ಸಿದ್ದರಾಮಯ್ಯ ಬಳಿ ಕ್ಷಮೆ ಯಾಚಿಸಿದ ಡಿ.ಕೆ. ಶಿವಕುಮಾರ್

ಕರಾವಳಿ ಕರ್ನಾಟಕ ವರದಿ
ಬೆಂಗಳೂರು
: ತೆರಿಗೆ ಇಲಾಖೆ ದಾಳಿ ನಡೆಸಿದ್ದ ಹಿನ್ನೆಲೆಯಲ್ಲಿ ನನ್ನ ತಾಯಿ ಗೌರಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ವ್ಯಕ್ತಪಡಿಸಿದ ಪ್ರತಿಕ್ರಿಯೆ ಬಗ್ಗೆ ಬಹಿರಂಗವಾಗಿ ಕ್ಷಮೆಯಾಚಿಸುವುದಾಗಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ತಾಯಿ ಗೌರಮ್ಮ ಪುತ್ರ ವಾತ್ಸಲ್ಯದಿಂದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉದ್ದೇಶಪೂರ್ವಕವಲ್ಲದೆ ಆಡಿರುವ ಮಾತುಗಳ ಬಗ್ಗೆ ಬಹಿರಂಗವಾಗಿ ಕ್ಷಮೆಯಾಚಿಸುತ್ತೇನೆ. ಕೆಲವು ಮಾಧ್ಯಮಗಳು ನನ್ನ ತಾಯಿಯನ್ನು ಪ್ರಚೋದಿಸಿವೆ. ನನ್ನ ತಾಯಿ ವಿದ್ಯಾವಂತರಲ್ಲ, ಐಟಿ ಇಲಾಖೆ ಯಾವ ಸರ್ಕಾರದ ಅಧೀನದಲ್ಲಿ ಬರುತ್ತದೆ ಎಂಬ ತಿಳಿವಳಿಕೆಯೂ ಅವರಿಗೆ ಇಲ್ಲ ಎಂದು ಡಿಕೆಶಿ ಹೇಳಿದ್ದಾರೆ.

ಕೆಲವು ಮಾಧ್ಯಮಗಳು ನನ್ನ ತಾಯಿಯನ್ನು ಪ್ರಚೋದಿಸಿ ಹೇಳಿಕೆ ಪಡೆದು ದುರ್ಬಳಕೆ ಮಾಡಿಕೊಂಡಿರುವುದಾಗಿ ಡಿಕೆಶಿ ಅವರು ಬಿಡುಗಡೆಗೊಳಿಸಿರುವ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿರುವುದಾಗಿ ಮಾಧ್ಯಮಗಳ ವರದಿ ಹೇಳಿದೆ. ಈ ಸಂದರ್ಭದಲ್ಲಿ ತನಗೆ ಸಾಂತ್ವನ ಹೇಳಿದ ಕಾರ್ಯಕರ್ತರು, ಹಿರಿಯರು, ಪಕ್ಷದ ನಾಯಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಗಾಂಧಿ ಪ್ರತಿಮೆ ಎದುರು ಡಿಕೆಶಿ ಭಜನೆ
ಆಪರೇಷನ್‌ ಕಮಲ ಭೀತಿಯಲ್ಲಿ ಬಿಡದಿಯ ಈಗಲ್‌ ಟನ್‌ ರೆಸಾರ್ಟ್‌ನಲ್ಲಿ ತಂಗಿದ್ದ ಗುಜರಾತ್‌ನ ಕಾಂಗ್ರೆಸ್‌ ಶಾಸಕರನ್ನು ಸಚಿವ ಡಿ.ಕೆ.ಶಿವಕುಮಾರ್‌ ಅವರು ಶನಿವಾರ ವಿಧಾನಸೌಧಕ್ಕೆ ಕರೆ ತಂದರು.

ಐಟಿ ಅಧಿಕಾರಿಗಳ ದಿಢೀರ್‌ ದಾಳಿಯಿಂದ ಕಂಗಾಲಾಗಿದ್ದ ಶಾಸಕರು ಇಂದು ಬೆಳಗ್ಗೆ ರಾಜ್ಯಪಾಲ ಗುಜರಾತ್‌ ಮೂಲದ ವಜುಭಾಯಿ ವಾಲಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಆ ಬಳಿಕ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಐಟಿ ಪರಿಶೀಲನೆ ಮುಗಿದ ಬಳಿಕ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ವಾಪಾಸಾದ ಸಚಿವ ಡಿ.ಕೆ.ಶಿವಕುಮಾರ್‌ ಅವರು ಶಾಸಕರೊಂದಿಗೆ ವಿಧಾನಸೌಧ ಎದುರಿನ ಗಾಂಧಿ ಪ್ರತಿಮೆ ಬಳಿ ರಘುಪತಿ ರಾಘವ ರಾಜಾರಾಮ್‌..ಭಜನೆಯನ್ನು ಹಾಡಿ ಗಮನ ಸೆಳೆದರು.

ಶಾಸಕರಿಗೆ ವಿಧಾನಸೌಧದ ಕಾರ್ಯವೈಖರಿಯ ಬಗ್ಗೆ ವಿವರಿಸಬೇಕಿತ್ತು, ಕರೆದುಕೊಂಡು ಬಂದಿದ್ದೇನೆ. ಅವರೆಲ್ಲರೂ ಇಲ್ಲಿ ಖುಷಿಯಿಂದ ಇದ್ದಾರೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ಸುದ್ದಿಗಾರೊಂದಿಗೆ ಮಾತನಾಡಿದ ಶಾಸಕರು ನಮಗೆ ಬಿಜೆಪಿ 15 ಕೋಟಿ ರೂಪಾಯಿ ಆಮಿಷ ಒಡ್ಡಿತ್ತು. ಅದನ್ನು ಬಿಟ್ಟು ಇಲ್ಲಿ ಬಂದಿದ್ದೇವೆ. ನಮ್ಮ ಕುರಿತಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ನಾವೆಲ್ಲ ಇಲ್ಲಿ ಕ್ಷೇಮವಾಗಿದ್ದೇವೆ, ಪ್ರಜಾಪ್ರಭುತ್ವದ ಉಳಿವಿಗಾಗಿ ಇಲ್ಲಿ ಉಳಿದುಕೊಂಡಿದ್ದೇವೆ ಎಂದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ