ಮೋದಿ ಸರ್ಕಾರಕ್ಕೆ 3: ಒಂದು ಅವಲೋಕನ
ಮೋದಿ ಸರ್ಕಾರದಡಿ ''ಅಭಿವೃದ್ಧಿ'' ಆಗಿರುವುದೆಂದರೆ ಗುಂಪುಗಳು ಕಾನೂನಿನ ಭಯವಿಲ್ಲದೆ ಕೊಲೆ, ಹಿಂಸಾಚಾರಗಳಲ್ಲಿ ತೊಡಗುವಲ್ಲಿ! ದಲಿತ, ದಮನಿತರ ಮೇಲಿನ ದೌರ್ಜನ್ಯಗಳಲ್ಲಿ! ಗೋರಕ್ಷಕರ ಹಲ್ಲೆಗಳಲ್ಲಿ!

ಸುರೇಶ ಭಟ್ ಬಾಕ್ರಬೈಲ್

ಹೊತ್ತು ಮೋದಿ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಸಂಘಿಗಳು 900 ನಗರಗಳಲ್ಲಿ 'ಮೋದಿ ಉತ್ಸವ' ಆಚರಿಸುತ್ತಾ ಸರ್ಕಾರದ ಸಾಧನೆಗಳನ್ನು ಕೊಂಡಾಡುತ್ತಿದ್ದಾರೆ. ಹಾಗಾದರೆ ಮೋದಿ ಸರ್ಕಾರ ನಿಜಕ್ಕೂ ಅಷ್ಟೊಂದು ಸ್ತುತ್ಯಾರ್ಹವಾದ ಸಾಧನೆಗಳನ್ನು ಮಾಡಿದೆಯೆ ಎಂದು ನೋಡಬೇಡವೆ? ಚುನಾವಣಾ ಭರವಸೆಗಳ ಜಾಡು ಹಿಡಿಯುವ ತಂಡ (Election Promises Tracker) ನಡೆಸಿರುವ ಅಧ್ಯಯನವೊಂದು ಹೇಳುವಂತೆ 2014ರ ಚುನಾವಣೆಗೆ ಮೊದಲು ಬಿಜೆಪಿ ನೀಡಿದ್ದ 126 ಭರವಸೆಗಳ ಪೈಕಿ ಇದುವರೆಗೆ ಬರೀ ಶೇಕಡಾ 8ರಷ್ಟನ್ನು ಮಾತ್ರ ಈಡೇರಿಸಲಾಗಿದೆ. ಇವೆಲ್ಲವೂ ಯೋಗ, ಆಯುಷ್, ಕೃಷಿ ವಿಮೆ, ಕೆಲವೊಂದು ಪುರಾತನ ಕಾಯ್ದೆಗಳ ಪರಿಷ್ಕರಣೆ/ರದ್ದತಿಯಂತಹ ಅಷ್ಟೇನೂ ಮುಖ್ಯವಲ್ಲದ ವಿಷಯಗಳಿಗೆ ಸಂಬಂಧಿಸಿವೆ! 'ಪ್ರಧಾನ ಮಂತ್ರಿ ಕೃಷಿ ವಿಮೆ ಯೋಜನೆ'ಯಿಂದ ರೈತರಿಗೆ ಯಾವ ಪ್ರಯೋಜನವೂ ಇಲ್ಲದಿರುವುದನ್ನು ಹಿಂದಿನ ಅಂಕಣವೊಂದರಲ್ಲಿ ವಿವರಿಸಲಾಗಿದೆ. ನಿಜಕ್ಕೂ ಅತ್ಯಾವಶ್ಯಕವಾದ ಎಲ್ಲಾ ಜನವರ್ಗಗಳ ಅಭಿವೃದ್ಧಿ, ಸೌಹಾರ್ದಯುತ ಸಮಾಜ ನಿರ್ಮಾಣ, ಭ್ರಷ್ಟಾಚಾರ ಮತ್ತು ಕಾಳಧನ ನಿರ್ಮೂಲನ, ಹೂಡಿಕೆ, ಉತ್ಪಾದನೆಯಲ್ಲ್ಲಿ ಹೆಚ್ಚಳ, ನಿರುದ್ಯೋಗ ನಿವಾರಣೆ ಮೊದಲಾದ ಬಹುಮುಖ್ಯ ಕ್ಷೇತ್ರಗಳಲ್ಲಿ ಸರ್ಕಾರದ ವೈಫಲ್ಯ ಎದ್ದುಕಾಣುವಂತಿದೆ.

'ಸಬ್ ಕಾ ಸಾಥ್ ಸಬ್ ಕಾ ವಿಕಾಸ್'
ಜನಸಾಮಾನ್ಯರು ರಾಜಕೀಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಬಹುಬೇಗನೆ ಮರೆಯುತ್ತಾರೆ ಎಂಬ ಸತ್ಯವನ್ನು ಅರಿತಿರುವುದರಿಂದಲೆ ನಟಸಾರ್ವಭೌಮ ಮೋದಿ ಅಂದು ಜನಪ್ರಿಯ ಘೋಷಣೆಗಳ ಮೂಲಕ ಮತದಾರರನ್ನು ಸೆಳೆಯುವಲ್ಲಿ ಯಶಸ್ಸು ಸಾಧಿಸಿದ. ಆತನ ಸು(ಕು)ಪ್ರಸಿದ್ಧ ಘೋಷಣೆಗಳಲ್ಲೊಂದಾದ 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಕೂಡಾ ಆತನ ಇನ್ನಿತರ ಘೋಷಣೆಗಳ ಹಾಗೆ ಬರೀ ಬಾಯಿಮಾತಿಗೆ ಸೀಮಿತವಾಗಿಬಿಟ್ಟಿದೆ. ಒಟ್ಟಾರೆಯಾಗಿ ನೋಡಿದರೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಅತ್ತ ರೈತರ ವಿಕಾಸವೂ ಆಗಿಲ್ಲ, ಇತ್ತ ಕಾರ್ಮಿಕರ ವಿಕಾಸವೂ ಆಗಿಲ್ಲ, ಬಡವರ ವಿಕಾಸವೂ ಆಗಿಲ್ಲ, ನಿರುದ್ಯೋಗಿಗಳ ವಿಕಾಸವೂ ಆಗಿಲ್ಲ, ಅಲ್ಪಸಂಖ್ಯಾತರ ವಿಕಾಸವೂ ಆಗಿಲ್ಲ. ಮೋದಿ ಸರ್ಕಾರದಡಿ 'ಅಭಿವೃದ್ಧಿ' ಆಗಿರುವುದೆಂದರೆ ಗುಂಪುಗಳು ಕಾನೂನಿನ ಭಯವಿಲ್ಲದೆ ಕೊಲೆ, ಹಿಂಸಾಚಾರಗಳಲ್ಲಿ ತೊಡಗುವಲ್ಲಿ! ದಲಿತ, ದಮನಿತರ ಮೇಲಿನ ದೌರ್ಜನ್ಯಗಳಲ್ಲಿ! ಗೋರಕ್ಷಕರ ಹಲ್ಲೆಗಳಲ್ಲಿ! ಅನೈತಿಕ ಪೊಲೀಸ್‌ಗಿರಿಯಲ್ಲಿ! ಲವ್ ಜಿಹಾದ್ ಆರೋಪಗಳಲ್ಲಿ! ಸಿನಿಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ ಮಾಡುವಲ್ಲಿ! ಆಡಳಿತದ ಪ್ರಮುಖ ಸ್ಥಾನಗಳಲ್ಲಿ ಆರೆಸ್ಸೆಸಿಗರ ನೇಮಕದಲ್ಲಿ! ಶ್ರೀಮಂತರ ಸಂಪತ್ತಿನಲ್ಲಿ! ಬ್ಯಾಂಕುಗಳ ಅನುತ್ಪಾದಕ ಆಸ್ತಿಯ (ಎನ್‌ಪಿಎ; ಮರಳಿಸದ ಸಾಲ) ಪ್ರಮಾಣದಲ್ಲಿ!

ಮೂರು ವರ್ಷಗಳ ಹಿಂದೆ 2.3 ಲಕ್ಷ ಕೋಟಿಯಷ್ಟಿದ್ದ ಬ್ಯಾಂಕುಗಳ ಎನ್‌ಪಿಎ ಇಂದು 6.8 ಲಕ್ಷ ಕೋಟಿಯಷ್ಟಾಗಿದೆ. ಅಂದರೆ ಸುಮಾರು ಮೂರುಪಟ್ಟು ಏರಿಕೆಯಾಗಿದೆ! ಈ ಮರಳಿಸದ ಸಾಲದ ಶೇಕಡಾ 70ರಷ್ಟಕ್ಕೆ ಬೆರಳೆಣಿಕೆಯ ಕಾರ್ಪೊರೇಟುಗಳೆ ಕಾರಣ. ಇದರರ್ಥ ಕಾರ್ಪೊರೇಟುಗಳಿಗೆ ಲೂಟಿ ಹೊಡೆದು ಅಭಿವೃದ್ಧಿಯಾಗಲು ಮುಕ್ತ ಅವಕಾಶಗಳನ್ನು ನೀಡಲಾಗಿದೆ. ಇಂತಹ ಕಾರ್ಪೊರೇಟುಗಳಿಗೆ ಸದ್ಯದಲ್ಲಿ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳನ್ನು ಖರೀದಿಸುವ ಅವಕಾಶವೂ ದೊರೆಯಲಿದೆ! Credit Suisse ಸಂಸ್ಥೆಯ ಸಮೀಕ್ಷಾ ವರದಿ ಪ್ರಕಾರ ಭಾರತದ ಜನಸಂಖ್ಯೆಯ ಶೇಕಡಾ 1ರಷ್ಟಿರುವ ಆಗರ್ಭ ಶ್ರೀಮಂತರ ಸಂಪತ್ತು 2015ರಲ್ಲಿ ಶೇಕಡಾ 53ರಷ್ಟಿದ್ದರೆ 2016ರಲ್ಲಿ ಅದು ಶೇಕಡಾ 58.4ಕ್ಕೇರಿದೆ. ಮೋದಿ ಸರ್ಕಾರದ ಆಡಳಿತದಲ್ಲಿ ನಿಜವಾಗಿ ಯಾರ ವಿಕಾಸ ಆಗಿದೆ ಎಂಬುದಕ್ಕೆ ಬೇರೆ ನಿದರ್ಶನಗಳ ಅವಶ್ಯಕತೆ ಇದೆಯೆ?

ನೋಟು ರದ್ದತಿ
ಭ್ರಷ್ಟಾಚಾರ, ಭಯೋತ್ಪಾದನೆ, ಖೋಟಾ ನೋಟು ಎಂಬ ಮೂರು ಆಪತ್ತುಗಳನ್ನು ಎದುರಿಸಲೆನ್ನಲಾದ ನೋಟು ರದ್ದತಿ ಮೂರೂ ರಂಗಗಳಲ್ಲಿ ವಿಫಲವಾಗಿದೆ. ಅಸಲಿಗೆ ಅದು ಯಶಸ್ವಿಯಾಗಿರುವುದು ವಿರೋಧ ಪಕ್ಷಗಳ ಬಲವನ್ನು ಕುಗ್ಗಿಸುವಲ್ಲಿ ಮತ್ತು ಪೇಟಿಎಂನಂತಹ ನಗದುರಹಿತ ಪಾವತಿ ಕಂಪೆನಿಗಳ ವ್ಯಾಪಾರ ಹೆಚ್ಚಿಸುವಲ್ಲಿ. ನೋಟು ರದ್ದತಿಯಿಂದಾಗಿ ಕಪ್ಪುಹಣವೆಲ್ಲ ಹೊರಬೀಳಲಿದೆ, ದೇಶವನ್ನು ಶುದ್ಧೀಕರಿಸುವ ಈ ಮಹಾನ್ ತ್ಯಾಗಕ್ಕೆ ಸಿದ್ಧರಾಗಿ ಎಂದು ಮುಂತಾಗಿ ಟಾಂಟಾಂ ಮಾಡಿದ ಮೋದಿ ಸರ್ಕಾರ ಇದುವರೆಗೂ ಎಷ್ಟು ಕಪ್ಪುಹಣ ಹೊರಬಂದಿದೆ ಎಂದು ಜನರಿಗೆ ತಿಳಿಸಿಲ್ಲ! ಅಮಾನ್ಯಗೊಳಿಸಿದ ದುಡ್ಡಿನ ಶೇಕಡಾ 97ರಷ್ಟು ಅಥವಾ ಅದಕ್ಕಿಂತಲೂ ಹೆಚ್ಚಿನ ಮೊತ್ತ ಮರಳಿಬಂದಿರುವಾಗ ಮೋದಿ ಸರ್ಕಾರದ ಮೌನಕ್ಕೆ ಕಾರಣವೇನೆಂದು ಬಿಡಿಸಿ ಹೇಳಬೇಕೆ?! ಈ ಸಂದರ್ಭದಲ್ಲಿ ಭ್ರಷ್ಟಾಚಾರ ನಿರ್ಮೂಲನೆಯ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವವರು ಲೋಕಪಾಲ ಹುದ್ದೆಯನ್ನೇಕೆ ಖಾಲಿ ಇಟ್ಟಿದ್ದಾರೆ ಮತ್ತು 2013-14ರಲ್ಲಿ ಗುಜರಾತ್ ಸಿ.ಎಂ. ಮತ್ತಿತರ ರಾಜಕಾರಣಿಗಳಿಗೆ ಲಂಚ ಪಾವತಿಯಾಗಿರುವುದಕ್ಕೆ ಸಂಬಂಧಿಸಿದ ಸಹಾರಾ ಬಿರ್ಲಾ ಪೇಪರ್ಸ್ ಹಗರಣವನ್ನು ಯಾಕೆ ತನಿಖೆಗೊಳಪಡಿಸುತ್ತಿಲ್ಲವೆಂದು ವಿವರಿಸುವ ಅಗತ್ಯ ಇದೆಯೆ? ಪಾಪ, ಮಹಾನ್ ತ್ಯಾಗ ಮಾಡಿರುವ ಜನರಿನ್ನೂ ವಿದೇಶಗಳಿಂದ ಬರಲಿರುವ ರೂ 15 ಲಕ್ಷ ಕಪ್ಪುಹಣಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ!

ನೋಟು ರದ್ದತಿಯ ಪರಿಣಾಮವಾಗಿ 91 ಲಕ್ಷ ಜನ ಹೊಸದಾಗಿ ತೆರಿಗೆ ಜಾಲಕ್ಕೆ ಸೇರ್ಪಡೆಯಾಗಿದ್ದು ಭಾರಿ ಪ್ರಮಾಣದ ಕಪ್ಪುಹಣವನ್ನು ಪತ್ತೆಹಚ್ಚಲಾಗಿದೆ ಎಂದು ಭಟ್ಟಂಗಿ ಮಾಧ್ಯಮಗಳ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಆದರೆ ವಾಸ್ತವ ಬೇರೆಯೆ ಇದೆ. ಈ 91 ಲಕ್ಷ ಸಂಖ್ಯೆ ಇಡೀ ವಿತ್ತ ವರ್ಷಕ್ಕೆ (2016-17) ಸಂಬಂಧಪಟ್ಟುದಾಗಿದೆ ಹೊರತು ನೋಟು ರದ್ದತಿ (2016ರ ನವಂಬರ್ 8) ನಂತರದ ಕಾಲಾವಧಿಯದಲ್ಲ! ಅದೇ 2014-15ರ ವಿತ್ತ ವರ್ಷದಲ್ಲಿ ಸುಮಾರು 76 ಲಕ್ಷ ಹೊಸ ತೆರಿಗೆದಾರರಿದ್ದರು. ಅಂದರೆ ಎರಡು ವರ್ಷಗಳಲ್ಲಿ ಸುಮಾರು 15 ಲಕ್ಷ ಹೊಸ ತೆರಿಗೆದಾರರ ಸೇರ್ಪಡೆಯಾಗಿದೆ. ಇದು ಆಗಿರುವುದು ಮಾಮೂಲಿ ಬೆಲೆ ಏರಿಕೆ ಮತ್ತು ಪ್ರತಿ ವರ್ಷ ಸಹಜವಾಗಿ ಸೇರ್ಪಡೆಯಾಗುವ ಹೊಸ ತೆರಿಗೆದಾರರಿಂದ ಹೊರತು ನೋಟು ರದ್ದತಿಯಿಂದ ಅಲ್ಲ ಎಂಬುದಕ್ಕೆ ಬಲವಾದ ಸಾಕ್ಷ್ಯಾಧಾರಗಳಿವೆ. ಏಕೆಂದರೆ ನೋಟು ರದ್ದತಿ ಇರದ 2012-13ರಲ್ಲಿ ಒಟ್ಟು ಅಘೋಷಿತ ಆದಾಯ (ಕಪ್ಪು ಹಣ) ರೂ 29,629 ಕೋಟಿ ಇದ್ದರೆ 2013-14ರಲ್ಲಿ ರೂ 1,01,182 ಕೋಟಿಯಷ್ಟಾಗಿತ್ತು! ನೋಟು ರದ್ದತಿ ನಡೆದ 2016-17ರಲ್ಲಿ ಇದು ಇನ್ನೂ ಹೆಚ್ಚಾಗಬೇಕಿತ್ತು ತಾನೆ. ಆದರೆ 2016-17ರಲ್ಲಿ ಒಟ್ಟು ಅಘೋಷಿತ ಆದಾಯದ ಪ್ರಮಾಣ ಸುಮಾರು 3 ಪಟ್ಟು ಕಡಮೆಯಾಗಿದ್ದು ಅದೀಗ ರೂ 31,211 ಕೋಟಿಗಿಂತ ಸ್ವಲ್ಪ ಜಾಸ್ತಿ ಇರಬಹುದಷ್ಟೆ! ಇದರರ್ಥ ಏನೆಂದರೆ ಮೋದಿ ಸರ್ಕಾರದ ನೋಟು ರದ್ದತಿಯಿಂದ ಕಪ್ಪುಹಣದ ಸ್ಥಿತಿಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ! ವಾಸ್ತವದಲ್ಲಿ 2012-13ರಿಂದೀಚೆಗಿನ ಅಂಕಿಅಂಶಗಳನ್ನು ಪರಿಶೀಲಿಸಿದಾಗ 2014-15ರ ನಂತರದಲ್ಲಿ ಆದಾಯ ತೆರಿಗೆ ಇಲಾಖೆ ಮೊದಲಿನಷ್ಟು ಪರಿಣಾಮಕಾರಿಯಾಗಿಲ್ಲ ಎಂದು ತಿಳಿದುಬರುತ್ತದೆ.

ನೋಟು ರದ್ದತಿಯಿಂದ ಭಯೋತ್ಪಾದನೆ, ಗಡಿ ಅತಿಕ್ರಮಣಗಳು ಕಡಿಮೆಯಾಗಲಿವೆ ಎಂದು ಕೊಚ್ಚಿಕೊಂಡವರು ಈಗ ಗಡಿ ಸಂಘರ್ಷಗಳಲ್ಲಿ ಹೆಚ್ಚಳವಾಗಿರುವ ಬಗ್ಗೆ ಜಾಣ ಮೌನ ವಹಿಸಿದ್ದಾರೆ. ಅಂದು ಯುಪಿಎ ಸರ್ಕಾರ ಮತ್ತು ಅದರ ಪ್ರಧಾನಿಯನ್ನು ದುರ್ಬಲರೆಂದು ಟೀಕಿಸುತ್ತಿದ್ದ ಮೋದಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಪಾಕಿಸ್ತಾನ ಯಾವತ್ತೂ ಭಾರತದ ಮೇಲೆ ದಾಳಿ ಮಾಡುವ ಧೈರ್ಯ ತೋರದು ಎಂದಿದ್ದ. ಆದರೆ ಈಗ ಬಿಜೆಪಿ ಆಡಳಿತ ಇರುವಾಗ 2015ರಲ್ಲಿ 405 ಗಡಿ ಉಲ್ಲಂಘನೆಗಳಾಗಿದ್ದರೆ 2016ರಲ್ಲಿ ಅವುಗಳ ಸಂಖ್ಯೆ 449ಕ್ಕೆ ಏರಿದೆ; ಇದುವರೆಗೆ 23 ಭಾರತೀಯ ಯೋಧರು ಹತರಾಗಿದ್ದಾರೆ. ಕಳೆದ ಕೇವಲ ಎರಡು ವಾರಗಳ ಅವಧಿಯಲ್ಲಿ ಜಮ್ಮು ಕಾಶ್ಮೀರದಲ್ಲಿ ಪಾಕ್ ವತಿಯಿಂದ 8 ಉಲ್ಲಂಘನೆಗಳು ನಡೆದಿವೆ.

ಕೃಷಿ ವಲಯ
ಚುನಾವಣಾ ಪ್ರಚಾರದ ಕಾಲದಲ್ಲಿ ರೈತ ರ‍್ಯಾಲಿಗಳಲ್ಲಿ ರಂಗುರಂಗಿನ ಭರವಸೆಗಳನ್ನು ಕೊಟ್ಟಿದ್ದ ಮೋದಿ, ಬಿಜೆಪಿಯನ್ನು ಗೆಲ್ಲಿಸಿದರೆ ಕೃಷಿ ಉತ್ಪನ್ನಗಳ ಖರೀದಿ ಬೆಲೆಯನ್ನು ಸ್ವಾಮಿನಾಥನ್ ಸಮಿತಿಯ ವರದಿಗೆ ಅನುಸಾರವಾಗಿ (ರೈತರಿಗೆ ಶೇಕಡಾ 50ರಷ್ಟು ಲಾಭ ಸಿಗುವ ಹಾಗೆ) ನಿಗದಿಪಡಿಸಲಾಗುವುದೆಂದು ವಾಗ್ದಾನ ಮಾಡಿದ್ದ. ಆದರೆ ಇಂದು ಕೃಷಿ ಉತ್ಪನ್ನ ಖರೀದಿ ನೀತಿಯನ್ನು ವಿಶ್ವ ವಾಣಿಜ್ಯ ಮಂಡಳಿಯ ನಿಯಮಗಳಿಗೆ ಅನುಸಾರವಾಗಿ ರೂಪಿಸುವ ಮೂಲಕ ಹಿಂದಿನ ಭರವಸೆಗೆ ಬೆನ್ನು ತೋರಿಸಲಾಗುತ್ತಿದೆ. 2022ರೊಳಗಾಗಿ ಕೃಷಿ ವಲಯದಲ್ಲಿನ ಆದಾಯಗಳನ್ನು ಎರಡು ಪಟ್ಟು ಹೆಚ್ಚಿಸಲಾಗುವುದು ಎಂಬುದು ಮೋದಿ ಸರ್ಕಾರದ ಮತ್ತೊಂದು ಭರವಸೆಯಾಗಿತ್ತು. ಆದರೆ ಕೃಷಿ ವಲಯದ ಜಿಡಿಪಿಯನ್ನು ನೋಡಿದರೆ ಸಾಕು, ಮೋದಿ ಸರ್ಕಾರದ ಬಣ್ಣವೆಲ್ಲ ಬಯಲಾಗುತ್ತದೆ. ಯುಪಿಎ 2ರ ಕಾಲದಲ್ಲಿ ಜಿಡಿಪಿಯಲ್ಲಿ ಶೇಕಡಾ 3.6ರಷ್ಟು ಏರಿಕೆ ಆಗಿದ್ದರೆ 2014ರ ನಂತರದ 3 ವರ್ಷಗಳಲ್ಲಿ ಜಿಡಿಪಿಯಲ್ಲಿ ಆಗಿರುವ ಹೆಚ್ಚಳ ಕೇವಲ ಶೇಕಡಾ 1.7 ಅಷ್ಟೆ! ಆದರೆ ಈ ಬಿಕ್ಕಟ್ಟಿಗೆ ಮೋದಿ ಸೂಚಿಸಿರುವ ಪರಿಹಾರಗಳಾದ ಕೃಷಿ ವಿಮೆ ಮತ್ತು ಸಾಲ ಮನ್ನಾಗಳೆರಡೂ ಭೂಮಿ ಉಳ್ಳವರ ಪರವಾಗಿವೆ.

ಮನರೆಗಾ
ಮೋದಿ ಸರ್ಕಾರ ತೀರ ದಾರಿದ್ರ್ಯದಲ್ಲಿರುವ ಭೂರಹಿತ ಕಾರ್ಮಿಕರ ಸಂಕಷ್ಟಗಳಿಗೆ ಮನರೆಗಾ ಕಾರ್ಯಕ್ರಮದ ಮೂಲಕ ಸ್ಪಂದಿಸುವ ಬದಲು 2014 ಮತ್ತು 2015ರಲ್ಲಿ ಮನರೆಗಾ ಅನುದಾನಗಳಲ್ಲಿ ಕಡಿತ ಮಾಡಿದೆ! 2016ರಲ್ಲಿ ಹಿಂದಿನ ಅನುದಾನ ಮೊತ್ತಕ್ಕೆ ಮರಳಲಾಗಿದೆಯಾದರೂ ಅನೇಕ ರಾಜ್ಯಗಳಲ್ಲಿ ಆಗಿರುವ ಹೆಚ್ಚಳ ಬರೀ ರೂ 1. 2017-18ರ ಸಾಲಿನಲ್ಲಿ ಆಗಿರುವ 2.7 ಪ್ರತಿಶತ ಹೆಚ್ಚಳ ಯೋಜನೆಯ ಇತಿಹಾಸದಲ್ಲೆ ಅತ್ಯಂತ ಕನಿಷ್ಠ ಹೆಚ್ಚಳವಾಗಿದೆ! 2014-15ರ ಸಾಲಿನಲ್ಲಿ 4.65 ಕೋಟಿ ಕುಟುಂಬಗಳು ಕೆಲಸಕ್ಕಾಗಿ ಬೇಡಿಕೆ ಇಟ್ಟಿದ್ದರೆ 2015-16ರಲ್ಲಿ ಅದು 5.35 ಕೋಟಿಗೆ ಏರಿದೆ. ಮುಂದೆ 2016-17ರಲ್ಲಿ 5.69 ಕೋಟಿಯಷ್ಟಾಗಿದೆ. ಆದರೆ ಅರ್ಜಿ ಹಾಕಿದವರಲ್ಲಿ ಶೇಕಡಾ 10-11ರಷ್ಟು ಜನರಿಗೆ ಕೆಲಸ ನೀಡಲಾಗುತ್ತಿಲ್ಲ. ಕಳೆದ ವರ್ಷ ಸುಮಾರು 58 ಲಕ್ಷ ಕುಟುಂಬಗಳನ್ನು ವಾಪಸ್ ಕಳುಹಿಸಲಾಗಿದೆ.

ಶಿಕ್ಷಣ ಮತ್ತು ಆರೋಗ್ಯ
ಕಳೆದ 3 ವರ್ಷಗಳಲ್ಲಿ ಶಿಕ್ಷಣಕ್ಷೇತ್ರದಲ್ಲಿ ಆಗಿರುವ ಸಾಧನೆ ಹೆಚ್ಚುಕಡಮೆ ಶೂನ್ಯ. 2014ರ ನಂತರದ ಜಿಡಿಪಿ ಅಂಕಿಅಂಶಗಳು ಹೇಳುವಂತೆ ಸರ್ಕಾರ ಶಿಕ್ಷಣಕ್ಕಾಗಿ ಮಾಡುವ ವೆಚ್ಚದಲ್ಲಿ ಇಳಿಕೆಯಾಗಿದೆ! 2016ರಲ್ಲಿ ಬಜೆಟ್ ಅಂದಾಜಿನಲ್ಲಿ ಕನಿಷ್ಠ ಪ್ರಮಾಣದ ಏರಿಕೆ ಮಾಡಲಾಗಿದೆಯಾದರೂ ಅದರಿಂದ ಯಾವುದೆ ಗಮನಾರ್ಹ ಬದಲಾವಣೆ ಆಗಿಲ್ಲ. ಅಣಬೆಗಳಂತೆ ತಲೆಎತ್ತುತ್ತಿರುವ ಖಾಸಗಿ ವಿಶ್ವವಿದ್ಯಾಲಯಗಳಿಂದಾಗಿ ಶಿಕ್ಷಣ ಕೇವಲ ಉಳ್ಳವರ ಕೈಗೆಟಕುವಂತಾಗಿದೆ. ಇಂದು ಖಾಸಗಿ ವಿಶ್ವವಿದ್ಯಾಲಯಗಳ ಸಂಖ್ಯೆ ಶೇಕಡಾ 33ರಷ್ಟಿದೆ.

ದೇಶದ ಪ್ರಮುಖ ಶಿಕ್ಷಣ ತಜ್ಞರು ಮೋದಿ ಸರ್ಕಾರದ ನೂತನ ಶಿಕ್ಷಣ ನೀತಿಯನ್ನು ಟೀಕಿಸಿದ್ದಾರೆ. ಶಿಕ್ಷಣಕ್ಷೇತ್ರದ ಸುಧಾರಣೆ ಕುರಿತು ನೀತಿನಿಯಮಗಳನ್ನು ನಿರೂಪಿಸುವ ಸಂದರ್ಭದಲ್ಲಿ ಮಕ್ಕಳ ಸಮಾಜೋಆರ್ಥಿಕ ಹಿನ್ನೆಲೆ ಮತ್ತು ಅವರ ಅಗತ್ಯಗಳನ್ನು ಪರಿಗಣಿಸುವುದು ಅತ್ಯಗತ್ಯ. ಇದನ್ನು ಮಾಡದೆ ಎಲ್ಲರಿಗೂ ಅನ್ವಯಿಸುವಂತಹ ಏಕರೂಪಿ ನೀತಿ ಅಸಮಾನತೆಯನ್ನು ಇನ್ನಷ್ಟು ಹೆಚ್ಚಿಸಲಿದೆ. ಬಡ ವಿದ್ಯಾರ್ಥಿಗಳ ಕಷ್ಟಕಾರ್ಪಣ್ಯಗಳು ಅಧಿಕಗೊಳ್ಳಲಿವೆ. ಮೋದಿ ಸರ್ಕಾರದ ಅವಧಿಯಲ್ಲಿ ಕೇಂದ್ರೀಯ ನವೋದಯ ಮತ್ತು ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು, ಬಿಸಿಯೂಟ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಲಾಗುತ್ತಿರುವುದು, ಶಿಕ್ಷಣ ಹಕ್ಕಿಗೆ ಸಂಬಂಧಿಸಿದ ಕಾನೂನಿಗೆ ತಿದ್ದುಪಡಿ ತರಲಾಗಿರುವುದು ಮುಂತಾದುವೆಲ್ಲ ಹಿಂದಿನ ಯುಪಿಎ ಸರ್ಕಾರದ ನೀತಿಗಳ ಮುಂದುವರಿಕೆಯೆ ಹೊರತು ಬೇರೇನೂ ಅಲ್ಲ. ಸರಕಾರಿ ಸಂಸ್ಥೆಗಳ ಗುಣಮಟ್ಟವನ್ನು ಸುಧಾರಿಸಲೆನ್ನಲಾದ ಪಂಡಿತ ಮದನ್ ಮೋಹನ್ ಮಾಲವೀಯ ರಾಷ್ಟ್ರೀಯ ಶಿಕ್ಷಕ ಮತ್ತು ಶಿಕ್ಷಣ ಯೋಜನೆ ಮುಂತಾದ ಕಾರ್ಯಕ್ರಮಗಳಿಗೆ ಬಜೆಟ್ಟಿನಲ್ಲಿ ಕೋಟಿಗಟ್ಟಲೆ ಅನುದಾನ ಘೋಷಿಸಲಾಗಿದೆಯಾದರೂ ಅಭಿವೃದ್ಧಿ ಮಾತ್ರ ಶೂನ್ಯ. ಪಠ್ಯಪುಸ್ತಕಗಳಲ್ಲಿ ವಿವಾದಾತ್ಮಕ ವಿಚಾರಗಳ ತುರುಕುವಿಕೆ, ಇತಿಹಾಸದ ತಿರುಚುವಿಕೆ ಮುಂತಾದುವುಗಳ ಬಗ್ಗೆ ಏನೂ ಮಾಡಲಾಗಿಲ್ಲ. ಮೂರು ವರ್ಷಗಳಲ್ಲಿ ಮಾನವ ಸಂಪನ್ಮೂಲ ಸಚಿವರು ಮಾಡಿರುವ ಕೆಲಸವೆಂದರೆ ಶಿಕ್ಷಣ ವ್ಯವಸ್ಥೆಯನ್ನು ಮೋದಿಯ ಸ್ವಚ್ಛ ಭಾರತ ಮತ್ತು ಡಿಜಿಟಲ್ ಪಾವತಿ ಯೋಜನೆಗಳ ಪ್ರಚಾರಕ್ಕಾಗಿ ಬಳಸಿರುವುದು.

ಆರೋಗ್ಯಕ್ಷೇತ್ರದಲ್ಲೂ ಖಾಸಗಿಯವರ ಹಾವಳಿಯನ್ನು ತಡೆಗಟ್ಟಲು ಯಾವುದೆ ಪ್ರಯತ್ನ ಮಾಡಲಾಗಿಲ್ಲ. ಪರಿಣಾಮವಾಗಿ ಬಡವರು, ಮಧ್ಯಮವರ್ಗಗಳು ಇನ್ನಷ್ಟು ಕಷ್ಟಕ್ಕೀಡಾಗಿದ್ದಾರೆ.

ನಿರುದ್ಯೋಗ ನಿವಾರಣೆ
ಮೋದಿ ಸರ್ಕಾರ ಅಂತಾರಾಷ್ಟ್ರೀಯ ಹೂಡಿಕೆದಾರರನ್ನು ಕರೆಯಿಸಿ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ನಡೆಸಿದ್ದೇನು, ಮೋದಿ ವಿದೇಶಗಳಿಗೆ ಭೇಟಿ ನೀಡಿದ್ದೇನು, ಮೇಕ್ ಇನ್ ಇಂಡಿಯ, ಸ್ಕಿಲಿಂಗ್ ಇಂಡಿಯ, ಸ್ಟ್ಯಾಂಡ್ ಅಪ್ ಇಂಡಿಯ ಎಂಬ ನಾನಾ ಬಣ್ಣಬಣ್ಣದ ಘೋಷಣೆಗಳೇನು? ಆದರೆ ಇವೆಲ್ಲದರ ಹೊರತಾಗಿಯೂ ಕಳೆದ ಮೂರು ವರ್ಷಗಳಲ್ಲಿ ನಿರುದ್ಯೋಗ ಕಡಿಮೆಯಾಗುವ ಬದಲು ವಿಪರೀತ ಹೆಚ್ಚಾಗಿದೆ ಎಂದರೆ ಅದರ ಅರ್ಥ ಒಂದೇ. ಸಾಕಷ್ಟು ಪ್ರಮಾಣದಲ್ಲಿ ಹೂಡಿಕೆ ಆಗಿಲ್ಲ!

ಉದ್ಯೋಗಗಳನ್ನು ಸೃಷ್ಟಿಸುವುದಕ್ಕಾಗಿ ಎನ್ನಲಾದ ಮೇಕ್ ಇನ್ ಇಂಡಿಯ, ಸ್ಕಿಲಿಂಗ್ ಇಂಡಿಯ, ಸ್ಟ್ಯಾಂಡ್ ಅಪ್ ಇಂಡಿಯ ಯೋಜನೆಗಳಿಂದ ವಿಶೇಷ ಬದಲಾವಣೆಯೇನೂ ಆಗಿಲ್ಲ. ಸ್ಕಿಲಿಂಗ್ ಇಂಡಿಯ ಯೋಜನೆಯಡಿ 2015-16ರಲ್ಲಿ ಆಗಿರುವ ಗುರಿಸಾಧನೆ ಕೇವಲ ಶೇಕಡಾ 58. ಕೌಶಲ್ಯ ಪಡೆದವರ ಪೈಕಿ ಉದ್ಯೋಗ ದೊರೆತಿರುವವರ ಸಂಖ್ಯೆ ಶೇಕಡಾ 12ಕ್ಕಿಂತಲೂ ಕಡಿಮೆ ಇದೆ. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (Organisation of Economic Cooperation and Development, OECD) ಪ್ರಕಾರ ಭಾರತದಲ್ಲಿ ಇಂದು 15ರಿಂದ 29ರ ಹರೆಯದ ಶೇಕಡಾ 30ಕ್ಕೂ ಅಧಿಕ ಯುವಜನತೆ ಉದ್ಯೋಗ, ಶಿಕ್ಷಣ ಅಥವಾ ತರಬೇತಿ ಕ್ಷೇತ್ರಗಳಲ್ಲಿ ಇಲ್ಲ (ಚೀನಾದಲ್ಲಿ ಕೇವಲ 11.2%).

ಇಂದು ಉತ್ಪಾದನೆ, ನಿರ್ಮಾಣ, ವಾಣಿಜ್ಯ, ಸಾರಿಗೆ, ಹೋಟಲ್, ಐಟಿ/ಬಿಪಿಒ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಒಟ್ಟು ಸುಮಾರು 2 ಕೋಟಿ ಮಂದಿ ದುಡಿಯುತ್ತಿದ್ದಾರೆ. ಇಲ್ಲಿ 2011-12 ಮತ್ತು 2012-13ರ ಸಾಲಿನಲ್ಲಿ 7,40,000 ಉದ್ಯೋಗಗಳು ಸೃಷ್ಟಿಯಾಗಿದ್ದರೆ 2014-15 ಮತ್ತು 2015-16ರಲ್ಲಿ ಕೇವಲ 2,70,000 ಉದ್ಯೋಗಗಳು ಸೃಷ್ಟಿಯಾಗಿವೆ (ಶೇಕಡಾ 64ರಷ್ಟು ಇಳಿಕೆ). 2016-17ರಲ್ಲಿ 2.3 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ ಎನ್ನಲಾಗಿದೆ. ಆದರೆ ಇದರ ಹಿಂದೆ ಏನೊ ಒಂದು ಆಟ ನಡೆದಿರುವಂತಿದೆ. 2015ರಲ್ಲಿ ಉತ್ಪಾದನಾ ಕ್ಷೇತ್ರದಲ್ಲಿ ಬರೀ ಶೇಕಡಾ 1.5 ಪ್ರಗತಿಯಾಗಿ ಕೇವಲ 1.5 ಲಕ್ಷ ಉದ್ಯೋಗಗಳಷ್ಟೆ ಸೃಷ್ಟಿಯಾದಾಗ ಮೋದಿ ಸರ್ಕಾರ ಒಂದು ಉಪಾಯ ಮಾಡಿತು. ಶಿಕ್ಷಣ, ಆರೋಗ್ಯ ಮತ್ತು ಹೊಟೆಲ್ಗಳಂತಹ ಪ್ರಮುಖ ಸೇವಾ ಕ್ಷೇತ್ರಗಳನ್ನು ಸೇರಿಸುವ ಮೂಲಕ ಸಂಘಟಿತ ಉದ್ದಿಮೆಯ ವ್ಯಾಪ್ತಿಯನ್ನು ವಿಸ್ತರಿಸಿತು. ಈ ರೀತಿಯಾಗಿ ಸೇವಾ ಕ್ಷೇತ್ರದಲ್ಲಿ ಆದ ಬೆಳವಣಿಗೆಯನ್ನು ತನಗನುಕೂಲವಾಗುವಂತೆ ಬಳಸಿಕೊಂಡಿತು. 2016ರಲ್ಲಿ ಹೊಸ ಉದ್ಯೋಗಗಳ ಸಂಖ್ಯೆ 2.3 ಲಕ್ಷಕ್ಕೆ ಏರಿರುವುದರ ಹಿಂದಿನ ಗುಟ್ಟು ಇದೇ ಆಗಿದೆ! ಏಕೆಂದರೆ ಈ ಹೊಸ ಉದ್ಯೋಗಗಳಲ್ಲಿ ಹೆಚ್ಚುಕಡಿಮೆ ಅರ್ಧದಷ್ಟು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿವೆ! ಸುಮಾರು ಒಂದು ಕೋಟಿ ಉದ್ಯೋಗಿಗಳಿರುವ ಉತ್ಪಾದನಾ ಕ್ಷೇತ್ರದಲ್ಲಿಯೂ ಗಣನೀಯ ಪ್ರಮಾಣದಲ್ಲಿ ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ ಎನ್ನಲಾಯಿತು. ಆದರೆ ಈ ಹೆಚ್ಚಳ ಆಗಿರುವುದು ಕೊನೆಯ ಮೂರು ತಿಂಗಳುಗಳಲ್ಲಿ, ನೋಟು ರದ್ದತಿಯ ಕಾಲದಲ್ಲಿ ಎಂಬುದನ್ನು ಗಮನಿಸಬೇಕು. ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದ ಆ ಕಾಲದಲ್ಲಿ ಹೆಚ್ಚಳ ಆಗಿದೆ ಎನ್ನುವುದು ಭಾರಿ ಅನುಮಾನಾಸ್ಪದವಾಗಿದೆ.

ಔದ್ಯಮಿಕ ಉತ್ಪಾದನೆಯ ಸೂಚ್ಯಂಕ (Index of Industrial Production, IIP) ಅಂಕಿಅಂಶಗಳು ಹೇಳುವಂತೆ  ಜನವರಿ 2015ರಿಂದ ಜನವರಿ 2017ರ ತನಕ ಉತ್ಪಾದನೆಯಲ್ಲಿ ಆಗಿರುವ ಹೆಚ್ಚಳ ಬರೀ 1%. ಇನ್ನು ಭಾರತೀಯ ರಿಸರ್ವ್ ಬ್ಯಾಂಕು ಪ್ರಕಾರ ಬ್ಯಾಂಕುಗಳು ಉದ್ದಿಮೆಗಳಿಗೆ ನೀಡುವ ಸಾಲಗಳಲ್ಲಿ ಕೇವಲ 0.3 ಪ್ರತಿಶತ ಹೆಚ್ಚಳ ಆಗಿದೆ. 2015-16ರಲ್ಲಿ ಒಟ್ಟು ಮೌಲ್ಯವರ್ಧನೆ (ರಡಿಠ ತಚಿಟಣಜ ಚಿಜಜಜಜ, ಉಗಿಂ) ಶೇಕಡಾ 7.8ರಷ್ಟಿದ್ದರೆ 2016-17ರಲ್ಲಿ ಅದು 6.7ಕ್ಕೆ ಇಳಿದಿದೆ. ಇದರರ್ಥ ಏನೆಂದರೆ ಕಾರ್ಪೊರೇಟುಗಳು ಹೊಸಹೊಸ ಉತ್ಪಾದನಾ ವ್ಯವಸ್ಥೆಗಳಲ್ಲಿ ಹೂಡಿಕೆ ಮಾಡುತ್ತಿಲ್ಲ. ವಾಸ್ತವ ಹೀಗಿರುವಾಗ ಉದ್ಯೋಗಗಳಲ್ಲಿ ಹೆಚ್ಚಳ ಆಗುವುದಾದರೂ ಹೇಗೆ? ಎಲ್ಲಿಂದ? ಅಸಲಿಗೆ ಇಂದು ಐಟಿ, ಟೆಲಿಕಾಂ, ಬ್ಯಾಂಕಿಂಗ್ ಹಾಗೂ ಆರ್ಥಿಕ ಸೇವಾ ವಲಯಗಳಲ್ಲಿ ನೌಕರಿ ಕಡಿತ ಪ್ರಾರಂಭವಾಗಿದ್ದು ಮುಂದಿನ 12-18 ತಿಂಗಳುಗಳಲ್ಲಿ ಸುಮಾರು 10 ಲಕ್ಷ ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.
ಕೊನೆಯದಾಗಿ ಕಳೆದ ಮೂರು ವರ್ಷಗಳಲ್ಲಿ ಮೋದಿ ಸರ್ಕಾರದ ಸಾಧನೆಯನ್ನು ಸಂಕ್ಷಿಪ್ತವಾಗಿ ಒಂದೇ ಶಬ್ದದಲ್ಲಿ ಹೇಳಬಹುದು: ದುರಾಡಳಿತ.
*********
(ಆಧಾರ: ವಿವಿಧ ಮೂಲಗಳಿಂದ)

Related Tags: Narendra Modi, NDA govt, 3 years, Kannada Article, Suresh Bhat Bakrabail
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ