ಮರೆಯಾದ ಮರೆಯಲಾಗದ ಚೇತನ: ಯು. ಆರ್ ರಾವ್
ಹೊಸತನ್ನು ಅರಿಯುವ ನಿರಂತರ ಕುತೂಹಲವೇ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳನ್ನು ಬೆಳೆಸಿ ಮನುಕುಲವನ್ನು ಮೇಲಕ್ಕೆ ಕೊಂಡೊಯ್ಯುತ್ತದೆ ಎಂದು ಪ್ರೊ. ಯು. ಆರ್. ರಾವ್ ತರ್ಕಬದ್ಧವಾಗಿ ವಾದಿಸುತ್ತಿದ್ದರು.

      ಕುಮಾರ ಬುರಡಿಕಟ್ಟಿ

ಯಾಕೋ ಬಹಳ ಬೇಜಾರಾಯಿತು. ಎಲ್ಲರೂ ಒಂದು ದಿನ ಸಾಯೋದೇ ಅಂತ ಗೊತ್ತಿದೆ. ಅವರೇನು ತುಂಬಾ ಚಿಕ್ಕ ವಯಸ್ಸಿನಲ್ಲೇ ನಿಧನರಾಗಿಲ್ಲ ಎಂಬುದೂ ಗೊತ್ತಿದೆ. ಆದರೂ, ಅವರು ತೀರಿಕೊಂಡರು ಎಂಬ ಸುದ್ದಿ ಕೇಳಿ ನೋವಾಯಿತು.

ಹೌದು, ನಾನು ಮಾತಾಡುತ್ತಿರುವುದು ಉಡುಪಿ ರಾಮಚಂದ್ರ ರಾವ್ (ಯು. ಆರ್. ರಾವ್) ಬಗ್ಗೆ. ಇವತ್ತು ಬೆಳಗಿನ ಜಾವ 2.30 ಸುಮಾರಿಗೆ ನಿಧನರಾದರಂತೆ.

1932 ಮಾರ್ಚ್ 10ರಂದು ಜನಿಸಿದ ಯು.ಆರ್. ರಾವ್  ಭಾರತ ಕಂಡ ಕೆಲವೇ ಮಹಾನ್ ವಿಜ್ಞಾನಿಗಳಲ್ಲಿ ಒಬ್ಬರು. ಭಾರತೀಯ ಬಾಹ್ಯಾಕಾಶ ಸಂಶೋಧನೆಗೆ ಅವರು ಕೊಟ್ಟ ಕೊಡುಗೆ ಅಪಾರವಾದದ್ದು. ಭಾರತ ಇಂದು ಚಂದ್ರಯಾನ, ಮಂಗಳಯಾನಗಳಂತಹ ಮಹತ್ವಾಕಾಂಕ್ಷಿ ಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿ ಜಗತ್ತಿನ ಗಮನವನ್ನು ತನ್ನತ್ತ ಸೆಳೆದಿದೆ ಎಂದರೆ ಅದಕ್ಕೆ ಭದ್ರ ಬುನಾದಿಯನ್ನು ಹಾಕಿದ ಬೆರಳೆಣಿಕೆಯಷ್ಟು ವಿಜ್ಞಾನಿಗಳಲ್ಲಿ ವಿಕ್ರಂ ಸಾರಾಭಾಯಿ, ಸತೀಶ್ ಧವನ್ ಮತ್ತು ಪ್ರೊ.ಯು.ಆರ್. ರಾವ್ ಕೂಡ ಇದ್ದಾರೆ. ಬಡತನದಲ್ಲಿ ಹುಟ್ಟಿ, ಬೆಳೆದ ಪ್ರತಿಭೆಯೊಂದು ಯಾವ ಎತ್ತರಕ್ಕೆ ಏರಬಹುದು, ಉತ್ತುಂಗದಲ್ಲಿದ್ದಾಗಲೂ ಹೇಗೆ ಸರಳ, ಸಜ್ಜನಿಕೆಯಿಂದ ಬದುಕಬಹುದು ಎಂಬುದಕ್ಕೆ ಯು.ಆರ್. ರಾವ್ ಒಂದು ಜೀವಂತ ಉದಾಹರಣೆ.

ಉಡುಪಿಯಲ್ಲಿ ಹತ್ತನೇ ತರಗತಿಯ ತನಕ ಓದಿದ ಮೇಲೆ ಯು.ಆರ್.ರಾವ್ ಅವರಿಗೆ ವಿದ್ಯಾಭ್ಯಾಸ ಮುಂದುವರೆಸುವುದು ಸವಾಲಾಗಿತ್ತು. ಏಕೆಂದರೆ, ಆಗ ಉಡುಪಿಯಲ್ಲಿ ಕಾಲೇಜು ಇರಲಿಲ್ಲ. ಮಂಗಳೂರಿನಲ್ಲಿದ್ದರೂ ಅಲ್ಲಿ ರೊಕ್ಕ ಕೊಟ್ಟು ಓದುವಷ್ಟು ಆರ್ಥಿಕ ಚೈತನ್ಯ ಅವರಿಗಿರಲಿಲ್ಲ. ಕೊನೆಗೆ ಯಾರದ್ದೋ ಮೂಲಕ ಬಳ್ಳಾರಿಗೆ ಹೋಗಿ ಕಾಲೇಜು ಸೇರಿಕೊಂಡರು. ಬಳ್ಳಾರಿಯಲ್ಲಿ ವಾರನ್ನ ಮಾಡಿಕೊಂಡೇ ವಿದ್ಯಾಭ್ಯಾಸ ಮಾಡಿದರು. ಇಂತಹ ಕಷ್ಟಕಾರ್ಪಣ್ಯಗಳನ್ನು ದಿಟ್ಟವಾಗಿ ಎದುರಿಸಿದ ಅವರು ವಿಶ್ವದ ಅತ್ಯಂತ ಶ್ರೇಷ್ಠ ವಿಜ್ಞಾನ-ತಂತ್ರಜ್ಞಾನ ಸಂಸ್ಥೆ ಎಂಬ ಹೆಗ್ಗಳಿಕೆ ಪಾತ್ರವಾದ Massachusetts Institute of Technology (MIT) ಯಲ್ಲಿ ಸ್ಟಾಫ್ ಮೆಂಬರ್ ಆಗುವ, ಟೆಕ್ಸಾಸ್ ಯೂನಿವರ್ಸಿಟಿಯಲ್ಲಿ ಅಸೋಸಿಯೇಟ್ ಫ್ರೊಫೇಸರ್ ಆಗುವ ಹಂತಕ್ಕೆ ಬೆಳೆದರಲ್ಲದೇ, ವಿಶ್ವದ ಮಹಾನ್ ಖಗೋಳ ವಿಜ್ಞಾನಿಗಳ ಸಾಲಿನಲ್ಲಿ ನಿಂತು ಭಾರತಕ್ಕೆ ಕೀರ್ತಿ ತಂದರು.

ನಾನು ಯು.ಆರ್. ರಾವ್ ಅವರನ್ನು ಒಂದೇ ಬಾರಿ ಭೇಟಿ ಮಾಡಿದ್ದು. 2012ರಲ್ಲಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಘಟನೆ (ಇಸ್ರೋ) ತನ್ನ 100ನೇ ಮಿಷನ್ ಅನ್ನು ಯಶಸ್ವಿಯಾಗಿ ಪೂರೈಸಿದಾಗ ಅವರನ್ನು ಸಂದರ್ಶನ ಮಾಡುವುದಕ್ಕೆ ಬೆಂಗಳೂರಿನ ಇಸ್ರೋ ಕ್ಯಾಂಪಸ್ಸಿಗೆ ಹೋಗಿದ್ದೆ. ಗೆಳೆಯ ಹರ್ಷಕುಮಾರ್ ಕುಗ್ವೆ (Harshakumar Kugwe) ಕೂಡ ಜೊತೆಗೆ ಬಂದಿದ್ದ. ಅವರ ಆಫೀಸಿನಲ್ಲಿ ನಡೆದ ಒಂದೂವರೆ ತಾಸಿನ ಆ ಭೇಟಿ ನನ್ನ ಬದುಕಿನ ಅಮೂಲ್ಯ ಕ್ಷಣ ಎಂದೇ ನಾನು ತಿಳಿದುಕೊಂಡಿದ್ದೇನೆ.

ಅರ್ಧಂಬರ್ಧ ತಿಳಿದುಕೊಂಡ ಜನ ಮಾಡುವ ಧಿಮಾಕನ್ನು ನೋಡಿದಾಗ ನನಗೆ ಆಗಾಗ ಯು.ಆರ್. ರಾವ್ ಮತ್ತು ಜಿ. ವೆಂಕಟಸುಬ್ಬಯ್ಯ ನೆನಪಾಗುತ್ತಾರೆ. ತಮ್ಮ ತಮ್ಮ ಕ್ಷೇತ್ರದಲ್ಲಿ ಜ್ಞಾನದ ಉತ್ತುಂಗಕ್ಕೇರಿದರೂ ಅವರಲ್ಲಿರುವ ಸರಳತೆಯನ್ನು ಕಂಡು ನಾನು ಬೆರಗಾಗಿದ್ದುಂಟು. ಇವರಿಬ್ಬರನ್ನೂ ನಾನು ಒಮ್ಮೆ ಮಾತ್ರ ಭೇಟಿಯಾಗಿದ್ದು, ಸಂದರ್ಶಿಸುವುದಕ್ಕಾಗಿ. ಭೇಟಿಯಾಗುವ ಮುನ್ನ ಇಂತಹ ಮಹಾನ್ ವ್ಯಕ್ತಿಗಳನ್ನು ಸಂದರ್ಶಿಸುವುದಕ್ಕೆ ಹೊರಟಾಗ ಹುಲುಮಾನವರಿಗೆ ಸಹಜವಾಗಿ ಆಗುವ ಭಯ ನನಗೂ ಆಗಿತ್ತು. Nervous ಆಗಿದ್ದೆ. ಆದರೆ, ಸಂದರ್ಶನ ಮುಗಿಸಿ ಹೊರಬಂದಾಗ ಉಲ್ಲಸಿತನಾಗಿದ್ದೆ. ಅವರ ಅಭಿಮಾನಿಯಾಗಿದ್ದೆ. ಒಬ್ಬ ಅಜ್ಜ ತನ್ನ ಮೊಮ್ಮಗನ ಜೊತೆ ಹೇಗೆ ಪ್ರೀತಿ, ಆತ್ಮೀಯತೆಯಿಂದ ತಪ್ಪನ್ನು ತಿದ್ದುತ್ತಾ ಮಾತಾಡುತ್ತಾರೋ ಹಾಗೇ ಅವರಿಬ್ಬರೂ ನನ್ನೊಂದಿಗೆ ಮಾತಾಡಿದ್ದರು. ಅವರ ಸರಳತೆ ಮತ್ತು ಆತ್ಮೀಯತೆಗಳು ಅವರು ಗಳಿಸಿದ ಅಪಾರ ಜ್ಞಾನಸಂಪತ್ತಿಗೆ ಮತ್ತಷ್ಟು ಶೋಭೆ ತಂದಿದ್ದವು. ತುಂಬಿದ ಕೊಡ ತುಳುಕುವುದಿಲ್ಲ ಎಂಬ ಗಾದೆಗೆ ಜೀವಂತ ನಿರ್ಶನದಂತೆ ಅವರಿದ್ದರು.

ನಾವು ಸಣ್ಣವರಿದ್ದಾಗ ಶಾಲೆಯಲ್ಲಿ ಭಾರತದ ಮೊಟ್ಟ ಮೊದಲ ಉಪಗ್ರಹ ಆರ್ಯಭಟ ಎಂದು ಕಲಿತಿದ್ದೇವಲ್ಲವೆ? ಹಲವು ಪರೀಕ್ಷೆಗಳಲ್ಲಿ ಈ ಕುರಿತ ಪ್ರಶ್ನೆಗೆ ಸರಿಯಾದ ಉತ್ತರ ಬರೆದಿದ್ದೇವಲ್ಲವೆ? ಎಪ್ಪತ್ತರ ದಶಕದ ಆರಂಭದಲ್ಲಿ ಅದನ್ನು ನಿರ್ಮಿಸಿದ ಇನ್ನೂರೈವತ್ತು ಯುವ ವಿಜ್ಞಾನಿಗಳ, ಎಂಜಿನಿಯರುಗಳ ಉತ್ಸಾಹಿ ತಂಡಕ್ಕೆ ನೇತೃತ್ವ ವಹಿಸಿದವರು ಇದೇ ಪ್ರೊ. ಯು.ಆರ್. ರಾವ್.  ಭಾರತವಿನ್ನೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೆಜ್ಜೆಯನ್ನೇ ಇಟ್ಟಿರದ ಆ ಸಮಯದಲ್ಲಿ ಯು.ಆರ್. ರಾವ್ ಆಗಲೇ ಅಮೆರಿಕದ ಬಾಹ್ಯಾಕಾಶ ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಪಿಎಚ್ಡಿ ಮುಗಿದ ಮೇಲೆ ವಿಶ್ವದ ಸರ್ವಶ್ರೇಷ್ಠ ವಿಜ್ಞಾನ-ತಂತ್ರಜ್ಞಾನ ಸಂಸ್ಥೆಯಾಗಿರುವ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಯಲ್ಲಿ ಸ್ಟಾಫ್ ಮೆಂಬರ್ ಆಗಿ, ಟೆಕ್ಸಾಸ್ ಯೂನಿವರ್ಸಿಟಿಯಲ್ಲಿ ಅಸೋಸಿಯೇಟ್ ಫ್ರೊಫೇಸರ್ ಆಗಿ ರಾವ್ ಕೆಲಸ ಮಾಡಿದ್ದರು. ಆ ಸಮಯದಲ್ಲೇ ಅವರು ಅಮೆರಿಕದ ಆರಂಭಿಕ ಉಪಗ್ರಹ ಯೋಜನೆಗಳಲ್ಲಿ ತಮ್ಮನ್ನು ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದರು.

ರಾವ್ ಅವರು ಭಾರತಕ್ಕೆ ಮರಳಿದಾಗ ಭಾರತೀಯ ಬಾಹ್ಯಾಕಾಶ ಸಂಶೋಧನೆಗೆ ಹೊಸ ದಿಕ್ಕುದೆಸೆಗಳನ್ನು ರೂಪಿಸಿದ ವಿಜ್ಞಾನಿ ವಿಕ್ರಂ ಸಾರಾಭಾಯಿಯವರು ಇವರನ್ನು ಭೇಟಿ ಮಾಡಿ ಭಾರತೀಯ ಬಾಹ್ಯಾಕಾಶ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ವಿನಂತಿಸಿಕೊಂಡರು. ಆ ಮನವಿಯನ್ನು ಒಪ್ಪಿಕೊಳ್ಳುವುದಕ್ಕೆ ರಾವ್ ಬರೊಬ್ಬರಿ ಎರಡು ವರ್ಷ ತೆಗೆದುಕೊಂಡರು. ದೊಡ್ಡ ಕೆಲಸವನ್ನು ಹುಮ್ಮಸ್ಸಿನಿಂದ ಒಪ್ಪಿಕೊಂಡು ಅದನ್ನು ಸಾಧಿಸಲಾಗದೇ ಹೋದರೆ ವಿಶ್ವದ ಎದುರು ತನ್ನ ದೇಶ ನಗೆಪಾಟಲಿಗೆ ಈಡಾಗಬೇಕಾಗುತ್ತದೆಂಬ ಭಯ ಅವರನ್ನು ಕಾಡುತ್ತಿತ್ತು. ಬಹಳಷ್ಟು ಯೋಚನೆ ಮಾಡಿ ನಂತರ ಒಪ್ಪಿಕೊಂಡರು. (ಆಗಿನ್ನೂ ಎಪಿಜೆ ಅಬ್ದುಲ್ ಕಲಾಮ್ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರಲಿಲ್ಲ. ವಿಕ್ರಂ ಸಾರಾಭಾಯಿ ನಿಧನದ ನಂತರವಷ್ಟೇ ಕಲಾಂ ಅವರು ಭಾರತದ ಮೊದಲ ರಾಕೆಟ್ ಯೋಜನೆಯ ನಿರ್ದೇಶಕರಾದರು).


     ಲೇಖಕ ಕುಮಾರ್ ಬುರಡಿಕಟ್ಟಿ ಜೊತೆ ಪ್ರೊ. ಯು. ಆರ್. ರಾವ್

ಆಗ ನಡೆದ ಚರ್ಚೆಯನ್ನು ಫ್ರೊ.ರಾವ್ ಚೆನ್ನಾಗಿ ವಿವರಿಸಿದರು. ಬಹಳ ದುಬಾರಿಯಾದ ಉಪಗ್ರಹ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕೆಂದರೆ ಮೊದಲನೆಯದಾಗಿ ಉಪಗ್ರಹ ಏಕೆ ಅಗತ್ಯ ಎಂಬುದನ್ನು ದೇಶಕ್ಕೆ ಮನವರಿಕೆ ಮಾಡಿಕೊಡಬೇಕೆಂದು ವಿಕ್ರಮ್ ಸಾರಾಭಾಯಿ, ಅಂದಿನ ಇಸ್ರೋ ಅಧ್ಯಕ್ಷ ಸತೀಶ್ ಧವನ್ ಮತ್ತು ಯು.ಆರ್. ರಾವ್ ನಿರ್ಧರಿಸುತ್ತಾರೆ. ಹೆಲಿಕ್ಯಾಪ್ಟರ್ ಮೂಲಕ ತೆಗೆದು ಕೇರಳದ ಅಡಿಕೆ ತೋಟಗಳ ಚಿತ್ರಗಳನ್ನು, ಕರ್ನಾಟಕದ ಮಂಡ್ಯ ಭಾಗದಲ್ಲಿ ತೆಂಗಿನ ಮರಗಳ ಚಿತ್ರಗಳನ್ನು ತೆಗೆದುಕೊಂಡು ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ಹೋಗುತ್ತಾರೆ. ಆಗ ಇಂದಿರಾ ಗಾಂಧಿ ಪ್ರಧಾನಿ. ಹೆಲಿಕ್ಯಾಪ್ಟರ್ ಮೂಲಕ ತೆಗೆದ ಚಿತ್ರಗಳನ್ನು ತೋರಿಸಿ ತೆಂಗು ಮತ್ತು ಅಡಿಕೆ ಬೆಳೆಗಳಿಗೆ ಬಂದಿರುವ ರೋಗವನ್ನು ಪ್ರಧಾನಿಗೆ ವಿವರಿಸುತ್ತಾರೆ. ಆಗ ಇಂದಿರಾ ಗಾಂಧಿಯವರು, "ಈ ರೋಗದ ಬಗ್ಗೆ ರೈತರಿಗೆ ಗೊತ್ತಿಲ್ಲವೆ?" ಅಂತ ಈ ವಿಜ್ಞಾನಿಗಳನ್ನು ಕೇಳುತ್ತಾರೆ. "ಇಲ್ಲ, ರೈತರು ಆರೇಳು ತಿಂಗಳುಗಳ ನಂತರ ಅಡಿಕೆ, ತೆಂಗಿನ ಮರಗಳನ್ನು ಹತ್ತಿದಾಗ ಮಾತ್ರ ಅವರಿಗೆ ಇದು ತಿಳಿಯುತ್ತದೆ. ಅಷ್ಟು ಹೊತ್ತಿಗಾಗಲೇ ಕಾಲ ಮಿಂಚಿರುತ್ತದೆ" ಎಂದು ವಿವರಿಸುತ್ತಾರೆ. ಉಪಗ್ರಹಗಳಿದ್ದರೆ ಅವುಗಳ ಮೂಲಕ ರೋಗ ಬಂದಾಕ್ಷಣವೇ ಗುರುತಿಸಬಹುದು, ನಿವಾರಣೆಗೆ ಕ್ರಮ ಕೈಗೊಳ್ಳಬಹುದು ಅಂತ ಪ್ರಧಾನಿಗೆ ಹೇಳುತ್ತಾರೆ. ಜೊತೆಗೆ, ಸಂವಹನ, ಸಂಪರ್ಕ, ಪ್ರಾಕೃತಿಕ ವಿಕೋಪ, ಹವಮಾನ, ಖನಿಜಾನ್ವೇಷಣೆ ಇತ್ಯಾದಿಗಳ ವಿಷಯದಲ್ಲೂ ಉಪಗ್ರಹಗಳು ಹೇಗೆ ಮುಖ್ಯ ಎಂಬುದನ್ನೂ ಎಳೆಎಳೆಯಾಗಿ ಬಿಡಿಸಿಡುತ್ತಾರೆ. ಇಂದಿರಾ ಗಾಂಧಿಗೆ ಮನವರಿಕೆಯಾಗಿ ಉಪಗ್ರಹ ಯೋಜನೆಗೆ ಹಸಿರು ನಿಶಾನೆ ತೋರುತ್ತಾರೆ.

ಸರ್ವೇಕ್ಷಣೆಗೆ, ಸಂವಹನಕ್ಕೆ ಉಪಗ್ರಹವೊಂದನ್ನು ಬಾಹ್ಯಾಕಾಶ್ಯ ಕಕ್ಷೆಯಲ್ಲಿಡಬೇಕಾದರೆ ಅದಕ್ಕೆ ಎರಡು ಅಂಶಗಳು ಅತ್ಯವಶ್ಯ: ಒಂದನೆಯದು, ಉಪಗ್ರಹ ಮತ್ತು ಎರಡನೆಯದು ಅದನ್ನು ಹೊತ್ತೊಯ್ಯುವುದಕ್ಕೆ ಅವಶ್ಯವಿರುವ ರಾಕೆಟ್. ಅಂದಿನ ಪರಿಸ್ಥಿತಿಯಲ್ಲಿ ಎರಡನ್ನೂ ಜೊತೆಯಾಗಿ ಕೈಗೆತ್ತಿಕೊಳ್ಳುವುದಕ್ಕೆ ಭಾರತಕ್ಕೆ ಸಾಧ್ಯವಿರಲಿಲ್ಲ. ಹಾಗಾಗಿ, ಕನಿಷ್ಠ ಉಪಗ್ರಹವನ್ನು ಸಿದ್ಧಪಡಿಸಿಕೊಂಡರೆ ಬೇರೆ ದೇಶಗಳ ರಾಕೇಟ್ ಮೂಲಕ ಅದನ್ನು ನಿಗದಿತ ಕಕ್ಷೆಗೆ ಸೇರಿಸಬಹುದು ಎಂದು ವಿಕ್ರಮ್ ಸಾರಾಭಾಯಿ, ಅಂದಿನ ಇಸ್ರೋ ಅಧ್ಯಕ್ಷ ಸತೀಶ್ ಧವನ್ ಮತ್ತು ಯು.ಆರ್. ನೇತೃತ್ವದ ತಂಡ ನಿರ್ಧರಿಸುತ್ತದೆ. ಅಂತೆಯೇ ಭಾರತದ ಮೊದಲ ಉಪಗ್ರಹ ಯೋಜನೆಗೆ ಯು.ಆರ್. ರಾವ್ ನಿರ್ದೇಶಕರಾಗುತ್ತಾರೆ. ಮೊದಲ ಉಪಗ್ರಹಕ್ಕೆ ಪ್ರಾಚೀನ ಭಾರತದ ಖಗೋಳ ವಿಜ್ಞಾನಿ ಆರ್ಯಭಟನ ಹೆಸರು ಇಡುತ್ತಾರೆ. ಎರಡು ವರ್ಷಗಳ ಒಳಗೆ ಆರ್ಯಭಟವನ್ನು ಸಿದ್ಧಪಡಿಸುವುದಾಗಿ ಯು.ಆರ್. ರಾವ್ ಅವರು ವಿಕ್ರಮ್ ಸಾರಾಭಾಯಿಗೆ ಮಾತು ಕೊಡುತ್ತಾರೆ. 1972 ಆಗಸ್ಟ್-ಸೆಪ್ಟೆಂಬರ್ ನಲ್ಲಿ ಶುರುವಾದ ಆರ್ಯಭಟ ಉಪಗ್ರಹ 1975ರ ಏಪ್ರಿಲ್ ಹೊತ್ತಿಗೆ ಸಿದ್ಧವಾಗುತ್ತದೆ. ಅದನ್ನು ಅಂದಿನ ಸೋವಿಯಟ್ ಯೂನಿಯನ್ (ರಷ್ಯಾ) ದೇಶಕ್ಕೆ ತೆಗೆದುಕೊಂಡು ಹೋಗಿ ರಷ್ಯನ್ನರ ರಾಕೇಟ್ ಮೇಲೆ ಕೂರಿಸಿ ಬಾಹ್ಯಾಕಾಶ ಕಕ್ಷೆಗೆ ಸೇರಿಸಲಾಗುತ್ತದೆ. ಈ ಆರ್ಯಭಟವನ್ನು ನಿರ್ಮಿಸಿದ ವಿಜ್ಞಾನಿಗಳ, ಎಂಜಿನಿಯರುಗಳ, ತಂತ್ರಜ್ಞರ ತಂಡದ ಸರಾಸರಿ ವಯಸ್ಸು 25..!! ಅದರಲ್ಲಿ ಅತ್ಯಂತ ಹಿರಿಯ ವಯಸ್ಸಿನ ವ್ಯಕ್ತಿ ಎಂದರೆ 40 ವರ್ಷದ ಯು.ಆರ್. ರಾವ್!

ಆರ್ಯಭಟ ಬಾಹ್ಯಾಕಾಶದಲ್ಲಿ ಕಾರ್ಯನಿರ್ವಹಿಸಿದ್ದು ಕೇವಲ ಐದು ದಿನ ಮಾತ್ರ. ಇಂಧನ ವೈಫಲ್ಯದಿಂದಾಗಿ ಅದು ಭೂಮಿಯೊಂದಿಗಿನ ಸಂಪರ್ಕ ಕಳೆದುಕೊಂಡಿತು. ಆದರೆ, ಅದು ಭಾರತೀಯ ಬಾಹ್ಯಾಕಾಶ ಸಂಶೋಧನೆಗೆ ಭದ್ರ ಬುನಾದಿಯನ್ನು ಹಾಕಿತ್ತು. ಆಗ ಸೋವಿಯಟ್ ಒಕ್ಕೂಟ ಮತ್ತು ಭಾರತದ ಬಾಂಧವ್ಯ ಬಹಳ ಉತ್ತಮವಾಗಿದ್ದ ಕಾರಣ ಆರ್ಯಭಟವನ್ನು ಬಾಹ್ಯಾಕಾಶ ಕಕ್ಷೆಗೆ ಸೇರಿಸುವುದಕ್ಕೆ ರಷ್ಯನ್ನರು ಯಾವುದೇ ದುಡ್ಡು ತೆಗೆದುಕೊಳ್ಳಲಿಲ್ಲ. ಅದಾದ ಮೇಲೆ ಮತ್ತೆ ಯು.ಆರ್. ರಾವ್ ಅವರ ನೇತೃತ್ವದಲ್ಲೇ ಭಾಸ್ಕರ್-1 ಮತ್ತು ಭಾಸ್ಕರ್-2 ಉಪಗ್ರಹಗಳು ಸಿದ್ಧವಾದವು. ಅವುಗಳನ್ನೂ ರಷ್ಯಾಕ್ಕೆ ಕೊಂಡೊಯ್ದು ರಷ್ಯನ್ನರ ರಾಕೇಟುಗಳ ಮೂಲಕವೇ ಬಾಹ್ಯಾಕಾಶ ಕಕ್ಷೆಗೆ ಸೇರಿಸಲಾಯಿತು. ಇವುಗಳನ್ನೂ ರಷ್ಯನ್ನರು ಉಚಿತವಾಗಿ ಲಾಂಚ್ ಮಾಡಿಕೊಟ್ಟರು. "ಈ ಉಚಿತ ಲಾಂಚ್ಗಳು ಅಂದಿನ ನಮ್ಮ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿದರೆ ಬಹಳ ದೊಡ್ಡ ನೆರವಾಗಿದ್ದವು" ಎಂದು ರಾವ್ ಹೇಳುತ್ತಾರೆ.

ಹೀಗೆ ಸೊನ್ನೆಯಿಂದ ಶುರುವಾದ ಭಾರತೀಯ ಬಾಹ್ಯಾಕಾಶ ಸಂಶೋಧನೆ ಇಂದು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದುನಿಂತಿದೆ. ನಾವು ಬೇರೆ ದೇಶಗಳಿಗೆ ಹೋಗಿ ಅವರ ರಾಕೇಟ್ ಮೂಲಕ ನಮ್ಮ ಉಪಗ್ರಹಗಳನ್ನು ಹಾರಿಸುತ್ತಿದ್ದವರು ಈಗ ನಾವೇ ಬೇರೆ ದೇಶಗಳ ಉಪಗ್ರಹಗಳನ್ನು ಹಾರಿಸುತ್ತಿದ್ದೇವೆ. ಚಂದ್ರಯಾನ, ಮಂಗಳಯಾನಗಳಂತಹ ಮಹತ್ವಪೂರ್ಣ ಬಾಹ್ಯಾಕಾಶ ಯೋಜನೆಗಳನ್ನು ಯಶಸ್ವಿಗೊಳಿಸಿದ್ದೇವೆ. ಇಸ್ರೋದ ಈ ಸಾಧನೆಯ ಹಿಂದೆ ವಿಕ್ರಂ ಸಾರಾಬಾಯ್, ಯು.ಆರ್. ರಾವ್, ಸತೀಶ್ ಧವನ್ ಅವರ ಪರಿಶ್ರಮ ಬಹಳಷ್ಟಿದೆ.

ಭೂಮಿಯನ್ನು ಹೊರತುಪಡಿಸಿ ಬೇರೆ ಗ್ರಹದಲ್ಲಿ ಹೋಗಿ ನೆಲೆಸುವುದಕ್ಕೆ ಮನುಷ್ಯನಿಗೆ ಸಾಧ್ಯವಾಗುತ್ತಾ ಅಂತ ನಾನು ಯು.ಆರ್. ರಾವ್ ಅವರನ್ನು ಕೇಳಿದ್ದೆ. ಅದಕ್ಕವರು ಮರುಕ್ಷಣದಲ್ಲೇ "I think we can live on red planet one day" ಅಂದಿದ್ದರು! ನಿನ್ನೆ ಅಸಾಧ್ಯ ಅಂದುಕೊಂಡಿದ್ದು ಇಂದು ಸಾಧ್ಯವಾಗಿದೆ. ಇಂದು ಅಸಾಧ್ಯ ಅನ್ನಿಸುವುದು ಮುಂದೆ ಸಾಧ್ಯವಾಗುತ್ತದೆ ಎಂದು ಮಂಗಳ ಗ್ರಹದಲ್ಲಿ ಮನುಷ್ಯ ವಾಸಿಸುವ ಸಾಧ್ಯತೆಯನ್ನು ಅವರು ಬಲವಾಗಿ ಪ್ರತಿಪಾದಿಸಿದರು. ಅದಕ್ಕೆ ವಿಶ್ವದ ಹೆಸರಾಂತ ವೈಜ್ಞಾನಿಕ ಕಾಲ್ಪನಿಕ ಕಾದಂಬರಿಕಾರ ಆರ್ಥರ್ ಕ್ಲಾರ್ಕ್ ಅವರ ವೈಜ್ಞಾನಿಕ ಊಹೆಗಳನ್ನು ಸಮರ್ಥನೆಯಾಗಿ ಕೊಟ್ಟರು. ನಾವಿಂದು ನೋಡುವ, ಪ್ರಯೋಜನ ಪಡೆಯುತ್ತಿರುವ ಸಂವಹನ ಉಪಗ್ರಹ ಪ್ರಾರಂಭವಾಗಿದ್ದೇ ಒಂದು ಕಾಲ್ಪನಿಕ ಕತೆಯಾಗಿ. ಆರ್ಥರ್ ಕ್ಲಾರ್ಕ್ ತನ್ನ ಕಾದಂಬರಿಯೊಂದರಲ್ಲಿ ಈ ಬಗ್ಗೆ ಸುಮ್ಮನೇ ಊಹಿಸಿಕೊಂಡು ಬರೆದಿದ್ದರು. ಆತನ ಕಲ್ಪನೆಯ ಕಾದಂಬರಿ ಬಿಡುಗಡೆಯಾದ ಹನ್ನೆರಡು ವರ್ಷಕ್ಕೆ ಸರಿಯಾಗಿ ವಿಶ್ವದ ಮೊಟ್ಟ ಮೊದಲ ಸಂವಹನ ಉಪಗ್ರಹ ಬಾಹ್ಯಾಕಾಶದಲ್ಲಿ ಭೂ ಕಕ್ಷೆಯನ್ನು ಸೇರಿತು ಎಂದು ರಾವ್ ಮನಮುಟ್ಟುವಂತೆ ವಿವರಿಸಿದರು. "ಅದಕ್ಕೇನೇ ನಾವು ಹೇಳೋದು, ಇಂದಿನ ವಿಜ್ಞಾನ ನಿನ್ನೆಯ ಕಲ್ಪನೆ, ನಾಳೆಯ ತಂತ್ರಜ್ಞಾನ ಎಂದು" ಅಂತ ರಾವ್ ಹೇಳುತ್ತಾರೆ.

ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಮಾನವನ ಮುಂದಿನ ಪ್ರಮುಖ ಹೆಜ್ಜೆ ಏನಾಗಬಹುದು ಎಂದು ನಾನವರನ್ನು ಕೇಳಿದಾಗ ಅವರು ಬಹಳ ಸುಂದರವಾಗಿ ಸಾಧ್ಯತೆಗಳನ್ನು ವಿವರಿಸಿದರು. ಈಗ ನಾವು ಗ್ರಹಗಳ ಹುಡುಕಾಟದಲ್ಲಿದ್ದೇವೆ, ನಾಳೆ ಗ್ರಹಗಳ ಬಳಕೆಗೆ ತೊಡಗುತ್ತೇವೆ (planetary exploration and planetary exploitation) ಎಂದಿದ್ದರು. ಅನ್ಯಗ್ರಹಗಳಲ್ಲಿರುವ ಅಪರಿಮಿತ ಸಂಪನ್ಮೂಲಗಳನ್ನು ಭೂಮಿಗೆ ತಂದು ಮನುಷ್ಯ ತನ್ನ ಬಳಕೆಗೆ ಬಳಸಿಕೊಳ್ಳಬಹುದು ಎಂದು ಅವರು ತರ್ಕಬದ್ಧವಾಗಿ ವಿವರಿಸಿದರು. ಭೂಮಿಯ ಮೇಲಿನ ಇಂಧನ ಇನ್ನೂರು ವರ್ಷಗಳಲ್ಲಿ ಖಾಲಿಯಾಗುತ್ತದೆ; ಅದಕ್ಕೆ ಪರಿಹಾರವಾಗಿ ಅನ್ಯಗ್ರಹಗಳ ಶಕ್ತಿಸಂಪನ್ಮೂಲಗಳನ್ನು ಬಳಸಿಕೊಳ್ಳಬೇಕು ಎಂದರು. ಚಂದ್ರನಲ್ಲಿರುವ ಹೀಲಿಯಂ ಅನ್ನು ಭೂಮಿಗೆ ತಂದರೆ ಹತ್ತು ಸಾವಿರ ವರ್ಷಗಳ ತನಕ ಭೂಮಿಯ ಮೇಲಿನ ಮನುಷ್ಯನ ಇಂಧನ ಅಗತ್ಯಗಳನ್ನು ಪೂರೈಸಬಹುದು ಎಂದರು. ಆದರೆ, ಅದನ್ನು ಇಲ್ಲಿಗೆ ತರಬೇಕೆಂದರೆ ದುಬಾರಿಯಾಗಿರುವ ರಾಕೇಟ್ ಅಗ್ಗವಾಗಬೇಕು ಎಂದರು. ಒಮ್ಮೆ ಗ್ರಹಗಳ ಬಳಕೆ ಶುರುವಾದರೆ ಭೂಮಿಯ ಮೇಲಿರುವ ದೇಶಗಳು ಆ ಅನ್ಯಗ್ರಹ ಸಂಪನ್ಮೂಲಗಳನ್ನು ಯಾರು ಎಷ್ಟು ಬಳಸಬೇಕು ಎಂಬ ಪ್ರಶ್ನೆ ಎದುರಾಗುತ್ತದೆ. ಆ ಸಂಪತ್ತಿನ ಉಪಯೋಗ ಎಲ್ಲಾ ದೇಶಗಳಿಗೂ ಸರಿಸಮನಾಗಿ ದೊರೆಯಬೇಕೆಂದರೆ ಅದಕ್ಕೊಂದು ಅಂತರರಾಷ್ಟ್ರೀಯ ಕಾನೂನು ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಯು.ಆರ್. ರಾವ್ ಅವರು ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಹೊರಬಾಹ್ಯಾಕಾಶದ ಶಾಂತಿಯುತ ಬಳಕೆಗಾಗಿನ ಸಮಿತಿಯ (United Nations - Committee on Peaceful Uses of Outer Space) ಅಧ್ಯಕ್ಷರಾಗಿದ್ದಾಗ ಒಂದು ಅಂತರರಾಷ್ಟ್ರೀಯ ಕಾನೂನು ರೂಪಿಸುವುದಕ್ಕೆ ಚಾಲನೆ ಕೊಟ್ಟಿದ್ದರು.

ವಿವಿಧ ದೇಶಗಳ ಬಾಹ್ಯಾಕಾಶ ಸಾಧನೆಗಳ ಬಗ್ಗೆ ಮಾತಾಡುತ್ತಾ ಯು.ಆರ್. ರಾವ್ ಅವರು ಚೀನಾದ ಸಾಧನೆಯನ್ನು ಬಹಳವಾಗಿ ಮೆಚ್ಚಿಕೊಳ್ಳುತ್ತಿದ್ದರು. ಭಾರತ ಬಾಹ್ಯಾಕಾಶ ಸಂಶೋಧನೆಗೆ ಕೈಹಾಕಿದ ಬಹಳಷ್ಟು ವರ್ಷಗಳ ನಂತರ ಚೀನಾ ಆ ಕ್ಷೇತ್ರಕ್ಕೆ ಕಾಲಿಟ್ಟಿದ್ದು. ಭಾರತ ತನ್ನ ಮೊದಲ ಸಂವಹನ ಉಪಗ್ರಹವನ್ನು ಹಾರಿಬಿಟ್ಟ ಹತ್ತು ವರ್ಷಗಳ ನಂತರ ಚೀನಾ ತನ್ನ ಮೊದಲ ಸಂವಹನ ಉಪಗ್ರಹವನ್ನು ಹಾರಿಬಿಟ್ಟಿತು (1988ರಲ್ಲಿ). ಆದರೂ ಅದು ಭಾರತವನ್ನು ಹಿಂದಿಕ್ಕಿ ವೇಗವಾಗಿ ಮುನ್ನುಗ್ಗುತ್ತಿದೆ. ಭಾರತದ ರಾಕೇಟ್ಗಳು 2.5 ಟನ್ ತೂಕದ ಉಪಗ್ರಹವನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದರೆ ಚೀನಾದ ರಾಕೇಟ್ಗಳು 10 ಟನ್ ಭಾರದ ಉಪಗ್ರಹಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿವೆ. ನಮ್ಮ ರಾಕೇಟ್ಗಳು ಹೆಚ್ಚು ತೂಕವನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿಲ್ಲದಿರುವುದೇ ನಾವು ಇನ್ನೂ ಮನುಷ್ಯ-ಸಹಿತ ಬಾಹ್ಯಾಕಾಶ ಯೋಜನೆಯನ್ನು (Manned Mission) ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಯು.ಆರ್. ರಾವ್ ಪದೇ ಪದೇ ಹೇಳುತ್ತಿದ್ದರು. ಮನುಷ್ಯನನ್ನು ಚಂದ್ರ ಗ್ರಹಕ್ಕೋ, ಮಂಗಳ ಗ್ರಹಕ್ಕೋ ಹೊತ್ತೊಯ್ಯಬೇಕೆಂದರೆ ಅಲ್ಲಿಗೆ ಹೋಗಿ ವಾಪಾಸುವ ಬರುವ ತನಕ ವ್ಯಕ್ತಿಗಳನ್ನು, ಅವರ ಅಗತ್ಯವನ್ನು ಪೂರೈಸುವ ವಸ್ತುಗಳನ್ನೂ ಹೊತ್ತೊಯ್ಯುಬೇಕೆಂದರೆ ಕನಿಷ್ಠ 5 ಟನ್ ತೂಕವನ್ನು ಹೊತ್ತೊಯ್ಯುವ ಸಾಮರ್ಥ್ಯವಾದರೂ ನಮ್ಮ ಬಾಹ್ಯಾಕಾಶ ನೌಕೆಗಳಿಗೆ ಇರಬೇಕಾಗುತ್ತದೆ; ಆ ನಿಟ್ಟಿನಲ್ಲಿ ನಾವಿನ್ನೂ ಬಹಳ ಸಾಧಿಸುವುದಿದೆ ಎಂದು ರಾವ್ ಹೇಳುತ್ತಿದ್ದರು.

ಇಸ್ರೋ ಯಾವುದಾದರೂ ಹೊಸ ಯೋಜನೆಯನ್ನು ಕೈಗೆತ್ತಿಕೊಂಡಾಗ ಮೊಟ್ಟ ಮೊದಲು ಎದುರಿಸುವ ಪ್ರಶ್ನೆ "ಇಷ್ಟೊಂದು ಖರ್ಚು ಮಾಡುವುದು ಭಾರತದಂತಹ ಬಡ ದೇಶಕ್ಕೆ ಅಗತ್ಯವಿದೆಯೇ? ಅದೇ ಹಣವನ್ನು ಬಡತನ ನಿರ್ಮೂಲನೆಗೆ ವ್ಯಹಿಸಬಹುದಲ್ಲವೆ?" ಎಂಬುದು. ಈ ಪ್ರಶ್ನೆಗೂ ರಾವ್ ಬಳಿ ತಿರಸ್ಕರಿಸಲಾಗದ ಉತ್ತರವಿತ್ತು. "ನಾವು ಒಲಂಪಿಕ್ ಕ್ರೀಡೆಗಳಿಗೆ ನೂರಾರು ಕ್ರೀಡಾಪಟುಗಳನ್ನು ಕಳಿಸುತ್ತೇವೆ. ಕೋಟ್ಯಾಂತರ ಖರ್ಚು ಮಾಡುತ್ತೇವೆ. ಆಗ ಇಷ್ಟು ಹಣ ವ್ಯಯ ಮಾಡುವುದು ಅಗತ್ಯವಿದೆಯೇ ಎಂದು ಯೋಚಿಸುವುದಿಲ್ಲ. ಇದೇ ರೀತಿಯಲ್ಲಿ ಹಲವು ಕೆಲಸಗಳಿಗೆ ನಾವು ಹಣವನ್ನು ವ್ಯಯಿಸುತ್ತೇವೆ. ಆವಾಗಲೂ ಪ್ರಶ್ನಿಸುವುದಿಲ್ಲ. ಇಸ್ರೋ ಸಂಸ್ಥೆಯು ಚಂದ್ರಯಾನ, ಮಂಗಳಯಾನಗಳಂತಹ ಮಹತ್ವಪೂರ್ಣ ಯೋಜನೆಗಳನ್ನು ಹಾಕಿಕೊಂಡಾಗ ಈ ಪ್ರಶ್ನೆಗಳು ಏಳುತ್ತವೆ. ಇಂತಹ ಯೋಜನೆಗಳು ನಾಳೆಯೇ ಪ್ರತಿಫಲ ನೀಡದಿರಬಹುದು. ಆದರೆ, ಖಂಡಿತವಾಗಿಯೂ ಭವಿಷ್ಯದಲ್ಲಿ ಇಡೀ ದೇಶಕ್ಕೆ, ಇಡೀ ವಿಶ್ವಕ್ಕೆ ಅನುಕೂಲವಾಗುತ್ತವೆ. ಹೊಸತನ್ನು ಅರಿಯುವ ನಿರಂತರ ಕುತೂಹಲವೇ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳನ್ನು ಬೆಳೆಸಿ ಮನುಕುಲವನ್ನು ಮೇಲಕ್ಕೆ ಕೊಂಡೊಯ್ಯುತ್ತದೆ" ಎಂದು ಅವರು ತರ್ಕಬದ್ಧವಾಗಿ ವಾದಿಸುತ್ತಿದ್ದರು.

ಇಸ್ರೋ-ದೇವಾಸ್ ಡೀಲ್ ಮೂಲಕ ಇಸ್ರೋಗೆ ಹತ್ತಿದ ಭ್ರಷ್ಟಾಚಾರದ ಕಳಂಕದ ಬಗ್ಗೆ ಕೇಳಿದಾಗ "ನಾನಿದನ್ನು aberration ಎಂದಷ್ಟೇ ಹೇಳಬಲ್ಲೆ ಎಂದಿದ್ದರು. ನಾನಿಂಥ ವಿಷಯಗಳಿಗೆ ಗಮನ ಕೊಡುವುದಿಲ್ಲ; ಯಾರಾದರೂ ಯಾವುದೇ ಬಾಹ್ಯಾಕಾಶ ಯೋಜನೆಗಳಿಗೆ ನನ್ನ ನೆರವನ್ನು ಕೇಳಿ ಖಂಡಿತಾ ಕೊಡುತ್ತೇನೆ ಎದಿದ್ದರು.

"ನಿಮ್ಮ ಜ್ಞಾನವನ್ನು ದೇಶ ಸರಿಯಾಗಿ ಗುರುತಿಸಿದೆಯೆ? ಅದನ್ನು ಸರಿಯಾಗಿ ಬಳಸಿಕೊಳ್ಳುತ್ತಿದೆಯೇ?" ಅಂತ ನಾನು ರಾವ್ ಅವರನ್ನು ಕೇಳಿದಾಗ ಅವರು ಮುಗುಳ್ನಕ್ಕು "ಅದನ್ನು ದೇಶವೇ ತೀರ್ಮಾನಿಸಬೇಕು" ಅಂದಿದ್ದರು.

ಯು.ಆರ್. ರಾವ್ ರಾವ್ ಅವರ ನಿಧನದಿಂದ ವಿಶ್ವ ವಿಜ್ಞಾನ ಜಗತ್ತಿಗೆ ಖಂಡಿತಾ ನಷ್ಟವಾಗಿದೆ. ಅವರಿಗೆ ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳು ಬಂದಿವೆ. ಭಾರತರತ್ನ ಪ್ರಶಸ್ತಿ ಬರಲೇಬೇಕಿತ್ತು ಅಂತ ನನಗೆ ಬಹಳ ಸಲ ಅನ್ನಿಸಿದೆ. ಇಂದಲ್ಲ, ನಾಳೆ ಬಂದೇ ಬರುತ್ತೆ ಅಂತಾನೂ ಕಾದಿದ್ದೆ. ಭಾರತರತ್ನ ಪ್ರಶಸ್ತಿಯನ್ನು ಯು.ಆರ್. ರಾವ್ ಅವರಿಗೆ ನೀಡಿದ್ದಿದ್ದರೆ ಪ್ರಶಸ್ತಿಯ ಗೌರವ ಹೆಚ್ಚಾಗುತ್ತಿತ್ತು.

ಚಿತ್ರಗಳು: ಹರ್ಷ ಕುಮಾರ ಕುಗ್ವೆ

Related Tags: Prof. U. R. Rao, Udupi Ramachandra Rao, ISRO, Kumar Buradikatti, Kannada Article
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ