ಖಾಸಗಿ ಬಸ್‌ಗಳಿಂದ ಡಬಲ್ ವಸೂಲಿ. ಕಣ್ಮುಚ್ಚಿ ಕುಳಿತ ಸರ್ಕಾರ

ಕರಾವಳಿ ಕರ್ನಾಟಕ ವರದಿ
ಬೆಂಗಳೂರು:
ಸರಣಿ ರಜೆಗಳ ಪರಿಣಾಮವಾಗಿ ನಗರದಿಂದ ವಿವಿಧ ರಾಜ್ಯ ಹಾಗೂ ಜಿಲ್ಲೆಗಳಿಗೆ ಹೊರಡುವ ಖಾಸಗಿ ಬಸ್ ಪ್ರಯಾಣ ದರ ದುಪ್ಪಟ್ಟು ಏರಿಕೆಯಾಗಿದೆ.

ಆಗಸ್ಟ್‌ 12ರಿಂದ ನಾಲ್ಕು ದಿನಗಳವರೆಗೆ ಸರ್ಕಾರಿ ಕಚೇರಿ ಹಾಗೂ ಹಲವು ಖಾಸಗಿ ಕಂಪೆನಿಗಳಿಗೆ ರಜೆ ಇರುವುದರಿಂದ ನೌಕರರು, ತಮ್ಮೂರು ಅಥವಾ ಪ್ರವಾಸಕ್ಕೆ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ಖಾಸಗಿ ಬಸ್ ಪ್ರಯಾಣ ದರ ಏರಿಸಲಾಗಿದೆ.

ಆಗಸ್ಟ್‌12ರಂದು ಎರಡನೇ ಶನಿವಾರ, ಮರುದಿನ ಭಾನುವಾರ ರಜೆ ಇದೆ. 14ರಂದು ಕೃಷ್ಣ ಜನ್ಮಾಷ್ಟಮಿಯ ಪ್ರಾದೇಶಿಕ ರಜೆ ಇದೆ. ಅದರ ಮರುದಿನ 15ಕ್ಕೆ ಸ್ವಾತಂತ್ರ್ಯೋತ್ಸವವಿದ್ದು, ಬಹುತೇಕ ನೌಕರರಿಗೆ ರಜೆ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಖಾಸಗಿ ಬಸ್‌ ಕಂಪೆನಿಗಳು ಹವಾನಿಯಂತ್ರಿತ ಸ್ಲೀಪರ್‌, ನಾನ್‌ ಎ.ಸಿ ಸ್ಲೀಪರ್‌, ಎ.ಸಿ ಸೀಟರ್‌ ಹಾಗೂ ನಾನ್‌ ಎ.ಸಿ ಸೀಟರ್‌ ಬಸ್‌ಗಳ ಪ್ರಯಾಣ ದರವನ್ನು ದುಪ್ಪಟ್ಟು ಮಾಡಿವೆ.

ಬೆಂಗಳೂರಿನಿಂದ ಮಂಗಳೂರು, ಕಲಬುರ್ಗಿ, ಹುಬ್ಬಳ್ಳಿ, ಬೆಳಗಾವಿ, ಉತ್ತರ ಕನ್ನಡ ಹಾಗೂ ಗೋವಾ, ಚೆನ್ನೈ, ಹೈದರಾಬಾದ್‌, ಕೊಚ್ಚಿ ಸೇರಿ ಹಲವು ನಗರಗಳಿಗೆ ಹೋಗುವ ಖಾಸಗಿ ಬಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ.

ರಜೆ ಪ್ರಯುಕ್ತ ನಗರದಿಂದ ಹೊರ ಜಿಲ್ಲೆ ಹಾಗೂ ರಾಜ್ಯಗಳಿಗೆ ಸಂಚರಿಸುವ ರೈಲುಗಳ ಬುಕ್ಕಿಂಗ್‌ ಸಹ ಈಗಾಗಲೇ ಮುಕ್ತಾಯವಾಗಿದೆ. ಬಸ್‌ಗಳಿಗಿಂತ ಕಡಿಮೆ ಪ್ರಯಾಣ ದರವಿರುವುದರಿಂದ ಹಲವರು ತಿಂಗಳ ಮುನ್ನವೇ ಟಿಕೆಟ್‌ ಕಾಯ್ದಿರಿಸಿದ್ದಾರೆ. ಹೀಗಾಗಿ ಆಗಸ್ಟ್‌ 11ರಿಂದ 16ರವರೆಗೆ ಎಲ್ಲ ರೈಲುಗಳ ಆಸನಗಳು ಭರ್ತಿಯಾಗಿವೆ. ಪ್ರತಿ ರೈಲಿಗೂ 150ರಿಂದ 300ವರೆಗೂ ವೇಟಿಂಗ್‌ ಪಟ್ಟಿ ಇದೆ.

ಈಗಾಗಲೇ ಟಿಕೆಟ್‌ ಕಾಯ್ದಿರಿಸಿದವರಿಗೆ ಮಾತ್ರ ಆಸನಗಳು ಸಿಗುತ್ತವೆ. ಉಳಿದವರಿಗೆ ಸಿಗುವುದು ಅನುಮಾನ. ಅನಿವಾರ್ಯವಿದ್ದವರು ಜನರಲ್‌ ಬೋಗಿಯಲ್ಲೇ ಪ್ರಯಾಣಿಸಬೇಕಾಗಿದೆ.

ಹೆಚ್ಚುವರಿ ಸರ್ಕಾರಿ ಬಸ್ಸುಗಳು ಲಭ್ಯ
ಪ್ರಯಾಣಿಕರ ಅನುಕೂಲಕ್ಕಾಗಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ರಜೆಗಳ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಇದೇ 11 ಹಾಗೂ 12ರಂದು ನಗರದಿಂದ ವಿವಿಧ ಸ್ಥಳಗಳಿಗೆ 500 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಿದೆ. ರಾಜ್ಯದ ಮತ್ತು ಅಂತರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಇದೇ 15ರಂದು ವಿಶೇಷ ವಾಹನಗಳ ಕಾರ್ಯಾಚರಣೆಗೆ ಅವಕಾಶ ಕಲ್ಪಿಸಲಿದೆ.

ಮೆಜೆಸ್ಟಿಕ್‌ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರ್ಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿಗೆ ಈ ಹೆಚ್ಚುವರಿ ಬಸ್‌ಗಳು ತೆರಳಲಿವೆ.

ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್‌ ಕಾಯ್ದಿರಿಸಿದಲ್ಲಿ ಶೇಕಡ 5ರಷ್ಟು ರಿಯಾಯಿತಿ ನೀಡಲಾಗುವುದು. ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟನ್ನು ಒಟ್ಟಿಗೆ ಕಾಯ್ದಿರಿಸಿದಾಗ, ಬರುವ ಪ್ರಯಾಣ ದರದಲ್ಲಿ ಶೇಕಡ 10ರಷ್ಟು ರಿಯಾಯಿತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ 080-49596666.

Related Tags: Private Bus, Ticket Rate Hike, Serial Holidays, August 15, Independence Day, KSRTC Bus, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ