಮೆದುಳು ಸೋಂಕಿಗೆ ಚಿಕಿತ್ಸೆ ನೀಡುವ ಆಸ್ಪತ್ರೆ ಇದೊಂದೇ ಇದೆ. ಹೀಗಾಗಿ ಅಕ್ಕಪಕ್ಕದ ಜಿಲ್ಲೆಗಳ ಮಕ್ಕಳಲ್ಲದೇ ನೆರೆಯ ಬಿಹಾರ ಮತ್ತು ನೇಪಾಳದ ಮಕ್ಕಳು ಇಲ್ಲಿಗೆ ಬರುತ್ತಾರೆ. ಇಡೀ ಆಸ್ಪತ್ರೆಯ ವಾರ್ಡ್‌ಗಳು ಮಕ್ಕಳಿಂದ ತುಂಬಿ ತುಳುಕುತ್ತಿವೆ.

ಈ ನಡುವೆ ಮಕ್ಕಳ ಸಾವಿಗೆ ನಿಖರ ಕಾರಣ ತಿಳಿಯಲು ತನಿಖಾ ಸಮಿತಿ ರಚಿಸಿರುವ ಉತ್ತರಪ್ರದೇಶ ಸರ್ಕಾರ, ಶನಿವಾರ ಸಂಜೆಯೊಳಗೆ ವರದಿ ನೀಡುವಂತೆ ಸಮಿತಿಗೆ ಸೂಚಿಸಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖೀಲೇಶ್‌ ಯಾದವ್‌, ಘಟನೆಗೆ ಸರ್ಕಾರವೇ ನೇರಹೊಣೆ ಎಂದು ಆರೋಪಿಸಿದ್ದಾರೆ.

Related Tags: Gorakhpur Hospital Tragedy, Non-Payment, Oxygen Bill, Death of 60 Children, Yogi Sarkar, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ