ಭೂಮಿತಾಯಿಗೆ ಮರಣದಂಡನೆ
ಭೂ ತಾಯಿಗೆ ಗಲ್ಲುಶಿಕ್ಷೆ ವಿಧಿಸುತ್ತಿರುವವರು ಡೊನಾಲ್ಡ್ ಟ್ರಂಪ್. ಆತನಿಗೆ ಕುಮ್ಮಕ್ಕು ಕೊಡುತ್ತಿರುವವರು ತೈಲ ಕಂಪನಿಯ ದೊರೆಗಳು ಮತ್ತು ಕುತಂತ್ರೀ ಪರಿಸರ ವಿರೋಧಿಗಳು.

ಅನುವಾದ: ಶಿವಸುಂದರ್
ವಾಮಾನ ಬದಲಾವಣೆ ಎಂಬ ವಿದ್ಯಮಾನವೇ ಒಂದು ದೊಡ್ಡ ಮೋಸವೆಂದು ಡೊನಾಲ್ಡ್ ಟ್ರಂಪ್ ಅವರು ಹೇಳುತ್ತಲೇ ಬಂದಿದ್ದಾರೆ. ಉದಾಹರಣೆಗೆ 2014ರ ಜನವರಿ 2 ರಂದು ಜಗತ್ತಿನ ಪ್ರಖ್ಯಾತ ಹವಾಮಾನ ವಿಜ್ಞಾನಿಗಳ ಕುರಿತು ಮಾಡಿದ ಟ್ವೀಟ್ ಒಂದರಲ್ಲಿ ಈ ಜಾಗತಿಕ ತಾಪಮಾನ ಏರಿಕೆ ಎಂಬ ದುಬಾರಿ ಹುಚ್ಚಾಟಗಳು ಕೂಡಲೇ ನಿಲ್ಲಬೇಕು. ಎಂದು ಬೆದರಿಸಿದ್ದರು. ಈಗ ಅವರು ಜಗತ್ತಿನ ಶೇ.15ರಷ್ಟು ಹಸಿರು ಮನೆ ಅನಿಲ ತ್ಯಾಜ್ಯಗಳನ್ನು ಹೊರ ಹಾಕುತ್ತಾ ಜಗತ್ತಿನ ಹವಾಮಾನ ಬದಲಾವಣೆಗೆ ಪ್ರಮುಖ ಕಾರಣವಾಗಿರುವ ಅಮೆರಿಕ ದೇಶದ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಅವರು 2017ರ ಜೂನ್ 1 ರಂದು ಅಮೆರಿಕವು 2015ರ ಪ್ಯಾರಿಸ್ ಒಪ್ಪಂದದಿಂದ ಹೊರಬರುವುದಾಗಿ ಮಾಡಿದ ಘೋಷಣೆ ಅನಿರೀಕ್ಷಿತವಾಗಿಲಿಲ್ಲ. ಆದರೆ ಆತಂಕಕಾರಿಯಂತೂ ಆಗಿದೆ.

ಟ್ರಂಪ್ ಆಡಳಿತದ ಹವಾಮಾನ ನೀತಿಯ ಸ್ವರೂಪ ಹೇಗಿರಬಹುದೆಂಬುದು ಇದಕ್ಕೂ ಹಿಂದೆಯೇ ಸ್ಪಷ್ಟವಾಗಿತ್ತು. ಈ ನೀತಿಯ ಕರಡನ್ನು ರೂಪಿಸಿದವರು ಥಾಮಸ್ ಪೈಲ್. ಈತ  ಕೋಚ್ ಸಹೋದರರ (ಅಮೆರಿಕದ ಬೃಹತ್ ತೈಲ್ ಉದ್ಯಮಿ-ಅನುವಾದಕನ ಟಿಪ್ಪಣಿ) ಹಣಕಾಸು ಬೆಂಬಲ ಪಡೆದಿರುವ ಮತ್ತು ಟ್ರಂಪ್ ಆಡಳಿತದ ಇಂಧನ ನೀತಿ ರೂಪುಗೊಳ್ಳುವುದರಲ್ಲಿ ಪ್ರಧಾನ ಪಾತ್ರ ವಹಿಸಿರುವ ಅಮೆರಿಕನ್ ಎನರ್ಜಿ ಅಲಿಯನ್ಸ್ (ಅಮೆರಿಕ ಇಂಧನ ಒಕ್ಕೂಟ)ದ ಮುಖ್ಯಸ್ಥ. ಈತ ರೂಪಿಸಿದ ಕರಡು 2016ರ ಡಿಸೆಂಬರ್‌ನಲ್ಲೇ ಸೋರಿಕೆಯಾಗಿತ್ತು. ಸರಳವಾಗಿ ಹೇಳಬೇಕೆಂದರೆ ಈ ಕರಡು ಸೂಚನೆಯು ಟ್ರಂಪ್ ಆಡಳಿತದ ಹವಾಮಾನ ನೀತಿಯ ತಿರುಳನ್ನು ಹೀಗೆ ನಿರ್ಧರಿಸಿತ್ತು: ಅ) ಅಮೆರಿಕವನ್ನು ಪ್ಯಾರಿಸ್ ಒಪ್ಪಂದದಿಂದ ಹೊರತನ್ನಿ ಆ) ಒಬಾಮಾ ಸರ್ಕಾರದ ಕ್ಲೀನ್ ಪವರ್ ಪ್ಲಾನ್- ಸಿಪಿಪಿ (ಶುದ್ಧ ಶಕ್ತಿಮೂಲ ಯೋಜನೆ)ಯನ್ನು ಮೂಲೆಗುಂಪು ಮಾಡಿ ಮತ್ತು ಇ) ಮತ್ತು ಎಕ್ಸೆಲ್ ಪೈಪ್ಲೈನ್‌ನಂಥ ಈಗಾಗಲೇ ಯೋಜಿತಗೊಂಡಿರುವ ಎಲ್ಲಾ ಯೋಜನೆಗಳನ್ನು ತ್ವರಿತಗತಿಯಲ್ಲಿ ಜಾರಿಗೆ ತನ್ನಿ.

ಟ್ರಂಪ್ ಆಡಳಿತ ಮತ್ತು ಅದರ ಸಹೆಗಾರರು ಅಮೆರಿಕದ ಆಳುವವರ್ಗದ ಒಂದು ವಿಭಾಗವಾದ ತೈಲ ಉದ್ಯಮಿಗಳ ಹಿತಾಸಕ್ತಿಯನ್ನು ಪ್ರತಿನಿಧಿಸುತ್ತಾರೆಂಬುದು ನಿಜವೇ ಆದರೂ ಪ್ಯಾರಿಸ್ ಒಪ್ಪಂದದಿಂದ ಹೊರಬರುವ ಈ ನಿರ್ಧಾರಕ್ಕೆ ಅಮೆರಿಕದ ಇಡೀ ಆಳುವವರ್ಗದ ಸಮ್ಮತಿಯೇನೂ ಇರಲಿಲ್ಲ. ಹಾಗೆಯೇ ಟ್ರಂಪ್ ಸರ್ಕಾರದ ಈ ದುಡುಕಿನ ನಿರ್ಧಾರ ಬಗ್ಗೆ ಜಗತ್ತಿನ ತ್ರಿವಳಿ ಶಕ್ತಿ ಕೂಟದ ಇನ್ನಿಬ್ಬರು ಸದಸ್ಯರಾದ ಪಶ್ಚಿಮ ಯೂರೋಪ್ ಮತ್ತು ಜಪಾನ್ಗಳಿಗೂ ಒಪ್ಪಿಗೆಯಿಲ್ಲ. ಜಗತ್ತಿನ ಈ ತ್ರಿವಳಿ ಶಕ್ತಿಕೂಟಕ್ಕೆ ಅಮೆರಿಕ ಕೊಡುತ್ತಿದ್ದ ನೇತೃತ್ವವನ್ನು ಟ್ರಂಪ್ ಅವರ ಅಮೆರಿಕವೇ ಮೊದಲೆಂಬ ರಾಷ್ಟ್ರೀಯವಾದ ಸಹಜವಾಗಿಯೇ ಪ್ರಶ್ನೆಗೊಡ್ಡಿದೆ.

ತೈಲ ಇಂಧನ ಉದ್ಯಮದ ದೈತ್ಯನಾದ ಕೋಚ್ ಕೈಗಾರಿಕ ಸಮೂಹದ ಕೋಚ್ ಸಹೋದರರು ಮತ್ತು ಇಂಧನ ಉದ್ಯಮದಲ್ಲಿ ಅಪಾರ ಹೂಡಿಕೆ ಮಾಡಿರುವ ಹಾಗೂ ಟ್ರಂಪ್ ಅವರ ಅಧ್ಯಕ್ಷೀಯ ಚುನಾವಣೆಗೆ ದೇಣಿಗೆ ನೀಡಿದ್ದ ಇನ್ನಿತರ ಕೋಟ್ಯಾಧಿಪತಿಗಳನ್ನು ಬಿಟ್ಟರೆ ಅಮೆರಿಕದ ಹಲವಾರು ಬೃಹತ್ ಉದ್ಯಮಿಗಳು ಹವಾಮಾನ ಬದಲಾವಣೆಯ ಅಪಾಯಗಳ ಬಗ್ಗೆ ಮತ್ತು ಅದರಿಂದ ಭವಿಷ್ಯದ ಪೀಳಿಗೆಯ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ. ಉದಾಹರಣೆಗೆ ಜಗತ್ತಿನ ಬೃಹತ್ ಬ್ಯಾಂಕಿಂಗ್ ಉದ್ಯಮಿಯಾದ ಅಮೆರಿಕದ ಗೋಲ್ಡ್ಮನ್ ಸ್ಯಾಚ್‌ನ ಮುಖ್ಯಸ್ಥ ಲಾಯ್ಡ್ ಬ್ಲಾಂಕ್ಫೆನ್ ಅವರು ಟ್ರಂಪ್ ಅವರ ಈ ನಿರ್ಧಾರದ ಬಗ್ಗೆ ಅಸಮಧಾನಗೊಂಡಿದ್ದಾರೆ. ಅವರು ಈ ನಿರ್ಧಾರವನ್ನು ಪರಿಸರಕ್ಕೆ ಬಾರಿ ಹೊಡೆತ ಮತ್ತು ಜಗತ್ತಿನಲ್ಲಿ ಅಮೆರಿಕ ಪಡೆದುಕೊಂಡಿದ್ದ ನಾಯಕತ್ವ ಸ್ಥಾನಕ್ಕೆ ಭಾರಿ ಹಿನ್ನೆಡೆ ಎಂದು ಟೀಕಿಸಿದ್ದಾರೆ. ಮತ್ತೊಂದು ಕಡೆ ಈ ನಿರ್ಧಾರವನ್ನು ಎಕ್ಸಾನ್ ಮೊಬಿಲ್ ನಂಥ ದೈತ್ಯ ಬಹುರಾಷ್ಟ್ರೀಯ ಕಂಪನಿಗಳು ಸಹಜವಾಗಿಯೇ ಬೆಂಬಲಿಸಿವೆ. ಆದರೆ ಆ ಕಂಪನಿಯ ಮಾಜಿ ಮುಖ್ಯಾಧಿಕಾರಿ ರೆಕ್ಸ್ ಟಿಲ್ಲರ್ಸನ್ ಸಹ ಇದರಿಂದ ಅಂತರ ಕಾಯ್ದುಕೊಂಡಿದ್ದಾರೆ. ಅಮೆರಿಕದ ಪರಿಸರ ರಕ್ಷಣಾ ಏಜೆನ್ಸಿಯ ಮುಖ್ಯಸ್ಥ ಸ್ಕಾಟ್ ಪ್ರುಯಿಟ್ ಮತ್ತು ಟ್ರಂಪ್ ಸರ್ಕಾರದಲ್ಲಿ ಹವಾಮಾನ ಬದಲಾವಣೆಯ ವಿದ್ಯಮಾನವನ್ನೇ ತಿರಸ್ಕರಿಸುವವರಲ್ಲಿ ಪ್ರಮುಖರಾದ  ಹಾಗೂ ಆಲ್ಟ್-ರೈಟ್ ಬ್ರೆಯಿಟ್ಬಾರ್ಟ್ ನ್ಯೂಸ್‌‌ನ ಮುಖ್ಯಸ್ಥರೂ ಆದ ಸ್ಟೀಫನ್ ಬ್ಯಾನನಂಥವರ ಹೇಳಿಕೆಗಳನ್ನು ಎಕ್ಸಾನ್ ಮೊಬಿಲ್‌ನ ಮಾಜಿ ಮುಖ್ಯಸ್ಥ ಸಮರ್ಥಿಸದೇ ಮೌನ ಕಾದುಕೊಂಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಬಂಡವಾಳವು ಇನ್ನಾದರೂ ಪ್ರಾಕೃತಿಕ ಸಮತೋಲನವನ್ನು ಗಮನದಲ್ಲಿಟ್ಟುಕೊಂಡು ಆಧುನೀಕರಣಗೊಳ್ಳಬೇಕಿದೆ ಎಂಬುದನ್ನು ಈ ತ್ರಿವಳಿ ಶಕ್ತಿ ಕೂಟದ ಆಳುವವರ್ಗಗಳು ಮತ್ತು ಅವರ ರಾಜಕೀಯ ಪ್ರತಿನಿಧಿಗಳು ಅರ್ಥಮಾಡಿಕೊಳ್ಳುತ್ತಿರುವಂತಿದೆ.

ಹಾಗಿದ್ದರೂ ಪ್ಯಾರಿಸ್ ಒಪ್ಪಂದದಲ್ಲಿ ಮಾಡಿಕೊಳ್ಳಲಾದ ಒಪ್ಪಂದಗಳ ಪಾಲನೆಯನ್ನು ಪ್ರಜ್ಞಾಪೂರ್ವಕವಾಗಿಯೇ ಕಡ್ಡಾಯಗೊಳಿಸದೆ ಅನಿರ್ಭಂಧಿತವಾಗಿಯೂ, ಸ್ವಪ್ರೇರೀತವಾಗಿಯೂ ಇರುವಂತೆ ನೋಡಿಕೊಳ್ಳಲಾಗಿತ್ತು. ಈ ಶರತ್ತುಗಳ ಪಾಲನೆಯನ್ನು ಖಾತರಿಪಡಿಸುವ ಯಾವುದೇ ಸಾಂಸ್ಥಿಕ ರಚನೆಗಳಾಗಲೀ, ಈ ಶರತ್ತುಗಳನ್ನು ಉಲ್ಲಂಘಿಸಿದಲ್ಲಿ ಯಾವುದೇ ದಂಡದ ಕಲಮುಗಳಾಗಲಿ ಈ ಒಪ್ಪಂದದಲ್ಲಿರಲಿಲ್ಲ. ಒಬಾಮಾ ಆಡಳಿತವು ಈ ಹಿನ್ನೆಲೆಯಲ್ಲಿ ಸಿಪಿಪಿ (ಶುದ್ಧ ಶಕ್ತಿಮೂಲ ಯೋಜನೆ)ಯನ್ನು ಜಾರಿಗೆ ತಂದಿತು. ಅದರಡಿಯಲ್ಲಿ ಪರಿಸರ ರಕ್ಷಣಾ ಏಜೆನ್ಸಿ (ಇಪಿಎ)ಯು ಶುದ್ಧ ಗಾಳಿ ಕಾಯಿದೆಯಡಿ ಎಲ್ಲಾ ವಿದ್ಯುತ್ ಉತ್ಪಾದನಾ ಸ್ಥಾವರಗಳ ಇಂಗಾಲ ತ್ಯಾಜ್ಯದ ಹೊರಸೂಸುವಿಕೆಯನ್ನು ಕಾನೂನಾತ್ಮಕವಾಗಿ ನಿಯಂತ್ರಿಸಬೇಕಿತ್ತು. ಆದರೆ ಅಮೆರಿಕದ ತೈಲ ಇಂಧನ ಉದ್ಯಮಿಗಳು ಈ ಕಾಯಿದೆಯ ವಿರುದ್ಧ ಮೊಕದ್ದಮೆಯನ್ನು ಹೂಡಿ ಅದರ ಅನುಷ್ಠಾನಕ್ಕೆ ತಡೆಯೊಡ್ಡಿದರು. ಇದೀಗ ಟ್ರಂಪ್ ಆಡಳಿತವು ಇಡೀ ಶುದ್ಧ ಶಕ್ತಿ ಮೂಲ ಯೋಜನೆಯನ್ನೇ ರದ್ದು ಮಾಡುತ್ತಿದೆ.

ಪ್ಯಾರಿಸ್ ಒಪ್ಪಂದವು ಅನಿರ್ಬಂಧಿತ ಮತ್ತು ಸ್ವಪ್ರೇರಿತ  ಎಂಬ ಕಾರಣದಿಂದಾಗಿಯೇ ಜಗತ್ತಿನ ತ್ರಿವಳಿ ಶಕ್ತಿಕೂಟದ ಆಳುವವರ್ಗಗಳು ಮತ್ತು ಅವರ ರಾಜಕಿಯ ಪ್ರತಿನಿಧಿಗಳು ಅದಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದರು. ಇದಕ್ಕೆ ತದ್ವಿರುದ್ಧವಾಗಿ ಕ್ಯೋಟೋ ಒಪ್ಪಂದವು ಅಮೆರಿಕ ಆದಿಯಾಗಿ ಎಲ್ಲಾ ಅಭಿವೃದ್ಧಿ ಹೊಂದಿದ ದೇಶಗಳು ತಮ್ಮ ತಮ್ಮ ದೇಶಗಳ ಹಸಿರು ಅನಿಲ ತ್ಯಾಜ್ಯದ ಪ್ರಮಾಣವನ್ನು ಇಂತಿಷ್ಟು ವರ್ಷಗಳಲ್ಲಿ ಇಂತಿಷ್ಟು ಪ್ರಮಾಣಕ್ಕೆ ಇಳಿಸಲೇಬೇಕೆಂಬ ನಿರ್ಬಂಧವನ್ನು ಹೇರಿತ್ತು. ಆದರೆ ಅಮೆರಿಕವು ಈ ಒಪ್ಪಂದವನ್ನು ಅನುಮೋದಿಸಲೂ ಇಲ್ಲ ಮತ್ತು ಜಾಗತಿಕ ತಾಪಮಾನವನ್ನು ಇಳಿಸಲು ಯಾವುದೇ ಕ್ರಮಗಳನ್ನೂ ತೆಗೆದುಕೊಳ್ಳಲಿಲ್ಲ. ವಾಸ್ತವವೆಂದರೆ ಯಾವುದೇ ನಿರ್ಬಂಧವಿಲ್ಲದ ಮತ್ತು ಅವರವರ ಸ್ವಪ್ರೇರಣೆಗೆ ಬಿಟ್ಟ ಯಾವುದೇ ಒಪ್ಪಂದಗಳು ಪಾಲ್ನೆಯಾಗುವುದಿಲ್ಲ್ಲ. ಈ ಮಧ್ಯೆ ಹವಾಮಾನ ಬದಲಾವಣೆಯ ಅಧ್ಯಯನದಲ್ಲಿ ತೊಡಗಿಕೊಂಡಿರುವ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿಜ್ನಾನಿಗಳ ಪ್ರಕಾರ ಹಸಿರುಮನೆ ಅನಿಲ ತ್ಯಾಜ್ಯಗಳ ಹೊರಸೂಸುವಿಕೆಯು  ಹೀಗೆಯೇ ತಡೆಯಿಲ್ಲದೆ ಮುಂದುವರೆದಲ್ಲಿ ಇನ್ನು ಕೇವಲ ಇಪ್ಪತ್ತು ವರ್ಷಗಳಲ್ಲಿ ಜಗತ್ತಿನ ತಾಪಮಾನವು ಕೈಗಾರಿಕಾಪೂರ್ವ ತಾಪಮಾನಕ್ಕಿಂತ 2 ಡಿಗ್ರಿ ಸೆಂಟಿಗ್ರೇಡಿನಷ್ಟು ಹೆಚ್ಚಾಗಿಬಿಡುತ್ತದೆ. ಹಾಗಾದಲ್ಲಿ ಈ ಭೂಮಂಡಲದಲ್ಲಿ ಯಾರೂ ತಡೆಯಲಾಗದ ಪ್ರಕ್ರಿಯೆಗಳು ಪ್ರಾರಂಭವಾಗಿಬಿಡುತ್ತವೆ. ಆದರೂ ಜಗತ್ತಿನ ತಾಪಮಾನವು ಈ ಪ್ರಮಾಣದಲ್ಲಿ ಏರಿಕೆ ಕಾಣಲು ಪ್ರಮುಖ ಕಾರಣರಾದ ಶ್ರೀಮಂತ ದೇಶಗಳು ತಮ್ಮ ನಡುವೆ ಯಾವುದೇ ನಿರ್ಭಂಧಕ್ಕೆ ಒಳಪಡಿಸದಂಥ ಒಪ್ಪಂದಗಳನ್ನು ಮಾಡಿಕೊಂಡಿವೆ. ಭೂಮಂಡಲವೇ ಹೊತ್ತಿ ಉರಿಯುತ್ತಿರುವಾಗ ಬೆಂಕಿ ಕಾಯಿಸಿಕೊಳ್ಳುವ ಉಮೇದಿನಲ್ಲಿದ್ದಾರೆ.

ಮೂಲಭೂತವಾದ ವಿಷಯವೇನೆಂದರೆ ಶ್ರಮದ ಮತ್ತು ಪ್ರಕೃತಿಯ ಶೋಷಣೆಯಲ್ಲಿ ಬೇರುಬಿಟ್ಟಿರುವ ಈ ಬಂಡವಾಳಶಾಹಿ ವ್ಯವಸ್ಥೆಯು ಮಾಡುತ್ತಿರುವ ದಾಳಿಗಳನ್ನು ಇನ್ನು ಪ್ರಕೃತಿಯು ತಾಳಿಕೊಳಲಾಗದ ಪ್ರಮಾಣವನ್ನು ಮುಟ್ಟಿದೆ. ಅದರಲ್ಲೂ ಮುಖ್ಯವಾಗಿ ಭೂಗರ್ಭವನ್ನು ಭೇಧಿಸಿ ತೆಗೆಯುವ ತೈಲ ಇಂಧನವನ್ನು ಆಧರಿಸಿದ ಉತ್ಪಾದನೆ ಮತ್ತು ಬಳಕೆಗಳ ಮೇಲಿನ ಅವಲಂಬನೆಯನ್ನು ಧಾರಣೆ ಮಾಡುವ ಶಕ್ತಿ ಪ್ರಕೃತಿಗಿಲ್ಲ. ಹಾಗಿದ್ದರೂ ಈ ಬಂಡವಾಳಶಾಹಿ ವ್ಯವಸ್ಥೆಯ ಪ್ರಧಾನ ಫಲಾನುಭವಿಗಳು ಅತ್ಯಂತ ಪರಿಸರ ವಿರೋಧಿಗಳೇ ಆಗಿದ್ದು ಪುನರ್‌ನವೀಕರಿಸಬಹುದಾದ ಬದಲೀ ಇಂಧನಮೂಲಗಳ ಬಳಕೆಯನ್ನು ತಡೆಗಟ್ಟುತ್ತಿದ್ದಾರೆ. ಅವರ ಪ್ರಧಾನ ಪ್ರತಿನಿಧಿಯಾದ ಟ್ರಂಪ್ ಅಮೆರಿಕವನ್ನು ಪ್ಯಾರಿಸ್ ಒಪ್ಪಂದದಿಂದ ಹೊರತರುವ ಮೂಲಕ ಭೂಮಿತಾಯಿಗೆ ಮರಣದಂಡನೆಯನ್ನು ಘೋಷಣೆ ಮಾಡಿದ್ದಾರೆ. ಟ್ರಂಪ್ ಅವರ ಬೆಂಬಲಕ್ಕೆ ನಿಂತಿರುವ ಬಂಡವಾಳಶಾಹಿ ವರ್ಗ ಈ ಶಿಕ್ಷೆಯನ್ನು ಅಮಲಿಗೆ ತರುವುದೇ ಆದಲ್ಲಿ ಈ ಮನುಷ್ಯ ಸಮಾಜ ಮಾತ್ರವಲ್ಲ ಭೂಮಿಯ ಮೇಲಿನ ಸಕಲ ಚರಾಚರ ಜೀವ ಸಂಕುಲವು ದೀರ್ಘ ಮತ್ತು ಯಾತನಾಮಯ ಅಂತ್ಯವನ್ನು ಕಾಣಲಿವೆ.

ಕೃಪೆ: Economic and Political Weekly

 
comments powered by Disqus
Facebook Twitter Google Plus Youtube
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ