ಉಪರಾಷ್ಟ್ರಪತಿ ಗೆಲುವಿಗೆ ಟ್ವೀಟ್: ಜಗ್ಗೇಶ್ ವಿರುದ್ಧ ಸಿಡಿದೆದ್ದ ಕನ್ನಡಿಗರು

ಕರಾವಳಿ ಕರ್ನಾಟಕ ವರದಿ
ಬೆಂಗಳೂರು:
ಆಗಾಗೆ ವಿವಾದಾತ್ಮಕ ಟ್ವೀಟ್ ಮಾಡಿ ಸುದ್ದಿಯಲ್ಲಿರುವ ನಟ ಜಗ್ಗೇಶ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಬಿಜೆಪಿ ಹಿರಿಯ ನಾಯಕ ವೆಂಕಯ್ಯ ನಾಯ್ಡು ಅವರು ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ಕುರಿತು ನಟ ಜಗ್ಗೇಶ್ ಮಾಡಿರುವ ಟ್ವೀಟ್‌ಗೆ ಭಾರೀ ವಿರೋಧ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಜಗ್ಗೇಶ್ ವಿರುದ್ದ ಕನ್ನಡಿಗರು ಕಿಡಿಕಾರಿದ್ದಾರೆ.

'ಕರ್ನಾಟಕದಲ್ಲಿ ಅವರನ್ನ ಭಾಷಾ ಭಾವನೆಯಲ್ಲಿ ರಾಜ್ಯಸಭೆಗೆ ಆಕ್ಷೇಪಿಸಿದರು. ಆದರೆ ಇಂದು ಭಾರತಕ್ಕೆ ಉಪ ರಾಷ್ಟ್ರಪತಿ. ಬಾರದು ಬಪ್ಪದು...ಬಪ್ಪದು ತಪ್ಪದು..ಇದೇ ದೇವರ ಲೀಲೆ' ಎಂದು ಟ್ವೀಟ್‌ನಲ್ಲಿ ಜಗ್ಗೇಶ್ ಬರೆದಿದ್ದರು.

ಇದೀಗ ಪರೋಕ್ಷವಾಗಿ ಕನ್ನಡಿಗರಿಗೆ ಅಪಮಾನವಾಗುವ ರೀತಿ ಟ್ವೀಟ್ ಮಾಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಸದ್ಯ ಜಗ್ಗೇಶ್ ಟ್ವೀಟ್‌ಗೆ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ಟ್ವೀಟ್ ಡಿಲೀಟ್ ಮಾಡಿದ್ದಾರೆ.

ರಾಜ್ಯಸಭೆಯ ಚುನಾವಣೆ ವೇಳೆ ಬಿಜೆಪಿ ಈ ಬಾರಿ ಮತ್ತೊಮ್ಮೆ ಕರ್ನಾಟಕದಿಂದ ವೆಂಕಯ್ಯ ನಾಯ್ಡು ಅವರನ್ನು ಕಳುಹಿಸಲು ಮುಂದಾಗಿತ್ತು. ಆದರೆ ಈ ಹಿಂದೆ ಎರಡೂ ಬಾರಿ ರಾಜ್ಯದಿಂದ ಆಯ್ಕೆ ಆಗಿದ್ದರೂ ರಾಜ್ಯಕ್ಕೆ ಏನು ಕೆಲಸ ಮಾಡಿಲ್ಲ ಎಂದು ಕನ್ನಡಿಗರು ಮತ್ತೊಮ್ಮೆ ಆರಿಸಿ ಕಳುಹಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ 'ವೆಂಕಯ್ಯ ಸಾಕಯ್ಯ' ಎನ್ನುವ ಅಭಿಯಾನ ನಡೆಸಿದ್ದರು.

ಈ ವೇಳೆ ಕನ್ನಡಪರ ಧ್ವನಿ ಎತ್ತದೆ, ಕನ್ನಡ ಪರ ಕೆಲಸ ಮಾಡದ ಬಗ್ಗೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಆ ಸಂದರ್ಭದಲ್ಲಿ ವೆಂಕಯ್ಯ ನಾಯ್ಡುಗೆ ರಾಜ್ಯಸಭೆ ಟಿಕೆಟ್‌ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.

ಕೊನೆಗೆ ರಾಜ್ಯದ ಜನರ ಅಭಿಪ್ರಾಯಕ್ಕೆ ಬಿಜೆಪಿ ಮಣಿದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಟಿಕೆಟ್ ನೀಡಿತ್ತು. ಈ ವಿಚಾರವನ್ನು ನೆನಪಿಸಿಕೊಂಡು ನಟ ಜಗ್ಗೇಶ್ ಈ ಟ್ವೀಟ್ ಮಾಡಿದ್ದರು.

Related Tags: Venkaiah Naidu, Actor Jaggesh, Tweet, Kannadigaru, Kannada, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ