ಸೌದಿಯಲ್ಲಿ ‘ಕುರಿ’ಗಳಾದವರಿಗೆ ಬಿಡುಗಡೆ ಭಾಗ್ಯ
ರಾಯಭಾರಿ ಕಛೇರಿಯಿಂದ ಅಧಿಕೃತ ಮಾನ್ಯತೆ ಪತ್ರ ಪಡೆದು ಕಾನೂನು ಪ್ರಕ್ರಿಯೆ ಆರಂಭಿಸಿದ ಇಂಡಿಯನ್ ಸೋಶಿಯಲ್ ಫೋರಮ್

ಎ.ಎಂ.ಆರೀಫ್ ಜೋಕಟ್ಟೆ/ಕರಾವಳಿ ಕರ್ನಾಟಕ ವರದಿ
ರಿಯಾದ್:
ಕೆಲವು ತಿಂಗಳ ಹಿಂದೆ ಉದ್ಯೋಗಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳಿ ಸಂಕಷ್ಟಕ್ಕೀಡಾಗಿ ಕಂಗಾಲಾಗಿದ್ದ ಕರಾವಳಿಯ ಇಬ್ಬರು ಯುವಕರನ್ನು ಬಿಡುಗಡೆಗೊಳಿಸಿ ತಾಯ್ನಾಡಿಗೆ ವಾಪಾಸು ಕಳುಹಿಸಲುಬೇಕಾದ ಕಾನೂನು ಪ್ರಕ್ರಿಯೆಯನ್ನು ಇಂಡಿಯನ್ ಸೋಶಿಯಲ್ ಫೋರಮ್ ಕೈಗೆತ್ತಿಕೊಂಡಿದೆ.

ಮಾನವೀಯ ಕಾಳಜಿಯೊಂದಿಗೆ ಪ್ರಕಟವಾದ ವರದಿಗೆ ಸ್ಪಂದಿಸಿದ ಇಂಡಿಯನ್ ಸೋಶಿಯಲ್ ಫೋರಮ್ ಅಲ್ ಗಸೀಮ್ ಘಟಕವು ಮುಲ್ಕಿ ಕಾರ್ನಾಡಿನ ಪುನೀತ್ ಮತ್ತು ಗಂಜಿಮಠ ನಿವಾಸಿ ದಾಮೋದರ ಎಂಬವರನ್ನು ಮರಳಿ ತಾಯ್ನಾಡಿಗೆ ಕಳುಹಿಸಲು ಬೇಕಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಇದಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳು ಈಗಾಗಲೇ ಪ್ರಗತಿಯಲ್ಲಿದೆ.

2016 ರ ಡಿಸೆಂಬರ್‌ನಲ್ಲಿ ಪುನೀತ್ ಮತ್ತು ದಾಮೋದರ್ ಮಂಗಳೂರಿನ ಏಜೆನ್ಸಿಯೊಂದರ ಮೂಲಕ ಪೈಂಟರ್ ವೃತ್ತಿಗೆಂದು ಸೌದಿ ಅರೇಬಿಯಾಕ್ಕೆ ತೆರಳಿದ್ದರು. ತೀರಾ ಬಡಕುಟುಂಬದ ಈ ಇಬ್ಬರು ಯುವಕರನ್ನು ಕೈತುಂಬಾ ಸಂಬಳದ ನಿರೀಕ್ಷೆಯೊಂದಿಗೆ ಪೈಂಟರ್ ಕೆಲಸಕ್ಕೆಂದು ಸೌದಿ ಅರೇಬಿಯಾದ ಬುರೈದಾ ಎಂಬ ಸ್ಥಳಕ್ಕೆ ಕಳುಹಿಸಿಕೊಡಲಾಗಿತ್ತು. ಆದರೆ ಅಲ್ಲಿ ಅವರನ್ನು ಕುರಿ ಮೇಯಿಸುವ (ಮಝ್ರ) ಕೆಲಸಕ್ಕೆ ನಿಯೋಜಿಸಿ ಸುಡು ಬಿಸಿಲಿನ ಮರುಭೂಮಿಗೆ ಕಳುಹಿಸಲಾಗಿತ್ತು. ಯಾವುದೇ ಜನ ಸಂಪರ್ಕವಿಲ್ಲದ ಮರುಭೂಮಿಯಲ್ಲಿ ಕೆಲವು ತಿಂಗಳವರೆಗೆ ದುಡಿದ ಇವರಿಗೆ ಪ್ರಾಯೋಜಕರು ಸಂಬಳವನ್ನೂ ನೀಡಿರಲಿಲ್ಲ. ದಿಕ್ಕು ಕಾಣದಾದ ಯುವಕರು ತಮ್ಮ ಸಂಕಷ್ಟವನ್ನು ಯಾರ ಬಳಿಯೂ ಹೇಳಿ ಕೊಳ್ಳಲಾಗದೆ ಕಂಗಾಲಾಗಿದ್ದರು. ಮನೆಯವರು ತಮ್ಮ ಮಕ್ಕಳಿಗಾದ ಸ್ಥಿತಿಯನ್ನು ವಿದೇಶಾಂಗ ಸಚಿವಾಲಯಕ್ಕೂ ತಿಳಿಸಿದ್ದರು. ಈ ಕುರಿತು ಸಚಿವಾಲಯದ ವೆಬ್‌ಸೈಟ್ 'ಮದದ್'ನಲ್ಲಿ ದೂರು ದಾಖಲಾಗಿದೆ.

ಐದಾರು ತಿಂಗಳಿನಿಂದ ಯಾವುದೇ ಪರಿಹಾರ ಕಾಣದಾದಾಗ ಸೋಶಿಯಲ್ ಮೀಡಿಯಾದ ಮುಖಾಂತರ ವಿವಿಧ ಪತ್ರಿಕೆ ಮತ್ತು ಚಾನೆಲ್‌ಗಳಿಗೂ ವಿವರ ತಿಳಿಸಿದ ಪುನೀತ್ ಮತ್ತು ದಾಮೋದರ್ ಕುಟುಂಬದವರು ನೆರವಿಗಾಗಿ ಯಾಚಿಸಿದರು. ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಯನ್ನು ಗಮನಿಸಿದ ಇಂಡಿಯನ್ ಸೋಶಿಯಲ್ ಫೋರಮ್ ತಂಡವು ಯುವಕರು ಇರುವ ಸ್ಥಳವನ್ನು ಸಂದರ್ಶಿಸಿ ಘಟನೆಯ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡರು.

ಭಾರತೀಯ ರಾಯಭಾರ ಕಛೇರಿಗೆ ಪ್ರಕರಣದ ಸಂಪೂರ್ಣ ವಿವರವನ್ನು ನೀಡಿದ ಅಯ್ಯೂಬ್ ಕಾಟಿಪಳ್ಳ ನೇತೃತ್ವದ ರವೂಫ್ ಕಳಾಯಿ, ರಶೀದ್ ಉಚ್ಚಿಲ ಅವರನ್ನೊಳಗೊಂಡ ಇಂಡಿಯನ್ ಸೋಶಿಯಲ್ ಫೋರಮ್ ಅಲ್ ಗಸೀಮ್ ನಿಯೋಗವು ರಾಯಭಾರಿ ಕಛೇರಿಯಿಂದ ಈ ಬಗ್ಗೆ ಮುಂದುವರೆಯಲು ಅಧಿಕೃತ ಮಾನ್ಯತೆ ಪತ್ರವನ್ನು ಪಡೆದು ಕಾನೂನು ಪ್ರಕ್ರಿಯೆಯನ್ನು ಆರಂಭಿಸಿದೆ.

Related Tags: Lucrative Jobs by Agency, ''V Care Solutions'' Hampankatta, Shepherds in Gulf, Puneeth Ganjimutt, Damodar Mulky, Indian Social Forum, Saudi Arabia Desert, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಇಂಡಿಯನ್ ಸೋಶಿಯಲ್ ಫೋರಮ್, ಕರಾವಳಿ ಸುದ್
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ